“ಯಾರೋ ಹಿರಿಯರು ಬಹಳ ಚೆನ್ನಾಗಿ ಹೇಳಿದ್ದಾರೆ, ಯಾವ ಸಂಬಂಧ ಕೂಡಿ ಬರಬೇಕು ಅಂತಿರುತ್ತೋ ಅದು ಆಗಿಯೇ ತೀರುತ್ತದೆ. ನಾವು ನಮ್ಮದೇ ಪ್ರಯತ್ನಕ್ಕೆ ಹಠಬಿದ್ದು ಏನೇನೋ ಮಾಡುತ್ತೇವೆ, ಆಗಬೇಕಾದ್ದು ಆಗಿಯೇ ತೀರುತ್ತದೆ……”
ರಮಣ ಮೂರ್ತಿಗಳ ಮಾತಿಗೆ ರಮಾಮಣಿ ಎಂದಿನಂತೆ ನಸುನಗುತ್ತಾ ತಲೆದೂಗಿದರು. ಅವರಿಬ್ಬರು ಸುಮಾರು 2 ತಿಂಗಳಿನಿಂದ ಅದೇ ಪಾರ್ಕಿನಲ್ಲಿ ಸಂಜೆ ಹೊತ್ತು ಭೇಟಿಯಾಗುತ್ತಾರೆ. ಹೀಗೆ ಲೋಕಾಭಿರಾಮದ ಮಾತುಗಳು ಗಟ್ಟಿ ಸ್ನೇಹಕ್ಕೆ ತಿರುಗಿದ್ದವು. ಒಂದು ದಿನ ಪರಸ್ಪರ ನೋಡದಿದ್ದರೂ ಇಬ್ಬರಿಗೂ ಏನೋ ಚಡಪಡಿಕೆ ತಪ್ಪುತ್ತಿರಲಿಲ್ಲ. ಈ ದಿನ ಸಹ ಎಂದಿನಂತೆ ಇಬ್ಬರೂ ನೋಡಿ ನಮಸ್ಕಾರ ವಿನಿಮಯ ಮಾಡಿಕೊಂಡು, ತಮ್ಮ ಎಂದಿನ ಕೊನೆ ಕಲ್ಲು ಬೆಂಚಿನ ಮೇಲೆ ಕುಳಿತು ಮಾತುಕಥೆಗೆ ತೊಡಗಿದ್ದರು.
“ಓ….. ಹಾಗಾದರೆ ಇವತ್ತು ಬೆಳಗ್ಗಿನಿಂದಲೇ ಎಲ್ಲಾ ಕೆಲಸಗಳೂ ಸುಸೂತ್ರವಾಗಿ ನಡೆಯುತ್ತಿವೆ ಅನ್ನಿ,” ರಮಾ ನಸುನಗುತ್ತಾ ಹೇಳಿದರು.
ಹೌದೆಂಬಂತೆ ತಲೆದೂಗಿದ ಮೂರ್ತಿ ಮಾಮೂಲಿ ಕೊರೋನಾ ಕುರಿತು ಮಾತನಾಡಿಕೊಂಡರು. ಈಗಂತೂ ಅದು ಭೇಟಿಯಾದವರು ಮೊದಲು ಮಾತನಾಡುವ ವಿಷಯವಾಗಿತ್ತು.
ರಮಣ ಮೂರ್ತಿ 60+ ದಾಟಿದ್ದರೆ, ರಮಾ ಅವರಿಗಿಂತ 7-8 ವರ್ಷ ಚಿಕ್ಕವರು. ಆದರೂ ಅವರೆಲ್ಲ ಮಾತುಗಳಿಗೆ ಪ್ರೋತ್ಸಾಹಕರಾಗಿ ಸಹನೆಯಿಂದ ಉತ್ತರಿಸುತ್ತಿದರು, ತಮ್ಮ ವಿಚಾರ ವ್ಯಕ್ತಪಡಿಸುತ್ತಿದ್ದರು. ರಮಣ ಮೂರ್ತಿ ಅವರಿಗೆ ತಾವು ತಮ್ಮ ಕುಟುಂಬದಿಂದ ಬಹಳ ನಿರಾಶೆಗೊಂಡಿರುವುದಾಗಿ 3-4 ಸಲ ಹೇಳಿ ಪೇಚಾಡಿಕೊಂಡಿದ್ದರು. ಎಲ್ಲರಿಗೂ ಅವರವರದೇ ಲೋಕ, ತಾವು ಹೇಳಿದ್ದೇ ಸರಿ ಎಂಬ ಧೋರಣೆ. ಹೀಗಾಗಿ ಇವರ ನಿಧಾನದ ಮಾತುಗಳಿಗೆ ಮನೆಯವರ ಬಳಿ ಪುರಸತ್ತಾಗಲಿ, ವ್ಯಯಧಾನವಾಗಲಿ ಇರಲಿಲ್ಲ.
ರಮಣ ಮೂರ್ತಿಗಳ ಸ್ವಭಾವವೇ ಅಂಥದ್ದು. ಹೇಳಿದ್ದನ್ನೇ ಹೇಳುತ್ತಾ ಇರುವ ದಾರ್ಶನಿಕ ಮನೋಭಾವದವರು. “ರಮಾ ನಿಮಗೆ ಗೊತ್ತೆ….” ಎಂದು ಶುರು ಮಾಡುತ್ತಿದ್ದರು. ಅವರು ಹೇಳಬಹುದಾದ ವಿಷಯ ಗೊತ್ತಿದ್ದರೂ ರಮಾ ಅದನ್ನೆಂದೂ ತೋರಿಸಿಕೊಳ್ಳುತ್ತಿರಲಿಲ್ಲ. ಅವರು ಎಂದಿನ ತಮ್ಮ ಲಹರಿಯಲ್ಲಿ ಮುಂದುವರಿಸುತ್ತಿದ್ದರು, “ಈ ಪ್ರಪಂಚದಲ್ಲಿ ಇರುವುದು ಎರಡೇ ಪುಣ್ಯಫಲ. ಒಂದು ನಾವು ಬಯಸಿದ್ದು ನಮಗೆ ಸಿಗದೇ ಇರುವುದು ಹಾಗೂ ಇನ್ನೊಂದು, ನಾವು ಬಯಸಿದ್ದು ಅಪರೂಪವಾಗಿ ಸಿಗುವಂಥದ್ದು.”
ಇದನ್ನು ಕೇಳಿ ರಮಾಮಣಿ ಎಂದಿನ ತಮ್ಮ ಮೃದು ಮಧುರ ಮಂದಹಾಸ ಬೀರಿದರೆ, ರಮಣ ಮೂರ್ತಿ ತಮ್ಮ ಮಾತನ್ನು ಮತ್ತಷ್ಟು ಸ್ಪಷ್ಟಡಿಸುವವರಂತೆ, “ಆ ಭಗಂತನಿಗೆ ಶರಣಾದರೆ ನಮಗೆ ಬೇಕಾದ ಮನಶ್ಶಾಂತಿ ದೊರಕುತ್ತದೆ. ಪರಮಾತ್ಮನಲ್ಲಿ ಮನಸ್ಸಿಟ್ಟು ತೀರ್ಥಯಾತ್ರೆಗಳನ್ನು ಮಾಡಿ, ದಾನದಕ್ಷಿಣೆಗಳ ಪುಣ್ಯ ಕಾರ್ಯ ಕೈಗೊಂಡರೆ, ಅಂಥ ಸುಖ ದೊರಕುತ್ತದೆ. ಇದಕ್ಕಿಂತ ಇನ್ನೇನು ಬೇಕು?” ಎನ್ನುತ್ತಿದ್ದರು.
“ಮತ್ತೊಂದು ವಿಷಯ ರಮಾ, ಈ ನಮ್ಮ ಜೀವನ ಅದು ಎಷ್ಟೇ ದೀರ್ಘವಾಗಿರಲಿ, ನಾಸ್ತಿಕರಾಗಿರುವುದರಿಂದ ದೇವರನ್ನು ಮರೆಯುವುದರಿಂದ ಅಷ್ಟೇ ಬೇಗ ಚಿಕ್ಕದಾಗಿಬಿಡುತ್ತದೆ.”
