ಅಂದು ಭಾನುವಾರ ಬೆಳಗ್ಗೆ ಕಾಫಿ ಕುಡಿದು ಅರುಣ್‌ ಆರಾಮವಾಗಿ ಕುಳಿತು ಪೇಪರ್‌ ಓದುತ್ತಿದ್ದ. ಆಗಲೇ ಅವನ ಅತ್ತೆ ಗಿರಿಜಾ ಇದ್ದಕ್ಕಿದ್ದಂತೆ ಅವನನ್ನು ದೂರುವಂತೆ ಹೇಳಿದರು, “ಅರುಣ್‌, ಈಗ ನೀವು ನನ್ನ ಮಗಳನ್ನು ಮೊದಲಿನಷ್ಟು ಪ್ರೀತಿಸ್ತಿಲ್ಲ ಅಲ್ವಾ?”

“ಏನು ಹೇಳ್ತಿದ್ದೀರಿ ಅತ್ತೆ? ನಾನು ಈಗಲೂ ಬೇಕಾದ್ರೆ ಸಿಂಧೂಗೆ ಆಕಾಶದಿಂದ ಚಂದ್ರ ಹಾಗೂ ನಕ್ಷತ್ರಗಳನ್ನು ಕಿತ್ತು ತರ್ತೀನಿ,” ಪೇಪರ್‌ನಿಂದ ದೃಷ್ಟಿ ತೆಗೆಯದೆ ಅರುಣ್‌ ಹೇಳಿದ. ತನ್ನ 3 ವರ್ಷದ ಮಗ ರಾಹುಲ್‌ಗೆ ಬಟ್ಟೆ ತೊಡಿಸುತ್ತಿದ್ದ ಸಿಂಧು, “ಯಾಕಮ್ಮ ಹಾಗೆ ಹೇಳ್ತಿದ್ದೀಯಾ?” ಎಂದು ಅಮ್ಮನನ್ನು ಕೇಳಿದಳು.

ಗಿರಿಜಾ ದೀರ್ಘವಾಗಿ ಉಸಿರೆಳೆದುಕೊಂಡು ಹೇಳಿದರು, “ತುಂಬಾ ಸಿಂಪಲ್ ವಿಷಯ ಸಿಂಧು. ಗಂಡನಾದವನು ಇನ್ನೊಂದು ಹೆಣ್ಣಿಗೆ ಪ್ರೀತಿ ತೋರಿಸಿದಾಗ ತನ್ನ ಹೆಂಡತಿಯನ್ನು ಮೊದಲಿನ ಹಾಗೆ ಹೃದಯಾಳದಿಂದ ಪ್ರೀತಿಸ್ತಿಲ್ಲ ಅಂತ ಅರ್ಥ.”

ರಾಹುಲ್‌ಗೆ ಬಟ್ಟೆ ಹಾಕಿದ ನಂತರ ಸಿಂಧು ಅಮ್ಮನ ಮಗ್ಗುಲಲ್ಲಿ ಬಂದು ಕುಳಿತಳು. ಅರುಣ್‌ ಕೂಡ ನಿಟ್ಟುಸಿರು ಬಿಟ್ಟು ಪೇಪರ್‌ನ್ನು ಬದಿಯಲ್ಲಿಟ್ಟ. ನಂತರ ಅಮ್ಮ ಮಗಳನ್ನು ನೋಡತೊಡಗಿದ.

“ಹೀಗೆ ಮೌನವಾಗಿದ್ರೆ ಹೇಗೆ ಅರುಣ್‌? ನಾನು ನಿಮ್ಮ ಮೇಲೆ ಆರೋಪ ಹೊರಿಸಿದ್ದೀನಿ. ನೀವು ಏನಾದರೂ ಹೇಳೋದಿದ್ರೆ ಹೇಳಿ,” ಗಿರಿಜಾರ ಕಣ್ಣುಗಳಲ್ಲಿ ತುಂಟತನದಿಂದ ಕೂಡಿದ್ದ ಕೋಪ ಇತ್ತು.

“ಅತ್ತೆ, ಗಂಡ ಹೆಂಡತಿ ಮಧ್ಯೆ ಮನಸ್ತಾಪ ಉಂಟು ಮಾಡುವ ಇಂತಹ ತಮಾಷೆ ಸರಿಯಲ್ಲ. ನನ್ನ ಬದುಕಿನಲ್ಲಿ ಇನ್ನೊಬ್ಬ ಹೆಂಗಸು ಇದ್ದಾಳೇಂತ ಕೇಳಿ ನಿಮ್ಮ ಮುದ್ದಿನ ಮಗಳಿಗೆ ಹಾರ್ಟ್‌ ಫೇಲ್ ‌ಆಗಿಬಿಟ್ರೆ ನಾವು ಅಪ್ಪ ಮಗನ ಗತಿಯೇನು?” ಅರುಣ್‌ನಗುತ್ತಲೇ ದೂರಿದ.

“ರೀ, ತಮಾಷೆ ಮಾಡಬೇಡಿ. ನೀವು ನಿಜವಾಗಿಯೂ ಬೇರೊಂದು ಹೆಣ್ಣನ್ನು ಪ್ರೀತಿಸ್ತಿದ್ದೀರಾ? ಅದು ಹೇಳಿ ಮೊದಲು,” ಸಿಂಧು ಆತಂಕದ ಸ್ವರದಲ್ಲಿ ಹೇಳಿದಳು.

“ಹ್ಞೂಂ. ನನ್ನ ಪ್ರೀತಿ ಮೇಲೆ ಇಷ್ಟೇನಾ ನಂಬಿಕೆ ಇರೋದು?” ಹೃದಯಕ್ಕೆ ಗಾಢವಾದ ಪೆಟ್ಟು ಬಿದ್ದವನಂತೆ ಅರುಣ್‌ ಹೇಳಿದ,

“ನಿಮ್ಮ ಅಮ್ಮನ ಸ್ವಭಾವ ಗೊತ್ತಿಲ್ವಾ? ಅವರು ತಮಾಷೆ ಮಾಡ್ತಿದ್ದಾರೆ.”

“ನಾನು ತಮಾಷೆ ಮಾಡ್ತಿಲ್ಲ ಅರುಣ್‌,” ಗಿರಿಜಾ ಪ್ರತಿ ಶಬ್ದಕ್ಕೂ ಒತ್ತು ಕೊಟ್ಟು ಹೇಳಿದರು.

“ಅತ್ತೆ. ಇನ್ನಾದರೂ ತಮಾಷೆ ನಿಲ್ಲಿಸಿ. ಇಲ್ಲದಿದ್ರೆ ಸಿಂಧು ಪ್ರಶ್ನೆ ಕೇಳಿ ಕೇಳಿ ನನ್ನ ಪ್ರಾಣ ತಿಂತಾಳೆ,” ಅರುಣ್‌ ನಗುತ್ತಾ ಅತ್ತೆಗೆ ಕೈ ಜೋಡಿಸಿದ.

