“ಗೀತಾ, ಹೊರಗೆ ಹೊರಟೆಯಾ? ಇದೀಗ ಲಾಕ್ ಡೌನ್ ಸಡಿಲವಾಗಿದ್ದರೂ ಎಷ್ಟೋ ಕಡೆ ಕಂಟೈನ್‌ಮೆಂಟ್, ಸೀಲ್ ಡೌನ್ ಇನ್ನೂ ತಪ್ಪಿಲ್ಲ…. ಪೊಲೀಸರ ಗಸ್ತು ಇದ್ದೇ ಇದೆ,” ಹೊರಗೆ ಹೊರಡಲೆಂದು ಸ್ಮಾರ್ಟ್ ಆಗಿ ಡ್ರೆಸ್ ಮಾಡಿಕೊಂಡು ಬಾಲ್ಕನಿಯಲ್ಲಿ ನಿಂತಿದ್ದ ಪಕ್ಕದ ಮನೆಯ ಗೀತಾಳನ್ನು ಕಂಡು ಪ್ರಶ್ನಿಸಿದಳು ಶೀಲಾ.
ಅಸಲಿಗೆ ಲಾಕ್ ಡೌನ್ ಘೋಷಣೆ ಆದಾಗಿನಿಂದ ಶೀಲಾ ತನ್ನ ನೈಟಿ ಗೆಟಪ್ ಬಿಟ್ಟು ಬೇರೆ ಡ್ರೆಸ್ ಬಗ್ಗೆ ಚಿಂತಿಸಲು ಹೋಗಲೇ ಇಲ್ಲ. ಮನೆಯಲ್ಲಿದ್ದುಕೊಂಡು, ವರ್ಕ್ ಫ್ರಮ್ ಹೋಮ್ ನಿಭಾಯಿಸುತ್ತಾ ಹಾಯಾಗಿರಲು ನೈಟಿಯೇ ಸುಲಭದ ಸಾಧನ ಎನ್ನುತ್ತಾಳೆ ಶೀಲಾ. ಕಾಟನ್ನಿನ ಹಗುರ, ಲೂಸ್, ಗಾಳಿಯಾಡುವ ನೈಟಿಗಳಲ್ಲಿ ಮನೆಯ ಕೆಲಸಗಳನ್ನು ಸರಸರ ಮಾಡಿ ಮುಗಿಸಲು ಸಲೀಸು. ಸುಸ್ತಾಯ್ತು ಎನಿಸಿದರೆ ಹಾಯಾಗಿ ಅದರಲ್ಲಿ ತುಸು ಮಲಗಬಹುದು. ಮತ್ತೆ ಮತ್ತೆ ಬಟ್ಟೆ ಬದಲಾಯಿಸಬೇಕೆನ್ನುವ ಜಂಜಾಟವಿಲ್ಲ. ಈ ಕೊರೋನಾ ಕಾಟದ ಮಧ್ಯೆ ಯಾವ ಅತಿಥಿಗಳೂ ಮನೆಗೆ ಬರುವ ಹಾಗಿಲ್ಲ, ಹೀಗಾಗಿ ಬೇಗ ಬೇಗ ಬೇರೆ ಡ್ರೆಸ್ ಬದಲಿಸಬೇಕೆನ್ನುವ ಗೊಡವೆಯೂ ಇಲ್ಲ. ನಾವು ಹೊರಗೆ ಹೋಗಬೇಕೆನ್ನುವ ಪ್ರಮೇಯವಿಲ್ಲ.
ಹೀಗಾಗಿ ಶೀಲಾ ಹಾಗೂ ವರ್ಕ್ ಫ್ರಮ್ ಹೋಮ್ ಗೆ ಅಂಟಿದ ಎಷ್ಟೋ ಹೆಂಗಸರು ನೈಟಿಯಲ್ಲೇ ಇಡೀ ದಿನ ಕಳೆದುಬಿಡುತ್ತಾರೆ. ಆದರೆ ಗೀತಾ ಹಾಗಲ್ಲ. ಬೆಳಗ್ಗೆ ಮನೆ ಕ್ಲೀನಿಂಗ್ ಮುಗಿಸಿ, ಸ್ನಾನ ಮಾಡಿ ಫ್ರೆಶ್ ಆದ ನಂತರ ನೀಟಾಗಿ ಪೂರ್ತಿ ಮೇಕಪ್ ಮಾಡಿಕೊಂಡು, ಆಫೀಸ್‌ಗೆ ಹೋಗುವವಳಂತೆ ಸಿದ್ಧಳಾಗಿ ನಿಂತ ಗೀತಾಳನ್ನು ಕಂಡು ಶೀಲಾ ಬೆರಗಾದಳು. ಹೀಗಾಗಿ ತನ್ನ ಬಾಲ್ಕನಿಯಿಂದಲೇ ವಿಚಾರಿಸಿದಳು.
“ಇಲ್ಲ…. ಇಲ್ಲ…. ಈ ಸಂದರ್ಭದಲ್ಲಿ ಎಲ್ಲಿಗೆ ಹೋಗೋದು? ಮನೆಯಲ್ಲಿ ಇರ್ತೀನಿ,” ಎಂದಳು ಗೀತಾ.
