ಮಿಕ್ಸ್ ಚರ್‌ ಕಡುಬು

Mixture-Gujhiya

ಸಾಮಗ್ರಿ : 200 ಗ್ರಾಂ ಮೈದಾ, 50 ಗ್ರಾಂ ರವೆ, ಅರ್ಧ ಕಪ್‌ ತುಪ್ಪ, 250 ಗ್ರಾಂ ಬಾಂಬೆ ಮಿಕ್ಸ್ ಚರ್‌ (ರೆಡಿಮೇಡ್‌), ರುಚಿಗೆ ತಕ್ಕಷ್ಟು ಉಪ್ಪು ಖಾರ, ಕರಿಯಲು ಎಣ್ಣೆ.

ವಿಧಾನ : ಜರಡಿಯಾಡಿದ ಮೈದಾ, ರವೆಗೆ ಉಪ್ಪು ಖಾರ, ತುಸು ನೀರು ಬೆರೆಸಿ ಮೃದು ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ನಂತರ ಇದಕ್ಕೆ ತುಪ್ಪ ಹಾಕಿ ನಾದಿರಿ.

ಇದನ್ನು ಅರ್ಧ ಗಂಟೆ ನೆನೆಯಲು ಬಿಟ್ಟು ಮತ್ತೆ ತುಪ್ಪದಿಂದ ನಾದಿಕೊಳ್ಳಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ, ಪುಟ್ಟ ಪೂರಿಗಳಾಗಿ ಲಟ್ಟಿಸಿ. ಇದನ್ನು ಕಡುಬು ಅಚ್ಚಿನಲ್ಲಿ ಹರಡಿಕೊಂಡು, ಇದಕ್ಕೆ ಬಾಂಬೆ ಮಿಕ್ಸ್ ಚರ್‌ನ ಹೂರಣ ತುಂಬಿಸಿ. ನೀಟಾಗಿ ಹೀಗೆ ಅಂಚು ಬಿಡದಂತೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ.

ತ್ರಿವರ್ಣದ ಕಟ್‌ಲೆಟ್ಸ್

ಸಾಮಗ್ರಿ :  2 ಕಪ್‌ ಬೇಯಿಸಿ ಮಸೆದ ಆಲೂ, 1-1 ಕಪ್‌ ಬೇಯಿಸಿ ಮಸೆದ ಹಸಿ ಬಟಾಣಿ ಪನೀರ್‌, 4-5 ಚಮಚ ಕಾರ್ನ್‌ಫ್ಲೋರ್‌ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂಮಸಾಲ, ಜೀರಿಗೆ ಪುಡಿ, ಇಂಗು, ಕರಿಯಲು ಎಣ್ಣೆ, 2 ಚಿಟಕಿ ಅರಿಶಿನ.

