“ನಮ್ಮ  ಸಮಾಜ ಇಂದು ಅದೆಷ್ಟು ಮುಂದುವರಿದಿದ್ದರೂ ಸಹ ಇಂದಿಗೂ ಬಡ ಮಧ್ಯಮ ವರ್ಗದ ಮಹಿಳೆಯರ ಶೋಷಣೆ ನಿಂತಿಲ್ಲ. ಮಹಿಳಾ ಸ್ವಾವಲಂಬನೆಯನ್ನು ಸಾಧಿಸಬೇಕೆಂದು ನಮ್ಮ ನಾಯಕರು ಹೇಳುತ್ತಲೇ ಬಂದಿದ್ದಾರೆ. ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ನಮ್ಮ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಬಡ ಹೆಣ್ಣುಮಕ್ಕಳು ತಾವು ಸ್ವಾವಲಂಬನೆಯ ಬದುಕು ನಡೆಸಬೇಕೆಂದು ಕನಸನ್ನು ಕಟ್ಟಿಕೊಂಡಿದ್ದರೂ ಸಹ ಅದಕ್ಕೆ ತಕ್ಕ ಮಾರ್ಗದರ್ಶನ ಸಿಗುತ್ತಿಲ್ಲ. ಈ ಎಲ್ಲಾ ಕೊರತೆಗಳನ್ನು ನೀಗಿಸುವ ಸುಲವಾಗಿಯೇ ಹುಟ್ಟಿಕೊಂಡದ್ದು ಮಹಿಳಾ ಕಲಾ ಮತ್ತು ಕರಕುಶಲ ಧರ್ಮಾರ್ಥ ಸಂಸ್ಥೆ,” ಇವು ಸಂಸ್ಥೆಯ ಪ್ರಧಾನ ನಿರ್ದೇಶಕಿಯಾದ ಸುಮಾರ ಮಾತುಗಳು.

mahila-GM

ಬೆಂಗಳೂರಿನ ಜಿಂದಾಲ್ ‌ನಗರದಲ್ಲಿರುವ `ಮಹಿಳಾ ಕಲಾ ಮತ್ತು ಕರಕುಶಲ ಧರ್ಮಾರ್ಥ ಸಂಸ್ಥೆ’ಯ ಗ್ರಾಮೀಣ ಮಹಿಳೆಯರಿಗಾಗಿ ವಿವಿಧ ಭಾಗಗಳಲ್ಲಿ ಉಚಿತ ತರಬೇತಿಗಳನ್ನು ನೀಡುತ್ತಲಿದೆ. ಜಿಂದಾಲ್ ಸಮೂಹದ ಸೀತಾರಾಮ್ ಜಿಂದಾಲ್ ರವರು ಗ್ರಾಮೀಣ ಮಹಿಳೆಯರ ಅನುಕೂಲಕ್ಕಾಗಿ `ಸೀತಾರಾಮ್ ಜಿಂದಾಲ್ ‌ಫೌಂಡೇಶನ್‌’ ಸಂಸ್ಥೆಯ ಮುಖೇನ 1990ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಮಹಿಳೆಯರಿಗೆ, ಗ್ರಾಮೀಣ ಯುವತಿಯರಿಗೆ ನಾನಾ ರೀತಿಯ ಉದ್ಯೋಗಾಧಾರಿತ ತರಬೇತಿಗಳನ್ನು ನೀಡಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿ ಜೀವನವನ್ನು ಎದುರಿಸಲು ಸನ್ನದ್ಧಗೊಳಿಸುತ್ತಿದ್ದಾರೆ.

