ಮನೆಯಲ್ಲಿ ಅಡಗಿದ ತೋಳಗಳಿಂದ ಪಾರಾಗುವುದು ಹೇಗೆ?

“ಅತ್ಯಾಚಾರದಂತಹ ಅಪರಾಧ ಮೂಲಭೂತವಾಗಿ ಪೀಡಿತೆಯ ಮಾನವ ಹಕ್ಕುಗಳ ಮೇಲೆ ಹಾಗೂ ಅವಳ ವ್ಯಕ್ತಿತ್ವದ ಮೇಲಿನ ಆಘಾತವಾಗಿದೆ. ಅದು ಅವಳ ವೈಯಕ್ತಿಕ ಮತ್ತು ಸ್ವತಂತ್ರ ಅಸ್ತಿತ್ವದ ಮೇಲೆ ಸದೃಢವಾದ ಅಂಕುಶ ಹಾಕುತ್ತದೆ. ಸಭ್ಯ ಸಮಾಜದಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬ ವ್ಯಕ್ತಿಯ ಸ್ವಾಭಿಮಾನವನ್ನು ಗೌರವಿಸಬೇಕು. ಇನ್ನೊಬ್ಬರ ದೈಹಿಕ ಕ್ಷೇತ್ರವನ್ನು ಅತಿಕ್ರಮಿಸಲು ಯಾರಿಗೂ ಹಕ್ಕಿಲ್ಲ. ಹಾಗೆ ಮಾಡುವುದು ಅಪರಾಧವಷ್ಟೇ ಅಲ್ಲ, ಅದು ಸಂತ್ರಸ್ತೆಯ ಮನದಲ್ಲಿ ಆಳವಾದ ಗಾಯ ಉಂಟು ಮಾಡುತ್ತದೆ. ಅತ್ಯಾಚಾರಿಗಳು ಇಂಡಿಯನ್‌ ಪೀನಲ್ ಕೋಡ್‌ನ ಅಂತರ್ಗತದಲ್ಲಿ ಶಿಕ್ಷಾರ್ಹರಾಗಿದ್ದಾರೆ. ಅವರು ಸಂತ್ರಸ್ತೆಯ ಸಮಾನ ಹಕ್ಕು ಹಾಗೂ ವೈಯಕ್ತಿಕ ಗುರುತಿನ ಹಕ್ಕಿನ ಮೇಲೂ ನೋಂಟು ಮಾಡುತ್ತಾರೆ. ಅದು ಸಂತ್ರಸ್ತೆಯ ಕಾನೂನು ಹಾಗೂ ಸಂವಿಧಾನಕ ಹಕ್ಕೂ ಆಗಿದೆ.”

ಈ ಮಾತುಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ದೀಪಕ್‌ ಮಿಶ್ರಾರವರದು. ಅವರು ಪಂಜಾಬ್‌ನ ಕೇಸೊಂದರಲ್ಲಿ ಸೋದರ ಸೊಸೆಯ ಮೇಲೆ ಸೋದರ ಮಾವ ಹಾಗೂ ಆತನ ಸಹೋದ್ಯೋಗಿ ನಡೆಸಿದ ಅತ್ಯಾಚಾರದಲ್ಲಿ ಅವರನ್ನು ಅಪರಾಧಿಗಳೆಂದು ತೀರ್ಮಾನಿಸಿ, ಶಿಕ್ಷೆಯನ್ನು ಕಡಿಮೆಗೊಳಿಸುವ ಮನವಿಯನ್ನು ತಿರಸ್ಕರಿಸುತ್ತಾ ಹೇಳಿದರು. ಅತ್ಯಾಚಾರ ವೈರತ್ವದಿಂದ ಉಂಟಾಯಿತೆಂದು ಆರೋಪಿಗಳು ಹೇಳಲಿಲ್ಲ.  2000ದ ಆಸುಪಾಸಿನಲ್ಲಿ ವರದಿಯಾದ ಈ ಅಪರಾಧದಲ್ಲಿ ಸಂತ್ರಸ್ತೆಯ ವಯಸ್ಸು 16ಕ್ಕಿಂತ ಹೆಚ್ಚಿತ್ತು. ಆದರೆ ಸಂತ್ರಸ್ತೆಯ ತಂದೆ ಅವಳು 14ಕ್ಕಿಂತ ಕಡಿಮೆ ವಯಸ್ಸಿನಳು ಎಂದಿದ್ದರು.

