ಬಾದಾಮಿ ಕಟ್‌ಲೆಟ್‌

Cookry-1

ಸಾಮಗ್ರಿ :  2 ಕಪ್‌ ಬೇಯಿಸಿ ಮಸೆದ ಆಲೂ, 1 ದೊಡ್ಡ ಕಪ್‌ ಬಾದಾಮಿ ಚೂರು, ತುಸು ಹೆಚ್ಚಿದ ಶುಂಠಿ, ಹಸಿ ಮೆಣಸು, ಕೊ.ಸೊಪ್ಪು, 1-1 ಕಪ್‌ ರವೆ ಬ್ರೆಡ್‌ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ಪುಡಿ, ಕರಿಯಲು ಎಣ್ಣೆ.

ವಿಧಾನ : ಬಾದಾಮಿ, ಎಣ್ಣೆ ಹೊರತುಪಡಿಸಿ ಹೆಚ್ಚಿದ ಎಲ್ಲಾ ಸಾಮಗ್ರಿ ಸೇರಿಸಿ ಪಕೋಡಾ ಹಿಟ್ಟಿನ ಹದಕ್ಕೆ ಬೆರೆಸಿಕೊಳ್ಳಿ. ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿ. ಅದನ್ನು ಚಿತ್ರದಲ್ಲಿರುವಂತೆ ತಟ್ಟಿಕೊಂಡು, ಬಾದಾಮಿ ಪುಡಿಯಲ್ಲಿ ಹೊರಳಿಸಿ. ಹೀಗೆ ಎಲ್ಲಾ ಸಿದ್ಧಪಡಿಸಿದ ನಂತರ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಡ್ರೈಫ್ರೂಟ್ಸ್ ಲಡ್ಡು

Cookry-3

ಸಾಮಗ್ರಿ :   500 ಗ್ರಾಂ ಬೆಲ್ಲದ ಪುಡಿ, ಗೋಡಂಬಿ, ಪಿಸ್ತಾ, ಬಾದಾಮಿ, ದ್ರಾಕ್ಷಿ, ಖರ್ಜೂರ, ಅಖರೋಟ್‌ ಚೂರು (ಅರ್ಧರ್ಧ ಕಪ್‌), 1 ದೊಡ್ಡ ಗಿಟುಕು ಕೊಬ್ಬರಿ ತುರಿ, ಅರ್ಧರ್ಧ ಕಪ್‌ ಖೋವಾ, ತುಪ್ಪ, ತುಸು ಏಲಕ್ಕಿ ಪುಡಿ, ಪಚ್ಚ ಕರ್ಪೂರ.

ವಿಧಾನ : ಮೊದಲು ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಗಳನ್ನು ಹುರಿದು ಬೇರೆಯಾಗಿಡಿ. ನಂತರ ಇದಕ್ಕೆ ಮಸೆದ ಖೋವಾ ಹಾಕಿ ಕೆಳಗಿಳಿಸಿ. ಅದೇ ಬಾಣಲೆಯಲ್ಲಿ ಇನ್ನಷ್ಟು ತುಪ್ಪ ಬಿಸಿ ಮಾಡಿ ಬೆಲ್ಲ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಇದು ಪೂರ್ತಿ ಕರಗಿ ಪಾಕದ ಹಾಗೆ ಆದಾಗ ಕೆಳಗಿಳಿಸಿ ತುಸು ಆರಲು ಬಿಡಿ. ನಂತರ ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ, ಕೆದಕುತ್ತಾ ಜಿಡ್ಡು ಸವರಿದ ಕೈಯಿಂದ ಸ್ವಲ್ಪವೇ ಮಿಶ್ರಣ ತೆಗೆದುಕೊಂಡು ಉಂಡೆ ಕಟ್ಟಿ. ಟೇಸ್ಟಿ ಲಡ್ಡು ರೆಡಿ!

ಬಾದಾಮಿ ಕುಕೀಸ್

Cookry-2

ಸಾಮಗ್ರಿ :  250 ಗ್ರಾಂ ಮೈದಾ, 2 ಸಣ್ಣ ಚಮಚ ಬೇಕಿಂಗ್‌ ಪೌಡರ್‌, ಒಂದಿಷ್ಟು ಬಾದಾಮಿ, ಗೋಡಂಬಿ, ಪಿಸ್ತಾ ಚೂರು, ಬೆಣ್ಣೆ ಪುಡಿಸಕ್ಕರೆ (ತಲಾ 200 ಗ್ರಾಂ), ಅರ್ಧ ಕಪ್‌ ಹಾಲು, ಚಿಟಕಿ ಉಪ್ಪು.

