ಡಬ್ಬಲ್ ಶೇಡ್ನಲ್ಲಿ ಹರಿಪ್ರಿಯಾ

`ಉಗ್ರಂ’ ಚಿತ್ರದ ನಂತರ ಕನ್ನಡ ಚಿತ್ರರಂಗದತ್ತ ಯೂ ಟರ್ನ್‌ ತೆಗೆದುಕೊಂಡ ಹರಿಪ್ರಿಯಾಳ ಅದೃಷ್ಟ ಬದಲಾಗಿದೆ. `ಬುಲೆಟ್‌ಬಸ್ಯಾ’ ನಂತರ ಇದೀಗ `ರಿಕ್ಕಿ’ ಚಿತ್ರದಲ್ಲಿ ಹರಿಪ್ರಿಯಾ ವಿಭಿನ್ನವಾದ ಪಾತ್ರ ಮಾಡಿರುವುದರ ಬಗ್ಗೆ ಒಳ್ಳೆ ಮಾತುಗಳು ಕೇಳಿಬರುತ್ತಿವೆ. ಎರಡು ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹರಿಪ್ರಿಯಾಗೆ ನಕ್ಸಲ್ ಪಾತ್ರವೊಂದರಲ್ಲಿ ಯಾವುದೇ ಮೇಕಪ್‌ ಇಲ್ಲದೆ, ಗ್ಲಾಮರ್‌ ಇಲ್ಲದೇ ಖಡಕ್ಕಾಗಿ ಗನ್‌ ಹಿಡಿದು ಕಾಡಿನಲ್ಲಿ ಅಟ್ಟಹಾಸ ತೋರುವಂಥ ಹುಡುಗಿ ಪಾತ್ರ. ಈ ಪಾತ್ರದ ಬಗ್ಗೆ ತುಂಬಾನೆ ಹೋಪ್ಸ್ ಇಟ್ಟುಕೊಂಡಿರುವ ಹರಿಪ್ರಿಯಾಳ ಪ್ರತಿಭೆಗೆ ಸವಾಲ್ ‌ಒಡ್ಡುವಂತಿದೆ.

“ಹೌದು ನಾನು ಕೂಡಾ ಇಂಥದ್ದೊಂದು ಪಾತ್ರ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದೆ. ಅದೀಗ ಬೇಗನೇ ಒಲಿದು ಬಂತು. ನನ್ನ ಪಾತ್ರ ಎರಡು ವಿಭಿನ್ನ ಶೇಡ್ಸ್ ಹೊಂದಿರುತ್ತೆ. ಒಂದಕ್ಕೊಂದು ಸಾಮ್ಯತೆ ಇರುವುದಿಲ್ಲ. ಅಷ್ಟು ಡಿಫರೆಂಟಾಗಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ನೋಡಿದ ಮೇಲೆಯೇ ಎಲ್ಲರಿಗೂ ಸ್ಪಷ್ಟವಾಗುತ್ತೆ. ಅದರ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ. ಸಸ್ಪೆನ್ಸ್…..” ಎನ್ನುತ್ತಾಳೆ ಹರಿಪ್ರಿಯಾ.

