ಅಂದು ಸಂಜೆ ನಿರ್ಮಲಾ ತನ್ನ ಗೆಳತಿಗೆ ತನ್ನ ಹೊಸ ಸೀರೆ, 2 ಬೆಡ್ ಶೀಟ್, ಕೆಲವು ಹ್ಯಾಂಗರ್‌ಗಳು ಮತ್ತು ಪುಸ್ತಕಗಳನ್ನು ಕೊಟ್ಟು ಇವನ್ನು ತೆಗೆದುಕೊಂಡು ಎಲ್ಲಿಗೆ ಹೋಗ್ಲಿ, ನೀನೇ ಇಟ್ಕೊ. ಪುಸ್ತಕಗಳನ್ನು ಅಡ ಇಡುತ್ತೇನೆ. ಉಳಿದವುಗಳನ್ನು ನೀನು ಉಪಯೋಗಿಸಿಕೋ ಎಂದಳು. ಹೋಟೆಲ್‌ನ ಉಸಿರುಗಟ್ಟುವ ವಾತಾವರಣದಿಂದ ದೂರವಾಗಿದ್ದಕ್ಕೆ ಖುಷಿಯಾಗಿದ್ದಳು. ಅವಳ 8 ವರ್ಷದ ಮಗಳು ನಂದಿನಿಗಂತೂ ರೆಕ್ಕೆ ಬಂದಂತಿತ್ತು. ಅವಳು ಕುಣಿಯುತ್ತಾ, “ಚೆನ್ನೈನಲ್ಲಿ ನನಗೆ ಕಸಿನ್ಸ್ ಇದ್ದಾರೆ. ನಾನು ಅವರ ಜೊತೆ ಆಟ ಆಡ್ತೀನಿ. ನನಗೆ ಇಲ್ಲಿರೋದು ಇಷ್ಟವಿಲ್ಲ. ಜೈಲು ತರಹ ಇದೆ ಇಲ್ಲಿ,” ಎಂದಳು.
ನಿರ್ಮಲಾಗೆ ಇದು ತನ್ನ ಬದುಕಿನ ಹೊಸ ಪಾಳಿ ಆಗಿದ್ದರಿಂದ ಖುಷಿಯಾಗಿತ್ತು. ಕುಡುಕ ಗಂಡ ಸುಧೀರನೊಂದಿಗೆ 10 ವರ್ಷಗಳು ಬಾಳಿದ ನಂತರ ಮತ್ತೆ ಅತ್ತೆಮನೆಗೆ ಬರುವುದಿಲ್ಲವೆಂದು ಶಪಥ ತೊಟ್ಟು ತವರುಮನೆಗೆ ಬಂದಿದ್ದಳು. ಸುಧೀರನಾಗಲಿ ಅಥವಾ ಮಾವನಾಗಲಿ ಎಷ್ಟೇ ಕರೆದರೂ ಮತ್ತೆ ತಿರುಗಿ ನೋಡುವುದಿಲ್ಲವೆಂದು ನಿರ್ಧರಿಸಿದ್ದಳು.
ತವರುಮನೆ ಹಳ್ಳಿಯಲ್ಲಿತ್ತು. ಹೀಗಾಗಿ ಅವಳು ಮೊದಲು ಅಣ್ಣನ ಮನೆಗೆ ಹೋದಳು. ಅಲ್ಲಿ ಹಲವಾರು ದಿನಗಳು ಯೋಚಿಸಿ ಆ ಊರಿನಲ್ಲಿಯೇ ಕೆಲಸಕ್ಕೆ ಸೇರಲು ನಿರ್ಧರಿಸಿದಳು. ಆದರೆ ಅವಳಪ್ಪ ಅವಳನ್ನು ಹಳ್ಳಿಗೆ ಕರೆದೊಯ್ಯಲು ಬಯಸುತ್ತಿದ್ದರು. ಹಳ್ಳಿಯ ಒಂದು ಮಿಶನರಿ ಸ್ಕೂಲ್‌ನಲ್ಲಿ ಅವರು ಮಾತನಾಡಿಯೂ ಇದ್ದರು. ಆದರೆ ನಿರ್ಮಲಾಗೆ ಹಳ್ಳಿಗೆ ಹೋಗಲು ಇಷ್ಟವಿರಲಿಲ್ಲ. ಹಳ್ಳಿಗೆ ಯಾವ ಮುಖ ಹೊತ್ತು ಹೋಗುವುದು? ಹಳ್ಳಿಯಲ್ಲಿ ಅವಳ ಅಣ್ಣಂದಿರ ಮನೆಗಳಿದ್ದವು. ಅವರು ಬಾಯಿಗೆ ಬಂದಂತೆ ಮಾತಾಡಿಕೊಳ್ಳುತ್ತಾರೆ. ಗಂಡಸರು ಮಾತಾಡದಿರಬಹುದು. ಆದರೆ ಮಹಿಳೆಯರನ್ನು ತೆಪ್ಪಗಿರಿಸಲು ಸಾಧ್ಯವಿಲ್ಲ. ಅತ್ತೆಮನೆಯನ್ನು ಏಕೆ ಬಿಟ್ಟೆ ಎಂದು ಕೇಳುತ್ತಾರೆ. ಗುಸುಗುಸು ಕೇಳಿಸುತ್ತದೆ. ಸಂದೇಹಾಸ್ಪದ ದೃಷ್ಟಿಗಳಿಂದ ನೋಡುತ್ತಿರುತ್ತಾರೆ. ಇವೆಲ್ಲವನ್ನೂ ಸಹಿಸಿಕೊಳ್ಳುವುದು ಬಹಳ ಕಷ್ಟ.
ನಿರ್ಮಲಾ ದ್ವಂದ್ವದಲ್ಲಿದ್ದಳು. ಅತ್ತೆಮನೆಯನ್ನು ಬಿಟ್ಟು ಬಂದಿದ್ದು ಅವಳಿಗೆ ಇಷ್ಟವಿರಲಿಲ್ಲ. ಆದರೆ ಸುಧೀರ್ ಆಗಾಗ್ಗೆ ನಶೆಯಲ್ಲಿ ಕೈ ಬಿಡುತ್ತಿದ್ದ. ಅದರಿಂದ ಕಂಗೆಟ್ಟು ಅವಳು ತನ್ನ ಶಾಲೆಯ ನೌಕರಿ ಬಿಟ್ಟಿದ್ದಳು.
ಅಣ್ಣ ರಾಜೇಶ್‌ಗೆ ಅವಳು ತನ್ನ ಮನೆಗೆ ಬಂದದ್ದು ತೊಂದರೆಯೇನಿರಲಿಲ್ಲ. ಆದರೂ ಅಲ್ಲಿ ಅವಳಿಗೆ ಸ್ವಾತಂತ್ರ್ಯವಿರಲಿಲ್ಲ. ಎಲ್ಲರಿಗೂ ತಮ್ಮದೇ ಆದ ಸಂಸಾರವಿರುತ್ತದೆ. ತಾನು ಇಬ್ಬಂದಿಯಲ್ಲಿ ಇದ್ದೇನೆ ಎಂದುಕೊಂಡಳು. ಅವಳು ಆಗಾಗ್ಗೆ ಏಕಾಂತದಲ್ಲಿ ಅಳುತ್ತಿದ್ದಳು. ಅವಳಿಗೆ ತನ್ನ ಮದುವೆಯ ನಿರ್ಧಾರದ ಬಗ್ಗೆ ದುಃಖವಾಗುತ್ತಿತ್ತು. ತಾನೇಕೆ ಸುಧೀರನನ್ನು ಪ್ರೇಮಿಸಿ ಮದುವೆಯಾದೆ? ಸುಧೀರ್ ಮದುವೆಗೆ ಮೊದಲೂ ಕುಡಿಯುತ್ತಿದ್ದ. ಅದು ನಿರ್ಮಲಾಗೆ ಗೊತ್ತಿತ್ತು. ಆದರೆ ಅವಳು ತಲೆ ಕೆಡೆಸಿಕೊಳ್ಳಲಿಲ್ಲ. ಸುಧೀರನ ಶೇರ್ ವ್ಯವಹಾರ ಚೆನ್ನಾಗಿ ನಡೆಯುತ್ತಿತ್ತು. ಹಣಕ್ಕೇನೂ ಕಡಿಮೆ ಇರಲಿಲ್ಲ. ಅದು ಮಧ್ಯಮ ವರ್ಗದ ನಿರ್ಮಲಾಳ ಕಣ್ಣು ಕುಕ್ಕಿತು. ಹೀಗಾಗಿ ಅವಳಿಗೆ ಹೆಚ್ಚು ಯೋಚಿಸಲು ಅವಕಾಶವೇ ಸಿಗಲಿಲ್ಲ.
