ನಿರ್ಮಲಾ ಮತ್ತು ರಮೇಶ್ ತಮ್ಮ 15 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದರು. ಆ ಸಮಯದಲ್ಲಿ ನಿರ್ಮಲಾಳಿಗೆ ತನಗೆ ಯಾವ ಯಾವ ವಸ್ತುಗಳ ಮೇಲೆ ಹಕ್ಕಿದೆ, ಯಾವುದರ ಮೇಲಿಲ್ಲ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿರಲಿಲ್ಲ. ಹೀಗಾಗಿ ಅವಳು ಮನೆಯ ಆಸ್ತಿಯಲ್ಲಿ ತನಗೆ ಬರಬೇಕಾದ ಪಾಲಿನ ಬಗ್ಗೆ ಕೇಳಲಿಲ್ಲ. ರಮೇಶ್ ಮಗುವನ್ನು ತನ್ನ ಬಳಿಯೇ ಇರಲು ಅವಕಾಶ ಕೊಟ್ಟ. ಹಾಗಾಗಿ ಅವಳಿಗೆ ಮನೆಯ ಆಸ್ತಿಯ ಬಗ್ಗೆ ಗಮನವೇ ಹೋಗಲಿಲ್ಲ. ಅವಳು ಉದ್ಯೋಗಸ್ಥೆ. ಅವರು ಈವರೆಗೆ ಯಾವ ಮನೆಯಲ್ಲಿ ವಾಸಿಸುತ್ತಿದ್ದರೊ ಅದನ್ನು ಇಬ್ಬರೂ ಗಳಿಸಿದ ಹಣದಿಂದ ಖರೀದಿಸಲ್ಪಟ್ಟಿತ್ತು.
ಅಂದಹಾಗೆ ವಿಚ್ಛೇದನದ ಬಳಿಕ ಅವಳ ಮನಸ್ಸು ಅದೆಷ್ಟು ಚೂರು ಚೂರಾಗಿ ಹೋಗಿತ್ತೆಂದರೆ, ಭವಿಷ್ಯದ ಬಗ್ಗೆ ಯಾವುದಾದರೂ ಯೋಚನೆ ಅಥವಾ ಮುಂಬರುವ ತೊಂದರೆ, ತಾಪತ್ರಯಗಳ ಬಗ್ಗೆ ಅವಳಿಗೆ ಗಮನವೇ ಹೋಗಿರಲಿಲ್ಲ. ವಾಸ್ತವದಲ್ಲಿ ವಿಚ್ಛೇದನ ಮಾನಸಿಕವಾಗಿ ಘಾಸಿಗೊಳಿಸುತ್ತದೆ. ಆದರೆ ಅದರ ಆರ್ಥಿಕ ಪರಿಣಾಮಗಳು ಮತ್ತಷ್ಟು ಘೋರವಾಗಿರುತ್ತವೆ.
ವಿಚ್ಛೇದನದ ಕೆಲವು ತಿಂಗಳುಗಳ ಬಳಿಕ ನಿರ್ಮಾಲಳಿಗೆ ತಾನು ದೊಡ್ಡ ತಪ್ಪು ಮಾಡಿದೆ ಎಂದು ಅನಿಸತೊಡಗಿತು. ಏಕಾಂಗಿಯಾಗಿ ಜೀವನ ಸಾಗಿಸುವ ಕಹಿ ಅನುಭವಗಳಿಂದ ರೋಸಿಹೋದ ಆಕೆ ಆಸ್ತಿಯನ್ನೆಲ್ಲ ರಮೇಶ್‌ಗೆ ಬಿಟ್ಟುಕೊಟ್ಟು ತನ್ನ ಕಾಲ ಮೇಲೆ ತಾನು ದೊಡ್ಡ ಚಪ್ಪಡಿ ಎಳೆದುಕೊಂಡೆ ಎಂದು ಭಾಸವಾಯಿತು. ಆಗ ಅವಳು ರಮೇಶ್‌ನನ್ನು ಸಂಪರ್ಕಿಸಿ ತನ್ನ ಪಾಲನ್ನು ಕೇಳಿದಳು. ಮನೆಯನ್ನು ಇಬ್ಬರೂ ಸೇರಿಯೇ ಕೊಂಡುಕೊಂಡಿದ್ದೆವು ಎಂಬುದನ್ನು ಅವನಿಗೆ ನೆನಪಿಸಿದಳು.
