ನಾವು ನಮ್ಮ ಕೆಲಸದಲ್ಲಿ ನಮ್ಮನ್ನು ಎಷ್ಟೊಂದು ಬಿಝಿಯಾಗಿ ಇಟ್ಟುಕೊಳ್ಳುತ್ತೇವೆ ಎಂದರೆ, ನಮ್ಮ ಆರೋಗ್ಯದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಡುತ್ತೇವೆ. ಆರೋಗ್ಯದಿಂದಿರಲು ಜಿಮ್ ಗೆ ಹೋಗಿ ಬೆವರು ಸುರಿಸುತ್ತೇವೆ, ಡಯೆಟಿಂಗ್‌ಮಾಡುತ್ತೇವೆ ಮತ್ತು ಇದೆಲ್ಲದರಿಂದ ನಾವು ಆರೋಗ್ಯದಿಂದ ಇರಬಹುದು, ರೋಗಗಳಿಂದ ರಕ್ಷಿಸಿಕೊಳ್ಳಬಹುದು ಎಂದು ಯೋಚಿಸುತ್ತೇವೆ. ಆದರೆ ಅದು ಹಾಗಲ್ಲ.
ನೀವು ಎಷ್ಟೇ ಚುರುಕಿನಿಂದ ಇರಬಹುದು, ಆರೋಗ್ಯಪ್ರಜ್ಞೆ ಹೊಂದಿದವರಾಗಿ ಇರಬಹುದು. ಆದಾಗ್ಯೂ ಜಗತ್ತಿನ ಬೇರೆ ಬೇರೆ ರೋಗಗಳು ನಿಮ್ಮ ಮೇಲೆ ದಾಳಿ ಇಡಬಹುದು. ಹೀಗಾಗಿ ಕೇವಲ ಆರೋಗ್ಯಕರ ಆಹಾರ ಅಥವಾ ವ್ಯಾಯಾಮವೊಂದೇ ಸಾಲದು. ಇದರ ಜೊತೆಗೆ ಆರೋಗ್ಯಕರ ಆಹಾರದ ಅಭ್ಯಾಸ ಮಾಡಿಕೊಳ್ಳುವುದು ಆರೋಗ್ಯಕರ ಜೀವನ ಜೀವಿಸಲು ಅತ್ಯವಶ್ಯ. ಆದಾಗ್ಯೂ ಬಹಳಷ್ಟು ಜನರಿಗೆ ಇದರ ಮಹತ್ವ ಏನು ಎಂಬುದು ಗೊತ್ತಿಲ್ಲ. ಜೊತೆಗೆ ಆ ಅಭ್ಯಾಸಗಳು ಯಾವುದು ಎಂಬುದು ತಿಳಿದಿಲ್ಲ. ಅಂತಹ ಅಭ್ಯಾಸಗಳನ್ನು ಅನುಸರಿಸುವುದರ ಮೂಲಕ ನಿಮ್ಮನ್ನು ನೀವು ಆರೋಗ್ಯದಿಂದ ಇಟ್ಟುಕೊಳ್ಳಬಹುದು ಮತ್ತು ಅಪರಿಚಿತ ರೋಗಗಳಿಂದ ದೂರ ಇರಬಹುದು.