ಇದನ್ನೆಲ್ಲ ಕೇಳುತ್ತಾ ಒಳಗೆ ತಮ್ಮ ಅಭಿಪ್ರಾಯ ಏನೇ ಇರಲಿ, ನಗು ಬರುವಂತಾದರೂ ತೋರಿಸಿಕೊಳ್ಳದೆ, “ಅದು ಸರಿ ಮೂರ್ತಿಗಳೇ…. ನಿಮ್ಮ ಆಶ್ರಮ ಎಲ್ಲಿದೆ ಅಂತ ಹೇಳಿಬಿಡಿ. ಕೂಡಲೇ ಅಲ್ಲಿಗೆ ಬಂದು ದೀಕ್ಷೆ ತೆಗೆದುಕೊಳ್ಳುವೆ!” ಎನ್ನುವರು.
ಇದನ್ನು ಕೇಳಿ ಅವರು ತುಂಬಾ ಸೀರಿಯಸ್ ಹಾಗೂ ಅತಿ ಬೇಸರದ ಮೂಡ್‌ಗೆ ಹೋಗಿಬಿಡುತ್ತಿದ್ದರು. ತಮ್ಮ ಮನಸ್ಥಿತಿ ರಮಾಗೆ ತಿಳಿಯಬಾರದೆಂದು ಯಾವುದೋ ಒಂದಿಷ್ಟು ಹಳೆಯ ಘಟನೆ ನೆನಪಿಸಿಕೊಂಡು ಹೇಳುವರು. ಇಷ್ಟು ಕಾಲದ ಒಡನಾಟದಿಂದ ಇವರ ಮಧ್ಯೆ ಸೀಮಿತ ಸಲಿಗೆ ಬೆಳೆದಿತ್ತು. ಅದರಿಂದಾಗಿ ಅವರು, “ಗುರುಗಳೇ, ನಿಮಗೆ ಯಾವುದು ಇಷ್ಟವೋ ಹಾಗೆ ಮಾಡೋಣ. ಹಗಲನ್ನು ರಾತ್ರಿ ಅನ್ನಿ…. ಸರಿ, ರಾತ್ರಿಯನ್ನು ಹಗಲೆನ್ನಿ…. ಅದೂ ಸರಿ….”
ಇದಕ್ಕೆ ತರ್ಕಬದ್ಧವಾಗಿ ರಮಣ ಮೂರ್ತಿ ಏನು ಹೇಳಿಯಾರು?
“ಅಯ್ಯೋ… ಈ ತರಹ ಹೇಳಿದರೆ ನಾನು ಏನು ಹೇಳಲಿ?” ಅನ್ನುವರು. ರಮಾ ಅವರ ಮಾತಿಗೆ 2 ನಿಮಿಷ ಬಲವಂತವಾಗಿ ನಗು ಕಂಟ್ರೋಲ್ ಮಾಡುತ್ತಾ, “ಅಯ್ಯೋ ಬಿಡೀಪ್ಪಾ, ನಿಮ್ಮ ಹತ್ತಿರ ವಾದದಲ್ಲಿ ಯಾರು ಗೆಲ್ಲಲು ಸಾಧ್ಯ?” ಎಂದು ಸಂದರ್ಭವನ್ನು ತಿಳಿಯಾಗಿಸುತ್ತಿದ್ದರು. ಆಗ ಇಬ್ಬರೂ ದೊಡ್ಡ ಜೋಕ್ ಕಟ್ ಮಾಡಿದವರಂತೆ ಜೋರಾಗಿ ನಗುತ್ತಿದ್ದರು.
ಹೀಗೆ ರಮಣ ಮೂರ್ತಿ ಆಗಾಗ ಉಪದೇಶ ಕೊಡುತ್ತಲೇ ಇದ್ದರು. ಅವರು ಆಗಾಗ ಹೇಳುತ್ತಿದ್ದುದು ಎಂದರೆ, “ದೇವರು ಸದಾ ನನ್ನ ಮನದಲ್ಲಿ ಪ್ರೀತಿ ತುಂಬಿದ್ದಾನೆ. ಹಾಗಾಗಿ ನನಗೆ ದೈವಭಕ್ತಿ ಹೆಚ್ಚು. ನಾನು ಈಗಾಗಲೇ ಬಹಳ ಫಿಲಾಸಫಿ ತಿಳಿದುಕೊಂಡಿರುವುದರಿಂದ ನಿಮಗೆ ಈ ಕುರಿತು ಹೆಚ್ಚಿಗೆ ಸಲಹೆ ಕೊಡಲಾರೆ. ನಿಮಗಿಂತ ಹೆಚ್ಚಾಗಿ ನಾನೇ ಜೀವನದಲ್ಲಿ ತಪ್ಪು ಮಾಡಿರುವುದರಿಂದ, ಈ ಭಕ್ತಿ ಮಾರ್ಗದಲ್ಲಿ ಹೋದರೆ ಮಾತ್ರ ನನಗೆ ಮುಕ್ತಿ ಎಂದು ಗೊತ್ತಿದೆ.”
ಆಗ ರಮಾ ಸಹ ಗಂಭೀರವಾಗಿ ನಾಸ್ತಿಕ ಪ್ರತಿನಿಧಿಯಾಗಿ ಉತ್ತರಿಸುವರು, “ಮೂರ್ತಿ ಸಾರ್, 3 ವಿಷಯದ ಕುರಿತಾಗಿ ನಮ್ಮ ಭರವಸೆ ನಿಂತಿದೆ. ನಮ್ಮ ಸೀಮಿತ ವಿವೇಕ, ನಮ್ಮ ಮೇಲಿನ ಸಾಮಾಜಿಕ ಒತ್ತಡ ಹಾಗೂ ಆತ್ಮ ನಿಯಂತ್ರಣದ ಅಭ್ಯಾಸ.
“ಈಗ ಇದರಲ್ಲಿ ನಾನು ನನ್ನ ಪಾಲಿನ ಭರವಸೆಯ ವಿಷಯ ಆರಿಸಿಕೊಂಡಿದ್ದಾಗಿದೆ, ಅದರಿಂದ ಸಂತೋಷವಾಗಿಯೂ ಇದ್ದೇನೆ,” ರಮಾ ಈ ತರಹ ಉತ್ತರಿಸಿದಾಗ, ಕೇಳಿ ಅರ್ಥ ಮಾಡಿಕೊಂಡವರಿಗೆ ಆಕೆ ನಾಸ್ತಿಕರು ಎಂದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಆದರೆ ಮೂರ್ತಿಯವರಿಗೆ ಅದು ತಿಳಿಯುತ್ತಿರಲಿಲ್ಲ.
ಅವರ ಮಾತುಗಳನ್ನು ಮೊದ ಮೊದಲು ಕೇಳುತ್ತಿದ್ದಾಗ ರಮಾಗೆ ಅವರೇನೋ ಭಾರಿ ಸಂಸಾರ ತಾಪತ್ರಯದಿಂದ ಕುಗ್ಗಿ ಹೋಗಿರಬೇಕು, ಬಹಳ ಸಹಿಸಿ ಸಹಿಸಿ ಸಾಕಾಗಿ ಈಗ ಪೂರ್ಣ ವಿರಕ್ತರಾಗಿರಬೇಕು ಎಂದುಕೊಳ್ಳುತ್ತಿದ್ದರು.
ಅವರೇಕೆ ಸದಾ ಹೀಗೆ ತತ್ವಶಾಸ್ತ್ರಕ್ಕೆ ಮೊರೆಹೋಗುತ್ತಾರೆ ತಿಳಿಯೋಣ ಎಂದು ಓಪನ್ ಮೈಂಡೆಡ್ ಆಗಿ ತಮ್ಮ ಕಷ್ಟಸುಖ ಹಂಚಿಕೊಳ್ಳಲು ಹೇಳಿದರು. ನಾನೀಗ ಅರವತ್ತರ ಗಡಿ ಮುಟ್ಟಿದ್ದೇನೆ ಎಂದು ರಮಾ ಹೇಳಿದರೆ ನಾನಾಗಲೇ ಅರತ್ತೈದು ಎಂದು ಅವರು ನಗುತ್ತಿದ್ದರು.
“ನನ್ನ ಮಗ ಸೊಸೆ ಅಂತೂ ನಾನು ಮುದುಕಿಯಾದೆ ಎಂದು ರೇಗಿಸುತ್ತಿರುತ್ತಾರೆ,” ರಮಾ ನಗುತ್ತಾ ಹೇಳಿದರು.