ಆಸ್ತಿಯ ಮೇಲೆ ಕಾನೂನು ರೀತ್ಯಾ ಹಕ್ಕು
ಕಾನೂನು ರೀತ್ಯಾ, ವೈವಾಹಿಕ ಜೀವನದ ಸಂದರ್ಭದಲ್ಲಿ ಖರೀದಿಸಿದ ಯಾವುದೇ ವಸ್ತು ಗಂಡಹೆಂಡತಿ ಇಬ್ಬರದೂ ಆಗಿರುತ್ತದೆ. ಯಾವುದೇ ವಸ್ತು ಖರೀದಿಸಿದ ಸಂದರ್ಭದಲ್ಲಿ ಹೆಂಡತಿಯ ಉಪಸ್ಥಿತಿ ಇರದೇ ಇದ್ದರೂ ಈ ನಿಯಮ ಅನ್ವಯವಾಗುತ್ತದೆ. ಅಂದಹಾಗೆ, ಪಿತ್ರಾರ್ಜಿತವಾಗಿ ಬಂದ ಯಾವುದೇ ಆಸ್ತಿ ಈ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಯಾವ ವಸ್ತುಗಳ ಮೇಲೆ ಹೆಂಡತಿಯ ಹಕ್ಕು ಇರುತ್ತದೆ, ಅದರ ಯಾವುದೇ ಪುರಾವೆ ಇರದೇ ಇದ್ದರೂ ಕೂಡ ಆಕೆಗೆ ಅದರ ಹಕ್ಕು ಇದ್ದೇ ಇರುತ್ತದೆ.
ನಿರ್ಮಲಾಳ ಪ್ರಕರಣದಲ್ಲಿ ಆಸ್ತಿ ಅಂದರೆ ಮನೆ ರಮೇಶನ ಹೆಸರಿನಲ್ಲಿತ್ತು. ಆದರೆ ಅದಕ್ಕೆ ಮಾಡಿದ ಸಾಲದ ದಾಖಲೆಗಳಲ್ಲಿ ಅವಳ ಹೆಸರು ಕೂಡ ಇತ್ತು. ಜೊತೆಗೆ ಅವಳು ತನ್ನ ಖಾತೆಯಿಂದ ಹಲವು ಇಎಂಐಗಳನ್ನು ಕೂಡ ಪಾತಿಸಿದ್ದಳು. ವಿಚ್ಛೇದನದ ಬಳಿಕ ಅವಳು ಹೋಮ್ ಲೋನ್ ಇಎಂಐನ ಇಸಿಎಸ್ ಮ್ಯಾಂಡೇಜ್‌ನ್ನು ಕೂಡ ಅಂತಿಮಗೊಳಿಸಿರಲಿಲ್ಲ. ಇದೇ ಕಾರಣದಿಂದ ಗಂಡನಿಂದ ಬೇರ್ಪಟ್ಟ ಬಳಿಕ 2 ತಿಂಗಳ ಹೋಮ್ ಲೋನ್‌ನ ಇಎಂಐ ಅವಳ ಖಾತೆಯಿಂದ ವರ್ಗಾವಣೆಗೊಂಡಿತ್ತು. ಅದನ್ನು ಗಮನಿಸಿ ನಿರ್ಮಾಲ ತನ್ನ ಬ್ಯಾಂಕ್‌ಗೆ ಮುಂದಿನ ಇಎಂಐಗಳನ್ನು ತಡೆಹಿಡಿಯಲು ಸೂಚನೆ ಕೊಟ್ಟಳು. ಅದಕ್ಕೆ ಬ್ಯಾಂಕ್‌ನವರು ಬಹುದೀರ್ಘ ಪ್ರಕ್ರಿಯೆಯ ಬಗ್ಗೆ ಹೇಳಿದರು. ಅದನ್ನು ಪೂರ್ತಿಗೊಳಿಸದ ಹೊರತು ತಡೆಹಿಡಿಯುವುದು ಅಸಾಧ್ಯ ಎಂದರು.