ಗಿರಿಜಾ ಎದ್ದು ಅತ್ತಿತ್ತ ತಿರುಗುತ್ತಾ ಗಂಭೀರವಾಗಿ ಹೇಳಿದರು, “ನಾನು ಇಲ್ಲಿಗೆ ಬಂದು ಇನ್ನೂ 2-3 ಗಂಟೆ ಆಗಿಲ್ಲ. ಆದರೆ ಇಷ್ಟು ಕಡಿಮೆ ಸಮಯದಲ್ಲಿ ನಿಮ್ಮಲ್ಲಿ ಉಂಟಾದ ಬದಲಾವಣೆ ಗಮನಿಸಿದ್ದೀನಿ ಅರುಣ್‌. ಇಂದು ನಿಮ್ಮ ಕಣ್ಣುಗಳಲ್ಲಿ ಸಿಂಧೂಳ ಬಗ್ಗೆ ಪ್ರೀತಿಯ ಭಾವನೆ ಕಾಣಿಸಲಿಲ್ಲ. ನೀವು ಬರೀ ಕೆಲಸದ ಬಗ್ಗೆ ಮಾತ್ರ ಮಾತಾಡ್ತೀರಿ ಅವಳ ಜೊತೆ. ಹೀಗಾಗಿ ನಿಮ್ಮಿಬ್ಬರ ಮಧ್ಯೆ ಯಾವಾಗಲೂ ಕಾಣ್ತಿದ್ದ ರೊಮ್ಯಾಂಟಿಕ್‌ ವರ್ತನೆ, ಪರಸ್ಪರ ಛೇಡಿಸುವಿಕೆ ಈಗ ಎಲ್ಲಿ ಹೋಯ್ತೂಂತ ನನಗೆ ಕಳವಳ ಆಗ್ತಿದೆ ಅರುಣ್‌.”

ಅರುಣ್‌ ನಗುತ್ತಾ ಉತ್ತರಿಸಿದ, “ಅತ್ತೆ, ನಮ್ಮಿಬ್ಬರ ಮದುವೆ ಆಗಿ 5 ವರ್ಷ ಆಯ್ತು. ರೊಮ್ಯಾಂಟಿಕ್‌ ಆಗಿ ರೇಗಿಸುವ ದಿನಗಳು ಕಳೆದುಹೋದ.ವು”

“ನೀವು ಗೀತಾ ಜೊತೆಗೂ ರೊಮ್ಯಾಂಟಿಕ್‌ ಆಗಿ ರೇಗಿಸೋದೆಲ್ಲಾ ಮಾಡ್ತೀರಲ್ಲ ಅರುಣ್‌.”

“ಈ ಗೀತಾ ಯಾರು?” ಸಿಂಧು ಮತ್ತು ಅರುಣ್‌ ಒಟ್ಟಿಗೇ ಕೇಳಿದಾಗ ಗಿರಿಜಾ ಮಂದವಾಗಿ ನಗುತ್ತಾ ಅರುಣ್‌ ಎದುರಲ್ಲಿ ನಿಂತರು. ಸ್ವಲ್ಪ ಹೊತ್ತು ಸುಮ್ಮನಿದ್ದು ಗಿರಿಜಾ ಸಸ್ಪೆನ್ಸ್ ಇನ್ನಷ್ಟು ಹೆಚ್ಚಿಸಿದರು. ನಂತರ ಕಥೆ ಹೇಳುವಂತೆ ಹೇಳಿದರು, “ನನ್ನ ಮಗಳ ವೈವಾಹಿಕ ಜೀವನದ ಸಂತಸದ ಬಗ್ಗೆ ಚಿಂತಿತಳಾಗಿದ್ದೆ. ಅದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ನೀವು ಸ್ನಾನಕ್ಕೆ ಹೋಗಿದ್ದಾಗ ನಿಮ್ಮ ಫೋನ್‌ನಲ್ಲಿ ಬಂದಿದ್ದ ಮೆಸೇಜ್‌ಗಳನ್ನು ಓದಿದೆ.”

“ಅತ್ತೆ, ಇದು ಬಹಳ ದೊಡ್ಡ ತಪ್ಪು. ಆದರೆ ಎಲ್ಲ ಮೆಸೇಜ್‌ಗಳನ್ನು ಓದಿದ ನಂತರ ಏನೂ ಸಿಗದಿದ್ದಾಗ ನಿಮಗೆ ಬಹಳ ನಿರಾಸೆ ಆಗಿರಬೇಕು,” ಅರುಣ್‌ ಹೇಳಿದ.

“ಹೇಗೆ ಸಿಗುತ್ತೆ ಅರುಣ್‌? ಗೀತಾಳ ಮೆಸೇಜ್‌ಗಳನ್ನು ನೀವು ತೆಗೆದ್ಬಿಟ್ಟಿದ್ರಿ. ಆದರೂ…”

“ಆದರೂ ಏನಮ್ಮಾ?” ಸಿಂಧು ಕೇಳಿದಳು.

“ಅಷ್ಟರಲ್ಲಿ ಅದೇ ಸಮಯಕ್ಕೆ ಗೀತಾಳ ತಾಜಾ ಮೆಸೇಜ್‌ ಬಂದಿತ್ತು. ನಾನು ಅದನ್ನು ಓದಿದೆ. ಎಲ್ಲ ವಿಷಯ ನನಗೆ ಅರ್ಥವಾಯಿತು. ನೋಡು ನೀನೂ ಓದು. ನಿನ್ನ ಗಂಡನ ಫೋನ್‌ಗೆ ಬಂದ ಅವರ ಗೀತಾ ಡಾರ್ಲಿಂಗ್‌ನ ಮೆಸೇಜ್‌,” ಗಿರಿಜಾ ಮೇಜಿನ ಮೇಲಿದ್ದ ಫೋನ್‌ ಎತ್ತಿಕೊಂಡು ಮೆಸೇಜ್‌ ಓಪನ್‌ ಮಾಡಿ ಸಿಂಧು ಕೈಗಿತ್ತರು.

ಸಿಂಧು ಮೆಸೇಜ್‌ ಗಟ್ಟಿಯಾಗಿ ಓದಿದಳು. `ಅಮ್ಮನಿಗೆ ಆರೋಗ್ಯ ಸರಿಯಿಲ್ಲ…. ಮೂವಿಗೆ ಬರೋಕಾಗಲ್ಲ…. ಐ ಲವ್ ಯು.  ಗೀತಾ.’

ಮೆಸೇಜ್‌ ಓದಿದ ನಂತರ ಸಿಂಧು ಅರುಣ್‌ನತ್ತ ಪ್ರಶ್ನೆಗಳನ್ನು ಹಾಕುವಂತೆ ನೋಡತೊಡಗಿದಳು. ಅವಳು ಯಾವುದೇ ಕ್ಷಣದಲ್ಲೂ ಅರುಣನ ಜೊತೆ ಜಗಳಾಡುವಂತೆ ಕಾಣುತ್ತಿದ್ದಳು. ಗಿರಿಜಾ ವ್ಯಂಗ್ಯ ಸ್ವರದಲ್ಲಿ, “ಅರುಣ್‌, ನಿಮ್ಮ ಕಳ್ಳತನ ಬಯಲಾಗಿದ್ದಕ್ಕೆ ಬಹಳ ಆಶ್ಚರ್ಯ ತೋರಿಸ್ತಾ ಗಟ್ಟಿಯಾದ ಧ್ವನಿಯಲ್ಲಿ ಹೇಳಬೇಕಾಗಿತ್ತು. ಸಿಂಧು, ನನಗೆ ಯಾವ ಗೀತಾನೂ ಗೊತ್ತಿಲ್ಲ. ಈ ಮೆಸೇಜ್‌ಯಾರಿಗೋ ಹೋಗಬೇಕಾಗಿದ್ದದ್ದು ನನ್ನ ಫೋನ್‌ಗೆ ಬಂದುಬಿಟ್ಟಿದೇಂತ,” ಎಂದರು.

