ತಾಜ್‌ ಮಹಲ್ ನೋಡಲು ಬಂದಿದ್ದ ಶಹಜಹಾನ್‌ನ 6ನೇ ಪೀಳಿಗೆಯ ಮೊಮ್ಮಗ ಹೇಳಿದನಂತೆ, “ಇಂದು ನಮ್ಮದೂ ಬೇಕಾದಷ್ಟು ಬ್ಯಾಂಕ್‌ ಬ್ಯಾಲೆನ್ಸ್ ಉಳಿದಿರುತ್ತಿತ್ತು….. ಅಂದು ನಮ್ಮ ಅಜ್ಜನಜ್ಜನ ಲವ್ ಕಂಟ್ರೋಲ್‌ನಲ್ಲಿ ಇರಬೇಕಿತ್ತು!”

ಪಿ.ಯು.ಸಿ ಕಾಲೇಜಿನಲ್ಲಿ ಇಂಗ್ಲಿಷ್‌ ಕ್ಲಾಸ್‌ ನಡೆಯುತ್ತಿತ್ತು. ಹೊಸ ಮೇಡಂ ಉತ್ಸಾಹದಿಂದ ಕೊನೆ ಬೆಂಚಿನ ವೆಂಕಿಯನ್ನು ಕೇಳಿದರು, “ಏನ್ರಿ ವೆಂಕಿ, ಎದ್ದು ನಿಂತು ಹೇಳಿ. ಇಂಗ್ಲಿಷ್‌ನಲ್ಲಿ ಗುಡಿಸಲಿಗೆ ಏನಂತಾರೆ?”

ಏನನ್ನೋ ಯೋಚಿಸುತ್ತಿದ್ದ ವೆಂಕಿಗೆ ಖಂಡಿತಾ ಉತ್ತರ ಹೊಳೆಯಲಿಲ್ಲ. ಅವನು ಎದ್ದು ನಿಂತು ಕಿಟಕಿಯಲ್ಲಿ ಇಣುಕಿದ. ಎಲ್ಲಿಂದಲೋ ಒಂದು ನೊಣ ಬಂದು ಅವನ ಮೂಗಿನ ಮೇಲೆ ಕೂರಲು “ಹಟ್‌!” ಎಂದು ಅದನ್ನು ಓಡಿಸಲೆತ್ನಿಸಿದ. “ಶಭಾಷ್‌! ಎಲ್ಲರೂ ವೆಂಕಿಯ ಹಾಗೆ ಅಲರ್ಟ್‌ ಆಗಿರಿ,” ಎಂದು ಮೇಡಂ ಹೇಳಲು ಕ್ಲಾಸು ದಂಗುಬಡಿಯಿತು!

 

ಕೋಲ್ಕತಾದಿಂದ ಬೆಂಗಳೂರಿನ ಕಾಲೇಜಿಗೆ ಹೊಸದಾಗಿ ಬಂದು ಸೇರಿದ್ದ ನಿವೇದಿತಾ ಎಷ್ಟು ದಿನಗಳಾದರೂ ತನ್ನ ಹಳೆ ಊರಿನ ಬಗ್ಗೆ ಹೆಮ್ಮೆ ಹೇಳಿಕೊಳ್ಳುವುದನ್ನು ಬಿಡಲಿಲ್ಲ. “ನಮ್ಮ ಕಲ್ಕತ್ತಾದ ಪಾನ್‌ ಮಸಾಲ ಎಂಥ ಗ್ರೇಟ್‌ ಗೊತ್ತಾ?” ಎಂದು ಮಾಮೂಲಾಗಿ ಶುರು ಹಚ್ಚಿಕೊಂಡಳು.

“ನಮ್ಮ ಬೆಂಗಳೂರಿನ ಬೆಣ್ಣೆ ಮಸಾಲೆಗಿಂತ ಏನು?” ಸರಕ್ಕನೆ ಸರಳಾ ಕೇಳಿದಾಗ, ನಿವೇದಿತಾ ತಬ್ಬಿಬ್ಬು.ಹೊಸ ಹೋಟೆಲ್‌‌ನ ಕೊನೆ ಟೇಬಲ್‌ನಲ್ಲಿ ಕುಳಿತಿದ್ದ ಜೋಡಿಯೊಂದು ಬಹಳ ಹೊತ್ತಿನಿಂದ ಗುಸುಗುಸು ನಡೆಸಿತ್ತು. ಮಾಣಿ ಇಬ್ಬರಿಗೂ ಟೀ ತಂದಿಟ್ಟು ಹೋದ ಬಳಿಕ, ಹುಡುಗಿ ಎದ್ದವಳೇ ಸಿಡಾರನೇ ಹುಡುಗನ ಕೆನ್ನೆಗೊಂದು ಬಾರಿಸಿದಳು.

