ಕಾಲ ಕಳೆದಂತೆ ಬಾಲಿವುಡ್‌ನಲ್ಲೂ ಬೇಕಾದಷ್ಟು ಬದಲಾವಣೆಗಳಾಗಿವೆ. ಈಗ ಹಿರಿತೆರೆ, ಕಿರುತೆರೆ ಸ್ಟಾರ್‌ಗಳು ಸರಿಸಮಾನರು. ಯಾರೂ ಯಾರಿಗೂ ಕಡಿಮೆಯಲ್ಲ. ಟಿವಿ ಕಲಾವಿದರು ಹಿರಿತೆರೆಯಲ್ಲಿ ಬೇಕಾದಷ್ಟು ಮಿಂಚುತ್ತಿದ್ದಾರೆ. ಇವರಲ್ಲಿ ಒಬ್ಬಳು ಅಂಕಿತಾ ಲೋಖಂಡೆ. ಕಳೆದ 6 ವರ್ಷಗಳಿಂದ ಸತತ ಪ್ರಸಾರವಾಗುತ್ತಿದ್ದ `ಪವಿತ್ರ ರಿಶ್ತಾ’ ಧಾರಾವಾಹಿ ಮುಗಿದಾಗ ಯಶಸ್ಸಿನ ತುದಿಯೇರಿದ್ದ ಅಂಕಿತಾ, ಹಿಂದಿರುಗಿ ನೋಡದೆ ಹಿರಿತೆರೆಗೆ ನಡೆದಿದ್ದಳು. ಕಳೆದ ವರ್ಷ ಬಿಡುಗಡೆಗೊಂಡ `ಮಣಿಕರ್ಣಿಕಾ’ ಚಿತ್ರದಲ್ಲಿ ಈಕೆ ಝಾನ್ಸಿ ರಾಣಿಯ ಪಾತ್ರ ನಿರ್ವಹಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಳು. ಅದಾದ ಮೇಲೆ ರಿತೇಶ್‌ ದೇಶ್‌ಮುಖ್‌ ಜೊತೆ `ಭಾಗಿ-3′ ಚಿತ್ರದ ನಾಯಕಿಯಾಗಿ ಮತ್ತೆ ಯಶಸ್ಸು ಪಡೆದಳು.

ಒಂದು ಸಣ್ಣ ಊರಿನಿಂದ ಮುಂಬೈ ಮಹಾನಗರ ಪ್ರವೇಶಿಸಿ ಟಿವಿ ಸ್ಟಾರ್‌ ಆಗಿ ಯಶಸ್ಸು ಪಡೆಯುವುದು ಸುಲಭವಲ್ಲ….

`ಪವಿತ್ರ ರಿಶ್ತಾನಂತರ ಸ್ಟಾರ್ಆದ ನೀನು ಎಡವಿದ್ದೆಲ್ಲಿ?

ನನಗಂತೂ ಎಲ್ಲೂ ಎಡವಟ್ಟು ಕಾಣುತ್ತಿಲ್ಲ……ಆದರೆ 2014ರಲ್ಲಿ `ಪವಿತ್ರ ರಿಶ್ತಾ’ ಮುಗಿಯಿತು.

ಅದಾದ ಮೇಲೆ ನೀನು ಟಿವಿಯಲ್ಲಿ ಮಿಂಚಲಿಲ್ಲ?

ನನಗೆ ಬಂದ ಆಫರ್‌ಗಳನ್ನು ನಾನೇ ತಿರಸ್ಕರಿಸಿದೆ, ಅವು ನನ್ನ ಲೆವೆಲ್ ‌ಆಗಿರಲಿಲ್ಲ. ಸತತ 6 ವರ್ಷಗಳ ದುಡಿಮೆಯಿಂದ ಸುಸ್ತಾಗಿದ್ದ ನಾನು ವಿಶ್ರಾಂತಿ ಬಯಸುತ್ತಿದ್ದೆ. 1 ವರ್ಷ ಲಾಂಗ್‌ ಲೀವ್‌, ಅದಾದ ನಂತರ ಬಂದ ಹಲವು ಆಫರ್ಸ್ ಬಿಟ್ಟೆ. ನಂತರ ಸಿನಿಮಾ ಸೇರಲು ನಿರ್ಧರಿಸಿದೆ. ಸಿನಿಮಾಗೆ ಡೇಟ್ಸ್ ಕೊಡುವಾಗ ಟಿವಿ ಡೇಟ್ಸ್ ಕ್ಲಾಶ್‌ಆಗುತ್ತಿತ್ತು. ಆದರ್ಶ ಸೊಸೆ ಪಾತ್ರ ಸಾಕೆನಿಸಿ ಸಿನಿಮಾದಲ್ಲಿ ಗ್ಲಾಮರ್‌ ಪಾತ್ರ ಹುಡುಕಿದೆ, ಹೀಗಾಗಿ ಬ್ರೇಕ್‌ನಿಂದ ಗ್ಯಾಪ್‌ ಆಯ್ತು. ನನಗಿಲ್ಲಿ ಯಾರೂ ಗಾಡ್‌ಫಾದರ್‌ ಇಲ್ಲ!