ಆಹಾರದ ಬಗ್ಗೆ ಗಮನಕೊಡಿ
ನೀವು ಆಹಾರ ಸೇವನೆ ಮಾಡಲು ಕುಳಿತರೆ, ಏನನ್ನು ಸೇವಿಸುತ್ತಿರುವಿರಿ ಹಾಗೂ ಯಾವ ಪದಾರ್ಥವನ್ನು ಹೆಚ್ಚು ಸೇವಿಸುತ್ತಿರುವಿರಿ ಎಂಬುದರ ಬಗ್ಗೆ ಗಮನಕೊಡಬೇಕು. ನೀವು ಕ್ಯಾಲೋರಿಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಿದ್ದೀರಾ ಹಾಗೂ ಅದನ್ನು ಬರ್ನ್ ಮಾಡಲು ಸಾಧ್ಯವಾಗುವುದಿಲ್ಲ ಅಲ್ಲವೇ? ಆಗ ನೀವು ಎಂತಹ ಕೆಲವು ಆಹಾರ ಸೇವಿಸಬೇಕೆಂದರೆ, ಅದರಲ್ಲಿ ಕೊಬ್ಬಿನಂಶದ ಪ್ರಮಾಣ ಕಡಿಮೆಯಿರಬೇಕು ಹಾಗೂ ಅದನ್ನು ನಿಮ್ಮ ದೇಹ ಸುಲಭವಾಗಿ ಪಚನ ಮಾಡಿಕೊಳ್ಳುವಂತೆ ಇರಬೇಕು. ಇದರ ಜೊತೆಗೆ ಹಗುರ ಆಹಾರಗಳನ್ನು ಸೇವಿಸಿ. ಹುರಿದ, ಕರಿದ ಆಹಾರಗಳಿಂದ ದೂರವಿರಿ. ಸಲಾಡ್ ಸೇವನೆಯ ಬಗೆಗೆ ಹೆಚ್ಚು ಒತ್ತು ಕೊಡಿ, ಮೊಳಕೆ ಕಾಳುಗಳನ್ನು ಸೇವಿಸಿ.
ಸಾಕಷ್ಟು ಪ್ರೋಟೀನ್ ಇರಲಿ
ಪ್ರೋಟೀನ್ ದೇಹಕ್ಕೆ ಅತ್ಯವಶ್ಯ. ನಾವು ಇದನ್ನು ನಮ್ಮ ಆಹಾರದಲ್ಲಿ ಅತ್ಯವಶ್ಯವಾಗಿ ಸೇರ್ಪಡೆ ಮಾಡಿಕೊಳ್ಳಬೇಕು. ಬ್ರೋಕ್ಲಿ, ಸೋಯಾಬೀನ್, ಬೇಳೆಗಳು, ಪಾಲಕ್ ಇ ಪ್ರೋಟೀನ್‌ಯುಕ್ತ ಆಹಾರಗಳಾಗಿವೆ. ಕಡಿಮೆ ಕೊಬ್ಬುಯುಕ್ತ ಹಾಲು ಉತ್ಪನ್ನಗಳು ಕೂಡ ಪ್ರೋಟೀನ್‌ನ ಉತ್ತಮ ಮೂಲಗಳಾಗಿವೆ. ಅಂದಹಾಗೆ ನಮ್ಮ ಆಹಾರದಲ್ಲಿ ಶೇ.25ರಷ್ಟು ಪ್ರೋಟೀನ್ ಇರಬೇಕು. ನೀವು ದಿನ ವ್ಯಾಯಾಮ ಮಾಡುವವರಾಗಿದ್ದರೆ, ಇನ್ನೂ ಶೇ.5ರಷ್ಟು ಪ್ರೋಟೀನ್ ಹೆಚ್ಚಿಸಿಕೊಳ್ಳಿ.
