ಒಮ್ಮೆ ಪತಿ ಅತಿ ರೊಮ್ಯಾಂಟಿಕ್‌ ಮೂಡ್‌ನಲ್ಲಿ ಪತ್ನಿಯ ಕಡೆ ಜರುಗುತ್ತಾ, ಪ್ರೀತಿಯಿಂದ ಅವಳನ್ನು ಕೇಳಿದ, “ಡಾರ್ಲಿಂಗ್‌, ನನ್ನ ಗೆಳೆಯರಲ್ಲಿ ಇಲ್ಲದ ಆದರೆ ನನ್ನಲ್ಲಿ ಮಾತ್ರ ಇರುವ ಒಂದು ವಿಶೇಷ ಗುಣ ಯಾವುದೆಂದು ಹೇಳಬಲ್ಲೆಯಾ?”

ಅದಕ್ಕೆ ಪತ್ನಿ ರೊಮ್ಯಾಂಟಿಕ್‌ ಆಗಿ ಪಲುಕಿದಳು, “ಡಾರ್ಲಿಂಗ್‌ ಒಂದು ಮಾತಂತೂ ನನಗೆ ನಿನ್ನಲ್ಲಿ ಬಹಳ ಇಷ್ಟ, ಆ ಗುಣ ಅವರಿಗೆ ಇಲ್ಲ ಬಿಡು. ನಿನ್ನ ತರಹ ಡಿಫರೆಂಟ್‌ ಆಗಿ, ಸೆಕ್ಸಿಯಾಗಿ ಕಿಸ್‌ ಮಾಡಲು ಅವರಾರಿಗೂ ಬರೋದೆ ಇಲ್ಲ ಬಿಡು!”

 

ಗುಂಡ ಗುಂಡಿ ಘನಘೋರವಾಗಿ ಜಗಳವಾಡಿದರು. ಆಗ ಗುಂಡಿ ಗುಂಡನ ಬಾಯಿ ಮುಚ್ಚಿಸಲು ದಬಾಯಿಸಿದಳು, “ನೋಡ್ರಿ, ಜಾಸ್ತಿ ರಾಂಗ್‌ ಮಾಡಬೇಡಿ. ನಿಮ್ಮ ಹತ್ತಿರ ಎಷ್ಟು ಬುದ್ಧಿ ಇದೆಯೋ ತಲೆ ಕೆಟ್ಟಾಗ ನನ್ನ ಹತ್ತಿರ ಅಷ್ಟೇ ಇರುತ್ತದೆ….”

ಆ ಮಾತು ಕೇಳಿ ಆಘಾತಕ್ಕೆ ಒಳಗಾದ ಗುಂಡ ಅದರರ್ಥ ಏನು ಎಂದು ತಿಳಿಯಲು ಇನ್ನೂ ತನ್ನ ತಲೆ ಚೆಚ್ಚಿಕೊಳ್ಳುತ್ತಿದ್ದಾನೆ.

 

ಇಬ್ಬರು ಮಹಿಳೆಯರು ಅಪ್‌ ಟು ಡೇಟ್‌ ಆಗಿ ಮೇಕಪ್‌ ಮಾಡಿಕೊಂಡು, ಜೋರಾಗಿ ಹರಟೆ ಹೊಡೆಯುತ್ತಾ ಕಾರು ಓಡಿಸಿಕೊಂಡು ಹೋಗಿ ಮುಂದಿದ್ದ ಕಾರಿಗೆ ಗುದ್ದಿದರು.

ಅವರಲ್ಲಿ ಒಬ್ಬಳಾದ ಅನುರಾಧಾ ಕಿರುಚಿದಳು, “ಏನಯ್ಯ….. ಕುರುಡನೇನು ನೀನು? ಸುಂದರವಾದ ಮಹಿಳೆ ಕಾಣಿಸಿದ ತಕ್ಷಣ ನಿನ್ನ ಗಮನ ಕತ್ತೆ ಕಾಯಲಿಕ್ಕೆ ಹೋಯಿತೇ? ಕಾರು ಚಾಯಿಸುವಾಗ ಮುಂದೆ ನೋಡೋದರ ಬದಲು ಅಲ್ಲಿ ಇಲ್ಲಿ ಯಾಕೆ ನೋಡಬೇಕು ಅಂತ? ಮನೆಯಲ್ಲಿ ಹೆಂಡತಿ ಮುಂದೆ ಮಾತ್ರ ದೊಡ್ಡ ಲೀಡರ್‌ ತರಹ ಪೋಸ್‌ ಕೊಡೋದು… ಬೀದೀಗೆ ಬಂದಾಗ ಲೋಫರ್‌ ಆಗೋದು…. ಯೂ ಸ್ಟುಪಿಡ್‌!”