ನೀನು ಇಂದೋರ್ನಂಥ ಸಾಧಾರಣ ಊರಿಂದ ಬಂದು ಮುಂಬೈನಲ್ಲಿ ಸ್ಥಾನ ಭದ್ರಪಡಿಸಿಕೊಂಡದ್ದು ಸಾಧಾರಣ ವಿಷಯವಲ್ಲ, ಮಟ್ಟ ಏರಲು ನೀನು ಪಟ್ಟ ಸಂಘರ್ಷಗಳೆಷ್ಟು?

ನನಗೆ ಅಂಥ ದೊಡ್ಡ ಸಂಘರ್ಷ ಏನೂ ಇರಲಿಲ್ಲ. ನಾನು ಮೊದಲಿನಿಂದ ಮಹಾ ಕಾನ್ಛಿಡೆಂಟ್‌ ಹುಡುಗಿ. ಮುಂದೆ ಹೇಗೆ ಹೆಜ್ಜೆ ಇಡಬೇಕೆಂದು ಚೆನ್ನಾಗಿ ಗೊತ್ತು. ಬಹಳ ಹೊಸ ಧಾರಾವಾಹಿಗಳ ಆಫರ್‌ ಏನೋ ಬಂತು, ಎಲ್ಲದರಲ್ಲೂ ಅದೇ ಆದರ್ಶ ಸೊಸೆ ಪಾತ್ರ….. ಸಾಕಾಗಿ ಹೋಗಿತ್ತು. ಉತ್ತಮ ಪಾತ್ರ ಹುಡುಕುತ್ತಿದ್ದೆ. ಜನರಿಗೆ ನನ್ನ ವಿಚಾರ ಹುಚ್ಚುಚ್ಚು ಎನಿಸಬಹುದು. ಆದರೆ ನಾನು ಕಷ್ಟಪಡುತ್ತಿದ್ದೇನೆ ಎಂದೇನೂ ಅನಿಸಲಿಲ್ಲ. ಸಂಘರ್ಷ ಅಂತೂ ತೀರಾ ದೊಡ್ಡ ಪದವಾಯ್ತು. ನನ್ನ ಪಾಡಿಗೆ ನಾನು ಹಾಯಾಗಿಯೇ ಇದ್ದೇನೆ. ನಾನು ಇದುವರೆಗೂ ಜೀವನದಲ್ಲಿ ಎರಡೇ ಸಲ ಆಡಿಶನ್‌ ನೀಡಿರುವೆ. ನನಗೆ ಯಶಸ್ಸು ಒಂದೇ ಮುಖ್ಯ ಆಗಿರಲಿಲ್ಲ! ನಾನು ಬಯಸುವಂಥ ಪಾತ್ರಗಳಿಂದ ಸಿನಿಮಾದಲ್ಲಿ ಮುಂದುರಿದೆ. ನನಗಾಗಿ ಇಷ್ಟೆಲ್ಲ ದುಡಿದಿರುವ ತಾಯಿತಂದೆಯರ ಸಂಪೂರ್ಣ ಜವಾಬ್ದಾರಿ ನಾನೇ ಹೊರಬಯಸಿದೆ.

ankita-lokhnde

ಕೆಲವು ಟಿವಿ ಕಲಾವಿದರು ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ. ಹೀಗೆ ಏಕೆ ಆಗುತ್ತದೆ?