ಜೀವನಾಂಶದ ಬೇಡಿಕೆ
ವಿಚ್ಛೇದನದ ಕೆಲವೇ ತಿಂಗಳುಗಳ ಬಳಿಕ ಎದುರಾದ ಮೊದಲ ತೊಂದರೆ ಇದೇನಾಗಿರಲಿಲ್ಲ. ಮತ್ತೆ ಹಲವು ಸಮಸ್ಯೆಗಳು ಆಕೆಯ ಮುಂದೆ ಆಕಸ್ಮಿಕವಾಗಿ ಪ್ರತ್ಯಕ್ಷವಾದ. ಅಂದಹಾಗೆ, ನಿರ್ಮಾಲ ಮಕ್ಕಳ ಪಾಲನೆ ಪೋಷಣೆಗಾಗಿ ಗಂಡನಿಂದ ಯಾವುದೇ ರೀತಿಯ ಪರಿಹಾರ ಅಥವಾ ಜೀವನಾಂಶವನ್ನು ಕೇಳಿರಲಿಲ್ಲ. ಆ ಸಮಯದಲ್ಲಿ ಆಕೆಗೆ ತಾನು ಗಳಿಸುತ್ತೇನೆ, ಅದರಲ್ಲಿಯೇ ಎಲ್ಲ ಸರಿಹೋಗುತ್ತದೆ, ಯಾವುದೇ ಆರ್ಥಿಕ ಸಮಸ್ಯೆ ಉಂಟಾಗದು ಎಂದು ಭಾವಿಸಿದ್ದಳು. ನಿರ್ಮಾಲಳಿಗೆ ಬಹುಬೇಗ ತನಗೆ ನ್ಯಾಯಯುತವಾಗಿ ಬರಬೇಕಿದ್ದುದನ್ನು ಕೇಳದೇ ತಾನು ಬಹುದೊಡ್ಡ ತಪ್ಪು ಮಾಡಿದೆ ಎನಿಸತೊಡಗಿತು.
ಒಂದು ವೇಳೆ ಜೊತೆ ಜೊತೆಗೆ ಇರಲು ಸಾಧ್ಯವಾಗದಿದ್ದರೆ, ವಿಚ್ಛೇದನ ಪಡೆಯುವುದು ಅನಿವಾರ್ಯವಾದರೆ ಯಾವ ಯಾವ ಸಂಗತಿಗಳ ಬಗ್ಗೆ ಗಮನಕೊಡಬೇಕು ಎಂದು ಸ್ವಲ್ಪ ಗಮನಿಸಿ :
ನಿಮ್ಮ ಪಾಲು ಅವಶ್ಯ ಪಡೆಯಿರಿ : ನೀವು ಮದುವೆಯಾಗಿ ಆ ಮನೆಯಲ್ಲಿದ್ದಾಗ ಯಾವುದಾದರೂ ಆಸ್ತಿಯನ್ನು ಖರೀದಿಸಿದ್ದರೆ, ಅದರ ಮೇಲೆ ಗಂಡಹೆಂಡತಿ ಇಬ್ಬರಿಗೂ ಸಮಾನ ಹಕ್ಕು ಇರುತ್ತದೆ. ಯಾರಾದರೂ ಒಬ್ಬರು ತಮ್ಮ ಸ್ವಂತ ಗಳಿಕೆಯಿಂದ ಒಂದು ಆಸ್ತಿಯನ್ನು ಖರೀದಿಸಿದ್ದರೆ, ಅದರಲ್ಲಿ ನೀವು ಯಾವಾಗ ಪಾಲು ಕೇಳಬೇಕೆಂದರೆ, ಆತ ಆರ್ಥಿಕವಾಗಿ ಸಾಕಷ್ಟು ಗಟ್ಟಿಗನಾಗಿದ್ದರೆ ಮಾತ್ರ ಕೇಳಬಹುದು. ಏಕೆಂದರೆ ವಿಚ್ಛೇದನದ ಬಳಿಕ ಯಾರದ್ದೇ ಜೀವನದಲ್ಲಿ ಬಹುದೊಡ್ಡ ಆರ್ಥಿಕ ಬದಲಾವಣೆ ಕಂಡುಬರಬಹುದು. ವಿಚ್ಛೇದನ ಇನ್ನೇನು ಆಗಿಯೇ ಬಿಡುತ್ತದೆ ಎಂದು ಖಾತ್ರಿಯಾಗುತ್ತಿದ್ದಂತೆ ನಿಮ್ಮ ಜಾಯಿಂಟ್ ಅಕೌಂಟ್ ಹಾಗೂ ಕ್ರೆಡಿಟ್ ಕಾರ್ಡ್‌ನ್ನು ಬಂದ್ ಮಾಡಿಸಿ.
