ರಾಕುಲಳ ಸೋಶಿಯಲ್ ಜಂಪಿಂಗ್‌

ಇದೇನಪ್ಪ….. ಶೀರ್ಷಿಕೆ ವಿಚಿತ್ರವಾಗಿದೆಯಲ್ಲ ಅಂತ ಅಂದುಕೊಂಡ್ರಾ? ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫ್ಯಾನ್‌ಫಾಲೋಯರ್ಸ್‌ ಸಂಖ್ಯೆ ಹೆಚ್ಚಿಸಿಕೊಳ್ಳಲು ಸೋ ಕಾಲ್ಡ್ ಸೆಲೆಬ್ರಿಟೀಸ್‌ ರೇಸ್‌ಗೆ ಮುಗಿಬಿದ್ದವರಂತೆ ಆಡುತ್ತಾರೆ. ಇದನ್ನು ಜಂಪಿಂಗ್‌ಎನ್ನದೆ ಬೇರೇನೂ ಹೇಳಲು ಸಾಧ್ಯ? ಇತ್ತೀಚೆಗೆ ನಟಿ ರಾಕುಲ್ ‌ಸೋಶಿಯಲ್ ಮೀಡಿಯಾದ ಅಕೌಂಟ್‌ನಲ್ಲಿ 14 ಮಿಲಿಯನ್‌ಗೂ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿದ್ದಾಳೆ. ಇದಕ್ಕೆ ಸಿನಿ ಹಿತೈಷಿಗಳ ಕಿವಿಮಾತು ಎಂದರೆ, ರಾಕುಲ್ ‌ಬಾಲಿವುಡ್‌ಗೆ ಅಂಟಿಕೊಂಡಿರಬೇಕಾದರೆ ಮೊದಲು ತನ್ನ ಚಿತ್ರಗಳಿಗೆ ಜನ ಬರುವಂತೆ ಮಾಡಿಕೊಳ್ಳಬೇಕು! ಈ ಸೋಶಿಯಲ್ ಮೀಡಿಯಾ ಸಂಖ್ಯೆಗಳೆಲ್ಲ ಸೋಪಿನ ನೊರೆಯಂತೆ…. ಯಾವಾಗ ಠುಸ್‌ ಅನ್ನುತ್ತೋ ಗೊತ್ತಿಲ್ಲ.

ಫ್ಯಾಟ್‌ನಿಂದ ಫಿಟ್‌ ಆದ ಸಾರಾ

 

Sara

ತಮ್ಮ ದೇಹ ಗಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯದ ಕೆಲವೇ ಬಾಲಿವುಡ್‌ ನಟಿಯರಲ್ಲಿ ಸಾರಾ ಅಲಿಖಾನ್‌ ಸಹ ಒಬ್ಬಳು. ಸಾರಾ ತಾನು ಡುಮ್ಮಿಯಾಗಿದ್ದಾಗಿನ ತನ್ನ ಹಳೆಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾಳೆ. ಹಾಗೆ ಮಾಡಿ ಜನರಿಗೆ ಅವಳು ನೀಡಲಿರುವ ಸಂದೇಶವೆಂದರೆ ಮನಸ್ಸು ಮಾಡಿದರೆ ಯಾರು ಯಾವಾಗ ಬೇಕಾದರೂ ಫ್ಯಾಟ್‌ನಿಂದ ಫಿಟ್‌ ಆಗಬಹುದು ಅಂತ. ಸಾರಾಳ ಪ್ರಕಾರ, ತಾನು ಬಾಲಿವುಡ್‌ಗೆ ಎಂಟ್ರಿ ನೀಡಿದ ಹೊಸತರಲ್ಲಿ ತನ್ನ ಲೈಫ್‌ ಸ್ಟೈಲ್ ‌ಹಾಗೂ ಆಹಾರದ ಅಭ್ಯಾಸಗಳನ್ನು ಬದಲಿಸಿಕೊಳ್ಳುವುದು ಅಸಾಧ್ಯವಾಗಿತ್ತಂತೆ. ಏನೇ ಆಗಲಿ, ತಾನು ಫಿಟ್‌ ಆಗಲೇಬೇಕು ಎಂಬ ಹಠಯೋಗದಿಂದಾಗಿ, ಸತತ ದೇಹದಂಡನೆಗೆ ಮನಸ್ಸು ಮಾಡಿದಳು. ಇದರ ಪರಿಣಾಮವಾಗಿ ಫ್ಯಾಟ್‌ ಆಗಿದ್ದ ಸಾರಾ ಇಂದು ಫಿಟ್‌ ಆಗಿದ್ದಾಳೆ, ಹಿಟ್‌ ಸಹ! ಫ್ಯಾನ್ಸ್….. ನೀವು ಟ್ರೈ ಮಾಡಿ ನೋಡಿ!