ನಿರಾಶೆ ಆ ಮಟ್ಟಕ್ಕೆ ಎಳೆದೊಯ್ಯುತ್ತದೇನೋ…… ಅದಕ್ಕಿಂತ ಹೆಚ್ಚಿಗೆ ನನಗೆ ಗೊತ್ತಿಲ್ಲ. ಅಂಥವರನ್ನು ನಾನು ಭೇಟಿ ಸಹ ಮಾಡಿಲ್ಲ. ಹೀಗಾಗಿ ಅಂಥವರ ಬಗ್ಗೆ ನೇರವಾಗಿ ಏನು ಹೇಳಲಿ? ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯರಿಗೆ ಆತ್ಮವಿಶ್ವಾಸ ಇರೋದಿಲ್ಲ. ಅವರ ಕುಟುಂಬದವರೂ ಸಪೋರ್ಟ್‌ ಮಾಡಿರಲ್ಲ. ನಾನೂ ಹತಾಶಳಾಗಿದ್ದೆ, ಆಗ ನನ್ನ ಕುಟುಂಬದವರು ನನ್ನ ಕೈ ಬಿಡಲಿಲ್ಲ. ನಾನು ಜಾಯಿಂಟ್‌ ಫ್ಯಾಮಿಲಿಗೆ ಸೇರಿದವಳು. ಅಣ್ಣ, ತಂಗಿ, ಅಕ್ಕ, ತಮ್ಮ, ಅಜ್ಜಿ, ತಾತಾ….. ಎಲ್ಲ ಇದ್ದರೇನೇ ಚೆಂದ!

`ಮಣಿಕರ್ಣಿಕಾಚಿತ್ರಕ್ಕೂ ಮೊದಲು ನಿನಗೆ ಭನ್ಸಾಲಿಯವರ `ಪದ್ಮಾವತಿತರಹದ 2-3 ಚಿತ್ರಗಳ ಆಫರ್ಬಂದಿದ್ದರೂ ನೀನು ತಿರಸ್ಕರಿಸಿದೆ. ಅದು ತಪ್ಪು ಅಂತ ಈಗ ಅನಿಸುತ್ತಿದೆಯೇ?

ಆ ಚಿತ್ರಗಳನ್ನು ಬಿಟ್ಟಿದ್ದು ಸರಿಯೋ ತಪ್ಪೋ ಗೊತ್ತಿಲ್ಲ. ಭನ್ಸಾಲಿಯವರ ಚಿತ್ರ ಮಿಸ್‌ ಮಾಡಿದ್ದರ ಬಗ್ಗೆ ಖೇದವಿದೆ. ಆದರೆ ಆಗ ನನ್ನ ಮನಸ್ಥಿತಿ ಏನೇನೂ ಚೆನ್ನಾಗಿರಲಿಲ್ಲ. ಮುಂದೆ ನಾನು ಯಾವ ಸ್ಪಷ್ಟ ನಿರ್ಧಾರ ತಳೆಯಬೇಕೋ ಗೊತ್ತಾಗಲಿಲ್ಲ. ಈ ಮಧ್ಯೆ ಏನೇನೋ ಆಗಿಹೋಯಿತು. ಮುಂದೆ ಅವಕಾಶ ಸಿಕ್ಕಾಗ ಖಂಡಿತಾ ಬಿಡಲಾರೆ.

`ಮಣಿಕರ್ಣಿಕಾಚಿತ್ರದಿಂದ ಬಹಳ ಹೊಗಳಿಕೆ ಸಿಕ್ಕಿತು. ಆದರೆ ಕಂಗನಾ ಅದರ ನಾಯಕಿ, ನೀನು ತುಸು ಸೈಡ್ಗೆ ಸರಿಯುತ್ತಿ ಎಂದು ಒಪ್ಪಿಕೊಳ್ಳುವಾಗ ಗೊತ್ತಿರಲಿಲ್ಲವೇ?

ನನ್ನ ಬಗ್ಗೆ ನನಗೆ ಬಹಳ ಭರವಸೆ ಇದೆ. 5 ನಿಮಿಷ ನಾನು ಬೆಳ್ಳಿತೆರೆ ಮೇಲೆ ಕಾಣಿಸಿದರೂ ನನ್ನದೇ ಮೋಡಿ ಉಳಿಸಬಲ್ಲೇ ಎಂಬ ಆತ್ಮವಿಶ್ವಾಸ ನನಗಿದೆ. ನನ್ನ ಅಭಿಮಾನಿಗಳ ಸಪೋರ್ಟ್‌ ಪಡೆಯಲು ನನ್ನ ಒಂದು ಮುಗುಳ್ನಗುವೇ ಸಾಕು. ನೀವು `ಮಣಿಕರ್ಣಿಕಾ’ ಚಿತ್ರದ ಟ್ರೇಲರ್‌ನೋಡಿರಬಹುದು. ಅದರಲ್ಲಿ ನಾನೆಲ್ಲಿದ್ದೆ? ಆದರೆ ಚಿತ್ರದ ಪ್ರತಿ ದೃಶ್ಯದಲ್ಲೂ ಖಂಡಿತಾ ಇದ್ದೆ. `ಪವಿತ್ರ ರಿಶ್ತಾ’ದಿಂದ ನನ್ನದೇ ಆದ ಅಭಿಮಾನಿ ಬಳಗ ಉಳಿಸಿಕೊಂಡಿದ್ದೇನೆ. ಅವರ ಎದೆಯಲ್ಲಿ ನನಗೆ ವಿಶಿಷ್ಟ ಸ್ಥಾನವಿದೆ.