“ಓ….. ಹಾಗೋ….” ಎನ್ನುತ್ತಾ ಮೂರ್ತಿ ಹಾರ್ದಿಕವಾಗಿ ನಗುವರು. ಅದರಲ್ಲಿ ಜೀವ ಇರುತ್ತಿರಲಿಲ್ಲ.
“ಅದಿರಲಿ, ಯಾರು ಯಾರು ಸೇರಿಕೊಂಡು ನಿಮ್ಮನ್ನು ಸದಾ ಹೀಗೆ ದುಃಖಿಗಳಾಗಿರುವಂತೆ ಮಾಡುತ್ತಾರೆ? ನೀವಂತೂ ಸದಾ ಬೇಜಾರಿನಲ್ಲಿ ಮುಳುಗಿ ಹೋಗಿರುತ್ತೀರಿ…..”
ರಮಾ ಆ ರೀತಿ ಆತ್ಮೀಯವಾಗಿ ಮಾತನಾಡಿಸುವಾಗ ಮೂರ್ತಿಗಳು ಇಲ್ಲವೆನ್ನಲಾಗದೆ ವೈಯಕ್ತಿಕ ವಿಷಯ ಹಂಚಿಕೊಳ್ಳಬೇಕಾಗುತ್ತಿತ್ತು. ಹಾಗಾಗಿ ತಾವು ರಿಟೈರ್ಡ್ ಸರ್ಕಾರಿ ಬಸ್ ಕಂಡಕ್ಟರ್ ಎಂದು ಹೇಳಿಕೊಂಡರು.
35ರಲ್ಲೇ ಪತ್ನಿಯನ್ನು ಕಳೆದುಕೊಂಡು ಅಂದಿನಿಂದ 5 ವರ್ಷದ ಮಗನನ್ನು ಒಬ್ಬಂಟಿಯಾಗಿ ತಾಯಿತಂದೆ ಆಗಿ ಸಲಹುತ್ತಿದ್ದರು. ಎಲೆ ಅಡಕೆ, ತಂಬಾಕು, ಸಿಗರೇಟ್, ಹೆಂಡ ಯಾವುದಕ್ಕೂ ದಾಸರಾಗದೆ ಹಾಗೇ ಉಳಿದುಬಿಟ್ಟಿದ್ದರು.
ಕಳೆದ ವರ್ಷವಷ್ಟೇ ಅವರ ಮಗನ ಮದುವೆ ಆಗಿತ್ತು. ಮಗ ಶೂ ಚಪ್ಪಲಿಯ ಅಂಗಡಿ ನಡೆಸುತ್ತಿದ್ದ, ಸೊಸೆ ಒಂದು ಚಿಕ್ಕ ಬಳೆ ಅಂಗಡಿ ನಡೆಸುತ್ತಿದ್ದಳು. ಇಬ್ಬರಿಗೂ ಅವರದೇ ಆದ ಲೋಕ. ಇವರು ತಮ್ಮ ಪಾಡಿಗೆ ತಾವು ನಿವೃತ್ತ ಜೀವನ ನಡೆಸುತ್ತಾ ರಾಮಕೃಷ್ಣ ಎಂದಿದ್ದು ಬಿಟ್ಟಿದ್ದರು. ಹೀಗಾಗಿ ಬೇಕಾದಷ್ಟು ವಿರಾಮವಿದ್ದುದರಿಂದ ಸಂಜೆ ಹೊತ್ತು ಹಾಯಾಗಿ ಸಮಯ ಕಳೆಯಲೆಂದು ಪಾರ್ಕಿಗೆ ಬರುತ್ತಿದ್ದರು.
“ಓ….. ಈಗ ನಿಮ್ಮನ್ನು ವಿಚಾರಿಸುವವರು ಯಾರೂ ಇಲ್ಲ ಎಂದು ಕೊರಗುತ್ತಿದ್ದೀರಿ. ಅರ್ಥವಾಯ್ತು ಬಿಡಿ,” ಎಂದರು ರಮಾ.
“ನೋಡಿದ್ರಾ…. ಈಗ ನಿಮಗೂ ನನ್ನ ಸ್ಥಿತಿ ಬಗ್ಗೆ ಗೊತ್ತಾಗಿ ಹೋಯಿತು. ಆಫ್ಚ್ರಾಲ್ ಕಂಡಕ್ಟರ್ ತಾನೇ ಎನಿಸಿರಬೇಕಲ್ಲವೇ?” ರಮಣ ಮೂರ್ತಿ ಮತ್ತೆ ಬೇಸರಗೊಂಡರು.
ಇದಕ್ಕೆ ರಮಾ ನಸುನಗುತ್ತಾ ಹೇಳಿದರು, “ಇದರಲ್ಲಿ ಸಂಕೋಚ ಪಡುವುದಕ್ಕೆ ಏನಿದೆ? ಯಾವ ವೃತ್ತಿಯೂ ಖಂಡಿತಾ ಕೀಳಲ್ಲ. ಇನ್ನೊಂದು ವಿಷಯ ಎಂದರೆ, ಪ್ರತಿಯೊಂದು ಸಣ್ಣಪುಟ್ಟ ಸಂಗತಿಗೂ ಸದಾ ಬೇಸರವನ್ನು ಗಂಟು ಹಾಕಿಕೊಳ್ಳಬೇಡಿ. ಅದು ಸದಾ ಸುಸ್ತು, ಸಂಕಟಕ್ಕೆ ದಾರಿ ಮಾಡುತ್ತದೆ. ಈ ಸುಸ್ತಿನಿಂದ ಮುಂದೆ ನಾನಾ ರೋಗಗಳು ಬರುತ್ತವೆ.
“ನಾನು ಮಾತ್ರ ಜೀವನದಲ್ಲಿ ಬಹಳ ಸುಖವಾಗಿದ್ದೀನಿ ಎಂದುಕೊಂಡಿರಾ? ಖಂಡಿತಾ ಇಲ್ಲ. ಈ ವಯಸ್ಸಾದ ಕಾಲದಲ್ಲಿ ನನ್ನ ಮಗ ಸೊಸೆ ನನ್ನನ್ನು ಬಹಳ ಪ್ರೀತಿಸುತ್ತಾರೆ ಅನ್ಸುತ್ತೆ. ನಾನು ಯಾವುದನ್ನೂ ಡೀಪ್ ಆಗಿ ಚಿಂತಿಸಿ ಕೊರಗುವುದಿಲ್ಲ.
“ನಾನು 20ರ ವಯಸ್ಸಿನಲ್ಲೇ ಮನೆಯವರ ವಿರುದ್ಧ ನಿಂತು, ಪ್ರೇಮಿಸಿದವನನ್ನೇ ಮದುವೆಯಾದೆ. 22ರ ಹೊತ್ತಿಗೆ ಅವನು ಯಾರ ಹಿಂದೆಯೋ ಓಡಿಹೋದ. ಅಂದಿನಿಂದ ನಾನು ನನ್ನ ಒಬ್ಬನೇ ಮಗನನ್ನು ಕಷ್ಟಪಟ್ಟು ಸಾಕಿ ದೊಡ್ಡವನಾಗಿ ಮಾಡಿದೆ. ಆ ಪತಿರಾಯ ಬದುಕಿದ್ದಾನೋ ಇಲ್ಲವೋ ಎಂದೂ ವಿಚಾರಿಸಲು ಹೋಗಲಿಲ್ಲ. ತವರಿಗೆ ಹೋಗೋಣವೆಂದರೆ ಒಬ್ಬನೇ ಮಗನನ್ನು ಅವಲಂಬಿಸಿರುವ ತಾಯಿತಂದೆ. ಅವರಿಗೆ ಹೊರೆಯಾಗಬಾರದೆಂದು ಅಂದಿನಿಂದ ಹಾಗೆ ಒಂಟಿಯಾಗಿ ಇದ್ದುಬಿಟ್ಟೆ. ನಾಳೆಗಾಗಿ ದುಡ್ಡು ಕೂಡಿಡಬೇಕು ಎಂಬುದೊಂದೇ ಗುರಿ.
“ನನ್ನ ಮಗನನ್ನು ಸರ್ಕಾರಿ ಶಾಲಾ ಕಾಲೇಜಿನಲ್ಲೇ ಓದಿಸಿದೆ. ಇಂದು ಅವನು ಹೈಸ್ಕೂಲ್ ಟೀಚರ್, ಸುಖಿಯಾಗಿದ್ದಾನೆ. ಜೊತೆಗೆ ಅಂಗಡಿ ಸಹ ನಡೆಸುತ್ತಿದ್ದಾನೆ.