ಮದುವೆಯಾಗಿ ಕೆಲವೇ ತಿಂಗಳಲ್ಲಿ ಸುಧೀರನಿಗೆ ಶೇರ್‌ಗಳಲ್ಲಿ ಲಾಸ್ ಆಯಿತು. ಹಣವೆಲ್ಲಾ ಖಾಲಿಯಾಯಿತು. ನಿರ್ಮಲಾ ಅಸಹಾಯಕತೆಯಿಂದ ಅತ್ತೆ ಮಾವನ ಬಳಿ ಬರಬೇಕಾಯಿತು. ಮಾವನಿಗೆ ನಿರ್ಮಲಾಳನ್ನು ಕಂಡರೆ ಇಷ್ಟವಿರಲಿಲ್ಲ. ಅವರು ಆಗಾಗ್ಗೆ ಅವಳಲ್ಲಿ ದೋಷ ಹುಡುಕುತ್ತಿದ್ದರು. ಅವರು ನಿರ್ಮಲಾಳ ತಂದೆಗೆ ಮದುವೆಯ ಜವಾಬ್ದಾರಿ ನಿಮ್ಮದೇ. ಸುಧೀರ ಏನು ಮಾಡುತ್ತಾನೋ, ಏನು ಮಾಡುವುದಿಲ್ಲವೋ ನಮಗೆ ಗೊತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು. ಆದರೂ ನಿರ್ಮಲಾಳ ಹಟದಿಂದಾಗಿ ಸುಧೀರನೊಂದಿಗೆ ಮದುವೆಯಾಯಿತು.
ತನ್ನ ಮನಸ್ಸಿನಂತೆ ನಡೆದವರು ಯಾವಾಗಲೂ ಮೋಸ ಹೋಗುತ್ತಾರೆ ಎಂದು ಹೇಳುತ್ತಾರೆ. ನಿರ್ಮಲಾ ತನ್ನ ಮನಸ್ಸು ಹೇಳಿದಂತೆ ನಡೆಯುವಳು. ಒಬ್ಬಳೇ ಮಗಳಾದ್ದರಿಂದ ಅಪ್ಪ, ಅಮ್ಮ ಹಾಗೂ ಅಣ್ಣ ಎಲ್ಲರೂ ಅವಳ ಮಾತಿಗೆ ಒಪ್ಪಿಕೊಂಡರು. ಆದರೆ, ಬದುಕನ್ನು ಆಟವೆಂದು ತಿಳಿದಿದ್ದ ನಿರ್ಮಲಾ ತನ್ನ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುತ್ತಿದ್ದಳು. ಅಣ್ಣನ ಮನೆಯಲ್ಲಿ ನಿರ್ಮಲಾಗೆ ಸ್ವಲ್ಪವೂ ಸರಿಹೋಗಲಿಲ್ಲ. ಬೇರು ಸಹಿತ ಕಿತ್ತ ಮರವನ್ನು ಇನ್ನೊಂದು ಕಡೆ ನೆಡಲಾಗುವುದಿಲ್ಲ. ನಿರ್ಮಲಾಗೂ ಹೀಗೇ ಆಗಿತ್ತು. ಅವಳಿಗೆ ಪದೇ ಪದೇ ಅತ್ತೆಮನೆ ನೆನಪಾಗುತ್ತಿತ್ತು. ಸುಧೀರ್ ಸರಿಹೋದರೆ ಹೀಗಾಗುವುದಿಲ್ಲ. ಅವಳಿಗೆ ಸುಧೀರ್ ಸುಧಾರಿಸುವನೆಂದು ಆಶಾಭಾವನೆ ಇತ್ತು. ಆದರೆ ಅವಳ ತಂದೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು, “ನೀನು ಅವನ ಬಗ್ಗೆ ಯೋಚನೆ ಬಿಟ್ಟುಬಿಡು.”
ಅಣ್ಣ ಹೇಳಿದ್ದ, “ನೀನು ಡೈವೋರ್ಸ್ ಪಡೆದು ಶಾಂತಿಯಿಂದಿರು.” ಅವಳ ತಂದೆ ಮರುಮದುವೆಯ ಬಗ್ಗೆ ಪ್ರಸ್ತಾಪ ಮಾಡಿದರು. ಆದರೆ ನಿರ್ಮಲಾ ಒಪ್ಪಲಿಲ್ಲ. ರಾಜೇಶನ ಮನೆಗೆ ಬಂದು 1 ತಿಂಗಳಾಗಿತ್ತು. ಅವಳಿನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆಗಲೇ ರಾಜೇಶನ ಗೆಳೆಯನೊಬ್ಬ ಅದೇ ಊರಿನಲ್ಲಿಯೇ ಒಂದು ಶಾಲೆಯ ಹಾಸ್ಟೆಲ್ ವಾರ್ಡನ್ ಕೆಲಸ ಖಾಲಿ ಇದೆ ಎಂದು ಹೇಳಿದ. ನಿರ್ಮಲಾಗೆ ಬಹಳ ಸಂತೋಷವಾಯಿತು. ಅವಳಿಗೆ ಯಾರಿಗೂ ಹೊರೆಯಾಗಲು ಇಷ್ಟವಿರಲಿಲ್ಲ. ಆ ಶಾಲೆ ಅವಳ ಅತ್ತೆಮನೆಯಿಂದ 5 ಕಿ.ಮೀ. ದೂರವಿತ್ತು. ಹೀಗೆ ಅವಳು ಅತ್ತೆಮನೆಗೆ ಹತ್ತಿರ ಇರುವಂತಾಗಿತ್ತು. ಯಾರಿಗೂ ತಿಳಿಯುತ್ತಲೂ ಇರಲಿಲ್ಲ.
ಅವಳು ಕೆಲಸಕ್ಕೆ ಸೇರಿದಳು. ಒಂದು ರಾತ್ರಿ ಮಾವನಿಂದ ಫೋನ್ ಬಂದಿತು. ಅವಳು ತನ್ನ ಹೊಸ ಉದ್ಯೋಗದ ಬಗ್ಗೆ ಹೇಳಿದಾಗ ಅವರಿಗೆ ಖುಷಿಯಾಯಿತು. ನಿರ್ಮಲಾ ಹತ್ತಿರವಿರುತ್ತಾಳೆ. ಎಂದಾದರೂ ನಂದಿನಿಯನ್ನೂ ಭೇಟಿ ಮಾಡಬಹುದು. ಅವರು ಇಡೀ ದಿನ ಉದಾಸರಾಗಿರುತ್ತಿದ್ದರು. ತಮ್ಮ ಮಗನ ವರ್ತನೆಯ ಬಗ್ಗೆ ಅಳುತ್ತಿದ್ದರು. ಅವನು ಲಾಯಕ್ಕಾಗಿದ್ದರೆ ತಾವು ಈ ದಿನ ನೋಡಬೇಕಾಗಿರಲಿಲ್ಲ. ಅವರು ಸುಧೀರ್‌ಗೆ ಈ ವಿಷಯ ಹೇಳಲಿಲ್ಲ. ನಿರ್ಮಲಾ ಅಮ್ಮನ ಮನೆಗೆ ಹೋಗಿದ್ದಾಳೆ. ಸ್ವಲ್ಪ ದಿನಗಳಲ್ಲಿ ವಾಪಸ್ ಬರಬಹುದು ಎಂದುಕೊಂಡಿದ್ದ.
ನಿರ್ಮಲಾಗೆ ಬೇಗನೇ ಹಾಸ್ಟೆಲ್‌ನ ದಿನಚರಿ ಬೇಸರವಾಗತೊಡಗಿತು. ನಂದಿನಿಗೆ ಇನ್ನೂ ಹೆಚ್ಚು ಬೇಸರವಾಗಿತ್ತು. ಅವಳು ಒಂದು ದಿನ ಅಳುತ್ತಾ ಹೇಳಿದಳು, “ಅಮ್ಮಾ, ನಾನು ಇಲ್ಲಿ ಇರಲ್ಲ. ಅಪ್ಪ ಯಾವಾಗ ಬರ್ತಾರೆ? ತಾತನ ಬಳಿ ಕರ್ಕೊಂಡು ಹೋಗು.’