ವಸ್ತ್ರ ವಿನ್ಯಾಸಕಿ ರೋಶಿನಿ

ಕನ್ನಡ ಸಿನಿಮಾರಂಗ ಸಾಕಷ್ಟು ಬದಲಾಗಿದೆ. ತಾರೆಯರಿಗೆ ಪ್ರತ್ಯೇಕವಾಗಿ ವಸ್ತ್ರವಿನ್ಯಾಸ ಮಾಡಿಸಲಾಗುತ್ತಿದೆ. ಫ್ಯಾಷನ್‌ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಬಾಲಿವುಡ್‌, ಟಾಲಿವುಡ್‌ನಂತೆ ನಮ್ಮ ತಾರೆಯರು ಉಡುಗೆ ತೊಡುಗೆಯಲ್ಲಿ ಅಪ್‌ ಡೇಟ್ ಆಗುತ್ತಿದ್ದಾರೆ. ವಸ್ತ್ರ ವಿನ್ಯಾಸಕಿಯರು ಹಾಗೆಯೇ ಬೆಳೆಯುತ್ತಿದ್ದಾರೆ. ಅವರಿಗೂ ಒಳ್ಳೆ ಅವಕಾಶ ಸಿಗುತ್ತಿದೆ. ಇತ್ತೀಚೆಗೆ ಅಂತಹ ಹೊಸ ಸೇರ್ಪಡೆ ರೋಶಿನಿ ಚಕ್ರಪಾಣಿ ಮತ್ತು ವೈಶಾಲಿ. ಹುಡುಗಿಯರಿಬ್ಬರೂ ವಸ್ತ್ರ ವಿನ್ಯಾಸಕಿಯರಾಗಿ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದಾರೆ. `ಪ್ರೀತಿಯಲ್ಲಿ ಸಹಜ’ ಚಿತ್ರಕ್ಕಾಗಿ ಇವರಿಬ್ಬರು ಅದರಲ್ಲಿರುವ ಎಲ್ಲ ನಟ ನಟಿಯರಿಗೆ ಬಹಳ ಆಸಕ್ತಿ ವಹಿಸಿ ಪಾತ್ರಗಳಿಗೆ ಒಪ್ಪುವಂತೆ ಸ್ತ್ರವಿನ್ಯಾಸ ಮಾಡಿ ನಿರ್ದೇಶಕರಿಂದ ಮೆಚ್ಚುಗೆ ಪಡೆದಿದ್ದಾರೆ. ಮೌಂಟ್‌ ಕಾರ್ಮೆಲ್ ‌ಕಾಲೇಜಿನ ರೋಶಿನಿ ತನ್ನ ಕೆಲಸದ ಬಗ್ಗೆ ಮಾತನಾಡುತ್ತಾ, “ಫ್ಯಾಷನ್‌ ಡಿಸೈನರ್‌ ಆಗಿದ್ದ ನಾವು ಈ ಚಿತ್ರದಲ್ಲಿ ಬಹಳ ಶ್ರಮವಹಿಸಿ ಕಾಸ್ಟ್ಯೂಮ್ ಡಿಸೈನ್‌ ಮಾಡಿದ್ದೇವೆ. ನಮಗೆ ತುಂಬಾ ಇಷ್ಟವಾದ ಕೆಲಸವಿದು. ಈ ಚಿತ್ರಕ್ಕಾಗಿ ಡಿಸೈನ್‌ ಮಾಡುತ್ತಿರುವಾಗಲೇ `ಪಟಾಕಿ’ ಚಿತ್ರಕ್ಕೆ ಕೆಲಸ ಮಾಡಲು ಆಫರ್‌ ಬಂದಿತು. ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕತ್ವದ ಈ ಚಿತ್ರಕ್ಕೆ ಈಗಾಗಲೇ ಕಾಸ್ಟ್ಯೂಮ್ ಡಿಸೈನಿಂಗ್‌ ಕೆಲಸ ಶುರು ಮಾಡಿದ್ದೀವಿ. ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಬೇಕೆಂಬುದೇ ನಮ್ಮ ಆಸೆ,” ಎನ್ನುತ್ತಾರೆ.

ಅರಮನೆಯೊ ಸೆರೆಮನೆಯೊ?

