ಕನಸು ಕಾಣದವರೇ ಇಲ್ಲ ಎನ್ನಬಹುದು. ಒಬ್ಬೊಬ್ಬರದು ಒಂದೊಂದು ಗುರಿಯನ್ನು ಹೊಂದಿರುವಂತಹ ಕನಸು. ಕೆಲವರಿಗೆ ನೆಮ್ಮದಿ, ಸಂತೋಷ ಇರುವಂತಹ ಸುಂದರ ಸಂಸಾರ ಹೊಂದುವ ಕನಸು. ಗಂಡ, ಮನೆ, ಮಕ್ಕಳು ಸರಳ ಸುಂದರ ಬದುಕಿನ ಕನಸು, ಇನ್ನೂ ಕೆಲವರಿಗೆ ಆಗರ್ಭ ಶ್ರೀಮಂತರಾಗುವ ಕನಸು. ಇಷ್ಟೆಲ್ಲಾ ಪೀಠಿಕೆ ಏಕೆಂದರೆ ನಟಿ ಅನುಪ್ರಭಾಕರ್‌

`ನನ್ನ ಕನಸು ನನಸಾಗಿದೆ’ ಎಂದು ಸಂದರ್ಶನ ಸಮಯದಲ್ಲಿ ಹೇಳಿಕೊಂಡಳು.

ಡೀಟೇಲಾಗಿ ಹೇಳಿ ಎಂದು ಕೇಳಿದಾಗ…..

ನನಗೆ ಮೊದಲಿನಿಂದಲೂ ಮನೆ, ಗಂಡ, ಮಕ್ಕಳು, ಸುಂದರವಾದ ಸಂಸಾರ ಇರಬೇಕೆಂದು ಕನಸು ಕಂಡಳು. ಕನ್ನಡದ ನಾಯಕ ನಟ ರಘು ಮುಖರ್ಜಿ ಅವರೊಂದಿಗೆ ಮದುವೆಯಾದಾಗ ನನ್ನ ಲೈಫೇ ಬದಲಾಗಿ ಬಿಟ್ಟಿತು. ಅದರಲ್ಲೂ ಮಗಳು ನಂದನಾ ಬಂದ ಮೇಲಂತೂ ಬದುಕು ಇನ್ನಷ್ಟು ಸುಂದರವಾಗಿದೆ. ನಾನು ಪ್ರೆಗ್ನೆಂಟ್ ಆಗಿದ್ದಾಗ ಹೆಚ್ಚಾಗಿ ನೋಡುತ್ತಿದ್ದುದು, ಕಾಲ ಕಳೆಯುತ್ತಿದ್ದುದು ಪತಿ ರಘು ಜೊತೆ ಹಾಗಾಗಿ ಮಗಳು ಕಂಪ್ಲೀಟಾಗಿ ತದ್ರೂಪು ರಘು. ನನ್ನನ್ನು ಒಂದು ಚೂರೂ ಹೋಲುವುದಿಲ್ಲ. ರಘು ಮಗಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರೆ ಅವಳನ್ನು ಒಂದು ಕ್ಷಣ ಬಿಟ್ಟಿರುವುದಿಲ್ಲ. ಮನೆ ತುಂಬಾ ಅವಳದೇ ಸಂಭ್ರಮ. ಕಲೆ ರಕ್ತಗತವಾಗಿ ಬಂದಿರುವುದರಿಂದ ಅದು ಅವಳಲ್ಲೂ ಕಾಣುತ್ತೆ. ಇನ್ನೂ ಎರಡು ವರ್ಷ ಆಗಿಲ್ಲ ಏನೇನೋ ಡ್ರಾಮಾ ಮಾಡುತ್ತಾಳೆ, ಬಹು ಭಾಷಾ ಪ್ರವೀಣೆ. ನನ್ನ ಜೊತೆ ಕನ್ನಡ ಮಾತನಾಡುತ್ತಾಳೆ. ಅತ್ತೆ ತೆಲುಗಿನವರು ಹಾಗಾಗಿ ತೆಲುಗು ಬರುತ್ತದೆ, ಅರ್ಥವಾಗುತ್ತದೆ. ನಮ್ಮ ಮಾವನವರು ಬೆಂಗಾಲಿ ಸೋ ಬೆಂಗಾಲಿ ಅರ್ಥ ಆಗುತ್ತದೆ. ಇನ್ನು ರಘು ಜೊತೆ ಇಂಗ್ಲಿಷ್‌…. ಎಂದು ಅವನು ಹೇಳುತ್ತಾ ಅವಳಿಗೆ ಹಿಂದಿ ಒಂದು ಬರುವುದಿಲ್ಲ ಅಷ್ಟೆ. ನಮಗೆ ಮಗಳು ಅಂದರೆ ಪ್ರಾಣ. ಅವಳೊಂದಿಗೆ ಕಾಲ ಕಳೆಯುತ್ತಾ ಇಡೀ ಪ್ರಪಂಚವನ್ನೇ ಮರೆತುಬಿಡುತ್ತೇವೆ. ನಂದುಗೆ ಟಿ.ವಿ.ಯಲ್ಲಿ ನನ್ನ ಹಾಡು ಬಂದಾಗ ಕನ್‌ಫ್ಯೂಸ್‌ ಆಗುತ್ತಾಳೆ. ಅದೇ ನಮ್ಮ ತಾಯಿ ನಟಿಸಿರುವ ಬ್ರಹ್ಮ ಗಂಟು ಸೀರಿಯಲ್ ನೋಡಿದರೆ ಸಾಕು ಅಜ್ಜಿ ಅಜ್ಜಿ ಅಂತ ಗುರುತಿಸುತ್ತಾಳೆ.