‘ನಿರ್ಮಲಾ ನಂದಿನಿಯ ಎದುರು ಅಸಹಾಯಕಳಾಗಿದ್ದಳು. ಒಂದು ದಿನ ನಿರ್ಮಲಾಳ ಮಾವ ಸುಧೀರನ ಕಣ್ಣು ತಪ್ಪಿಸಿ ಸೊಸೆಯನ್ನು ಕಾಣಲು ಬಂದರು. ನಂದಿನಿಯನ್ನು ನೋಡುತ್ತಲೇ ಅವರು ಅಳತೊಡಗಿದರು. ವಿಧುರರಾದ ನಂತರ ಅವರಿಗೆ ಬದುಕಲು ಇದ್ದ ಒಂದೇ ಆಸರೆ ಎಂದರೆ ನಂದಿನಿ ಮಾತ್ರ. ಮೊದಲು ಇಡೀ ದಿನ ಅವಳೊಂದಿಗೆ ಹರಟುತ್ತಿದ್ದರೆ ಸಮಯ ಹೇಗೆ ಕಳೆಯುತ್ತಿತ್ತೋ ಗೊತ್ತಾಗುತ್ತಿರಲಿಲ್ಲ. ಈಗ ಒಬ್ಬಂಟಿಯಾಗಿ ಮನೆಯಲ್ಲಿ ಸಮಯ ದೂಡಬೇಕು. ಮನಸ್ಸಿಗೆ ಬೇಸರವಾಗುತ್ತಿತ್ತು. ಇಡೀ ದಿನ ತಾವೇ ಏನೋ ಗೊಣಗುತ್ತಿರುತ್ತಿದ್ದರು. ಸುಧೀರನ ವರ್ತನೆಯಲ್ಲಿ ಏನು ಬದಲಾಗಿರಲಿಲ್ಲ. ಅವರು ನಿರ್ಮಲಾಗೆ ಒಂದಷ್ಟು ಹಣ ಕೊಟ್ಟು, “ಅತ್ತೆಮನೆಗೆ ಬರಲು ಮನಸ್ಸಿದೆಯೇ?” ಎಂದು ಕೇಳಿದರು. ನಿರ್ಮಲಾ ಏನೂ ಮಾತಾಡಲಿಲ್ಲ.
“ಹಲವಾರು ವರ್ಷದಿಂದ ಬೇರೆ ಇದ್ದೀರಿ. ಡೈವೋರ್ಸ್ ಪಡೆಯಬೇಕು ಅನ್ನಿಸಲಿಲ್ವಾ?” ನಿರ್ಮಲಾ ಏನೂ ಮಾತಾಡಲಿಲ್ಲ.
“ನೀನು ಮಾತಾಡಲಿಲ್ಲಾಂದ್ರೆ ನಿನ್ನ ಮನಸ್ಸಿನ ಆವಳ ನನಗೆ ಹೇಗೆ ಗೊತ್ತಾಗುತ್ತದೆ?”
ನಿರ್ಮಲಾಳ ಸಹನೆಯ ಕಟ್ಟೆ ಒಡೆಯಿತು. ಅವಳು ಅಳುತ್ತಾ ಹೇಳಿದಳು, “ನನ್ನನ್ನು ಇಲ್ಲಿಂದ ಪಾರುಮಾಡಿ. ನನ್ನ ಮಗಳು ಸತ್ತೋಗ್ತಾಳೆ. ಇಲ್ಲಿ ನನ್ನ ಉಸಿರು ಕಟ್ಟುತ್ತಿದೆ.”
ಮಾವ ನಿರ್ಮಲಾಳ ತಲೆಯ ಮೇಲೆ ಕೈಯಿಟ್ಟು ಸವರಿದರು. ಮಾವನಿಗೆ ಆಶ್ಚರ್ಯವಾಗಿ ಇದ್ದೇನೆಂದರೆ ನಿರ್ಮಲಾ ಡೈವೋರ್ಸ್ ತೆಗೆದುಕೊಳ್ಳುವ ಅವಸರದಲ್ಲಿಲ್ಲ. ಅಂದರೆ ಸಂಬಂಧ ಸದೃಢವಾಗಿದೆ. ಆಕಸ್ಮಿಕವೆಂಬಂತೆ ನಿರ್ಮಲಾಳ ನಾದಿನಿಯ ಗಂಡ ಸುರೇಶ್ ಅತ್ತೆಯ ಮನೆಗೆ ಬಂದಾಗ ಮಾವ ಅಲ್ಲಿನ ವಸ್ತುಸ್ಥಿತಿಯ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಕೊಟ್ಟರು. ಸುರೇಶ್ ಮನೆಯ ದೊಡ್ಡ ಅಳಿಯನಾಗಿದ್ದರು. ಅವರು ಏನಾದರೂ ಉಚಿತ ಸಲಹೆ ನೀಡಿದರೆ ಒಳ್ಳೆಯದೆಂದು ಮಾವನಿಗೆ ಅನ್ನಿಸಿತು. ನಿರ್ಮಲಾ ಮತ್ತೆ ಮನೆಗೆ ಬರಬೇಕು. ಸುಧೀರನೂ ಸುಧಾರಿಸಬೇಕು. ಅವರು ಸಾಕಷ್ಟು ವಿಚಾರ ಮಾಡಿ ನಿರ್ಮಲಾ ಕೆಲವು ತಿಂಗಳ ಕಾಲ ತನ್ನ ನಾದಿನಿ ಶುಭಾಳ ಮನೆಗೆ ಹೋಗಬೇಕು. ನಂತರ ಸುಧೀರನನ್ನು ಅಲ್ಲಿಗೆ ಕಳುಹಿಸಿ ಯಾವುದಾದರೂ `ರೀಹ್ಯಾಬಿಲಿಟೇಶನ್ ಸೆಂಟರ್’ನಲ್ಲಿ ಅವನಿಗೆ ಚಿಕಿತ್ಸೆ ಕೊಡಿಸಬೇಕು. ನಿರ್ಮಲಾ ಸುಧೀರನ ಜೊತೆಯಲ್ಲಿದ್ದರೆ ಚಿಕಿತ್ಸೆ ಸುಲಭವಾಗುತ್ತದೆ ಎಂದು ತೀರ್ಮಾನಿಸಿದರು.
ಇದು ನಿರ್ಮಲಾಗೆ ತಿಳಿದಾಗ ಬಹಳ ಖುಷಿಯಾಯಿತು. ಹಾಸ್ಟೆಲ್‌ನಿಂದ ಬಿಡುಗಡೆಯಾಗಿದ್ದೊಂದು ಖುಷಿ. ಇನ್ನೊಂದು, ಮಹಿಳೆಯ ಮರ್ಯಾದೆಯ ಪ್ರತೀಕಾದ ಅತ್ತೆಯ ಮನೆಯವರೊಂದಿಗೆ ಸಂಬಂಧವಿರುತ್ತದೆ. ವಿಚ್ಛೇದನಕ್ಕಾಗಿ ಯೋಚಿಸುವುದಕ್ಕೂ ವಿಚ್ಛೇದನ ತೆಗೆದುಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ. ವಿಚ್ಛೇದನ ಪಡೆದು ಸಾಮಾಜಿಕ ಅಪಮಾನಗಳನ್ನು ಎದುರಿಸುವುದು ಮತ್ತು ಏಕಾಂಗಿ ಜೀವನ ಸಾಗಿಸುವುದು ಸುಲಭವಲ್ಲ. ನಿರ್ಮಲಾಗೆ ಇದನ್ನು ಯೋಚಿಸಿದಾಗಲೆಲ್ಲಾ ಬೇಸರವಾಗುತ್ತಿತ್ತು. ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಸುತ್ತಿಗೆಯಂತೆ ಅಪ್ಪಳಿಸುತ್ತಿದ್ದವು. ಯಾವುದೇ ಆಶಾಕಿರಣಗಳು ಕಾಣದಿದ್ದಾಗ ಏಕಾಂತದಲ್ಲಿ ಬಿಕ್ಕಳಿಸುತ್ತಿದ್ದಳು. ಏಕಾಂಗಿ ಮಹಿಳೆಯ ಬದುಕಿನಲ್ಲಿ ಸಾವಿರಾರು ಮುಳ್ಳುಗಳಿರುತ್ತವೆ. ಅವಳು 2 ತಿಂಗಳು ಏಕಾಂಗಿಯಾಗಿದ್ದು ಅದರ ಬಗ್ಗೆ ತಿಳಿದು ಕೊಂಡಿದ್ದಳು. ರಾತ್ರಿ ಶುಭಾಳಿಂದ ಫೋನ್ ಬಂತು. ಬಹುಶಃ ನಿರ್ಮಲಾಳ ಮಾವ ಅವಳೊಂದಿಗೆ ಮಾತಾಡಲು ಹೇಳಿರಬೇಕು, “ನಿರ್ಮಲಾ ರೆಡಿಯಾಗಿರು. ರಕ್ಷಾಬಂಧನದ ಮರುದಿನ ಸುರೇಶ್ ನಿನ್ನನ್ನು ಕರೆದೊಯ್ಯಲು ಬರ್ತಾರೆ.”