ರಿಯಾಲಿಟಿ ಶೋಗಳಲ್ಲೇ ಅತಿ ಹೆಚ್ಚು ಜನಪ್ರಿಯವಾದ ಟಿ.ವಿ. ಕಾರ್ಯಕ್ರಮ `ಬಿಗ್‌ ಬಾಸ್‌.’ ಕಿತ್ತಾಟ, ಜಗಳ, ಸರಸ, ವಿರಸ, ಪ್ರೀತಿ, ದ್ವೇಷ ಎಲ್ಲವನ್ನೂ ವೀಕ್ಷಕರ ಮುಂದಿಡುವ ಈ ಶೋ ಈಗ ಮತ್ತೆ ಶುರುವಾಗಲಿದೆ. ಬಿಗ್‌ ಬಾಸ್‌….. ಕಿರುತೆರೆ ಹೊಕ್ಕಾಗಿದೆ. ಬಿಗ್‌ ಬಾಸ್‌ ಅಂದಾಕ್ಷಣ ನಮ್ಮ ಕಣ್ಣೆದುರಿಗೆ ಬರೋರು ಕಿಚ್ಚ ಸುದೀಪ್‌. ಸೀಸನ್‌-3ಯನ್ನು ಸುದೀಪ್‌ ನಿರ್ವಹಿಸುವುದಿಲ್ಲ ಎನ್ನುವ ಮಾತು ಕೇಳಿಬಂದಾಗಲೇ ಅನೇಕರು ನಿರಾಶೆ ಹೊಂದಿದ್ದರು. ಉಪೇಂದ್ರ ಕಾರ್ಯಕ್ರಮ ನಡೆಸಿಕೊಡುತ್ತಾರೆಂಬ ಊಹಾಪೋಹಕ್ಕೆ ತೆರೆ ಎಳೆದ ಕಲರ್ಸ್‌ ಚಾನೆಲ್, ಕಿಚ್ಚ ಸುದೀಪ್‌ ಅವರೇ ಬಿಗ್‌ ಬಾಸ್‌ ಎಂದಿತು. ಸುದೀಪ್‌ ಸೀಸನ್‌-3ಗೂ ತಾನೇ ಕಾಂಟ್ರಾಕ್ಟ್ ಸೈನ್‌ ಮಾಡಿರುವುದಾಗಿ ಹೇಳಿದರು. ಈ ಬಾರಿ ಬಿಗ್‌ ಬಾಸ್‌ ಸಾಕಷ್ಟು ಕುತೂಹಲ ಸೃಷ್ಟಿಸಲಿದೆ. ಇದರಲ್ಲಿ ಭಾಗಹಿಸಲು ಯಾವ ಯಾವ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯೊಳಗೆ ಬರುತ್ತಾರೆಂಬುದರ ಬಗ್ಗೆ ಪ್ರತಿನಿತ್ಯ ಒಬ್ಬೊಬ್ಬರ ಹೆಸರು ಕೇಳಿಬರುತ್ತಿದೆ. ರಾಗಿಣಿ, ದಿಗಂತ್‌, ಐಂದ್ರಿತಾ, ಹುಚ್ಚ ವೆಂಕಟ್‌, ನಿತ್ಯಾನಂದ, ರಕ್ಷಿತ್‌ ಶೆಟ್ಟಿ, ಸತೀಶ್‌ ನೀನಾಸಂ, ಮೈತ್ರೇಯಿ ಗೌಡ…… ಆದರೆ ಇವರಾರೂ ಸಹ ತಾವು ಭಾಗಹಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹೊರಗಡೆಯಿಂದ ಅರಮನೆಯಂತೆ ಕಾಣುವ ಬಿಗ್‌ ಬಾಸ್‌ ಮನೆ ಒಳಗೆ ಸೆರೆಮನೆ ಎಂಬುದು ಒಳಗೆ ಹೋಗುವ ಸ್ಪರ್ಧಿಗಳು ಅನುಭವಿಸಲಿದ್ದಾರೆ. ಕಾದು ನೋಡೋಣ.