“ಅದೇ ನಿಜ ಸಿಂಧು. ನನಗೆ ಯಾವ ಗೀತಾನೂ ಗೊತ್ತಿಲ್ಲ,” ಅರುಣ್‌ ತನ್ನ ನಿರ್ದೋಷಿತನನ್ನು ಸಾಬೀತುಪಡಿಸಲು ಪ್ರಯತ್ನಿಸಿದ.

“ಒಂದು ವೇಳೆ ಅವಳು ನಿಮಗೆ ಗೊತ್ತಿಲ್ಲದಿದ್ರೆ ನೀವು ಅವಳ ನಂಬರ್‌ನ್ನು ಯಾಕೆ ಸೇವ್ ‌ಮಾಡಿಕೊಂಡಿದ್ದೀರಿ?” ಗಿರಿಜಾ ಹುಬ್ಬು ಹಾರಿಸುತ್ತಾ ಕೇಳಿದರು.

ಇಕ್ಕಟ್ಟಿನಲ್ಲಿ ಸಿಕ್ಕಿದ ಅರುಣ್‌ ಉತ್ತರಿಸಲು ನಿಧಾನಿಸಿದಾಗ ಗಿರಿಜಾ ಅವನನ್ನು ಮತ್ತೆ ರೇಗಿಸಿದರು, “ಈ ಹೆಸರು, ನಂಬರ್‌ ನನ್ನ ಫೋನ್‌ನಲ್ಲಿ ಹೇಗೆ ಬಂತೋ ಗೊತ್ತಿಲ್ಲ ಅಂತ ಡೈಲಾಗ್‌ ಹೊಡೀರಿ ಅರುಣ್‌.”

“ಸಿಂಧು, ನನಗೆ ಖಂಡಿತಾ ಗೊತ್ತಿಲ್ಲ…..” ಎಂದ ಅರುಣ್‌ ಥಟ್ಟನೆ ಗಿರಿಜಾರತ್ತ ತಿರುಗಿ, “ಅತ್ತೆ, ನನ್ನನ್ನು ಹೀಗೆ ಸಿಕ್ಕಿಸೋದ್ರಿಂದ ನಿಮಗೆ ಏನು ಸಿಗುತ್ತೆ? ಈಗ ಸಿಂಧೂಗೆ ನಿಜ ಹೇಳಿ ಈ ಆಟ ಮುಗಿಸಿ,” ಎಂದ.

ಅರುಣ್‌ ಮತ್ತೆ ಮಾತು ನಿಲ್ಲಿಸಬೇಕಾಯಿತು. ಏಕೆಂದರೆ ಕೋಪದಿಂದ ಕೂಡಿದ್ದ ಸಿಂಧು ಎದ್ದು ಬೆಡ್‌ರೂಮಿಗೆ ಹೋದಳು.

“ಎಲ್ಲಿ ಹೋಗ್ತಿದ್ದೀಯಾ?” ಎಂದು ಅರುಣ್‌ ಕೇಳಿದಾಗ ಅವಳು ಉತ್ತರಿಸಲಿಲ್ಲ.

“ಅವಳು ಫಿಲ್ಮ್ ಟಿಕೆಟ್‌ ಹುಡುಕೋಕೆ ಹೋಗಿದ್ದಾಳೆ. ಎಲ್ಲಿಟ್ಟಿದ್ದೀರಿ ಅವನ್ನ? ನಿಮ್ಮ ಪರ್ಸ್‌ನಲ್ಲೋ, ಬ್ರೀಫ್‌ಕೇಸ್‌ನಲ್ಲೋ?” ಗಿರಿಜಾ ತುಂಟತನದಿಂದ ಕೇಳಿದರು.

ಅರುಣ್‌ಗೆ ಕೋಪ ಬಂತು, “ನೀವು ಟಿಕೆಟ್‌ನ ಎಲ್ಲಿಟ್ಟಿದ್ದೀರೋ ಅಲ್ಲೇ ಇರುತ್ತೆ. ನನ್ನನ್ನು ಸಿಕ್ಕಿಸೋಕೆ ಈ ನಾಟಕಾನ ಯಾಕೆ ಆಡ್ತಿದ್ದೀರಿ?” ಎಂದು ಕೇಳಿದ.

“ನಾನು ಯಾವ ನಾಟಕಾನೂ ಆಡ್ತಿಲ್ಲ ಅರುಣ್‌. ತನ್ನ ಮಗಳ ವೈವಾಹಿಕ ಜೀವನದ ಸಂತೋಷ ಮತ್ತು ಸುರಕ್ಷತೆಯನ್ನು ಯಾವ ತಾಯಿ ತಾನೇ ಸುಭದ್ರಗೊಳಿಸಲು ಇಷ್ಟಪಡಲ್ಲ? ನೀವು ನನ್ನ ಮಗಳಿಗೆ ಯಾಕೆ ಮೋಸ ಮಾಡ್ತಿದ್ದೀರಿ ಹೇಳಿ.”

“ಆದರೆ ಅತ್ತೆ, ನನಗೆ ನಿಜವಾಗಿ ಯಾವ ಗೀತಾನೂ ಗೊತ್ತಿಲ್ಲ…..”

ಅರುಣ್‌ ಮತ್ತೆ ಮಾತು ನಿಲ್ಲಿಸಬೇಕಾಯಿತು. ಏಕೆಂದರೆ ಬಹಳ ಕೋಪದಲ್ಲಿದ್ದ ಸಿಂಧು ಕೈಯಲ್ಲಿ 2 ಫಿಲ್ಮ ಟಿಕೆಟ್‌ ಹಿಡಿದು ರೂಮಿನಿಂದ ಬಂದಿದ್ದಳು.

“ಈಗ ನಿಜ ಹೇಳಿ ಅರುಣ್‌, ಮನುಷ್ಯ ತಪ್ಪು ಮಾಡ್ತಾನೆ ಸಹಜ. ಆದರೆ ನೀವು ಮನಸಾರೆ ಕ್ಷಮೆ ಕೇಳಿದ್ರೆ ಸಿಂಧು ಖಂಡಿತ ನಿಮ್ಮನ್ನು ಕ್ಷಮಿಸ್ತಾಳೆ,” ಗಿರಿಜಾ ಹೇಳಿದ್ದನ್ನು ಕೇಳಿ ಅರುಣ್‌ ಕೂದಲು ಕಿತ್ತುಕೊಂಡ.

“ಹ್ಞೂಂ, ನಿಮ್ಮಮ್ಮ ನನ್ನ ಮೇಲೆ ಯಾವ ವಿಷಯಕ್ಕೆ ಸೇಡು ತೀರಿಸ್ಕೊಳ್ತಾ ಇದ್ದಾರೆ ಚಿನ್ನಾ?”

