ಆನ್‌ ಲೈನ್‌ನಲ್ಲಿ ಖರೀದಿ ಪ್ರಕ್ರಿಯೆ ಶುರುವಾದಾಗಿನಿಂದ ಮಾರುಕಟ್ಟೆಯ ಅಂಗಡಿಗಳ ಅಳಿದುಳಿದ ಹೊಳಪು ಕೂಡ ಮಸುಕಾಗತೊಡಗಿದೆ. ಮೊದಲು ಯುಗಾದಿ, ಗಣೇಶನ ಹಬ್ಬ, ದಸರಾ, ದೀಪಾವಳಿ, ಸಂಕ್ರಾಂತಿಗೆ ಮಾರುಕಟ್ಟೆಯಲ್ಲಿ ಖರೀದಿಯ ಸೊಗಸು ಜೋರಾಗಿರುತ್ತಿತ್ತು. ದೂರದೂರದಿಂದ ಜನರು ನಗರದ ತಮ್ಮ ಮೆಚ್ಚಿನ ಅಂಗಡಿಗೆ ಬಂದು ಖರೀದಿಯಲ್ಲಿ ತೊಡಗುತ್ತಿದ್ದರು. ಆದರೆ ಈ ಹಬ್ಬಗಳ ಸಮಯದಲ್ಲಿ ಡಿಜಿಟಲ್ ಅಂಗಡಿಗಳು ಯಾವ ರೀತಿಯ ಆಫರ್‌ ಕೊಡುತ್ತಿವೆಯೋ, ಅದರಿಂದಾಗಿ ನಗರ ಪಟ್ಟಣಗಳ ಅಂಗಡಿಗಳು ತಮ್ಮ ಹೊಳಪು ಕಳೆದುಕೊಳ್ಳುತ್ತಿವೆ. ಹಬ್ಬಗಳ ಸಂದರ್ಭದಲ್ಲಿ ಪತ್ರಿಕೆ, ಟಿ.ವಿ., ರೇಡಿಯೊ, ಇಂಟರ್‌ ನೆಟ್‌ನಲ್ಲಿ ಡಿಜಿಟಲ್ ಶಾಪ್‌ಗಳದ್ದೇ ಸುದ್ದಿ.

ಒಂದು ವೆಬ್‌ಸೈಟ್‌ ಎಲೆಕ್ಟ್ರಾನಿಕ್‌ ವಸ್ತುಗಳ ಮೇಲೆ ಭಾರಿ ರಿಯಾಯಿತಿಯನ್ನು ಜಾಹೀರುಪಡಿಸುತ್ತದೆ. ಮತ್ತೊಂದು ವೆಬ್‌ಸೈಟ್‌ಚಪ್ಪಲಿ, ಗಡಿಯಾರ ಹಾಗೂ ಬಟ್ಟೆಗಳ ಮೇಲೆ 70-80% ರಿಯಾಯಿತಿಯ ಬಗ್ಗೆ ಘೋಷಣೆ ನೀಡುತ್ತದೆ. ಮತ್ತೆ ಕೆಲವು ವೆಬ್‌ಸೈಟ್‌ಗಳು ಮೊಬೈಲ್‌, ಫ್ರಿಜ್‌, ಟಿ.ವಿ.ಯ ಮೇಲೆ ಭಾರಿ ರಿಯಾಯಿತಿ ಘೋಷಣೆ ಮಾಡುತ್ತವೆ.

ಮೋಸ ಹೋಗುವ ಗ್ರಾಹಕ

ಭಾರಿ ರಿಯಾಯಿತಿಯ ಮೋಹಜಾಲಕ್ಕೆ ಸಿಲುಕಿ ಹೆಚ್ಚಿನ ಗ್ರಾಹಕರು ಉಪಯುಕ್ತ ವಸ್ತುಗಳಿಗಿಂತ, ನಿರುಪಯುಕ್ತ ವಸ್ತುಗಳನ್ನು ಖರೀದಿಸುವುದೇ ಹೆಚ್ಚು. ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ವಸ್ತು ನಿಜಕ್ಕೂ ಅದೇ ಬ್ರಾಂಡ್‌ನದ್ದಾಗಿರುತ್ತದೆಯೇ? ರಿಯಾಯಿತಿ ಆಮಿಷ ತೋರಿಸಿ ಮಾರಾಟ ಮಾಡಲ್ಪಡುವ ಹಲವು ವಸ್ತುಗಳು ನಕಲಿ ಆಗಿರುತ್ತವೆ.

ಗ್ರಾಹಕ ಅದರ ಹೊಳಪು, ಬ್ರಾಂಡ್‌ ನೇಮ್ ಹಾಗೂ ಭಾರಿ ರಿಯಾಯಿತಿ ನೋಡಿ ಅದನ್ನು ಖರೀದಿಸುತ್ತಾನೆ. ಆದರೆ ಅದನ್ನು  ಬಳಸಿದಾಗಲೇ ಅದರ ವಾಸ್ತವ ಕಣ್ಮುಂದೆ ಬರುತ್ತದೆ. ಈ ವೆಬ್‌ಸೈಟ್‌ಗಳು ಒಮ್ಮೆ ಉಪಯೋಗಿಸಲ್ಪಟ್ಟ ಹಾಗೂ ಟ್ಯಾಗ್‌ ತೆಗೆದು ಹಾಕಿದ ವಸ್ತುಗಳನ್ನು ಯಾವುದೇ ಕಾರಣಕ್ಕೂ ವಾಪಸ್‌ ತೆಗೆದುಕೊಳ್ಳುವುದಿಲ್ಲ.

