ಇಂದಿನ ಧಾವಂತದ ಬದುಕಿನಲ್ಲಿ ಹಬ್ಬಗಳು ನಮ್ಮನ್ನು ಸಂತಸದಲ್ಲಿ ತೋಯಿಸುತ್ತವೆ. ಆದರೆ ಇಂದು ಹಬ್ಬಗಳಲ್ಲಿ ದುಬಾರಿ ವಸ್ತುಗಳನ್ನು ಖರೀದಿಸುವುದು, ದುಬಾರಿ ವಸ್ತುಗಳಿಂದ ಮನೆಯನ್ನು ಅಲಂಕರಿಸುವುದು, ದುಬಾರಿ ಗಿಫ್ಟ್ ಗಳನ್ನು ಕೊಡುವುದು ಮತ್ತು ಪಡೆಯುವುದನ್ನೇ ತಮ್ಮ ದೊಡ್ಡಸ್ತಿಕೆ ಎಂದುಕೊಳ್ಳುತ್ತಾರೆ. ಈ ನಿರ್ಜೀವ ವಸ್ತುಗಳಲ್ಲೇ ಜನ ತಮ್ಮ ಖುಷಿಯನ್ನು ಹುಡುಕುತ್ತಿದ್ದಾರೆ. ಆದರೆ ಆ ಖುಷಿ  ಕ್ಷಣಿಕ. ಹೀಗಿರುವಾಗ ನಿಮ್ಮ ಮನೆಯವರೊಂದಿಗೆ ಹಬ್ಬವನ್ನು ಸ್ಮರಣೀಯವಾಗಿ ಆಚರಿಸುವುದು ಹೇಗೆ? ಅದರ ಅನುಭೂತಿ ಸದಾ ನಮಗೆ ಕಚಗುಳಿ ಇಡುವುದು ಹೇಗೆಂದು ತಿಳಿಯೋಣ ಬನ್ನಿ……

ಆದ್ಯತೆಗಳನ್ನು ಜಾರಿ ಮಾಡುವುದು

ಈ ಬಾರಿ ನೀವು ಆದ್ಯತೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದಿರೇ ಎಂದು ತಿಳಿದುಕೊಳ್ಳಿ. ಇಲ್ಲದಿದ್ದರೆ ಎಲ್ಲವನ್ನೂ ಬಿಟ್ಟು ನಿಮ್ಮ ಕುಟುಂಬದೊಂದಿಗೆ ಇರಿ. ಈ ಸಂದರ್ಭದಲ್ಲಿ ಕುಟುಂಬಕ್ಕೆ ಹೆಚ್ಚು ಸಮಯ ಕೊಡಿ. ಮನೆಯವರು ಯಾವುದೇ ದುಬಾರಿ ವಸ್ತು ಬಯಸದೆ ಕೇವಲ ನಿಮ್ಮ ಸಾಂಗತ್ಯ ಬಯಸುತ್ತಾರೆಂಬುದನ್ನು ಅರ್ಥ ಮಾಡಿಕೊಳ್ಳಿ.

ಹಬ್ಬಗಳಲ್ಲಿ ಪ್ರಿಯಜನರೊಂದಿಗೆ ಸಮಯ ಕಳೆಯುವುದು ಬಹಳ ಮಹತ್ವಪೂರ್ಣವಾಗಿದೆ. ಏಕೆಂದರೆ ನಮ್ಮ ಕುಟುಂಬಕ್ಕಿಂತ ಪ್ರಿಯವಾದುದು ಬೇರೇನೂ ಇಲ್ಲ. ನಾವು ಹೃದಯತುಂಬಿ ಪ್ರೀತಿಸುವವರೊಂದಿಗೆ ಕನೆಕ್ಟ್ ಆಗಲು ಇದು ಸಕಾಲ. ನಮ್ಮ ತಪ್ಪು ಕಲ್ಪನೆಗಳನ್ನು ಮರೆತು ಒಟ್ಟಿಗೇ ಹಬ್ಬ ಆಚರಿಸಿದರೆ ಅದರ ಆನಂದವೇ ಬೇರೆ.

