ಕನಸು ಕಾಣುವುದು ಎಲ್ಲರ ಹಕ್ಕು. ಕಪ್ಪಾದರೇನು, ಬೆಳ್ಳಗಿದ್ದರೇನು, ಸಣ್ಣ ಊರಾದರೇನು, ಅಥವಾ ದೊಡ್ಡ ನಗರವಾದರೇನು, ಹೆಣ್ಣಾದರೇನು, ಗಂಡಾದರೇನು……? ಎಲ್ಲರಿಗೂ ಕನಸು ಕಾಣುವ ಮನಸ್ಸಿದೆ. ಆದರೆ ಕನಸನ್ನು ನನಸು ಮಾಡಿಕೊಳ್ಳುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಬಹಳ ಅಪರೂಪಕ್ಕೆ ಎಲ್ಲೋ ಒಬ್ಬರು ಸಿಗಬಹುದು. ಅಂತಹ ಅಪರೂಪದ ವ್ಯಕ್ತಿ ನೋರಾ ರಶ್ಮಿ ಸರಾಲೆ.
ಮಲೆನಾಡಿನ ಸಣ್ಣ ಊರು ಸಾಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನನ. ತಂದೆಯದು ಸರ್ಕಾರಿ ಕೆಲಸ. ತಾಯಿ ಗೃಹಿಣಿ. ತಂದೆ ಕಛೇರಿಗೆ ಹೋದರೆ ತಾಯಿ ಅಡುಗೆಮನೆಯಲ್ಲಿ. ಅವಳಿಗೆ ರಜವಿಲ್ಲ, ಸಂಬಳವಿಲ್ಲ. ಆದರೂ ಸದಾ ದುಡಿಮೆ. ತಂದೆ ವೃತ್ತಿಯಲ್ಲಿದ್ದಾಗಲೂ, ನಂತರ ನಿವೃತ್ತಿಯಾದ ಮೇಲೂ ತಾಯಿಯ ದಿನಚರಿಯಲ್ಲಿ ಬದಲಾವಣೆ ಇಲ್ಲ. ರಶ್ಮಿಯ ಮನಸ್ಸಿನಲ್ಲಿ ಸದಾ ಮೂಡುತ್ತಿದ್ದ ಪ್ರಶ್ನೆ, ಹೆಣ್ಣು ಯಾವಾಗಲೂ ಅಡುಗೆಮನೆಗೆ ಮೀಸಲೇ? ಅವಳು ಮತ್ತೇನೂ ಮಾಡಬಾರದೆ? ಈ ವ್ಯವಸ್ಥೆಯ ಬಗ್ಗೆ ಬೇಸರ ಮೂಡುತ್ತಿತ್ತು. ರಶ್ಮಿ ಓದಿನಲ್ಲಿ ಮುಂದು. ವೃತ್ತಿಪರ ಕೋರ್ಸ್ ಮಾಡಿಕೊಂಡು ಒಳ್ಳೆಯ ಉದ್ಯೋಗ ಪಡೆದು ಬೆಂಗಳೂರಿಗೆ ಬಂದರು. ಬಾಲ್ಯದ ಗೆಳೆಯ ನವೀನ್‌ರವರೊಂದಿಗೆ ಪ್ರೇಮ ವಿವಾಹ ಆಯಿತು.
ಮಾಡೆಲಿಂಗ್ ರಶ್ಮಿಯ ಕನಸು. ಆದರೆ ಬೆಳ್ಳಗೆ, ಸಪೂರಾಗಿರುವ, ಶ್ವೇತ ವರ್ಣದ ಸುಂದರಿಯರು ಮಾತ್ರ ಮಾಡೆಲಿಂಗ್ ಮಾಡಲು ಸಾಧ್ಯ ಎನ್ನುವ ವನೋಭಾವವಿರುವ ಪರಿಸರ. ಆದರೂ ರಶ್ಮಿಯ ಕನಸು ಬೆಚ್ಚಗೆ ಮನದಲ್ಲಿ ಹುದುಗಿ ಕುಳಿತ್ತಿತ್ತು. ಇವರುದು 5.2 ಅಡಿ ಎತ್ತರ, ಬಣ್ಣ ಮಂಕು. ಹೀಗಾಗಿ ಅವರ ಕನಸು ಒಂದು ಪ್ರಶ್ನೆಯಾಗಿಯೇ ಉಳಿದಿತ್ತು. ಮದುವೆಯೂ ಆಯಿತು. ಆದರೆ ಕನಸು ಮಾತ್ರ ಆಗಾಗ ರಶ್ಮಿಯನ್ನು ಎಚ್ಚರಿಸುತ್ತಲೇ ಇತ್ತು.
