ಬಾಲಿವುಡ್‌ನಲ್ಲಿ ಬೇಬಿ ಡಾಲ್ ಆಗಿ, ಕನ್ನಡದಲ್ಲಿ ಸೇಸಮ್ಮಳಾಗಿ ಬಂದು ಇದೀಗ `ಲವ್ ಯೂ ಆಲಿಯಾ' ಚಿತ್ರದಲ್ಲಿ ಕಾಮಾಕ್ಷಿಯಾಗಿ ಕಂಗೊಳಿಸುತ್ತಿರುವ ಸನ್ನಿ ಮಹಿಮೆ ಅಪಾರ.
ಇವಳ ಅಂದ ನೋಡಿ ಮೀನಿಗೆ ಸ್ವಿಮಿಂಗ್ ಮರೆತು ಹೋಯ್ತು ಎಂದು ಈ ಬೆಡಗಿಗಾಗಿ ಹಾಡಿನ ಸಾಲುಗಳು ರಂಗುರಂಗಾಗಿ ಮೂಡಿಬಂದವು. ಇಂಥವೊಬ್ಬ ಬಿನ್ನಾಣಗಿತ್ತಿಯನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ `ಲವ್ ಯೂ ಆಲಿಯಾ' ಚಿತ್ರಕ್ಕಾಗಿ ಕರೆದು ತಂದಾಗ, ಬರೀ ಐಟಂ ಡ್ಯಾನ್ಸ್ ಮಾಡಿಸದೆ ಆಕೆಗಾಗಿ ಒಂದು ಸನ್ನಿವೇಶವನ್ನು ಸೃಷ್ಟಿಸಿದರು. ಸನ್ನಿ ಜೊತೆಗಾರನಾಗಿ ಮಜಾ ಟಾಕೀಸ್‌ನ ರೂವಾರಿ ಸೃಜನ್ ಲೋಕೇಶ್ ಸಿಕ್ಸ್ ಪ್ಯಾಕ್ ಬೆಳೆಸಿಕೊಂಡು ಸಾಕಷ್ಟು ಟ್ರಿಮ್ ಆಗಿ, ಸ್ಟೈಲಿಶ್ ಮೇಕ್ ಓವರ್‌ನಲ್ಲಿ ಹಾಡಿ ಕುಣಿದರು.
ಸೃಜನ್ ಸನ್ನಿ ಜೋಡಿಯ ಮೋಡಿ `ಲವ್ ಯೂ ಆಲಿಯಾ' ಚಿತ್ರದ ಪ್ಲಸ್ ಪಾಯಿಂಟ್ ಆಯಿತು. ಸುಂದರವಾದ ರೆಸಾರ್ಟ್‌ನಲ್ಲಿ ಈಜು ಕೊಳದ ಬಳಿ ಚಿತ್ರೀಕರಣಗೊಂಡ ಈ ಹಾಡು ಬಹಳ ಸ್ಟೈಲಿಶ್ ಆಗಿ ರೂಪುಗೊಂಡಿತು.
ಮಲ್ಲಿಕಾ ಶೆರಾವತ್‌ಳನ್ನು ಓವರ್ ಟೇಕ್ ಮಾಡಿ ಭಾರತದ ಚಿತ್ರರಂಗದಲ್ಲೇ ತನ್ನ ಮೋಡಿಯ ಬಲೆ ಬೀಸಿರುವ ಸನ್ನಿ ಲಿಯೋನ್‌ಅಪ್ರತಿಮ ಸುಂದರಿ. ಬಿಂಕ ಬಿನ್ನಾಣಕ್ಕೇನೂ ಕಡಿಮೆ ಇಲ್ಲ. ತೆರೆ ಮೇಲೆ ಮೂಡಿ ಬಂದರೆ ಕಣ್ ಕಣ್ ಬಿಡುವಂತೆ ಮಾಡುತ್ತಾಳೆ. ಸನ್ನಿ ಸಿನಿಮಾ ರಂಗದಲ್ಲಿ ಸುನಾಮಿ ಅಲೆ ಎಬ್ಬಿಸಿರುವ ಬ್ಯೂಟಿ ಕ್ವೀನ್. ಸನ್ನಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ.
