ಶೃತಿಯ ಮದುವೆ ಆಗಿ 2 ವಾರ ಕಳೆದಿರಲಿಲ್ಲ, ಅಷ್ಟರಲ್ಲಿ ದೇಶದಲ್ಲಿ ಎಲ್ಲೆಡೆ ಲಾಕ್‌ ಡೌನ್‌ ಬಿಗಿ ಬಂದೋಬಸ್ತು ಜಾರಿಯಾಗಿತ್ತು. ಶೃತಿ ಮೋಹನ್‌ ಸಿಂಗಾಪುರಕ್ಕೆ ಮಧುಚಂದ್ರಕ್ಕೆಂದು ಹೋಗಬೇಕೆಂದು ನಿರ್ಧರಿಸಿದ್ದರು. ಆದರೆ ಕೊರೋನಾ ದೆಸೆಯಿಂದಾಗಿ ಹೊರಗೆ ಓಡಾಡುವುದಿರಲಿ, ಮನೆಯಲ್ಲೇ ಕೈದಿಗಳಾಗಿ ಇರಬೇಕಾಯ್ತು. ಅದಾಗಿ ಲಾಕ್‌ ಡೌನ್‌ ಸಡಿಲಿಕೆ ಎಂದು ಒಂದೊಂದಾಗಿ ಅಂಗಡಿಗಳು ತೆರೆದರೂ ಅವಳು ಬ್ಯೂಟಿ ಪಾರ್ಲರ್‌ಗೆ ಹೋಗಲು ಹಿಂಜರಿದಳು. ಹೀಗಾಗಿ ಮನೆಯಲ್ಲಿ ತಾನೇ ಮೇಕಪ್‌ಮಾಡಿಕೊಳ್ಳಲು ನಿರ್ಧರಿಸಿದಳು.

ನವ ವಧುವಾದ ಶೃತಿ ಹಲವು ಹನ್ನೊಂದು ಕನಸು ಕಂಡಿದ್ದಳು. ಎಲ್ಲಾ ನವ ವಧುಗಳಂತೆ ತಾನೂ ಸದಾ ಸಿಂಗರಿಸಿಕೊಂಡು ಎಲ್ಲರಿಗಿಂತ ಸುಂದರವಾಗಿರಬೇಕೆಂದು ಬಯಸಿದಳು. ಮೊದಲಿನಿಂದ ಪಾರ್ಲರ್‌ಗೆ ಮಾತ್ರ ಹೋಗಿ ಅಭ್ಯಾಸವಿರುವ ಶೃತಿ ಮತ್ತು ಅಂಥ ಅನೇಕ ಹೆಂಗಸರಿಗೆ ಮನೆಯಲ್ಲೇ ಮೇಕಪ್‌ ಮಾಡಿಕೊಳ್ಳಲು ಎಕ್ಸ್ ಪರ್ಟ್ಸ್ ಸಲಹೆ ಅತ್ಯಗತ್ಯ ಬೇಕು.

ಹಲವು ವಾರ ಶೃತಿ ಹಾಗೇ ಕಳೆದಳು. ಆದರೆ ಕ್ರಮೇಣ ತುಟಿ ಹಾಗೂ ಮುಖದಲ್ಲಿ ಅಲ್ಲಲ್ಲಿ ರೋಮ ಇಣುಕುತ್ತಿರುವುದು ಅವಳಿಗೆ ಕಸಿವಿಸಿ ಆಯಿತು. ಬಾಲ್ಯದಿಂದಲೇ ಅವಳಿಗೆ ಈ ಸಮಸ್ಯೆ ಇತ್ತು. 18 ತುಂಬಿದ ಮೇಲೆ ಮತ್ತಷ್ಟು ಹೆಚ್ಚಿತು. ಹೀಗಾಗಿ ಪ್ರತಿ 2 ವಾರಗಳಿಗೊಮ್ಮೆ ಪಾರ್ಲರ್‌ಗೆ ಹೋಗಿ ಇದನ್ನು ನಿವಾರಿಸಿಕೊಳ್ಳುತ್ತಿದ್ದಳು. ಆದರೆ ಸೋಶಿಯಲ್ ಡಿಸ್ಟೆನ್ಸಿಂಗ್‌ಭಯದಿಂದಾಗಿ ಪಾರ್ಲರ್‌ಗೆ ಹೋಗಬಯಸದ ಶೃತಿಯಂಥ ಹೆಂಗಸರು ಏನು ಮಾಡಬೇಕು?