10-15 ಸಾವಿರ ರೂ.ಗಳ ಮೊಬೈಲ್‌ಗೆ ಆರ್ಡರ್‌ ಮಾಡಿದರೆ ಬಾಕ್ಸ್ ನಲ್ಲಿ ಸೋಪ್‌ ಇಲ್ಲವೇ ಕಲ್ಲು ಕಳಿಸಿದ ಅನೇಕ ಉದಾಹರಣೆಗಳು ಪತ್ರಿಕೆಯಲ್ಲೂ ಸುದ್ದಿ ಮಾಡಿದ್ದವು. ಸಾಮಾನ್ಯವಾಗಿ ಪೊಲೀಸರು ಇಂತಹ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದಿಲ್ಲ. ಹಾಗೊಮ್ಮೆ ಮಾಡಿಕೊಂಡರೂ ಗ್ರಾಹಕರನ್ನೇ ತಪ್ಪಿತಸ್ಥರನ್ನಾಗಿಸುವ ಪ್ರಯತ್ನ ಮಾಡಲಾಗುತ್ತದೆ.

2017ರಲ್ಲಿ 18,000 ಜನರನ್ನು ಸಂಪರ್ಕಿಸಿ ನಡೆಸಿದ ಒಂದು ಸಮೀಕ್ಷೆಯಲ್ಲಿ ಶೇ.62ರಷ್ಟು ಜನರು ಇ-ಕಾಮರ್ಸ್‌ ಕಂಪನಿಗಳ ವೆಬ್‌ಸೈಟ್‌ನಲ್ಲಿ ಯಾವುದೇ ಒಂದು ವಸ್ತುವಿಗೆ ಕೊಟ್ಟ ರೇಟಿಂಗ್‌ನ ಆಧಾರದ ಮೇಲೆ ಅವುಗಳನ್ನು ತರಿಸಿಕೊಂಡರು. ಬಳಿಕ ಅವುಗಳ ಗುಣಮಟ್ಟ ಸರಿಯಿಲ್ಲ ಎನ್ನುವುದು ಗೊತ್ತಾಯಿತು.

ಇ-ಕಾಮರ್ಸ್‌ನ ಸಮೀಕ್ಷೆಯಲ್ಲಿ ಗ್ರಾಹಕರು ಹೇಳುವುದೇನೆಂದರೆ, ಅವರ ವೆಬ್‌ಸೈಟ್‌ಗಳಲ್ಲಿ ನಮೂದಿಸಲಾಗುವ ಹೆಚ್ಚಿನ  ಅಭಿಪ್ರಾಯಗಳು ನಕಲಿ ಅಥವಾ ಉದ್ದೇಶಪೂರ್ವಕವಾಗಿ ಹಾಕಲ್ಪಟ್ಟಂಥವೇ ಆಗಿರುತ್ತವೆ. ಕೆಲವು ಇ-ಕಾಮರ್ಸ್‌ ಕಂಪನಿಗಳಲ್ಲಿ ಗ್ರಾಹಕರು ಕೆಟ್ಟದಾಗಿ, ನಮೂದಿಸಿದ ಅಭಿಪ್ರಾಯಗಳನ್ನು ಪ್ರಕಟಪಡಿಸುವುದಿಲ್ಲ. ಅಷ್ಟೇ ಅಲ್ಲ, ಕೆಲವು ವೆಬ್‌ಸೈಟ್‌ಗಳಲ್ಲಿ ಪ್ರತಿಷ್ಠಿತ ಕಂಪನಿಗಳ ನಕಲಿ ಉತ್ಪಾದನೆಗಳು ಮಾರಾಟ ಆಗುತ್ತಿರುವುದೂ ಗಮನಕ್ಕೆ ಬಂದಿದೆ.

2017ರಲ್ಲಿ ಅಮೆರಿಕದ ಲೈಫ್‌ ಸ್ಟೈಲ್ ‌ಮತ್ತು ಫುಟ್‌ವೇರ್‌ ಬ್ರಾಂಡ್‌ `ಸ್ಕೆಚರ್ಸ್‌’ ಭಾರತದಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಮಾರಾಟ ಮಾಡುವ ವೆಬ್‌ಸೈಟ್‌ವೊಂದನ್ನು ಕೋರ್ಟ್‌ ಕಟಕಟೆಗೆ ಎಳೆದಿತ್ತು. ಆ ಬಳಿಕ ಪೊಲೀಸರ ನೆರವಿನಿಂದ ದೆಹಲಿ ಮತ್ತು ಅಹಮದಾಬಾದ್‌ನ 7 ಗೋಡೌನ್‌ಗಳ ಮೇಲೆ ದಾಳಿ ಕೂಡ ನಡೆಸಲಾಯಿತು.

ಹಬ್ಬದ ಸಂದರ್ಭದಲ್ಲಿ ಸಾಮಾನ್ಯ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ ಎನ್ನುವುದು ಸತ್ಯ. ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ಗಳ ಮೇಲೆ ಬಟ್ಟೆಗಳು, ಶೂ ಚಪ್ಪಲಿಗಳು, ಬೆಡ್‌ಶೀಟ್‌ ಮುಂತಾದವು ಅಗ್ಗದ ದರದಲ್ಲಿ ಸಿಗುತ್ತಿವೆ ಎಂದು ಮನವರಿಕೆಯಾದರೆ, ಅವರು ಅಲ್ಲಿಯೇ ಖರೀದಿಸುತ್ತಾರೆ. ಶೇ.50-70 ಅಥವಾ ಶೇ.80ರ ತನಕ ರಿಯಾಯಿತಿಯ ಆಮಿಷ ಗ್ರಾಹಕರಿಗೆ ಅನಗತ್ಯ ವಸ್ತುಗಳನ್ನು ಖರೀದಿಸಲು ಪ್ರೋತ್ಸಾಹಿಸುತ್ತದೆ.