ಈ ಕುರಿತಂತೆ ವಿಕಾಸ್‌ನ ಅನುಭವ ಕೇಳಿ. ಸುನೀತಾ ಜೊತೆಗೆ ಮದುವೆಯಾಗಿದ್ದ ಅವನು 3 ವರ್ಷದ ಬಳಿಕ ವಿಚ್ಛೇದನ ಪಡೆದ. ಕೆಲವು ದಿನಗಳ ಬಳಿಕ ಅವನಿಗೆ ಕೊರಿಯರ್‌ನಿಂದ ಒಂದು ಪಾತ್ರ ಬಂತು. ಅದರಲ್ಲಿ ಕ್ರೆಡಿಟ್ ಕಾರ್ಡ್‌ನ ಭಾರಿ ಮೊತ್ತದ ಸಾಲ ಪಾವತಿಸಲು ತಿಳಿಸಲಾಗಿತ್ತು. ಅದೇನು ಅವನು ಮಾಡಿದ ಸಾಲ ಆಗಿರಲಿಲ್ಲ. ಅವನಿಗೆ ಉಗ್ರ ಕೋಪ ಬಂತು. ಕ್ರೆಡಿಟ್ ಕಾರ್ಡ್‌ನ ಬಿಲ್‌ನ್ನು ಹರಿದು ಹಾಕಬೇಕೆಂದು ಅವನಿಗೆ ಅನಿಸಿತು. ಯಾವುದೇ ಕಾರಣಕ್ಕೂ ಈ ಹಣ ಪಾವತಿಸಬಾರದೆಂದು ಅವನು ನಿರ್ಧರಿಸಿದ. ಆದರೆ ಅವನ ಹಣಕಾಸು ಸಲಹೆಗಾರರು ಪೇಮೆಂಟ್ ಡಿಫಾಲ್ಟ್ ನಿಂದ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಹೀಗಾಗಿ ಅವನು ವಿಳಂಬ ಮಾಡದೇ ಆ ಬಾಕಿ ಹಣವನ್ನು ಪಾವತಿಸಿದ. ಆ ಬಳಿಕ ಅವನು ಆ ಕ್ರೆಡಿಟ್ ಕಾರ್ಡ್‌ನ್ನು ಬ್ಲಾಕ್ ಮಾಡಿದ.
ಬಾಕಿ ಸಾಲ ಚುಕ್ತಾ ಮಾಡಿ : ರಾಜೇಶ್ ಹಾಗೂ ಸುಲಕ್ಷಣಾ ವಿಚ್ಛೇದನ ಪಡೆಯುವಾಗ, ಅವರಿಬ್ಬರೂ ಸೇರಿ ಖರೀದಿಸಿದ್ದ ಕಾರನ್ನು ರಾಜೇಶ್ ತನ್ನ ಬಳಿಯೇ ಇಟ್ಟುಕೊಂಡ. ಆ ಮುಂಚೆ ಅವರಿಬ್ಬರೂ ಸೇರಿ 11 ಕಂತುಗಳನ್ನು ಪಾವತಿಸಿದ್ದರು. ವಿಚ್ಛೇದನದ ಬಳಿಕ ರಾಜೇಶ್ ಕಂತು ಕೊಡಲು ನಿರಾಕರಿಸಿದಾಗ, ಹಣ ಕೊಡಲು ಬ್ಯಾಂಕ್ ಅವನನ್ನು ಸಂಪರ್ಕಿಸಿತು.