ಆ ಹುಡುಗಿ ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಸೋದರಮಾವನ ಮೇಲೆ ವಿಶ್ವಾಸವಿಟ್ಟಿದ್ದಳು. ಅವಳ ಪ್ರೀತಿ ಮತ್ತು ವಿಶ್ವಾಸವನ್ನು ಸೋದರಮಾವ ದುರುಪಯೋಗಪಡಿಸಿಕೊಂಡ ಎಂಬ ವಿಷಯವನ್ನು ಸರ್ವೋಚ್ಚ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಇದೊಂದೇ ವಿಷಯವಲ್ಲ. ನಿರ್ಭಯಾ ಅಥವಾ ಉಬರ್‌ನಂತಹ ಘಟನೆಗಳಿಗಿಂತ ಮನೆಗಳಲ್ಲಿನ ಅತ್ಯಾಚಾರಗಳ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದೆ. ಅಸಲಿಗೆ ಮನೆಯಲ್ಲಿ ಅತ್ಯಾಚಾರ ಮಾಡಿದ ನಂತರ ತಪ್ಪಿಸಿಕೊಳ್ಳುವ ಅಭ್ಯಾಸಗಳೇ ಗಂಡಸರನ್ನು ಸಿಂಹಗಳನ್ನಾಗಿ ಮಾಡಿಬಿಡುತ್ತವೆ. ಅವರು ಎಲ್ಲರ ಮೇಲೆ ಜೋರು ಮಾಡುತ್ತಿರುತ್ತಾರೆ.

ಅತ್ಯಾಚಾರಕ್ಕೆ ನಿಜವಾದ ಕಾರಣ ದೇಶದಲ್ಲಿ ಅಶ್ಲೀಲ ಸಾಹಿತ್ಯ ಮಾರಾಟವಾಗದಿದ್ದರೂ ಅಶ್ಲೀಲ ಬೈಗುಳಗಳಿಗೆ ಯಾವುದೇ ನಿರ್ಬಂಧವಿಲ್ಲ. ಅವನ್ನು ತಟಕ್ಕನೆ ಉಪಯೋಗಿಸಲಾಗುತ್ತದೆ. ಮಹಿಳೆಯರ ಮೇಲೆ ಸೇಡು ತೀರಿಸಿಕೊಳ್ಳುವ ಹಳೆಯ ಕಾಲದ ಭಾವನೆಗಳನ್ನು ಇಂದಿಗೂ ಜೀವಂತಾಗಿಡಲಾಗಿದೆ. ಸಮಾಜದಲ್ಲಿ ಅತ್ಯಾಚಾರಗಳಂತೂ ಬಹಳ ನಡೆಯುತ್ತವೆ. ಆದರೆ ಅಮ್ಮನಿಗೆ, ಅಕ್ಕನಿಗೆ ಬೈಗುಳಗಳು ಖಂಡಿತ ಇರುತ್ತವೆ. ಬೈಯುವುದನ್ನೇ ದೊಡ್ಡಸ್ತಿಕೆ ಎಂದು ಭಾವಿಸಲಾಗುತ್ತದೆ.