ನ್ಯೂರೊ ಮಾರ್ಕೆಟಿಂಗ್

ವಿಶ್ಲೇಷಕರ ಪ್ರಕಾರ, ಸೇಲ್ ‌(ಭಾರಿ ರಿಯಾಯಿತಿ)ನ ಫಲಕ ನನಗೆ ಖರೀದಿಯ ಒಂದು ವಿಶೇಷ ಮೋಹವನ್ನು ಹುಟ್ಟಿಸುತ್ತದೆ. ಇಂತಹ ಸ್ಥಿತಿಯಲ್ಲಿ ನಾವು ವಾಸ್ತವದಲ್ಲಿ ಯಾವ ವಸ್ತುವನ್ನು ಖರೀದಿಸಬೇಕೆಂದು ಯೋಚಿಸುವುದಿಲ್ಲ. ಅನಗತ್ಯವಾಗಿ ಖರೀದಿಸಲ್ಪಟ್ಟ ವಸ್ತುವನ್ನು ನಮ್ಮ ಸಂಬಂಧಿಕರು, ಸ್ನೇಹಿತರಿಗೂ ಉಡುಗೊರೆಯಾಗಿ ಕೊಡಬೇಕಾಗಿ ಬರುತ್ತದೆ.

ಯಾವುದಾದರೂ ಒಂದು ಜಾಹೀರಾತು ನಮ್ಮನ್ನು ಆನ್‌ಲೈನ್‌ ವೆಬ್‌ಸೈಟ್‌ ತನಕ ಎಳೆತರಲು ಯಶಸ್ವಿಯಾಗಿದೆಯೆಂದರೆ, ನಾವು ಆ ವೆಬ್‌ಸೈಟ್‌ನಿಂದ ಖರೀದಿಸದೆ ಹೊರಬರುವುದಿಲ್ಲ. ಇಂತಹ ಹೆಚ್ಚಿನ ವೆಬ್‌ಸೈಟ್‌ಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ)ನ ನೆರವಿನಿಂದ ಗ್ರಾಹಕರ ಆಸಕ್ತಿ ಹಾಗೂ ಶೋಧದ ಪ್ಯಾಟರ್ನ್‌ ಮೇಲೆ ಗಮನವಿಟ್ಟು ಅದರ ಪ್ರಕಾರವೇ ಬಳಕೆದಾರರ ಮುಂದೆ ಪ್ರಸ್ತುತಪಡಿಸಲಾಗುತ್ತದೆ.

ಸ್ಮಾರ್ಟ್‌ ಮೋಹಜಾಲ

ಸ್ಮಾರ್ಟ್‌ ಫೋನ್‌ಗಳಂತೂ ವೆಬ್‌ಸೈಟ್‌ಗಳಲ್ಲಿ ಹೇಗೆ ಮಾರಾಟವಾಗುತ್ತವೆ ಎಂದರೆ, ಅವನ್ನು ಈಗ ಖರೀದಿಸದಿದ್ದರೆ ಮುಂದೆಂದೂ ಅವು ಸಿಗುವುದೇ ಇಲ್ಲ ಎಂಬಂತೆ. ಇಂತಿಂಥ ಕಂಪನಿಯ ಮೊಬೈಲ್‌ನ ಹೊಸ ಮಾಡೆಲ್ ಮಾರಾಟ ಶುರುವಾದ ಕೆಲವೇ ಸೆಕೆಂಡುಗಳಲ್ಲಿ ಖಾಲಿಯಾದವು ಎಂದು ಸುದ್ದಿ ಹರಡಲಾಗುತ್ತದೆ. ಈ ಖರೀದಿ ಉತ್ಸವದಲ್ಲಿ ಬಲಿಪಶು ಆಗುವುವವರೆಂದರೆ ಗ್ರಾಹಕರು ಇಂತಹ ಹೊಸ ಹೊಸ ಫೋನ್‌ಗಳನ್ನು ಖರೀದಿಸುತ್ತಾ ಹೋಗುವ ಗ್ರಾಹಕರು ತಮ್ಮ ಹಳೆಯ ಫೋನಿನ ಬ್ಯಾಟರಿ ಏಕೆ ಅಷ್ಟು ಬೇಗ ಡಿಸ್‌ಚಾರ್ಜ್‌ ಆಯಿತು ಎನ್ನುವುದನ್ನು ತಿಳಿದುಕೊಳ್ಳಲು ಹೋಗುವುದಿಲ್ಲ.

ಅದರ ಹಿಂದೆ ಮೊಬೈಲ್ ಫೋನ್‌ ಉತ್ಪಾದಿಸುವ ಕಂಪನಿಯ ಕರಾಮತ್ತು ಇರಬಹುದೆ?  ಹೊಸ ಮಾಡೆಲ್‌ಗಳ ಮಾರಾಟಕ್ಕಾಗಿ ಹಿಂದೆ ಮಾರಾಟ ಮಾಡಿದ ಹಳೆಯ ಮಾಡೆಲ್‌ಗಳ ಕಾರ್ಯ ಸಾಮರ್ಥ್ಯವನ್ನು ಪ್ರಭಾವಿತಗೊಳಿಸಲಾಗಿರುತ್ತದೆ.