ರಾಜೇಶ್ ಆ ಹಣವನ್ನು ಸುಲಕ್ಷಣಾಳಿಂದ ವಸೂಲಿ ಮಾಡಬೇಕೆಂದು ತಿಳಿಸಿದ. ಸುಲಕ್ಷಣಾ ಬಾಕಿ ಮೊತ್ತವನ್ನು ಸಂದಾಯ ಮಾಡಿದಳು. ಆದಾಗ್ಯೂ ರಾಜೇಶನನ್ನು ಡಿಫಾಲ್ಟರ್ ಎಂದು ಘೋಷಿಸಿತು. ಹೀಗೇಕೆ ಮಾಡಲಾಯಿತು? ಈ ಕುರಿತಂತೆ ಕ್ರೆಡಿಟ್ ಇನ್‌ಫರ್ಮೇಶನ್ ಬ್ಯೂರೊ (ಸಿವಿಲ್)ದ ಹಿರಿಯ ಅಧಿಕಾರಿಯೊಬ್ಬರು ಹೀಗೆ ಹೇಳುತ್ತಾರೆ, ದಂಪತಿಗಳು ಜಾಯಿಂಟ್ ಲೋನ್‌ತೆಗೆದುಕೊಂಡಿದ್ದರು. ಅದನ್ನು ತರಿಸುವ ಜವಾಬ್ದಾರಿ ಇಬ್ಬರದ್ದೂ ಆಗಿದೆ. ವಿಚ್ಛೇದನದ ಬಳಿಕ ಈ ಫೈನಾನ್ಶಿಯಲ್ ವೈಬ್ಲಿಟಿಯಿಂದ ಮುಕ್ತರಾಗುವುದಿಲ್ಲ.
ಕ್ರೆಡಿಟ್ ಸ್ಕೋರ್ ಬಗ್ಗೆ ಗಮನಕೊಡಿ : ಬೇರೆ ಬೇರೆ ಆಗಲಿರುವ ದಂಪತಿಗಳು ತಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ವಿಶೇಷ ಗಮನ ಕೊಡಬೇಕು. ಯಾವುದಾದರೂ ಜಾಯಿಂಟ್ ಲೋನ್ ಬಾಕಿಯಿದ್ದರೆ ಆ ಬಗ್ಗೆ ಯಾವಾಗ ಬೇಕಾದರೂ ವಿವಾದ ಉಂಟಾಗಬಹುದು. ಅದರ ಪರಿಣಾಮ ಇಬ್ಬರ ಕ್ರೆಡಿಟ್ ಸ್ಕೋರ್ ಮೇಲೂ ಉಂಟಾಗುತ್ತದೆ. ಬ್ಯಾಂಕ್ ತನ್ನ ಸಾಲ ವಸೂಲಿ ಮಾಡಿಕೊಂಡ ಬಳಿಕ ಹಾಗಾಗಬಹುದು.
ರಾಜೇಶ್ ಮತ್ತು ಸುಲಕ್ಷಣಾ ಪ್ರಕರಣದಲ್ಲಿ ರಾಜೇಶ್ ಸುಲಕ್ಷಣಾಳಿಗಾಗಿಯೇ ಕಾರ್ ಲೋನ್ ತೆಗೆದುಕೊಂಡಿದ್ದ. ಕೊನೆಗೆ ಅವನೇ ಸಾಲ ತೀರಿಸಿದ್ದ. ಆದರೆ ಆ ಬಳಿಕ ಅವನು ಡಿಫಾಲ್ಟರ್ ಆದ. ಏಕೆಂದರೆ ವಿಚ್ಛೇದನದ ಬಗ್ಗೆ ಅವನು ಬ್ಯಾಂಕಿಗೆ ತಿಳಿಸಿರಲಿಲ್ಲ. ಆ ಸಮಯದಲ್ಲಿ ಕೈಗೊಳ್ಳಬೇಕಾದ ಪ್ರಕ್ರಿಯೆಗಳನ್ನು ಅವನು ನೆರವೇರಿಸಲಿಲ್ಲ. ಹೀಗಾಗಿ ಬ್ಯಾಂಕ್ ಅವನನ್ನು ಡಿಫಾಲ್ಟರ್ ಎಂದು ಘೋಷಿಸಿತು.
ಅಂದಹಾಗೆ, ಡೈವೋರ್ಸ್ ಸೆಟಲ್ ಮೆಂಟ್‌ನಲ್ಲಿ ನೀವು ಒಬ್ಬರಷ್ಟೇ ಸಾಲ ಚುಕ್ತಾ ಮಾಡುತ್ತೀರೆಂದು ಹೇಳಿದರೂ ಕೂಡ, ಬ್ಯಾಂಕ್ ಜೊತೆಗಿನ ಮೂಲ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಉಂಟಾಗದು.