“ಮತ್ತೆ ಹೀಗೆ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿದ್ದಿ? ಈ ಡ್ರೆಸ್ಸಲ್ಲಿ ಒಳ್ಳೆ ಸ್ಮಾರ್ಟ್ ಆಗಿದ್ದಿ…. ಇವತ್ತು ಮನೆಗೆ ಯಾರಾದರೂ ಬರ್ತಾರೇನು? ಹೇಗೂ ಬಸ್ಸುಗಳು ಓಡಾಡುತ್ತಿವೆ.”
ಕಾರಣ ತಿಳಿಯದೆ ಶೀಲಾ ಸುಮ್ಮನೆ ಹೋಗುವವಳಲ್ಲ. ಮನೆಯಲ್ಲೇ ಇರುವುದು ಅಂತಾದ ಮೇಲೆ ಗೀತಾ ಇಷ್ಟೆಲ್ಲ ನೀಟಾಗಿ ಡ್ರೆಸ್ ಮಾಡಿಕೊಳ್ಳಬೇಕಾದ ಅಗತ್ಯವೇನಿತ್ತು?
“ಅರೆ…. ಯಾರೂ ಬರ್ತಿಲ್ಲಮ್ಮ. ಇನ್ನೇನು ಸ್ವಲ್ಪ ಹೊತ್ತಿಗೆ ನಮ್ಮ ಆಫೀಸ್‌ನ ಝೂಮ್ ಮೀಟಿಂಗ್ ಇದೆ. ಆನ್‌ಲೈನ್ ಸ್ಕೈಪ್ ಮೀಟಿಂಗ್‌ಗಳೂ ನಡೆಯುತ್ತಿರುತ್ತವೆ. ಅದಕ್ಕೆ ತುಸು ಡ್ರೆಸ್ ಮಾಡಿಕೊಂಡು ರೆಡಿ ಆಗಿದ್ದೀನಿ.”
“ಅರೆ…. ಅದಕ್ಕಾಗಿ ಕಷ್ಟಪಟ್ಟುಕೊಂಡು ಇಷ್ಟೆಲ್ಲ ತಯಾರಾಗಬೇಕಾದ ಅಗತ್ಯವೇನಿದೆ? ಬೇರೆ ಆಫೀಸ್‌ಗಳಂತೆ ನಿಮ್ಮ ಆಫೀಸಿನ ವರ್ಕ್ ಫ್ರಮ್ ಹೋಮ್ ಕಾಲ ಮುಗಿದು ನೀನು ಆಫೀಸಿಗೆ ಹೊರಟಿದ್ದೀಯಾ ಅಂದುಕೊಂಡೆ,”
ಶೀಲಾಳ ಕುತೂಹಲ ಇನ್ನೂ ಮುಗಿದಿರಲಿಲ್ಲ.
“ಆನ್‌ಲೈನ್ ಮೀಟಿಂಗ್ ಅಂದ್ರೆ ವಿಡಿಯೋ ಕಾನ್‌ಫರೆನ್ಸ್ ಇರುತ್ತದೆ. ಎಲ್ಲರ ಮುಖ, ಅವರ ಡ್ರೆಸ್ ಇತ್ಯಾದಿ ಗೊತ್ತಾಗುತ್ತದೆ. ಅಂದ ಮೇಲೆ ಸ್ವಲ್ಪವಾದ್ರೂ ನೀಟಾಗಿ ಇರಲೇಬೇಕಲ್ವ? ಇಲ್ಲದಿದ್ದರೆ ಆಫೀಸ್ ಫೀಲಿಂಗ್ ಬರೋದೇ ಇಲ್ಲ. ಮೀಟಿಂಗ್‌ನಲ್ಲಿ ಮನಸ್ಸೂ ಇರೋದಿಲ್ಲ. ಅದಕ್ಕಾಗಿ ಅಷ್ಟೇ ಈ ತಯಾರಿ, ಇನ್ನೇನೂ ವಿಶೇಷವಿಲ್ಲ.”
“ಹೌದಾ….. ನಾನು ಸುಮ್ಮನೆ ಹೀಗೆ ಕೇಳಿದೆ ಅಷ್ಟೆ. ಬರ್ತೀನಿ, ಒಳಗೆ ಕುಕ್ಕರ್ ಇಟ್ಟಿದ್ದೆ,” ಎಂದು ಶೀಲಾ ಹೊರಟಳು.
ಅಂದ್ರೆ ಶೀಲಾ ಮನೆಯಲ್ಲೇ ಇರುವ ಗೃಹಿಣಿ. ಲಾಕ್ ಡೌನ್ ಇಲ್ಲದಾಗ ಅವಳೂ ಬೆಳಗಿನ ಸ್ನಾನ ಮುಗಿಸಿ ಸೀರೆ ಅಥವಾ ಸಲ್ವಾರ್ ಧರಿಸಿ ತನ್ನ ಎಂದಿನ ಕೆಲಸ ಮುಂದುವರಿಸುತ್ತಿದ್ದಳು. ಅವಳ ಪತಿಗೆ ಬೆಳಗಿನ ಧಾವಂತದ ಕೆಲಸವಿಲ್ಲ. ಎಲ್ಲರಂತೆ ಬೇಗ ತಯಾರಾಗಿ ಹೊರಡುವ ಆತಂಕವಿಲ್ಲ. ಸದಾ 2ನೇ ಪಾಳಿಯ 2-10 ಗಂಟೆ ಕೆಲಸ. ಹೀಗಾಗಿ ಆಫೀಸಿಗೆ ಸಂಬಂಧಿಸಿದ ಸಣ್ಣಪುಟ್ಟ ಕೆಲಸಗಳು, ಫೋನ್, ಟ್ಯಾಬ್‌ಗಳಲ್ಲೇ ಮುಗಿಸಿಕೊಳ್ಳುತ್ತಿದ್ದ.