ನಾನು ಇಂತಹದ್ದೇ ಕನಸು ಕಂಡಿದ್ದೆ, ಅದೆಲ್ಲ ನನಸಾಗಿದೆ. ರಘು ಪ್ರೀತಿ, ಮಗಳ ಅಕ್ಕರೆ ಇನ್ನೇನು ಬೇಕು….. ಐ  ಆ್ಯಮ್ ಹ್ಯಾಪಿ ಎಂದು ಹೇಳುತ್ತಾ ನಮ್ಮ ಟಾಪಿಕ್‌ ಸಿನಿಮಾದತ್ತ ಜಾರಿತು. ಇಷ್ಟು ದಿನ ಸಿನಿಮಾ ನೋಡಲು ಸಮಯ ಸಿಗುತ್ತಿರಲಿಲ್ಲ. ಓದು ಹವ್ಯಾಸ ಇದೆ, ಬಿಡುವಾದಾಗ ಕೈಗೆ ಪುಸ್ತಕ ಬರೋದು. ಬಿಗ್‌ಬಾಸ್‌ ಫಿನಾಲೆಗೆ ಒಂದು ಪ್ರೋಗ್ರಾಂ ಕೊಟ್ಟಿದ್ದೆ ಅಷ್ಟೆ. ಈಗ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ.

ಯಾವುದು……?

ಸಾರಾ ಅಬೂಬಕರ್‌ರವರ ಕಥೆಯಾಧಾರಿತ `ಸಾರಾ ವಜ್ರ.’ ಈ ಚಿತ್ರದ ಆಫರ್‌ ತಂದಂತಹ ವಿಷಯವೇ ತುಂಬಾ ಇಂಟರೆಸ್ಟಿಂಗ್‌. ಆರ್ನಾ ಎಂಬಾಕೆ ಫೋನ್‌ ಮಾಡಿ ಸಾರಾ ಅವರ ಕಥೆ ಸಿನಿಮಾ ಮಾಡ್ತಾ ಇದ್ದೀವಿ. ನೀವೇ ನಫೀಸಾ ಕ್ಯಾರೆಕ್ಟರ್‌ ಮಾಡಬೇಕು, ನಾನೇ ಡೈರೆಕ್ಟರ್‌ ಎಂದು ಹೇಳಿದಾಗ ಖುಷಿ ಆಯ್ತು. ಮಹಿಳಾ ನಿರ್ದೇಶಕಿಯರು ನಮ್ಮಲ್ಲಿ ಬೆರಳೆಣಿಕೆಯಷ್ಟು ಇರುವಾಗ ಆರ್ನಾ ಅಪ್ರೋಚ್‌ ಮಾಡಿದ ರೀತಿ ಇಷ್ಟವಾಯಿತು. ಮನೆಗೆ ಬನ್ನಿ ಮಾತಾಡೋಣ ಎಂದು ಕರೆದೆ. ಆಕೆ ಯಂಗ್‌ ಹುಡುಗಿ. ನನಗೆ ಇಡೀ ಚಿತ್ರದ ಬೌಂಡ್‌ ಸ್ಕ್ರಿಪ್ಟ್ ಕೊಟ್ಟರು. ಜೊತೆಗೆ ಸಾರಾ ಅಬೂಬಕರ್‌ ಅವರಂತಹ ದಿಗ್ಗಜ ಲೇಖಕಿಯ ಪುಸ್ತಕ ಕೊಟ್ಟು ಹೋದರು. ನಾನು ಇಡೀ ಪುಸ್ತಕ ಓದಿದಾಗ ಸಮಾಜಕ್ಕೆ ಒಳ್ಳೆಯ ಮೆಸೇಜ್‌ ಕೊಡುವಂತಹ ವಿಷಯ ಇದು ಎಂದು ಬಹಳ ಇಷ್ಟ ಆಯ್ತು. ಬ್ಯಾರಿ ಕಮ್ಯುನಿಟಿ ಹೆಣ್ಣುಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿರುವುದಾದರೂ ಎಲ್ಲರಿಗೂ ಅನ್ವಯಿಸುತ್ತದೆ.