ಅಲ್ಲಿ ಕುಳಿತಿದ್ದ ಬೇರೆ ಜನರೆಲ್ಲ ಏನಾಯ್ತೋ ಏನೋ ಎಂದು ಆ ಟೇಬಲ್ ಬಳಿ ಓಡಿಬಂದವರೇ “ಏನಾಯ್ತು…? ಯಾಕೆ ಹೊಡೆದದ್ದು….?” ಎಂದು ವಿಚಾರಿಸಿದರು.

“ಇವನು…. ಇವನು….. ನನ್ನ ಟೀಗೆ ಏನೋ ತಾಯಿತ ಹಾಕಿ ನನ್ನ ವಶೀಕರಣ ಮಾಡಿಕೊಳ್ಳಲು ಯತ್ನಿಸುತ್ತಿದ್ದಾನೆ…. ಆಮೇಲೆ ನನ್ನ ಗತಿ?” ಎಂದು ಬಡಬಡಿಸಿದಳು.

ಹುಡುಗ ತಕ್ಷಣ ತಡಬಡಾಯಿಸುತ್ತಾ…. “ಇ…ಇ… ಇಲ್ಲ…. ಟೀ ಸ್ಟ್ರಾಂಗ್‌ ಇಲ್ಲ ಅಂತ ಟೀ ಬ್ಯಾಗ್‌ ಹಾಕಿದ್ದಷ್ಟೆ…..” ಎಂದು ಅವನು ಅದನ್ನು ಎತ್ತಿ ತೋರಿಸಿದಾಗ, `ಛೇ….. ಇಷ್ಟೇನೇ….’ ಎಂದು ಸ್ವಾರಸ್ಯ ಕಾಣದ ಮಂದಿ ಹುಡುಗಿಯನ್ನು ಗದರಿಕೊಂಡರು.

 

ಹೊಸದಾಗಿ ಮೊಬೈಲ್ ಫೋನ್‌ ಖರೀದಿಸಿದ್ದ ಕಲ್ಲೇಶಿ, ಅರ್ಧ ಗಂಟೆಯಲ್ಲೇ ಅದೇ ಅಂಗಡಿಗೆ ಓಡಿಬಂದು ಕೇಳಿದ, “ನಾನು ಈ ಮೊಬೈಲ್‌ಗೆ ಎಂಪಿ3 ಹಾಡುಗಳನ್ನು ಹಾಕಿಸಬೇಕು,” ಎಂದ. ಅಂಗಡಿಯವನು ಕಲ್ಲೇಶಿಯತ್ತ ತಿರುಗಿ, “ನಿಮ್ಮ ಬಳಿ ಇದರ  ಮೆಮರಿ ಕಾರ್ಡ್‌ ಇದೇ ತಾನೇ?” ಎಂದು ಕೇಳಿದ. ತಕ್ಷಣ ಅದಕ್ಕೆ ಅವನು, “ಅದೇನೋ ಗೊತ್ತಿಲ್ಲ.

ಆದರೆ ರೇಷನ್‌ ಕಾರ್ಡ್‌ ಇದೆ, ಸಾಕಾಗೋಲ್ವೇ….?” ಎನ್ನುವುದೇ?

 

ಬಲು ರೊಮ್ಯಾಂಟಿಕ್‌ ಮೂಡ್‌ನಲ್ಲಿ ಪುಟ್ನಂಜ ತನ್ನ ಗರ್ಲ್ ಫ್ರೆಂಡ್‌ಗೆ ಹೇಳಿದ, “ಡಿಯರ್‌, ನೀನು ನನ್ನನ್ನು ಎಷ್ಟು ಪ್ರೀತಿಸ್ತೀಯಾ?”

ಪುಟ್ನಂಜಿ ಏನೂ ಕಡಿಮೆಯಿಲ್ಲದ ದನಿಯಲ್ಲಿ, “ಡಾರ್ಲಿಂಗ್‌, ನೀನೆಷ್ಟು ನನ್ನನ್ನು ಪ್ರೀತಿಸುವೆಯೋ ಅಷ್ಟೇ!” ಎಂದಳು.

“ಓ.. ಹಾಗಂದ್ರೆ ನೀನೂ ಟೈಂಪಾಸಿಗಾಗಿ ಬಂದಳು ಅನ್ನುವ….” ಅರಿಯದೆ ಪುಟ್ನಂಜ ಸತ್ಯ ನುಡಿದಿದ್ದ.