ಆಸ್ತಿಯಲ್ಲಿ ಪಾಲು : ಒಂದು ವೇಳೆ ವಿಚ್ಛೇದನ ಪರಸ್ಪರ ಸಮ್ಮತಿ ಮೇರೆಗೆ ಆದರೆ ಆಸ್ತಿಯ ಪಾಲುದಾರಿಕೆಯಂತಹ ಅನೇಕ ಸಮಸ್ಯೆಗಳಿಂದ ದೂರ ಇರಬಹುದು. ಆದರೆ ಇದು ಸಾಧ್ಯವಾಗುವುದು ಸಂಗಾತಿ ಸೂಕ್ತ ರೀತಿಯಲ್ಲಿ ಡಿಮ್ಯಾಂಡ್ ಮಾಡಿದಾಗ, ಇಬ್ಬರೂ ಬೇರೆ ಬೇರೆ ಆಗುವಾಗ ಆಸ್ತಿ ಹಾಗೂ ಸಾಲಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಅದರ ಮಾರುಕಟ್ಟೆ ಮೌಲ್ಯವನ್ನು ಸೂಕ್ತ ರೀತಿಯಲ್ಲಿ ಪತ್ತೆ ಹಚ್ಚಬೇಕು. ದಂಪತಿಗಳು ಪರಸ್ಪರ ಸಮ್ಮತಿಯಿಂದ ಆಸ್ತಿಯನ್ನು ಹಂಚಿಕೊಳ್ಳುವಂತೆ, ಸಾಲದ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು. ಆದರೆ ಇದು ಅಂದುಕೊಂಡಷ್ಟು ಸುಲಭವಲ್ಲ. ಆದರೆ ಪ್ರಯತ್ನ ಮಾಡಿದರೆ ಇಬ್ಬರಿಗೂ ಲಾಭವಿದೆ. ಇಬ್ಬರೂ ಸೇರಿ ಹೆಂಡತಿಗೆ ಮನೆ ಹಾಗೂ ಗಂಡನಿಗೆ ಇತರೆ ಆಸ್ತಿಗಳು ಎಂದು ನಿರ್ಧರಿಸಬಹುದು.
ಹೆಂಡತಿಗೆ ಮನೆ ದೊರೆಯುವುದರಿಂದ ಆಕೆ ತನ್ನನ್ನು ತಾನು ಸುರಕ್ಷಿತಳೆಂದು ಭಾವಿಸಬಹುದು. ಆ ಬಳಿಕ ಆಕೆಗೆ ಒಂದು ನಿಶ್ಚಿತ ಮೊತ್ತದ ಆದಾಯ ಬೇಕೇಬೇಕು. ಹೀಗಾಗಿ ಹೆಂಡತಿ ಒಂದು ನಿಗದಿತ ಆದಾಯ ಕೊಡುವಂತಹ ಆಸ್ತಿಯ ಬೇಡಿಕೆ ಸಲ್ಲಿಸಬಹುದು.
ಒಂದು ತಿಳಿವಳಿಕೆಯ ವಿಷಯವೆಂದರೆ, ಇವೆಲ್ಲ ರಗಳೆಗಳಿಂದ ಪಾರಾಗಲು ಮನೆ ಒಡೆಯುವುದರಿಂದ ವಿಚ್ಛೇದನ ಪಡೆಯದೆ ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ಒಂದು ವೇಳೆ ಅದು ಸಾಧ್ಯವೇ. ಇಲ್ಲ ಅಂದಾಗ ಮೇಲ್ಕಂಡ ಸಂಗತಿಗಳನ್ನು ಅವಶ್ಯವಾಗಿ ಗಮನಿಸಿ. ವಿಚ್ಛೇದನದ ಬಳಿಕ ನಿಮ್ಮನ್ನು ನೀವು ಹಾಳಾಗದಂತೆ ಕಾಪಾಡಿಕೊಳ್ಳಬಹುದು.
– ವೀಣಾ ಕುಲಕರ್ಣಿ