ಕೀರ್ತಿಯ ಕೀರ್ತಿ ಹರಡುತ್ತಿದೆ!

Kirti

ಹಾಗೆ ನೋಡಿದರೆ ಮಾಡಲ್ ನಟಿ ಕೀರ್ತಿ ಕುಲ್ಹಾಡಿ ತನ್ನ ಅತಿಯಾದ ಬಾಯಿ ಮಾತುಗಳಿಂದ, ಗ್ಲಾಮರಸ್‌ ವೈಯಾರಗಳಿಂದ ಸದಾ ಚರ್ಚೆಗೆ ಈಡಾಗುತ್ತಾಳೆ. ಸದ್ಯಕ್ಕಂತೂ ವಿಷಯ ಬೇರೆಯೇ ಇದೆ. ಲಾಕ್‌ಡೌನ್‌ ಕಾರಣ ಕಲಾವಿದರೆಲ್ಲ ಮನೆಗಳಲ್ಲೇ ಬಂಧಿಗಳಾಗಿದ್ದಾರೆ. ಹೀಗಾಗಿ ಅಭಿಮಾನಿಗಳ ಮಧ್ಯೆ ನಿರಂತರ ಉಳಿಯಲು ಏನಾದರೊಂದು ಸರ್ಕಸ್‌ ಮಾಡುತ್ತಿರುತ್ತಾರೆ. ಕೀರ್ತಿಯೂ ಹೀಗೇ ಮಾಡಿದಳು. ತನ್ನ ಹಲವಾರು ಗ್ಲಾಮರಸ್‌ ಹಾಟ್‌ ಪೋಸ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಳು. ಇನ್ನೇನು? ಲೈಕ್ಸ್ ಗಳ ಸುರಿಮಳೆ ಆಯ್ತು. ಕೀರ್ತಿಯ ಕೀರ್ತಿ ಎಲ್ಲೆಲ್ಲೂ ಹರಡಿತು. ಅಂತೂ ಬಾಲಿವುಡ್‌ ನೀರು ಕುಡಿದದ್ದಕ್ಕೂ ಸಾರ್ಥಕವಾಯಿತಮ್ಮ ಕೀರ್ತಿ ಎನ್ನುತಿದ್ದಾರೆ ಹಿತೈಷಿಗಳು.