ಅವಳ ಪಕ್ಕದಲ್ಲಿದ್ದ ಅನುಪಮಾ ಸುಮ್ಮನಿರ್ತಾಳಾ? “ಅಲ್ಲಯ್ಯ…. ನಿಮ್ಮಂಥ ಗಂಡಸರಿಗೆಲ್ಲ ಏನಯ್ಯ ಪ್ರಾಬ್ಲಂ….. ತೆಪ್ಪಗೆ ಹೋಗಬಾರದಾ…..?”

ಎದುರಿಗಿದ್ದ ಕಾರು ಗುದ್ದಿಸಿಕೊಂಡವನು ತಲೆ ಮೇಲೆ ಕೈಹೊತ್ತು ಯೋಚಿಸುತ್ತಲೇ ಇದ್ದ…. ಅಲ್ಲ, ನನ್ನ ಕಾರು ಪಾರ್ಕಿಂಗ್ ಏರಿಯಾದಲ್ಲಿ ಸರಿಯಾಗಿಯೇ ನಿಂತಿದೆ, ಜೊತೆಗೆ ಬಾಗಿಲು ಕ್ಲೋಸ್‌ ಆಗಿದೆ. ಅದರ ಎಂಜಿನ್‌ ಅಂತೂ ಸ್ಟಾರ್ಟೇ ಆಗಿಲ್ಲ….. ಹಾಗಿರುವಾಗ ತಾನು ಇವರ ಕಾರಿಗೆ ಗುದ್ದಿದ್ದು ಯಾವಾಗ?

 

ಆ ಏರಿಯಾದ ಘಟವಾಣಿ ಗಂಗಮ್ಮ ಈ ಸಲ ನಗರಪಾಲಿಕೆಯ ಚುನಾವಣೆಗೆ ನಿಂತುಬಿಟ್ಟಿದ್ದಳು. ಆಗ ಅವಳ ಬಳಿ ಸಣ್ಣಪುಟ್ಟ ಕೈ ಸಾಲಕ್ಕಾಗಿ ಹಲ್ಲು ಕಿಸಿಯುತ್ತಿದ್ದ ದೇವಿ ಕೇಳಿದಳು, “ಗಂಗಮ್ಮ, ನೀನಾ ಈ ಎಲೆಕ್ಷನ್‌ಗೆ ನಿಂತಿರೋದು…. ಬಿಡು, ಬಿಡು….. ಈ ಸಲ ನೀನು ಗೆದ್ದೇ ಗೇಲ್ತೀಯಾ!”

ಆಗ ಗಂಗಮ್ಮ ಉತ್ತರಿಸಿದಳು, “ಹೌದು, ಹೌದು…. ಈ ಸಲ ಚುನಾವಣೆಯಲ್ಲಿ ನಾನೇ ಗೆಲ್ಲೋದು! ನನ್ನ ಗೆಲುವಿಗಾಗಿ ನೀವೆಲ್ಲ ಈಗಲೇ ಶುಭ ಹಾರೈಸಿ…..”

ಗಂಗಮ್ಮನ ಈ ಆತ್ಮವಿಶ್ವಾಸದ ಮಾತು ಕೇಳಿ ಅಲ್ಲಿದ್ದ ವರದಿಗಾರ ಓಡಿ ಬಂದು ಈಕೆಯ ಫೋಟೋ ಕ್ಲಿಕ್ಕಿಸುತ್ತಾ, “ಅದಿರಲಿ ಮೇಡಂ, ಚುನಾವಣೆಗೆ ನಿಲ್ಲಬೇಕು, ಅದರಲ್ಲಿ ಗೆದ್ದೇ ತೀರಬೇಕು ಎಂದು ನಿಮಗೆ ಪ್ರೇರಣೆ ಸಿಕ್ಕಿದ್ದು ಯಾರಿಂದ?”

