ಮನುಷ್ಯನ ಜೀವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನವರೆಗೂ 16 ಸಂಸ್ಕಾರಗಳ ಬಗ್ಗೆ ಹೇಳಲಾಗುತ್ತದೆ. ಸಂಪ್ರದಾಯವಾದಿಗಳು ಶಾಸ್ತ್ರ ಸಮ್ಮತವಾಗಿ, ವಿಧಿವತ್ತಾಗಿ ಮದುವೆಯಾದರೆ ಮಾತ್ರ ದಾಂಪತ್ಯ ಯಾವುದೇ ಅಡ್ಡಿಯಿಲ್ಲದೆ ಮುನ್ನಡೆಯುತ್ತದೆ. ಇಲ್ಲದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ. ಅವರ ಪ್ರಕಾರ ಮದುವೆ ಮೋಕ್ಷ ಪ್ರಾಪ್ತಿಯ ಸಾಧನವಾಗಿದೆ. ದಾಂಪತ್ಯದ ಅಡಿಪಾಯವನ್ನು ಧಾರ್ಮಿಕ ಮೂಢನಂಬಿಕೆಗಳ ಆಧಾರದ ಮೇವೆ ಇಡಬೇಕು. ಏಕೆಂದರೆ ಯಾವುದೇ ಅನಿಷ್ಟದ ಭಯದಿಂದ ರಕ್ಷಿಸಿಕೊಳ್ಳುವಂತಿರಬೇಕು. ಮೂಢನಂಬಿಕೆ ಅಂದರೆ ಆಲೋಚಿಸದೆ ನಂಬಿದ್ದು ಅಥವಾ ಅಸಂಬದ್ಧ ವಿಷಯಗಳನ್ನು ಪಾರಂಪರಿಕ ಪದ್ಧತಿಗಳ ಹೆಸರಿನಲ್ಲಿ ಒಪ್ಪಿ ಸ್ವೀಕರಿಸಿದ್ದಾಗಿದೆ. ಅಜ್ಞಾನ, ಅವಿವೇಕ, ಮೂಢನಂಬಿಕೆಯಿಂದ ತುಂಬಿದ ನಂಬಿಕೆಗಳು ಅಲೌಕಿಕ ಶಕ್ತಿಗಳು ಕೋಪಗೊಳ್ಳುತ್ತವೆ ಎಂಬ ಭಯದಿಂದ ಸ್ವೀಕರಿಸಲ್ಪಟ್ಟಿವೆ. ಶತಮಾನಗಳಿಂದ ಜನರಿಂದ ಪೋಷಿಸಲ್ಪಟ್ಟ ಮೂಢನಂಬಿಕೆಗಳು ಮದುವೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.

ಎಲ್ಲಕ್ಕೂ ಮೊದಲು ಜ್ಯೋತಿಷಿಗಳು ವಧೂವರರ ಜಾತಕ ನೋಡುತ್ತಾರೆ ಹಾಗೂ ಅಷ್ಟಕೂಟ ಮಿಲನದ ಬಗ್ಗೆ, ಕುಜ ದೋಷ ಇತ್ಯಾದಿ ಯೋಗಗಳನ್ನು ವಿಶ್ಲೇಷಿಸಿ ಆ ವ್ಯಕ್ತಿಗೆ ಮದುವೆ ಮಾಡುವುದು ಒಳ್ಳೆಯದೋ ಅಲ್ಲವೋ ಎಂಬುದರ ಬಗ್ಗೆ ಹೇಳುತ್ತಾರೆ. ಅಷ್ಟಕೂಟಗಳಲ್ಲಿ ನಕ್ಷತ್ರ, ಶೀಲಕೂಟ, ಗಣ ಕೂಟ, ನಾಡಿ ಕೂಟ, ವರ್ಣ ಕೂಟ, ಯೋನಿ ಕೂಟ, ಗೃಹ ಕೂಟ ಇತ್ಯಾದಿ ಹೊಂದುತ್ತಿವೆಯೇ ಎಂದು ನೋಡಲಾಗುತ್ತದೆ. ಹೀಗೆಯೇ ಕುಜ ದೋಷದ ಬಗ್ಗೆಯೂ ಗಂಭೀರವಾಗಿ ವಿಚಾರ ಮಾಡಲಾಗುತ್ತದೆ.