ನ್ಯಾಯಾಧೀಶ ದೀಪಕ್‌ ಮಿಶ್ರಾರವರು ಅತ್ಯಾಚಾರವನ್ನು ನೀಚ ಅಪರಾಧವೆಂದು ಕರೆದು ಶಿಕ್ಷೆಯನ್ನು ಕಡಿಮೆಗೊಳಿಸುವ ಮನವಿಯನ್ನು ತಿರಸ್ಕರಿಸಿ ಸರಿಯಾಗಿಯೇ ಮಾಡಿದ್ದಾರೆ. ಮನೆಯ ನಾಲ್ಕು ಗೋಡೆಗಳು ಎಲ್ಲ ಹುಡುಗಿಯರಿಗೆ ಸುರಕ್ಷತೆಯ ಕವಚವಾಗಿರಬೇಕು. ಕಠಿಣ ಕಾನೂನುಗಳು ಮಾನಸಿಕತೆಯನ್ನು ಬದಲಿಸುವುದಿಲ್ಲ. ಆದರೆ ಅವು ಖಂಡಿತ ಹೆದರಿಕೆ ಉಂಟುಮಾಡುತ್ತವೆ. ವಿಷಾದವೆಂದರೆ ಸುಮಾರು 2000ನೇ ಇಸವಿಯಲ್ಲಿ ನಡೆದ ಪ್ರಕರಣ 2015ರವರೆಗೆ ಕೋರ್ಟುಗಳಲ್ಲಿ ನಡೆಯಿತು. ಅಪರಾಧಿಗೆ ಯಾವಾಗಲೂ ಇಂದು ಬಿಡುಗಡೆಯಾಗುತ್ತೇನೆ, ನಾಳೆ ಬಿಡುಗಡೆಯಾಗುತ್ತೇನೆ ಎನ್ನಿಸುತ್ತಿರುತ್ತದೆ. ಅವನು ತನ್ನ ಅಪರಾಧದ ಬಗ್ಗೆ ಪಶ್ಚಾತ್ತಾಪ ಪಡುವ ಬದಲು ಬಿಡುಗಡೆಯಾಗುವ ಆಸೆಯಿಟ್ಟುಕೊಳ್ಳುವುದು ತಪ್ಪು.

ನೈತಿಕತೆಯ ಹೆಸರಿನಲ್ಲಿ ಕಡಿವಾಣಗಳೇಕೆ?

`ನಾವಿಬ್ಬರು ನಮಗಿಬ್ಬರು’ ಘೋಷವಾಕ್ಯ ಇಡೀ ದೇಶಾದ್ಯಂತ ಚೆನ್ನಾಗೇ ಹರಡಿತು, ಆದರೆ ತುರ್ತು ಪರಿಸ್ಥಿತಿ ಹೊರತುಪಡಿಸಿ ಇದನ್ನು ಕಡ್ಡಾಯ ಮಾಡಲಿಲ್ಲ. ಆದರೆ ಚೀನಾದಲ್ಲಿ ಒಂದೇ ಮಗು ಸಾಕು ಎಂಬ ನೀತಿ ಕಟ್ಟುನಿಟ್ಟಾಗಿ ಜಾರಿಗೆ ಬಂತು. ಹಾಗಾಗಿ 6-7 ತಿಂಗಳು ಮಾತ್ರವಲ್ಲ, 8 ಮಾಸ ತುಂಬಿದ ಗರ್ಭವತಿಗೂ ಪರ್ಮಿಟ್‌ ಇಲ್ಲದೆ 2ನೇ ಸಲ ಹೆರಿಗೆಗೆ ಸಿದ್ಧಳಾದ ಮಹಿಳೆಗೆ ಬಲವಂತವಾಗಿ ಗರ್ಭಪಾತ ಮಾಡಿಸುತ್ತಿದ್ದರು. ಹೀಗೆ ಬಲಂತಪಡಿಸುವಿಕೆ ಯಾವ ತರಹದಿಂದಲೂ ಒಳ್ಳೆಯದಲ್ಲ. ಇಂದಿರಾಗಾಂಧಿ 1977ರಲ್ಲಿ ತುರ್ತು ಪರಿಸ್ಥಿತಿಯ ಏರಿಳಿತ ಕಂಡಿದ್ದರು. ಚೀನಾದ ಅಧಿಕಾರದ ದುರಾಸೆಯಲ್ಲಿ ಮುಳುಗಿದ ಕಮ್ಯುನಿಸ್ಟ್ ಆಡಳಿತದವರಿಗೆ ಇದೀಗ ಒಂದೇ ಮಗುವಿನ ನೀತಿ ಯಾವ ತರಹ ಚೀನಾದ ಅರ್ಥ ವ್ಯವಸ್ಥೆಗೆ ಮಾರಕ ಎಂಬುದರ ಮನವರಿಕೆಯಾಗಿದೆ. ಚೀನಾದ ಜನಸಂಖ್ಯೆಯಲ್ಲಿ ಇದೀಗ ಬರೀ ನರೆತ ತಲೆಗಳೇ ಕಾಣಿಸುತ್ತಿರುವುದು ಆತಂಕಕ್ಕೆ ಎಡೆಮಾಡಿದೆ. ಅಂಥವರು ಪ್ರೊಡಕ್ಟಿವ್ ‌ಕೆಲಸ ಮಾಡಲಾರರು, ಆದರೆ ಅವರನ್ನು ಜೀವಂತವಾಗಿರಿಸಿಕೊಳ್ಳಲು ಸರ್ಕಾರ ಬಹಳ ಖರ್ಚು ಮಾಡಬೇಕಾಗಿದೆ. ಕೋಟ್ಯಂತರ ಅವಿವಾಹಿತ ಮಂದಿ, ಪತ್ನಿಯ ಹುಡುಕಾಟದಲ್ಲಿ ಮುಖ್ಯ ಉತ್ಪಾದನೆಯನ್ನೇ ನಿರ್ಲಕ್ಷಿಸುತ್ತಾರೆ.