ಆಹಾರ ಅಗಿದು ತಿನ್ನಿ
ಆಹಾರ ಸುಲಭವಾಗಿ ಪಚನವಾಗುವ ಏಕೈಕ ವಿಧಾನವೆಂದರೆ, ನಾವು ಆಹಾರವನ್ನು ಚೆನ್ನಾಗಿ ಅಗಿದು ತಿನ್ನಬೇಕು. ನಮ್ಮಲ್ಲಿ ಬಹಳಷ್ಟು ಜನರು ಆಹಾರವನ್ನು ಬೇಗ ಬೇಗ ತಿನ್ನಬೇಕೆಂಬ ಆತುರದಲ್ಲಿ ಚೆನ್ನಾಗಿ ಅಗಿದು ತಿನ್ನುವುದಿಲ್ಲ. ಆ ಕಾರಣದಿಂದ ನಿಮ್ಮ ಪಚನಾಂಗ ಬಹಳ ಬೇಗ ಸುಸ್ತಾಗಿ ಬಿಡುತ್ತದೆ. ಹಾಗಾಗಿ ಆಹಾರವನ್ನು 30-35 ಸಲ ಆಗಿದು ತಿನ್ನಬೇಕು. ಈ ಆರೋಗ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಹಸಿರು ಸೊಪ್ಪುಗಳನ್ನು ಸೇವಿಸಿ
ನಿಮ್ಮ ಆಹಾರದಲ್ಲಿ ಹಸಿರು ಸೊಪ್ಪುಗಳನ್ನು ಸೇರಿಸಿಕೊಳ್ಳಿ. ಏಕೆಂದರೆ ಅವು ಪ್ರೋಟೀನ್, ಕಬ್ಬಿಣಾಂಶ, ಕ್ಯಾಲ್ಶಿಯಂ ಹಾಗೂ ನಾರಿನಂಶದ ಉತ್ತಮ ಮೂಲಗಳಾಗಿವೆ. ಹಸಿರು ಸೊಪ್ಪುಗಳ ಪಲ್ಯ ತಯಾರಿಸುವುದು ಅತ್ಯಂತ ಸುಲಭ. ಇವು ಆಹಾರಕ್ಕೆ ಹೆಚ್ಚಿನ ರುಚಿ ಕೊಡುತ್ತವೆ. ನಿಮ್ಮ ಆಹಾರದಲ್ಲಿ ಪ್ರತಿಯೊಂದು ವರ್ಣದ ತರಕಾರಿಗಳನ್ನು ಸೇರಿಸಿಕೊಳ್ಳಿ. ದಿನಕ್ಕೆ ಒಂದೇ ಸಲ ಎಲ್ಲ ಪ್ರಕಾರದ ರುಚಿಯ ಅಂದರೆ ಸಿಹಿ, ಖಾರ, ಹುಳಿ ಮತ್ತು ಒಗರು ಮುಂತಾದವು ನಿಮ್ಮ ಆಹಾರದಲ್ಲಿ ಇದ್ದರೆ ಸೂಕ್ತ.
ಓವರ್ ಈಟಿಂಗ್‌ನಿಂದ ದೂರ ಇರಿ
ನಿಮಗೆ ಯಾವಾಗ ಹಸಿವಾಗುತ್ತದೋ ಆಗಲೇ ಆಹಾರ ಸೇವಿಸಿ. ಹಸಿವಿಲ್ಲದೆ ಆಹಾರ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಹಸಿವಾದಾಗ ಎಷ್ಟು ಆಹಾರ ಸೇವನೆ ಮಾಡಬೇಕೆಂದರೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತಿದ್ದಂತೆ ಆಹಾರ ಸೇವಿಸುವುದನ್ನು ನಿಲ್ಲಿಸಬೇಕು. ಅತಿಯಾಗಿ ಆಹಾರ ಸೇವಿಸಿದರೆ ಅದು ಆರೋಗ್ಯಕ್ಕೆ ಮಾರಕ. ಬಹಳಷ್ಟು ಜನರು ಊಟತಿಂಡಿ ಸೇವಿಸುವಾಗ ಟಿ.ವಿಯಲ್ಲಿ ಅದೆಷ್ಟು ಮಗ್ನರಾಗಿರುತ್ತಾರೆಂದರೆ, ತಾವೆಷ್ಟು ತಿಂದೆ ಎನ್ನುವುದು ಕೂಡ ಅವರಿಗೆ ಅರಿವಿರುವುದಿಲ್ಲ. ನೀವು ಆಹಾರ ಸೇವನೆಯ ಮೇಲೆ ಗಮನ ಕೇಂದ್ರೀಕರಿಸಿ. ಆಗಲೇ ನೀವು ಹಸಿದಷ್ಟು ಆಹಾರ ಸೇವಿಸಲು ಸಾಧ್ಯವಾಗುತ್ತದೆ.