ವಿಧಾನ : ಮಸೆದ ಪನೀರ್‌ಗೆ ತುಸು ಉಪ್ಪು, ಅರಿಶಿನ ಹಾಕಿ 4-5 ಸಣ್ಣ ಉಂಡೆಗಳಾಗಿಸಿ. ಸಣ್ಣ ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಇಂಗು, ಹಸಿಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಆಮೇಲೆ ಮಸೆದ ಬಟಾಣಿ, ಉಳಿದ ಮಸಾಲೆ ಹಾಕಿ ಕೆದಕಬೇಕು. ಇದನ್ನು ಕೆಳಗಿಳಿಸಿ ಆರಿದ ಮೇಲೆ 4-5 ಸಣ್ಣ ಉಂಡೆ ಮಾಡಿಡಿ. ಅದೇ ತರಹ ಮಸೆದ ಆಲೂಗೆ ಕಾರ್ನ್‌ಫ್ಲೋರ್‌, ಉಪ್ಪು, ಖಾರ, ಸೇರಿಸಿ 4-5 ಉಂಡೆ ಮಾಡಿಡಿ. ಈಗ ಬಟಾಣಿ ಉಂಡೆಯನ್ನು ಜಿಡ್ಡು ಸವರಿದ ಪ್ಲಾಸ್ಟಿಕ್‌ ಶೀಟ್‌ ಮೇಲೆ ತಟ್ಟಿಕೊಳ್ಳಿ. ಇದರ ಮಧ್ಯೆ ಪನೀರ್‌ ಉಂಡೆ ಇರಿಸಿ, ಅದನ್ನು ಕ್ಲೋಸ್‌ ಮಾಡಿ. ಇದೇ ತರಹ ಮಸೆದ ಆಲೂ ತಟ್ಟಿಕೊಂಡು, ಅದರೊಳಗೆ ಬಟಾಣಿ ಉಂಡೆ ಇರಿಸಿ, ಕ್ಲೋಸ್‌ ಮಾಡಿ. ಕಟ್‌ಲೆಟ್‌ ಆಕಾರದಲ್ಲಿ ತಟ್ಟಿಕೊಳ್ಳಿ. ಬೋಂಡ ಹಿಟ್ಟಿನಂತೆ ಕಡಲೆಹಿಟ್ಟಿಗೆ ಉಪ್ಪು, ನೀರು ಹಾಕಿ ಕಲಸಿ, ಅದರಲ್ಲಿ ಈ ಕಟ್‌ಲೆಟ್‌ ಅದ್ದಿ, ಹೊಂಬಣ್ಣ ಬರುವಂತೆ ಕಾದ ಎಣ್ಣೆಯಲ್ಲಿ ಕರಿಯಿರಿ. ಅದನ್ನು 4 ತುಂಡುಗಳಾಗಿಸಿ, ಒಳಗಿನ ತ್ರಿವರ್ಣ ಕಾಣುವಂತೆ ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಮಸಾಲಾ ಪನೀರ್‌ ಟಿಕ್ಕಾ

Paneer-Tikka-Masala

ಸಾಮಗ್ರಿ :  2 ಕಪ್‌ ತ್ರಿಕೋನಾಕಾರವಾಗಿ ಕತ್ತರಿಸಿದ ಪನೀರ್‌, ಅದೇ ರೀತಿ ಹೆಚ್ಚಿದ ಅರ್ಧರ್ಧ ಕಪ್‌ ಕೆಂಪು ಹಸಿರು ಕ್ಯಾಪ್ಸಿಕಂ, ಅರ್ಧ ಕಪ್‌ ಹೆಚ್ಚಿದ ಈರುಳ್ಳಿ, 1-1 ಸಣ್ಣ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1 ಕಪ್‌ ಗಟ್ಟಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಧನಿಯಾಪುಡಿ, ಚಾಟ್‌ ಮಸಾಲ, ನಿಂಬೆರಸ, 4 ಚಮಚ ತುಪ್ಪ, ತುಸು ಎಣ್ಣೆ.

ವಿಧಾನ : ಒಂದು ದೊಡ್ಡ ಬಟ್ಟಲಿಗೆ ಕಡೆದ ಮೊಸರು ಹಾಕಿ, ಉಪ್ಪು, ಉಳಿದ ಮಸಾಲೆ ಬೆರೆಸಿರಿ. ನಂತರ ಇದಕ್ಕೆ ಪನೀರ್‌, 2 ಬಗೆಯ ಕ್ಯಾಪ್ಸಿಕಂ ತುಂಡು ಸೇರಿಸಿ. ಇದನ್ನು ಕೂಲ್ ‌ಮಾಡಲು ಈ ಮಿಶ್ರಣವನ್ನು 4-5 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ. ನಂತರ ಹೊರತೆಗೆದು ಮಾಮೂಲಿ ಆಗಲು ಬಿಡಿ. ಈಗ ತವಾ ಮೇಲೆ ತುಸು ತುಪ್ಪ, ಎಣ್ಣೆ ಬಿಟ್ಟು ಈ ಮಿಶ್ರಣ ಹಾಕಿ 4-5 ನಿಮಿಷ ಬಾಡಿಸಿ, ಕೆಳಗಿಳಿಸಿ, ನಿಂಬೆರಸ ಹಿಂಡಿಕೊಂಡು ಖಾರದ ಚಟ್ನಿ ಜೊತೆ ಸ್ಟಾರ್ಟರ್‌ ಆಗಿ ಸರ್ವ್ ‌ಮಾಡಿ.