ನಮ್ಮ ದೇಶದಂತೆಯೇ ಅಲ್ಲೂ ಸಹ ಮಗನೇ ಬೇಕೆಂಬ ಹಠ ಹೆಚ್ಚಿತ್ತು, ಹೆಣ್ಣು ಭ್ರೂಣ ಹತ್ಯೆ ವಿಜೃಂಭಿಸಿತ್ತು. ಪರಿಣಾಮ? ಇಂದು 100 ಹುಡುಗಿಯರಿಗೆ 117 ಹುಡುಗರು ಆಗಿದ್ದಾರೆ. 3 ಕೋಟಿಗೂ ಅಧಿಕ ಯುವಕರು ಅವಿವಾಹಿತರು. ಇಷ್ಟು ಮಾತ್ರವಲ್ಲ, ಪ್ರತಿ ಪತಿಪತ್ನಿಯರ ಜೋಡಿಗೆ ಸರಾಸರಿಯಾಗಿ 1.6 ಮಕ್ಕಳಿವೆ. ಏಕೆಂದರೆ ಬಹಳ ಜೋಡಿಗಳಿಗೆ ಮಕ್ಕಳೇ ಇಲ್ಲ, ಒಂದಕ್ಕಿಂತ ಹೆಚ್ಚು ಮಗು ಹಡೆಯುವಂತಿಲ್ಲ. 140 ಕೋಟಿ ಜನಸಂಖ್ಯೆ ಇದ್ದ ದೇಶ, ಕುಗ್ಗುತ್ತಿರುವ ತನ್ನ ಜನಸಂಖ್ಯೆ ಕಂಡು ಹೆದರುತ್ತಿದೆ. ಮಗು ಎಷ್ಟಿರಬೇಕು, ಎಂಥದ್ದಿರಬೇಕು ಎಂಬುದರ ನಿರ್ಧಾರವನ್ನು ತಾಯಿಗೆ ಬಿಡುವುದೇ ಸರಿ. ಮಗು ಮದುವೆಯ ಸಹಿತ ಅಥವಾ ರಹಿತ ಆಗಬೇಕೋ ಎಂಬುದರ ನಿರ್ಧಾರವನ್ನೂ ಅವಳಿಗೇ ಬಿಡತಕ್ಕದ್ದು. ತನ್ನ ಪ್ರಾಣವನ್ನು ಪಣಕ್ಕೊಡ್ಡಿ ಮಗುವಿಗೆ ಜನ್ಮ ನೀಡಬೇಕೋ ಅಥವಾ ಗರ್ಭಪಾತ ಮಾಡಿಸಿಕೊಳ್ಳಬೇಕೋ ಎಂಬುದು ಅವಳ ಹಕ್ಕಾಗಿರಬೇಕು. ಇದರಲ್ಲಿ ಸರ್ಕಾರಿ ಅಥವಾ ಕಾನೂನಿನ ಮಧ್ಯಪ್ರವೇಶ ಭಾರಿ ಆಗಬಹುದು. ಹೀಗಾಗಿ ಭಾರತ ಚೀನಾದಿಂದ ಕಲಿಯಬೇಕಿದೆ. ಆಧುನಿಕ ಚಿಕಿತ್ಸಾ ಸೌಲಭ್ಯಗಳ ಮೇಲೆ ಪ್ರತಿಬಂಧ ಹೇರಿ, ನೈತಿಕತೆ ಅಥವಾ ಪೂರ್ವಾಗ್ರಹಪೀಡಿತರಾಗಿ, ಹೆಣ್ಣಿನ ತನುಮನಗಳ ಮೇಲೆ ಹೊರೆ ಹೇರಬಾರದು. ಹೀಗಾಗಿ ಪ್ರತಿ ಹೆಣ್ಣಿಗೂ ಯಾವಾಗ, ಹೇಗೆ, ಯಾವ ವಯಸ್ಸಿನಲ್ಲಿ, ಎಷ್ಟು, ಎಂಥ ಮಗು ಹೆರಬೇಕೆಂಬುದು ಅವಳ ವೈಯಕ್ತಿಕ ನಿರ್ಧಾರ ಆಗಿರಬೇಕು, ಇದು ಅವಳ ಹಕ್ಕು.