ಅದನ್ನು ಕೇಳಿ ನಿರ್ಮಲಾಗೆ ನೆಮ್ಮದಿಯಾಯಿತು. ಆದರೂ ಆತಂಕ ತುಂಬಿತ್ತು. ಚೆನ್ನೈನಲ್ಲಿ ಹೇಗಿರುವುದು? ಶುಭಾಳ ವರ್ತನೆ ಬದಲಾದ್ರೆ? ಆಗ ಯಾವ ಮುಖ ಹೊತ್ತು ವಾಪಸ್ ಬರೋದು?
“ಅಕ್ಕಾ, ನೀವು ಬದಲಾಗಲ್ವಾ?” ಎಂದು ಕೇಳಿದಳು.
ಶುಭಾ ನಗುತ್ತಾ, “ನೀನು ಬಹಳ ಭಾವುಕಳು. ನಿನಗೆ ಕೆಟ್ಟದನ್ನು ನಾನ್ಯಾಕೆ ಬಯಸಲಿ?” ಎಂದಳು.
“ನನಗೆ ಗೊತ್ತು. ಆದರೂ ಮನಸ್ಸಿನಲ್ಲಿ ಏನೇನೋ ವಿಚಾರಗಳು ಬರುತ್ತವೆ,” ಎಂದಳು.
“ಅನುಮಾನಗಳು ಇರೋ ಕಡೆ ಪ್ರಶ್ನೆಗಳು ಹುಟ್ಟುತ್ತವೆ. ನಿನಗೆ ನನ್ನ ಮೇಲೆ ನಂಬಿಕೆ ಇಲ್ಲ ಅನಿಸುತ್ತೆ.”
“ಇಲ್ಲ ಅಕ್ಕ. ಹಾಗೇನಿಲ್ಲ, ನಿಮ್ಮ ಮೇಲೆ ನನಗೆ ನಂಬಿಕೆ ಇದೆ,” ನಿರ್ಮಲಾ ಹೇಳಿದಳು.
“ನನ್ನಲ್ಲಿ ನಂಬಿಕೆ ಇಡು. ನನ್ನನ್ನು ನಿನ್ನ ಅಕ್ಕ ಅಂತ ತಿಳ್ಕೋ. ಸುಧೀರನಿಗೆ ಸಂಬಂಧಗಳ ಮಹತ್ವ ಗೊತ್ತಿಲ್ಲ. ಆದರೆ ನಿನಗೆ ಗೊತ್ತು. ನಿನಗೆ ಆಶ್ರಯ ಕೊಡೋಕೆ ನಾವೆಲ್ಲ ಬದ್ಧರಾಗಿದ್ದೇವೆ.”
ಶುಭಾಳ ಮಾತು ಕೇಳಿ ನಿರ್ಮಲಾಗೆ ಸಮಾಧಾನವಾಯಿತು. ಮರುದಿನ ರಾಖಿ ಹಬ್ಬಕ್ಕಾಗಿ ನಿರ್ಮಲಾಳ ಅಣ್ಣ ರಾಜೇಶ್ ಬಂದ. ನಿರ್ಮಲಾ ತಾನು ನೌಕರಿ ಬಿಡುವ ಬಗ್ಗೆ ಮತ್ತು ಚೆನ್ನೈಗೆ ಹೋಗುವ ವಿಷಯ ತಿಳಿಸಿದಾಗ ಅವನಿಗೆ ಗಾಬರಿಯಾಯಿತು. ನಿರ್ಮಲಾ ಇದ್ದಕ್ಕಿದ್ದಂತೆ ಅಷ್ಟು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಳು. ಎಲ್ಲಿ ವಿಚ್ಛೇದನದ ಮಾತುಕಥೆ ಆಯಿತೋ ಅಲ್ಲಿಯೇ ನಿರ್ಮಲಾ ಮತ್ತೆ ಬಾವಿಯಲ್ಲಿ ಬೀಳಲು ಮನಸ್ಸು ಮಾಡಿದಳು.
“ಅಷ್ಟು ದೂರ ಹೋಗುವ ಕಾರಣವೇನು? ವಾಪಸ್ ನಿಮ್ಮ ಅತ್ತೆಮನೆಗೆ ಹೋಗು. ನಿನಗೆ ಅಲ್ಲಿರೋಕೆ ಎಲ್ಲ ಹಕ್ಕೂ ಇದೆ,” ರಾಜೇಶ್
ಹೇಳಿದ.
“ಅಲ್ಲಿ ಸುಧೀರ್ ನನಗೆ ಬದುಕೋಕೆ ಬಿಡಲ್ಲ.”
“ಚೆನ್ನೈನಲ್ಲೇನು ಭೂಗತವಾಗಿರ್ತೀಯಾ, ಎಲ್ಲಿಯವರೆಗೆ? ಸುಧೀರ್ ನಿನ್ನ ಗಂಡ. ನಿನ್ನ ಮೇಲೆ ಅವರಿಗೆ ಹಕ್ಕಿದೆ. ಅವರ ಮೇಲೇಕೆ ಕೋಪ?”
“ಚೆನ್ನೈನಲ್ಲಿ ಅವರಿಗೆ ಟ್ರೀಟ್‌ಮೆಂಟ್ ಕೊಡಿಸ್ತಿದ್ದೀವಿ.”
“ಟ್ರೀಟ್‌ಮೆಂಟ್ ನಂತರ ಅವರು ಕುಡಿಯೋದು ಬಿಡ್ತಾರೇಂತ ಏನು ಗ್ಯಾರಂಟಿ? ನನ್ನ ಪ್ರಕಾರ ನೀನು ಅವರ ಜೊತೆ ಹೊಂದಿಕೊಂಡು ಅಲ್ಲೇ ಇರಬೇಕು. ಕನಿಷ್ಠ ಮರ್ಯಾದೆಯಾದರೂ ಇರುತ್ತೆ. ಅಲ್ಲಿ ಇಲ್ಲಿ ಓಡಾಡೋದ್ಯಾಕೆ?”
“ನನಗೆ ಅಲ್ಲಿಗೆ ಹೋಗಬೇಡಾಂತ ನಮ್ಮ ಮಾವ ಹೇಳಿದ್ದಾರೆ.”
“ಅಂಗಡಿ ವಿಷಯ ಏನು?”
“ಮಾರಿ ಬಿಡ್ತಾರೆ. ಆ ದುಡ್ಡಿನಿಂದ ಅವರು ನಮಗೆ ಚೆನ್ನೈನಲ್ಲಿ ಫ್ಲ್ಯಾಟ್ ತೆಗೆಸಿಕೊಡ್ತಾರೆ.”