ವಿಧಾನ : ಮೈದಾಗೆ ಬೇಕಿಂಗ್‌ ಪೌಡರ್‌ ಬೆರೆಸಿ ಜರಡಿಯಾಡಿ. ಬೆಣ್ಣೆ ತುಸು ಬಿಸಿ ಮಾಡಿ ಕರಗಿಸಿಕೊಂಡು ಇದಕ್ಕೆ ಹಾಲು, ಪುಡಿಸಕ್ಕರೆ ಜೊತೆ ಸೇರಿಸಿ ಮೃದುವಾದ ಮಿಶ್ರಣ ಕಲಸಿ ನಂತರ ಇನ್ನಷ್ಟು ಬೆಣ್ಣೆ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. ಈ ಮಿಶ್ರಣ ಅರ್ಧ ಗಂಟೆ ನೆನೆಯಲು ಬಿಟ್ಟು, ನಂತರ ಸಣ್ಣ ಉಂಡೆಗಳಾಗಿಸಿ, ಅಂಗೈ ಮೇಲೆ ತಟ್ಟಿಕೊಳ್ಳಿ. ಇದಕ್ಕೆ ಕಟರ್‌ನಿಂದ ಸೂಕ್ತ ಆಕಾರ ನೀಡಿ. ಇದರ ಮೇಲೆ ಗೋಡಂಬಿ, ಪಿಸ್ತಾ ಚೂರು ಉದುರಿಸಿ ತುಸು ಅದುಮಿರಿ. ಒಂದು ಬೇಕಿಂಗ್‌ ಟ್ರೇಗೆ ಬೆಣ್ಣೆ ಸವರಿಡಿ. ಇದರ ಮೇಲೆ ಈ ಕುಕೀಸ್‌ ಜೋಡಿಸಿಕೊಂಡು ಮೊದಲೇ ಪ್ರೀಹೀಟ್‌ ಮಾಡಿದ ಓವನ್‌ನಲ್ಲಿ 180 ಡಿಗ್ರಿ ಶಾಖದಲ್ಲಿ 15 ನಿಮಿಷ ಬೇಕ್‌ ಮಾಡಿ, ಆಫ್‌ ಮಾಡಿ. 10 ನಿಮಿಷ ಬಿಟ್ಟು ಹೊರತೆಗೆದು ಆರಲು ಬಿಡಿ. ಏರ್‌ ಟೈಟ್‌ ಕಂಟೇನರ್‌ನಲ್ಲಿ ತುಂಬಿರಿಸಿ ಬೇಕಾದಾಗ ಸವಿಯಿರಿ.

ಡ್ರೈಫ್ರೂಟ್ಸ್ ಮೋದಕ

ಸಾಮಗ್ರಿ : 250 ಗ್ರಾಂ ಗೋಧಿಹಿಟ್ಟು, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಖರ್ಜೂರ, ಅಖರೋಟ್‌ ಚೂರು, ಕುಂಬಳ/ಕರ್ಬೂಜದ ಬೀಜ (ಒಟ್ಟಾರೆ 2 ಕಪ್‌), ಅಗತ್ಯವಿದ್ದಷ್ಟು ಪುಡಿಸಕ್ಕರೆ, ತುಪ್ಪ, ಗೋಂದು, ಏಲಕ್ಕಿಪುಡಿ.

ವಿಧಾನ : ಮೊದಲು ತುಸು ತುಪ್ಪದಲ್ಲಿ ಗೋಂದು ಹಾಕಿ ಕರಿದು ತೆಗೆಯಿರಿ. ಇದಕ್ಕೆ ಇನ್ನಷ್ಟು ತುಪ್ಪ (ಮಂದ ಉರಿಯಲ್ಲಿ) ಹಾಕಿ ಹಿಟ್ಟು ಸೇರಿಸಿ ಕೆದಕಿರಿ. ಆಮೇಲೆ ಇದಕ್ಕೆ ದ್ರಾಕ್ಷಿ ಗೋಡಂಬಿ ಇತ್ಯಾದಿಗಳನ್ನು ಸೇರಿಸಿ. ಏಲಕ್ಕಿ ಪುಡಿ, ಪುಡಿ ಮಾಡಿದ ಗೋಂದು, ಸಕ್ಕರೆ, ಕೊಬ್ಬರಿ ಸೇರಿಸಿ ಮತ್ತೆ ಕೈಯಾಡಿಸಿ, ಕೆಳಗಿಳಿಸಿ. ತುಸು ಆರಿದ ನಂತರ, ಬೆಚ್ಚಗಿನ ಹಾಲು ಚಿಮುಕಿಸಿ ಮೋದಕದ ಆಕಾರದಲ್ಲಿ ಮಾಡಿಕೊಳ್ಳಿ. ಮಕ್ಕಳು ಬಯಸಿದಾಗ ಸವಿಯಲು ಕೊಡಿ.