“ನನ್ನನ್ನು ಚಿನ್ನಾ ಅಂತ ಕರೀಬೇಡಿ,” ಸಿಂಧು ಜೋರಾಗಿ ಕಿರುಚಿದಾಗ ಅರುಣ್‌ ಬೆಚ್ಚಿದ.

“ಅತ್ತೆ, ಪ್ಲೀಸ್‌ ನಿಮ್ಮ ಮಗಳಿಂದ ನನ್ನನ್ನು ಕಾಪಾಡಿ,” ಅರುಣ್‌ ಗಿರಿಜಾರಿಗೆ  ಕೈ ಜೋಡಿಸಿದ.

“ನೀವು ನನ್ನ ಮಗಳಿಗೆ ಮೋಸ ಮಾಡ್ತಿರೋದು ತಪ್ಪು ಅರುಣ್‌. ನನಗೆ ನಿಮ್ಮ ಮೇಲೆ ತುಂಬಾ ಗೌರವ ಇತ್ತು. ನಾನು ನಿಮ್ಮನ್ನು ಮಗಾಂತ ತಿಳ್ಕೊಂಡಿದ್ದೀನಿ. ಆದರೆ ಈ ವಿಷಯದಲ್ಲಿ ನಿಜಾಂಶ ಮುಚ್ಚಿಟ್ಟು ನಿಮಗೆ ಸಪೋರ್ಟ್‌ ಮಾಡಲ್ಲ,” ಗಿರಿಜಾ ಕೂಡ ಅರುಣ್‌ ಮೇಲೆ ಸಿಟ್ಟಾದಂತೆ ಕಂಡುಬರುತ್ತಿದ್ದರು.

“ಅರುಣ್‌, ನೀವು ನನಗೆ ಸತ್ಯ ಹೇಳಿ. ಇಲ್ಲದಿದ್ದರೆ ನಾನು ಶಾಶ್ವತವಾಗಿ ತವರುಮನೆಗೆ ಹೊರಟುಹೋಗ್ತೀನಿ.”

ಸಿಂಧೂಳ ಈ ಬೆದರಿಕೆ ಕೇಳಿ ಅರುಣನ ಮುಖದಲ್ಲಿ ಬೆವರೊಡೆಯಿತು. ಅವನು ಹೇಳಿದ, “ನಿನಗೆ ಹುಚ್ಚು ಹಿಡಿದಿದೆಯಾ? ಇದುವರೆಗೆ ನಾನು ಎಂದಾದರೂ ಈ ರೀತಿ ಆರೋಪ ಬರೋಕೆ ಅವಕಾಶ ಕೊಟ್ಟಿದ್ದೀನಾ? ನನ್ನ ಬದುಕಿನಲ್ಲಿ ನಿನ್ನನ್ನು ಬಿಟ್ಟು ಇನ್ನೊಂದು ಹೆಣ್ಣಿಲ್ಲ.”

ಸಿಂಧು ಅಳತೊಡಗಿದಾಗ ಗಿರಿಜಾ ಅವಳನ್ನು ಎದೆಗಪ್ಪಿಕೊಂಡರು. ಅವಳನ್ನು ಸಂತೈಸುತ್ತಾ ಅರುಣ್‌ನತ್ತ ಕೋಪದಿಂದ ನೋಡತೊಡಗಿದರು.

“ನಾನೀಗಲೇ ಈ ಗೀತಾ ಜೊತೆ ನಿಮ್ಮನ್ನು ಮಾತಾಡಿಸಿ ಎಲ್ಲ ವಿಷಯಗಳನ್ನು ಪರಿಹರಿಸ್ತೀನಿ,” ಎಂದ ಅರುಣ್‌ ಕೂಡಲೇ ತನ್ನ ಫೋನ್‌ನಿಂದ ಗೀತಾಗೆ ಡಯಲ್ ಮಾಡಿದ.

ಗೀತಾಳ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಅರುಣ್‌ಗೆ ಬಹಳ ಬೇಸರವಾಯಿತು.

“ಗಂಡಸರನ್ನು ನಂಬೋಹಾಗಿಲ್ಲ ಸಿಂಧು. ನೀನು ವ್ಯರ್ಥವಾಗಿ ಅಳ್ತಾ ಇದ್ದೀಯ. ಇಂಥ ಅಪ್ರಾಮಾಣಿಕನ ಜೊತೆ ಜೀವನ ಕಳೆಯೋದು ಬಹಳ ಕಷ್ಟ,” ಗಿರಿಜಾ ಮಗಳಿಗೆ ಹೀಗೆ ಹೇಳುತ್ತಿರುವಾಗ ಅರುಣನ ಕಣ್ಣುಗಳು ಕೆಂಪಗಾದವು.

“ಒಂದುವೇಳೆ ಇವರು ನನಗೆ ಮೋಸ ಮಾಡಿದ್ದರೆ ನಾನು ಈ ಮನೆಯಲ್ಲಿ ಇರಲ್ಲ ಅಮ್ಮ,” ಸಿಂಧು ಬಿಕ್ಕುತ್ತಾ ತನ್ನ ನಿರ್ಧಾರವನ್ನು ತಿಳಿಸಿದಳು.

“ಸಿಂಧೂ, ಒಂದು ವೇಳೆ ನೀನು ಡೈವೋರ್ಸ್‌ ಪಡೆಯಲು ಇಚ್ಛಿಸಿದರೆ ನಾನು ಸಪೋರ್ಟ್‌ ಮಾಡ್ತೀನಿ.”

“ನಿಮ್ಮ ತಾಯಿ ನಿನಗೆ ಏನೇನೆಲ್ಲಾ ಹೇಳಿಕೊಡ್ತಾರೆ ಸಿಂಧು. ಯಾರಾದರೂ ತಿಳಿವಳಿಕೆಯುಳ್ಳ ತಾಯಿ ಏನೂ ಪರೀಕ್ಷೆ ಮಾಡದೆ ತನ್ನ ಮಗಳಿಗೆ ಡೈವೋರ್ಸ್‌ ತಗೋಂತ ಹೇಳ್ತಾರಾ ಸಿಂಧೂ?” ಗಿರಿಜಾರ ಮಾತುಗಳಿಂದ ತನ್ನ ಮನಸ್ಸಿಗೆ ಆದ ಆಘಾತ ಅರುಣನ ಮಾತಿನಿಂದ ವ್ಯಕ್ತವಾಗಿತ್ತು.

“ನನ್ನ ಮಗಳನ್ನು ನನ್ನ ವಿರುದ್ಧ ಎತ್ತಿಕಟ್ಟಬೇಡಿ ಅರುಣ್‌. ನಿಮ್ಮ ಅಪ್ರಾಮಾಣಿಕತೆ ಈಗ ನಿಮ್ಮನ್ನು ಕಟಕಟೆಯಲ್ಲಿ ನಿಲ್ಲಿಸಿದೆ….. ನನ್ನನ್ನಲ್ಲ. ನನ್ನ ಮಗಳಿಗೇಕೆ ಮೋಸ ಮಾಡ್ತಿದ್ದೀರಿ? ಅವಳ ಮೇಲೆ ನಿಮ್ಮ ದೂರು ಏನಿದೆ?” ಗಿರಿಜಾ ಸಿಟ್ಟಿನಿಂದ ನುಡಿದರು.

