ಹಾಲಿಗೆ ಬದಲು ಮೊಸರು ಸೇವಿಸುವುದು ದೇಹಾರೋಗ್ಯಕ್ಕೆ ತುಂಬಾ ಉಪಯುಕ್ತ. ಹಾಲಿನಲ್ಲಿರುವ ಫ್ಯಾಟ್‌ ಮತ್ತು ಸ್ನಿಗ್ಧ ಪದಾರ್ಥ ವಯಸ್ಸಿನ ಒಂದು ಹಂತದ ಬಳಿಕ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಅದರ ಬದಲಿಗೆ ಮೊಸರಿನಲ್ಲಿರುವ ಫಾಸ್ಛರಸ್‌ ಹಾಗೂ ವಿಟಮಿನ್‌ `ಡಿ’ ದೇಹಕ್ಕೆ ತುಂಬಾ ಉಪಯುಕ್ತ.

ಮೊಸರಿನಲ್ಲಿ ಕ್ಯಾಲ್ಶಿಯಂನ್ನು ಆ್ಯಸಿಡ್‌ ರೂಪದಲ್ಲಿ ಸೇರಿಸಿಕೊಳ್ಳುವ ವಿಶೇಷತೆ ಇರುತ್ತದೆ. ಪ್ರತಿದಿನ 300 ಎಂ.ಎಲ್. ಮೊಸರು ಸೇವನೆ ಮಾಡುವುದರಿಂದ ಆಸ್ಟೂಪೊರೊಸಿಸ್‌, ಕ್ಯಾನ್ಸರ್‌ ಹಾಗೂ ಹೊಟ್ಟೆಗೆ ಸಂಬಂಧಪಟ್ಟ ಬೇರೆ ರೋಗಗಳಿಂದ ರಕ್ಷಣೆ ದೊರಕುತ್ತದೆ. ಮೊಸರು ದೇಹದ ಉಷ್ಣತೆ ಕಡಿಮೆ ಮಾಡಿ ತಂಪಿನ ಅನುಭವ ನೀಡುತ್ತದೆ. ಫಂಗಸ್‌ನ್ನು ನಿವಾರಿಸಲು ಕೂಡ ಮೊಸರನ್ನು ಬಳಸಲಾಗುತ್ತದೆ.

ಡಯೇಟಿಶಿಯನ್‌ ತಾರಾ ಹೇಳುವುದು ಹೀಗೆ, “ದೇಶದ ಬೇರೆ ಬೇರೆ ಭಾಗಗಳಲ್ಲಿ ಮೊಸರನ್ನು ರಾಯ್ತಾ, ಲಸ್ಸಿ ಹಾಗೂ ಶ್ರೀಖಂಡಕ್ಕಾಗಿ ಬಳಸಲಾಗುತ್ತದೆ. ಮೊಸರನ್ನು ಬಳಸಿ ಹಲವು ವ್ಯಂಜನಗಳನ್ನು ತಯಾರಿಸಲಾಗುತ್ತದೆ. ಕೆಲವರು ಮೊಸರಿನಲ್ಲಿ ಸೈಂಧವ ಲವಣ ಹಾಗೂ ಜೀರಿಗೆ ಮಿಶ್ರಣ ಮಾಡಿಕೊಂಡು ತಿನ್ನುತ್ತಾರೆ. ಇದು ಹೊಟ್ಟೆಗೆ ಹಲವು ರೀತಿಯಲ್ಲಿ ಉಪಯುಕ್ತ. ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರಿಗೆ ಮೊಸರು ಬಹಳ ಉಪಯುಕ್ತ ಎನಿಸುತ್ತದೆ.”