ಪ್ರಾರಂಭದಲ್ಲಿ ಹೊಲಿಗೆ ತರಬೇತಿ ಹಾಗೂ ಬೆರಳಚ್ಚು (ಟೈಪಿಂಗ್‌) ತರಬೇತಿಯೊಂದಿಗೆ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಇಂದು ಹೊಲಿಗೆ ತರಬೇತಿ, ಎಂಬ್ರಾಯಿಡರಿ, ಸುಲಭ ಇಂಗ್ಲಿಷ್‌ ಕಲಿಕೆ (ಇಂಗ್ಲಿಷ್‌ ಸ್ಪೀಕಿಂಗ್‌ ಕೋರ್ಸ್‌), ಬ್ಯೂಟೀಷಿಯನ್‌ ತರಬೇತಿ, ಬೆರಳಚ್ಚು, ಕಂಪ್ಯೂಟರ್‌ ಬೇಸಿಕ್‌, ಟ್ಯಾಲಿ, ಡಿಟಿಪಿ, ನರ್ಸಿಂಗ್‌ ಸಹಾಯಕ ತರಬೇತಿ ಸೇರಿದಂತೆ ಹಲವಾರು ಕೋರ್ಸುಗಳನ್ನು ಕಲಿಸಲಾಗುತ್ತದೆ. ಪದವಿ ಗಳಿಸಿರುವವರು ಮಾತ್ರವಲ್ಲದೆ, ಸರಿಯಾದ ವಿದ್ಯಾರ್ಹತೆ ಹಾಗೂ ಉದ್ಯೋಗವಿಲ್ಲದವರು ಸಹ ಇಲ್ಲಿ ತರಬೇತಿ ಹೊಂದಿದ ನಂತರ ಉತ್ತಮ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಅದೆಷ್ಟೋ ಮಹಿಳೆಯರು ಬೆಂಗಳೂರು ಮೆಟ್ರೋ, ಹೈಕೋರ್ಟ್‌ ಸೇರಿದಂತೆ ನಾನಾ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಇನ್ನೂ ಹಲವರು ಸ್ವಂತ ಉದ್ಯಮ ನಡೆಸುತ್ತಿದ್ದಾರೆ.

mahila-wrk

ಇನ್ನು ಈ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಬಡ ಹೆಣ್ಣುಮಕ್ಕಳಿಗೆ (ಹೊಲಿಗೆ, ಕಸೂತಿ ಮತ್ತು ಬ್ಯೂಟೀಷಿಯನ್‌ ತರಗತಿಗಳಿಗೆ ಪ್ರತಿದಿನ ತಪ್ಪದೇ ಹಾಜರಾಗುವ ಶಿಕ್ಷಣಾರ್ಥಿಗಳಿಗೆ) ಮಾಸಿಕ ವಿದ್ಯಾರ್ಥಿ ವೇತನವನ್ನು ಸಹಾ ನೀಡಲಾಗುತ್ತದೆ. ಟೈಲರಿಂಗ್ ತರಬೇತಿ ಪಡೆದ ಗ್ರಾಮೀಣ ಬಡ ಹೆಣ್ಣುಮಕ್ಕಳಿಗೆ ಅತ್ಯಂತ ಕನಿಷ್ಠ ದರದಲ್ಲಿ (ಹೊಲಿಗೆ ಯಂತ್ರದ ಶೇ.50ರಷ್ಟು ಹಣವನ್ನು ಬ್ಯಾಂಕ್‌ಸಾಲದ ರೂಪದಲ್ಲಿ ನೀಡಲಾಗುತ್ತದೆ ಅಥವಾ ಫಲಾನುಭವಿಗಳೇ ಹಣವನ್ನು ನೀಡಿ ಪಡೆದುಕೊಳ್ಳಬಹುದು) ಹೊಲಿಗೆ ಯಂತ್ರವನ್ನು ಸಂಸ್ಥೆಯ ವತಿಯಿಂದ ನೀಡಲಾಗುತ್ತದೆ. ಪ್ರತಿದಿನ ಮುಂಜಾನೆ 9.30 ರಿಂದ ಸಂಜೆ 4ರವರೆಗೆ ನಡೆಯುವ ವಿವಿಧ ತರಗತಿಗಳಲ್ಲಿ ಸದ್ಯ ಅಂದಾಜು ನೂರಕ್ಕೂ ಹೆಚ್ಚಿನ ವನಿತೆಯರು ತರಬೇತಿ ಪಡೆಯುತ್ತಿದ್ದಾರೆ.