ಅದೇ ಕೆಲಸಕ್ಕೆ ಹೋಗುವ ಗೀತಾಳಿಗೆ ಸದಾ ಆತಂಕ ತಪ್ಪಿದ್ದಲ್ಲ. ಬೆಳಗ್ಗೆ ಬೇಗನೆ ತಿಂಡಿ, ಮೂರ ಟಿಫನ್ ಬಾಕ್ಸ್ ರೆಡಿ ಮಾಡಿ ತಾನೂ ಆಫೀಸಿಗೆ ಹೊರಡಲು ಸಿದ್ಧಳಾಗುವಳು. ಲಾಕ್ ಡೌನ್ ಘೋಷಣೆಯಾದಾಗಿನಿಂದ ಅವಳಿಗೆ ಬಿಝಿ ವರ್ಕ್ ಫ್ರಮ್ ಹೋಮ್ ಕೆಲಸವಿತ್ತು. ಆಗಿನಿಂದ ಅವಳು ತನ್ನ ಮನೆಯ ಗೆಸ್ಟ್ ರೂಮನ್ನೇ ಮಿನಿ ಆಫೀಸ್ ತರಹ ಮಾಡಿಕೊಂಡು ಅಲ್ಲಿನ ಮೇಜಿನ ಮೇಲೆ ಲ್ಯಾಪ್‌ಟಾಪ್, ಮೊಬೈಲ್ ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್, ಫೈಲುಗಳನ್ನೆಲ್ಲ ಜೋಡಿಸಿಕೊಂಡಳು. ಜೊತೆಗೆ ಒಂದು ಬದಿಯಲ್ಲಿ ಎಲೆಕ್ಟ್ರಿಕಲ್ ಟೀ ಕೆಟಲ್ ಸಹ ಸೆಟ್ ಮಾಡಿದ್ದಳು. ಕೆಲಸ ಬೋರಾದಾಗ ಅಲ್ಲೇ ಟೀ ಕುಡಿಯಲು ವ್ಯವಸ್ಥೆಯಾಗಿತ್ತು.
ಗೀತಾ ಐಟಿ ಪ್ರೊಫೆಶನಲ್. ಸ್ಮಾರ್ಟ್‌ಫಾಸ್ಟ್ ವರ್ಕರ್. ಲಾಕ್ ಡೌನ್ ಸಮಯದಿಂದ ಪ್ರಸ್ತುತ ವರ್ಕ್ ಫ್ರಮ್ ಹೋಮ್ ನಿಂದಾಗಿ 10 ಗಂಟೆ ಹೊತ್ತಿಗೆ ಫ್ರೆಶ್ ಆಗಿ, ಡೀಸೆಂಟ್ ಡ್ರೆಸ್ ಧರಿಸಿ ತನ್ನ ಮಿನಿ ಆಫೀಸ್ ಕೋಣೆ ಪ್ರವೇಶಿಸಿ, ಲ್ಯಾಪ್‌ಟಾಪ್ ತೆರೆದು ಲಾಗ್ ಇನ್ ಆಗಿ ಸೀರಿಯಸ್ ಆಗಿ ಕೆಲಸದಲ್ಲಿ ಮುಳುಗಿ ಹೋಗುತ್ತಿದ್ದಳು. ಮೀಟಿಂಗ್ಸ್ ಮತ್ತಿತರ ಎಲ್ಲಾ ಕೆಲಸಗಳನ್ನೂ ಲ್ಯಾಪ್‌ಟಾಪ್‌ನಲ್ಲೇ ಮುಗಿಸುವಳು.
ಹೀಗೆ ನಾವು ಸರಿಯಾಗಿ ಅಲಂಕರಿಸಿಕೊಂಡು ನೀಟಾಗಿ ಕೆಲಸ ಮಾಡಲು ಹಾಜರಾದರೆ ಮನಸ್ಸಿಗೆ ಹೆಚ್ಚಿನ ಉತ್ಸಾಹ ಇರುತ್ತದೆ. ಹೀಗಾಗಿ ಗೀತಾಳ ಎಲ್ಲಾ ಕೆಲಸಗಳೂ ಆನ್ ಲೈನ್ ಆದುದರಿಂದ ಅವಳು ಕೆದರಿದ ತಲೆ, ಹಳೆ ನೈಟಿಯಲ್ಲಿ ಬಂದರೆ ಹೇಗಾದೀತು? ಮೀಟಿಂಗ್ಸ್ ನಲ್ಲಿ ವಿಡಿಯೋ ಕಾನ್‌ಫರೆನ್ಸ್ ಗಳು ಸಹ ಇದ್ದು ಕ್ಲೈಂಟ್ಸ್, ಏಜೆನ್ಸೀಸ್ ಜೊತೆ ಮಾತುಕಥೆ ಇರುವುದರಿಂದ ಗೀತಾ ಖಂಡಿತಾ ತನ್ನ ಲುಕ್ಸ್ ಕಡೆ ಗಮನಹರಿಸಬೇಕಿತ್ತು. ಇಂಥ ಉತ್ಸಾಹದ ಚಟುವಟಿಕೆಗಳಿಂದ ಕೆಲಸದಲ್ಲಿ ಹುರುಪು ಹೆಚ್ಚಿ ಬೋರಿಂಗ್ ಅನಿಸುವುದಿಲ್ಲ.