ಬೇಕ್ಡ್ ಟೋಫು ಪ್ಯಾಕೆಟ್

Baked-Tofu-Potli

ಸಾಮಗ್ರಿ :  1-1 ಕಪ್‌ ಮಸೆದ ಟೋಫು (ರೆಡಿಮೇಡ್‌ ಲಭ್ಯ), ಮೈದಾ, 2 ಚಮಚ ಹುರಿದು ತರಿಯಾಗಿ ಪುಡಿ ಮಾಡಿದ ಕಡಲೆಬೀಜ, 1-1 ಚಮಚ ಶುಂಠಿ-ಬೆಳ್ಳುಳ್ಳಿ, ಹಸಿ ಮೆಣಸಿನ ಪೇಸ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ಜೀರಿಗೆ ಪುಡಿ, ಧನಿಯಾ ಪುಡಿ, ಇಂಗು, ಅರ್ಧ ಸೌಟು ಎಣ್ಣೆ, ತುಪ್ಪ.

ವಿಧಾನ : ಮೈದಾಗೆ ಚಿಟಕಿ ಉಪ್ಪು, ನೀರು, ತುಸು ಎಣ್ಣೆ ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಪೂರಿ ಹಿಟ್ಟಿನ ಹದಕ್ಕೆ ಬಂದಾಗ, ತುಪ್ಪ ಬೆರೆಸಿ ನಾದಿಕೊಂಡು ಅರ್ಧ ಗಂಟೆ ನೆನೆಯಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಇಂಗು, ಜೀರಿಗೆ, 3 ಬಗೆಯ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಮಸೆದ ಟೋಫು, ಉಳಿದೆಲ್ಲ ಮಸಾಲೆ, ಉಪ್ಪು ಹಾಕಿ ಹದನಾಗಿ ಬಾಡಿಸಿ. ಇದನ್ನು ಕೆಳಗಿಳಿಸಿ ಆರಲು ಬಿಡಿ. ನೆನೆದ ಹಿಟ್ಟಿಗೆ ಮತ್ತೆ ತುಪ್ಪ ಹಾಕಿ ನಾದಿರಿ. ಇದರಿಂದ ಸಣ್ಣ ಉಂಡೆ ಮಾಡಿ ಪುಟ್ಟ ಪೂರಿ ಲಟ್ಟಿಸಿ. ಇದರ ಮಧ್ಯೆ 2-3 ಚಮಚ ಟೋಫು ಮಿಶ್ರಣ ಇರಿಸಿ, ಚಿತ್ರದಲ್ಲಿರುವಂತೆ ಗಂಟಿನ ಪ್ಯಾಕೆಟ್‌ ತರಹ ಮಾಡಿ. ಇದರ ಮೇಲೆ ತುಸು ತುಪ್ಪ ಸವರಿ, 200 ಡಿಗ್ರಿ ಶಾಖದಲ್ಲಿ  ಪ್ರೀಹೀಟೆಡ್‌ ಓವನ್ನಿನಲ್ಲಿ 20 ನಿಮಿಷ ಬೇಕ್‌ ಮಾಡಿ. ಅಗತ್ಯ ಎನಿಸಿದರೆ ಇನ್ನೂ 4-5 ನಿಮಿಷ ಬೇಕ್‌ ಮಾಡಿ. ಈ ರೀತಿ ಬೇಕ್ಡ್ ಟೋಫು ಪ್ಯಾಕೆಟ್ಸ್ ನ್ನು ಟೊಮೇಟೊ ಚಟ್ನಿ ಜೊತೆ ಸವಿಯಲು ಕೊಡಿ.