ಕಾಯಿಲೆ ಓಡಿಸುವ ಮೊಸರು

ಮೊಸರನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹ ಹಲವು ಬಗೆಯ ರೋಗಗಳಿಂದ ರಕ್ಷಣೆ ಪಡೆಯುತ್ತದೆ. ಇದರಲ್ಲಿರುವ ವಿಟಮಿನ್‌ `ಡಿ’ ಕ್ಯಾಲ್ಶಿಯಂನ್ನು ಆ್ಯಸಿಡ್‌ ರೂಪದಲ್ಲಿ ಪರಿವರ್ತಿಸುತ್ತದೆ. ಯಾರು ಬಾಲ್ಯದಿಂದಲೇ ಮೊಸರು ಸೇವಿಸುವುದನ್ನು ರೂಢಿಸಿಕೊಂಡಿರುತ್ತಾರೊ ಅವರು ವೃದ್ಧಾಪ್ಯದಲ್ಲಿ ಆಸ್ಟೂಪೊರೊಸಿಸ್‌ನಂತಹ ರೋಗಗಳ ಅಪಾಯದಿಂದ ದೂರ ಇರುತ್ತಾರೆ.

ಮೊಸರಿನಲ್ಲಿ ದೇಹಕ್ಕೆ ಉಪಯೋಗ ಆಗುವಂತಹ ಉತ್ತಮ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಕೊರತೆ ಉಂಟಾದರೆ ಹಸಿವು ಆಗದೇ ಇರುವಂತ ಹಲವು ಸಮಸ್ಯೆಗಳು ಉಂಟಾಗಬಹುದು. ಇದರ ಹೊರತಾಗಿ ರೋಗ ಅಥವಾ ಆ್ಯಂಟಿಬಯಾಟಿಕ್‌ ಥೆರಪಿಯ ಸಂದರ್ಭದಲ್ಲಿ ಆಹಾರದಲ್ಲಿರುವ ವಿಟಮಿನ್‌ ಮತ್ತು ಖನಿಜಾಂಶಗಳು ಪಚನವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮೊಸರು ಒಂದು ಔಷಧಿಯಂತೆ ಕೆಲಸ ಮಾಡುತ್ತದೆ. ಅದರಿಂದಾಗಿ ಹೊಟ್ಟೆಯಲ್ಲಿ ಬರುವ ತೊಂದರೆಗಳು ತಂತಾನೇ ನಿವಾರಣೆಯಾಗುತ್ತವೆ.

ಇಂದಿನ ಧಾವಂತದ ಜೀವನದಲ್ಲಿ ಹೊಟ್ಟೆ ರೋಗಗಳ ತೊಂದರೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥವರು ತಮ್ಮ ಡಯೆಟ್‌ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೊಸರನ್ನು ಸೇರಿಸಿಕೊಂಡರೆ ಒಳ್ಳೆಯದು. ಇದರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ.

ಹಸಿವು ಆಗದೆ ಇರುವ ಸಮಸ್ಯೆ ಎದುರಿಸುವವರು ಮೊಸರು ಸೇವನೆಯಿಂದ ಉತ್ತಮ ಪರಿಣಾಮ ಕಂಡುಕೊಳ್ಳಬಹುದು. ಅದರ ಸೇವನೆಯಿಂದ ದೇಹಕ್ಕೆ ಒಳ್ಳೆಯ ಪೋಷಕಾಂಶ ದೊರೆತು ಚರ್ಮದ ಹೊಳಪು ಹೆಚ್ಚುತ್ತದೆ.

ಸೋಂಕಿನಿಂದ ದೂರ

ಪ್ರತಿದಿನ 300 ಎಂ.ಎಲ್.ನಷ್ಟು ಮೊಸರು ಸೇವನೆಯಿಂದ `ಕ್ಯಾಂಡಿಡಾ ಇನ್‌ಫೆಕ್ಶನ್‌’ ಮುಖಾಂತರ ಬಾಯಿಯ ಒಳಭಾಗದಲ್ಲಿ ಉಂಟಾಗುವ ಹುಣ್ಣುಗಳಿಂದಲೂ ಮುಕ್ತಿ ದೊರಕುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಈ ಸಮಸ್ಯೆ ಹೆಚ್ಚು. ಅವರು ಸಾಕಷ್ಟು ಪ್ರಮಾಣದಲ್ಲಿ ಮೊಸರಿನ ಸೇವನೆ ಮಾಡಬೇಕು.