ಅಕ್ಷಯ್‌ನ ಅಪೀಲ್ ‌

akshay-1

ಅಕ್ಷಯ್‌ ಕುಮಾರ್‌ ಇತ್ತೀಚೆಗೆ ತನ್ನ ತಂಗಿಯ ಕುರಿತಾಗಿ ಹರಡಿರುವ ವದಂತಿಗಳಿಂದಾಗಿ ಚಿಂತಿತನಾಗಿದ್ದಾನೆ. ತನ್ನ ತಂಗಿ ಕುರಿತಾಗಿ ಗಾಳಿ ಮಾತು ಹರಡುವವರ ವಿರುದ್ಧ ಕಾನೂನು ಸಮರ ಸಾರಲಿದ್ದಾನೆ. ಫೇಕ್‌ ನ್ಯೂಸ್‌ ಯಾಕಂತೀರಾ? ಅದು ಈತನ `ಫಿಲ್‌ ಹಾಲ್‌’ ಮ್ಯೂಸಿಕ್‌ ವಿಡಿಯೋ ಕುರಿತಾದುದು. ಇದ್ದಕ್ಕಿದ್ದಂತೆ ಯಾರೋ ಇಂಥದೇ `ಫಿಲ್ ‌ಹಾಲ್‌’ ಮಾಡುತ್ತಿದ್ದಾರೆಂದೂ, ಆ ಬಗ್ಗೆ ತನ್ನನ್ನು ಸಂಪರ್ಕಿಸಿಯೇ ಇಲ್ಲ ಎಂದಾಗ ಕೋಪ ಬರದೆ ಇರುತ್ತದೆಯೇ? ತಾರಾಬಳಗಕ್ಕಾಗಿ ಬೇರೆ ಯಾರು ಯಾರನ್ನೋ ಅಪ್ರೋಚ್‌ ಮಾಡಲಾಗುತ್ತಿದೆ ಎಂಬ ವದಂತಿಗೆ, ಫ್ಯಾನ್ಸ್ ಇದನ್ನು ನಂಬಬಾರದು, ಗಾಳಿ ಮಾತಿಗೆ ಕಿವಿಗೊಡಬೇಡಿ ಎಂದು ವಿನಂತಿಸಿಕೊಂಡಿದ್ದಾನೆ. ಲಾಕ್‌ ಡೌನ್‌ನಲ್ಲಂತೂ ಇಂಥ ವದಂತಿಗಳು ಇನ್ನಷ್ಟು ಹೆಚ್ಚಿದವು. ಇತ್ತೀಚೆಗೆ ಒಬ್ಬ ಹೆಸರಾಂತ ನಟ ಅಕ್ಷಯ್‌, ಅವನ ತಂಗಿ ಹೆಸರು ಹೇಳಿಕೊಂಡು ತನಗೆ ಸಲ್ಮಾನ್‌ ಚಿತ್ರದಲ್ಲಿ ಪಾತ್ರ ಕೊಡಿಸುವುದಾಗಿ ನಂಬಿಸಿ ಹಣ ಏಮಾರಿಸಿದರೆಂದಾಗ ಅಕ್ಷಯ್‌ನ ಕೋಪ ಅಕ್ಷಯಗೊಂಡಿತು. ಯಾವುದಕ್ಕೂ ನೀವು ಎಚ್ಚರದಿಂದಿರಿ!

ವಾಪಸ್‌ ಬಂದ ಸೈಯಾಮಿ

sayami-1

`ಮಿರ್ರ’ ಚಿತ್ರದ ಬಿಚ್ಚಮ್ಮ ಸೈಯಾಮಿ ನಿಮಗೆ ನೆನಪಿದ್ದಾಳಾ? ಅನಿಲ್ ‌ಕಪೂರ್‌ರ ಮಗ ಹರ್ಷವರ್ಧನ್‌ ಜೊತೆ ಇದೇ ಚಿತ್ರದಲ್ಲಿ ನಾಯಕಿಯಾಗಿದ್ದ ಈ ಮಹಾತಾಯಿ. ಈ ಚಿತ್ರ ತೋಪೆದ್ದಾಗ ಎಲ್ಲಿ ಮಾಯವಾಗಿದ್ದಳೋ…… ಈಗಂತೂ ಧುತ್ತೆಂದು ವಾಪಸ್‌ಆಗಿದ್ದಾಳೆ. ಓಹೋ…. ಅನಿಲ್‌ಗೆ ಅಂಥ ಒಬ್ಬ ಮಗನಿದ್ದಾನೋ ಎಂದು ಹುಬ್ಬೇರಿಸದಿರಿ. ಅವನೂ ಸದ್ಯಕ್ಕೆ ಸೈಡ್‌ ವಿಂಗ್ಸ್ ನಲ್ಲಿದ್ದಾನೆ. ಓ, ಸೈಯಾಮಿ ಖೇರ್‌ಳ ವಿಷಯಕ್ಕೆ ಬಂದರೆ, ಅವಳೀಗ ವಾಪಸ್ಸು ಬಂದಿರುವುದು ಸದ್ಯಕ್ಕೆ ಅತಿ ಜನಪ್ರಿಯವಾಗಿರುವ ಸೈಯಾಮಿ ಇದೀಗ ನೆಟ್‌ಫ್ಲಿಕ್ಸ್ ನ ವೆಬ್‌ ಸೀರೀಸ್‌ `ಚೋಕ್ಡ್’ನಲ್ಲಿ ಜೋರಾಗಿದ್ದಾಳೆ. ಇದರ ಟ್ರೇಲರ್‌ ಆಹ್ಹಾ… ಓಹೋ… ಅಂತಿದೆಯಂತೆ. ಇವಳ ಆ್ಯಕ್ಟಿಂಗ್‌ ಸಹ ಅಷ್ಟೇ ಗಮ್ಮತ್ತಾಗಿದೆಯೋ ಇಲ್ಲವೋ ನೋಡಬೇಕಷ್ಟೆ. ಪಾಪ, ಸೈಯಾಮಿಯನ್ನು ನೋಡಿ ಸಂಯಮಿಗಳು ಕಂಗೆಡಬಾರದಷ್ಟೇ!