ಭಾಸ್ಕರ್ ಒಬ್ಬ ಹೈಸ್ಕೂಲ್ ಟೀಚರ್. ಇತ್ತೀಚೆಗೆ ಎಲ್ಲಾ ಖಾಸಗಿ ಶಾಲೆಗಳೂ ಕಡ್ಡಾಯವಾಗಿ ಆನ್ ಲೈನ್ ಕ್ಲಾಸ್ ನಡೆಸುತ್ತಿವೆ. ಹೀಗಾಗಿ ಭಾಸ್ಕರ್ ಸಹ ವರ್ಕ್ ಫ್ರಮ್ ಹೋಮ್ ಗೆ ಹೊಂದಿಕೊಂಡಿದ್ದಾರೆ. ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ, ಉಪಾಹಾರ ಸೇವಿಸಿ, ನೀಟಾದ ಇಸ್ತ್ರೀ ಆಗಿರುವ ಪ್ಯಾಂಟ್ ಶರ್ಟ್ ಧರಿಸಿ, ಟೈ, ಪರ್ಫ್ಯೂಮ್ ಸ್ಪ್ರೇ ಸಹಿತ ತಮ್ಮ ಲ್ಯಾಪ್‌ಟಾಪ್ ಮುಂದೆ ಕೂರುತ್ತಾರೆ. ಬೆಳಗಿನ ಹಾಗೂ ಲಂಚ್ ಟೈಂ ನಂತರ ತಮ್ಮ ವಿದ್ಯಾರ್ಥಿಗಳಿಗೆ 3-4 ಗಂಟೆಗಳ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ದಿನವಿಡೀ ಅವರು ಉತ್ಸಾಹಿತರಾಗಿ, ಎನರ್ಜೆಟಿಕ್ ಆಗಿರುತ್ತಾರೆ. ಭಾಸ್ಕರ್ ಸದಾ ಗಮನದಲ್ಲಿಡುವ ಒಂದು ವಿಷಯವೆಂದರೆ, ತಮ್ಮ ಮನೆಯ ನೀಟಾದ ಒಂದು ಕೋಣೆಯಲ್ಲಿ ಕುಳಿತು, ಸರಿಯಾಗಿ ಇಳಿಬಿಡಲಾದ ಪರದೆ ಇದೆ ತಾನೆ, ವಿದ್ಯಾರ್ಥಿಗಳ ಗಮನ ಅನಗತ್ಯವಾಗಿ ಅತ್ತಿತ್ತ ಹೋಗುತ್ತಿಲ್ಲ ತಾನೇ ಎಂದು ನೋಡಿಕೊಳ್ಳುತ್ತಾರೆ. ಆ ಸಮಯದಲ್ಲಿ ಕುಟುಂಬದ ಇತರ ಸದಸ್ಯರು ಇವರ ಕೋಣೆಗೆ ಹೋಗುವುದಿಲ್ಲ.
ತುಸು ಎಚ್ಚರಿಕೆ ವಹಿಸಿ
ನೀವು ಸಹ ವರ್ಕ್ ಫ್ರಮ್ ಹೋಮ್ ಕೆಲಸದವರಾಗಿದ್ದರೆ, ಕೆಲವೊಂದು ವಿಷಯಗಳ ಕಡೆ ಎಚ್ಚರ ವಹಿಸಲೇಬೇಕು. ಕೆಲವು ಜಾಗೃತಾ ಕ್ರಮ ಕೈಗೊಳ್ಳಬೇಕು. ಏಕೆಂದರೆ ನೀವು ಆನ್‌ಲೈನ್‌ನಲ್ಲಿ ಇತರರಿಗೆ ಸ್ಪಷ್ಟ ಕಾಣಿಸುವುದರಿಂದ, ನೀವು ನೀಟಾಗಿ ತಲೆ ಬಾಚಿರಬೇಕು. ನೀವು ನೀಟಾದ ಡ್ರೆಸ್ ಧರಿಸಿ, ಲೈಟ್ ಮೇಕಪ್‌ನೊಡನೆ ಪ್ರೆಸೆಂಟೆಬಲ್ ಆಗಿರಬೇಕು. ನೀವು ಗಂಡಸರಾಗಿದ್ದರೆ ಮುಖದಲ್ಲಿ ಗಡ್ಡ ಇಲ್ಲದಂತೆ ನೀಟಾಗಿ ಶೇವ್ ಆಗಿರಬೇಕು. ಹೆಂಗಸರಾಗಿದ್ದರೆ ಲೈಟ್ ಮೇಕಪ್ ಖಂಡಿತಾ ಅಗತ್ಯ. ಆಗ ನೀವು ಇತರರಿಗೆ ಆಕರ್ಷಕವಾಗಿ ಕಾಣಿಸುವಿರಿ. ಆಗ ನಿಮ್ಮ ಮಾತುಗಳಿಗೆ ಹೆಚ್ಚಿನ ತೂಕ ಬರುತ್ತದೆ, ಇಲ್ಲದಿದ್ದರೆ ಗೂಶ್ಲು ಗಂಗಮ್ಮ ಎನಿಸುವಿರಿ.