ಅದಕ್ಕೆ ಗಂಗಮ್ಮ, “ನನ್ನ ಗಂಡನಿಂದ…. ಏಕೆಂದರೆ ಯಾವಾಗ ನಾವು ಜಗಳ ಆಡಿದರೂ ಅದರಲ್ಲಿ ನಾನೇ ಗೆಲ್ಲುತ್ತಿದ್ದೆ…. ಈ ಚುನಾವಣೆ ಅಂದ್ರೆ ಒಂದೇ ಸಲ ನಾಲ್ವರ ಜೊತೆ ಜಗಳ ಆಡಿದಂತೆ ತಾನೇ…..?” ಎನ್ನುವುದೇ?

 

ಮಹಿಳೆ : ಲಾಯರ್‌ ಸಾರ್‌….. ಹೇಗಾದರೂ ನನ್ನ ಮಾಜಿ ಪತಿಯೊಂದಿಗೆ ಮತ್ತೆ ನನ್ನ ಮದುವೆ ಮಾಡಿಸಿ, ನಿಮಗೆ ಪುಣ್ಯ ಬರುತ್ತದೆ.

ವಕೀಲರು : ಆದರೆ…. ಕಳೆದ ತಿಂಗಳು ತಾನೇ ಎಷ್ಟೋ ಕಷ್ಟಪಟ್ಟು ನಾನೇ ನಿಮ್ಮಿಬ್ಬರಿಗೆ ಡೈವೋರ್ಸ್‌ ಕೊಡಿಸಿದ್ದೆನಲ್ಲ….

ಮಹಿಳೆ : ಅದೇನೋ ನಿಜ…. ಆದರೆ ಆ ಬಡ್ಡಿಮಗ ಈಗ ಬಲು ಸಂತೋಷವಾಗಿ ದಿನೇದಿನೇ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡುತ್ತಿದ್ದರೆ, ಅದನ್ನು ನೋಡಿಕೊಂಡು ನಾನು ಹೇಗೆ ತಾನೇ ಸುಮ್ಮನಿರಲಿ…..?

 

ಡಿಸೆಂಬರ್‌ ತಿಂಗಳ ಕೊರೆಯುವ ಚಳಿಗಾಲ. ಹೆಂಡತಿ ಆಗ ತಾನೇ ಬಾತ್‌ರೂಮಿನಿಂದ ಸ್ನಾನ ಮಾಡಿ ಫ್ರೆಶ್‌ ಆಗಿ ಹೊರಬಂದಿದ್ದಳು. ಆಗ ಗಂಡ ಅವಳನ್ನೇ ಕೆಕ್ಕರಿಸಿಕೊಂಡು ನೋಡತೊಡಗಿದ.

ಅದಕ್ಕೆ ಅವಳು ನಾಚಿಕೊಳ್ಳುತ್ತಾ, “ಏನ್ರಿ ಆಯ್ತು? ಒಂದೇ ಸಮ ಹಾಗೆ ನೋಡ್ತಿದ್ದೀರಿ…. ಯಾಕೋ ಸಾಹೇಬರಿಗೆ ಮೂಡ್ ಬಂದಂತಿದೆ….” ಎಂದಳು.

ಗುಂಡ ಸಿಡಿಗುಟ್ಟುತ್ತಾ, “ನಾನು ಸ್ವಿಚ್‌ ಹಾಕಿ ನೀರು ಕಾಯಿಸಿದ್ದರೆ ಎಲ್ಲ ಬಳಿದು ಬಂದಿದ್ದೀಯಾ ತಾನೇ……?” ಎನ್ನುವುದೇ!?

 

ಪತಿ : ಸ್ವೀಟ್‌ ಹಾರ್ಟ್‌….. ಸೆಲ್ಫ್ ಕಂಟ್ರೋಲ್ ಅನ್ನುವುದನ್ನು ಯಾರಾದರೂ ನಿನ್ನಿಂದ ಕಲಿಯಬೇಕು ನೋಡು!

ಪತ್ನಿ : ಥ್ಯಾಂಕ್ಸ್ ಡಿಯರ್‌, ಆದರೆ ಯಾವುದರ ಬಗ್ಗೆ ಹೀಗೆ ಹೇಳ್ತಿದ್ದೀರಾ?