ಹಳೆಯ ನೆನಪುಗಳಿಗೆ ಹೊಸ ರೂಪ ಕೊಡಿ

ಪೋಷಕರು ತಮ್ಮ ಮಕ್ಕಳ ಬಾಲ್ಯದ ಚಿತ್ರಗಳ ಆಲ್ಬಮ್ ಮಾಡಿ ಈ ಹಬ್ಬದಲ್ಲಿ ಅವರಿಗೆ ಉಡುಗೊರೆ ಕೊಡಿ. ಇದರಿಂದ ಅವರು ತಮ್ಮ ಹಳೆಯ ನೆನಪುಗಳನ್ನು ಹಸಿರಾಗಿಸಿಕೊಳ್ಳುತ್ತಾರೆ. ಅವರಿಗೆ ಉಂಟಾಗುವ ಖುಷಿಯಿಂದ ನಿಮಗೂ ಖುಷಿಯಾಗುತ್ತದೆ.

ಹೀಗೆಯೇ ಮಕ್ಕಳೂ ತಮ್ಮ ಪೋಷಕರ ಹಳೆಯ ಚಿತ್ರಗಳನ್ನು ಹುಡುಕಿ ಅಂಟಿಸಿ ಅವನ್ನು ಫ್ರೇಮ್ ಮಾಡಿ ಅವರಿಗೆ ಗಿಫ್ಟ್ ಕೊಡಿ. ಈ ಹಬ್ಬದಲ್ಲಿ ಪೋಷಕರಿಗೆ ಇದಕ್ಕಿಂತ ಒಳ್ಳೆಯ ಉಡುಗೊರೆ ಬೇರೆ ಇಲ್ಲ. ಇಂತಹ ಉಡುಗೊರೆಯೇ ಪರಸ್ಪರರನ್ನು ಭಾವನಾತ್ಮಕವಾಗಿ ಬೆಸೆಯುತ್ತದೆ.

ನೆನಪುಗಳನ್ನು ಹೀಗೆ ಜೋಡಿಸಿ

ನಿಮ್ಮ ಮಕ್ಕಳ ಮೊದಲ ಆಟದ ಬೊಂಬೆಯಿಂದ ಹಿಡಿದು ಅವರ ರಿಪೋರ್ಟ್‌ ಕಾರ್ಡ್‌ ಮತ್ತು ಬಟ್ಟೆಗಳವರೆಗೆ ಒಟ್ಟುಗೂಡಿಸಿ. ಅವನ್ನು ರಾಪ್‌ ಮಾಡಿಸಿ ಮಕ್ಕಳಿಗೆ ಗಿಫ್ಟ್ ಕೊಡಿ. ಕಳೆದುಹೋದ ಸಮಯ ಮತ್ತೆ ಬಾರದು. ಆದರೆ ಈ ಸಣ್ಣಪುಟ್ಟ ವಸ್ತುಗಳಿಂದ ನಿಮ್ಮ ಮಕ್ಕಳನ್ನು ಫ್ಲ್ಯಾಶ್‌ ಬ್ಯಾಕ್‌ಗೆ ಕರೆದೊಯ್ದು ಅವರಿಗೆ ಸಂತಸದ ಅನುಭೂತಿ ನೀಡಬಹುದು. ಅವರು ಬಾಲ್ಯದಲ್ಲಿ ಈ ಗೊಂಬೆಗಳೊಂದಿಗೆ ಆಡುತ್ತಿದ್ದರು. ಈ ಬಟ್ಟೆಗಳನ್ನು ಧರಿಸುತ್ತಿದ್ದರು. ಅವರಿಗೆ ಪರೀಕ್ಷೆಗಳಲ್ಲಿ ಮಾರ್ಕ್ಸ್ ಇಷ್ಟು ಬರುತ್ತಿತ್ತು ಎಂದೆಲ್ಲಾ ತೋರಿಸಬಹುದು.