ಐಫೋನ್‌ ತಯಾರಿಸುವ ಆ್ಯಪ್‌ ಕಂಪನಿ ತನ್ನ ಹೊಸ ಮಾಡೆಲ್ ಲಾಂಚ್‌ ಮಾಡುವಾಗ ಹಳೆಯ ಮಾಡೆಲ್‌ಗಳ ವೇಗವನ್ನು ಅಪ್‌ಗ್ರೇಡೇಶನ್‌ ಮಾಡುವ ಸಂದರ್ಭದಲ್ಲಿ ಕಡಿಮೆಗೊಳಿಸಿತ್ತು ಎಂಬ ಆಪಾದನೆಯನ್ನು ಅದು ಒಪ್ಪಿಕೊಂಡಿತ್ತು. ಅದಕ್ಕಾಗಿ ಆ ಕಂಪನಿ ಬಳಿಕ ಗ್ರಾಹಕರ ಕ್ಷಮೆ ಕೂಡ ಕೇಳಿತ್ತು. ಬೇರೆ ಕಂಪನಿಗಳು ಕೂಡ ಅದೇ  ರೀತಿ ಮಾಡುವುದಿಲ್ಲ ಎನ್ನಲು ಏನು ಗ್ಯಾರಂಟಿ?

ಖಾಲಿಯಾಗುತ್ತಿರುವ ಗ್ರಾಹಕರ ಜೇಬು

ಮೊಬೈಲ್ ‌ಇಂಟರ್‌ನೆಟ್‌ನ್ನು ಹೆಚ್ಚೆಚ್ಚು ಬಳಸಲು ಶುರು ಮಾಡಿದಾಗಿನಿಂದ ನಮ್ಮ ದೇಶದಲ್ಲಿ ಆನ್‌ಲೈನ್‌ ಖರೀದಿ ಭರಾಟೆ ಹೆಚ್ಚಾಯಿತು. ಆಫೀಸು ಮನೆಯ ಧಾವಂತದಲ್ಲಿ ಸಮಯದ ಕೊರತೆ ಬಾಧಿಸುತ್ತದೆ. ಅಂತಹದರಲ್ಲಿ ಖರೀದಿಯ ಈ ಡಿಜಿಟಲ್ ವ್ಯವಸ್ಥೆ ಅವರಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಮನೆಯಲ್ಲೇ ಕುಳಿತು ತಮಗೆ ಬೇಕಾದ ವಸ್ತುವನ್ನು, ರಿಯಾಯಿತಿ ಬೆಲೆಯಲ್ಲಿ ಕೊಂಡುಕೊಳ್ಳುವ ವಿಧಾನ ಇ-ಕಾಮರ್ಸ್‌ ಪೋರ್ಟೆವ್‌ಗಳ ವಹಿವಾಟನ್ನು ಅದೆಷ್ಟೋ ಪಟ್ಟು ಹೆಚ್ಚಿಸುವಂತೆ ಮಾಡಿದೆ.

`ಇಂಡಿಯಾ ಬ್ರಾಂಡ್‌ ಈಕ್ವಿಟಿ ಫೌಂಡೇಶನ್‌’ನ ಪ್ರಕಾರ, ಭಾರತದಲ್ಲಿ ಇ-ಕಾಮರ್ಸ್‌ ಮಾರುಕಟ್ಟೆಯ ವ್ಯಾಪ್ತಿ 2007ರಲ್ಲಿ 38.5 ಶತಕೋಟಿ ಡಾಲರ್‌ ಇದ್ದದ್ದು 2026ರ ಹೊತ್ತಿಗೆ 200 ಶತಕೋಟಿ ಡಾಲರ್‌ಗೆ ತಲುಪಲಿದೆ.

ಉಲ್ಲೇಖನಾರ್ಹ ಸಂಗತಿಯೆಂದರೆ, ಡಿಜಿಟಲ್ ವಹಿವಾಟಿನಲ್ಲಿ ಶೇ.48ರಷ್ಟು ಎಲೆಕ್ಟ್ರಾನಿಕ್‌ ಸಲಕರಣೆಗಳು (ಮೊಬೈಲ್‌, ಟಿವಿ), ಶೇ.29ರಷ್ಟು ಬಟ್ಟೆಗಳು ಮಾರಾಟವಾಗುತ್ತದೆ. ಮೊಬೈಲ್ ‌ಇಂಟರ್‌ನೆಟ್‌ ಬಳಸುವರ ಸಂಖ್ಯೆ 50 ಕೋಟಿಗೆ ತಲುಪಿದ್ದು, ಮುಂದಿನ 23 ವರ್ಷಗಳಲ್ಲಿ ಅದು 82 ಕೋಟಿಗೆ ತಲುಪಲಿದೆ.