“ಯೋಚನೆ ಮಾಡು…… ನಿಮ್ಮ ಅತ್ತೆಮನೆ ನಮಗೆ ಹತ್ತಿರ ಇತ್ತು. 4-5 ಗಂಟೆ ಬೇಕಾಗಿತ್ತು ನಿಮ್ಮ ಮನೆಗೆ ಬರೋಕೆ. ಈಗ ಬರಬೇಕೆಂದರೂ ಚೆನ್ನೈಗೆ ಬರೋದು ಕಷ್ಟ. ನಿಮ್ಮ ಮಾವ ಎಲ್ಲಿರ್ತಾರೆ? ಈಗ್ಲೇ ಅವರ 1 ಕಾಲು ಸ್ಮಶಾನದಲ್ಲಿದೆ. ನಾಳೆ ಅವರು ಸತ್ತ ನಂತರ, ಸುಧೀರ್ ಸರಿಹೋಗದಿದ್ರೆ ಏನ್ಮಾಡ್ತೀಯಾ? ಆಗ ನಿನ್ನ ನಾದಿನಿ ನಿನಗೆ ಸಹಾಯ ಮಾಡ್ತಾರಾ? ಸುಧೀರ್ ಅವಳ ಮಾತು ಕೇಳ್ತಾರಾ? ಒಂದುವೇಳೆ ಅವರೂ ಸಹ ಇದು ನಿನ್ನ ಕುಟುಂಬದ ವಿಷಯ, ನಾನೇನೂ ಮಾಡೋಕ್ಕಾಗ್ಲಾಂತ ಹೇಳಿದ್ರೆ ಏನ್ಮಾಡ್ತೀಯಾ?”
ನಿರ್ಮಲಾ ಏನೂ ಉತ್ತರಿಸಲಿಲ್ಲ. ಅವಳು ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಗೆ ಸಿದ್ಧಳಿರಲಿಲ್ಲ.
“ಇದು ನಿನ್ನ ಕೊನೆ ತೀರ್ಮಾನಾನಾ?” ರಾಜೇಶನ ಧ್ವನಿಯಲ್ಲಿ ಕೋಪ ಇತ್ತು.
“ಹೌದು.”
“ಸರಿ ಹಾಗಾದರೆ,” ಸ್ವಲ್ಪ ಹೊತ್ತು ಯೋಚಿಸಿ ರಾಜೇಶ್ ಹೇಳಿದ, “ಒಂದುವೇಳೆ ಸುಧೀರ್ ಸರಿಹೋಗಿ ನಿನ್ನ ವೈವಾಹಿಕ ಜೀವನ ಮತ್ತೆ ಹಳಿಗೆ ವಾಪಸ್ ಬಂದರೆ ನನಗೆ ಸಂತೋಷವಾಗುತ್ತೆ.’ ‘ರಾಜೇಶ್ ಸುಮಾರು 2 ಗಂಟೆ ಅಲ್ಲೇ ಇದ್ದ. ಅವನು ಹೊರಡುವಾಗ ಗಂಭೀರವಾಗಿ ಕೇಳಿದ, “ಒಂದು ವೇಳೆ ನೀನು ಅವಕಾಶ ಕಳೆದುಕೊಂಡರೆ?”
“ಆಗ ನನ್ನ ಬಳಿ ಕಳೆದುಕೊಳ್ಳೋಕೆ ಏನೂ ಉಳಿದಿರಲ್ಲ,” ನಿರ್ಮಲಾ ಭಾವುಕಳಾಗಿ ಹೇಳಿದಳು.
“ಹಾಗೇಕೆ ಹೇಳ್ತೀಯ? ನಿನ್ನ ಮಗಳೇ ನಿನಗೆ ಗಿಫ್ಟ್. ನಿನ್ನ ಅಣ್ಣ ಬದುಕಿದ್ದಾನೆ. ಅಪ್ಪ ಅಮ್ಮನೂ ಇದ್ದಾರೆ.”
ಚೆನ್ನೈಗೆ ಹೋಗುವಾಗ ದಾರಿಯುದ್ದಕ್ಕೂ ನಿರ್ಮಲಾ ಗೊಂದಲದಲ್ಲಿದ್ದಳು. ಅನ್ಯಾಯವಾಗಿ ಸುಧೀರ್ ಮೇಲೆ ಕೋಪಿಸಿಕೊಂಡಿದ್ದೇನೆ ಎಂದುಕೊಂಡಳು. ಯಾರನ್ನಾದರೂ ಪರೀಕ್ಷಿಸಬೇಕಾದರೆ ಇಷ್ಟು ವರ್ಷ ಬೇಕಿಲ್ಲ. ಭಾವಾವೇಶದಲ್ಲಿ ಚೆನ್ನೈಗೆ ಹೋಗುವ ನಿರ್ಧಾರ ಮಾಡಿದ್ದೇನೆ. ಪರಿಸ್ಥಿತಿಯೊಂದಿಗೆ ಹೋರಾಡುವ ಬದಲು ಪಲಾಯನ ಮಾಡುವ ದಾರಿ ಹಿಡಿದುಕೊಂಡೆ ಎಂದುಕೊಂಡಳು. ಬಹುಶಃ ಟ್ರೀಟ್‌ಮೆಂಟ್ ಕೊಡಿಸಿದ ನಂತರ ಸುಧೀರ್ ಸುಧಾರಿಸಬಹುದು. ಎಲ್ಲ ಸರಿಹೋಗಬಹುದು.
“ಅಮ್ಮಾ, ಅಪ್ಪನಿಗೆ ಸರಿಹೋದರೆ ಅವರ ಬಳಿ ಹೋಗೋಣ್ವಾ?” ಎಂದು ನಂದಿನಿ ಪದೇ ಪದೇ ಕೇಳುತ್ತಿದ್ದಳು. ನಿರ್ಮಲಾ ಚೆನ್ನೈಗೆ ಬಂದು 1 ತಿಂಗಳಾಯಿತು. ಅವಳು ಬಂದಿದ್ದಕ್ಕೆ ಶುಭಾಗೆ ಬಹಳ ಖುಷಿಯಾಗಿತ್ತು. ಅವಳಿಗೆ ತನ್ನದೇ ಆದ ಬೊಟಿಕ್ ಇತ್ತು. ಬೆಳಗ್ಗೆ 10 ಗಂಟೆಗೆ ಮನೆ ಬಿಟ್ಟರೆ ರಾತ್ರಿ 8 ಗಂಟೆಗೆ ಮನೆಗೆ ಬರುತ್ತಿದ್ದಳು. ನಿಧಾನವಾಗಿ ಮನೆಯ ಎಲ್ಲ ಜವಾಬ್ದಾರಿಗಳೂ ನಿರ್ಮಲಾ ಮೇಲೆ ಬಂತು. ಬೆಳಗ್ಗೆ ಮಕ್ಕಳನ್ನು ಎಬ್ಬಿಸುವುದು, ಅವರಿಗೆ ತಿಂಡಿ ಮಾಡಿ ಕೊಡುವುದು, ಸ್ಕೂಲಿಗೆ ಬಿಟ್ಟುಬರುವುದು, ಎಲ್ಲರೂ ಹೊರಟ ನಂತರ ಮನೆಯ ಕ್ಲೀನಿಂಗ್ ಇತ್ಯಾದಿ ಮಾಡುವುದು. ಒಂದು ದಿನ ಕ್ಲೀನ್ ಮಾಡುವಾಗ ಅವಳ ಮನಸ್ಸು ಅತ್ತೆ ಮನೆಯತ್ತ ಹೋಯಿತು. ಸ್ವಲ್ಪ ಹೊತ್ತಿನ ನಂತರ ಅವಳು ಉದಾಸಳಾದಳು. ಒಂದು ವೇಳೆ ಅವಳ ಮನೆ ಹಾಳಾಗದಿದ್ದಿದ್ದರೆ ಅವಳೇಕೆ ಇಲ್ಲಿ ಬರುತ್ತಿದ್ದಳು? ಅವಳಿಗೆ ಇಲ್ಲೇನು ಸಿಗುತ್ತದೆ? ಸ್ವಲ್ಪ ಹೊಗಳಿಕೆ, ಸಿಹಿಯಾದ ಮಾತು. ಈ ಮನೆಯಲ್ಲಿ ಅವಳದೆನ್ನುವುದು ಏನಿದೆ? ಅವಳು ಯಾರ ಮನೆಯನ್ನು ಸಜ್ಜುಗೊಳಿಸುತ್ತಿದ್ದಾಳೆ? ಅವಳು ಅನ್ಯಮನಸ್ಕಳಾಗಿ ಮಂಚದ ಮೇಲೆ ಮಲಗಿಕೊಂಡಳು. ಬೊಟಿಕ್‌ನಿಂದ ಶುಭಾ ಮನೆಗೆ ಬಂದ ನಂತರ ನಿರ್ಮಲಾಳ ಉದಾಸತನಕ್ಕೆ ಕಾರಣ ಕೇಳಿದಳು. ನಿರ್ಮಲಾ ಏನೂ ಹೇಳಲಿಲ್ಲ.