“ನಮ್ಮ ಸುತ್ತಮುತ್ತಲಿನ ಗ್ರಾಮೀಣ ಹೆಣ್ಣುಮಕ್ಕಳು ಧೈರ್ಯವಾಗಿ ಬದುಕನ್ನು ಎದುರಿಸುವಂತಾಗಬೇಕು. ಪ್ರತಿಯೊಬ್ಬರೂ ಆರ್ಥಿಕ, ಸಾಮಾಜಿಕವಾಗಿ ಉನ್ನತಿ ಹೊಂದಬೇಕೆನ್ನುವುದೇ ಸೀತಾರಾಮ್ ಜಿಂದಾಲ್‌ರ ಉದ್ದೇಶವಾಗಿದ್ದು, ಅದಕ್ಕಾಗಿಯೇ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಯು ಸಂಪೂರ್ಣವಾಗಿ `ಜಿಂದಾಲ್ ಫೌಂಡೇಶನ್‌’ ಪೋಷಣೆಯಲ್ಲೇ ನಡೆಯುತ್ತಿದೆಯೇ ಹೊರತು ಸರ್ಕಾರದಿಂದಾಗಲಿ, ಇತರೆ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಂದ ಯಾವ ಬಗೆಯ ಧನ ಸಹಾಯ ಅಥವಾ ಇನ್ನಾವುದೇ ಸಹಾಯವನ್ನೂ ಪಡೆಯುತ್ತಿಲ್ಲ.

mahila2

“ಇನ್ನು ಮುಂದೆ ಸಹ ಮಹಿಳೆಯರಿಗಾಗಿ ಹಾರ್ಡ್‌ವೇರ್‌ ಹಾಗೂ ನೆಟ್‌ ವರ್ಕಿಂಗ್‌ ತರಬೇತಿ ಪ್ರಾರಂಭಿಸಬೇಕು ಎನ್ನುವ ಉದ್ದೇಶವಿದೆ. ಅದರೊಡನೆಯೇ ಇನ್ನೂ ಅನೇಕ ವೃತ್ತಿಯಾಧಾರಿತ ತರಬೇತಿಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇದೆಲ್ಲಕ್ಕೂ ಜಿಂದಾಲ್‌ರ ಪೂರ್ಣ ಸಹಕಾರವಿದೆ. ಮಹಿಳೆಯರ ಉನ್ನತಿ ಹಾಗೂ ಪ್ರಗತಿಯೇ ನಮ್ಮ ಸಂಸ್ಥೆಯ ಧ್ಯೇಯವಾಗಿದೆ,” ಎನ್ನುತ್ತಾರೆ ಸುಮಾ.

ಸಂಸ್ಥೆ ಗ್ರಾಮೀಣ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗಾಗಿ ಈ ಕೆಳಕಂಡ ತರಬೇತಿಗಳನ್ನು ನೀಡುತ್ತದೆ. (ಸಂಪೂರ್ಣ ಉಚಿತ).