 

ಸುನೀಲ್ ಬಹಳ ದಿನಗಳಿಂದ ಕಾಲೇಜಿನ ಹೊಸ ಹುಡುಗಿ ದೀಪ್ತಿಯ ಹಿಂದೆಮುಂದೆ ಸುತ್ತುತ್ತಾ ಅವಳನ್ನು ಒಲಿಸಿಕೊಳ್ಳಲು ಯತ್ನಿಸುತ್ತಿದ್ದ. ಅವಳಿಗಂತೂ ಇವನ ಓಲೈಸುವಿಕೆಯ ಪುರಾಣದಿಂದ ಬಹಳ ಬೋರ್‌ ಆಗಿತ್ತು. ಅವನಿಂದ ಬಿಡಿಸಿಕೊಳ್ಳುವ ವಿಧಾನ ಗೊತ್ತಾಗಲಿಲ್ಲ. ಹೀಗೆ 2 ಪಿರೀಡ್‌ ಲೆಟ್‌ ಆಫ್‌ ಆಗಲು ಎಲ್ಲರೂ ಹತ್ತಿರದ ಕಬ್ಬನ್‌ ಪಾರ್ಕಿನಲ್ಲಿ ಹೋಗಿ ಕುಳಿತರು. ಸುನೀಲ್ ‌ಈ ಅವಕಾಶ ಬಿಟ್ಟಾನೆಯೇ? ಅವನು ದೀಪ್ತಿ ಬಳಿ ಬಂದು ಯಾವುದೋ ಹೊಸ ಸಿನಿಮಾದ ಕಂತೆ ಪುರಾಣ ಬಿಚ್ಚಿಕೊಂಡ. ದೀಪ್ತಿ ಅವನ ಮಾತಿಗೆ ಸುಮ್ಮನೆ ಹಾಂಹೂಂ ಎನ್ನುತ್ತಾ ತನ್ನ ಬಳಿಯಿದ್ದ ಮಾಸಪತ್ರಿಕೆ ತಿರುವಿಹಾಕುತ್ತಿದ್ದಳು. ಸ್ವಲ್ಪ ಹೊತ್ತಾದ ಮೇಲೆ ಸುನೀಲ್ ಅವಳನ್ನು ಪ್ರಶ್ನಿಸಿದ, “ನಾನು ಕಥೆ ಎಲ್ಲಿಗೆ ನಿಲ್ಲಿಸಿದ್ದೆ ಹೇಳು….”

“ನನಗೇನು ಗೊತ್ತು?” ನಿರ್ಲಕ್ಷದಿಂದ ಉತ್ತರಿಸಿದಳು ದೀಪ್ತಿ. ಅವನಿಗೆ ಅಮಾನಿಸಿ, “ನಿನಗೆ ಅಷ್ಟು ಗೊತ್ತಾಗಲ್ವೇ? ನಿನ್ನ ತಲೆಯಲ್ಲೇನು ಸಗಣಿ ತುಂಬಿದೆಯೇ?” ಎಂದು ಎಲ್ಲರ ಮುಂದೆ ಛೇಡಿಸಿದ,  ಈ ಸದವಕಾಶ ಬಿಡಬಾರದೆಂದು ಅವಳು, “ನಾನೇನೋ ನನ್ನ ತಲೆಯಲ್ಲಿ ಚಾಕಲೇಟ್‌ ತುಂಬಿದೆ, ಅದಕ್ಕೆ ನೀನು ಒಂದೇ ಸಮ ನನ್ನ ತಲೆ ತಿಂತಿದ್ದೀಯಾ ಅಂದುಕೊಂಡಿದ್ದೆ… ಬರೀ ಸಗಣಿ ಇರುವಾಗಲೇ ಈ ರೀತಿ ತಲೆ ತಿಂತೀಯಾ… ಇನ್ನು ಚಾಕಲೇಟ್‌ ಆಗಿದ್ದರೆ ನನ್ನ ಗತಿ ಏನು?” ಎಂದಾಗ ಅಲ್ಲಿದ್ದವರೆಲ್ಲ ಹೋ ಎಂದು ಸುನೀಲ್‌ನನ್ನು ಕಿಚಾಯಿಸಿ ನಕ್ಕರು. ಇಂಗು ತಿಂದ ಮಂಗನಾಗಿದ್ದ ಸುನೀಲ್ ಅಲ್ಲಿಂದ ಎದ್ದು ಓಡಿಹೋದ.