ಡಿಜಿಟಲ್ ಶಾಪಿಂಗ್‌ನ ವಿಚಿತ್ರ ಸ್ಪರ್ಧೆ

ಈ ಡಿಜಿಟಲ್ ಶಾಪ್‌ಗಳು ಕೇವಲ ಗ್ರಾಹಕರನ್ನಷ್ಟೇ ತನ್ನತ್ತ ಸೆಳೆಯಲು ಪ್ರಯತ್ನ ಮಾಡುವುದಿಲ್ಲ, ತಾನು ಪ್ರತಿಸ್ಪರ್ಧಿ ಕಂಪನಿಯಿಂದ ಹೇಗೆ ಮುಂದೆ ಇರುವುದಾಗಿ ಹೇಳಿಕೊಳ್ಳುತ್ತವೆ. ಫ್ಲಿಪ್‌ ಕಾರ್ಟ್‌ ಕಂಪನಿ ತಾನು ವಿದೇಶಿ ಕಂಪನಿ ಅಮೆಜಾನ್‌ಗಿಂತ ಮುಂದಿರುವುದಾಗಿ ಹೇಳಿಕೊಂಡಿತ್ತಲ್ಲದೆ, ಅಮೆಜಾನ್‌ ಭಾರತೀಯ ಬಳಕೆದಾರರಿಗೆ ಪ್ರಸ್ತುತವಲ್ಲ ಎಂದಿತ್ತು. ಅದಕ್ಕೆ ಪ್ರತ್ಯುತ್ತರ ಎಂಬಂತೆ ವೆಬ್‌ಸೈಟ್‌ನಲ್ಲಿ ಗ್ರಾಹಕರ ಹಿಟ್ಸ್ ಹಾಗೂ ಖರೀದಿಯ ಬಾಬತ್ತಿನಲ್ಲಿ ತಾನೇ ಭಾರತದಲ್ಲಿ ಮುಂಚೂಣಿಯಲ್ಲಿರುವುದಾಗಿ ಅದು ಹೇಳಿಕೊಂಡಿತ್ತು.

ರಿಯಾಯಿತಿ ಹಾಗೂ ಸ್ಪರ್ಧೆಗಳ ನಡುವೆ ಆಫ್‌ಲೈನ್‌ನಲ್ಲಿ ವಸ್ತುಗಳನ್ನು ಮಾರಾಟ ಮಾಡುವವರು ಹೈರಾಣಾಗಿ ಹೋಗಿದ್ದಾರೆ. ಆನ್‌ಲೈನ್‌ ಶಾಪಿಂಗ್‌ ಉತ್ಸವದಲ್ಲಿ ಎಲ್ಲರಿಗೂ ಲಾಭ ಎನಿಸುತ್ತದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಸ್ತು ಲಭಿಸುತ್ತದೆ. ರಿಟೇಲರ್‌ಗೂ ಯಾವುದೇ ಕಿರಿಕಿರಿ ಇಲ್ಲದೆ ವಸ್ತು ಮಾರಾಟ ಮಾಡುವ ಸುಲಭ ವಿಧಾನ. ಇಲ್ಲಿ ವಿತರಣೆಯ ಸರಣಿ ಅತ್ಯಂತ ಚಿಕ್ಕದಾಗಿರುತ್ತದೆ. ಯಾವುದೇ ಒಂದು ವಸ್ತು ಮಾರಾಟ ಮಾಡಿದ ಬಳಿಕ ಲಾಭ ಬರುತ್ತದೆ. ಆದರೆ ಹಲವರ ದೃಷ್ಟಿಯಲ್ಲಿ ಇದು ತಪ್ಪು ಪರಂಪರೆ.

ವಾಸ್ತವದಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್‌ ಕಂಪನಿಗಳ ರಣನೀತಿ ಸ್ಪಷ್ಟ. ಅವು ವೆಚರ್‌ ಫಂಡ್‌ ಹಾಗೂ ಬಾಹ್ಯ ಹೂಡಿಕೆದಾರರಿಂದ ಹಣ ಪಡೆಯುತ್ತವೆ. ಭಾರಿ ರಿಯಾಯಿತಿ ನೀಡುವುದರಿಂದ ನಕಾರಾತ್ಮಕ ಮಾರ್ಜಿನ್‌ನಲ್ಲೂ ಮಾರಾಟ ಮಾಡುತ್ತವೆ. ಈ ಮಾರಾಟ ಅಥವಾ ಟರ್ನ್‌ ಓವರ್‌ನ ಆಧಾರದ ಮೇಲೆ ಈ ಕಂಪನಿಗಳು ಬ್ಯಾಂಕ್‌ಗಳಿಂದ ಕೋಟ್ಯಂತರ ರೂ. ಸಾಲ ಪಡೆಯುತ್ತವೆ. ಪಡೆದ ಸಾಲವನ್ನು ಪುನಃ ಮಾರಾಟ ಹೆಚ್ಚಿಸಲು ಬಳಸುತ್ತವೆ. ಆ ಬಳಿಕ ಮತ್ತೊಮ್ಮೆ ಸಾಲ ಪಡೆಯುತ್ತವೆ.