mahila3

  1. ಹೊಲಿಗೆ ತರಬೇತಿ – 1 ವರ್ಷ- ಜನವರಿ- ಬೆಳಗ್ಗೆ 9.30 ರಿಂದ 12.00ರವರೆಗೆ ಮಧ್ಯಾಹ್ನ 1.00 ರಿಂದ 4.00ರವರೆಗೆ – 10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ.
  2. ಹೊಲಿಗೆ ತರಬೇತಿ – 6 ತಿಂಗಳು ಫೆಬ್ರವರಿ, ಆಗಸ್ಟ್ – ಬೆಳಗ್ಗೆ 9.30  ರಿಂದ 12.00ರವರೆಗೆ ಮಧ್ಯಾಹ್ನ 1.00 ರಿಂದ 4.00ರವರೆಗೆ – 10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ.
  3. ಕಸೂತಿ (ಎಂಬ್ರಾಯಿಡರಿ) ತರಬೇತಿ -6 ತಿಂಗಳು- ಫೆಬ್ರವರಿ, ಆಗಸ್ಟ್ – ಮಧ್ಯಾಹ್ನ 1.00 ರಿಂದ 3.00ರವರೆಗೆ – 10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ.
  4. ಅಪೆರಲ್ ಡಿಸೈನಿಂಗ್‌ ಮತ್ತು ಫ್ಯಾಷನ್‌ ಟೆಕ್ನಾಲಜಿ – 6 ತಿಂಗಳು -ಜನವರಿ, ಜುಲೈ – ಬೆಳಗ್ಗೆ 9.30 ರಿಂದ 12.00ರವರೆಗೆ ಮಧ್ಯಾಹ್ನ 1.00 ರಿಂದ 4.30ರವರೆಗೆ – 10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ.
  5. ಬೆರಳಚ್ಚು ವಿಭಾಗ – 1 ವರ್ಷ – ಜೂನ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿ ವಾರ್ಷಿಕ ಪರೀಕ್ಷೆ ನಡೆಸಲಾಗುವುದು. (10 ತಿಂಗಳ ಹಾಜರಾತಿ ಕಡ್ಡಾಯ) ಬೆಳಗ್ಗೆ 9.30 ರಿಂದ 12.00ರವರೆಗೆ, ಮಧ್ಯಾಹ್ನ 1.00 ರಿಂದ 4.30ರವರೆಗೆ 10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ.
  6. ಬ್ಯೂಟೀಷಿಯನ್‌ ತರಬೇತಿ (ಸೌಂದರ್ಯ ವರ್ಧಕ ತರಬೇತಿ) – 3 ತಿಂಗಳು – ಫೆಬ್ರವರಿ, ಮೇ, ಆಗಸ್ಟ್, ನವೆಂಬರ್‌ಬೆಳಗ್ಗೆ 9.30 ರಿಂದ 12.00ರವರೆಗೆ ಮಧ್ಯಾಹ್ನ 1.00 ರಿಂದ 4.00ರವರೆಗೆ -10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ.
  7. ಸುಲಭ ಇಂಗ್ಲಿಷ್‌ ಕಲಿಕೆ – 3 ತಿಂಗಳು – ಜನವರಿ, ಏಪ್ರಿಲ್‌, ಜುಲೈ, ಅಕ್ಟೋಬರ್‌ಬೆಳಗ್ಗೆ 9.30 ರಿಂದ 12.00ರವರೆಗೆ -10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ.
  8. ಡಿ.ಟಿ.ಪಿ. – 3 ತಿಂಗಳು – ಜನವರಿ, ಏಪ್ರಿಲ್‌, ಜುಲೈ, ಅಕ್ಟೋಬರ್‌ ಬೆಳಗ್ಗೆ 9.30 ರಿಂದ 12.00ರವರೆಗೆ ಮಧ್ಯಾಹ್ನ 1.00 ರಿಂದ 4.00ರವರೆಗೆ ಪಿ.ಯು.ಸಿ ಮತ್ತು ಬೇಸಿಕ್‌ ಕಂಪ್ಯೂಟರ್‌.
  9. ಗಣಕಯಂತ್ರ ವಿಭಾಗ (ಕಂಪ್ಯೂಟರ್‌ ವಿಭಾಗ)- 3 ತಿಂಗಳು – ಜನವರಿ, ಏಪ್ರಿಲ್‌, ಜುಲೈ, ಅಕ್ಟೋಬರ್‌ ಬೆಳಗ್ಗೆ 9.30 ರಿಂದ 12.00ರವರೆಗೆ, ಮಧ್ಯಾಹ್ನ 1.00 ರಿಂದ 4.00ರವರೆಗೆ -10ನೇ ತರಗತಿ ಉತ್ತೀರ್ಣ.
  10. ಟ್ಯಾಲಿ -3 ತಿಂಗಳು – ಜನವರಿ, ಏಪ್ರಿಲ್‌, ಜುಲೈ, ಅಕ್ಟೋಬರ್‌ಬೆಳಗ್ಗೆ  11.00 ರಿಂದ 12.30ರವರೆಗೆ, ಮಧ್ಯಾಹ್ನ 3.00 ರಿಂದ 3.30ರವರೆಗೆ – ಪಿ.ಯು.ಸಿ ಮತ್ತು ಬಿ.ಕಾಂ. ಪದವಿ. ಹೆಚ್ಚಿನ ಮಾಹಿತಿ ಹಾಗೂ ತರಬೇತಿಗಾಗಿ ಸಂಪರ್ಕಿಸಿ : ಮಹಿಳಾ ಕಲಾ ಮತ್ತು ಕರಕುಶಲ ಧರ್ಮಾರ್ಥ ಸಂಸ್ಥೆ, ಜಿಂದಾಲ್ ‌ಪಬ್ಲಿಕ್‌ ಶಾಲೆಯ ಹತ್ತಿರ, ಜಿಂದಾಲ್ ನಗರ, ಬೆಂಗಳೂರು-73.

– ಕೆ. ಸುಮಾ, 8123978364/7795589291 (ಬೆಳಗ್ಗೆ 9 ರಿಂದ ಸಂಜೆ 4.30ರ ಒಳಗೆ ಕರೆ ಮಾಡಿ)

ರಾಘವೇಂದ್ರ ಅಡಿಗ ಎಚ್ಚೆನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