ಪಚನಶಕ್ತಿ ಹೆಚ್ಚಿಸಿಕೊಳ್ಳಿ
ಒಂದು ವೇಳೆ ನಿಮಗೆ ಏನನ್ನು ಸೇವಿಸಬೇಕು? ಎಷ್ಟು ಸೇವಿಸಬೇಕು? ಎಂಬ ಬಗ್ಗೆ ಅರಿವಿದ್ದರೆ, ನಿಮ್ಮ ಆಹಾರ ಅಭ್ಯಾಸ ನಿಮ್ಮ ಪಚನ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಕೆಲವು ವ್ಯಾಯಾಮಗಳ ಮುಖಾಂತರ ನೀವು ಪಚನಶಕ್ತಿ ಹೆಚ್ಚಿಸಿಕೊಳ್ಳಬಹುದು.
ಆಹಾರದಲ್ಲಿ ಬದಲಾವಣೆ ಅತ್ಯವಶ್ಯ
ರೋಗದಿಂದ ರಕ್ಷಿಸಿಕೊಳ್ಳಲು ಜನರು ಸಾಮಾನ್ಯವಾಗಿ ಪೌಷ್ಟಿಕ ಆಹಾರ ಸೇವಿಸು ಸಲಹೆ ನೀಡುತ್ತಾರೆ. ಆದರೆ ದೇಹದಲ್ಲಿ ಎಲ್ಲಾ ಬಗೆಯ ಪೋಷಕಾಂಶಗಳನ್ನು ಬೆರೆಸಿಕೊಂಡು ಆಹಾರದಲ್ಲಿ ಬದಲಾವಣೆ ತರುವುದು ಅತ್ಯವಶ್ಯ. ಈ ರೀತಿಯ ಬದಲಾವಣೆಯಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳ ಅವಶ್ಯಕತೆಗಳು ಈಡೇರುತ್ತವೆ. ಜೊತೆಗೆ ಆಹಾರದ ರುಚಿಯೂ ಹೆಚ್ಚುತ್ತದೆ.
ಉಪಾಹಾರದ ಸೇವನೆ ಮರೆಯಬೇಡಿ
ಸಾಮಾನ್ಯವಾಗಿ ಬೆಳಗಿನ ಸಮಯ ಬಹಳ ವ್ಯಸ್ತವಾಗಿರುತ್ತದೆ. ಆ ಕಾರಣದಿಂದಾಗಿ ಕೆಲಸ ಮಾಡುವ ಗಡಿಬಿಡಿಯಲ್ಲಿ ನಾವು ಉಪಾಹಾರದ ಬಗ್ಗೆ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಬೆಳಗಿನ ಉಪಾಹಾರ ಇಡೀ ದಿನಕ್ಕೆ ಶಕ್ತಿ ಸ್ಛೂರ್ತಿ ಕೊಡುತ್ತದೆ. ನೀವು ಮನೆಯಿಂದ ಹೊರಗೆ ಹೋಗುವ ಮುನ್ನ ಉಪಾಹಾರ ಮುಗಿಸಿಯೇ ಹೊರಡಿ.
ಬಿಳಿ ವಸ್ತುಗಳನ್ನು ನಿರ್ಲಕ್ಷಿಸಿ
ಸಕ್ಕರೆ, ಉಪ್ಪು, ಮೈದಾ ಇವನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಿ ಉಪ್ಪು ಸೇವಿಸಲೇಬೇಕಿದ್ದರೆ ಸೈಂಧವ ಲವಣ ಸೇವಿಸಿ. ನೀವು ದಿನಕ್ಕೆ 4 ಬಾರಿ ಚಹಾ ಸೇವಿಸುವವರಾಗಿದ್ದರೆ, ಅದನ್ನು ದಿನಕ್ಕೆ 3 ಬಾರಿ ಮಾಡಿಕೊಳ್ಳಿ. ಚಹಾದಲ್ಲಿ 2 ಚಮಚ ಸಕ್ಕರೆ ಹಾಕುತ್ತಿದ್ದರೆ, ಇನ್ನು ಮುಂದೆ 1 ಚಮಚ ಮಾತ್ರ ಹಾಕಿ. ಬಿಳಿ ಅಕ್ಕಿಯ ಬದಲು ಬ್ರೌನ್ ರೈಸ್ ಉಪಯೋಗಿಸಿ. ಅದೇ ರೀತಿ ಫುಲ್ ಕ್ರೀಮ್ ಹಾಲಿನ ಬದಲು ಡಬಲ್ ಟೋನ್ಡ್ ಹಾಲು ಕುಡಿಯಿರಿ.