“ಮಗ ಸೆಟಲ್ ಆಗುವ ಹೊತ್ತಿಗೆ ನನ್ನ ಅಣ್ಣನ ಹೆಂಡತಿ ತೀರಿಹೋಗಿ, ನಮ್ಮಮ್ಮ ಹಾಸಿಗೆ ಹಿಡಿದಿದ್ದರು. ಅಣ್ಣ, ಅಪ್ಪ ಬಂದು ನನ್ನನ್ನು ಭೇಟಿಯಾಗಿ ವಾಪಸ್ಸು ಮನೆಗೆ ಬರುವಂತೆ ಕೇಳಿಕೊಂಡರು. ನನಗೂ ಒಬ್ಬಂಟಿ ಬದುಕು ಸಾಕಾಗಿತ್ತು. ಮಗನನ್ನು ಒಪ್ಪಿಸಿ ತವರಿನ ದೊಡ್ಡ ಮನೆಗೆ ಮರಳಿದೆ.
“ಮುಂದೆ ಅಣ್ಣನ ಒಬ್ಬಳೇ ಮಗಳೇ ಸೊಸೆಯಾದಳು. ವಯಸ್ಸಾದ ನಮಗೆಲ್ಲ ಮಗ ಸೊಸೆ ದಿಕ್ಕಾದರು. ಮೊಮ್ಮಗಳು ಹುಟ್ಟುವಷ್ಟರಲ್ಲಿ ನನ್ನ ತಾಯಿ ತೀರಿಕೊಂಡರು. ನನ್ನ ತಂದೆ ಆರೋಗ್ಯ ಪರವಾಗಿಲ್ಲ. ನನ್ನ ಮೊಮ್ಮಗಳೇ ಈಗ ಅವರಿಗೆ ಸರ್ವಸ್ವ. ನಾನು ಹೀಗೆ ಮನೆ ನಡೆಸಿಕೊಂಡು ಹೋಗುತ್ತಿದ್ದೇನೆ. ಈ ರೀತಿ ಸದಾ ಬಿಝಿ ಇದ್ದುಬಿಟ್ಟಿದ್ದೇನೆ. ರಿಟೈರ್ ಆದ ಕಾಲಕ್ಕೆ ನಾನು ಕೂಡಿಟ್ಟ ಹಣ 20 ಲಕ್ಷ ಆಗಿತ್ತು.
“ಮಗ ಯಾವುದಕ್ಕೂ ನನ್ನನ್ನು ಕೇಳುತ್ತಿರಲಿಲ್ಲ. ಹೀಗಾಗಿ ಆ ಹಣ ಹಾಗೇ ಮುಂದುವರಿಯಿತು. ಅಣ್ಣನ ಮನೆಗೆ ಬಂದ ಮೇಲೆ ಸಂಸಾರ ಪೂರ್ತಿ ಅಣ್ಣ, ನನ್ನ ತಂದೆ ನಡೆಸುತ್ತಿದ್ದರು. ಅಡುಗೆಮನೆ ಜವಾಬ್ದಾರಿ ನನ್ನದಾಗಿತ್ತು. ಹೀಗೆ ಏರಿಳಿತಗಳಿಂದ ನನ್ನ ಜೀವನ ನಡೆಯುತ್ತಿದೆ. ನನ್ನದಾದ ಕೂಡಿಟ್ಟ ಹಣ ಇದ್ದುದರಿಂದ ನಾನು ಯಾರ ಹಂಗಿಗೂ ಬೀಳಲಿಲ್ಲ. ಅಣ್ಣನಿಗೂ ಜೀವನ ಮುಂದುವರಿಯಿತು.
“ನಾನು ನಿಮ್ಮನ್ನು ಭೇಟಿಯಾದಾಗಿನಿಂದ ಗಮನಿಸುತ್ತಿದ್ದೇನೆ. ಸದಾ ಏನಾದರೊಂದು ಬೇಸರದಲ್ಲಿ ಮುಳುಗಿರುತ್ತೀರಿ. ನಿಮ್ಮ ದುಃಖದ ಸ್ಥಿತಿ ಕಂಡು ಜೀವನದಲ್ಲಿ ಎಷ್ಟು ಕೊರಗಿದ್ದೀರೋ ಎಂದುಕೊಳ್ಳುತ್ತಿದ್ದೆ. ನನ್ನಂತೆಯೇ ನಿಮ್ಮದೂ ಸಂಗಾತಿ ಇಲ್ಲದ ಬದುಕು. ಹೇಗೋ ಜೀವನ ನಡೆದಿದೆ. ಸದಾ ಕೊರಗಬೇಡಿ, ಈ ಪ್ರಪಂಚದಿಂದ ಬೇಗ ಕಳಚಿಕೊಳ್ಳುವಿರಿ.
“ನೀವು ಸದಾ ಕೊರಗುವುದರಿಂದ ನನಗೂ ಮನಸ್ಸಿಗೆ ಬಹಳ ನೋವಾಗುತ್ತದೆ. ಇರಿ….. ಈ ಬಗ್ಗೆ ನನ್ನ ಮನದಲ್ಲಿ ಒಂದು ಉಪಾಯವಿದೆ…..
“ನೀವು ಒಂದು ಕೆಲಸ ಮಾಡಿ. ನನ್ನನ್ನು ನಿಮ್ಮ ಮನೆಗೆ ಕರೆದೊಯ್ಯಿರಿ. ಸ್ವಲ್ಪ ದಿನ ನಿಮ್ಮ ಜೊತೆಯೇ ಇದ್ದುಬಿಡುತ್ತೇನೆ. ಅಲ್ಲಿನ ವಾತಾವರಣ ಸ್ವಲ್ಪ ಬದಲಾಯಿಸಲು ಯತ್ನಿಸುವೆ. ನಾನು ಎಲ್ಲಿಗೆ ಹೋದರೂ ಅಲ್ಲಿಗೆ ತಕ್ಕಂತೆ ಅಡ್ಜಸ್ಟ್ ಆಗಬಲ್ಲೆ,” ರಮಾ ನಿಧಾನವಾಗಿ ವಿವರಿಸಿದಳು.
“ಆದರೆ ನಿಮ್ಮನ್ನು ನಾನು ದಿಢೀರ್ ಅಂತ ಹೇಗೆ ಕರೆದೊಯ್ಯಲಿ….? ನಿಮ್ಮನ್ನು ನನ್ನೊಂದಿಗೆ ಕರೆದೊಯ್ಯಲು ಏನಾದರೂ ಒಂದು ಕಾರಣ ಇರಬೇಕಲ್ಲ…… ಅಲ್ಲಿ ಮಗ ಸೊಸೆಗೆ ಏನು ಹೇಳಲಿ?” ರಮಣ ಮೂರ್ತಿ ಮತ್ತೆ ಚಿಂತೆಗೊಳಗಾದರು.
“ಒಂದು ಕೆಲಸ ಮಾಡಿ, ಪಕ್ಕದ ಮೆಡಿಕಲ್ ಸ್ಟೋರ್‌ನಲ್ಲಿ ಬ್ಯಾಂಡೇಜ್ ತಗೊಳ್ಳೋಣ. ನಿಮ್ಮ ಎಡಗೈಗೆ ಪೂರ್ತಿ ನೀಟಾಗಿ ಬ್ಯಾಂಡೇಜ್ ಕಟ್ಟುತ್ತೇನೆ. ಒಂದು ಸಣ್ಣ ಆ್ಯಕ್ಸಿಡೆಂಟ್ ಪೆಟ್ಟಿನಿಂದ ಕೈ ಮರಗಟ್ಟಿದೆ ಎಂದು ಹೇಳಿ. ಯಾರೋ ಒಬ್ಬರು ನಿಮ್ಮನ್ನು ಮನೆಗೆ ಸೇರಿಸಲೇ ಬೇಕಲ್ಲ….. ನಿಮ್ಮ ಸ್ನೇಹಿತರ ನೆಂಟರು ನಾನು, ಅನಾಥೆ, ಯಾರೂ ಇಲ್ಲ ಎಂದು ಹೇಳಿಬಿಡಿ. ನಿಮ್ಮನ್ನು ಈ ಸ್ಥಿತಿಯಲ್ಲಿ ನೋಡಿಕೊಳ್ಳುವವರು ಒಬ್ಬರು ಬೇಕು ಎಂದರೆ, ಸಹಾಯಕ್ಕೆ ಯಾರೋ ಸಿಕ್ಕಿದರು ಎಂದು ಅವರಿಗೂ ನೆಮ್ಮದಿಯಾಗುತ್ತದೆ,” ಎಂದು ರಮಾ ಪೂರ್ತಿ ವಿವರಿಸಿದರು.