ಮಕ್ಕಳನ್ನು ಹಿರಿಯರೊಂದಿಗೆ ಮುಖಾಮುಖಿ ಮಾಡಿಸಿ

ಈಗೆಲ್ಲಾ ವಿಭಜಿತ ಕುಟುಂಬಗಳಿದ್ದು ಮಕ್ಕಳು ತಮ್ಮ ಪೂರ್ವಜರ ಬಗ್ಗೆ ತಿಳಿದಿರುವುದಿಲ್ಲ. ಆದ್ದರಿಂದ ಹಬ್ಬಗಳಲ್ಲಿಯಾದರೂ ಹಿರಿಯರ ಬಗ್ಗೆ ವಿಶೇಷವಾಗಿ ಮಗ, ಸೊಸೆ, ಅಳಿಯ, ಮಗಳು, ಮೊಮ್ಮಕ್ಕಳಿಗೆ ತಿಳಿಸಿ. ಕುಟುಂಬದ ಹಿರಿಯರು ಹೇಗೆ ಕಾಣುತ್ತಿದ್ದರು. ಅವರ ವಿಶೇಷತೆಯೇನು ಎಂಬುದನ್ನು ತಿಳಿಸಿ. ಅದಕ್ಕಾಗಿ ನೀವು ಹಳೆಯ ಫೋಟೋಗಳನ್ನು ಅಪ್‌ ಡೇಟ್‌ ಮಾಡಿ ಅವರಿಗೆ ಕೊಡಿ. ಅವರ ಬಗ್ಗೆ ಹೇಳಿ. ಯಾರಾದರೂ ಹಿರಿಯರನ್ನು ಅವರೊಂದಿಗೆ  ಭೇಟಿ ಮಾಡಿಸಿ. ಅದರಿಂದ ಮಕ್ಕಳಿಗೆ ಖುಷಿಯಾಗುತ್ತದೆ. ಮಕ್ಕಳೊಂದಿಗೆ ಬೆರೆತು ಆ ಹಿರಿಯರಿಗೂ ಖುಷಿಯಾಗುತ್ತದೆ.

ಹೀಗೆ ಮಾಡುವುದರಿಂದ ಮಕ್ಕಳೂ ಸಹ ಕುಟುಂಬದ ಇತರ ಸದಸ್ಯರನ್ನು ಭೇಟಿಯಾಗಿ ಖುಷಿಪಡುತ್ತಾರೆ.

ಈಟ್ ಟುಗೆದರ್

ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೆ ಇಷ್ಟವಾಗುವ ಜಾಗದಲ್ಲಿ ಲಂಚ್‌ ಅಥವಾ ಡಿನ್ನರ್‌ ಪ್ರೋಗ್ರಾಂ ಮಾಡಿ. ಸಂತಸ, ನಗು ಬಿಟ್ಟು ಬೇರೆ ಯಾವ ವಿಷಯ ಇರಕೂಡದು. ಪರಸ್ಪರರ ಮಾತುಗಳನ್ನು ಕೇಳಿ, ಅರ್ಥ ಮಾಡಿಕೊಳ್ಳಿ. ಅಭಿರುಚಿಗಳ ಬಗ್ಗೆ ತಿಳಿದುಕೊಳ್ಳಿ. ಹೀಗೆ ಮಾಡುವುದರಿಂದ ಆತ್ಮೀಯ ಭಾವನೆ ಮೂಡುತ್ತದೆ. ಜೊತೆಗೆ ಈ ಮಾತುಗಳೊಂದಿಗೆ ಊಟದ ಮೋಜೇ ಅದ್ಭುತವಾಗಿರುತ್ತದೆ.

ಲಾಂಗ್ಡ್ರೈವ್ಹೋಗಿ

ಈ ಹಬ್ಬದಲ್ಲಿ ನಿಮ್ಮ ಕುಟುಂಬದವರೊಂದಿಗೆ ಲಾಂಗ್‌ ಡ್ರೈವ್ ‌ಹೋಗಿ ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬಹುದು. ಇಡೀ ಕುಟುಂಬ ಒಟ್ಟಿಗೆ ಪ್ರವಾಸ ಮಾಡುವುದು ಸ್ಮರಣೀಯವಾಗಿರುತ್ತದೆ. ಏಕೆಂದರೆ ಇಂತಹ ಅವಕಾಶ ಸಿಗುವುದು ಬಹಳ ಅಪರೂಪ. ಈ ಸುಂದರ ಕ್ಷಣಗಳ ನೆನಪಲ್ಲಿ ವರ್ಷವಿಡೀ ಕಳೆಯಬಹುದು.

ವಿಭಾವರಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