ಡ್ರೈಫ್ರೂಟ್ಸ್ ದೂರ ಇಡಬೇಡಿ
ಯಾರಿಗೆ ಕೊಲೆಸ್ಟ್ರಾಲ್ ಇರುತ್ತದೋ ಅವರು ಸಾಮಾನ್ಯವಾಗಿ ಒಣಹಣ್ಣುಗಳನ್ನು ಸೇವಿಸಲು ಹಿಂದೇಟು ಹಾಕುತ್ತಾರೆ. ಅದರಲ್ಲಿ ಫ್ಯಾಟ್ ಇರುತ್ತದೆ. ಅದು ದೇಹಕ್ಕೆ ಹಾನಿಕಾರಕ ಎಂದೆಲ್ಲ ಅವರು ಯೋಚಿಸುತ್ತಾರೆ. ಆದರೆ ಅದು ತಪ್ಪು. ಬಾದಾಮಿ, ಅಖರೋಟ್, ಪಿಸ್ತಾ ಇವುಗಳಲ್ಲಿ ಕಂಡುಬರುವ ನಾರಿನಂಶ ಹಾಗೂ ಒಮೇಗಾ-3 ಫ್ಯಾಟಿ ಆ್ಯಸಿಡ್ ಹಾಗೂ ವಿಟಮಿನ್ಸ್ ಇವು ಕೆಟ್ಟ ಕೊಲೆಸ್ಟ್ರಾಲ್ನ್ನು ಕುಗ್ಗಿಸುತ್ತವೆ, ಒಳ್ಳೆಯ ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುತ್ತವೆ. ಆದರೆ ಹುರಿದ ಕರಿದ ಒಣ ಹಣ್ಣುಗಳನ್ನು ಸೇವಿಸಬೇಡಿ.
ಕೊಲೆಸ್ಚ್ರಾಲ್ ಇದ್ದರೆ ಇವನ್ನು ಸೇವಿಸಿ
ಕೊಲೆಸ್ಟ್ರಾಲ್ ಒಂದು ಗಂಭೀರ ಸಮಸ್ಯೆ. ಅದು ಹೃದಯ ರೋಗಗಳು ಸೇರಿದಂತೆ ಅನೇಕ ಗಂಭೀರ ರೋಗಗಳಿಗೆ ಜನ್ಮ ನೀಡುತ್ತದೆ. ಒಂದು ವೇಳೆ ನೀವು ಸರಿಯಾದ ಆಹಾರ ಅಭ್ಯಾಸಗಳನ್ನು ರೂಢಿಸಿಕೊಂಡರೆ ಈ ಎಲ್ಲ ರೋಗಗಳಿಂದ ಪಾರಾಗಬಹುದು.
ನೀರು ಕುಡಿಯು ಬಗ್ಗೆ ಗಮನಕೊಡಿ
ನೀರಿನ ಮುಖಾಂತರ ದೇಹಕ್ಕೆ ಸಾಕಷ್ಟು ಬಗೆಯ ಖನಿಜಾಂಶಗಳು ಲಭಿಸುತ್ತವೆ. ಅದರಿಂದಲೇ ದೇಹ ಡೀಟಾಕ್ಸಿಫೈ ಆಗುತ್ತದೆ. ದೇಹಕ್ಕೆ ಕಾಂತಿ ದೊರೆಯುವುದು ಕೂಡ ನೀರಿನಿಂದಲೇ. ಆದರೆ ಆಹಾರ ಸೇವನೆಯ ಸಮಯದಲ್ಲಿ ನೀರು ಕುಡಿಯಬೇಡಿ. ಹೀಗೆ ಮಾಡುವುದರಿಂದ ಆಹಾರ ಪಚನದ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. ಊಟ ಮಾಡುವ 30 ನಿಮಿಷ ಮುಂಚೆ ಅಥವಾ ಆ ಬಳಿಕ ನೀರು ಕುಡಿಯುವುದು ಸೂಕ್ತ. ಸೂಕ್ತ ರೀತಿಯಲ್ಲಿ ನೀರು ಕುಡಿಯುವುದು ಕೂಡ ಆಹಾರ ಅಭ್ಯಾಸದಲ್ಲಿ ಸೇರುತ್ತದೆ. ಮುಂಜಾನೆ ಎದ್ದ ಬಳಿಕ ನೀರು ಕುಡಿಯುವುದು ಒಳ್ಳೆಯದು. ಮುಂಜಾನೆಯ ಲಾವಾರಸ ಬಹಳ ಸೂಕ್ತವಾಗಿರುತ್ತದೆ.