“ಆಯ್ತು….. ನೀವು ಹೇಳಿದಂತೆಯೇ ಮಾಡೋಣ,” ಎಂದು ಅವರು ಹೇಳಿದಾಗ ಇಬ್ಬರೂ ಪಕ್ಕದ ಮೆಡಿಕಲ್ ಸ್ಟೋರ್‌ಗೆ ಹೋಗಿ ಬ್ಯಾಂಡೇಜ್ ಕೊಂಡು, ದೊಡ್ಡದಾಗಿ ಅವರಿಗೆ ಪಟ್ಟಿ ಕಟ್ಟಲಾಯಿತು. ಮೊದಲು ಇವರು ರಮಾ ಮನೆಗೆ ಹೋಗಿ 1 ವಾರಕ್ಕೆ ಬೇಕಾಗುವಷ್ಟು ಬಟ್ಟೆಬರೆ ಪ್ಯಾಕ್ ಮಾಡಿಕೊಂಡರು. ಅಲ್ಲಿಂದ ಆಟೋದಲ್ಲಿ ನೇರ ರಮಣ ಮೂರ್ತಿಗಳ ಮನೆಗೆ ಬಂದರು.
ಆಟೋದಿಂದ ಇಳಿದು ಹುಷಾರಿಲ್ಲದವರಂತೆ ನಟಿಸುತ್ತಾ ಮೂರ್ತಿ ಮನೆಯೊಳಗೆ ಹೊಕ್ಕರು. ಇವರು ಅಂದುಕೊಂಡಂತೆಯೇ ಆಯ್ತು. ಇವರು ಹೇಳಿದ ಕಥೆಯನ್ನು ಅವರು ನಂಬಿದರು. ಸಧ್ಯ, ಅಪ್ಪಾಜಿಯನ್ನು ನೋಡಿಕೊಳ್ಳಲು ಯಾರೋ ಸಿಕ್ಕಿದರಲ್ಲ ಅಂತ, ಮಗ ಸೊಸೆ ತುಸು ನಿರಾಳರಾದರು. ಸೊಸೆ ಇವರಿಗೆ ಕಾಫಿ ತಿಂಡಿ ಕೊಟ್ಟು ಅಂಗಡಿ ಕಡೆ ಹೋಗಿ ಬರ್ತೀನಿ, ವಿಶ್ರಾಂತಿ ಪಡೆಯಿರಿ ಅಂದಳು. ಮಗನೂ ಅಂಗಡಿಗೆ ಹೊರಟ.
ರಮಣ ಮೂರ್ತಿಗಳ ಮಗ ಸೊಸೆಯ ಸಹಜ ವ್ಯವಹಾರದಿಂದ ರಮಾಗೂ ಮನಸ್ಸು ತುಂಬಿ ಬಂತು. ಇಷ್ಟೆಲ್ಲ ಇದ್ದ ಮೇಲೆ ಮೂರ್ತಿಗಳೇ ಮಗ ಸೊಸೆಗೆ ಹೊಂದಿಕೊಳ್ಳುತ್ತಿಲ್ಲವೇನೊ ಎನಿಸಿತು. ಇರಲಿ 1 ವಾರದಲ್ಲಿ ಎಲ್ಲಾ ತಿಳಿಯುತ್ತದೆ ಎನಿಸಿತು.
ಮಾರನೇ ಬೆಳಗ್ಗೆಯಿಂದಲೇ ರಮಾ ಕಾಫಿ ಡಿಕಾಕ್ಷನ್ ಹಾಕಿ ಅಡುಗೆಮನೆ ಜವಾಬ್ದಾರಿ ವಹಿಸಿಕೊಂಡರು. ರಮಣ ಮೂರ್ತಿಗಳ ಕೈ ನೋವಿನ ನಾಟಕ ಸುಗಮವಾಗಿ ಮುಂದುವರಿಯಿತು.
ಬೇರೆಯವರಿಗಿಂತ ಬೇಗ ಎದ್ದು ಅಭ್ಯಾಸವಿದ್ದ ರಮಾ, ಮೂರ್ತಿಗಳಿಗೂ ಕಾಫಿ ನೀಡಿ ತಾವೂ ಕುಡಿದರು. ಸ್ನಾನ ಮುಗಿಸಿ ನೀಟಾಗಿ ಸಜ್ಜಿಗೆ, ಉಪ್ಪಿಟ್ಟಿನ ಉಪಾಹಾರ ಸಿದ್ಧಪಡಿಸಿದ್ದಾಯಿತು. ಮಧ್ಯದಲ್ಲಿ ಮೂರ್ತಿಯವರಿಗೆ ಇನ್ನೊಂದು ರೌಂಡ್ ಕಾಫಿ ಆಯ್ತು. ಅವರು ಪೇಪರ್ ಓದುತ್ತಾ ಹಾಲ್‌ನಲ್ಲಿ ಕುಳಿತಿದ್ದರು.
ಮಗ ಸೊಸೆ ಎದ್ದು ಬಂದಾಗ ಅವರಿಗೂ ಕಾಫಿ ಆಯ್ತು. ಬೆಳಗ್ಗೆ ಹೊತ್ತಿಗೆ ಮನೆ ಅಷ್ಟು ನೀಟಾಗಿದ್ದುದು, ತಿಂಡಿ ರೆಡಿ ಎಂದು ಗೊತ್ತಾದಾಗ ಖುಷಿ ಆಯಿತು. ಇಬ್ಬರೂ ಸ್ನಾನ ಮುಗಿಸಿ ಬಂದರು. ಎಲ್ಲರೂ ಒಟ್ಟಿಗೆ ಡೈನಿಂಗ್ ಟೇಬಲ್‌ನಲ್ಲಿ ಕುಳಿತಾಗ ರಮಾ ಎಲ್ಲರಿಗೂ ಬಿಸಿ ಬಿಸಿ ತಿಂಡಿ ಕೊಟ್ಟರು. ಹದವಾದ ಅದರ ರುಚಿ ಎಲ್ಲರಿಗೂ ಇಷ್ಟವಾಯ್ತು. ಅಂತೂ ಮಗ ಸೊಸೆ ತಮ್ಮ ಅಂಗಡಿ ಕೆಲಸಕ್ಕೆ ಹೊರಟರು.
ಇತ್ತ ರಮಾ ಸುತ್ತು ಕೆಲಸ ಮಾಡಿಕೊಳ್ಳುತ್ತಿದ್ದಾಗ, ಮೂರ್ತಿ ತಾವೇ ಬಂದು ಅಡುಗೆಮನೆಯಲ್ಲಿ ಪಾತ್ರೆ ತೊಳೆಯಲು ಮುಂದಾದರು. ರಮಾ ಬೇಡವೆಂದು ಹೇಳಿದರೂ ಅವರು ಕೇಳಲಿಲ್ಲ. ಅಡುಗೆ ರಂಗಮ್ಮ ಹುಷಾರಿಲ್ಲವೆಂದು 3 ದಿನಗಳ ರಜೆ ಕೇಳಿದ್ದಳು. ಇಬ್ಬರೂ ಕೂಡಿ ಉಳಿದ ಕೆಲಸ ಮುಗಿಸಿದರು.