ಪೀನಟ್‌ ಪಕೋಡಾ

Peanut-Pakodi

 

ಸಾಮಗ್ರಿ :  1 ಕಪ್‌ ದಪ್ಪ ಗಾತ್ರದ ಕಡಲೆಬೀಜ, ಅರ್ಧ ಕಪ್‌ ಕಡಲೆಹಿಟ್ಟು, 1-1 ಚಮಚ ಹೆಚ್ಚಿದ ಶುಂಠಿ, ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಅಮ್ಚೂರ್‌ಪುಡಿ, ಕರಿಯಲು ಎಣ್ಣೆ.

ವಿಧಾನ : ಕಡಲೆಬೀಜ, ಎಣ್ಣೆ ಹೊರತುಪಡಿಸಿ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಳ್ಳಿ. ಇದನ್ನು ಬೋಂಡ ಹಿಟ್ಟಿನಂತೆ ತೆಳುವಾಗಿ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ದ್ವಿದಳವಾಗಿ ಬಿಡಿಸದ ಕಡಲೆಬೀಜವನ್ನು ಇದರಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಹಸಿರು ಚಟ್ನಿ ಜೊತೆ ಸವಿಯಿರಿ. ಬದಲಾವಣೆಗಾಗಿ ಇಡಿಯಾದ ಗೋಡಂಬಿ ಸಹ ಬಳಸಿರಿ!

ಬ್ರೆಡ್‌ ಬೋಂಡ

Bread-Ke-Bonde

ಸಾಮಗ್ರಿ :  7-8 ಬ್ರೆಡ್‌ ಸ್ಲೈಸ್‌, 1-2 ಆಲೂ ಬೇಯಿಸಿ ಮಸೆದಿಡಿ. 3-4 ಚಮಚ ಕಾರ್ನ್‌ಫ್ಲೋರ್‌ ಕಡಲೆಹಿಟ್ಟು, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು ಪುದೀನಾ, 1-1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ ಮಸಾಲ, ಅಮ್ಚೂರ್‌ ಪುಡಿ, ದಾಳಿಂಬೆ ಬೀಜದ ಪುಡಿ (ರೆಡಿಮೇಡ್‌), ಕರಿಯಲು ಎಣ್ಣೆ.

ವಿಧಾನ : ಬ್ರೆಡ್‌ ಅಂಚು ಕತ್ತರಿಸಿ (ಅದನ್ನು ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿ ಬ್ರೆಡ್‌ ಕ್ರಂಬ್ಸ್ ಆಗಿ ಬಳಸಿ). ಉಳಿದವನ್ನು ತುಂಡರಿಸಿ ದೊಡ್ಡ ಬೇಸನ್ನಿಗೆ ಹಾಕಿಡಿ. 2 ಬಗೆ ಹಿಟ್ಟು, ಎಣ್ಣೆ ಬಿಟ್ಟು ಉಳಿದೆಲ್ಲ ಸಾಮಗ್ರಿ ಇದಕ್ಕೆ ಬೆರೆಸಿ ಪಕೋಡ ತರಹ ಕಲಸಿಡಿ. ಇದರಿಂದ ನಿಂಬೆ ಗಾತ್ರದ ಉಂಡೆ ಮಾಡಿ. ಉಳಿದ ಹಿಟ್ಟಿಗೆ ಉಪ್ಪು, ಖಾರ ಸೇರಿಸಿ ಬೋಂಡ ಹಿಟ್ಟಿನಂತೆ ತೆಳ್ಳಗೆ ಕಲಸಿ, ಅದರಲ್ಲಿ ಈ ಉಂಡೆಗಳನ್ನು ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಬಿಸಿಯಾಗಿ ಟೊಮೇಟೊ ಕೆಚಪ್‌, ಬಿಸಿ ಕಾಫಿ-ಟೀ ಜೊತೆ ಸವಿಯಲು ಕೊಡಿ.