ಯಾವಾಗ ರಿಲೀಸ್‌……

ಶೂಟಿಂಗ್‌ ಮುಗಿಸಿ ಡಬ್ಬಿಂಗ್‌ ಕೂಡಾ ಆಗಿದೆ. ಮನೋಹರ್‌ ಅವರಿಂದ ರೀರೆಕಾರ್ಡಿಂಗ್‌ ಕಾರ್ಯ ಶುರುವಾಗಿದೆ. ನನ್ನ ವೃತ್ತಿಯಲ್ಲಿ ಇದೊಂದು ಸ್ಪೆಷಲ್ ಸಿನಿಮಾ ಆಗುತ್ತದೆ. ಇಡೀ ತಂಡದ ಪರಿಶ್ರಮ, ನಿರ್ದೇಶಕಿ ಆರ್ನಾ ಡೆಡಿಕೇಶನ್‌ ಉಳಿದೆಲ್ಲ ಕಲಾವಿದರ ಕಾಂಟ್ರಿಬ್ಯೂಷನ್‌ ಒಂದೊಳ್ಳೆ ಚಿತ್ರವನ್ನಾಗಿ ಮಾಡಿದೆ. ನಮ್ಮ ಡೈರೆಕ್ಟರ್‌ ಅವರಿಗೆ `ಸಾರಾ ವಜ್ರ’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಳ್ಳಬೇಕು. ಫಿಲಂ ಮಹೋತ್ಸವಗಳಲ್ಲಿ ಭಾಗವಹಿಸಬೇಕೆಂಬ ಆಕಾಂಕ್ಷೆ ಇದೆ.

ಹಾಗಾದ್ರೆ ಪ್ರಶಸ್ತಿ ಗ್ಯಾರಂಟಿ……

ನಿಮಗೆ ಗೊತ್ತೇ ಇದೆ. ನಾನ್ಯಾವತ್ತೂ ಇದನ್ನೆಲ್ಲ ಬಯಸಿದವಳಲ್ಲ. ಅವಾರ್ಡ್‌ ಸಲುವಾಗಿ ಸಿನಿಮಾ ರಂಗಕ್ಕೆ ಬಂದವಳಲ್ಲ. ನನ್ನ ಕೆಲಸವನ್ನು ತುಂಬಾ ಪ್ರೀತಿಯಿಂದ ನಿಷ್ಠೆಯಿಂದ ಮಾಡುತ್ತಾ ಬಂದಿದ್ದೇನೆ. ಬಂದಾಗ ಖುಷಿ ಪಟ್ಟೆ. ಹಾಗಂತ ಅವಾರ್ಡ್‌ ಸಲುವಾಗಿ ಎಂದೂ ನಟಿಸಿದವಳಲ್ಲ.

ಇನ್ನೊಂದು ಚಿತ್ರ ಯಾವುದು?

ರಿಷಬ್‌ ಶೆಟ್ಟಿ ಅವರ ಪ್ರೊಡಕ್ಷನ್ಸ್ ಚಿತ್ರ. ಇದರ ಬಗ್ಗೆ ರಿಲೀವ್ ‌ಮಾಡಿಲ್ಲ. ಆದರೆ ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅಷ್ಟು ಮಾತ್ರ ಹೇಳಬಲ್ಲೆ.