“ನಿನ್ನ ಮೇಲೆ ನನಗೆ ಯಾವುದೇ ದೂರಿಲ್ಲ ಸಿಂಧು. ನಿನ್ನ ಅಮ್ಮನ ಮಾತುಗಳನ್ನು ನಂಬಬೇಡ ಪ್ಲೀಸ್‌,” ಅರುಣ್‌ ಹೆಂಡತಿಗೆ ಹೇಳಿದ.

“ಒಂದುವೇಳೆ ಯಾವ ದೂರೂ ಇಲ್ಲಾಂದ್ರೆ ಈ ಗೀತಾಳನ್ನು ಯಾಕೆ ಪ್ರೀತಿಸ್ತಿದ್ದೀರಿ? ಇವಳು ನಿಮ್ಮ ಮನೆಯನ್ನು ಸರಿಯಾಗಿ ಸಂಭಾಳಿಸುತ್ತಿರಲಿಲ್ಲವೇ?”

“ಚೆನ್ನಾಗಿ ಸಂಭಾಳಿಸುತ್ತಿದ್ದಾಳೆ. ನನಗೆ ಅದರ ಬಗ್ಗೆ ಯಾವುದೇ ದೂರಿಲ್ಲ…”

“ಈಗ ಅವಳಿಗೆ ರಾಹುಲ್‌ನ ನೋಡಿಕೊಳ್ಳೋ ಗಡಿಬಿಡಿಯಲ್ಲಿ ನಿಮ್ಮನ್ನು ಗಮನಿಸಿಕೊಳ್ಳಲು ಹೆಚ್ಚು ಸಮಯ ಸಿಗುತ್ತಿಲ್ಲ. ಆದರೆ ಅದು ಸಹಜ ಅಲ್ವಾ?”

“ರಾಹುಲ್‌ಗೆ ಹೆಚ್ಚು ಸಮಯ ಕೊಡಬೇಡಾಂತ ನಾನು ಎಂದೂ ಹೇಳಿಲ್ಲ.”

“ಈ ಗೀತಾ ಬಹಳ ಸುಂದರವಾಗಿದ್ದಾಳಾ?” ಅರುಣನ ಉತ್ತರ ಕೇಳಿಸಿಕೊಳ್ಳದೆ ಗಿರಿಜಾ ಮುಂದಿನ ಪ್ರಶ್ನೆ ಕೇಳಿದರು.

“ನನಗೇನು ಗೊತ್ತು? ಅವಳು ಯಾರೂಂತಾನೇ ಗೊತ್ತಿಲ್ಲ.”

“ಗೊತ್ತಿಲ್ಲಾಂತ ಹೇಳಬೇಡಿ. ಅವಳಿಗೆ ಮದುವೆ ಆಗಿದೆಯಾ?”

“ನಾನು ಹೇಗೆ ಹೇಳ್ಲಿ?”

“ಅವಳು ಖಂಡಿತ  ಕುಮಾರಿಯಾಗಿರ್ತಾಳೆ. ನಾನು ನಿಮಗೊಂದು ಪ್ರಶ್ನೆ ಕೇಳ್ತೀನಿ ಅರುಣ್‌. ಒಂದು ಮಗುವಿನ ತಾಯಿಯಾದ ಸಿಂಧೂಳ ಬಣ್ಣ, ರೂಪ ಒಬ್ಬ ಕುಮಾರಿ ಹುಡುಗಿಯ ರೀತಿ ಇರೋಕೆ ಹೇಗೆ ಸಾಧ್ಯ? ಅವಳಿಗೆ ಹೋಲಿಸಿಕೊಂಡು ಸಿಂಧೂಗೆ ಮೋಸ ಮಾಡಬಹುದೇ?”

“ನಾನು ಯಾವಾಗ ಹೋಲಿಸಿದೆ?” ಅರುಣ್‌ ಕೋಪದಿಂದ ಕೇಳಿದ.

“ಮಕ್ಕಳು ಹುಟ್ಟಿದ ಮೇಲೆ ಮಹಿಳೆಯರ ಫಿಗರ್‌ ಹಾಳಾಗುತ್ತೆ. ಸಿಂಧೂ ಕೂಡ ದಪ್ಪಗಾಗಿದ್ದಾಳೆ. ಆದರೆ ಅವಳ ಮುಖ ಮೊದಲಿನಂತೆ ಸುಂದರಾಗಿಲ್ವಾ?”

“ಅವಳು ದಪ್ಪಗಾಗಿರೋದ್ರಿಂದ ನನಗೇನೂ ಸಮಸ್ಯೆ ಇಲ್ಲ…..”

“ನಿಮಗ್ಯಾಕೆ ಸಮಸ್ಯೆ ಇಲ್ಲಾಂದ್ರೆ ನೀವು ಗೀತಾಳೊಂದಿಗೆ ಮೋಜು ಮಾಡ್ತಿದ್ದೀರಿ. ನಿಮಗೆ ತಂದೆಯಾಗೋ ಸುಖ ಕೊಟ್ಟಿದ್ದಾಳೆ ನನ್ನ ಮಗಳು. ಅದಕ್ಕೆ ಬದಲಾಗಿ ನೀವು ಅವಳಿಗೆ ಮೋಸ ಮಾಡ್ತಿದ್ದೀರಿ. ಈ ಗೀತಾಳ ಹಿಂದೆ ಜೊಲ್ಲು ಸುರಿಸಿಕೊಂಡು ಓಡಾಡ್ತಿದ್ದೀರಿ ಛೀ!”

“ನಾನು ಯಾರ ಹಿಂದೇನೂ ಜೊಲ್ಲು ಸುರಿಸಿಕೊಂಡು ಓಡಾಡ್ತಿಲ್ಲ.”

“ನನಗೆ ಸುಳ್ಳು ಹೇಳಬೇಡಿ. ಸಿಂಧು ಫಿಟ್‌ ಆಗಿ ಆಕರ್ಷಕವಾಗಿ ಕಾಣೋಕೆ ದಿನ ಅವಳ ಜೊತೆ ವಾಕಿಂಗ್‌ಗೆ ಹೋಗೋದು, ಅವಳನ್ನು ಜಿಮ್ ಗೆ ಹೋಗೋಕೆ ಪ್ರೇರೇಪಿಸೋದು, ಡಯೆಟಿಂಗ್‌ ಮಾಡೋಕೆ ಅವಳ ಸಾಮರ್ಥ್ಯ ಹೆಚ್ಚಿಸೋದು ಇತ್ಯಾದಿ ಮಾಡೋದು ಬಿಟ್ಟು ನೀವು ಮಾಡಿದ್ದೇನು?”

“ನಾನು ಸಾವಿರ ಸಾರಿ ಈ ಸಲಹೆ ನೀಡಿದ್ದೀನಿ ಸಿಂಧೂಗೆ. ನಾನೇನೂ ಮೋಸ ಮಾಡಿಲ್ಲ ಅವಳಿಗೆ…..”