ಅಖರೋಟ್‌ ಚಾಪ್ಸ್

Cookry-5 (1)

ಸಾಮಗ್ರಿ : 1 ಕಪ್‌ ಅಖರೋಟ್‌ ಚೂರು, ಬೇಯಿಸಿ ಮಸೆದ ಆಲೂ 2 ಕಪ್‌, ಹೆಚ್ಚಿದ 1 ದೊಡ್ಡ ಈರುಳ್ಳಿ, ಹಸಿಮೆಣಸು, ಶುಂಠಿ, ಕೊ.ಸೊಪ್ಪು,  ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಅಮ್ಚೂರ್‌ಪುಡಿ, ಗರಂ ಮಸಾಲ, ಚಾಟ್‌ ಮಸಾಲ, ದಾಳಿಂಬೆ ಪುಡಿ (ರೆಡಿಮೇಡ್‌ ಲಭ್ಯ), ಕರಿಯಲು ಎಣ್ಣೆ.

ವಿಧಾನ : ಎಣ್ಣೆ ಬಿಟ್ಟು ಉಳಿದೆಲ್ಲ ಸಾಮಗ್ರಿ ಚೆನ್ನಾಗಿ ಬೆರೆಸಿಕೊಳ್ಳಿ. ಇದು ಪಕೋಡ ಮಿಶ್ರಣದ ಹದಕ್ಕಿರಲಿ. ಇದರಿಂದ ಸಣ್ಣ ಉಂಡೆ ತಟ್ಟಿ, ಹಾರ್ಟ್‌ ಶೇಪ್‌ ಕಟರ್‌ನಿಂದ ಕತ್ತರಿಸಿ, ಅಳ್ಳಕವಾದ ತವಾ ಮೇಲೆ ಶ್ಯಾಲೋ ಫ್ರೈ ಮಾಡಿ ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಕೇಸರಿ ಭಾತ್

Cookry-7

ಸಾಮಗ್ರಿ : 1 ಕಪ್‌ ರವೆ, ಅದರ ಮುಕ್ಕಾಲು ಭಾಗ ಸಕ್ಕರೆ, ಅನಾನಸ್‌ ತುರಿ, 1 ಸೌಟು ತುಪ್ಪ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾರೆ ಅರ್ಧ ಕಪ್‌), ಹಾಲಲ್ಲಿ ನೆನೆಸಿದ 2-3 ಎಸಳು ಕೇಸರಿ, ತುಸು ಏಲಕ್ಕಿ ಪುಡಿ.

ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆದಿಡಿ. ಅದಕ್ಕೆ ಇನ್ನಷ್ಟು ತುಪ್ಪ ಹಾಕಿ ರವೆ ಹುರಿದು ಬೇರೆಯಾಗಿಡಿ. ಮತ್ತೆ ತುಪ್ಪ ಹಾಕಿ ಅನಾನಸ್‌ ತುರಿ ಸೇರಿಸಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಇದಕ್ಕೆ ಸಕ್ಕರೆ, ಏಲಕ್ಕಿ ಹಾಕಿ ಕೆದಕಿ 2 ಕಪ್‌ ನೀರು ಬೆರೆಸಿ ಕುದಿಸಿರಿ. ಇದಕ್ಕೆ ಕೇಸರಿ ಬೆರೆಸಿ, ಎಡಗೈಯಿಂದ ರವೆ ಹಾಕುತ್ತಾ, ಮಂದ ಉರಿಯಲ್ಲಿ ಬೇಗ ಬೇಗ ಕೈಯಾಡಿಸಿ. ಮಧ್ಯೆ ಮಧ್ಯೆ ತುಪ್ಪ ಬೆರೆಸುತ್ತಾ, ಗೋಡಂಬಿ ದ್ರಾಕ್ಷಿಗಳನ್ನು ಹಾಕಿ ಕೆದಕಿ ಕೆಳಗಿಳಿಸಿ. ಬಿಸಿ ಇರುವಾಗಲೇ ಮೇಲಷ್ಟು ತುಪ್ಪ ಹಾಕಿ ಸವಿಯಲು ಕೊಡಿ.