“ಮನೆ ನೆನಪು ಬರ್ತಿದ್ಯಾ?” ಶುಭಾ ಕೇಳಿದಳು.
“ಮನೆ ಇದ್ದಿದ್ರೆ ಇಲ್ಲಿಗೆ ಬರ್ತಿದ್ನಾ?”
“ಸುಧೀರನ ನೆನಪಾಗ್ತಿರಬಹುದು. ಯೋಚಿಸಬೇಡ. ಅವನು ಚಿಕಿತ್ಸೆಗಾಗಿ ಬೇಗನೆ ಇಲ್ಲಿಗೆ ಬರ್ತಾನೆ.”
ಅದನ್ನು ಕೇಳಿ ನಿರ್ಮಲಾಳ ಉದಾಸತನ ಕೊಂಚ ಕಡಿಮೆಯಾಯಿತು. ಸುಧೀರ್ ಎಲ್ಲರಂತೆ ಸರಿಹೋದಮೇಲೆ ಅವಳು ಅವನೊಂದಿಗೆ ಮನೆಗೆ ಹೋಗಲು ಬಯಸುತ್ತಿದ್ದಳು.
ಅಂದು ಸುರೇಶ್ ಆಫೀಸಿಗೆ ಹೋಗಲಿಲ್ಲ. ಅವನಿಗೆ ಆರೋಗ್ಯ ಸರಿ ಇರಲಿಲ್ಲ. ಇಬ್ಬರು ಮಕ್ಕಳನ್ನೂ ಸ್ಕೂಲಿಗೆ ಕಳಿಸಿ, ಮನೆ ಸ್ವಚ್ಛಗೊಳಿಸಿದ ನಂತರ ಸ್ನಾನಕ್ಕೆ ಹೋದಳು. ಸ್ನಾನದ ನಂತರ ಬಟ್ಟೆ ಬದಲಿಸಲು ರೂಮಿಗೆ ಹೋದಳು. ಹಿಂದಿನಿಂದ ಸುರೇಶ್ ಬಂದ.
“ನೀವು?” ದಿಢೀರನೇ ಅವನನ್ನು ನೋಡಿ ನಿರ್ಮಲಾ ಕಂಪಿಸಿದಳು. ಅವಳು ತನ್ನ ದೇಹ ಮುಚ್ಚಿಕೊಳ್ಳಲು ವಿಫಲ ಪ್ರಯತ್ನ ನಡೆಸಿದಳು.
ಸುರೇಶ್ ಅವಳ ಕೈ ಹಿಡಿದುಕೊಂಡು “ಪ್ಲೀಸ್,” ಎಂದ.
ನಿರ್ಮಲಾಗೆ ಅರ್ಥ ಮಾಡಿಕೊಳ್ಳಲು ತಡವಾಗಲಿಲ್ಲ. “ನೀವು ಹೊರಟುಹೋಗಿ,” ಅವಳು ವಿನಂತಿಸಿದಳು.
ಸುರೇಶ್ ಬಲಾತ್ಕರಿಸಲು ಯತ್ನಿಸಿದ. ಆದರೆ ಯಶಸ್ವಿಯಾಗಲಿಲ್ಲ. ಕೊನೆಗೆ ಸೋತು ಅವನು ತನ್ನ ಕೋಣೆಗೆ ಹೊರಟುಹೋದ. ನಿರ್ಮಲಾ ಕೋಣೆಯನ್ನು ಮುಚ್ಚಿ ಅಳತೊಡಗಿದಳು. ಇಡೀ ದಿನ ಏನೂ ತಿನ್ನದೆ ಕೋಣೆಯೊಳಗೇ ಇದ್ದು ತನ್ನ ಭವಿಷ್ಯದ ಬಗ್ಗೆ ಕಣ್ಣೀರು ಹಾಕುತ್ತಿದ್ದಳು. ರಕ್ಷಿಸುತ್ತೇನೆಂದು ಹೇಳಿದರೇ ಅತ್ಯಾಚಾರ ಮಾಡಲು ಮುಂದಾಗಿದ್ದರು. ಯಾರನ್ನು ನಂಬುವುದು? ಏಕಾಂಗಿ ಮಹಿಳೆಯನ್ನು ಒಬ್ಬ ಪುರುಷ ಭೋಗಿಸುವ ದೃಷ್ಟಿಯಿಂದಲೇ ನೋಡುತ್ತಾನೆಯೇ? ಸಂಬಂಧಗಳಿಗೆ ಮಹತ್ವ ಇಲ್ಲವೇ? ತಾನೊಬ್ಬ ವಿವಾಹಿತಳೆಂದು ಅಣ್ಣನ ಸಮಾನನಾದ ಸುರೇಶ್‌ಗೆ ಅನ್ನಿಸುವುದೇ ಇಲ್ಲವೇ? ಅವಳಿಗೆ ಸುಧೀರನ ಜ್ಞಾಪಕ ಬರತೊಡಗಿತು. ಅವರಿಂದು ಜೊತೆಯಲ್ಲಿ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ.
ರಾತ್ರಿ 8 ಗಂಟೆಗೆ ಶುಭಾ ಕೆಲಸದಿಂದ ಹಿಂತಿರುಗಿದಾಗ ನಿರ್ಮಲಾಳನ್ನು ಕಾಣದೆ ಸುರೇಶ್‌ನನ್ನು ಕೇಳಿದಳು. ಅವನು ತನ್ನ ರೂಮಿನಲ್ಲಿ ಮಲಗಿ ಏನೂ ನಡೆದೇ ಇಲ್ಲವೆಂಬಂತೆ ಯಾವುದೋ ಪುಸ್ತಕವನ್ನು ಓದುತ್ತಿದ್ದ. ನಿರ್ಮಲಾ ಬಾಯಿ ಬಿಡುವುದಿಲ್ಲವೆಂದು ಅವನಿಗೆ ನಂಬಿಕೆ ಇತ್ತು. ಇವತ್ತಲ್ಲ ನಾಳೆ ಅವಳು ತನ್ನ ಬಳಿ ಬಂದೇ ಬರುತ್ತಾಳೆ. ಸುಧೀರ್ ಕುಡಿದು ಕುಡಿದು ಸತ್ತರೆ ಅವಳೆಲ್ಲಿ ಹೋಗುತ್ತಾಳೆ? ಗಂಡನಿಲ್ಲದ ಮಹಿಳೆಯ ಪರಿಸ್ಥಿತಿ ಸೂತ್ರ ಹರಿದ ಗಾಳಿಪಟದಂತೆ. ಹೀಗಿರುವಾಗ ನನಗಿಂತ ಹೆಚ್ಚು ವಿಶ್ವಾಸಪಾತ್ರರು ಯಾರಿದ್ದಾರೆ ಎಂದು ಯೋಚಿಸಿ ಸುರೇಶ್ ನಿಶ್ಚಿಂತನಾಗಿದ್ದ.
“ಅವಳ ರೂಮಿನಲ್ಲಿರಬೇಕು,” ಅವನು ಮಲಗಿಕೊಂಡೇ ಹೇಳಿದ.
ಶುಭಾ ನಿರ್ಮಾಳ ರೂಮಿನ ಬಾಗಿಲು ತಟ್ಟಿದಳು. ಶುಭಾ ಬಂದಿದ್ದು ತಿಳಿದು ನಿರ್ಮಲಾಗೆ ಜೀವ ಬಂತು. ಬಾಗಿಲು ತೆರೆಯುತ್ತಲೇ ಅವಳು ಓಡಿಬಂದು ಶುಭಾಳ ಭುಜದ ಮೇಲೆ ತಲೆಯಿಟ್ಟು ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಳು.