“ನೀವು ಇವಳ ಜೊತೆ ನೀರಸವಾಗಿ ವರ್ತಿಸೋದು ನೋಡಿದ್ರೆ ಗೊತ್ತಾಗುತ್ತೆ ನೀವು ಇವಳಿಗೆ ಮೋಸ ಮಾಡ್ತಿರೋದು. ಇವಳು ನಿಮಗೆ ಮಾಡ್ತಿದ್ದ ಸೇವೆಗಳನ್ನೆಲ್ಲಾ ಮರೆತುಬಿಟ್ರಾ? ಇವಳ ಕುರೂಪಿ ಶರೀರದ ಒಳಗೆ ನಿಮ್ಮನ್ನು ಪ್ರೀತಿಸಿರೋ ಹೃದಯ ನಿಮಗೆ ಕಾಣಿಸ್ತಿಲ್ವಾ?” ಬಹಳ ಭಾವುಕರಾಗಿದ್ದರಿಂದ ಗಿರಿಜಾರ ಕಂಠ ಗದ್ಗದಿತವಾಯಿತು.

“ನಾನು ನಿಮ್ಮನ್ನು ಹೇಗೆ ನಂಬಿಸಲಿ ಅತ್ತೆ, ಸಿಂಧೂನ ನಾನು ಈಗಲೂ ಪ್ರೀತಿಸ್ತೀನಿ. ನನ್ನ ಬದುಕಿನಲ್ಲಿ ಬೇರೊಂದು ಹೆಣ್ಣು ಇಲ್ಲ,” ಅರುಣ್‌ ಬಹಳ ಬೇಸರದಲ್ಲಿದ್ದ.

“ಈ ಮೆಸೇಜ್‌ಗಳು ಮತ್ತು ಈ ಟಿಕೆಟ್‌ಗಳನ್ನು ನೋಡಿದ ಮೇಲೂ ನಾವು ಹೇಗೆ ನಿಮ್ಮನ್ನು ನಂಬೋದು? ನೀವು ಅಲ್ಲಿ ಇಲ್ಲಿ ಸುತ್ತಾಡೋ ಬದಲು ನನ್ನ ಈ ಕಡಿಮೆ ಬುದ್ಧಿಯ ಮಗಳಿಗೆ ಪ್ರೀತಿಯಿಂದ ತಿಳಿಸಿದ್ದರೆ ಅವಳು ನಿಮ್ಮೊಂದಿಗೆ ಕಳೆಯಲು ಹೆಚ್ಚು ಸಮಯ ಮಾಡಿಕೊಳ್ತಿದ್ಲು. ನೀವು ಅವಳಿಗೆ ಧೈರ್ಯ ಕೊಟ್ಟಿದ್ರೆ ಇವತ್ತು ಧಾರಾವಡದ ಎಮ್ಮೆ ತರಹ ಇರೋ ಬದಲು ತೆಳ್ಳಗೆ ಆಕರ್ಷಕವಾಗಿ ಕಾಣಿಸೋಕೆ ಪ್ರಯತ್ನ ಮಾಡ್ತಿದ್ಲು. ಈ ನವ ಯೌವನೆ, ಕುಮಾರಿ ಸುಂದರಿಯಾಗಿರೋ ಗೀತಾ ಜೊತೆ ಸುತ್ತಾಡೋ ಮೊದಲು ಈ ಪೆದ್ದೀಗೆ ಈ ರೀತಿ ಆಕಾರ ಕಳೆದುಕೊಳ್ಳದೇ ಇರೋದು ಮತ್ತು ತಾಯಿ ಹಾಗೂ ಹೆಂಡತಿಯ ಜವಾಬ್ದಾರಿಗಳ ನಡುವೆ ಸಮತೋಲನ ಕಾಪಾಡಿಕೊಳ್ಳುವ ಬಗ್ಗೆ ಧೈರ್ಯದಿಂದ ವಿವರಿಸಿ ಹೇಳಬೇಕಿತ್ತು ತಾನೇ?”

“ಹಾಗೇ ಹೇಳೋ ಪ್ರಯತ್ನ ಮಾಡಿದೆ…..”

“ಹಾಗೆ ಹೇಳೋ ಪ್ರಯತ್ನ ಸರಿಯಾಗಿ ಮಾಡದೆ ಇವಳಿಗೆ ಮೋಸ ಮಾಡಿದ್ರಿ. ನಿಮಗೆ ಎಚ್ಚರಿಕೆ ಕೊಡಿದ್ದೀನಿ. ಕಿವಿಗೊಟ್ಟು ಕೇಳಿ. ಈ ಕೂಡಲೇ ನೀವು ಗೀತಾ ಜೊತೆಗಿನ ವ್ಯವಹಾರವನ್ನು ಶಾಶ್ವತವಾಗಿ ನಿಲ್ಲಿಸದೇ ಹೋದರೆ ನನ್ನ ಮಗಳು ನಿಮ್ಮ ಜೊತೆ ಇರೋ ಬದಲು ವಿಚ್ಛೇದಿತೆ ಅಂತ ತನ್ನ ಹಣೆ ಮೇಲೆ ಬರೆಸಿಕೊಳ್ಳೋದನ್ನು ಹೆಚ್ಚು ಇಷ್ಟಪಡುತ್ತಾಳೆ. ಅವಳಿಗೆ ರಾಹುಲ್‌ನನ್ನು ತಂದೆಯಿಲ್ಲದೆ ಸಾಕುವುದು ಒಪ್ಪಿಗೆ ಇದೆ. ಪ್ರಪಂಚದ ಕಣ್ಣಿಗೆ ಅವಳು ಕರುಣೆ, ವ್ಯಂಗ್ಯವಾದ ವಸ್ತುವಾದರೂ ಪರವಾಗಿಲ್ಲ. ಆದರೆ ನಿಮ್ಮಂಥಾ ಮೋಸಗಾರರ ಜೊತೆ ಖಂಡಿತ ಇರೋದಿಲ್ಲ.” ಹೀಗೆ ಬೆದರಿಕೆ ಹಾಕಿದ ನಂತರ ಕೋಪದಿಂದ ಕೂಡಿದ ಗಿರಿಜಾ ಸಿಂಧೂಳನ್ನು ಅಪ್ಪಿಕೊಳ್ಳಲು ಕೈಚಾಚಿದರು. ಅಮ್ಮನನ್ನು ಅಪ್ಪಿಕೊಳ್ಳುವ ಬದಲು ಸಿಂಧು ಅವರನ್ನು ಕೋಪದಿಂದ ದುರುಗುಟ್ಟುತ್ತಾ, “ನೀನು ಇವರ ಮೇಲೆ ಕೋಪಿಸ್ಕೋತಿದ್ದೀಯೋ ಅಥವಾ ನನ್ನ ಕೊರತೆಗಳನ್ನು ಹೇಳ್ತಿದ್ದೀಯೋ?” ಎಂದಳು.

“ನನಗಂತೂ ನಿಮ್ಮಿಬ್ಬರ ತಿಳಿವಳಿಕೆಯಿಲ್ಲದ ವರ್ತನೆ ನೋಡಿ ದುಃಖವಾಗಿದೆ. ನಿನ್ನ ಸಂಸಾರ ಒಡೆದು ಹರಡಿಕೊಂಡಿರುವಂತೆ  ಕಾಣ್ತಿದೆ. ವಿಚ್ಛೇದಿತ ಮಹಿಳೆಯರಿಗೆ ನಮ್ಮ ಸಮಾಜದಲ್ಲಿ ಬಹಳ ದುರ್ಗತಿಯಾಗುತ್ತದೆ…..”