ಕೊರೋನಾ ಭೀತಿ ಮಾಯಾವಾದರೆ `ಸಾರಾ ವಜ್ರ’ದ ಉಳಿದ ಕಾರ್ಯಗಳಿಗೆ ಚಾಲನೆ ನೀಡುತ್ತೇವೆ ಎನ್ನುತ್ತಾರೆ ನಿರ್ದೇಶಕಿ ಆರ್ನಾ.

1098 ರಲ್ಲಿ ಒಂದು ಚಿತ್ರವನ್ನು ನಿರ್ದೇಶಿಸಿದ್ದ ಆರ್ನಾ `ಸಾರಾ ವಜ್ರ’ ಚಿತ್ರ ನಿರ್ದೇಶಿಸಿದ್ದು ಈ ಚಿತ್ರ ಸಾರಾ ಅಬೂಬಕ್ಕರ್‌ರವರ ಕಾದಂಬರಿ ಆಧಾರಿತ ಚಿತ್ರವಾಗಿದೆ.

ಅನು ಪ್ರಭಾಕರ್‌, ರಮೇಶ್‌ ಭಟ್‌, ಸುಧಾ ಬೆಳವಾಡಿ, ಸುಹಾನಾ, ಪ್ರದೀಪ್‌ ಪೂಜಾರಿ, ವಿಭಾಸ್‌, ಅಂಕಿತಾ, ಸಾಯಿ ತೋಶಿತ್‌, ಆಯುಷ್‌ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಸಾರಾ ವಜ್ರ ಚಿತ್ರದ ಡಬ್ಬಿಂಗ್‌ ಮುಗಿದಿದೆ. ಎಲ್ಲಾ ಕಲಾವಿದರು ಮತ್ತೊಮ್ಮೆ ಅಭಿನಯಿಸಿ ತಮ್ಮ ವಜ್ರದ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಚಿತ್ರದಲ್ಲಿ ಏಳು ಹಾಡುಗಳಿಗೆ ವಿ. ಮನೋಹರ್‌ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಇದೆ. ಹನೀಫ್‌ ಹಾಗೂ ವಿ. ನಾಗೇಂದ್ರ ಪ್ರಸಾದ್‌ರವರ ಸಾಹಿತ್ಯವಿದೆ. ಕೊರೋನಾ ಸಾಂಕ್ರಾಮಿಕ ಭೀತಿ ದೂರವಾಗುತ್ತಿದ್ದಂತೆ ಉಳಿದ ಕೆಲಸಗಳಲ್ಲಿ ತೊಡಗುತ್ತೇವೆ, ಎನ್ನುತ್ತಾರೆ ನಿರ್ದೇಶಕಿ.

ನರೇಂದ್ರ ಬಾಬುರವರ ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಸಂಭ್ರಮ ಡೀಮ್ ಹೌಸ್‌ನ ಮೂಲಕ ದೇವೇಂದ್ರ ರೆಡ್ಡಿ ನಿರ್ಮಿಸುತ್ತಿದ್ದಾರೆ.

ಪರಮೇಶ್‌ ಸಿ.ಎ. ಛಾಯಾಗ್ರಹಣ, ವಿ. ಮನೋಹರ್‌ ಸಂಗೀತ ನಿರ್ದೇಶನ ಹಾಗೂ ಅಕ್ಷಯ್‌ ಪಿ. ರಾವ್‌ರವರ ಸಂಕಲನ ಸಾರಾ ವಜ್ರ ಚಿತ್ರಕ್ಕಿದೆ.

ಸರ್ಕಾರ ಸೂಚಿಸಿದಂತೆ ನಡೆದುಕೊಂಡು ಕೊರೋನಾ ಹರಡದಂತೆ ತಡೆಗಟ್ಟೋಣ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ, ಮನೆಯಲ್ಲಿಯೇ ಇರಿ ಮೊಬೈಲ್‌ನಿಂದ ದೂರ ಇರಿ ಎನ್ನುತ್ತಾರೆ ನಿರ್ದೇಶಕಿ ಆರ್ನಾ.

– ಜಾಗೀರ್‌ದಾರ್‌

Tags:
COMMENT