online-shopping

ಒಂದು ಉದಾಹರಣೆ ಆನ್‌ಲೈನ್‌ ಪೇಮೆಂಟ್‌ ಕಂಪನಿ ಪೇಟಿಎಂನದು. ಅದರ ಮುಖಾಂತರ ಸಾವಿರಾರು ಸಾಮಾನುಗಳನ್ನು ಮಾರಾಟ ಮಾಡಲಾಗುತ್ತದೆ. ಕಳೆದ 1 ವರ್ಷದಲ್ಲಿ ಪೇಟಿಎಂನ ಮಾರಾಟ 780 ಕೋಟಿ ರೂ.ನಿಂದ 3314 ಕೋಟಿ ರೂ.ಗಳಿಗೆ ಹೆಚ್ಚಿತು. ಅದರ ವಿಜಯೋತ್ಸವವನ್ನು ಪೇಟಿಎಂ ಆಚರಿಸಿಕೊಳ್ಳಬಹುದಾಗಿತ್ತು. ಆದರೆ ಅದರ ಎರಡನೇ ಮುಖವೇ ಬೇರೆ ಇದೆ. ವಸ್ತುಗಳ ಮಾರಾಟ ಮಾಡಿದ್ದರಿಂದ ಕೊಟ್ಟ ಕಮೀಶನ್‌ ಡೆಲಿವರಿ ಮ್ಯಾನ್‌ ಹಾಗೂ ಸ್ವತಃ ಪೇಟಿಎಂ ಉದ್ಯೋಗಿಗಳ ಸಂಬಳ, ಜಾಹೀರಾತು ಹೀಗೆ ಒಟ್ಟು ಖರ್ಚುಗಳ ಕಾರಣದಿಂದ ಈ ಕಂಪನಿ 11,490 ಕೋಟಿ ರೂ. ನಷ್ಟಕ್ಕೊಳಗಾಯಿತು. 2017ಕ್ಕೆ ಹೋಲಿಸಿದರೆ 2018ರಲ್ಲಿ ಈ ನಷ್ಟ ಶೇ.70ಕ್ಕೆ ಹೆಚ್ಚಳವಾಯಿತು.

ಒಂದು ಉಲ್ಲೇಖನಾರ್ಹ ಸಂಗತಿಯೆಂದರೆ, ಈ ಕಂಪನಿಯ ನಿರ್ವಹಣೆ ಮತ್ತು ವಿಸ್ತರಣೆಗೆ ಚೀನಾ ದೇಶದ ಅಲಿಬಾಬಾ ಗ್ರೂಪ್‌ಹೋಲ್ಡಿಂಗ್‌ಲಿಮಿಟೆಡ್‌ನಿಂದ ಭಾರಿ ಪ್ರಮಾಣದಲ್ಲಿ ಸಾಲ ದೊರಕಿದೆ. ವಿದೇಶಿ ಸಾಲದಿಂದ ನಡೆಯುವ ಆನ್‌ಲೈನ್‌ ಕಂಪನಿಗಳ ರೀತಿಯಲ್ಲಿಯೇ ಈ ಕಂಪನಿಯ ಸ್ಥಿತಿ ಕೂಡ ಇದೆ. ಇವುಗಳಲ್ಲಿ ಕೆಲವು ಯೋಜನೆಗಳು ತಮ್ಮ ಖರ್ಚುಗಳನ್ನು ಖರೀದಿಸಲು ಷೇರು ಮಾರುಕಟ್ಟೆಯಲ್ಲಿ ತಮ್ಮ ಐಪಿಓ ಹೊರತರುವುದು ಕೂಡ ಸೇರಿದೆ. ಐಪಿಓದಿಂದ ಬರುವ ಬಹಳಷ್ಟು ಮೊತ್ತ ಸಾರ್ವಜನಿಕ ಮೂಲದ್ದಾಗಿತ್ತು. ಮುಂದೆ ಏನಾದರೂ ತೊಂದರೆಯಾದರೆ ಸಾಮಾನ್ಯ ಜನರ ಜೇಬಿಗೆ ಹೊರೆ ಬೀಳುತ್ತದೆ. ಮುಂಬರುವ 23 ವರ್ಷಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಕಂಪನಿಗಳು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.

ಬಿರ್ಲಾ ಸಮೂಹದ ಚೇರ್‌ಮನ್‌ ಕುಮಾರ್‌ ಮಂಗಲಮ್ ಬಿರ್ಲಾ 2017ರಲ್ಲಿಯೇ ಈ ರೀತಿಯ ಭವಿಷ್ಯ ನುಡಿದಿದ್ದರು. ಆನ್‌ಲೈನ್‌ಶಾಪಿಂಗ್‌ ಡಿಸ್ಕೌಂಟ್‌ ನೀಡುವ ಯಾವ ಬಿಸ್‌ನೆಸ್‌ ಮಾಡೆಲ್ ಮೇಲೆ ನಿಂತಿದೆಯೋ, ಅದು ಹೆಚ್ಚು ದಿನಗಳ ಕಾಲ ನಡೆಯಲಾರದು. ಇದಕ್ಕೆ ಕಾರಣವೇನೆಂದರೆ, ಹೂಡಿಕೆದಾರರ ಬಂಡವಾಳದ ಬಲದ ಮೇಲೆ ಈ ಶಾಪಿಂಗ್‌ ವೆಬ್‌ಸೈಟ್‌ಗಳು ಭಾರಿ ರಿಯಾಯಿತಿಯಲ್ಲಿ ವಸ್ತುಗಳನ್ನು ಮಾರುತ್ತಿವೆಯೋ, ಅವರು ಬಹುಬೇಗ ತಮ್ಮ ಹೂಡಿಕೆಯ ಮೇಲೆ ರಿಟರ್ನ್‌ ಕೇಳಲು ಶುರು ಮಾಡುತ್ತಾರೆ. ಹೀಗೇನಾದರೂ ಆಗಿಬಿಟ್ಟರೆ ಆನ್‌ ಲೈನ್‌ ವೆಬ್‌ಸೈಟ್‌ ನಡೆಸುವವರು ಹಾಗೂ ಅವರ ಮೂಲಕ ನೌಕರಿ ಪಡೆದವರಿಗೆ ತೊಂದರೆ ಆಗುತ್ತದೆ.