ಇದು ಮಾತ್ರವಲ್ಲದೆ, ಅವಳಿಗೆ ಇತರ ತೊಂದರೆಗಳೂ ಇದ್ದವು. ಪ್ರೆಸ್ಸಿಂಗ್‌ಇಲ್ಲದ ಕಾರಣ ಅಳ ತಲೆಗೂದಲು ಕುದುರೆ ಬಾಲ ಆಗಿತ್ತು. ಜೊತೆಗೆ ಆ್ಯಕ್ನೆ ಮೊಡವೆಗಳ ಕಾಟ ಹೆಚ್ಚಿತು. ಆಗ ಅವಳು ಚಿಕ್ಕಮ್ಮನಿಗೆ ಫೋನ್‌ಮಾಡಿ ತನ್ನ ಕಷ್ಟಕ್ಕೆ ಸಲಹೆ ಕೇಳಿದಳು. ಅಡುಗೆಮನೆಯಲ್ಲಿದ್ದ ಸಾಧಾರಣ ಸಾಮಗ್ರಿ ಬಳಸಿ ಸೌಂದರ್ಯ ಸಮಸ್ಯೆ ನಿವಾರಿಸಿಕೊಳ್ಳಲು ಅವರು ಅನೇಕ ಸಲಹೆಗಳನ್ನು ನೀಡಿದರು. ಬ್ಯೂಟಿ ಎಕ್ಸ್ ಪರ್ಟ್ಸ್ ಸಹ ಇದನ್ನೇ ಅನುಮೋದಿಸುತ್ತಾರೆ.

ಬ್ಯೂಟಿ ಟಿಪ್ಸ್  

ಕಡಲೆಹಿಟ್ಟಿಗೆ ಅರಿಶಿನ ಬೆರೆಸಿದ ಪೇಸ್ಟ್ ಎಲ್ಲಾ ಬಗೆಯ ಚರ್ಮದವರಿಗೂ ಅನ್ವಯಿಸುತ್ತದೆ. ಆದರೆ ಡ್ರೈ ಚರ್ಮವಾಗಿದ್ದರೆ ಇದಕ್ಕೆ ಹಾಲಿನ ಕೆನೆ, ಆಯ್ಲಿ ಸ್ಕಿನ್‌ಗೆ ನಿಂಬೆರಸ ಬೆರೆಸಿ ಹಚ್ಚಬೇಕು. ಸ್ನಾನಕ್ಕೆ 10 ನಿಮಿಷ ಮೊದಲು ಮುಖದ ಪೂರ್ತಿ ಅಥವಾ ಇಡೀ ದೇಹಕ್ಕೆ ಹಚ್ಚಿ ಅರ್ಧ ಗಂಟೆ ಬಿಡಿ. ಇದರಿಂದ ಚರ್ಮದ ಮೇಲಿನ ಡೆಡ್‌ ಸ್ಕಿನ್‌ಸುಲಭವಾಗಿ ತೊಲಗುತ್ತದೆ, ಹೀಗಾಗಿ ಮುಖ ಕಾಂತಿಯುತವಾಗುತ್ತದೆ. ಅದೇ ತರಹ ದೇಹದ ಬೇರೆ ಭಾಗಗಳಲ್ಲಿ ಬಾಡಿ ಪಾಲಿಶಿಂಗ್‌ನ ಕೆಲಸ ಮಾಡುತ್ತದೆ.

ರಾತ್ರಿ ಮಲಗುವ ಮೊದಲು ಆ್ಯಲೋವೇರಾ ಜೆಲ್‌ನಿಂದ ಮಸಾಜ್‌ಮಾಡಿ. ಚರ್ಮದಲ್ಲಿ ಏನಾದರೂ ಕಲೆಗಳಿದ್ದರೆ ಈ ಜೆಲ್ ರಾತ್ರಿಯಿಡೀ ಅದರ ಮೇಲೆ ತನ್ನ ಪ್ರಭಾವ ಬೀರಿ, ಮುಂದೆ ಹೊಸ ಆ್ಯಕ್ನೆಗಳಾಗದಂತೆ ಕೆಲಸ ಮಾಡುತ್ತದೆ.