“ಏನಾಯ್ತು ನಿರ್ಮಲಾ?” ಶುಭಾ ಕೊಂಚ ಕೊಂಚ ಅರ್ಥ ಮಾಡಿಕೊಳ್ಳುತ್ತಿದ್ದಳು. ಒಬ್ಬ ಮಹಿಳೆ ಮಾತ್ರ್ರ ಇನ್ನೊಬ್ಬ ಮಹಿಳೆಯ ಮನೋಭಾವವನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತಾಳೆ.
“ಅಕ್ಕಾ ನಾನು ಇಲ್ಲಿರೋದಿಲ್ಲ…….”
“ನೀನು ಏನೂ ಹೇಳುವ ಅಗತ್ಯವಿಲ್ಲ. ನನಗೆ ಎಲ್ಲ ಅರ್ಥವಾಯ್ತು,” ಎನ್ನುತ್ತಾ ಅವಳು ವೇಗವಾಗಿ ಸುರೇಶನ ರೂಮಿಗೆ ಹೋದಳು.
“ನೀವು ನಿರ್ಮಲಾಳನ್ನು ಇಲ್ಲಿಗೆ ಕರೆದುಕೊಂಡು ಬರೋಕೆ ಶಿಫಾರಸು ಮಾಡಿದ್ದು ಇದಕ್ಕೇನಾ? ಆಗ ಅವಳ ಮೇಲೆ ಬಹಳ ಅನುಕಂಪ ತೋರಿಸಿದ್ರಿ. ಸುಧೀರ್ ಇಲ್ಲಾಂದ್ರೆ ನಾವೇನು ಸತ್ತೋಗಿದ್ದೀವಾ ಅಂದಿದ್ರಿ,” ಅವಳು ಮಾತಾಡುವಾಗ ಸುರೇಶ್ ತೆಪ್ಪಗಿದ್ದ. ಅವಳು ಮುಂದುವರಿಸಿದಳು, “ನಿಮಗೆ ಸ್ವಲ್ಪವೂ ನಾಚಿಕೆ ಇಲ್ಲ. ಈಗ ನಾನು ಅವಳಿಗೆ ಹೇಗೆ ಮುಖ ತೋರಿಸಲಿ?” ಎನ್ನುತ್ತಾ ಅಳತೊಡಗಿದಳು.
ನಂತರ ನಿರ್ಮಲಾ ಬಳಿ ಬಂದು, “ನಿರ್ಮಲಾ, ನನ್ನನ್ನು ಕ್ಷಮಿಸು. ನಾನು ನಿನ್ನ ಜವಾಬ್ದಾರಿ ಸರಿಯಾಗಿ ವಹಿಸಿಕೊಳ್ಳಲಿಲ್ಲ,” ಎಂದು ಹೇಳಿ ಅವಳ ತಲೆಯ ಮೇಲೆ ಸ್ನೇಹದಿಂದ ಕೈಯಾಡಿಸಿದಳು. ಅಂದು ರಾತ್ರಿ ಶುಭಾ ಹಾಗೂ ನಿರ್ಮಲಾಗೆ ನಿದ್ದೆ ಬರಲಿಲ್ಲ. ಸುರೇಶ್‌ನನ್ನು ನಂಬಿ ನಿರ್ಮಲಾಳನ್ನು ಏಕೆ ಕರೆದುಕೊಂಡು ಬಂದೆ ಎಂದು ಶುಭಾ ಯೋಚಿಸುತ್ತಿದ್ದಳು. ಸಂಬಂಧಗಳಲ್ಲಿ ಬಿರುಕು ಮೂಡಿಸುವುದರಲ್ಲಿ ಪುರುಷರಿಗೆ ತಡವಾಗುವುದಿಲ್ಲ. ನಾನ್ಯಾಕೆ ಇದರ ಬಗ್ಗೆ ಯೋಚಿಸಲಿಲ್ಲ. ಅತ್ತ ನಿರ್ಮಲಾ ಈಗ ನಾನೆಲ್ಲಿಗೆ ಹೋಗಲಿ? ಎಂದುಕೊಳ್ಳುತ್ತಿದ್ದಳು. ಅವಳಿಗೆ ಅಣ್ಣನ ನೆನಪಾಯಿತು. ಕಳೆದ 10 ವರ್ಷಗಳಿಂದ ನಿರ್ಮಲಾ ಸುಧೀರನ ಬಗ್ಗೆ ದೂರು ಹೇಳಿಕೊಂಡು ತವರು ಮನೆಯಲ್ಲಿ ಅಳುತ್ತಿದ್ದಳು. ಅಣ್ಣನಿಗೆ ಅವಳು ಮತ್ತೆ ಬಂದು ತೊಂದರೆ ಕೊಡುವುದು ಇಷ್ಟವಿರಲಿಲ್ಲ. ನಿರ್ಮಲಾಗೆ ತನ್ನ ಮೇಲೇ ಬೇಸರ ಬಂತು. ಅವಳಿಗೆ ಪುರುಷ ವರ್ಗದ ಮೇಲೆ ತಿರಸ್ಕಾರ ಮೂಡಿತು. ಸುಂದರವಾದ ತರುಣಿ ಗೌರವದಿಂದ ಬದುಕಲು ಬಿಡುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅವಳಿಗೆ ಮನಸ್ಸಾಯಿತು. ಇಂತಹ ಅವಮಾನಭರಿತ ಬದುಕಿಗಿಂತಾ ಸಾಯುವುದೇ ಒಳ್ಳೆಯದು. ಮಧ್ಯರಾತ್ರಿಯರೆಗೆ ಅಳುತ್ತಾ ನಿರ್ಮಲಾ ಎಲ್ಲ ವಿಷಯವನ್ನೂ ಗೆಳತಿಗೆ ತಿಳಿಸಿದಾಗ ಅವಳ ರಕ್ತ ಕುದಿಯಿತು.
“ನೀನು ಸುಧೀರ್‌ಗೆ ಹೇಳಿದ್ಯಾ?” ಗೆಳತಿ ಕೇಳಿದಳು.
“ಅವರು ಚೆನ್ನಾಗಿದ್ದಿದ್ರೆ ನನಗೆ ಈ ಗತಿ ಬರ್ತಿತ್ತಾ?” ಅವಳು ಹೇಳಿದಳು. ನಿರ್ಮಲಾಳ ತಂದೆ ಗೆಳತಿಯಿಂದ ಈ ವಿಷಯ ತಿಳಿದಾಗ ನೊಂದುಕೊಂಡರು. ಅವರು ಚೆನ್ನೈಗೆ ಹೋಗಿ ತಲುಪಿದ ಕೂಡಲೇ ನಿರ್ಮಲಾಗೆ ಸ್ಪಷ್ಟವಾಗಿ ಹೇಳಿದರು, “ಇನ್ನು ಮೇಲೆ ನೀನು ಎಲ್ಲಿಗೂ ಹೋಗಬೇಕಾಗಿಲ್ಲ. ನಿನ್ನ ಅಪ್ಪ ನಾನಿನ್ನೂ ಬದುಕಿದ್ದೀನಿ. ನಾನು ನಿನ್ನನ್ನು ಬೆಳೆಸಿದ್ದೀನಿ, ನಿನ್ನ ಜವಾಬ್ದಾರಿ ನಾನೇ ಹೊರುತ್ತೇನೆ. ನಾನು ಮೊದಲೇ ನಿನಗೆ ಹೇಳಿದ್ದೆ. ಗಂಡನೇ ದೂರವಾದ ಮೇಲೆ ಅತ್ತೆ ಮಾವ ಇನ್ನೇನು? ಸಮಾಜಕ್ಕೆ ಹೆದರಿ ನೀನು ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದೀಯ. ಇಲ್ಲಿ ನಿನಗೆ ನೆಂಟರು ಅನ್ನೋರು ಯಾರಿದ್ದಾರೆ?”
“ಹಾಗೆ ಹೇಳ್ಬೇಡಿ ಅಪ್ಪಾಜಿ, ನಮಗೆ ಈಗಲೇ ನಾಚಿಕೆ ಆಗ್ತಿದೆ,” ಶುಭಾಳ ಸ್ವರದಲ್ಲಿ ಆರ್ದ್ರತೆ ಇತ್ತು.