ಡಿಜಿಟಲ್ ಉದ್ಯೋಗಿಗಳಿಗೆ ಅತಿಯಾದ ಹೊರೆ ಇತ್ತೀಚಿನ ವರ್ಷಗಳಲ್ಲಿ ಆನ್‌ ಲೈನ್‌ ಶಾಪಿಂಗ್‌ ಉತ್ಸವ `ದಿ ಬಿಗ್‌ ಬಿಲಿಯನ್‌ ಡೇಸ್‌’ ಶುರುವಾದಾಗಿನಿಂದ ಇ-ಕಾಮರ್ಸ್‌ ಕಂಪನಿಗಳ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಒಬ್ಬರನ್ನೊಬ್ಬರು ಹಿಂದೆ ಹಾರುವ ಆತುರದಲ್ಲಿ ನಿಜವಾಗಿಯೂ ಸಂಕಷ್ಟಕ್ಕೊಳಗಾಗುವವರೆಂದರೆ, ಆ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು. ಹಬ್ಬದ ಸಂದರ್ಭದಲ್ಲಿ ಭಾರಿ ರಿಯಾಯಿತಿ ಘೋಷಿಸಿದಾಗ ಈ ಯುವಕರು ಅತಿಯಾದ ಒತ್ತಡಕ್ಕೊಳಗಾಗುತ್ತಾರೆ. ಹಲವು ದಿನಗಳ ತನಕ ಆಫೀಸಿನಿಂದ ಹೊರಗೆ ಹೋಗಲು ಕೂಡ ಆಗುವುದಿಲ್ಲ. ಇನ್ನು ಕೆಲವು ಉದ್ಯೋಗಿಗಳಿಗೆ ಕರೆದಾಗ ಆಫೀಸಿಗೆ ಬರಬೇಕೆಂಬ ಸ್ಪಷ್ಟ ನಿರ್ದೇಶನವಿರುತ್ತದೆ. ಇ-ಕಾಮರ್ಸ್‌ ಕಂಪನಿಗಳ ಈ ಕಾರ್ಯ ಸಂಸ್ಕೃತಿಯನ್ನು ಪ್ರಶ್ನಾರ್ಥಕ ದೃಷ್ಟಿಯಿಂದ ನೋಡುವಂತೆ ಮಾಡಿದೆ.

ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಯುವಜನಾಂಗದ ಬಳಿಕ ಈಗ ಆನ್‌ಲೈನ್‌ ಶಾಪಿಂಗ್‌ನಲ್ಲಿ ಕೆಲಸ ಮಾಡುವವರು ಅತಿಯಾದ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ.

ಒಂದು ದಶಕದ ಹಿಂದಷ್ಟೇ `ವಿವಿ ಗಿರಿ ನ್ಯಾಶನಲ್ ಲೇಬರ್‌ ಇನ್‌ಸ್ಟಿಟ್ಯೂಟ್‌’ ತನ್ನ ವರದಿಯಲ್ಲಿ ಬಿಪಿಓ ಹಾಗೂ ಐಟಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರ ಸ್ಥಿತಿ 19ನೇ ಶತಮಾನದಲ್ಲಿ ರೋಮನ್‌ ಗುಲಾಮಗಿರಿ ಸಂಸ್ಕೃತಿಗಿಂತ ಭಿನ್ನವಾಗೇನೂ ಇಲ್ಲ ಎಂದು ಹೇಳಿತ್ತು. ಈ ಬಗ್ಗೆ ಎಡ ಪಕ್ಷಗಳು ಇದೊಂದು ವಿಶ್ವ ಬಂಡವಾಳಶಾಹಿಗಳ ಹಗರಣ, ನಮ್ಮ ಪ್ರತಿಭಾವಂತ ಯುವಕರು ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ ಎಂದಿತ್ತು. ಈಗ ಇ-ಕಾಮರ್ಸ್‌ ಕಂಪನಿಗಳಲ್ಲಿ ಕೆಲಸ ಮಾಡುವವರ ಸ್ಥಿತಿಯೂ ಅದೇ ಆಗಿದೆ.

ನಿಯಮಗಳಿಗೆ ತೂರುವ ಕಂಪನಿಗಳು

ಭಾರತೀಯ ಕಾರ್ಮಿಕ ಸಚಿವಾಲಯ ತನ್ನ ನೀತಿಯಲ್ಲಿ ನಿರ್ಧಾರಿತ ಮಾನದಂಡಗಳ ಪ್ರಕಾರವೇ ಕೆಲಸ ಮಾಡಿಸಬೇಕು ಎಂದು ಹೇಳುತ್ತದೆ. ಆದರೆ ಬಿಪಿಓ ಮತ್ತು ಐಟಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸಾಮಾನ್ಯವಾಗಿ ಅನಿಶ್ಚಿತ ಅವಧಿಯ ಕೆಲಸ ಹಾಗೂ ಒತ್ತಡಭರಿತ ವಾತಾವರಣದಿಂದ ಸುಸ್ತಾಗಿ ಹೋಗುತ್ತಿದ್ದಾರೆ. ರಜೆಗಳ ಬಾಬತ್ತಿನಲ್ಲಿ ಅವರ ಬಗ್ಗೆ ನಿರ್ದಯವಾಗಿ ನಡೆದುಕೊಳ್ಳಲಾಗುತ್ತದೆ. ಈ ವಿಷಯ ಆ ಉದ್ಯಮದ ಕರಾಳ ಮುಖವನ್ನು ಬಿಂಬಿಸುತ್ತದೆ. ಇಡೀ ವರ್ಷ ಅವರು ಇದೇ ಒತ್ತಡದಲ್ಲಿ ಕೆಲಸ ಮಾಡಬೇಕಾಗಿ ಬರುತ್ತದೆ. ಕೆಲವರಂತೂ ಅರ್ಧದಲ್ಲಿಯೇ ಉದ್ಯೋಗ ತೊರೆದುಬಿಡುತ್ತಾರೆ.