ಮದುವೆಯಲ್ಲಿ ಕುಜನ ಮೂಲಕ ಅಮಂಗಳ

ಹಿಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಜ ಪ್ರಥಮ, ಚತುರ್ಥ, ಸಪ್ತಮಿ, ಅಷ್ಟಮಿ ಮತ್ತು ದ್ವಾದಶಿಗಳಲ್ಲಿರುವವರಿಗೆ ಕುಜ ದೋಷವೆದು ಹೇಳಲಾಗುತ್ತದೆ. ಯಾರಿಗಾದರೂ ಜಾತಕದಲ್ಲಿ  ಈ ಯೋಗವಿದ್ದರೆ ಅವರನ್ನು ಮಂಗಲಿ ಅಥವಾ ಕುಜದೋಷಿಗಳು ಎನ್ನಲಾಗುತ್ತದೆ. ವಧೂವರರಲ್ಲಿ ಯಾರಾದರೂ ಒಬ್ಬರ ಜಾತಕದಲ್ಲಿ ಕುಜದೋಷವಿದ್ದು, ಇನ್ನೊಬ್ಬರ ಜಾತಕದಲ್ಲಿ ಕುಜದೋಷ ಇಲ್ಲದಿದ್ದರೆ ಅಂತಹ ಪರಿಸ್ಥಿತಿಯಲ್ಲಿ ವೈವಾಹಿಕ ಜೀವನಕ್ಕೆ ಅನಿಷ್ಟ ಎಂದು ಹೇಳಲಾಗುತ್ತದೆ. ಜ್ಯೋತಿಷಿ ಅವರಿಬ್ಬರ ವಿವಾಹ ನಡೆಯಕೂಡದು ಎನ್ನುತ್ತಾರೆ.

ಶುಭಾಶುಭದ ನಿಟ್ಟಿನಲ್ಲಿ

ಅನೇಕ ಬಾರಿ ಶುಭ ದಿನದ ಹೆಸರಿನಲ್ಲಿ ವ್ಯಕ್ತಿ ತಾನು ಬಹಳ ವ್ಯಸ್ತನಾಗಿರುವ ದಿನಗಳ ನಡುವೆಯೇ ಮದುವೆ ಮಾಡಿಕೊಳ್ಳ ಬೇಕಾಗುತ್ತದೆ. ಶುಭ ಮುಹೂರ್ತವನ್ನು ಕೈಯಾರೆ ಕಳೆದುಕೊಳ್ಳುವುದು ಅನಿಷ್ಠಕಾರಿ ಎನ್ನಲಾಗುತ್ತದೆ. ಇಡೀ ರಾತ್ರಿ ವೈಭವದೊಂದಿಗೆ ಮದುವೆ ಶಾಸ್ತ್ರಗಳು ನಡೆಯುತ್ತಿರುತ್ತವೆ. ವಧೂವರರಿಗೆ ಏನಾದರೂ ಕಾಯಿಲೆ ಇದ್ದರೆ ಅಥವಾ ಏನಾದರೂ ಸಮಸ್ಯೆ ಇದ್ದರೆ ಆಗಲೂ ಈ ಶಾಸ್ತ್ರಗಳು ಹಾಗೂ ಶ್ಲೋಕಗಳನ್ನು ಸಂಪೂರ್ಣ ಶ್ರದ್ಧೆಯೊಂದಿಗೆ ಕೂತು ಮುಗಿಸಲಾಗುತ್ತದೆ.