ಆ್ಯಕ್ನೆ ಮೊಡವೆಗಳು ಹೆಚ್ಚಾಗಿದ್ದರೆ ಲವಂಗ, ಜಾಯಿಕಾಯಿ ತೇದು ಆ ಜಾಗಕ್ಕೆ ಹಚ್ಚಿರಿ. 3 ದಿನಗಳ ಒಳಗೆ ಅದು ಒಣಗಿ, ಕಲೆ ಮಂಗಮಾಯವಾಗುತ್ತದೆ! ಇಂಗು ಸಹ ಬಳಸಬಹುದು.

ಮುಖದ ಮೇಲೆ ಕೂದಲು ಬಂದಿದ್ದರೆ ಹೆದರಬೇಡಿ. ಹಿಂದಿನ ರಾತ್ರಿ ಕೆಂಪು ಮಸೂರು ಬೇಳೆಯನ್ನು ನೆನೆಸಿಡಿ. ಮಾರನೆ ಬೆಳಗ್ಗೆ ಇದನ್ನು ನುಣ್ಣಗೆ ಪೇಸ್ಟ್ ಮಾಡಿ ಹಾಗೂ ಮುಖಕ್ಕೆ ನೀಟಾಗಿ ಹಚ್ಚಿಕೊಳ್ಳಿ. ಇದು ಒಣಗಿದ ಮೇಲೆ ನೀರು ಚಿಮುಕಿಸಿ, ನಿಧಾನ ಕಳಚಿಬಿಡಿ. ಈ ಲೇಪನದಿಂದ ಮುಖದಲ್ಲಿನ ಕೂದಲಿನಿಂದ ಮುಕ್ತಿ ಸಿಗುತ್ತದೆ.

ಪ್ರತಿಯೊಬ್ಬ ಯುವತಿಯ ಮೇಕಪ್‌ ಕಿಟ್‌ನಲ್ಲಿ ಬ್ಲೀಚ್‌ ಅಗತ್ಯ ಇದ್ದೇ ಇರುತ್ತದೆ. ನೀವು ಮನೆಯಲ್ಲಿದ್ದುಕೊಂಡೇ ಅದರಲ್ಲಿ ತಿಳಿಸಿದಂತೆ ಬ್ಲೀಚ್‌ಮಾಡಬಹುದು. ಇದರಿಂದ ಎಷ್ಟೋ ಕೂದಲು ಮರೆಯಾಗುತ್ತದೆ, ಹಾಗೂ ಉಳಿದರೆ ಅದನ್ನು ಪ್ಲಕರ್‌ನಿಂದ ತೆಗೆದುಬಿಡಿ.

ಕಣ್ಣಿನ ಹುಬ್ಬನ್ನು ಸಹ ಪ್ಲಕರ್‌ ನೆರವಿನಿಂದ ಎಷ್ಟೋ ನೀಟಾಗಿ ಟ್ರಿಮ್ ಮಾಡಬಹುದು. ಹಾಗೇಂತ ದಿನೇದಿನೇ ಪ್ಲಕ್‌ ಮಾಡಬೇಡಿ.

ನಿಮ್ಮದು ಬಹಳ ಡ್ರೈ ಒರಟು ಕೂದಲೇ? ಹಾಗಿದ್ದರೆ 4 ಚಮಚ ಕೊಬ್ಬರಿ ಎಣ್ಣೆಗೆ ಅರ್ಧ ಕಪ್‌ ಮೊಸರು ಬೆರೆಸಿ ಚೆನ್ನಾಗಿ ಕದಡಿಕೊಂಡು ತಲೆಗೂದಲು, ಸ್ಕಾಲ್ಪ್ ಗೆ ಹಚ್ಚಿರಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ, ಹೇರ್‌ಸಾಫ್ಟ್ ಸಿಲ್ಕಿ ಆಗಿರುತ್ತದೆ.

ಹಿಂದಿನ ರಾತ್ರಿ 4-5 ಚಮಚ ಮೆಂತ್ಯ ನೆನೆಸಿಡಿ. ಮಾರನೇ ದಿನ ಅದರ ಪೇಸ್ಟ್ ಮಾಡಿ ತಲೆಗೆ ಹಚ್ಚಿ, ಅರ್ಧ ಗಂಟೆ ಬಿಡಿ. ತಲೆ ಸ್ನಾನದ ನಂತರ ನೋಡಿ, ಕೂದಲು ರೇಶ್ಮೆಯಂತ ಸಶಕ್ತಗೊಂಡಿರುತ್ತದೆ.