ಈರುಳ್ಳಿ ಕಚೋರಿ

Pyaj-Kachori

ಕಣಕದ ಸಾಮಗ್ರಿ :  250 ಗ್ರಾಂ ಮೈದಾ, ಅರ್ಧ ಸೌಟು ತುಪ್ಪ, ತುಸು ಉಪ್ಪು, ಅರಿಶಿನ.ಹೂರಣದ ಸಾಮಗ್ರಿ 3-4 ಈರುಳ್ಳಿ, ಬೆಂದ ಆಲೂ, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಶುಂಠಿ, ಕೊ.ಸೊಪ್ಪು, ಪುದೀನಾ, ತುಪ್ಪದಲ್ಲಿ ಹುರಿದು ದಪ್ಪ ತರಿ ಮಾಡಿದ ಗೋಡಂಬಿ, ದ್ರಾಕ್ಷಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ದಪ್ಪ ತರಿ ಧನಿಯಾ, ಅಮ್ಚೂರ್‌ ಪುಡಿ, ಕರಿಯಲು ಎಣ್ಣೆ.

ವಿಧಾನ : ಕಣಕದ ಸಾಮಗ್ರಿಗೆ ನೀರು ಬೆರೆಸಿ ಮೃದು ಪೂರಿ ಹಿಟ್ಟಿನಂತೆ ಕಲಸಿಡಿ. ತುಪ್ಪ ಹಾಕಿ ನಾದಿ 1 ಗಂಟೆ ಕಾಲ ನೆನೆಯಲು ಬಿಡಿ. ಮಸೆದ ಆಲೂವಿಗೆ ಉಳಿದೆಲ್ಲ ಹೂರಣದ ಸಾಮಗ್ರಿ ಬೆರೆಸಿ ಮಿಶ್ರಣ ಕಲಸಿಡಿ. ನೆನೆದ ಹಿಟ್ಟನ್ನು ಮತ್ತೆ ತುಪ್ಪದಿಂದ ನಾದಿ, ಸಣ್ಣ ಉಂಡೆ ಮಾಡಿ ಪೂರಿ ಲಟ್ಟಿಸಿ. ಇದಕ್ಕೆ 2-3 ಚಮಚ ಹೂರಣ ತುಂಬಿಸಿ, ನೀಟಾಗಿ ಕ್ಲೋಸ್‌ ಮಾಡಿಬಿಡಿ. ಹೀಗೆ ಎಲ್ಲಾ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರವಂತೆ ಕರಿಯಿರಿ. ಇದನ್ನು ಹುಳಿಸಿಹಿ ಚಟ್ನಿ ಜೊತೆ ಸವಿಯಿರಿ.

ವೆಜ್ಜಿ ಅಪ್ಪೆ

ಸಾಮಗ್ರಿ :  1-1 ಕಪ್‌ ರವೆ ಹುಳಿ ಮೊಸರು, 1-2 ಚಮಚ ಹೆಚ್ಚಿದ ಈರುಳ್ಳಿ, ಟೊಮೇಟೊ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಫ್ರೂಟ್‌ ಸಾಲ್ಟ್, ಬೆಂದ ಬಟಾಣಿ.

ವಿಧಾನ : ರವೆ ಲಘು ಹುರಿದು ಮೇಲಿನ ಎಲ್ಲಾ ಸಾಮಗ್ರಿ ಜೊತೆ ಬೆರೆಸಿಕೊಳ್ಳಿ. ಅರ್ಧ ಗಂಟೆ ನೆನೆಯಲು ಬಿಟ್ಟು, ಪಡ್ಡು ತವಾಗೆ ಎಣ್ಣೆ ಸವರಿ, ಒಲೆಯ ಮೇಲಿರಿಸಿ, ಅದಕ್ಕೆ 2-2 ಚಮಚ ಮಿಶ್ರಣ ಹಾಕಿ, ಮುಚ್ಚಳ ಮುಚ್ಚಿರಿಸಿ, ಎರಡೂ ಕಡೆ ತಿರುವಿ ಹಾಕಿ ಬೇಯಿಸಿ. ಚಟ್ನಿ ಜೊತೆ ಬಿಸಿಯಾಗಿ ಸವಿಯಲು ಕೊಡಿ.