ಭಗತ್ಆದ ಯಶ್

ಕನ್ನಡದ ಬಹು ಬೇಡಿಕೆಯ ನಾಯಕ ಯಶ್‌ ಈಗ ಭಗತ್‌ ಸಿಂಗ್‌ ಪಾತ್ರ ಮಾಡುತ್ತಿರುವುದರ ಬಗ್ಗೆ ಗೊತ್ತೇ ಇದೆ. ಹಾಗಂತ ಇದು ಅವರ ಜೀವನಾಧಾರಿತ ಚಿತ್ರವಲ್ಲ ಎಂಬುದು ನಿರ್ದೇಶಕರ ಅಂಬೋಣ. ಮಂಜು ಮಾಂಡ ನಿರ್ದೇಶಿಸುತ್ತಿರುವ `ಮಾಸ್ಟರ್‌ ಪೀಸ್‌’ ಚಿತ್ರದಲ್ಲಿ ಯಶ್‌ ಭಗತ್‌ ಸಿಂಗ್‌ರಂತೆ ವೇಷ  ಧರಿಸಿದ್ದಾರೆ. ಕಥೆಯ ಬಗ್ಗೆ ಎಲ್ಲಿಯೂ ಬಿಟ್ಟುಕೊಡದ ತಂಡ ಚಿತ್ರವನ್ನು `ಮಾಸ್ಟರ್‌ಪೀಸ್‌’ ಎಂದಷ್ಟೇ ಹೇಳುತ್ತಿದೆ. ಭಗತ್‌ ಸಿಂಗ್‌ರ ಜನ್ಮದಿನದಂದು ಯಶ್‌ ಭಗತ್‌ ಗೆಟಪ್‌ನಲ್ಲಿದ್ದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಆದರೆ ನಿರ್ದೇಶಕರು ಹೇಳುವಂತೆ. “ನಾವು ಎಂದಿನಂತೆ ಚಿತ್ರೀಕರಣ ಮಾಡುತ್ತಿದ್ದೆ. ಭಗತ್‌ ಸಿಂಗ್‌ರ ಜನ್ಮ ದಿನ ಆಚರಿಸುತ್ತಿದ್ದ ಯುವಕರು ಕಣ್ಣಿಗೆ ಬಿದ್ದಾಗ ಅವರನ್ನು ಶೂಟಿಂಗ್‌ನಲ್ಲಿ ಸೇರಿಸಿಕೊಂಡೆ ಅಷ್ಟೆ. ಯಾವುದನ್ನೂ ಪ್ಲಾನ್ ಮಾಡಿರಲಿಲ್ಲ. ನನಗೂ ಅಚ್ಚರಿಯಾಯಿತು,” ಎನ್ನುತ್ತಾರೆ. ಸ್ಯಾಂಡಲ್ ವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ `ಮಾಸ್ಟರ್‌ ಪೀಸ್‌’ ಚಿತ್ರ ಖಂಡಿತಾ ದೇಶಭಕ್ತಿ ಸಿನಿಮಾ ಅಲ್ಲ. ಯಶ್‌ ಇಲ್ಲಿಯವರೆಗೂ ನಿರ್ವಹಿಸಿದಂಥ ಪಾತ್ರವನ್ನೇ ಈ ಚಿತ್ರದಲ್ಲೂ ಮಾಡಿದ್ದಾರೆ ಎನ್ನುವುದೇ ವಿಶೇಷ. ಮೂರ್ನಾಲ್ಕು ಶೇಡ್‌ಗಳಲ್ಲಿ ಯಶ್‌ ಬಂದು ಹೋಗುತ್ತಾರಂತೆ. ನಿರ್ದೇಶಕರ ಮೊದಲ ಚಿತ್ರಕ್ಕೆ ಭಾರಿ ಬಜೆಟ್ ಹಾಕಲಾಗಿದೆಯಂತೆ.