ಬಾಯಿಯ ಹುಣ್ಣುಗಳಿಗೆ ದಿನಕ್ಕೆ 2-3 ಸಲ ಮೊಸರನ್ನು ಸವರಬೇಕು. ರಕ್ತ ಪರಿಚಲನೆಯ ವ್ಯವಸ್ಥೆಯಲ್ಲಿ ಬಿಳಿ ರಕ್ತ ಕಣಗಳಿಗೆ ಸೋಂಕನ್ನು ನಿಯಂತ್ರಿಸುವ ಅದ್ಭುತ ಶಕ್ತಿ ಇರುತ್ತದೆ. ಮೊಸರು ಸೇವನೆಯಿಂದ ಬಿಳಿ ರಕ್ತಕಣಗಳು ಬಲ ಪಡೆದುಕೊಳ್ಳುತ್ತವೆ. ಅದರಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಹೆಚ್ಚುತ್ತಿರುವ ವಯಸ್ಸಿನಲ್ಲಿ ಮೊಸರು ಸೇವನೆ ತುಂಬಾ ಉಪಯುಕ್ತ. ಯಾರು ದೀರ್ಘಕಾಲದಿಂದ ಅನಾರೋಗ್ಯ ಪೀಡಿತರಾಗಿರುತ್ತಾರೊ, ಅವರಿಗೂ ಕೂಡ ಮೊಸರು ಉಪಯುಕ್ತ ಎಂಬಂತೆ ಸಾಬೀತಾಗಿದೆ. ಡಯೇಟಿಶಿಯನ್‌ಗಳು ಕೂಡ `ಆ್ಯಂಟಿಬಯಾಟಿಕ್‌ ಥೆರಪಿ’ಯ ಸಂದರ್ಭದಲ್ಲಿ ಮೊಸರನ್ನು ನಿಯಮಿತವಾಗಿ ಸೇವಿಸಲು ಹೇಳುತ್ತಾರೆ.

ಹೃದಯವನ್ನು ಆರೋಗ್ಯದಿಂದಿಡಿ

ಮೊಸರಿನ ಸೇವನೆಯಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಬಹುದಾಗಿದೆ. ಅದರಿಂದ ಹೃದಯದಲ್ಲಿ ಆಗುವ ಕೊರೊನರಿ ಆರ್ಟರಿ ರೋಗದಿಂದ ರಕ್ಷಣೆ ದೊರೆಯುತ್ತದೆ. ವೈದ್ಯರ ಪ್ರಕಾರ ಮೊಸರಿನ ಸೇವನೆಯಿಂದ ಬ್ಲಡ್‌ ಕೊಲೆಸ್ಟ್ರಾಲ್‌ನ್ನು ಕಡಿಮೆಗೊಳಿಸಬಹುದು.

ಮೊಸರಿನ ವಿಶೇಷತೆ

ಹಾಲಿನಲ್ಲಿ `ಲ್ಯಾಕ್ಟೊ ಬೆಸಿಲಸ್‌’ ಎಂಬ ಬ್ಯಾಕ್ಟೀರಿಯಾವನ್ನು ಸೇರ್ಪಡೆಗೊಳಿಸಲಾಗತ್ತದೆ. ಅದರಿಂದಾಗಿ ಶುಗರ್‌, ಲ್ಯಾಕ್ಟಿಕ್‌ ಆ್ಯಸಿಡ್‌ ಆಗಿ ಪರಿವರ್ತನೆಗೊಳ್ಳುತ್ತದೆ. ಅದರಿಂದಾಗಿಯೇ ಹಾಲು ಮೊಸರಾಗುತ್ತದೆ. ಅದು ಪ್ರಿಸರ್ ವೇಟಿವ್ ‌ಆಗಿ ಕೆಲಸ ಮಾಡುತ್ತದೆ.