ಇತ್ತೀಚೆಗೆ ಒಂದು ಪ್ರಸಿದ್ಧ ಖಾಸಗಿ ಟಿವಿ ವಾಹಿನಿಯ ಖ್ಯಾತ ನ್ಯೂಸ್ ಆ್ಯಂಕರ್ ವರ್ಕ್ ಫ್ರಮ್ ಹೋಮ್ ನಿರ್ವಹಿಸುತ್ತಲೇ, ತನ್ನ ಮನೆಯ ಕೆಳಗೆ ನಿಂತುಕೊಂಡೇ ಕ್ಯಾಮೆರಾ ಎದುರು ತಮ್ಮ ನ್ಯೂಸ್ ವರದಿ ಸಲ್ಲಿಸುತ್ತಿದ್ದರು. ಕ್ಯಾಮೆರಾದಲ್ಲಿ ಕೇವಲ ಅವರ ಮುಖ, ಎದೆಯ ಭಾಗ ಮಾತ್ರ ತೋರಿಸಬೇಕಾಗಿ ಬಂದಾಗ, ನೀಟಾದ ಪ್ರೆಸ್ಡ್ ಶರ್ಟ್ ಧರಿಸಿದ್ದರಿಂದ ಸರಿಹೋಯ್ತು. ಆದರೆ ಕ್ಯಾಮೆರಾಮನ್ ಯಾವುದೋ ಗುಂಗಿನಲ್ಲಿ ಅವರನ್ನು ಪೂರ್ತಿಯಾಗಿ ತೋರಿಸುವಂತಾದಾಗ ಆಭಾಸವಾಯ್ತು! ಕೇವಲ ಬರ್ಮುಡಾ ಮಾತ್ರ ಧರಿಸಿ, ಚಪ್ಪಲಿಯೂ ಇಲ್ಲದೆ ಬರಿಗಾಲಲ್ಲಿ ನಿಂತಿದ್ದರು!
ಅವರ ಚಾನೆಲ್‌ನಲ್ಲಿ ಅವರ ಮೇಲ್ಭಾಗ ಮಾತ್ರ ಕಾಣುವಂತೆ ಸಹೋದ್ಯೋಗಿ ಎಡಿಟ್ ಮಾಡಿಕೊಂಡ. ಆದರೆ ಇವರ ಪಕ್ಕದ ಮನೆಯ ಕಿಡಿಗೇಡಿ, ಬೇಕೆಂದೇ ಆ ಸಮಯದಲ್ಲಿ ಪೂರ್ತಿ ವಿಡಿಯೋ ಶೂಟ್ ಮಾಡಿ FBಗೆ ಹಂಚಿಕೊಂಡಾಗ ಎ್ಲಲ್ಲೆಡೆ ನಗೆಪಾಟಲಿಗೆ ಈಡಾಗಬೇಕಾಯಿತು.
ಅಸಲಿಗೆ, ಯಾವಾಗ ಅವರು ಆಫೀಸ್ ಕ್ಯಾಮೆರಾಗೆ ಪೋಸ್ ನೀಡುತ್ತಾ, ಅರ್ಧ ಭಾಗ ಮನೆ ಕಡೆ ತಿರುಗಿ, ಅರ್ಧ ಭಾಗ ಟಿವಿಯಲ್ಲಿ ಕಾಣುವಂತೆ ನ್ಯೂಸ್ ವರದಿ ನೀಡುತ್ತಿದ್ದಾಗ, ಅದೇ ಸಮಯದಲ್ಲಿ ಇವರ ನೆರೆಮನೆಯ ಒಬ್ಬ ಆಸಾಮಿ ಮಹಡಿ ಹತ್ತಿದನು ಈ ಎಲ್ಲಾ ಸೂಕ್ಷ್ಮ ಗಮನಿಸಿ, ಅಲ್ಲಿಂದಲೇ ಮೊಬೈಲ್‌ನಲ್ಲಿ ವಿಡಿಯೋ ಶೂಟ್ ಮಾಡಿಬಿಟ್ಟಿದ್ದ. ಇತ್ತ ಇವರು ಚಾನೆಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾಗೆ, ಅತ್ತ ಇವರ ಫುಲ್ ವಿಡಿಯೋ ಫೇಸ್‌ಬುಕ್‌ನಲ್ಲಿ ರಾರಾಜಿಸುತ್ತಿತ್ತು! ಜನ ಟಿವಿ, ಫೇಸ್‌ಬುಕ್ ಎರಡನ್ನೂ ಗಮನಿಸಿ ಗಹಗಹಿಸಿ ನಗುತ್ತಾ, ಅವರ ಬರ್ಮುಡಾ, ಬರಿಗಾಲಿನ ಬಗ್ಗೆ ಲೇಡಿಯ ಕಾಮೆಂಟ್ಸ್ ಹಾಕುತ್ತಿದ್ದರು. ಇದನ್ನು ಗಮನಿಸಿ ಅವರಿಗೆ ಆಫೀಸ್‌ನಲ್ಲಿ ಚೆನ್ನಾಗಿ ಛೀಮಾರಿ ಹಾಕಲಾಯಿತು.