chitrashobha-5

ಆಸ್ಕರ್ಕಿರೀಟ

ದಾಖಲೆ ಸೃಷ್ಟಿಸುವುದರಲ್ಲಿ ಎಲ್ಲರಿಗಿಂತ ಮೊದಲಿಗನಾದ ಮಾಸ್ಟರ್‌ ಕಿಶನ್‌ ತನ್ನ ಕಿರು ವಯಸ್ಸಿನಲ್ಲಿ `ಕೇರಾಫ್‌ ಫುಟ್‌ಪಾತ್‌’ ಚಿತ್ರ ನಿರ್ದೇಶಿಸಿ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ್ದ. ಇದೀಗ ನಾಯಕನಾಗಿ ಕಿಶನ್‌ ಎತ್ತರಕ್ಕೆ ಬೆಳೆದು ನಿಂತಿದ್ದಾನೆ. `ಕೇರಾಫ್‌ ಫುಟ್‌ಪಾತ್‌ ಭಾಗ-2′ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿ ಅದನ್ನು ಆಸ್ಕರ್‌ ಪ್ರಶಸ್ತಿ ಸ್ಪರ್ಧೆಗೆ ಕಳುಹಿಸಿದ್ದಾನೆ. “ನಾನು `ಕೇರಾಫ್‌ ಫುಟ್‌ಪಾತ್‌ ಭಾಗ-2′ ಚಿತ್ರ ನಿರ್ದೇಶಿಸಿದಾಗ ಗಿನ್ನಿಸ್‌ ರೆಕಾರ್ಡ್‌ ಆಯ್ತು. ಮಾಧ್ಯಮ ನನ್ನ ಬೆನ್ನೆಲುಬಾಗಿ ನಿಂತಿತ್ತು. ಕಳೆದ ಒಂದೂವರೆ ವರ್ಷದಿಂದ  `ಕೇರಾಫ್‌ ಫುಟ್‌ಪಾತ್‌ ಭಾಗ-2′ ಮಾಡಿ ಮುಗಿಸಿದ್ದೇವೆ. ಆಸ್ಕರ್‌ಮೆಟ್ಟಿಲು ಹತ್ತೋಕೆ ಹೋಗ್ತಿದ್ದೇನೆ. ಎಲ್ಲರ ಆಶೀರ್ವಾದ ಬೇಕಾಗಿದೆ. ಎನ್‌.ಜಿ.ಓ.ದಲ್ಲಿ ಕೆಲಸ ಮಾಡುವಾಗ ಬಾಲಾಪರಾಧಿಗಳ ಬಗ್ಗೆ ತಿಳಿದುಕೊಂಡೆ. ಅವರ ಬಗ್ಗೆ ಸಿನಿಮಾ ಮಾಡಬೇಕೆನಿಸಿತು. ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲಿ ಚಿತ್ರ ರೆಡಿಯಾಗಿದೆ. ಪತ್ರಕರ್ತ ಶ್ಯಾಮ್ ಪ್ರಸಾದ್‌ ಸಂಭಾಷಣೆ ಬರೆದಿದ್ದಾರೆ,” ಎಂದು ಹೇಳಿದ ಕಿಶನ್‌.  ಈ ಚಿತ್ರದಲ್ಲಿ ಇಷಾ ಡಿಯೋಲ್ ‌ನಟಿಸಿದ್ದಾಳೆ. ನಟಿ, ಸಂಸದೆ ಹೇಮಾಮಾಲಿನಿ ಕೂಡಾ ಈ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ ಕಿಶನ್‌ನನ್ನು ಹಾಡಿ ಹೊಗಳಿದ್ದಾರೆ. ಕಿಶನ್‌ಗೆ ಆಸ್ಕರ್‌ಕಿರೀಟ ದೊರೆಯಬಹುದೇ…. ಸಿಗಲಿ ಎಂಬುದು ನಮ್ಮ ಹಾರೈಕೆ.