10-astonishing-healthy-benefits-of-dahi-yogurt-aahaarexpert

ಪೌಷ್ಟಿಕತೆ ಬಾಬತ್ತಿನಲ್ಲಿ ಮೊಸರನ್ನು ಹಾಲಿಗಿಂತ ಕಡಿಮೆ ಎಂದು ಪರಿಗಣಿಸಲಾಗುವುದಿಲ್ಲ. ಅದು ಕ್ಯಾಲ್ಶಿಯಂ ಅಂಶದೊಂದಿಗೆ ಸಿದ್ಧಗೊಳ್ಳುತ್ತದೆ. ಕಾರ್ಬೋಹೈಡ್ರೇಟ್‌, ಪ್ರೋಟೀನ್‌, ಕೊಬ್ಬಿನಂಶವನ್ನು ಸಾಧಾರಣ ರೂಪದಲ್ಲಿ ಕಡಿಮೆಗೊಳಿಸಬಹುದು. ಹೀಗಾಗಿ ಮೊಸರನ್ನು ಪ್ರೀ ಪ್ರಿಸರ್ ವೇಟಿವ್ ಫುಡ್‌ ಎಂದು ಪರಿಗಣಿಸಲಾಗುತ್ತದೆ. ಮಕ್ಕಳಿಗೂ ಕೂಡ ಅದು ಉಪಯುಕ್ತ ಎಂದು ವೈದ್ಯರು ಹೇಳುತ್ತಾರೆ.

ಮೊಸರಿನಲ್ಲಿ ಸಿಎಲ್ಎ ಅಂದರೆ `ಕಾಂಜುಗೇಟೆಡ್‌ ಲಿನೋಲೈಕ್‌ ಆ್ಯಸಿಡ್‌’ ಇರುತ್ತದೆ. ಫ್ರೀ ರಾಡಿಕಲ್ ಸೆಲ್ಸ್ ಆಗುವುದನ್ನು ಸಿಎಲ್ಎ ತಡೆಯುತ್ತದೆ. ಈ ಜೀವಕೋಶಗಳು ದೇಹದ ಬೆಳವಣಿಗೆಯನ್ನು ತಡೆಯುವ ಕೆಲಸ ಮಾಡುತ್ತವೆ.

ಮೊಸರು ತಯಾರಿಸುವಾಗ ಅದನ್ನು ಪರಿಪೂರ್ಣ ಫ್ಯಾಟ್‌ ಹಾಲಿನಿಂದ ತಯಾರಿಸಬಾರದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಂತಹ ಹಾಲಿನಲ್ಲಿ ಕ್ಯಾಲೋರಿ ಪ್ರಮಾಣ ಹೆಚ್ಚಿಗೆ ಇರುತ್ತದೆ.

ಒಂದುವೇಳೆ ನೀವು ಮೊಸರನ್ನು ಸಿಹಿ ರೂಪದಲ್ಲಿ ಸೇವಿಸಬೇಕೆಂದರೆ, ಜೇನುತುಪ್ಪ ಅಥವಾ ತಾಜಾಹಣ್ಣನ್ನು ಸೇರಿಸಿ ಸೇವಿಸಬೇಕು. ತಾಜಾ ಮೊಸರಿನಿಂದ ತಯಾರಿಸಿದ ಮಜ್ಜಿಗೆ ಬೇಸಿಗೆ ಕಾಲದಲ್ಲಿ ದೇಹವನ್ನು ಬಾಹ್ಯ ಹಾಗೂ ಆಂತರಿಕವಾಗಿ ತಂಪಾಗಿಡುತ್ತದೆ. ಬೇಸಿಗೆಯಲ್ಲಿ ಮೊಸರು ಮಜ್ಜಿಗೆಯ ಹೆಚ್ಚಿನ ಬಳಕೆ ಉತ್ತಮ.

ಮೊಸರು ಸೇವನೆಯಿಂದ ಸಾಮಾನ್ಯ ಶೀತ ಹಾಗೂ ನೆಗಡಿ ಉಂಟಾಗುತ್ತದೆ ಎಂದು ಬಹಳಷ್ಟು ಜನರ ತಪ್ಪು ಕಲ್ಪನೆಯಿದೆ. ಇಂತಹ ಜನರು ಹಗಲು ಹೊತ್ತು ಊಟದ ಬಳಿಕ ಮೊಸರು ಸೇವನೆ ಮಾಡಬೇಕು. ಮೊಸರನ್ನು ಯಾವಾಗಲೂ ತಾಜಾ ಇರುವಾಗಲೇ ಸೇವಿಸಬೇಕೇ ಹೊರತು ಫ್ರಿಜ್‌ನಲ್ಲಿ ಇಟ್ಟ ಮೊಸರನ್ನು ಸೇವಿಸಬಾರದು.

– ಶೈಲಜಾ ಮೂರ್ತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