ರಮಾ ಅಚ್ಚುಕಟ್ಟಾಗಿ ಮಧ್ಯಾಹ್ನದ ಅಡುಗೆ ಮುಗಿಸಿದರು. ಮೂರ್ತಿ ಅವರಿಗೆ ತರಕಾರಿ ಹೆಚ್ಚಿಕೊಡು ಸಹಾಯ ಮಾಡಿದರು. 2 ಗಂಟೆಗೆ ಮಗ ಸೊಸೆ ಮನೆಗೆ ಬಂದರು. ಆಗ ಅವಸರದಲ್ಲಿ ಏನೋ ಒಂದು ಅಡುಗೆ ತಯಾರಾಗುತ್ತಿತ್ತು. ಆದರೆ ಕಿರಣ್ ರಶ್ಮಿ ಬಂದು ನೋಡುತ್ತಾರೆ, ಡೈನಿಂಗ್ ಟೇಬಲ್‌ನಲ್ಲಿ ಸೊಗಸಾದ ಅಡುಗೆ ಸಿದ್ಧವಾಗಿದೆ! ಅವರಿಬ್ಬರಿಗೂ ಬಹಳ ಸಂತೋಷವಾಯಿತು. ಎಲ್ಲರೂ ನಸುನಗುತ್ತಾ ಹಾಯಾಗಿ ಊಟ ಮಾಡಿದರು. ಹಿರಿಯರು ಟಿವಿ ಹಾಕಿಕೊಂಡು ಹಾಲ್‌ನಲ್ಲಿ ಹರಟುತ್ತಾ ಉಳಿದಾಗ, ಕಿರಣ್‌ರಶ್ಮಿ ವಿಶ್ರಾಂತಿ ಪಡೆದರು.
ರಮಾಗೆ ಮಧ್ಯಾಹ್ನದ ನಿದ್ದೆಯ ಅಭ್ಯಾಸವಿರಲಿಲ್ಲ. ಹಾಗಾಗಿ ಮೂರ್ತಿಗಳಿಗೆ ತೂಕಡಿಕೆ ಶುರುವಾದಾಗ, ಅವರನ್ನು ಮಲಗಲು ಹೇಳಿ, ಇವರು ಎಲ್ಲರ ಬಟ್ಟೆ ವಾಷಿಂಗ್ ಮೆಶೀನ್‌ಗೆ ಹಾಕಿ, ಆಲೂಗಡ್ಡೆ ಸಿಪ್ಪೆ ಹೆರೆದು ಉಪ್ಪೇರಿಗೆ ಸಿದ್ಧತೆ ನಡೆಸಿದರು.
4 ಗಂಟೆಗೆ ಮಗ ಸೊಸೆ ಏಳುವಷ್ಟರಲ್ಲಿ ರಮಾ, ಬಟ್ಟೆ ಒಣಗಿಸಿ, ತಲೆ ಬಾಚುತ್ತಾ ಹಿತ್ತಲಲ್ಲಿ ಕುಳಿತಿದ್ದರು. ರಶ್ಮಿಗೆ ಬಹಳ ಸಂಕೋಚವಾಗಿ, “ಆಂಟಿ, ನಾನು ರಾತ್ರಿ 8 ಗಂಟೆಗೆ ಬಂದು ಮಾಡಿಕೊಳ್ಳುತ್ತಿದ್ದೆ, ನೀವೇಕೆ ಕಷ್ಟಪಟ್ಟಿರಿ?” ಎಂದಳು.
“ಇದರಲ್ಲಿ ಕಷ್ಟವೇನಮ್ಮ? ನಾನೇನು ಕಲ್ಲಿನ ಮೇಲೆ ಕಷ್ಟಪಟ್ಟು ಒಗೆದೆನೇ? ಮೆಶೀನ್‌ಗೆ ಹಾಕಿದೆ, ಬಿಡುವಿತ್ತಲ್ಲ ಅಂತ ಒಂದಿಷ್ಟು ಉಪ್ಪೇರಿ ಮಾಡಿಟ್ಟಿರುವೆ. ಮಾವನವರನ್ನೂ ಎಬ್ಬಿಸು, ಎಲ್ಲರಿಗೂ ಟೀ ಮಾಡ್ತೀನಿ,” ಎಂದು ಅಡುಗೆಮನೆ ಹೊಕ್ಕರು.
ಕಿರಣ್ ಅಪ್ಪನನ್ನು ಕೂಗಿದ. ಎಲ್ಲರೂ ಹಾಲ್‌ನಲ್ಲಿ ಹರಟುತ್ತಿದ್ದಾಗ ರಮಾ ಬಿಸಿ ಟೀ ಆಯಿತೆಂದು ಘೋಷಿಸಿದರು. ಕೂಡಲೇ ರಶ್ಮಿ ಒಳಗೆ ಹೋಗಿ ಎಲ್ಲರಿಗೂ ಟೀ ತಂದಿತ್ತಳು. ಅಷ್ಟರಲ್ಲಿ 4 ಪುಟ್ಟ ಪ್ಲೇಟ್‌ಗಳಲ್ಲಿ ರಮಾ ಆಲೂ ಉಪ್ಪೇರಿ ತಂದಿತ್ತಾಗ ಎಲ್ಲರ ಮುಖ ಅರಳಿತು.
“ಆಂಟಿ ಹೀಗೆ ಮಾಡುತ್ತಾ ಇದ್ದರೆ, ನಾವು ಹೋಟೆಲ್‌ಗೆ ಹೋಗುವ ಪ್ರಮೇಯವೇ ಇರಲ್ಲ,” ಕಿರಣ್ ಧನ್ಯವಾದ ಸಲ್ಲಿಸುತ್ತಾ ಹೇಳಿದ. ಎಲ್ಲರೂ ಮನೆಯವರೇ ಆಗಿರುವಾಗ ಇಂಥ ಔಪಚಾರಿಕತೆ ಬೇಡ ಎಂದು ರಮಾ ಹೇಳಿದಾಗ, ಎಲ್ಲರೂ ಸಂತೋಷದಿಂದ ತಲೆದೂಗಿದರು.
ಅತ್ತ ಅವರು ಅಂಗಡಿಗೆ ಹೊರಟಾಗ ಇತ್ತ ರಮಾ ರಮಣ ಮೂರ್ತಿ ಮನೆಗೆ ಬೀಗ ಹಾಕಿ, ಪಾರ್ಕಿನ ಕಡೆ ನಡೆದರು. ಅವರು ಜೊತೆಯಾಗಿ ಹೋಗುತ್ತಿರುವುದನ್ನು ಕಂಡು ಪರಿಚಿತ ಮುಖಗಳು ಹುಬ್ಬೇರಿಸಿ ನೋಡಿದವು. ಮೂರ್ತಿ ಡೋಂಟ್ ಕೇರ್ ಎಂಬಂತೆ ನಗುತ್ತಾ, ಮಾತನಾಡುತ್ತಾ ಮುಂದೆ ಸಾಗಿ ಪಾರ್ಕ್ ತಲುಪಿದರು.
“ರಮಾ, ನಿಜಕ್ಕೂ ನೀವು ಬಂದ ಮೇಲೆ ಮನೆಗೆ ಹೊಸ ಕಳೆ ಬಂದುಬಿಟ್ಟಿದೆ. ಎಲ್ಲರ ಮುಖದಲ್ಲೂ ಸಂತೋಷ ತೇಲುತ್ತಿದೆ. ಆದರೆ ನೀವು ಒಂದೇ ಸಮನೆ ಕೆಲಸ ಮಾಡುತ್ತಿದ್ದರೆ ನನಗೆ ಬಹಳ ಕಸಿವಿಸಿ ಆಗುತ್ತೆ…..” ಈಗ ಮೂರ್ತಿಯವರ ದಾರ್ಶನಿಕ ಮಾತುಗಳು ಎಷ್ಟೋ ತಗ್ಗಿದ್ದವು. ಪ್ರಫುಲ್ಲತೆಯಿಂದ, ಉತ್ಸಾಹದಿಂದ ಟಿವಿ, ಪತ್ರಿಕೆ ವಿಚಾರ ಮಾತನಾಡುತ್ತಿದ್ದರು. ಅವರಲ್ಲಿ ಮರಳಿದ ಉತ್ಸಾಹ ಕಂಡು ರಮಾಗೆ ಜೀವ ತುಂಬಿ ಬಂತು.