ಒಮ್ಮಿಂದೊಮ್ಮೆಲೇ ಒಂದು ಸುಂದರ ದಿನ ರಶ್ಮಿಯ ಕಣ್ಣು ತೆರೆಯಿತು. ಹುಟ್ಟು ನಮ್ಮ ಕೈನಲ್ಲಿ ಇಲ್ಲ, ನಮ್ಮ ರೂಪ ನಮ್ಮ ನಿಯಂತ್ರಣದಲ್ಲಿ ಇಲ್ಲ. ಆದರೆ ಇರುವ ರೂಪವನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡುವುದು ನಮ್ಮ ಕೈನಲ್ಲೇ ಇದೆ. ಕೇಶ ವಿನ್ಯಾಸ, ಧರಿಸುವ ಬಟ್ಟೆ, ಜೊತೆಗೆ ಸರಿಯಾದ ಆಹಾರ ಸೇವನೆ ಮತ್ತು ವ್ಯಾಯಾಮದಿಂದ ಕಂಬಳಿ ಹುಳು ಸುಂದರ ಚಿಟ್ಟೆಯಾಗಿ ಮಾರ್ಪಡುವಂತೆ ನಮ್ಮ ರೂಪವನ್ನೂ ಸಹ ಬದಲಾಯಿಸಬಹುದೆಂಬ ಜ್ಞಾನೋದಯಾಯಿತು.
ತಮ್ಮನ್ನು ತಾವು ಪೂರ್ಣವಾಗಿ ಬದಲಾಯಿಸಿಕೊಂಡರು. ಕ್ಯಾಪ್ ಜೆಮಿನಿಯಂತಹ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ, ಅದರ ಜೊತೆ ಪ್ರವೃತ್ತಿ ಮಾಡೆಲಿಂಗ್ ಮತ್ತು ಗ್ರೂಮಿಂಗ್ ಆಯಿತು. 15 ವರ್ಷದಿಂದ ಐ.ಟಿ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಲರ್ನಿಂಗ್ ಬಿಸ್‌ನೆಸ್ ಪಾರ್ಟ್‌ನರ್ ಸಹ ಹೌದು.
“2018ರಲ್ಲಿ ನಾನು ಫ್ಯಾಷನ್ ಇಂಡಸ್ಟ್ರಿಗೆ ಪ್ರವೇಶಿಸಿದೆ. ಆಗ ನನ್ನನ್ನು ನಾನು ಮಿಕ್ಕವರ ಮುಂದೆ ನಿರೂಪಿಸುವ ಆಸೆ ಇತ್ತು. ಆದರೆ ನಂತರ ನಾನು ಮನಗಂಡಿದ್ದು, ಯಾರನ್ನೋ ನಾನು ಮೆಚ್ಚಿಸುವ ಅಗತ್ಯವೇನಿದೆ? ನಾನು ಯಶಸ್ಸಿನ ಬೆನ್ನು ಹತ್ತಬಾರದು. ಅದು ನನ್ನನ್ನು ಹುಡುಕಿ ಬರಬೇಕು ಎಂದು ನಿರ್ಧರಿಸಿದೆ. ಅಂತೆಯೇ ಯಶಸ್ಸನ್ನೂ ಪಡೆದೆ!
“2018ರಲ್ಲಿ ಶ್ರೀಮತಿ ಕರ್ನಾಟಕ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆದೆ ಮತ್ತು ಫಿಟ್ನೆಸ್ ಕ್ವೀನ್ ಎನ್ನುವ ಬಿರುದನ್ನೂ ಪಡೆದೆ. ನಂತರ ಅದೇ ವರ್ಷದಲ್ಲಿ ಒಂದು ಸ್ಪರ್ಧೆಯಲ್ಲಿ ಮೊದಲನೇ ರನ್ನರ್ ಅಪ್ ಆದೆ. ಇದು ಹಾಗೆಯೇ ಮುಂದವರಿಯುತ್ತಾ ಸಿಂಗಾಪೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದೆ,” ಎಂದು ಸಂತಸದಿಂದ ಉದ್ಗರಿಸುತ್ತಾರೆ.
ಇವರ ಫ್ಯಾಷನ್ ಪಯಣ ಪ್ರಾರಂಭವಾದದ್ದು 2018ರಲ್ಲಿ. ಅದೇ ವರ್ಷ ಐದು ಬಾರಿ ವಿಜಯದ ಕಿರೀಟ ಧರಿಸಿದರು. ಇವರ ವಿಜಯ ಪತಾಕೆಗಳು ಅನೇಕ.
2019ರ ಆಗಸ್ಟ್ ನ ಲೈಫ್ ಸ್ಟೈಲ್ ಪತ್ರಿಕೆಯ ಮುಖಪುಟದ ಹುಡುಗಿಯಾಗಿ ರಾರಾಜಿಸಿದರು.