chitrashobha-6

ಸಿನಿಮಾ ಮೇಲೆ ಸವಾರಿ

`ಪ್ಯಾರಿಸ್‌ ಪ್ರಣಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಾಡೆಲಿಂಗ್‌ ದುನಿಯಾದಿಂದ ಕಾಲಿಟ್ಟಂಥ ರಘು ಮುಖರ್ಜಿ ಎತ್ತರದ ನಿಲುವಿನ ಸುಂದರ ನಾಯಕ. ಕನ್ನಡ ಸಿನಿಮಾಗಳಲ್ಲಿ ತನಗೊಪ್ಪುವಂಥ ಪಾತ್ರಗಳಲ್ಲಿ ಕಾಣಿಸಿಕೊಂಡು ಬಂದಿರುವ ರಘು ಬಂಗಾಳಿ ಮೂಲದವರಾದರೂ ಕನ್ನಡದ ಹುಡುಗನೇನೋ ಎಂಬಂತೆ ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲ. `ಸಾರಿ’ ಚಿತ್ರದ ಮೂಲಕ ಎಲ್ಲರ ಗಮನಸೆಳೆದ ರಘು ಮುಖರ್ಜಿ ಅವರಿಗೆ ನಿರೀಕ್ಷಿಸಿದ ಹಾಗೆ ಅವಕಾಶಗಳು ಸಿಗದೇ ಹೋದರೂ, ಖಾಲಿಯಂತೂ ಕುಳಿತುಕೊಳ್ಳಲಿಲ್ಲ. ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸವಾರಿ ಚಿತ್ರದ ನಂತರ ಎಲ್ಲರೂ ನಮ್ಮನ್ನು ಇದೇ ತರಹದ ಪಾತ್ರದಲ್ಲಿ ತೋರಿಸಲು ಇಷ್ಟಪಡುತ್ತಾರೆ. ನನಗೆ ಆ ರೀತಿ ಬ್ರ್ಯಾಂಡ್‌ ಆಗಲು ಇಷ್ಟವಿರಲಿಲ್ಲ. ಎಲ್ಲ ತರಹದ ಪಾತ್ರ ಮಾಡುವಾಸೆ. ಏನಾದರೂ ವಿಭಿನ್ನತೆ ಇರಬೇಕು ಅಂತ ಆಸೆ ಪಡೋನು ನಾನು. `ಪ್ರೀತಿಯಲ್ಲಿ ಸಹಜ’ ಚಿತ್ರದಲ್ಲಿ ಅಂಥವೊಂದು ಪಾತ್ರ ಸಿಕ್ಕಿದೆ. ದೇವರಾಜ್ ಸುಹಾಸಿನಿಯರ ಪುತ್ರನಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ. ನಾನಿಲ್ಲಿಯವರೆಗೂ ಮಾಡಿರದ ಪಾತ್ರವಿದು. ನಿರ್ದೇಶಕ ರತ್ನಜ ಅವರು ಅನುಭವೀ ನಿರ್ದೇಶಕರ ಗರಡಿಯಲ್ಲಿ ಪಳಗಿರೋರು. ಎಲ್ಲ ಸರಿಯಾಗಿ ಬರಬೇಕು. ಅವರ ಜೊತೆ ಕೆಲಸ ಮಾಡಿದ್ದು ಹೊಸ ಅನುಭವ ಸಿಕ್ಕಂತಾಯಿತು. ನಾವು ಕೂಡ ಸಾಕಷ್ಟು ಕಲಿತುಕೊಂಡೆವು. ಸ್ಕೂಲ್ ವಾತಾವರಣ ಸೆಟ್‌ನಲ್ಲಿರುತ್ತೆ, ತುಂಬಾನೆ ಶಿಸ್ತು ವಹಿಸಿ ಕೆಲಸ ಮಾಡಬೇಕು ಎಂದು ಹೇಳುವ ರಘುಗೆ ನಟನೆ ಬಿಟ್ಟು ಬೇರೇನು ಆಸಕ್ತಿ ಇದೆ ಎಂದು ರಘುವನ್ನು ಕೇಳಿದರೆ ಸಿನಿಮಾ… ಸಿನಿಮಾ… ಸಿನಿಮಾ… ಎನ್ನುತ್ತಾರೆ. ನಿರ್ದೇಶನದ ಬಗ್ಗೆ ಆಸಕ್ತಿ ಇದೆಯಾ ಎಂದು ಪ್ರಶ್ನಿಸಿದರೆ

“ಹಾಂ… ಖಂಡಿತಾ ಇದೆ. ಆದರೆ ಅದಕ್ಕೆಲ್ಲ ತಯಾರಿ ಮಾಡಿಕೊಳ್ಳಬೇಕು,” ಎನ್ನುತ್ತಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