– ಅನೂಷಾ ಅಭಿಷೇಕ್‌

ಯಾವುದಕ್ಕೆ ಗೆಲುವು ಆಫ್‌ ಲೈನ್‌ ಅಥವಾ ಆನ್‌ಲೈನ್‌?

ಈಗ ದೇಶದಲ್ಲಿ ಆನ್‌ಲೈನ್‌ ಶಾಪಿಂಗ್‌ ಭಾರಿ ವೇಗದಲ್ಲಿ ತನ್ನ ರೆಕ್ಕೆ ಪಸರಿಸುತ್ತಿರಬಹುದು, ಚಿಕ್ಕಪುಟ್ಟ ವ್ಯಾಪಾರಿಗಳು `ಬಿಲಿಯನ್‌ರೇಸ್‌’ ನಂತಹ ಆಯೋಜನೆಗಳಿಂದ ತೊಂದರೆ ಪಡುತ್ತಿರಬಹುದು. ಆದರೆ ಬಹುದೊಡ್ಡ ಉದ್ಯಮಿಗಳ ಪ್ರಕಾರ, ಕೊನೆಗೊಮ್ಮೆ ಗೆಲುವು ಆಫ್‌ ಲೈನ್‌ ವ್ಯಾಪಾರಿಗಳದ್ದೇ ಆಗಿರುತ್ತದೆ. ಈ ಕುರಿತಂತೆ ಕೆಲವು ತಿಂಗಳುಗಳ ಹಿಂದೆ ಫ್ಯೂಚರ್‌ಗ್ರೂಫ್‌ನ ಸಿಇಓ ಕಿಶೋರ್‌ ಬಿಯಾನಿ ಅವರು, ದೇಶದಲ್ಲಿ ಶುರುವಾಗುತ್ತಿರುವ ಆನ್‌ಲೈನ್‌ ರಿಟೇಲ್ ‌ಬಿಸ್‌ನೆಸ್‌ಗೆ ವಾಸ್ತವದಲ್ಲಿ ಬಿಗ್‌ ಬಜಾರ್‌ ಹಾಗೂ ಈಝಿಡೇಯಂತಹ ಆಫ್‌ ಲೈನ್‌ ರಿಟೇಲ್ ‌ಔಟ್‌ಲೆಟ್ಸ್ ನಿಂದ ಅಪಾಯವಿದೆ ಎಂದಿದ್ದರು. ಬಿಯಾನಿಯವರ ಪ್ರಕಾರ, ಆನ್‌ಲೈನ್‌ ರಿಟೇಲ್ ವ್ಯವಹಾರದ ಪ್ರಮಾಣ ತುಂಬಾ ಕಡಿಮೆ ಇದೆ. ಆದರೆ ಅದರ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ಆನ್‌ಲೈನ್‌ಅಂಗಡಿಕಾರರು ಅಂದರೆ ಇ-ಕಾಮರ್ಸ್‌ ಕಂಪನಿಗಳ ಬಳಿ ಶೇ.1ರಷ್ಟು ಕೂಡ ಮಾರುಕಟ್ಟೆ ಪಾಲುದಾರಿಕೆ ಇಲ್ಲ. ಆನ್‌ಲೈನ್‌ಶಾಪಿಂಗ್‌ನ ಜ್ವರ ಬಹುಬೇಗ ಇಳಿಯುವ ಬಗ್ಗೆ ಜಗತ್ತಿನ ಹೆಸರಾಂತ ಉದ್ಯಮಿಗಳು ಹೇಳಿದ್ದಾರೆ. ಚೀನಾದ ಹೆಸರಾಂತ ಇ-ಕಾಮರ್ಸ್‌ ಕಂಪನಿ ಅಲಿಬಾಬಾ ಈಗ ಆಫ್‌ ಲೈನ್‌ ರಿಟೇಲ್ ‌ಬಿಸ್‌ನೆಸ್‌ನಂತಹವುಗಳನ್ನೇ ಖರೀದಿಸುತ್ತಿದೆ. `ಅಮೆಜಾನ್‌’ ಮಾಲೀಕ ಜೆಫ್‌ ಬೆಜೊಸ್‌ ಕೂಡ ಹಾಗೆಯೇ ಮಾಡುತ್ತಿದ್ದಾರೆ. ಇದರಿಂದ ಸ್ಪಷ್ಟವಾಗುವುದೆಂದರೆ, ಕಾಲಕ್ರಮೇಣ ಸಾಕಷ್ಟು ಬದಲಾವಣೆ ಆಗಬಹುದು. ಮುಂದೆ ಪರಿಸ್ಥಿತಿ ಹೇಗೆ ಬರಬಹುದೆಂದರೆ ವಸ್ತುಗಳನ್ನು ಆನ್‌ ಲೈನ್‌ ಅಥವಾ ಆಫ್‌ ಲೈನ್‌ನಲ್ಲಿ ಖರೀದಿಸಿ, ವಸ್ತುಗಳ ಬೆಲೆ ಹಾಗೂ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಆಗಲಾರದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