ಪುರೋಹಿತರ ಉದ್ದೇಶವೇನೆಂದರೆ ಅವರಿಗೆ ಕುಳಿತಲ್ಲಿಯೇ ಹಣ ಬರುವ ವ್ಯವಸ್ಥೆಯಾಗಬೇಕು. ಮದುವೆಯನ್ನಂತೂ ಪ್ರತಿಯೊಬ್ಬರೂ ಮಾಡಿಕೊಳ್ಳುತ್ತಾರೆ. ಹೀಗಾಗಿ ಪುರೋಹಿತರಿಗೆ ಕ್ಲೈಂಟ್‌ಗಳ ಸಂಖ್ಯೆ ಎಂದೂ ಕಡಿಮೆಯಾಗುವುದಿಲ್ಲ. ದಾಂಪತ್ಯದ ಅಡಿಪಾಯವನ್ನು ಧಾರ್ಮಿಕ ಮೂಢನಂಬಿಕೆಗಳ ಮೇಲೆ ಇಡಲಾಗುತ್ತದೆ ಹಾಗೂ ದಂಪತಿಗಳು ಜೀವನಪರ್ಯಂತ ಈ ಗೊಡ್ಡು ಸಂಪ್ರದಾಯಗಳನ್ನು ಮತ್ತು ಧಾರ್ಮಿಕ ಕಂದಾಚಾರಗಳನ್ನು ಹೊತ್ತುಕೊಂಡು ಜೀವಿಸಬೇಕಾಗುತ್ತದೆ.

ವಿಚಿತ್ರವೆಂದರೆ ನಾವು 21ನೇ ಶತಮಾನದಲ್ಲಿ ಜೀವಿಸುತ್ತಿದ್ದರೂ ನಮ್ಮ ಆಲೋಚನೆ ಪುರಾತನದ್ದೇ ಆಗಿದೆ. ನಾವು ಜಾತಕಗಳನ್ನು ಹೊಂದಿಸುತ್ತೇವೆ. ಆದರೆ ಹುಡುಗ ಹುಡುಗಿಯರ ಗುಣಗಳು, ಶಿಕ್ಷಣ, ಯೋಗ್ಯತೆ, ಇಷ್ಟಾನಿಷ್ಟಗಳು, ಜೀವನದ ಉದ್ದೇಶಗಳು ಇತ್ಯಾದಿಗಳನ್ನು ಹೊಂದಿಸುವುದಿಲ್ಲ.

ಮದುವೆಗೆ ಸಂಬಂಧಿಸಿದ ಪ್ರಮುಖ ಮೂಢನಂಬಿಕೆಗಳು

ನಿಶ್ಚಿತಾರ್ಥದ ನಂತರ ವಧು ಯಾವಾಗಲೂ ತನ್ನೊಂದಿಗೆ ಚಾಕು ಅಥವಾ ಹರಿತವಾದ ಕಬ್ಬಿಣದ ವಸ್ತು ಇಟ್ಟುಕೊಂಡಿರಬೇಕು.

ಮೊದಲ ರಾತ್ರಿ ವಧುವಿನ ಕೈಗಳು ಮತ್ತು ಕಾಲುಗಳಲ್ಲಿ ಮೆಹೆಂದಿ ಹಾಕುವ ಪರಂಪರೆ ಬಹಳ ಪುರಾತನಾದದ್ದು. ಇದರಲ್ಲಿ ಬಹಳಷ್ಟು ಮೂಢನಂಬಿಕೆ ಅಡಕವಾಗಿದೆ.

ಭಾರತದ ಕೆಲವು ಭಾಗಗಳಲ್ಲಿ, ಮದುವೆಯ ದಿನ ಮಳೆ ಬಂದರೆ ಸುಖ ಸೌಭಾಗ್ಯವನ್ನು ತರುತ್ತದೆ ಎಂಬ ನಂಬಿಕೆ ಇದೆ.

ತನ್ನ ಮದುವೆ ಡ್ರೆಸ್‌ನ್ನು ತಾನೇ ಹೊಲಿದುಕೊಳ್ಳುವುದು ವಧುವಿಗೆ ಅಶುಭ ತರುತ್ತದೆ.