“ನೋಡಿದ್ರಾ, ಸದಾ ಈ ರೀತಿ ಉಲ್ಲಾಸ, ಉತ್ಸಾಹದಿಂದ ಸಮಯ ಕಳೆಯಬೇಕು. ನಮ್ಮಿಂದ 4 ಜನರಿಗೆ ಸದಾ ಉಪಕಾರ ಆಗಬೇಕು. ಅದು ಬಿಟ್ಟು ಆಕಾಶ ಕಳಚಿ ತಲೆ ಮೇಲೆ ಬಿದ್ದಂತೆ ಸದಾ ಚಡಪಡಿಸುತ್ತಾ ಏನೋ ಚಿಂತೆಯಲ್ಲಿ ಮುಳುಗಿರಬಾರದು,” ರಮಾ ಕಿಲಕಿಲನೆ ನಗುತ್ತಾ ಹೇಳಿದಾಗ ಮೂರ್ತಿ ನಿಜ ನಿಜ ಎಂದರು. ಅವರು ಪಾರ್ಕಿನಲ್ಲಿ 4-5 ಸುತ್ತು ವಾಕಿಂಗ್ ಮಾಡಿ, ಬೇಕಾದಂತೆ ಸಾಹಿತ್ಯ, ಸಂಗೀತದ ಬಗ್ಗೆ ಹರಟಿ, ಎದುರಿಗೆ ಸಿಕ್ಕಿದವರನ್ನೂ ಉತ್ಸಾಹದಿಂದ ಮಾತನಾಡಿಸುತ್ತಾ ಮನೆಗೆ ಬಂದು ಸೇರಿದಾಗ 7 ಗಂಟೆ. ಅಂದು ಇಡೀ ದಿನ ಹೇಗೆ ಕಳೆಯಿತೆಂದೇ ಮೂರ್ತಿಗೆ ಗೊತ್ತಾಗಲಿಲ್ಲ.
ಅಷ್ಟರಲ್ಲಿ ರಶ್ಮಿ ಫೋನ್ ಮಾಡಿ, “ಆಂಟಿ, ರಾತ್ರಿಗೆ ಏನೂ ಮಾಡಬೇಡಿ. ಬರುವಾಗ ನಾನು ಚಪಾತಿ ತರ್ತೀನಿ, ಬೆಳಗಿನ ಸಾಂಬಾರ್, ಅನ್ನ ಅಷ್ಟೇ ಸಾಕು. ಇನ್ನೇನು ಕಷ್ಟಪಡುವುದು ಬೇಡ,” ಎಂದು ಹೇಳಿದಳು. ಅವಳ ಉತ್ಸಾಹಕ್ಕೆ ದನಿಗೂಡಿಸಿ ರಮಾ ಆಯ್ತಮ್ಮ ಎಂದರು.
ಇವರು ಬರುವಾಗ 2 ಕಿಲೋ ಅವರೆಕಾಯಿ ತಂದಿದ್ದರು. ಟಿವಿ ಹಾಕಿ, ಇನ್ನೊಂದು ರೌಂಡ್ ಕಾಫಿ ಕುಡಿದು, ಇಬ್ಬರೂ ಅವರೆಕಾಯಿ ಸುಲಿಯುತ್ತಾ ಟಿವಿ ನೋಡುತ್ತಿದ್ದರು. 9 ಗಂಟೆ ಹೊತ್ತಿಗೆ ರಶ್ಮಿಕಿರಣ್ ಮರಳಿದರು. ಇವರು ಸುಲಿದಿಟ್ಟಿದ್ದ ಅರೆಕಾಯಿ ಕಂಡು ರಶ್ಮಿ ಬೆರಗಾದಳು.
“ನೀವು ಸ್ವಲ್ಪವೂ ವಿಶ್ರಾಂತಿ ಪಡೆಯಲ್ಲ ಆಂಟಿ. ಏನಾದರೂ ಮಾಡುತ್ತಲೇ ಇರ್ತೀರಿ. ಎಷ್ಟೋ ಸಲ ಟೈಂ ಸಾಕಾಗಲ್ಲ ಅಂತ ನಾನು ದುಬಾರಿ ದುಡ್ಡು ಕೊಟ್ಟು ಸುಲಿದ, ಹಿಚುಕಿದ ಅವರೆಕಾಳು ತಂದಿದ್ದೀನಿ ಗೊತ್ತಾ…..” ಎಂದಳು.
“ಟಿವಿ ನೋಡುತ್ತಾ ಕುಳಿತಿರುವಾಗ ಕೈಗೆ ಕೆಲಸ ಕೊಟ್ಟರೆ ಏನಮ್ಮ ಕಷ್ಟ?” ಎನ್ನುತ್ತಾ ಅವಳ ಕೈಯಿಂದ ಚಪಾತಿ ಪಡೆದು, ಅದನ್ನು ಲಘುವಾಗಿ ಬಿಸಿ ಮಾಡತೊಡಗಿದರು.
10 ಗಂಟೆಗೆ ಮುಂಚೆ ಎಲ್ಲರದೂ ಊಟ ಆಗಿತ್ತು. ಇನ್ನಷ್ಟು ಹೊತ್ತು ಟಿವಿ ನೋಡಿ 11 ಗಂಟೆಗೆ ಎಲ್ಲರೂ ಮಲಗಿದರು. ಅಂದು ಮೂರ್ತಿಗೆ ಬಲು ಬೇಗ ನಿದ್ದೆ ಬಂದಿತು. ಮನಸ್ಸು ತೃಪ್ತಿಯಿಂದಿರುವಾಗ ಚಿಂತೆಗೆ ತಾವೆಲ್ಲಿ?
ಬೆಳಗ್ಗೆ ಎಂದಿನಂತೆ ರಮಾ ಎದ್ದು ಡಿಕಾಕ್ಷನ್ ಹಾಕಿ ಕಾಫಿಗೆ ರೆಡಿ ಮಾಡುತ್ತಿದ್ದಾಗ, ರಶ್ಮಿ ಸಹ ಬೇಗ ಎದ್ದು ಬಂದು, ಬಾಗಿಲಿಗೆ ರಂಗೋಲಿ ಹಾಕಿ, ಉಳಿದಿದ್ದ ಪಾತ್ರೆ ತೊಳೆದಿಟ್ಟಳು. ಎಲ್ಲರದೂ ಕಾಫಿ ಸಮಾರಾಧನೆ ಆದಾಗ, ರಮಾ ತಿಂಡಿ ತಯಾರಿಸಲು ಹೊರಟರು.
ಎಲ್ಲಾ ಬಗೆಯ ಹಿಟ್ಟು, ಹುರಿದ ರವೆ, ಜೀರಿಗೆ, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಹಸಿ ಮೆಣಸು, ಈರುಳ್ಳಿ ಇತ್ಯಾದಿ ಹಾಕಿ ಮಜ್ಜಿಗೆ ಬೆರೆಸಿ ದಿಢೀರ್ ದೋಸೆ ತಯಾರಿಸಿದರು. ಹೊಸ ಬಗೆಯ ದೋಸೆ ಸವಿದು ಹೊಗಳುತ್ತಾ ರಶ್ಮಿ ಕಿರಣ್ ಹೊರಟರು.
ಬೆಳಗಿನ ಇತರ ಕೆಲಸ ಮುಗಿಸಿ ರಮಾ ಅಂದು ಅವರೆಕಾಳು ಬಿಸಿ ಬೇಳೆಭಾತ್, ಟೊಮೇಟೊ ಸಾರು ಮಾಡಿ, ಹಪ್ಪಳ ಸಂಡಿಗೆ ಕರಿದರು. ಮಗ ಸೊಸೆ ಬಂದ ಮೇಲೆ ಎಲ್ಲಾ ಒಟ್ಟಿಗೆ ಕುಳಿತು ತೃಪ್ತಿಯಾಗಿ ಊಟ ಮಾಡಿದರು. ಗಸಗಸೆ ಪಾಯಸ ಇದ್ದಿದ್ದರೆ, ಹಬ್ಬದ ಅಡುಗೆ ಆಗಿಹೋಗುತ್ತಿತ್ತು ಎಂದು ಮೂರ್ತಿ ಹೇಳಿದಾಗ, ಅಷ್ಟೇ ತಾನೇ ನಾಳೆ ಮಾಡಿದರಾಯಿತು ಎಂದರು ರಮಾ. ಎಲ್ಲರೂ ಸಂತೃಪ್ತಿಯಿಂದ ನಕ್ಕರು.
