ಹದಿನೈದು ಜನ ಸ್ಪರ್ಧಿಗಳು, ಐವತ್ತೈದು ಕ್ಯಾಮೆರಾಗಳು, ನೂರು ದಿನ…… ಒಂದು ಮನೆ. ಆದರೆ ಅಲ್ಲಿ ನಾಟಕವಾಡಲು ಅವಕಾಶವಿಲ್ಲ. ಹಲವಾರು ವರ್ಷಗಳಿಂದ ವಿಶ್ವಾದ್ಯಂತ ಜನಮನ ಗೆದ್ದಿರುವ ರಿಯಾಲಿಟೀ ಶೋ ಬಿಗ್ ಬಾಸ್ ಕನ್ನಡದಲ್ಲೀಗ ಮೂರನೇ ಸೀಸನ್ ಶುರುವಾಗಿದೆ. ಈ ಬಾರಿ ಇನ್ನಷ್ಟು ವಿಶೇಷ ಹಾಗೂ ಮನರಂಜನೆಯೊಂದಿಗೆ ಕಲರ್ಸ್ ಕನ್ನಡ ವೀಕ್ಷಕರಿಗೆ ಬಿಗ್ ಬಾಸ್‌ನ್ನು ಯಶಸ್ವಿಯಾಗಿ ನೀಡುತ್ತಿದೆ. ಕಲರ್ಸ್‌ನವರು ಹೇಳುವಂತೆ, ಡ್ರಾಮಾ ಮತ್ತು ರಿಯಾಲಿಟಿಯ ಅದ್ಭುತ ಸಂಗಮವೀ ಬಿಗ್ ಬಾಸ್. ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗುವುದರಿಂದ ಇಡೀ ಕುಟುಂಬ ಒಟ್ಟಿಗೆ ಊಟ ಮಾಡುತ್ತಾ ನೋಡುವಂತಿದೆ. ಇದರ ಜೊತೆಗೆ ಕಿಚ್ಚ ಸುದೀಪ್ ಅವರ ಎಂದಿನ ಲವಲವಿಕೆಯ ನಿರೂಪಣೆಯೂ ಇರುವ ಕಾರಣ ಬಿಗ್ ಬಾಸ್ ಜನಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ.
ಸೀಸನ್‌ರ ಬಹುದೊಡ್ಡ ಆಕರ್ಷಣೆ ಎಂದರೆ ಬಿಗ್ ಬಾಸ್ ಮನೆ ಕನ್ನಡದ ಮನೆಯಾಗಿರುವುದು. ಈ ಬಾರಿ ಬಿಗ್ ಬಾಸ್ ಮನೆ ಬೆಂಗಳೂರಿನ ಬಳಿಯ ಬಿಡದಿಯಲ್ಲಿ ನೆಲೆಯೂರಿದೆ. ಹದಿನೈದು ಸಾವಿರ ಚದರ ಅಡಿಗಳ ಭವ್ಯ ಮನೆ ತಲೆ ಎತ್ತಿದೆ.
ಕಲರ್ಸ್ ಕನ್ನಡದ ಕಾರ್ಯಕ್ರಮದ ನಿರ್ದೇಶಕರಾಗಿರುವ ಪರಮೇಶ್ ಗುಂಡ್ಕಲ್ ಹೇಳುವಂತೆ, “ನೀವು ನೋಡೋದಕ್ಕಿರೋದು ಕನ್ನಡದ ಒಂದು ಅವಿಭಕ್ತ ಕುಟುಂಬ. ತರಾವರಿ ಜನ ಈ ಮನೆಯಲ್ಲಿದ್ದಾರೆ. ಒಬ್ಬರ ಜೊತೆ ಇನ್ನೊಬ್ಬರು ಹೊಂದಿಕೊಂಡು ಹೇಗೆ ನೂರು ದಿನ ಬದುಕುತ್ತಾರೆ ಅನ್ನೋದೆ ಈ ಶೋ. ಇಲ್ಲಿ ಜಗಳಕ್ಕಾಗಿ ಜಗಳ ಇಲ್ಲ. ಹೊಡೆದಾಟಕ್ಕಾಗಿ ಹೊಡೆದಾಟ ನಡೆಯಲ್ಲ. ಇದು ಕಾಂಟ್ರೊರ್ಷಿಯಲ್ ಬಿಗ್ ಬಾಸ್ ಅಲ್ಲ, ಎಮೊಷನಲ್ ಬಿಗ್ ಬಾಸ್.”
ಬಿಗ್ ಬಾಸ್‌ನ ಮತ್ತೊಂದು ದೊಡ್ಡ ಆಕರ್ಷಣೆ ಎಂದರೆ ಕಿಚ್ಚ ಸುದೀಪ್ ಅವರ ನಿರೂಪಣೆಯ ಸ್ಟೈಲು, ಅದೇ ಪ್ರಮುಖವಾದ ಆಕರ್ಷಣೆ. ಕಿಚ್ಚ ಸುದೀಪ್ ಹೇಳುವ ಪ್ರಕಾರ, “ಮನೇಲಿರೋರು ಕೆಲವೊಮ್ಮೆ ಖುಷಿಯಾಗಿರುತ್ತಾರೆ. ಇನ್ನು ಕೆಲವು ಸಲ ಬೇಜಾರಲ್ಲಿರುತ್ತಾರೆ. ಪ್ರತಿ ವೀಕೆಂಡ್‌ನಲ್ಲಿ ಅವರ ಜೊತೆ ಮಾತಾಡಿ ಬೇಜಾರು ಮಾಡಿಕೊಂಡಾಗ ಹುರಿದುಂಬಿಸಿ ಹೆಚ್ಚು ಉತ್ಸಾಹ ತೋರಿಸಿದಾಗ ಎಚ್ಚರಿಸಿಕೊಂಡು ಮನೆ ಬ್ಯಾಲೆನ್ಸ್ ನಲ್ಲಿರೋ ಹಾಗೇ ಮಾಡೋದು ನನಗೆ ಯಾವಾಗಲೂ ಇಷ್ಟ. ಅದಕ್ಕೆ ನಾನು ಈ ಶೋ ಇಷ್ಟಪಡೋದು, ಅಂಥ ಮನರಂಜನೆ ಸಿಗುತ್ತಿದೆ, ಎಲ್ಲರಿಗೂ ಇಷ್ಟವಾಗುತ್ತಿದೆ,” ಎನ್ನುತ್ತಾರೆ.