ಮದುವೆಗೆ ಮುಂಚೆ ಮತ್ತು ನಂತರ ಹಾಲು ಉಕ್ಕಿ ಚೆಲ್ಲುವುದು ಏನೋ ಅನಿಷ್ಠ ಉಂಟಾಗುವ ಲಕ್ಷಣವಾಗಿದೆ.

ಮದುವೆಯ ಇನ್ನೊಂದು ಪ್ರಮುಖ ಶಾಸ್ತ್ರವೆಂದರೆ ಮನೆಯ ಹಿರಿಯರು ಮತ್ತು ಬಂಧುಗಳು ಅಕ್ಷತೆ ಎರಚಿ ಆಶೀರ್ವಾದ ಮಾಡುತ್ತಾರೆ. ಇದನ್ನು ಸೌಭಾಗ್ಯದ ಪ್ರತೀಕವೆಂದು ತಿಳಿಯಲಾಗುತ್ತದೆ. ಹಾಗೆ ಮಾಡುವುದರಿಂದ ನವ ದಂಪತಿಗಳು ಯಾವುದೇ ಕೆಟ್ಟ ದೃಷ್ಟಿ ಅಥವಾ ಕೆಟ್ಟ ಆತ್ಮದ ಪ್ರಭಾವದಿಂದ ಪಾರಾಗುತ್ತಾರೆ.

ಮದುವೆಯ ದಿನ ಕಾಮನಬಿಲ್ಲು ಅಥವಾ ಕರಿಯ ಬೆಕ್ಕು ಕಂಡರೆ ಶುಭವುಂಟಾಗುತ್ತದೆ. ಹಂದಿ, ಹಲ್ಲಿ ಅಥವಾ ಸಮಾಧಿ ನೋಡಿದರೆ ಅದನ್ನು ದೌರ್ಭಾಗ್ಯದ ಸಂಕೇತವೆಂದು ತಿಳಿಯಲಾಗುತ್ತದೆ.

ವಧು ತನ್ನ ಎಡಗಾಲನ್ನು ಮೊದಲು ಇಟ್ಟು ಮನೆ ಪ್ರವೇಶಿಸಿದರೆ ಅಪಶಕುನವೆಂದು ತಿಳಿಯಲಾಗುತ್ತದೆ. ಆದ್ದರಿಂದ ಹೊಸ್ತಿಲು ದಾಟುವಾಗ ಬಲಗಾಲನ್ನು ಮೊದಲು ಇಟ್ಟು ಮನೆ ಪ್ರವೇಶಿಸಬೇಕೆಂದು ಅವಳಿಗೆ ಹೇಳಲಾಗುತ್ತದೆ.

ಮನೆ ಪ್ರವೇಶಿಸಿದ ನಂತರ ವಧು ಬೆಳ್ಳಿಯ ಪಾತ್ರೆಗಳನ್ನು ನೆಲದಿಂದ ಎತ್ತಬೇಕಾಗುತ್ತದೆ. ಅವನ್ನು ಎತ್ತುವಾಗ ಹೆಚ್ಚು ಶಬ್ದವಾದರೆ ನವ ದಂಪತಿಗಳ ನಡುವೆ ಜಗಳವಾಗುತ್ತದೆ.

ನವ ವಧು ಮುಖವನ್ನು ಸೆರಗಿನಿಂದ ಮುಚ್ಚಿರಬೇಕು. ಹಾಗೆ ಮಾಡುವುದರಿಂದ ಅವಳನ್ನು ದೌರ್ಭಾಗ್ಯ ಮತ್ತು ಕೆಟ್ಟ ದೃಷ್ಟಿಯಿಂದ ಪಾರು ಮಾಡಿದಂತಾಗುತ್ತದೆ. ವರನೂ ಸಹ ಪೇಟ ಮತ್ತು ಬಾಸಿಂಗ ಕಟ್ಟಿರುತ್ತಾನೆ. ಅದರಿಂದ ಯಾವ ದುಷ್ಟ ಆತ್ಮ ಅವನನ್ನು ನೋಡಲಾಗುದಿಲ್ಲ.

ಪ್ರಭಾಮಣಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