ವರ್ಕ್ ಫ್ರಮ್ ಹೋಮ್ ನ ಅಡ್ಡಿಗಳು
ಅನೇಕ ಉದ್ಯೋಗಸ್ಥ ವನಿತೆಯರಿಗೆ ಕೊರೋನಾ ಕಾಟದ ಈ ಸೀಸನ್ ಹಲವು ಬಗೆಯ ತೊಂದರೆಗಳನ್ನು ಒಡ್ಡಿದೆ. ಈ ಹೆಂಗಸರು ಒಂದೇ ಸಲ ಹಲವು ಕೆಲಸಗಳನ್ನು ಮಾಡಬೇಕಾಗಿದೆ. ಈ ಸಂದರ್ಭದಲ್ಲಿ ಮನೆಗೆಲಸದವಳು ಬರುವುದೇ ಇಲ್ಲ ಎಂಬುದನ್ನು ಮೊದಲು ಗಮನಿಸಿ. ಹೀಗಾಗಿ ಗುಡಿಸುವ, ಸಾರಿಸುವ, ಪಾತ್ರೆ, ಬಟ್ಟೆ ಎಂದಿನ ಆಫೀಸ್ ಕೆಲಸ, ಅಡುಗೆ…. ಹೀಗೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ದೊಡ್ಡ ಹುದ್ದೆಯ ಮೇಡಂ ಮನೆಯ ಸಣ್ಣಪುಟ್ಟ ಕೆಲಸ ನಿರ್ವಹಿಸಲೇ ಬೇಕಾಗುತ್ತದೆ. ಮಧ್ಯಮ ವರ್ಗದ ಉದ್ಯೋಗಸ್ಥ ವನಿತೆಯರ ಪಾಡಂತೂ ಇನ್ನೂ ಕಷ್ಟಕರ. ಮೇಲಿನ ಎಲ್ಲಾ ಮನೆಗೆಲಸ ನಿರ್ವಹಿಸುತ್ತಾ ಮನೆಮಂದಿಗೆ ಬೇಕಾದ್ದನ್ನು ಸಪ್ಲೈ ಮಾಡಿಕೊಂಡು ವರ್ಕ್ ಫ್ರಮ್ ಹೋಮ್ ನಿಭಾಯಿಸುವುದು ಭಗೀರಥ ಪ್ರಯತ್ನವೇ ಆಗಿದೆ.
ಇದೀಗ ಮಕ್ಕಳ ಆನ್ ಲೈನ್ ಕ್ಲಾಸ್‌ಗಳೂ ನಡೆಯುತ್ತಿದ್ದು ಹೊಸ ಜವಾಬ್ದಾರಿ ಹೆಗಲಿಗೇರಿದೆ. ಇಂಥ ಸಂದರ್ಭದಲ್ಲಿ ಮನೆ ಮಂದಿ ಎಲ್ಲರೂ ಲ್ಯಾಪ್‌ಟಾಪ್ ನನಗೆ ತನಗೆ ಎಂದು ಕಿತ್ತಾಡುವಂತಾಗಿದೆ. ಒಂದು ಮನೆಗೆ ಎರಡಕ್ಕಿಂತ ಹೆಚ್ಚಿಗೆ ಇರಲು ಸಾಧ್ಯವೇ? ಗಂಡ, ಮಡದಿ, ಮಕ್ಕಳು ಎಲ್ಲರಿಗೂ ಏಕಕಾಲಕ್ಕೆ ಕಂಪ್ಯೂಟರ್ ಬೇಕು ಎಂದಾಗಿದೆ. ಪತಿ ಪತ್ನಿ ಇಬ್ಬರೂ ವರ್ಕ್ ಫ್ರಮ್ ಹೋಮ್
ಆದರೆ ಇದರಿಂದ ಅವರ ಕೆಲಸ ಇನ್ನಷ್ಟು ಹೆಚ್ಚು ಪ್ರಭಾವಿತಗೊಳ್ಳುತ್ತದೆ.
ಎಷ್ಟೋ ಸಲ ಸಕಾಲಕ್ಕೆ ಆನ್ ಲೈನ್‌ನಲ್ಲಿ ಕಾಣಿಸದಿರಲು, ಆಫೀಸ್‌ನವರಿಗೆ ಹಲವು ತಾಂತ್ರಿಕ ನೆಪಗಳನ್ನು ಹೇಳಬೇಕಿದೆ. ಹೆಂಗಸರು ಮನೆಯಲ್ಲೇ ಇದ್ದು ಆಫೀಸ್ ನಿರ್ವಹಿಸುತ್ತಿದ್ದರೂ ಮನೆಮಂದಿಗೆ ಏನಾದರೂ ಹೊಸ ಹೊಸ ಬಗೆಯ ರುಚಿಕರ ತಿನಿಸು ಬೇಕೆಂದು ಬಯಸುತ್ತಾರೆ. ಹೀಗಾಗಿ ಅವಳು ಎರಡೂ ಕಡೆಯಿಂದ ಕಷ್ಟಪಡಬೇಕು. ಟೆನ್ಶನ್ ತಲೆ ಕೆಡಿಸುತ್ತದೆ. ಆಫೀಸ್ ಮತ್ತು ಮನೆಗೆಲಸಗಳನ್ನು ಒಟ್ಟೊಟ್ಟಿಗೆ ಸಂಭಾಳಿಸುವುದು ಪರಮ ಹಿಂಸೆ ಎನಿಸುತ್ತದೆ.