ಸಾಮಾನ್ಯ ವ್ಯಕ್ತಿಯನ್ನು ತನ್ನಾಸೆಯಂತೆ ಬದುಕಲು ಬಿಡಿ

ಯೂರೋಪ್‌ ಅಥವಾ ಅಮೆರಿಕಾದಲ್ಲಿ ಪರ್ಮನೆಂಟ್‌ ಆಗಿ ನೆಲೆಸಲು ಗ್ರೀನ್‌ ಕಾರ್ಡ್‌ ಅಥವಾ ಪೌರತ್ವ ಪಡೆಯಲು, ಬಹಳಷ್ಟು ಭಾರತೀಯರಿಗೆ ಅಲ್ಲಿ ನೆಲೆಸಿರುವ ಹುಡುಗಿ ಅಥವಾ ಹೆಂಗಸರನ್ನು ಮದುವೆಯಾಗಬೇಕಾಗುತ್ತದೆ ಎಂಬ ಮಾತು ಕೇಳಿಬರುತ್ತದೆ. ಆದರೆ 68ರ ಬ್ರಿಟಿಷ್‌ ವಯೋವೃದ್ಧೆಯನ್ನು 21ರ ಭಾರತೀಯ ತರುಣ ಮದುವೆಯಾಗಿ ಅಲ್ಲಿನ ಪೌರತ್ವ ಹೊಂದಲು ಬಯಸಿದರೆ, ಎಲ್ಲರಿಗೂ ಇದು ಹುಬ್ಬೇರಿಸುವ ವಿಷಯ ಆಗಿರಬಹುದು. ಉ.ಪ್ರ.ದ 21ರ ಹೃದಯನಾಥನಿಗೆ 68ರ ಜಾನ್‌ ಪಮೇಲಾ ಗುಲ್ವಿನ್‌ಳ ಮೇಲೆ `ಪ್ರೇಮ’ ಉಕ್ಕಿ ಹರಿದು ಇಬ್ಬರೂ ಸ್ಪೆಷಲ್ ಮ್ಯಾರೇಜ್‌ ಆ್ಯಕ್ಟ್ ಪ್ರಕಾರ ಮದುವೆಯಾಗಲು ದೆಹಲಿಯ ಮ್ಯಾರೇಜ್‌ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು. ಇಂಥ ಅರ್ಜಿಗಳಿಗೆ ಪೊಲೀಸ್‌ ವೆರಿಫಿಕೇಶನ್‌ ಅನಿವಾರ್ಯ. ಆದರೆ ಯಾಕೆ? ಸ್ಪಷ್ಟ ಉತ್ತರ ಗೊತ್ತಿಲ್ಲ. ಸಾವಿರಾರು ಜನ ಪುರೋಹಿತರು, ಮೌಲ್ವಿಗಳು, ಪಾದ್ರಿಗಳು ಸಾಂಪ್ರದಾಯಿಕ ವಿವಾಹ ಮಾಡಿಸಿದಾಗ ಬೇಕಿಲ್ಲದ ವೆರಿಫಿಕೇಶನ್‌ಇದಕ್ಕೇಕೆ ಬೇಕು? ಈ ಮದುವೆಯಲ್ಲೂ ವೆರಿಫಿಕೇಶನ್‌ನಿಂದ ವಿಳಂಬ ಆಗುತ್ತಿತ್ತು, ಜಾನ್‌ಳ ವೀಸಾ ಸಮಾಪ್ತಿಯಾಗುತ್ತಿತ್ತು. ಕೊನೆಗೆ ಈ ಪ್ರಕರಣ ಹೈಕೋರ್ಟ್‌ಗೆ ಹೋಯಿತು. ಅಲ್ಲಿ ಹೈಕೋರ್ಟ್‌ ಇನ್ನಷ್ಟು ಜಟಿಲ ಪ್ರಶ್ನೆಗಳನ್ನು ಕೇಳತೊಡಗಿತು. ಈ ಪ್ರಕರಣ ಹ್ಯೂಮನ್‌ ಟ್ರಾಫಿಕಿಂಗ್‌ಗೆ ಸಂಬಂಧಿಸಿದ್ದೇನೋ ಎಂದು ಕೋರ್ಟ್‌ಗೆ ಸಂದೇಹ ಮೂಡಿತು.