ಅಸಲಿ ಹೀರೋ ಆಗಿಹೋದ ವಿಲನ್

sonu-sood-1

ಬಾಲಿವುಡ್‌ನ ದಿ ಬೆಸ್ಟ್ ಫಿಟ್‌ ವಿಲನ್‌ ಸೋನು ಸೂದ್‌ ಈ ಲಾಕ್‌ಡೌನ್‌ನ ಸಂಕಷ್ಟದ ದಿನಗಳಲ್ಲಿ ಅಸಲಿ ಹೀರೋ ಆಗಿ ಬದಲಾಗಿದ್ದಾನೆ, ರೀಲ್‌‌ನಲ್ಲಲ್ಲ….. ರಿಯಲ್ ಲೈಫ್‌ನಲ್ಲಿ! ಕೊರೋನಾದ ಸಂಕಷ್ಟಕರ ದಿನಗಳಲ್ಲಿ ಕೂಲಿ ಕಾರ್ಮಿಕರು ಮಹಾನಗರಗಳಿಂದ ತಂತಮ್ಮ ಊರುಗಳಿಗೆ ಹೊರಟಿದ್ದಾಗ, ಸೋನು ಅವರುಗಳನ್ನು ಊರು ತಲುಪಿಸಲು ಆರ್ಥಿಕ ಅನುಕೂಲ ಕಲ್ಪಿಸಿದ. ಅವನ ಈ ಪ್ರಾಮಾಣಿಕ, ನಿಸ್ವಾರ್ಥ ಸೇವೆ ಆ ಕೂಲಿಗಳು, ಅಭಿಮಾನಿಗಳ ಮನಸೂರೆಗೊಂಡು ನಿಜಕ್ಕೂ ಅಸಲಿ ಹೀರೋ ಎನಿಸಿದ್ದಾನೆ. ಅಷ್ಟು ಮಾತ್ರವಲ್ಲದೆ, ಈ ಬಡವರಿಗೆ ಎರಡು ಹೊತ್ತು ಊಟ ಸಿಗುವಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಸಿದ್ದಾನೆ. ಪರದೆ ಮೇಲೆ ಆದರ್ಶ ಕೊಚ್ಚುವ ಹೀರೋಗಳಿಗಿಂತ ನಿಜ ಜೀವನದಲ್ಲಿ ಬಡವರ ಸಹಾಯಕ್ಕೆ ಧಾವಿಸಿದ ಇವನಲ್ಲವೇ ಅಸಲಿ ಹೀರೋ?