ಜನವರಿ 2ರಲ್ಲಿ ಮನ್ ಎಕ್ಸ್ ಎನ್ಸ್ ಅಚೀವರ್ ಅವಾರ್ಡ್ (ರಾಷ್ಟ್ರೀಯ ಮಟ್ಟದ ಪ್ರಶಸ್ತಿ).
ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ `ಪೂರ್ಣವಾಗಿ ಬದಲಾವಣೆ’ ವಿಷಯದ ಬಗ್ಗೆ ಭಾಷಣ
2018ರಲ್ಲಿ ಸಿಂಗಪೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನವರೆಗೂ ಪಯಣ.
ಗೋವಾದಲ್ಲಿ ನಡೆದ ಸ್ಪರ್ಧೆಯಲ್ಲಿ ಮೊದಲ ರನ್ನರ್‌ಅಪ್ ಆಗಿ ಆಯ್ಕೆ.
ದಕ್ಷಿಣ ಭಾರತದ ಬ್ರಾಂಡ್ ಅಂಬಾಸಿಡರ್
2020 ರ ಗ್ರಾಂಡ್ ಜ್ಯೂರಿ (ತೀರ್ಪುಗಾರರು)
ಜೆನೀವಾದ ಟ್ರಂಪ್ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ.
ಇವುಗಳೇ ಅಲ್ಲದೆ ಮತ್ತಷ್ಟು ಗೆಲುವಿನ ಗರಿಗಳು ಇವರ ಕೀರ್ತಿಯ ಕಿರೀಟಕ್ಕೆ ಸೇರಿಕೊಂಡಿವೆ.
ಇಷ್ಟೊಂದು ಸಾಧನೆ ಗೈದ ರಶ್ಮಿ ಅವರ ಮದುವೆಯಾಗಿ 11 ವರ್ಷಗಳಾಗಿವೆ. 10 ವರ್ಷದ ಮಗನಿದ್ದಾನೆ ಎಂದರೆ ನಿಜಕ್ಕೂ ನಂಬಲು ಸಾಧ್ಯವಿಲ್ಲ.
“ಜೀವನ ಸುಲಭವಲ್ಲ. ಎಲ್ಲಕ್ಕೂ ಕಲ್ಲು ಹೊಡಿತಾರೆ, ಕಲ್ಲಿನಿಂದ ಸಮಾಧಿ ಕಟ್ಟಬೇಡಿ. ಸುಂದರ ಸೌಧವನ್ನು ಕಟ್ಟಿ, ಕನಸು ಕಾಣುವುದು ಹೆಚ್ಚಲ್ಲ, ಅವುಗಳನ್ನು ಸಾಕಾರಪಡಿಸಿಕೊಳ್ಳಲು ಖಂಡಿತ ಸಾಧ್ಯವಿದೆ. ಮನಸ್ಸು ಮಾಡಬೇಕಷ್ಟೇ!” ಎನ್ನುತ್ತಾರೆ ರಶ್ಮಿ.
`ನಾನು ಏನು ಮಾಡಬಲ್ಲೆ? ನನಗೆ ರೂಪವಿಲ್ಲ, ಧೈರ್ಯವಿಲ್ಲ, ಪ್ರೋತ್ಸಾಹವಿಲ್ಲ’ ಎಂದು ಕೊರಗುವವರಿಗೆ ಇರುವ ಒಳ್ಳೆಯ ಸ್ಛೂರ್ತಿಯಾಗಬಲ್ಲರು.
ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು. ಜಯ ಲಭಿಸಲು ಅವಳು ಎಷ್ಟಾದರೂ ಕಷ್ಟಪಡಬಲ್ಲಳು. ಆದರೆ ಗುರಿ ಮುಟ್ಟುವುದೇ ಅವಳ ಮೂಲ ಉದ್ದೇಶವಾಗಿರುತ್ತದೆ ಎನ್ನುವುದನ್ನು ಮಾಡಿ ತೋರಿಸಿದ ಸಾಧಕಿ ನೋರಾ ರಶ್ಮಿ ಸೆರಾ. ಇವರ ಸಾಧನೆ ಇನ್ನಷ್ಟು ವಿಸ್ತಾರಗೊಂಡು ತನ್ಮೂಲಕ ಭಾರತದ ಕೀರ್ತಿಯನ್ನು ಇನ್ನೂ ಎತ್ತರಕ್ಕೇರಿಸಲಿ ಎಂದು ಗೃಹಶೋಭಾ ಹಾರೈಸುತ್ತಾಳೆ, ಆಲ್ ದಿ ಬೆಸ್ಟ್ ರಶ್ಮಿ!
– ಮಂಜುಳಾ ರಾಜ್