 

ಕಾಲೇಜಿನ ಕಿಶೋರಿ ಕವಿತಾ ತನ್ನ ಚೆಲ್ಲಾಟಗಳಿಗೆ ಖ್ಯಾತಳಾಗಿದ್ದಳು. ಮನಬಂದಂತೆ ಬಾಯ್‌ಫ್ರೆಂಡ್‌ಗಳನ್ನು ಬದಾಯಿಸುತ್ತಾ ಅವರಿಂದ ಬೇಕುಬೇಕಾದ ಕೆಲಸ ಮಾಡಿಸಿಕೊಂಡು ಮೆರೆಯುತ್ತಿದ್ದಳು.

ಹೀಗೆ ಒಮ್ಮೆ ಬಸ್ಸಿನಲ್ಲಿ ಹೋಗುವಾಗ ಪ್ರೀಪೆಯ್ಡ್ ಆಗಿದ್ದ ಅವಳ ಮೊಬೈಲ್ ಕರೆನ್ಸಿ ಖಾಲಿ ಆಯ್ತು. ಅಲ್ಲಿದ್ದ ತನ್ನ ಗೆಳತಿಯರನ್ನು ಕಂಡು, “ನೋಡ್ರೇ… ಹೊಸ ಬಕರಾ ಕೈಲಿ ಒಂದು ನಿಮಿಷದಲ್ಲಿ ರೀಚಾರ್ಜ್‌ ಮಾಡಿಸ್ತೀನಿ!” ಎಂದು ರೋಫ್‌ ಹೊಡೆದು ತನ್ನ ಹೊಸ ಬಾಯ್‌ಫ್ರೆಂಡ್‌ಗೆ ಗೆಳತಿಯ ಫೋನ್‌ನಿಂದ ಕಾಲ್ ‌ಮಾಡಿದಳು.

“ಡಿಯರ್‌… ಒಂದು ಸ್ಮಾಲ್ ಹೆಲ್ಪ್ ಪ್ಲೀಸ್‌…. ಈಗ ಹೇಗಿದ್ದೀಯ? ಹುಷಾರಾಗಿದ್ದಿ ತಾನೇ?”

“ಹೂಂ ಚೆನ್ನಾಗಿದ್ದೀನಿ…. ನೀನು ಹೇಳು,” ಎಂದು ಅಲ್ಲಿಂದ ಜವಾಬು ಬಂತು. ಸ್ಪೀಕರ್‌ ಆನ್‌ ಮಾಡಿ ಅವಳು ಗೆಳತಿಯರಿಗೆ ತನ್ನ ಪ್ರತಾಪ ಕೊಚ್ಚಿಕೊಳ್ಳುತ್ತಿದ್ದಳು.

“ಒಂದು ಎಮರ್ಜೆನ್ಸಿ… ಅದಕ್ಕೆ ಫ್ರೆಂಡ್‌ ಫೋನಿಂದ ಮಾತಾಡ್ತಿದ್ದೀನಿ. ತಕ್ಷಣ ನನ್ನ ನಂಬರ್‌ಗೆ 1000 ರೂ. ರೀಚಾರ್ಜ್‌ಮಾಡಿಸ್ತೀಯಾ?”

“ಸಾರಿ ಸಿಸ್ಟರ್‌… ಇದು ರಾಂಗ್‌ ನಂಬರ್‌. ನೀವು ಬೇರೆ ನಂಬರ್‌ಗೆ ಪ್ರಯತ್ನಿಸಿ,” ಎಂದು ಇವಳ ಬಗ್ಗೆ ಗೆಳೆಯರಿಂದ ತಿಳಿದುಕೊಂಡಿದ್ದ ಆ ಕಿಲಾಡಿ ಕಾಲೆಳೆದಾಗ ತನ್ನ ಪೆದ್ದುತನ ಎಲ್ಲರ ಮುಂದೆ ಸಿಕ್ಕಿ ಹಾಕಿಕೊಂಡಿತಲ್ಲ ಎಂದು ಕವಿತಾ ಮಂಕಾದರೆ, ಅಲ್ಲಿದ್ದ ಗೆಳತಿಯರು ಜೋರಾಗಿ ನಗುತ್ತಾ ಇವಳನ್ನು ಕಿಚಾಯಿಸಿದರು.