ಮುಖದ ಕಾಂತಿ ಹೆಚ್ಚಿಸಲು, ಮುಖಕ್ಕೆ ಮೊಸರು ಹಚ್ಚಿ 7-8 ನಿಮಿಷ ಮಸಾಜ್‌ ಮಾಡಿ. ನಂತರ ಮುಖ ತೊಳೆಯಿರಿ.

ಮೊಣಕೈ ಹಾಗೂ ಮಂಡಿ ಭಾಗಕ್ಕೆ ನಿಂಬೆ ಸಿಪ್ಪೆಯ ಒಳಭಾಗದಿಂದ ಚೆನ್ನಾಗಿ ತಿಕ್ಕಿದರೆ, ಅದರ ಡೆಡ್‌ ಸ್ಕಿನ್‌ ತೊಲಗಿ, ಕಪ್ಪು ಭಾಗ ಹೋಗಿ ಬೆಳ್ಳಗಾಗುತ್ತದೆ.

ಕಲೆರಹಿತ ಕಾಂತಿಯುತ ಮುಖಕ್ಕಾಗಿ ಯುವತಿಯರು ಸದಾ ಹೊಳೆ ಹೊಳೆಯುವ ಚರ್ಮ ಹೊಂದಿರಲು ಈ ಸಲಹೆಗಳನ್ನು ಅನುಸರಿಸಿ.

ಕಲೆ ಸುಕ್ಕುಗಳಿಗಾಗಿ : ರಿಂಕಲ್ಸ್, ಕಲೆ, ಸುಕ್ಕುಗಳ ನಿವಾರಣೆಗೆ ಬಾದಾಮಿ ಪೇಸ್ಟ್ ಪರಿಣಾಮಕಾರಿ. ಹಿಂದಿನ ರಾತ್ರಿ ಹಸಿ ಹಾಲಲ್ಲಿ ಬಾದಾಮಿ ನೆನೆಹಾಕಿ, ಮಾರನೆ ಬೆಳಗ್ಗೆ ಇದಕ್ಕೆ ತುಸು ಜೇನಿನ ಹನಿ, ನಿಂಬೆರಸ, ಚಂದನದಪುಡಿ ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದರಿಂದಾಗಿ ರಿಂಕಲ್ಸ್, ಕಲೆ, ಸುಕ್ಕು ಎಷ್ಟೋ ನಿವಾರಣೆಯಾಗುತ್ತದೆ. ವಾರಕ್ಕೆ 2 ಸಲ ಹೀಗೆ ಪೇಸ್ಟ್ ಹಚ್ಚಿರಿ.

ಸ್ಕ್ರಬಿಂಗ್‌ : ಸ್ಕ್ರಬಿಂಗ್‌ಗಾಗಿ ಕಡಲೆಹಿಟ್ಟು ಮತ್ತು ಓಟ್‌ ಮೀಲ್‌ ಬೆರೆಸಿ ಪೇಸ್ಟ್ ಮಾಡಿ ಬಳಸಿರಿ. ಈ ಮಿಶ್ರಣಕ್ಕೆ ಹಸಿ ಹಾಲು ಬೆರೆಸಿ ಮುಖ, ಮೊಣಕೈ, ಅಂಗೈನ ಹಿಂಭಾಗಗಳ ಸ್ಕ್ರಬಿಂಗ್‌ ಮಾಡಬಹುದು. ಈ ಮಿಶ್ರಣದ ಒಟ್ಟಾರೆ ಎಫೆಕ್ಟ್ ಬಹಳ ಚೆನ್ನಾಗಿ ಮೂಡಿಬರುತ್ತದೆ. ಇದನ್ನು ವಾರಕ್ಕೆ 2 ಸಲ ಮಾಡಬಹುದು, ನಿಮ್ಮದು ಅತಿ ಸಂವೇದನಾಶೀಲ ಚರ್ಮವಾಗಿದ್ದರೆ ವಾರಕ್ಕೆ ಒಂದೇ ಸಲ ಸಾಕು.