“ಇನ್ನು ಸಾಕು ಮಾಡಮ್ಮ!” ಸಿಂಧು ಕಿರುಚಿದಳು. ಅವಳ ಕಿರುಚಾಟ ಗಿರಿಜಾ ಮೇಲೆ ಏನೂ ಪರಿಣಾಮ ಬೀರಲಿಲ್ಲ. ಅವರು ಅರುಣ್‌ ಮತ್ತು ಸಿಂಧೂ ಇಬ್ಬರ ಮೇಲೂ ತಮ್ಮ ಸಿಟ್ಟನ್ನು ಪ್ರದರ್ಶಿಸುತ್ತಿದ್ದರು.

“ಅಮ್ಮಾ, ನಿನ್ನ ದಮ್ಮಯ್ಯ ಸುಮ್ಮನೆ ಇರು. ಆಯ್ತು. ನಾನು ನಾಳೆ ಬೆಳಗ್ಗೆ…. ಇಲ್ಲ ಇವತ್ತು ಸಂಜೆಯಿಂದಲೇ ವಾಕಿಂಗ್‌ ಹಾಗೂ ವ್ಯಾಯಾಮ ಶುರು ಮಾಡ್ತೀನಿ. ನನ್ನ ಕಡೆಯಿಂದ ನಿನಗಿನ್ನು ಯಾವುದೇ ದೂರು ಇರುವುದಿಲ್ಲ,” ಎಂದು ಅಮ್ಮನನ್ನು ಒಪ್ಪಿಸಿದಳು.

ಅಮ್ಮನನ್ನು ಸುಮ್ಮನಾಗಿಸಲು ಸಿಂಧು ಹಾಗೆ ಹೇಳಲೇಬೇಕಾಯಿತು.

“ನಾನು ಸಿಂಧೂಗೆ ಮೋಸ ಮಾಡುವ ಬಗ್ಗೆ ಕನಸಿನಲ್ಲಿಯೂ ಯೋಚಿಸುವುದಿಲ್ಲ ಅತ್ತೆ. ನೀವು ನಮ್ಮಿಬ್ಬರಿಗೂ ಸ್ವಲ್ಪ ಸಮಯ ಕೊಡಿ. ನಮ್ಮಿಬ್ಬರ ಸಂಬಂಧಗಳನ್ನು ಎಲ್ಲ ರೀತಿಯಿಂದಲೂ ಉತ್ತಮಗೊಳಿಸಿ ತೋರಿಸುತ್ತೇವೆ,” ಎಂದು ಅರುಣ್‌ ಕೂಡ ಗಿರಿಜಾಗೆ ಆಶ್ವಾಸನೆ ನೀಡಿದಾಗ ಅವರು ಕೊಂಚ ಶಾಂತರಾದಂತೆ ಕಂಡುಬಂದರು.

ಗಿರಿಜಾ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಇನ್ನೊಂದು ಕೋಣೆಗೆ ಹೋದರು. ಸಿಂಧು ತನ್ನ ಮನದ ಗೊಂದಲಗಳನ್ನು ಅರುಣ್ ಮುಂದೆ ವ್ಯಕ್ತಪಡಿಸಿದಳು, “ನನಗೆ ಇತ್ತು ಅಮ್ಮನ ವರ್ತನೆ ಅರ್ಥವೇ ಆಗ್ಲಿಲ್ಲ. ಈ ಗೀತಾ ಮೆಸೇಜ್‌ ಇದುವರೆಗೆ ನನ್ನ ಕಣ್ಣಿಗೇಕೆ ಬೀಳಲಿಲ್ಲ?”

“ಏಕೆಂದರೆ ಗೀತಾಗೆ ನನ್ನ ಬದುಕಿನಲ್ಲಿ ಯಾವುದೇ ಸ್ಥಾನವಿಲ್ಲ ಸಿಂಧು. ನಾನು ಬೇರೊಂದು ಹೆಣ್ಣಿಗೆ ಲೈನ್‌ ಹೊಡೆಯುವುದನ್ನು ನೀನು ಎಂದಾದರೂ ಕಂಡಿದ್ದೀಯಾ?” ಸಿಂಧೂಳ ಮನದಲ್ಲಿನ ಅನುಮಾನಗಳನ್ನು ದೂರಮಾಡಲು ಒಳ್ಳೆಯ ಅವಕಾಶ ಪಡೆದ ಅರುಣ್‌ ಹೀಗೆ ಕೇಳಿದ.

“ಇಲ್ಲ. ಆದರೆ ಇವತ್ತು ಅಮ್ಮನೇಕೆ ಇಷ್ಟೊಂದು ರಾದ್ಧಾಂತ ಮಾಡಿದರು? ಅವರಿಗೇನೂ ತಲೆಕೆಟ್ಟಿಲ್ಲ ತಾನೇ?”

“ಒಂದಲ್ಲ ಒಂದು ದಿನ ಅವರು ನಿಜವಾದ ವಿಷಯ ನಮಗೆ ತಿಳಿಸ್ತಾರೆ. ಅಂದಹಾಗೆ ನೀನು ನನ್ನ ವಿಶ್ವಾಸಾರ್ಹತೆ ನಂಬದಿರುವುದನ್ನು ನಿನ್ನ ಮನಸ್ಸಿನಿಂದ ತೆಗೆದುಹಾಕು.”

“ನಾನು ತುಂಬಾ ಕುರೂಪಿಯಾಗಿ ಕಾಣ್ತಿದ್ದೀನಾ?” ಸಿಂಧು ಇದ್ದಕ್ಕಿದ್ದಂತೆ ಕೇಳಿದಳು.

“ನನಗೇನೂ ಹಾಗನ್ನಿಸೋದಿಲ್ಲ. ಆದರೆ ನೀನು ಕೊಂಚ ತೂಕ ಕರಗಿಸಬೇಕು ಕಣೆ.”

“ಅಮ್ಮ ಹೇಳಿದ್ದು ಸರಿ. ನಮ್ಮ ವೈವಾಹಿಕ ಬದುಕಿನಲ್ಲಿ ರೊಮ್ಯಾನ್ಸ್ ತುಂಬಾ ಕಡಿಮೆ ಆಗಿದೆ. ಇದರ ಬಗ್ಗೆ ನಾನು ಏನಾದರೂ ಮಾಡಬೇಕು.”

“ನಾನೂ ಕೂಡ.”

“ಆದರೆ ಯಾರೋ ಗೀತಾಳ ಭ್ರಮಾಲೋಕದಲ್ಲಿ ಸಿಲುಕಿಕೊಳ್ಳಬಾರದು.”

“ಎಂದಿಗೂ ಇಲ್ಲ,” ಅರುಣ್‌ ಮುಂದೆ ಬಾಗಿ ಸಿಂಧೂಳ ಹಣೆಗೆ ಮುತ್ತಿಟ್ಟ.