ಪರ್ಫೆಕ್ಷನಿಸ್ಟ್ ಎನಿಸಿದ ತಾಪಸಿ

tapsi-1

3 ಈಡಿಯಟ್ಸ್ ನಂಥ ಚಿತ್ರಗಳಿಂದ ಇಡೀ ಬಾಲಿವುಡ್‌ಗೆ ಓನ್ಲಿ ಪರ್ಫೆಕ್ಷನಿಸ್ಟ್ ಎನಿಸಿದ್ದನು ಆಮೀರ್‌ ಖಾನ್‌. ಆ ಜಾಗಕ್ಕೆ ಈಗ ಮಿಸ್ ಪರ್ಫೆಕ್ಷನಿಸ್ಟ್ ಆಗಿ ಬರುತ್ತಿದ್ದಾಳೆ, ಅದು ಮತ್ತೆ ಬೇರಾರೂ ಅಲ್ಲ…. ತಾಪಸಿ ಪನ್ನು. `ಬದಾ, ಥಪ್ಪಡ್‌’ನಂಥ ಸ್ತ್ರೀ ಪ್ರಧಾನ ಚಿತ್ರಗಳಿಂದ ತಾನೆಂಥ ಗಟ್ಟಿ ಅಭಿನೇತ್ರಿ ಎಂಬುದನ್ನು ನಿರೂಪಿಸಿರುವ ತಾಪಸಿ, ಬರಲಿರುವ ತನ್ನ `ಶಭಾಸ್‌ ಮೀಥೂ’ ಚಿತ್ರಕ್ಕಾಗಿ ತನ್ನ ತನುಮನಧನವನ್ನೆಲ್ಲ ಅರ್ಪಿಸಿ, ಅಹರ್ನಿಶಿ ದುಡಿಯುತ್ತಿದ್ದಾಳೆ. ಸುಶಾಂತ್‌ನ `ಧೋನಿ’ ಚಿತ್ರದಂತೆಯೇ ಮಹಿಳಾ ಕ್ರಿಕೆಟರ್‌ಮಿಥಾಲಿ ರಾಜ್‌ರ ಜೀವನಗಾಥೆಯಾಧಾರಿಸಿದ ಬಯೋಪಿಕ್‌ಗೆ ದುಡಿಯುತ್ತಿದ್ದಾಳೆ. ನಿರ್ದೇಶಕ ಡಿ. ರಾಹುಲ್ ‌ಇವಳ ಈ ಪರಿಯ ಪರಿಶ್ರಮ ಗಮನಿಸಿ ಮೀಡಿಯಾದೆದುರು ಮನದುಂಬಿ ಮಿಸ್‌ ಪರ್ಫೆಕ್ಷನಿಸ್ಟ್ ಎಂದು ಹೊಗಳಿದ್ದಾರೆ. ಆಲ್ ದಿ ಬೆಸ್ಟ್ ತಾಪಸಿ!

ಜಯದೀಪ್‌ ಕೆರಿಯರ್‌ನಲ್ಲಿ ದೀಪ

jaydeep-1

ಖಠ್ಠಾಮೀಠಾ, ಆಕ್ರೋಶ್‌ನಂಥ ಚಿತ್ರಗಳಿಂದ ಇಂದಿನ ಸ್ವಾರ್ಥಿ ಕಮರ್ಶಿಯಲ್ ಬಾಲಿವುಡ್‌ನಲ್ಲಿ ತನ್ನದೇ ಆದ ಐಡೆಂಟಿಟಿ ಕ್ರಿಯೇಟ್‌ ಮಾಡಿಕೊಂಡು, ಯಾವ ಗಾಡ್‌ ಫಾದರ್‌ ನೆರವಿಲ್ಲದೆ ಅಪ್ಪಟ ಪ್ರತಿಭೆಯಿಂದ ಮುನ್ನುಗ್ಗುತ್ತಿರುವ ಉತ್ಕೃಷ್ಟ ಕಲಾವಿದ ಜಯದೀಪ್‌ ಚೌಧರಿ ಬದುಕಿನ ಕೆರಿಯರ್‌ನಲ್ಲೊಂದು ದೀಪ ಬೆಳಗುವ ದಿನಗಳು ಬಂದಿವೆ! ಕೇವಲ ನೆಗೆಟಿವ್ ‌ಪಾತ್ರಗಳನ್ನು ನಿರ್ವಹಿಸುತ್ತಲೇ ತಾನೆಂಥ ಗಟ್ಟಿ ಅಭಿನಯ ನೀಡಬಲ್ಲೆ ಎಂದು ನಿರೂಪಿಸಿದ ಜಯದೀಪ್‌ನಂಥ ನಟರು ಇಂದು ಅತಿ ವಿರಳವೇ ಸರಿ. `ರಾಝಿ’ ಚಿತ್ರದಲ್ಲಿನ ಈತನ ಸಕಾರಾತ್ಮಕ ಪಾತ್ರ, ಘಟಾನುಘಟಿಗಳೆಲ್ಲ ತಲೆದೂಗುವಂತೆ ಮಾಡಿದೆ. ಸದ್ಯಕ್ಕೆ ಈತ ವೆಬ್ ಸೀರೀಸ್‌ನ `ಪಾತಾಳ್‌ ಲೋಕ್‌’ ಧಾರಾವಾಹಿಯಲ್ಲಿ ಹಾಥಿರಾಮ್ ಚೌಧರಿ ಪಾತ್ರ ನಿರ್ವಹಿಸುತ್ತಿದ್ದು, ಅಪಾರ ಹೆಸರು, ಕೀರ್ತಿ ಗಳಿಸಿದ್ದಾನೆ. ರಂಗಭೂಮಿಯಿಂದ ನಟನೆ ಆರಂಭಿಸಿ ಇಂದು ಈ ಮಟ್ಟಕ್ಕೆ ಬೆಳೆದಿರುವುದು, ಸ್ವಪ್ರತಿಭೆ ಎಂದೂ ಆದರಣೀಯ ಎಂಬುದನ್ನು ಮತ್ತೆ ನಿರೂಪಿಸಿದೆ. ಈತನಿಗಾಗಿಯೇ ಕಥೆ ಬರೆಯಲಾಗುತ್ತಿದೆ ಎಂದರೆ, ಬೇಡಿಕೆ ಎಷ್ಟಿದೆ ಎಂದು ಅಂದಾಜಿಸಿ, ಆಲ್ ದಿ ಬೆಸ್ಟ್ ಜಯ್‌!