ನೀನು `ಭಾಗಿ-3′ ಚಿತ್ರ ಒಪ್ಪಿಕೊಂಡಿದ್ದೇಕೆ?

ಬಹಳ ದಿನಗಳಿಂದ ನಾನು ಒಂದು ಕಮರ್ಷಿಯಲ್ ಚಿತ್ರದಲ್ಲಿ ನಟಿಸಬೇಕೆಂದಿದ್ದೆ. ನಾಡಿಯಾಲಾಲಾ ನಿರ್ಮಿಸಿರುವ ಈ ಚಿತ್ರ ಪಕ್ಕಾ ಕಮರ್ಷಿಯಲ್. ಒಳ್ಳೆಯ ಹೆಸರು ಬಂತೆಂದು ನಿಮಗೆ ಗೊತ್ತೇ ಇದೆ.

ಆದರೆ ದೊಡ್ಡ ಪ್ರೊಡಕ್ಷನ್ಅಥವಾ ಬ್ಯಾನರ್ಚಿತ್ರ ನೀನು ಒಪ್ಪುತ್ತಿಲ್ಲ. ಹಾಗಿದ್ದಿದ್ದರೆ ಭನ್ಸಾಲಿಯವವರ ಚಿತ್ರ ನಿರಾಕರಿಸುತ್ತಿರಲಿಲ್ಲ….. ಅಲ್ಲವೇ?

ಸರಿಯಾಗಿ ಹೇಳಿದ್ರಿ, ಕಮರ್ಷಿಯಲ್ ಚಿತ್ರ ಆಗಿದ್ದರೆ ಖಂಡಿತಾ ಒಪ್ಪುತ್ತಿದ್ದೆ. ಭನ್ಸಾಲಿಯವರ ಚಿತ್ರ ಕೈ ಬಿಡುವ ಮಾತೇ ಇರಲಿಲ್ಲ. `ಪದ್ಮಾವತಿ’ ತಯಾರಾಗುವಾಗ ಅರಿಯದೆ ನನ್ನಿಂದ ಕೆಲವು ತಪ್ಪುಗಳಾದವು. ಆ ಅವಕಾಶ ಬಳಸಿಕೊಳ್ಳದೆ ತಪ್ಪು ಮಾಡಿಬಿಟ್ಟೆ! ಕಮರ್ಷಿಯಲ್ ಚಿತ್ರ ಎಂಬ ಒಂದೇ ಕಾರಣಕ್ಕೆ  `ಭಾಗಿ-3′ ಒಪ್ಪಿದ್ದೆ.

`ಭಾಗಿ-3′ ಚಿತ್ರದಲ್ಲಿನ ನಿನ್ನ ಪಾತ್ರದ ಕುರಿತು…..

ಈ ಚಿತ್ರದಲ್ಲಿ ನಾನು ರುಚಿ ಪಾತ್ರದಲ್ಲಿ ಮಿಂಚಿದ್ದೇನೆ, ಮಹಾ ತರಲೆ ಹುಡುಗಿ ಪಾತ್ರ. ಬ್ರಾಂಡ್‌ ಕಾನ್ಶಿಯಸ್‌ ಆದ ಅವಳು ಕೇವಲ ಬ್ರಾಂಡೆಡ್‌ ಬಟ್ಟೆ ಮಾತ್ರ ಧರಿಸುತ್ತಾಳೆ. ಸಿಸ್ಟೆಮ್ಯಾಟಿಕ್‌ ಆಗಿ ಎಲ್ಲರ ಜವಾಬ್ದಾರಿ ನಿರ್ವಹಿಸುತ್ತಾಳೆ. ಕೋಪಿಷ್ಟೆ, ಸಿಡುಕಿಯಾದರೂ ತನ್ನ ಗಂಡ, ತಂಗಿಯರನ್ನು ಗಮನಿಸಿಕೊಳ್ಳುತ್ತಾಳೆ. ನಾನು, ಟೈಗರ್‌ಶ್ರಾಫ್‌, ಶ್ರದ್ಧಾ, ರಿತೇಶ್‌ ಎಲ್ಲರೂ ಈ ಚಿತ್ರವನ್ನು ಬಹಳ ಎಂಜಾಯ್‌ ಮಾಡುತ್ತಾ ನಟಿಸಿದ್ದೆ.