ವಿವಾಹದ ನಂತರ ಪತಿಪತ್ನಿಗೆ ಪರಸ್ಪರರ ಮೇಲೆ ಹಕ್ಕು ಮೂಡುತ್ತದೆ. ಜೊತೆಗೆ ಸಮಾಜ ಮತ್ತು ಕಾನೂನು ಇಬ್ಬರಿಗೂ ಹಲವು ಸಮ್ಮಿಳಿತ ಹಕ್ಕುಗಳನ್ನು ನೀಡುತ್ತವೆ. ಆದರೆ ಈ ಪ್ರಕರಣ ಪ್ರೇಮಕ್ಕೆ ಸಂಬಂಧಿಸಿದ್ದು, ಇದರ ಕುರಿತು ಹೆಚ್ಚು ಕೆದಕುವುದು ತಪ್ಪು. ಈ ಒಪ್ಪಂದ ಒಮ್ಮೊಮ್ಮೆ ತಪ್ಪು ಕೆಲಸಗಳಿಗೂ ದಾರಿ ಮಾಡಿಕೊಡಬಹುದು. ಇಂಥ ಮದುವೆಗಳ ಕುರಿತು ಪೊಲೀಸ್‌ ಅಥವಾ ಕೋರ್ಟ್‌ ಮೀನಾಮೇಷ ಎಣಿಸುವುದು ತಪ್ಪು. ಅದರಿಂದ ಅನೇಕ ಸಮಸ್ಯೆಗಳು ಹುಟ್ಟುತ್ತವೆ. ಹೀಗಾಗಿಯೇ ಇಂಥ ಅನುಭವಹೀನ ಹೊಸ ಜೋಡಿಗಳು ಎಷ್ಟೋ ಬ್ಲ್ಯಾಕ್‌ಮೇಲ್‌ಗಳಿಗೆ ತುತ್ತಾಗುತ್ತವೆ. ಇಂಥವರು ಪ್ರೇಮಕ್ಕೆ ಸಿಲುಕಿದ ಮೇಲೆ ಮನೆಯಿಂದ ಓಡಿಹೋಗಿ ಮದುವೆಯಾಗುವುದು ಅಸಂಭವ. ಏಕೆಂದರೆ ಕೋರ್ಟಿನ ದಲ್ಲಾಳಿಗಳು ಒಂದೋ, ಸುಳ್ಳು ಪ್ರಮಾಣಪತ್ರ ನೀಡುತ್ತಾರೆ, ಇಲ್ಲ ದೊಡ್ಡ ಮೊತ್ತದ ಹಣ ಕೀಳುತ್ತಾರೆ.

ಹೃದಯನಾಥ್‌ ಹಾಗೂ ಜಾನ್‌ ಪಮೇಲಾರ ಮದುವೆ ನಡೆದ ಮೇಲೆ ಅವರೇನಾದರೂ ತಪ್ಪು ಹೆಜ್ಜೆ ಇರಿಸಿದ್ದರೆ, ಅವರ ಮೇಲೆ ಮೊಕದ್ದಮೆ ಹೂಡುವುದು ಸರಿ. ಆದರೆ ಮದುವೆಗೆ ಮೊದಲೇ ಅವರ ವಯಸ್ಸಿನಲ್ಲಿ ಅಂತರವಿದೆ ಎಂದು ಮದುವೆಗೆ ಅಡ್ಡಿಪಡಿಸುವುದು ಯಾವ ನ್ಯಾಯ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