“ಇವತ್ತು ಅಮ್ಮ ಯಾಕೆ ಗೀತಾ ಗೀತಾಂತ ಗಲಾಟೆ ಮಾಡ್ತಿದ್ರು? ನನಗೆ ಅವರು ನೇರವಾಗಿ ವಿಷಯಗಳನ್ನು ಹೇಳಬಹುದಿತ್ತು,” ಸಿಂಧೂಗೆ ಏನೂ ಅರ್ಥವಾಗಿರಲಿಲ್ಲ.

“ಆ ವಿಷಯ ನಂಗೂನೂ ಅರ್ಥವಾಗುತ್ತಿಲ್ಲ,” ಅರುಣ್‌ ಹೇಳಿದ.

“ಇರಲಿ, ಅತ್ತೆ ನಮ್ಮಿಬ್ಬರಿಗೆ ತಿಳಿಸಬೇಕೂಂತಿದ್ದ ವಿಷಯ ನಮಗೆ ತಿಳಿಯಿತು. ನಮ್ಮ ಸಂಬಂಧಗಳಲ್ಲಿ ಸುಧಾರಣೆ ತರೋಣ.”

“ಶೂರ್‌,” ಎನ್ನುತ್ತಾ ಸಿಂಧು ಅರುಣನ ಎದೆಗೊರಗಿದಳು. ಆದರೆ ಅರುಣ್‌ಗೆ ಅತ್ತೆ ಅಷ್ಟೊಂದು ಗೊಂದಲ ಮಾಡೋಕೆ ಗೀತಾ ಎಂಬ ಕಾಲ್ಪನಿಕ ಲವರ್‌ನ ಏಕೆ ಸೃಷ್ಟಿ ಮಾಡಿದ್ರೂಂತ ಮನದಲ್ಲೇ ಅನುಮಾನ ಉಂಟಾಯಿತು.

ಕಳೆದ ಭಾನುವಾರ ಅವನು ಅತ್ತೆ ಮನೆಗೆ ಹೋಗಿದ್ದ. ಅಲ್ಲಿ ತನ್ನ ನಾದಿನಿ ಕವಿತಾಳೊಂದಿಗೆ ತಮಾಷೆಯಾಗಿ ಮಾತಾಡುತ್ತಾ ಇದ್ದಕ್ಕಿದ್ದಂತೆ ಅವಳ ಕೈಯನ್ನು ಚುಂಬಿಸಿದ್ದ.

ಕವಿತಾಳೊಂದಿಗೆ ಅವನು ಯಾವಾಗಲೂ ಮಧುರವಾದ ಸಂಬಂಧ ಹೊಂದಿದ್ದ. ಆದರೆ ಕೆಲವು ಸಮಯದಿಂದ ಅವನಿಗೆ ಅವಳು ಬಹಳ ಸುಂದರಿಯಾಗಿ, ಆಕರ್ಷಕವಾಗಿ ಕಂಡುಬರುತ್ತಿದ್ದಳು. ಅವಳ ಬಗ್ಗೆ ಅವನು ಬಣ್ಣಬಣ್ಣದ ರೊಮ್ಯಾಂಟಿಕ್‌ ಕನಸುಗಳನ್ನು ಕಾಣುತ್ತಿದ್ದ.

ಯಾವಾಗಲೂ ತನ್ನೊಂದಿಗೆ ಮುಕ್ತವಾಗಿ ನಗುನಗುತ್ತಾ ಮಾತನಾಡುವ ಕವಿತಾ ಕೂಡ ತನ್ನನ್ನು ಇಷ್ಟಪಡುತ್ತಿದ್ದಾಳೆ ಎಂದು ಅರುಣ್‌ಗೆ ಅನ್ನಿಸುತ್ತಿತ್ತು. ಅದಕ್ಕೇ ಅವನು ಕವಿತಾಳ ಕೈಯನ್ನು ಮುದ್ದಿಸುವ ದುಸ್ಸಾಹಸ ಮಾಡಿದ್ದ.

ಆದರೆ ಅವನ ಚೂಟಿ ನಾದಿನಿಗೆ ಭಾವನೊಂದಿಗೆ ಕೆಟ್ಟ ಸಂಬಂಧ ಇಟ್ಟುಕೊಳ್ಳಲು ಇಷ್ಟವಿರಲಿಲ್ಲ ಎಂಬುದು ಅರುಣ್‌ಗೆ ಈಗ ಅನುಭವವಾಗಿತ್ತು. ಕವಿತಾ ಎಲ್ಲವನ್ನೂ ತನ್ನ ತಾಯಿಯೊಂದಿಗೆ ಹೇಳಿರಬಹುದು ಎಂದು ಅವನಿಗೆ ಅರ್ಥವಾಯಿತು.

ಅವನ ಅತ್ತೆ ಅಳಿಯನನ್ನು ಸರಿಯಾದ ದಾರಿಗೆ ತರಲು ಅವನ ಕಾಲ್ಪನಿಕ ಪ್ರೇಯಸಿ ಗೀತಾಳನ್ನು ಸೃಷ್ಟಿ ಮಾಡಿದ್ದರು. ಅವರು ಮನೆಯಲ್ಲಿ ದೊಡ್ಡ ರಾದ್ಧಾಂತ ಮಾಡಿ ಅವನಿಗೆ ತಲೆ ಚಿಟ್ಟುಹಿಡಿಸುವ ಜೊತೆಗೆ ತಮ್ಮ ಮಗಳಿಗೂ ಬಹಳಷ್ಟು ಮಹತ್ವಪೂರ್ಣ ವಿಷಯಗಳನ್ನು  ಮನದಟ್ಟು ಮಾಡಿದ್ದರು.

ಕವಿತಾಳ ಕೈಯನ್ನು ಮುದ್ದಿಸಿದ ಸಾಹಸ ಈಗ ಅತ್ತೆಗೂ ತಿಳಿದಿದೆ. ಈ ವಿಚಾರ ಅರುಣನ ಮನಸ್ಸಿಗೆ ಕೆಡುಕೆನಿಸಿತು. ಅವನಿಗೆ ಬಹಳ ನಾಚಿಕೆಯಾಗಿತ್ತು.

ನಾನು ಕವಿತಾಳ ಕ್ಷಮೆ ಯಾಚಿಸಬೇಕು ಎಂದುಕೊಂಡ ಅರುಣ್‌ಗೆ ಕೊಂಚ ನೆಮ್ಮದಿಯಾಯಿತು. ಸಿಂಧೂಗೆ ತನ್ನ ಬಗ್ಗೆ ಏನೂ ಹೇಳದ ತನ್ನ ಬುದ್ಧಿವಂತ ಅತ್ತೆಗೂ ಮನಸ್ಸಿನಲ್ಲೇ ಧನ್ಯವಾದ ಅರ್ಪಿಸಿದ.

ಸಿಂಧೂಗೆ `ಐ ಲವ್ ಯೂ’ ಹೇಳಿದ ಅರುಣ್‌ ಅವಳ ಹಣೆಗೆ ಮತ್ತೊಮ್ಮೆ ಮುತ್ತಿಟ್ಟ. ತನ್ನ ಜೀವನ ಸಂಗಾತಿಯೊಂದಿಗಿನ ಪ್ರೀತಿಯ ಬೇರುಗಳನ್ನು ಸದೃಢಗೊಳಿಸಬೇಕೆಂದು ಮನದಲ್ಲೇ ನಿರ್ಧರಿಸಿದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