ಕೊರೋನಾ ದೆಸೆಯಿಂದಾಗಿ ಉದ್ಯೋಗಸ್ಥ ವನಿತೆಯರು ಈಗ ಮನೆಗಳಲ್ಲಿ ಆಫೀಸ್ ಕೆಲಸವನ್ನು ಯಶಸ್ವಿಯಾಗಿ ಪೂರೈಸುವುದಲ್ಲದೆ, ಅಡುಗೆಯವಳು, ಕಸಮುಸುರೆ, ಬಟ್ಟೆ ಒಗೆತ ಎಲ್ಲವನ್ನೂ ಆಟೋಮೆಟಿಕಲಿ ನಿಭಾಯಿಸಬೇಕಾಗುತ್ತದೆ. ಹ್ಞಾಂ, ಅವಿವಾಹಿತ ಯುವತಿಯರು ಈ ನಿಟ್ಟಿನಲ್ಲಿ ತುಸು ನಿರಾಳ ಅಥವಾ ಒಬ್ಬಂಟಿ ಹಾಸ್ಟೆಲ್ ವಾಸಿಗಳಾಗಿದ್ದರೂ ಬಚಾವು. ಅವಿವಾಹಿತೆಯರು ಹೆತ್ತವರ ಜೊತೆ ವಾಸಿಸುತ್ತಿದ್ದು, ಅಮ್ಮ ಉಳಿದ ಮನೆಗೆಲಸ ನೋಡಿಕೊಂಡರೆ ಇವರು ಆಫೀಸ್ ಕೆಲಸ ಮುಗಿಸಿ ನಂತರ ಅಮ್ಮನಿಗೆ ನೆರವಾಗಬಹುದು. ಇಂಥ ಕಡೆ ಮಗಳ ಕೆರಿಯರ್ ಹಾಳಾಗದಿರಲೆಂದು ಅಮ್ಮಂದಿರು ಹೆಚ್ಚಾಗಿ ಮನೆಗೆಲಸದ ಕಾಳಜಿ ವಹಿಸುವುದರಿಂದ ಇವರುಗಳಿಗೆ ತುಸು ನಿರಾಳ.
ಅದೇ ತರಹ ಮಹಾನಗರಗಳಲ್ಲಿ ಸಿಂಗಲ್ ರೂಮಿನ ಮನೆಯಲ್ಲಿರುವ ಒಬ್ಬಂಟಿ ಹೆಂಗಸರು, ಆಫೀಸ್ ಇಲ್ಲದ ಹೊತ್ತಿನಲ್ಲಿ ಮನೆಯ ಕೆಲಸಗಳನ್ನು ಬೇಗ ಬೇಗ ಪೂರೈಸಿಕೊಳ್ಳಬೇಕಾಗಿರುತ್ತದೆ. ಆದರೆ ವಿವಾಹಿತ, ಅತ್ತೆಮನೆಯಲ್ಲಿರುವ ಉದ್ಯೋಗಸ್ಥ ವನಿತೆಯರಿಗೆ ಈ ನಿಟ್ಟಿನಲ್ಲಿ ಟೆನ್ಶನ್ ಹೆಚ್ಚು. ಸಾಕಪ್ಪ ಈ ವರ್ಕ್ ಫ್ರಮ್ ಹೋಮ್ ಎಂದು ಗೊಣಗುತ್ತಲೇ ಎರಡೂ ಕೆಲಸ ನಿಭಾಯಿಸಬೇಕು. ಬೇಗ ಆಫೀಸಿಗೆ ಹೋಗುವಂತಾದರೆ ಸಾಕು ಎನಿಸಿಬಿಡುತ್ತದೆ.
ಎರಡೂ ಕಡೆ ಬ್ಯಾಲೆನ್ಸಿಂಗ್
ಹೀಗೆ ಮನೆ ಮತ್ತು ವರ್ಕ್ ಫ್ರಮ್ ಹೋಮ್ ಜವಾಬ್ದಾರಿಗಳನ್ನು ಏಕಕಾಲಕ್ಕೆ ಯಶಸ್ವಿಯಾಗಿ ನಿಭಾಯಿಸಲು, ಎರಡೂ ಕಡೆ ಬ್ಯಾಲೆನ್ಸ್ ಮಾಡಿಕೊಳ್ಳಬೇಕಾದುದು ಅನಿವಾರ್ಯ. ಇಲ್ಲದಿದ್ದರೆ ಡಬ್ಬಲ್ ಟೆನ್ಶನ್ ನಿಮ್ಮ ಆರೋಗ್ಯ ಹದಗೆಡಿಸೀತು. ಇದಕ್ಕಾಗಿ ಈ ಸಲಹೆ ಅನುಸರಿಸಿ.
ನೀವು ಯಾವುದೇ ಪೋಸ್ಟ್ ಏನೇ ಕೆಲಸ ಮಾಡುತ್ತಿರಿ, ಆಫೀಸ್ ಕೆಲಸ ಸುಸೂತ್ರವಾಗಿ ಜರುಗಲು ಒಂದು ನಿಯಮಿತ ಶೆಡ್ಯೂಲ್‌ಮಾಡಿಕೊಳ್ಳಿ. ಈ ರೀತಿ ಪೂರ್ವ ತಯಾರಿ, ಪರ್ಫೆಕ್ಟ್ ಶೆಡ್ಯೂಲ್ ಇದ್ದರೆ ನಿಮ್ಮ ಮನೆ ಕಛೇರಿ ಕೆಲಸ ಎರಡೂ ಸಲೀಸು!