ಪತಿ : ನಿನ್ನ ದೇಹವಿಡಿ ಇಷ್ಟೋಂದು ಸಿಹಿ ತುಂಬಿಕೊಂಡಿದೆ, ಆದರೆ ನಾಲಿಗೆಯ ಮೇಲೂ ಸವಿಮಾತುಗಳಿರಬೇಕಲ್ಲವೇ?

ಪತ್ನಿ : ಓ ಅದಾ… ನಾನು ಡಯಾಬಿಟಿಕ್‌ ಕಣ್ರೀ!

 

ಹಾಲಿನವನು ಬಂದು ಬೆಲ್ ‌ಮಾಡಿದ ಎಂದು, 15 ನಿಮಿಷಗಳಾದ ಮೇಲೆ ಕಾಟನ್‌ಕಾಮಾಕ್ಷಿ ಬಳುಕುತ್ತಾ ಬಂದು ಬಾಗಿಲು ತೆರೆದಳು.

ಕಾಮಾಕ್ಷಿ : ಏ ಸೀನಣ್ಣ….. ಛೀ…. ಛೀ…. ಇದಂತೂ ತುಂಬಾ ಮೋಸ ಬಿಡು. ಹಾಲಂತೂ ಬರೀ ನೀರು ನೀರಾಗಿದೆ…. ಕಲಬೆರೆಕೆ ಮಾಡುವುದಕ್ಕೂ ಒಂದು ಮಿತಿ ಇರಬೇಕು!

ಸೀನಣ್ಣ : ಮೇಡಂ, ಕಲಬೆರಕೆ ಅನ್ನೋದು ಈಗ ಎಲ್ಲಾ ಕಡೆ ಮಾಮೂಲಿ ಆಗಿಬಿಟ್ಟಿದೆ. ನಾನು ಫೇಸ್‌ಬುಕ್‌ ನೋಡ್ತಾನೇ ಇರ್ತೀನಲ್ಲ…. ನೀವು ಅಲ್ಲಿನ ಡಿಪಿನಲ್ಲೇ ಬೇರೆ…. ಇಲ್ಲಂತೂ ಮನೆಯಲ್ಲಿ ನೋಡ್ತಾನೇ ಇರ್ತೀನಲ್ಲ….

ಕಾಮಾಕ್ಷಿ ಬಹಳ ಹೊತ್ತು ಈ ಮಾತಿಗೇನು ಅರ್ಥ ಎಂದು ತಲೆ ಚಚ್ಚಿಕೊಂಡಳು.

 

ಪತಿ ಆಫೀಸಿಗೆ ಹೋಗಿದ್ದ. ಮಧ್ಯಾಹ್ನದ ಹೊತ್ತಿಗೆ ಪತ್ನಿ ತವರಿಗೆ ಹೊರಡಬೇಕಾಯ್ತು. ಸಂಜೆ ಹೊತ್ತಿಗೆ ಪತಿ ಮನೆಗೆ ಬಂದಾಗ ಬಾಗಿಲಿಗೆ ಬೀಗ ಹಾಕಿತ್ತು. ತನ್ನ ಕೈಯಿಂದ ಅದನ್ನು ತೆರೆದು ಒಳಗೆ ಬಂದು ನೋಡುತ್ತಾನೆ, ಮುಖಕ್ಕೆ ರಾಚುವಂತೆ ಡೈನಿಂಗ್ ಟೇಬಲ್ ಮೇಲೆ ದೊಡ್ಡ ಚೀಟಿ ಇತ್ತು.

ಡಿಯರ್‌, ಇದನ್ನು ಸಾವಧಾನವಾಗಿ ಓದಿಕೊಳ್ಳಿ!

ಅರ್ಜೆಂಟ್‌ ಕೆಲಸದ ಸಲುವಾಗಿ ತವರಿಗೆ ಹೊರಟಿದ್ದೇನೆ, ಬರಲು 2-3 ದಿನ ಆಗುತ್ತೆ. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಅಂತ ಫ್ರೆಂಡ್ಸ್ ನ ಕರೆದು ಹುಚ್ಚುಚ್ಚಾಗಿ ಪಾರ್ಟಿ ಮಾಡಲು ಹೋಗಬೇಡಿ, ನಿಮ್ಮ ಡೆಬಿಟ್ ಕಾರ್ಡ್‌ ತೆಗೆದುಕೊಂಡೇ ಹೋಗಿದ್ದೇನೆ, ಬೀರುವಿನಲ್ಲಿ 400 ರೂ. ಚಿಲ್ಲರೆ ಇದೆ, ಅಷ್ಟೆ. ನಿಮ್ಮ ಶೂ, ಸಾಕ್ಸ್, ಬಟ್ಟೆಬರೆ ಸರಿಯಾದ ಜಾಗಗಳಲ್ಲಿರಲಿ. ಸ್ನಾನದ ನಂತರ ಟವೆಲ್‌ನ್ನು ಅಪ್ಪಿತಪ್ಪಿಯೂ ಹಾಸಿಗೆ ಮೇಲೆ ಎಸೆಯಬೇಡಿ.