ಅಂದು ಮಧ್ಯಾಹ್ನ ರಮಾ ಒಂದಿಷ್ಟು ಸಬ್ಬಕ್ಕಿ ಸಂಡಿಗೆ ಮಾಡಿಟ್ಟರು. ಮಧ್ಯಾಹ್ನ ಹೆವಿ ಊಟ ಆದ್ದರಿಂದ ರಾತ್ರಿ ಅನ್ನ, ತಿಳಿಸಾರು, ಸಾಕೆಂದು ಎಲ್ಲರೂ ಹೇಳಿದಾಗ ಜೊತೆಗೆ ಇವರು ಬೋನಸ್ ಆಗಿ ಸಬ್ಬಕ್ಕಿ ಸಂಡಿಗೆ ಬಡಿಸಿದಾಗ ಎಲ್ಲರಿಗೂ ಮಹದಾನಂದವಾಗಿತ್ತು. ಹೀಗೆ ವಾರದ ಮೇಲೆ 2 ದಿನ ಕ್ಷಣ ಮಾತ್ರದಲ್ಲಿ ಕಳೆದುಹೋಯಿತು. ರಮಾ ತಾವು ಮನೆಗೆ ಹೊರಡಬೇಕೆಂದು ಸೂಚನೆ ನೀಡಿದಾಗ, ಆ ಭಾನುವಾರ ರಶ್ಮಿ ಕಿರಣ್ ತಾವೇ ಅಡುಗೆ ಜವಾಬ್ದಾರಿ ವಹಿಸಿಕೊಂಡು, ಇವರನ್ನು ಕೇಳಿ ಕೇಳಿ ಔತಣದ ಅಡುಗೆ ಮಾಡಿ ಬಡಿಸಿದರು. ರಶ್ಮಿ ಇವರಿಗೆ 2 ಒಳ್ಳೆಯ ಕಾಟನ್ ಸೀರೆಗಳನ್ನು ಉಡುಗೊರೆಯಾಗಿ ಕೊಟ್ಟಾಗ ರಮಾ ಆಕ್ಷೇಪಿಸುತ್ತಲೇ ಸ್ವೀಕರಿಸಿದರು.
ಮಾರನೇ ದಿನವಿಡೀ ಮನೆ ಭಣ ಭಣ ಎನಿಸಿತು. ಯಾವಾಗ ಸಂಜೆ ಆಗುವುದೋ, ಪಾರ್ಕಿನಲ್ಲಿ ರಮಾ ಭೇಟಿ ಆದರೆ ಸಾಕೆಂದು ಹಾತೊರೆಯುತ್ತಿದ್ದ ಮೂರ್ತಿಗೆ ಅವರು ಬರದೇ ಹೋದಾಗ ತೀವ್ರ ನಿರಾಸೆಯಾಯಿತು. ಮಾರನೇ ದಿನ ಬರದ ರಮಾ, ತಾವು ಕುಟುಂಬ ಸಮೇತ 1 ವಾರ ಊರಿಗೆ ಹೊರಟಿರುವುದಾಗಿ ಮೆಸೇಜ್‌ನಲ್ಲಿ ತಿಳಿಸಿದರು.
ಮೂರ್ತಿ ಮಾತ್ರವಲ್ಲದೆ ಎಲ್ಲರಿಗೂ ರಮಾ ಬಂದರೆ ಸಾಕು ಎನಿಸಿತ್ತು. ಬಾಯಿ ಬಿಟ್ಟು ಹೇಳಲಾರದೇ ಹೋದರು. ಹೀಗೆ ರಮಾ ಭೇಟಿಯಿಲ್ಲದೆ ಮೂರ್ತಿ 1 ತಿಂಗಳು ಕಳೆದರು. ಆ ಅವಧಿಯಲ್ಲಿ ಅವರು ಇನ್ನಷ್ಟು ವಯಸ್ಸಾದವರಂತೆ ಕಂಡುಬರುತ್ತಿದ್ದರು. ಆಗಾಗ ಮೆಸೇಜ್ ಕಳುಹಿಸಿ ಇಬ್ಬರು ಯೋಗಕ್ಷೇಮ ವಿಚಾರಿಸುತ್ತಿದ್ದರು. ನೇರ ಫೋನ್ ಮಾಡಿ ಮಾತನಾಡಲು ಮೂರ್ತಿಗೆ ಸಂಕೋಚ ಕಾಡುತ್ತಿತ್ತು.
ಅತ್ತ ರಮಾ ಸೊಸೆಗೆ ಹೆರಿಗೆ ಆಯ್ತೆಂದು 2 ತಿಂಗಳು ಬಾಣಂತನದಲ್ಲೇ ಕಳೆದರು. ತಾಯಿ, ಅತ್ತೆ ಎರಡೂ ಅವರೇ ಆಗಿ ಸೊಸೆ, ಮೊಮ್ಮಗಳನ್ನು ಉಪಚರಿಸಿದರು. ಇದೇ ಶುಭ ವಾರ್ತೆ ಇತ್ತ ಮೂರ್ತಿ ಸೊಸೆ ರಶ್ಮಿ ಕೂಡ ಕೊಟ್ಟಿದ್ದಳು. ದಿನ ತುಂಬಿ ಇನ್ನೊಂದು ವಾರದಲ್ಲಿ ಹೆರಿಗೆ ಆಗುವುದರಲ್ಲಿತ್ತು. ಈ ಸಮಯದಲ್ಲಿ ರಮಾ ಇದ್ದಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಎಂದು ಮೂವರು 100 ಸಲ ಮಾತನಾಡಿಕೊಂಡರು. ಸಂಜೆ ಬೆಲ್ ಆದಾಗ ಮೂರ್ತಿ ಬಾಗಿಲು ತೆರೆದು ನೋಡುತ್ತಾರೆ….. ಸಾಕ್ಷಾತ್ ರಮಾ, ಲಗೇಜ್‌ಸಮೇತ!
ಮೂರ್ತಿಗಂತೂ ಕುಣಿದಾಡುವ ಹಾಗಾಗಿತ್ತು. ಅವರ ಲಗೇಜ್ ಸೆಳೆದುಕೊಂಡು, ರಮಾರನ್ನು ಎಳೆದುಕೊಂಡೇ ಒಳಗೆ ಬಂದರು. ರಶ್ಮಿ ಕಿರಣ್‌ಗೂ ಅಪಾರ ಸಂತೋಷ! ರಶ್ಮಿ ವಿಷಯ ತಿಳಿದ ರಮಾ, ಸಂತೋಷದಿಂದ ಅವಳ ಉಪಚಾರಕ್ಕೆ ತಯಾರಾದರು. ತಮ್ಮ ಮನೆಯ ಸಂತಸದ ವಿಷಯ ಹಂಚಿಕೊಂಡರು.
ರಮಾ ಮನೆ ಕಂಟ್ರೋಲ್ ತೆಗೆದುಕೊಂಡ ಮೇಲೆ ಕೇಳಬೇಕೇ? ರಶ್ಮಿಯ ಅಂಗಡಿಗೆ ರಜೆ ಹಾಕಿಸಿ, ತಾವೇ ಆರೈಕೆಗೆ ನಿಂತರು. ಇವರ ನೇತೃತ್ವದಲ್ಲಿ ರಶ್ಮಿಗೆ ಸುಸೂತ್ರ ಹೆರಿಗೆಯಾಗಿ ಗಂಡು ಮಗುವಿನೊಡನೆ ಮನೆಗೆ ಆಗಮಿಸಿದಳು. ತವರಿಗೆ ಹೋಗಲು ಅವಳಿಗೆ ಅಲ್ಲಿ ಯಾರೂ ಇರಲಿಲ್ಲ. ಚಿಂತೆ ಇಲ್ಲ ಎಂದು ರಮಾ ಬಾಣಂತನಕ್ಕೆ ಮುಂದಾದರು.
ಮಗುವಿನ ತೊದಲು ಮಾತು ಆ ಮನೆಯನ್ನು ನಂದಗೋಕುಲವಾಗಿಸಿತ್ತು. ಈಗ ಎಲ್ಲರಿಗೂ ದಿನದ 24 ಗಂಟೆ ಏನೇನೂ ಸಾಲದು ಎನಿಸಿತು. ಮೂರ್ತಿಗಳ ಬದುಕಿನಲ್ಲಿ ಮತ್ತೆ ಜೀವನೋತ್ಸಾಹ ಮರಳಿಸಿದ ರಮಾ, ಮನೆಗೆ ಹೊರಡುವುದಾಗಿ ಆಗಾಗ ಬಂದು ಭೇಟಿ ಆಗುವುದಾಗಿ ತಿಳಿಸಿದರು. ಸ್ನೇಹ ಸಂಬಂಧಕ್ಕಿಂತ ಮಿಗಿಲಾದುದು ಬೇರಾವುದೂ ಇಲ್ಲ ಎಂದು ನಿರೂಪಿಸಿದರು.