ಡ್ರೈ ಸ್ಕಿನ್ಗಾಗಿ : ನಿಮ್ಮ ಚರ್ಮ ಹೆಚ್ಚು ಶುಷ್ಕವಾಗಿದ್ದರೆ, ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಗೆ ತುಸು ಆಲಿವ್‌ ಆಯಿಲ್‌ ಬೆರೆಸಿ ಮುಖ, ಕುತ್ತಿಗೆಗಳ ಭಾಗಕ್ಕೆ ಸರ್ಕ್ಯುಲರ್‌ ಆಗಿ ಮಸಾಜ್‌ ಮಾಡಿ. ಚರ್ಮಕ್ಕೆ ಎಕ್ಸ್ ಫಾಲಿಯೇಟ್‌ ಮಾಡಬಯಸಿದರೆ, ಟರ್ಕಿ ಟವೆಲ್‌ನ್ನು ಬಿಸಿ ನೀರಲ್ಲಿ ಅದ್ದಿ ಹಿಂಡಿಕೊಂಡು, ಈ ಮಸಾಜ್‌ನಂತರ ಆ ಭಾಗ ಕವರ್‌ಆಗುವೆತೆ ಒತ್ತಿ ಹಿಡಿಯಿರಿ.

ಅನಗತ್ಯ ಕೂದಲು : ಮುಖದಲ್ಲಿನ ಅನಗತ್ಯ ಕೂದಲನ್ನು ನಿವಾರಿಸಲು, ಅನಾದಿ ಕಾಲದಿಂದಲೂ ಕಡಲೆಹಿಟ್ಟನ್ನು ಮುಖ್ಯವಾಗಿ ಬಳಸಲಾಗುತ್ತದೆ. 4 ಚಮಚ ಕಡಲೆಹಿಟ್ಟಿಗೆ 1 ಚಿಟಕಿ ಅರಿಶಿನ, 2 ಚಿಟಕಿ ಚಂದನ, 1-2 ತೊಟ್ಟು ಕೊಬ್ಬರಿ ಎಣ್ಣೆ,  ತುಸು ಹಸಿ ಹಾಲು ಬೆರೆಸಿ ಮಿಶ್ರಣ ಕಲಸಿ, ಬೇಕಾದ ಕಡೆ ಹಚ್ಚಿ ನಿಧಾನವಾಗಿ ಮಸಾಜ್‌ ಮಾಡಿ. ಹೀಗೆ ವಾರದಲ್ಲಿ 2-3 ಸಲ ಮಾಡುವುದರಿಂದ ಕ್ರಮೇಣ ಅನಗತ್ಯ ಕೂದಲು ಕಡಿಮೆ ಆಗುತ್ತದೆ. ಬೇಕಾದರೆ ಕೊಬ್ಬರಿ ಎಣ್ಣೆಗೆ ಆಲಿವ್ ಆಯಿಲ್‌ ಸಹ ಬೆರೆಸಬಹುದು.

ಬ್ಲ್ಯಾಕ್ಹೆಡ್ಸ್ : ಇವುಗಳಿಂದ ಮುಕ್ತಿ ಹೊಂದಲು ಸಕ್ಕರೆ, ಜೇನು, ನಿಂಬೆರಸದ ಪೇಸ್ಟ್ ಕಲಸಿ ಬೇಕಾದ ಕಡೆ ಹಚ್ಚಿಕೊಳ್ಳಿ. ಪೇಸ್ಟ್ ತುಸು ಗಟ್ಟಿಯಾಗಿರಲಿ. ಇದನ್ನು ಕ್ಲಾಕ್‌ ಆ್ಯಂಟಿ ಕ್ಲಾಕ್‌ ವೈಸ್‌ ಎರಡೂ ರೀತಿ ಮಸಾಜ್‌ಮಾಡಬೇಕು. ಎರ್ರಾಬಿರ್ರಿ ಉಜ್ಜಬೇಡಿ, ಚರ್ಮಕ್ಕೆ ಹಾನಿಯಾದೀತು. ಹೀಗೆ ವಾರಕ್ಕೆ 1 ಸಲ ಮಾಡಿದರೆ ಸಾಕು. ಸೌಂದರ್ಯ ಉಳಿಸಿಕೊಳ್ಳಲು ಪಾರ್ಲರ್‌ಗೇ ಹೋಗಬೇಕೆಂದೇನಿಲ್ಲ, ಅಗತ್ಯ ಎನಿಸಿದಾಗ ಹೀಗೆ ಮನೆಯಲ್ಲೇ ಆರೈಕೆ ಮಾಡಿಕೊಳ್ಳಿ.

ಕೆ. ರುಚಿತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