ನಿಮ್ಮ ಕೆಲಸ ಮಾಡುವ ಆದ್ಯತೆಯ ಅನುಸಾರ ಮನೆ ಕಛೇರಿ ಕೆಲಸದ ಒಂದು ಪಟ್ಟಿ ಮಾಡಿ. ಈ ಪಟ್ಟಿ ಪ್ರಕಾರ ಎರಡೂ ಕಡೆ ನೀವು ನಿಮ್ಮ ಕೆಲಸಗಳನ್ನು ಯಶಸ್ವಿಯಾಗಿ ನಿಭಾಯಿಸಬಹುದು. ಸರಿಯಾಗಿ ಫೋಕಸ್ ಮಾಡುತ್ತಾ ಎರಡೂ ಕಡೆ ನಿಮ್ಮ ಕೆಲಸ ಪೂರೈಸಿಕೊಳ್ಳಬಹುದು. ಸಂಜೆ ಹೊತ್ತಿಗೆ ನಿಮ್ಮ ಇಡೀ ದಿನದ ಕೆಲಸಗಳ ಬಗ್ಗೆ ಒಮ್ಮೆ ಪರಾಮರ್ಶೆ ನಡೆಸಿದರೆ, ಮಾರನೇ ದಿನದ ಕೆಲಸ ಕಾರ್ಯಗಳ ಲೋಪ ದೋಷಗಳು ಎಷ್ಟೋ ತಗ್ಗುತ್ತವೆ.
ಮನೆಯಲ್ಲಿ ಕೈಗೂಸಿದ್ದು ನೀವು ವಿಭಕ್ತ ಕುಟುಂಬದವರಾಗಿದ್ದರೆ, ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟ ತಿಳಿಸಿರಿ. ಇದರಿಂದ ಕಛೇರಿ ಕೆಲಸ ತುಸು ತಡವಾದಾಗ, ನೀವು ಹೆಚ್ಚಿಗೆ ವಿವರಣೆ ನೀಡಬೇಕಾದ ಅಗತ್ಯವಿಲ್ಲ. ಅವರುಗಳು ನಿಮ್ಮ ಕೆಲಸಕ್ಕೆ ಖಂಡಿತಾ ಸಹಕರಿಸುವರು.
ನೀವು ಅವಿಭಕ್ತ ಕುಟುಂಬದ ಸೊಸೆಯಾಗಿದ್ದರೆ, ಕಛೇರಿ ಕೆಲಸ ಶುರುವಾಗುವುದಕ್ಕೆ ಮೊದಲೇ ಗರಿಷ್ಠ ಎಷ್ಟು ಸಾಧ್ಯವೋ ಅಷ್ಟು ಮನೆಗೆಲಸ ಪೂರೈಸಿಬಿಡಿ. ಹಾಗಾದಾಗ, ನೀವು ಆಫೀಸ್ ಕೆಲಸ ನಿರ್ವಹಿಸುತ್ತಿರುವಾಗ, ನಿಮ್ಮ ಮಕ್ಕಳಿಗೆ ಬೇಕಾದ ಅನುಕೂಲವನ್ನು ಅವರು ಖಂಡಿತಾ ಮಾಡುತ್ತಾರೆ.
ನಿಮ್ಮ ಕೆಲಸದ ವೇಳಾಪಟ್ಟಿಯ ಆಧಾರದಿಂದ ಪತಿಯ ಜೊತೆ ಮನೆಗೆಲಸಗಳನ್ನು ಹೇಗೆ ಹಂಚಿಕೊಳ್ಳಬೇಕೆಂದರೆ, ಅವರು ಕೆಲಸ ಮಾಡುವಾಗ ನೀವು ಮಗು ಮನೆ ನೋಡಿಕೊಳ್ಳುವಂತೆ, ನೀವು ಕೆಲಸ ಮಾಡುವಾಗ ಅವರು ಮಗು ಮನೆ ನೋಡಿಕೊಳ್ಳುವಂತೆ ಇರಲಿ. ಒಬ್ಬರೇ ಎಲ್ಲಾ ಜವಾಬ್ದಾರಿ ಹೊತ್ತುಕೊಳ್ಳಬೇಡಿ.
ಮನೆಯಲ್ಲಿ ನಿಮ್ಮ ಅತ್ತೆ, ಓರಗಿತ್ತಿ, ನಾದಿನಿಯರಿದ್ದರೆ ಅಡುಗೆಮನೆ ಹಾಗೂ ಇತರ ಕೆಲಸಗಳ ಜವಾಬ್ದಾರಿ ಹಂಚಿಕೊಳ್ಳಿ. ಆದರೆ ಆದರ್ಶ ಸೊಸೆಯಾಗುವ ಧಾವಂತದಲ್ಲಿ ಎಲ್ಲಾ ತೊಂದರೆ ಒಬ್ಬರೇ ಹೊರಬೇಡಿ. ಎರಡೂ ಕಡೆ ಕೆಲಸ ನಿರ್ವಹಿಸುತ್ತಾ ನೀವು ಸೊರಗುವಂತಾಗಬಾರದು.
– ನಿರ್ಮಲಾ