ಚಿತ್ರದಲ್ಲಿ ಶ್ರದ್ಧಾಳ ಅಕ್ಕನ ಪಾತ್ರ ಒಪ್ಪಿಕೊಳ್ಳಲು ನಿನ್ನದೇ ಕಾರಣಗಳಿತ್ತೇ?

ನನಗೊಂದು ಉತ್ತಮ ಪಾತ್ರ ಸಿಕ್ಕಿತು, ನಿರ್ವಹಿಸಿದೆ. ಇದರಲ್ಲಿ ಶ್ರದ್ಧಾಳ ಅಥವಾ ಇನ್ನಾರ ಅಕ್ಕನ ಪಾತ್ರವಾಗಿದ್ದರೂ ಅಷ್ಟೆ….. ಇದರಲ್ಲಿ ನಾನು ರುಚಿ, ರಿತೇಶ್‌ಗೆ ನನ್ನ ಗಂಡನ ಪಾತ್ರ ಅಂತ ಗೊತ್ತಿತ್ತು. ಇದರಲ್ಲಿ ನಾಯಕಿಯ ಅಕ್ಕನಾದೆ ಎಂಬ ಕೀಳರಿಮೆ ನನಗೆ ಖಂಡಿತಾ ಇಲ್ಲ.

ಮುಂದೆ ಎಂಥ ಪಾತ್ರಗಳನ್ನು ನಿರ್ವಹಿಸುತ್ತಿಯಾ?

ಮುಂದೆ ನಾನು ಎಲ್ಲಾ ತರಹದ ಪಾತ್ರಗಳನ್ನೂ ನಿಭಾಯಿಸುವೆ. ನಟನೆ ಮುಖ್ಯವೇ ಹೊರತು ನಾಯಕಿ ಪಟ್ಟವಲ್ಲ. ರೊಮಾನ್ಸ್, ಗ್ಲಾಮರ್‌ ಒಂದೇ ನಟನೆಯಲ್ಲ. ಗ್ಲಾಮರ್‌ ಹೆಸರಲ್ಲಿ ಬಿಚ್ಚಮ್ಮನಾಗಲು ನಾನು ಖಂಡಿತಾ ಸಿದ್ಧಳಿಲ್ಲ! ಕಥೆಗೆ ಅನಿವಾರ್ಯವಾದರೆ ಸ್ವಿಮಿಂಗ್‌ ಕಾಸ್ಟ್ಯೂಮ್ ಧರಿಸಬೇಕೇ ಹೊರತು ಕನಸಿನ ಹಾಡಿಗಾಗಿ ಮಳೆಯಲ್ಲಿ ನೆನೆಯಲಾರೆ.

ರೀಲ್ ರೊಮಾನ್ಸ್ ಸರಿ, ನಿನ್ನ ರಿಯಲ್ ರೊಮಾನ್ಸ್ ಬಗ್ಗೆ ಹೇಳಬಾರದೇ….?

ಹಾಗೇನಿಲ್ಲ…. ಇದರಲ್ಲಿ ನನಗೆ ಉತ್ತಮ ಅನುಭವ ಸಿಕ್ಕಿದೆ. ಸುಶಾಂತ್‌ಗೆ ಹೇಗೋ ಏನೋ ನನಗೆ ಗೊತ್ತಿಲ್ಲ…… (ನಗು)

ಸುಶಾಂತ್ಸಿಂಗ್ನಂಥ ಹ್ಯಾಂಡಸಮ್ ಹೀರೋ ಜೊತೆ ಬ್ರೇಕ್ಆಗಿಹೋಯ್ತಲ್ಲ, ಬಗ್ಗೆ ಏನಾದರೂ…..?

ಆಗಿ ಹೋಗಿದ್ದರ ಬಗ್ಗೆ ಈಗೇಕೆ ಮಾತು…… ಅವರವರ ಭಾವಕ್ಕೆ ಭಕುತಿಗೆ ಅಂತ ಗೊತ್ತೇ ಇದೆ.

ವಿಕ್ಕಿ ಜೈನ್ಜೊತೆಯೂ ಅಫೇರ್ನಡೀತಿದೆಯಂತೆ…..?

ನಾನು ಪರ್ಸನಲ್ ಲೈಫ್‌ ಬಗ್ಗೆ ಮಾತನಾಡಲು ಬಯಸುವುದಿಲ್ಲ!

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