“ನನಗೆ ನಾಚಿಕೆ ಆಗ್ತಿದೆ. ನನ್ನ ಮಗಳಿಗೆ ಸರಿಯಾದ ದಾರಿ ತೋರಿಸೋಕೆ ಆಗ್ಲಿಲ್ಲಾಂತ,” ಎನ್ನುವಾಗ ಅವರ ಕಂಠ ತುಂಬಿ ಬಂತು.
“ಒಬ್ಬ ಮಹಿಳೆಗೆ ಸರಿಯಾದ ಗಂಡ ಸಿಗಲಿಲ್ಲಾಂದ್ರೆ, ಅವಳ ಜೀವನ ಸೂತ್ರ ಕಿತ್ತ ಗಾಳಿಪಟದಂತೆ,” ಎಂದರು.
ನಿರ್ಮಲಾ ಭಾರವಾದ ಮನಸ್ಸಿನಿಂದ ಎದ್ದು ನಿಂತಳು. ತನ್ನ ವಸ್ತುಗಳನ್ನು ಜೋಡಿಸಿಕೊಂಡಳು. ನಂತರ ಶುಭಾಗೆ, “ಅಕ್ಕಾ, ಇದು ನಮ್ಮ ಕೊನೆಯ ಭೇಟಿ,” ಎಂದಳು.
ಶುಭಾಗೆ ಕಣ್ಣೀರು ತಡೆಯಲಾಗಲಿಲ್ಲ. ನಿರ್ಮಲಾಳನ್ನು ತಬ್ಬಿಕೊಂಡು ಬಿಕ್ಕತೊಡಗಿದಳು, “ನಿನ್ನ ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ. ಅವರನ್ನು ಕ್ಷಮಿಸು.”
“ನನ್ನ ಮನಸ್ಸಿನಲ್ಲಿ ಯಾರ ಬಗ್ಗೆಯೂ ದೂರುಗಳಿಲ್ಲ.”
“ಅಂದರೆ ನೀನು ಕ್ಷಮಿಸೋದಿಲ್ವಾ?”
“ನಾನೇ ಶಾಪಗ್ರಸ್ತಳು. ಇನ್ನು ಬೇರೆಯವರನ್ನು ಏನು ಕ್ಷಮಿಸುವುದು?” ಎಂದು ಹೇಳಿದ ನಿರ್ಮಲಾ ಭಾರವಾದ ಹೆಜ್ಜೆಗಳನ್ನಿಡುತ್ತಾ ಅಲ್ಲಿಂದ ಹೊರಟಳು.
ಶುಭಾ ಗಾಢ ನೋವಿನಲ್ಲಿ ಮುಳುಗಿದಳು. 2 ದಿನಗಳ ನಂತರ ಸುಧೀರ್ ಮತ್ತು ತಂದೆ ಬಂದರೆ ಅವರಿಗೆ ಏನೆಂದು ಉತ್ತರಿಸುವುದು? ನಿರ್ಮಲಾ ಅಲ್ಲಿಂದ ಹೊರಟಿದ್ದಕ್ಕೆ ಕಾರಣ ಕೇಳಿದರೆ ನಾನು ನಡೆದಿದ್ದೆಲ್ಲವನ್ನೂ ಹೇಳಿಬಿಡಿ? ಎಂದುಕೊಂಡಳು. ನಿರ್ಮಲಾ ಹೊರಟ ನಂತರ ಅವಳು ಸುರೇಶನನ್ನು ಸರಿಯಾಗಿ ತರಾಟೆ ತೆಗೆದುಕೊಂಡಳು. ಅದಕ್ಕೆ ಪ್ರತಿಯಾಗಿ ಸುರೇಶ್ ನಿರ್ಮಲಾಳ ಮೇಲೆಯೇ ತಪ್ಪು ಹೊರೆಸಿದ.
“ಅವಳ ಮೇಲೆ ಯಾಕ್ರೀ ತಪ್ಪು ಹೊರೆಸ್ತೀರಿ? ನನಗೆ ಅವಳ ಬಗ್ಗೆ ಚೆನ್ನಾಗಿ ಗೊತ್ತು. ನಿಮ್ಮ ತಪ್ಪು ಮುಚ್ಚಿಕೊಳ್ಳೋಕೆ ಅವಳ ಮೇಲೆ ದೋಷ ಹೊರೆಸೋಕೆ ನಿಮಗೆ ನಾಚಿಕೆ ಆಗಲ್ವಾ?” ಎಂದಳು. ಆದರೂ ಸುರೇಶ್ ಅಚಲನಾಗಿ ನಿಂತಿದ್ದ. ಸುಧೀರ್ ಮತ್ತು ತಂದೆ ಬಂದಾಗ ನಿರ್ಮಲಾ ಅಲ್ಲಿ ಇಲ್ಲದ್ದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು.
“ಎಲ್ಲಿ ನಿರ್ಮಲಾ ಕಾಣ್ತಿಲ್ಲ,” ತಂದೆ ಕೇಳಿದಾಗ, ಶುಭಾ, “ಅವಳು ಹೊರಟುಹೋದಳು,” ಎಂದಳು.
“ಎಲ್ಲಿಗೆ?”
“ಅವಳ ತಂದೆ ಜೊತೆ ಹೋದಳು.”
“ಯಾಕೆ? ಅಲ್ಲಿಂದ ತಾನೇ ಬಂದಿದ್ಲು,” ಸುಧೀರ್ ಹೇಳಿದ. ನಂತರ ಅವನು ತಂದೆಗೆ, “ಅವಳು ಚೆನ್ನೈನಲ್ಲಿ ನಮ್ಮ ಜೊತೇಲೇ ಇರ್ತಾಳೆ ಅಂದಿದ್ರಿ,” ಎಂದ.
“ಶುಭಾ, ಇದ್ದಕ್ಕಿದ್ದಂತೆ ಏನಾಯ್ತು?” ತಂದೆ ಹುಬ್ಬುಗಂಟಿಕ್ಕಿದರು.
“ಅಪ್ಪ, ಚಿಕ್ಕ ಮನೆಯಿಂದ ಹುಡುಗೀನ ತಂದರೆ ಏನಾಗುತ್ತೇಂತ ನಿಮಗೆ ಚೆನ್ನಾಗಿ ಗೊತ್ತು. ನನ್ನ ಮನೆ ನಿಮ್ಮನೆಯಷ್ಟು ದೊಡ್ಡದಲ್ಲ. ಇಲ್ಲಿದ್ರೆ ನನಗೆ ಉಸಿರುಕಟ್ಟಿದ ಹಾಗಾಗುತ್ತೆ ಅಂತ ಹೇಳ್ತಿದ್ಲು,” ಶುಭಾ ದೃಷ್ಟಿ ತಪ್ಪಿಸುತ್ತಾ ಹೇಳಿದಳು.
ಶುಭಾಳ ಮಾತಿನಲ್ಲಿ ಅವಳ ತಂದೆಗೆ ವಿಶ್ವಾಸ ಬರಲಿಲ್ಲ.
“ಅವಳು ಮತ್ತೆ ಇಲ್ಲಿಗೆ ಬಂದ್ರೆ ಅವಳನ್ನು ಕತ್ತು ಹಿಡಿದು ತಳ್ತೀನಿ. ಅವಳಿಗೇನು ಯೋಗ್ಯತೆ ಇದೆ?” ಸುಧೀರ್ ಹೇಳಿದ.
ನಂತರ ಸುಧೀರ್ ಮೆಟ್ಟಿಲಿಳಿದು ಪೇಟೆಗೆ ಹೋದ. ಅಲ್ಲಿ ಚೆನ್ನಾಗಿ ಕುಡಿದು ಮನೆಗೆ ಹಿಂತಿರುಗಿದ. ಆಮೇಲೆ ಅಪ್ಪನಿಗೆ ಹೇಳಿದ, “ನೀವು ನನಗೆ ಟ್ರೀಟ್‌ಮೆಂಟ್ ಕೊಡಿಸೋಕೆ ಬಂದಿದ್ರಿ ತಾನೇ? ನನ್ನ ಟ್ರೀಟ್‌ಮೆಂಟ್ ಮುಗೀತು.”
ನಂತರ ಅವನು ಮಂಚದ ಮೇಲೆ ಧೊಪ್ಪನೆ ಬಿದ್ದ. ಅವನ ತಂದೆ ಗಾಢ ಚಿಂತೆಯಲ್ಲಿ ಮುಳುಗಿದರು.