ಬೆಳ್ಳುಳ್ಳಿ ಬಹಳ ಉಪಯುಕ್ತ
ಬೆಳ್ಳುಳ್ಳಿ ಆಹಾರದ ರುಚಿ ಹೆಚ್ಚಿಸುತ್ತದಲ್ಲದೆ, ಹಲವು ಆರೋಗ್ಯಕಾರಕ ಗುಣಗಳನ್ನೂ ಹೊಂದಿರುತ್ತದೆ. ಅದರಲ್ಲಿರುವ ಎಂಜೈಮ್ಸ್ ಅಂದರೆ ಕಿಣ್ವಗಳು ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತದೆ. ಅದು ಹೈ ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ.
ಉಪಯುಕ್ತ ಓಟ್ಸ್ ಬೆಳಗಿನ ಉಪಾಹಾರಕ್ಕೆ ಓಟ್ಸ್ ತುಂಬಾ ಉಪಯುಕ್ತ. ಅದರಲ್ಲಿರುವ ಬೀಟಾ ಗ್ಲೂಕಾನ್ ಎಂಬ ಗಟ್ಟಿ ಅಂಟು ಪದಾರ್ಥ ನಮ್ಮ ಕರುಳನ್ನು ಸ್ವಚ್ಛಗೊಳಿಸುತ್ತದೆ. ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಅದರಿಂದಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುವುದಿಲ್ಲ.
ನಿಂಬೆಯ ಕರಾಮತ್ತು
ಪುಟ್ಟದಾದ ನಿಂಬೆಹಣ್ಣು ಸಲಾಡ್‌ಗಾಗಿ ಅಥವಾ ಬೇರೆ ಬೇರೆ ಅಡುಗೆಗಳಿಗೆ ಒಳ್ಳೆಯ ರುಚಿ ಕೊಡುತ್ತದೆ. ನಿಂಬೆ ಹಣ್ಣಿನಲ್ಲಿ ಎಂತಹ ಕರಗಬಲ್ಲ ಫೈಬರ್‌ಗಳಿರುತ್ತವೆ ಎಂದರೆ, ಅವು ಕೆಟ್ಟ ಕೊಲೆಸ್ಟ್ರಾಲ್‌ನ್ನು ರಕ್ತದಲ್ಲಿ ಸೇರದಂತೆ ತಡೆಯುತ್ತದೆ. ನಿಂಬೆಹಣ್ಣಿನಲ್ಲಿರುವ ವಿಟಮಿನ್ `ಸಿ’ ರಕ್ತನಾಳಗಳನ್ನು ಸ್ವಚ್ಛಗೊಳಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಪಚನಕ್ರಿಯೆಯ ಮೂಲಕ ಹೊರಗೆ ತರುವಲ್ಲೂ ಕೂಡ ಅದು ನೆರವಾಗುತ್ತದೆ. ಹುಳಿ ಹಣ್ಣುಗಳಲ್ಲಿರುವ ಎಂಜೈಮ್ಸ್ ಮೆಟಬಾಲಿಸಂ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕುಗ್ಗಿಸಲು ಸಹ ನೆರವಾಗುತ್ತದೆ.
– ಡಾ. ಅಶ್ವಿನಿ