ಇನ್ನೊಂದು ವಿಶೇಷ ಪ್ರತಿ ವಾರಾಂತ್ಯದ ಕಿಚ್ಚನ ಜೊತೆ ವಾರದ ಕಥೆ ಕನ್ನಡ ಪ್ರೇಕ್ಷಕರ ಸಮ್ಮುಖದಲ್ಲೇ ನಡೆಯಲಿದೆ.
ಸುದೀಪ್ ಅವರಿಗೊಂದು ಸಮಾಧಾನದ ಸಂಗತಿಯೆಂದರೆ ಅವರು ಈ ಎರಡು ಸೀಸನ್‌ಗೆ ಪುಣೆಗೆ ಹೋಗಿ ಬರಬೇಕಾಗುತ್ತಿತ್ತು. ಈ ಬಾರಿ ಅವರು ವಿಮಾನ ಹತ್ತುವ ಅಗತ್ಯವಿಲ್ಲ. ಬೆಂಗಳೂರಿನಲ್ಲೇ ಬಿಗ್ ಬಾಸ್ ಮನೆ ಇರೋದ್ರಿಂದ ಎಲ್ಲ ಸಮೀಪ, ನಮ್ಮದು ಅನಿಸುತ್ತದೆ ಎಂದು ಹೇಳುತ್ತಾರೆ. ಸ್ಪರ್ಧಿಗಳ ಆಯ್ಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಫ್ರಾಂಕಾಗಿ ಹೇಳುವ ಸುದೀಪ್, ತಾವು ಇಷ್ಟಪಡುವ ಕೆಲಸವನ್ನು ಮನಸ್ಸಿಟ್ಟು ಮಾಡುವುದಷ್ಟೇ ತಮ್ಮ ಜವಾಬ್ದಾರಿ ಎನ್ನುತ್ತಾರೆ.
ಬಿಗ್ ಬಾಸ್ ಸೀಸನ್‌ಗೆ ಸುದೀಪ್ ಭಾರಿ ಮೊತ್ತದ ಸಂಭಾವನೆ ಪಡೆದಿರುವುದರ ಬಗ್ಗೆ ಕೇಳಿದಾಗ….?
“ಒಟ್ಟಿನಲ್ಲಿ ಖುಷಿಯಾಗಿದೆ…. ಇನ್ನೇನು ವಿವರ ನೀಡುವುದಿಲ್ಲ,” ಎಂದು ನಗುತ್ತಾರೆ.
ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಎರಡು ವಾರ ಕಳೆದಾಗಿದೆ. ಶೃತಿ, ಪೂಜಾಗಾಂಧಿ, ನೇಹಾ, ಮಾಸ್ಟರ್ ಆನಂದ್, ಅಯ್ಯಪ್ಪ, ಭಾವನಾ ಬೆಳಗೆರೆ, ಚಂದನ್, ಸುನಾಮಿ ಕಿಟ್ಟಿ, ಗಾಯಕ ರವಿ, ಆರ್.ಜೆ. ನೇತ್ರಾ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ.
ಇವರೆಲ್ಲರಿಗಿಂತ ಹೆಚ್ಚಾಗಿ ಗಮನ ಸೆಳೆಯುತ್ತಿರೋದು ಅಂದ್ರೆ ಹುಚ್ಚ ವೆಂಕಟ್. ಪಬ್ಲಿಕ್ ಡಿಮ್ಯಾಂಡಿನ ಮೇಲೆ ಸ್ಪರ್ಧಿಯಾಗಿ ಬಂದಿರುವ ವೆಂಕಟ್ ಬಿಗ್ ಬಾಸ್ ಮನೆಯ ಪ್ರಮುಖ ಆಕರ್ಷಣೆ. ಇವರನ್ನು ನೋಡಲೆಂದೇ, ಇವರ ಮಾತುಗಳನ್ನು ಕೇಳಲೆಂದೇ ವೀಕ್ಷಕರು ಪ್ರತಿದಿನ ಟಿ.ವಿ. ಮುಂದೆ ಹಾಜರಾಗುತ್ತಿದ್ದಾರೆ.
ಶೃತಿ ಈಗಾಗಲೇ ಫೈನ್ಸ್‌ವರೆಗೂ ತಲುಪಬಹುದೆಂಬ ಸುದ್ದಿ ಹಬ್ಬಿದೆ. ಹಾಗೆಯೇ ಕಡೆಯವರೆಗೂ ಬಿಗ್ ಬಾಸ್ ಮನೆ ವೆಂಕಟ್ ಅವರನ್ನು ಹೊರಗೆ ಕಳುಹಿಸುವುದಿಲ್ಲ ಎಂಬುದು ಖಾತ್ರಿಯಾಗಿದೆ. ವೆಂಕಟ್ ಅವರಿಗೆ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿರೋದ್ರಿಂದ ಅವರು ಸೇಫ್.
ಮುಂದೇನಾಗುತ್ತೋ….? ಕಾದು ನೋಡಬೇಕು.
– ಜಾಗೀರ್ದಾರ್