ಇದೀಗ ಜೀವನ ಬದಲಾಗಿದೆ!

life-IMG_3789

ಕಿರುತೆರೆ ನಟಿ ಅನುಷ್ಕಾಳ ಜರ್ನಿ ಈಗ ತಾನೇ ಶುರುವಾಗಿತ್ತು ಎನ್ನುವಷ್ಟರಲ್ಲಿ ಕೊರೋನಾ ಮಹಾಮಾರಿ ಅವಳ ಏಳಿಗೆಗೆ ದೊಡ್ಡ ಕಲ್ಲು ಹಾಕಿತು. ಲೇಶಮಾತ್ರ ನಿರಾಶಳಾಗದ ಅನುಷ್ಕಾ, ಕೈಗೆ ಸಿಕ್ಕಿದ ಶಾರ್ಟ್‌ ಫಿಲ್ಮ್ ಗಳನ್ನೇ ಪ್ರಧಾನವಾಗಿಟ್ಟುಕೊಂಡು ಶ್ರದ್ಧೆಯಿಂದ ನಿಭಾಯಿಸುತ್ತಿದ್ದಾಳೆ. ಅವಳ ಈ ಚಿತ್ರ `ಕಾನ್ಸ್ ಫಿಲ್ಮ್ ಫೆಸ್ಟಿವ್‌’ನಲ್ಲಿ ಪ್ರದರ್ಶನಗೊಳ್ಳಲಿದೆ! ಇಂಥ ಪ್ರತಿಭಾ ಮನ್ನಣೆ ಎಲ್ಲರಿಗೂ ಸುಲಭವಾಗಿ ಕೈಗೆಟುಕದು, ಇದು ನನ್ನ ಸೌಭಾಗ್ಯ ಎಂದು ಹೇಳುತ್ತಾಳೆ ಅನುಷ್ಕಾ. ಲಾಕ್‌ ಡೌನ್‌ ಕಾರಣ ಈ ಫೆಸ್ಟಿವಲ್ ‌ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಬೆಟರ್‌ ಲೇಟ್‌ ದ್ಯಾನ್‌ ನೆವರ್‌. ಈ ಕೊರೋನಾ ಮಹಾಮಾರಿಯಿಂದ ನಮ್ಮಂಥ ಕಲಾವಿದರ ಕೆರಿಯರ್‌ ಬದಲಾಯಿಸಿ ಹೋಗಿದೆ. ನಮ್ಮ ಜೀವನದಿಂದ ಬಿಟ್ಟು ಹೋಗಿದ್ದ ಕೆವಲ ಬೇಸಿಕ್‌ ಮೌಲ್ಯಗಳನ್ನು ಈಗ ಅಳವಡಿಸಿಕೊಳ್ಳುವಂತಾಗಿದೆ. ಮುಂದಿನ ವರ್ಷದ ಹೊತ್ತಿಗೆ ಎಲ್ಲ ಸರಿಹೋದೀತು ಎನ್ನುತ್ತಾಳೆ ಈ ಆಶಾವಾದಿ.