 

ರಾಜು ಪ್ರೀತಾ ಡಿಗ್ರಿ ಕೊನೆ ವರ್ಷದ ಸಹಪಾಠಿಗಳು. ಮೊದಲ ವರ್ಷದಿಂದಲೇ ಇಬ್ಬರೂ ಪರಸ್ಪರ ಪ್ರೇಮಿಸುತ್ತಿದ್ದರು, ಆದರೆ ಹೇಳಿಕೊಳ್ಳಲು ಸಂಕೋಚ ಅಡ್ಡಿ. ಕೊನೆಗೆ ಅಂತಿಮ ವರ್ಷದ ವಿದಾಯದ ವಾರ್ಷಿಕೋತ್ಸವದಂದು ರಾಜು ಪ್ರೀತಾಳಿಗೆ ಪ್ರಪೋಸ್‌ಮಾಡಿಯೇಬಿಟ್ಟ. ಇದರಿಂದ ಸುಪ್ರೀತಳಾದ ಪ್ರೀತಾ, ತನ್ನ ತಾಯಿಯನ್ನು ಬಂದು ಅನುಮತಿ ಕೇಳಲೆಂದಳು. ಮಾರನೇ ದಿನ ರಾಜು ಅವಳ ಮನೆಗೆ ಹೋಗಿ, ತಂದೆಯಿಲ್ಲದ ಕಾರಣ, ನೇರವಾಗಿ ಅವಳ ತಾಯಿಯ ಬಳಿ ವಿಷಯ ಪ್ರಸ್ತಾಪಿಸಿ ಮದುವೆಗೆ ಅನುಮತಿ ಕೇಳಿದ. ಅವರು ಒಪ್ಪಿದರು. ಮಾರನೇ ದಿನ ಪ್ರೀತಾ ಕಾಲೇಜಿಗೆ ಬಂದಾಗ ಬಹಳ ಖುಷಿಯಲ್ಲಿದ್ದಳು.

“ನನ್ನ ತಾಯಿಗೆ ನೀನು ಬಹಳ ಮೆಚ್ಚುಗೆಯಾದೆ,” ಎಂದಳು ಸಂಭ್ರಮದಿಂದ.

“ಆದರೆ ಏನೇ ಆಗಲಿ, ನಾನು ಮದುವೆ ಆಗಬೇಕಿರುವುದು ನಿಮ್ಮಮ್ಮನನ್ನು ಅಲ್ಲ … ನಿನ್ನನ್ನೇ! ” ಎಂದಾಗ ಪ್ರೀತಾ ಬಲು ತಬ್ಬಿಬ್ಬಾದಳು. ಅದನ್ನು ಕೇಳಿಸಿಕೊಂಡು ಅಲ್ಲಿದ್ದ ಸಹಪಾಠಿಗಳೂ ನಕ್ಕುಬಿಟ್ಟರು.

 

ಅಂದು ರವಿ ಶಶಿಕಲಾರ ಆರತಕ್ಷತೆಗೆ ಅವರ ಆಫೀಸ್‌ ಸಿಬ್ಬಂದಿ ಪೂರ್ತಿ ಬಂದಿತ್ತು. ಶಶಿ ರವಿಗಿಂತ 7 ಇಂಚು ಕುಳ್ಳಿ. ಇದನ್ನು ಗಮನಿಸಿದ ಗುಂಡ ಸುಮ್ಮನಿರಲಾಗದೆ ಕೀಟಲೆ ಮಾಡಿದ, “ಏನೋ ರವಿ, ನಿನ್ನ ಹೆಂಡತಿ ನಿನಗಿಂತ ತುಂಬಾ ಕುಳ್ಳಿ…”

ಅದಕ್ಕೆ ರವಿ ತಕ್ಷಣ, “ಟೆನ್ಶನ್‌ ಅನ್ನೋದು ಎಷ್ಟು ಚಿಕ್ಕದಾಗಿರುತ್ತದೋ ಅಷ್ಟೇ ಒಳ್ಳೆಯದು,” ಎಂದ. ಇದನ್ನು ಕೇಳಿಸಿಕೊಂಡ

ಶಶಿ ಕೂಡಲೇ, “ಇದರಲ್ಲಿ ಇನ್ನೊಂದು ಲಾಭ ಇದೆ. ಇವರು ಪ್ರತಿ ಸಲ ನನ್ನೊಂದಿಗೆ ಮಾತನಾಡುವಾಗ ದೃಷ್ಟಿ ತಗ್ಗಿಸಿ ಮಾತನಾಡಬೇಕು ಹಾಗೂ ನಾನು ತಲೆಯೆತ್ತಿ  ಮಾತನಾಡಬೇಕು,” ಎಂದಾಗ ಅಲ್ಲಿದ್ದವರೆಲ್ಲ ನವ ವಧುವನ್ನು ಪ್ರಶಂಸಿಸಿದರೆ, ವರ ನಾಚಿಕೊಂಡು ತಲೆ ತಗ್ಗಿಸಿದ್ದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