ಕೆಲಸದವಳು ಬೆಳಗ್ಗೆ 7 ಗಂಟೆಗೆ ಬೇಗ ಬಂದು ತನ್ನ ಕೆಲಸ ಮುಗಿಸಿ ಹೊರಡುತ್ತಾಳೆ, ಅನಗತ್ಯವಾಗಿ ಅವಳನ್ನು ಹೊಗಳುತ್ತಾ ಅವಳ ಹಿಂದೆ ಹಿಂದೆ ತಿರುಗಬೇಡಿ. ಅವಳು ನಿಮ್ಮ ಬಟ್ಟೆ ಒಗೆದು ಒಣಗಿಸಿದ್ದನ್ನು ಸಂಜೆ ಬಂದ ಮೇಲೆ ಎತ್ತಿ ನೀಟಾಗಿ ಮಡಚಿಡಬೇಕಾದ್ದು ನಿಮ್ಮ ಕೆಲಸ.

ಅಪ್ಪಿತಪ್ಪಿಯೂ ಅಕ್ಕಪಕ್ಕದ ಮಾಲಾ ಶೀಲಾರನ್ನು ಮಾತನಾಡಿಸಲು ಹೋಗಬೇಡಿ. ಸಕ್ಕರೆ, ಕಾಫಿ ಪುಡಿ, ಈರುಳ್ಳಿ, ಟೊಮೇಟೊಗಳನ್ನು ನಾನು ಹೊರಡುವುದಕ್ಕೆ ಮೊದಲೇ ಅವರಿಗೆ ಕೊಟ್ಟಿದ್ದೇನೆ. ಮುಖ್ಯವಾದ ವಿಷಯ, ನಾನಿಲ್ಲ ಅಂತ ಹೊರಗೆ ಊರು ಮೇಯಲು ಹೋಗಬೇಡಿ. ಮನೆಗೆ ಬರುತ್ತಿದ್ದಂತೆ ನನಗೆ ಎಲ್ಲಾ ಗೊತ್ತಾಗಿ ಹೋಗುತ್ತದೆ. ಆಮೇಲೆ 2-3 ತಿಂಗಳು ಉಪವಾಸ ಇರಬೇಕಾದೀತು, ಎಚ್ಚರ!

ಪಾಪ, ಅವನಿಗೆ ಹೆಂಡತಿ ತವರಿಗೆ ಹೋದ ಖುಷಿ ಇನ್ನೆಲ್ಲಿಯದು?

 

ಸುರೇಶ್‌ : ಮದುವೆ ನಂತರ ಗಂಡ ಹೆಂಡತಿ ಇಬ್ಬರೂ ಹಲವು ತ್ಯಾಗ ಮಾಡಬೇಕಾಗುತ್ತೆ ಗೊತ್ತಾ?

ಗಿರೀಶ್‌ : ಅದೇನಪ್ಪ… ಇಬ್ಬರೂ ತ್ಯಾಗ ಮಾಡೋದು?

ಸುರೇಶ್‌ : ಪತ್ನಿ ತಾಯಿ ತಂದೆ, ತವರು, ಒಡಹುಟ್ಟಿದವರನ್ನು ತ್ಯಾಗ ಮಾಡಿ ದೂರದೂರಿನ ಗಂಡನ ಮನೆಗೆ ಬಂದರೆ, ಗಂಡ ಸುಖ, ಶಾಂತಿ, ನೆಮ್ಮದಿ, ಸ್ವಾತಂತ್ರ್ಯ ಇತ್ಯಾದಿ ಎಲ್ಲವನ್ನೂ ತ್ಯಾಗ ಮಾಡಬೇಕಾಗುತ್ತದೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