`ಲವ್ ಯೂ ಆಲಿಯಾ' ಚಿತ್ರದಲ್ಲಿ ಮೂಡಿಬಂದಿರುವ ಸನ್ನಿ ಹಾಡನ್ನು ನೋಡಿದಾಗ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆಯಲ್ಲಿ ಹರಿದುಬಂದ ಹಾಡು `ಕಾಮಾಕ್ಷಿ, ಕಾಮಾಕ್ಷಿ, ಕಣ್ಣಲ್ಲೇ ಕೊಲ್ತಿಯಲ್ಲೇ ಸೋನಾಕ್ಷಿ....' ಎಲ್ಲರ ಗಮನ ಸೆಳೆಯುತ್ತದೆ. ಕವಿರಾಜ್ ಈ ಹಾಡನ್ನು ಬರೆದಿದ್ದಾರೆ. ಪ್ರದೀಪ್ ಆಂಟೋನಿ ಕೊರಿಯಾಗ್ರಫಿ ಇದೆ.
ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನು ಮಾಡಿರುವ ಇಂದ್ರಜಿತ್ ಲಂಕೇಶ್ ಎಂದಿನಂತೆ ಬಹಳ ಸ್ಟೈಲಿಶಾಗಿ ಈ ಚಿತ್ರ ಮಾಡಿದ್ದಾರೆ. ಸುಂದರವಾದ ಲೊಕೇಶನ್, ಅತ್ಯುತ್ತಮ ಕಾಸ್ಟ್ಯೂಮ್ಸ್, ಚಿತ್ರದ ಕ್ವಾಲಿಟಿ ಬಗ್ಗೆ ಹೆಚ್ಚು ಗಮನ ಕೊಟ್ಟಿರುವ ಇಂದ್ರಜಿತ್ ಸನ್ನಿ ಲಿಯೋನ್‌ಳನ್ನು ಬಹಳ ಸುಂದರವಾಗಿ ತಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.
ಅತಿ ಹೆಚ್ಚು ಬೇಡಿಕೆಯಲ್ಲಿರುವ ಸನ್ನಿ ಲಿಯೋನ್ ಸಂಭಾವನೆ ಕೂಡಾ ಗಗನಕ್ಕೇರಿದಷ್ಟಿದೆ. ಸಂತೋಷ್ ರೈ ಕ್ಯಾಮೆರಾ ಕಣ್ಣಿನಲ್ಲಿ ಸನ್ನಿ ಇನ್ನೂ ಸುಂದರವಾಗಿ ಕಾಣುತ್ತಾಳೆ.
`ಲವ್ ಯೂ ಆಲಿಯಾ' ಇಂದ್ರಜಿತ್ ಹೊಸ ಪೀಳಿಗೆಗೆ ಮಾಡಿರುವಂಥ ಚಿತ್ರ. ಹಾಗೆಯೇ ಕುಟುಂಬದ ಮೌಲ್ಯಗಳ ಬಗ್ಗೆ ಒಳ್ಳೆ ಮಾತುಗಳನ್ನು ಸಹ ಕೊಡುವ ಪ್ರಯತ್ನ ಮಾಡಿದ್ದಾರೆ.
ವೃತ್ತಿ ಬದುಕಿನಲ್ಲಿ ನಿರತರಾಗಿರುವ ಗಂಡ ಹೆಂಡತಿ ನಡುವೆ ನಡೆಯುವ ಈಗೋಯಿಸಂ ಮತ್ತು ಜೀವನದ ಸೂಕ್ಷ್ಮತೆಯನ್ನು ಅವರ ನಡುವೆ ಹೊಂದಾಣಿಕೆ ಹೇಗಿರಬೇಕೆಂಬುದನ್ನು ಯುವ ಪ್ರೇಮಿಗಳ ಮೂಲಕ ಹೇಳುತ್ತಾ ಹೋಗುವ ಪ್ರಯತ್ನ ಮಾಡಿದ್ದಾರೆ. ಇವೆಲ್ಲದರ ನಡುವೆ ಸನ್ನಿ ಲಿಯೋನ್ ಮತ್ತು ಸೃಜನ್ ಜೋಡಿಯಾಗಿ ಅತಿಥಿ ಪಾತ್ರಗಳಲ್ಲಿ ಬಂದು ಹೋಗುವುದರ ನಡುವೆ ಪ್ರೇಕ್ಷಕರಿಗೆ ಖುಷಿಪಡಿಸಲು ಮನರಂಜನೆಯ ದೃಷ್ಟಿಯಿಂದ ಹಾಡನ್ನು ಗ್ಲಾಮರಸ್ಸಾಗಿ ಕಟ್ಟಿಕೊಟ್ಟಿದ್ದಾರೆ.