ಈರುಳ್ಳಿ ದೋಸೆ

ಸಾಮಗ್ರಿ :  1 ದೊಡ್ಡ ಕಪ್‌ ರವೆ, ಅರ್ಧ ಕಪ್‌ ಹುಳಿ ಮೊಸರು, ಸಣ್ಣಗೆ ಹೆಚ್ಚಿದ 3-4 ಈರುಳ್ಳಿ, ತುಸು ಹೆಚ್ಚಿದ ಕೆಂಪು ಹಸಿ ಮೆಣಸು, ರುಚಿಗೆ ಉಪ್ಪು, ಫ್ರೂಟ್‌ ಸಾಲ್ಟ್, ಎಣ್ಣೆ.

ವಿಧಾನ : ಈರುಳ್ಳಿ ಬಿಟ್ಟು ಉಳಿದ ಸಾಮಗ್ರಿ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ, ಅರ್ಧ ಗಂಟೆ ನೆನೆಯಲು ಬಿಡಿ. ನಂತರ ತವಾ ಮೇಲೆ ಎಣ್ಣೆ ಬಿಟ್ಟು, 1 ದೊಡ್ಡ ಸೌಟು ಹಿಟ್ಟು ಹರಡಿರಿ. ಇದರ ಮೇಿ

ಹೆಚ್ಚಿದ ಈರುಳ್ಳಿ ಹರಡಿ, ನೀಟಾಗಿ ಎರಡೂ ಬದಿ ಬೇಯಿಸಿ. ಬಿಸಿ ಇರುವಾಗಲೇ ಟೊಮೇಟೊ ಚಟ್ನಿ ಜೊತೆ ಸವಿಯಲು ಕೊಡಿ.

ರೈಸ್‌ ಲಾಲಿಪಾಪ್‌

Rice-Lolipop

ಸಾಮಗ್ರಿ :  2 ಕಪ್‌ ಅನ್ನ, 1 ಕಪ್‌ ಬೇಯಿಸಿ ಮಸೆದ ಆಲೂ, ಹೆಚ್ಚಿದ ಅರ್ಧ ಕ್ಯಾಪ್ಸಿಕಂ, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಟೊಮೇಟೊ, ಈರುಳ್ಳಿ, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಚಾಟ್‌ ಮಸಾಲ, ಅಮ್ಚೂರ್ ಪುಡಿ, ಸೋಂಪಿನ ಪುಡಿ, ಕರಿಯಲು ಎಣ್ಣೆ, ಐಸ್‌ಕ್ರೀಂ ಸ್ಟಿಕ್ಸ್.

ವಿಧಾನ : ಎಣ್ಣೆ ಬಿಟ್ಟು ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿಕೊಳ್ಳಿ. ತುಸು ಎಣ್ಣೆ ಬೆರೆಸುತ್ತಾ ಮಿಶ್ರಣ ಹದನಾಗುವಂತೆ ಮಾಡಿ. ಜಿಡ್ಡು ಸವರಿದ ಟ್ರೇಗೆ ಹಾಕಿ 1 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ ಹೊರತೆಗೆಯಿರಿ. ಮಾಮೂಲಾದ ಮೇಲೆ ಆಯತಾಕಾರದಲ್ಲಿ ಕತ್ತರಿಸಿ, ಐಸ್‌ಕ್ರೀಂ ಸ್ಟಿಕ್ಸ್ (ಚಿತ್ರ ನೋಡಿ) ಸಿಗಿಸಿ, ಕಾದ ಎಣ್ಣೆಯಲ್ಲಿ ಎರಡೂ ಬದಿ ಹೊರಳಿಸಿ ಕರಿಯಿರಿ. ಪುದೀನಾ ಟೊಮೇಟೊ ಚಟ್ನಿ ಜೊತೆ ಸವಿಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