ಉಳಿತಾಯ ಪೂರ್ತಿ ಕೈಬಿಡಲಿದೆ

ಬಾಲಿವುಡ್‌ನ ಬ್ಯಾಡ್‌ ಮ್ಯಾನ್‌ ಎಂದೇ ಗುರುತಿಸಲ್ಪಡುವ ಗುಲ್ಶನ್‌ ಗ್ರೋವರ್‌, ನಿಜಕ್ಕೂ ಬಹುಮುಖ ಪ್ರತಿಭೆಯ ಗಣಿ. ಈತ ಹಾಲಿವುಡ್‌ನಲ್ಲೂ ತನ್ನ ಪ್ರತಿಭೆ ಮೆರೆದಿರುವುದೇ ಇದಕ್ಕೆ ಸಾಕ್ಷಿ. ಬಹಳ ವರ್ಷಗಳ ನಂತರ ಗುಲ್ಶನ್‌, ಇದೀಗ ರೋಹಿತ್‌ ಶೆಟ್ಟಿಯ `ಸೂರ್ಯವಂಶಿ’ ಚಿತ್ರದಲ್ಲಿ ಕಾಣಿಸಲಿದ್ದಾನೆ. ಆದರೆ ಹಾಳು ಲಾಕ್‌ ಡೌನ್‌ನಿಂದಾಗಿ ಆ ಚಿತ್ರೀಕರಣ ಬಹಳ ತಡವಾಗುತ್ತಿದೆ. ಇಂಥ ಸ್ಥಿತಿಯಿಂದ ಗುಲ್ಶನ್‌ ಟೆನ್ಶನ್‌ಗೆ ಒಳಗಾಗಿರುವುದು ಸಹಜ. ಲಾಕ್‌ ಡೌನ್‌ನಿಂದಾಗಿ ಎಲ್ಲರ ಆದಾಯಕ್ಕೆ ಕಲ್ಲು ಬಿದ್ದಿರುವುದರಿಂದ, ಸಣ್ಣಪುಟ್ಟ ನಟನಟಿಯರಿಂದ ಹಿಡಿದು ದೊಡ್ಡ ಕಲಾವಿದರವರೆಗೂ ಅಪಾರ ನಷ್ಟವಾಗಿದೆ ಎನ್ನುತ್ತಾನೆ. ಉಳಿತಾಯದ ಒಂದು ಕವಡೆ ಕಾಸೂ ಉಳಿದಿಲ್ಲ ಎಂದು ಹಪಹಪಿಸುತ್ತಿದ್ದಾನೆ. ಮಹಾರಾಷ್ಟ್ರ ಸರ್ಕಾರ ಷರತ್ತು ಅನ್ವಯಿಸಿ ಶೂಟಿಂಗ್‌ಗೆ ಅನುಮತಿ ಏನೋ ನೀಡಿದೆ, ಈ ನೆಪದಲ್ಲಾದರೂ ಒಂದಿಷ್ಟು ಹಣ ಸಿಗಲಿ ಎಂಬುದೇ ಎಲ್ಲರ ಆಶಾವಾದ.

ಬಿಗ್‌ ಬಿ ವಿರುದ್ಧ ಸಿಡಿದೆದ್ದ ಸೋಶಿಯಲ್ ಮೀಡಿಯಾ ಯೂಸರ್ಸ್‌

Amitabh-4

ಅಮಿತಾಬ್ ‌ಬಚ್ಚನ್‌ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ‌ಆಗಿರುತ್ತಾರೆ, ಒಮ್ಮೊಮ್ಮೆ ಇದಕ್ಕೆ ಅವರು ಅಪಾರ ಬೆಲೆ ತೆರಬೇಕಾಗುತ್ತದೆ. ಕಳೆದ ಕೆಲವು ವಾರಗಳಿಂದ ಇವರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದ ಎಷ್ಟೋ ವಿಡಿಯೋಸ್‌ ಫೇಕ್‌ ಎನಿಸಿದವು. ಇನ್ನೇನು ಕೇಳಬೇಕೆ? ಟ್ರೋಲರ್‌ ಆರ್ಮಿ ಪುಂಖಾನುಪುಂಖಾಗಿ ಮೊಳಗಿತು. ಅಭಿಮಾನಿಗಳೂ ಸಹ ಇವರ ವಿರುದ್ಧ ಸಿಡಿದೆದ್ದರು. ಇಂಥ ದೊಡ್ಡ ಕಲಾವಿದರು ಹೀಗೆ ಮಾಡಬಹುದೆಂದು ಅಭಿಮಾನಿಗಳೆಂದೂ ಭಾವಿಸಿರಲಿಲ್ಲ. ಹಲವು ಆದರ್ಶಗಳ ರೋಲ್‌ ಮಾಡೆಲ್ ‌ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರೆಯೇ?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