ವಾಲ್‌ ನಟ್‌ ಪರೋಟ

Cookry-6

ಸಾಮಗ್ರಿ : 2 ಕಪ್‌ ಮೈದಾ, 1 ಕಪ್‌ ಅಖರೋಟ್‌ (ವಾಲ್ ‌ನಟ್‌)ನ ತರಿತರಿ ಪುಡಿ, 1-1 ಚಮಚ ಜೀರಿಗೆ-ಸೋಂಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ ಪುಡಿ, ದಾಳಿಂಬೆ ಪುಡಿ, ಗರಂಮಸಾಲ, ಚಾಟ್‌ ಮಸಾಲ, ಪುಡಿಮೆಣಸು, 2 ಸೌಟು ಎಣ್ಣೆ ಅಥವಾ ತುಪ್ಪ.

ವಿಧಾನ : ಮೊದಲು ಮೈದಾಗೆ ತುಸು ಉಪ್ಪು ಹಾಕಿ, ನೀರು ಬೆರೆಸಿ, ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು 1 ಗಂಟೆ ಕಾಲ ನೆನೆಯಲು ಬಿಡಿ. ಚಿಕ್ಕ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಅಖರೋಟ್‌ ಹಾಕಿ ಹುರಿದು ತೆಗೆಯಿರಿ. ಅದೇ ಬಾಣಲೆಯಲ್ಲಿ ಉಳಿದೆಲ್ಲ ಸಾಮಗ್ರಿ ಹಾಕಿ ತುಪ್ಪದ ಸಮೇತ ಕೆದಕಿ ಕೆಳಗಿಳಿಸಿ ಆರಲು ಬಿಡಿ. ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ ಲಟ್ಟಿಸಿ, ಮೇಲೆ ಅಖರೋಟ್‌ ಮಸಾಲೆ ಹರಡಿ, ಮತ್ತೆ ಉಂಡೆ ಕಟ್ಟಿ, ತುಪ್ಪ ಸವರಿ ನೀಟಾಗಿ ಲಟ್ಟಿಸಿ. ಇದನ್ನು ತವಾಗೆ ಹಾಕಿ ತುಪ್ಪ ಬಿಡುತ್ತಾ ಎರಡೂ ಬದಿ ಬೇಯಿಸಿ ಬಿಸಿ. ಇರುವಾಗಲೇ ಇದನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಗೋಡಂಬಿ ಸ್ಟಾರ್ಸ್

Cookry-8

ಸಾಮಗ್ರಿ : 200 ಗ್ರಾಂ ಖೋವಾ, 100 ಗ್ರಾಂ ಸಕ್ಕರೆ, ಅರ್ಧ ಕಪ್‌ ತರಿಯಾದ ಗೋಡಂಬಿ ಪುಡಿ, ಚಿಟಕಿ ಅರಿಶಿನ, 8-10 ಎಸಳು ಕೇಸರಿ, ಒಂದಿಷ್ಟು ಪಿಸ್ತಾ-ಬಾದಾಮಿ ಚೂರು.

ವಿಧಾನ : ಖೋವಾ ಮಸೆದು ಬಾಣಲೆಯಲ್ಲಿ ತುಪ್ಪ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಇದನ್ನು ಕೆಳಗಿಳಿಸಿ, ಅದೇ ಬಾಣಲೆಗೆ ಸಕ್ಕರೆ, ನೀರು ಬೆರೆಸಿ ಎಳೆ ಪಾಕ ತಯಾರಿಸಿ. ಇದಕ್ಕೆ ಅರಿಶಿನ, ಹಾಲಲ್ಲಿ ನೆನೆದ ಕೇಸರಿ ಹಾಕಿ ಕೈಯಾಡಿಸಿ. ಮಂದ ಉರಿ ಮಾಡಿ ಇದಕ್ಕೆ ಮೊದಲು ಗೋಡಂಬಿ ತರಿ, ಆಮೇಲೆ ಖೋವಾ ಹಾಕಿ ನಡುನಡುವೆ ತುಪ್ಪ ಬೆರೆಸುತ್ತಾ ಕೆದಕಬೇಕು. ಹೀಗೆ ಇದು ಮೈಸೂರು ಪಾಕ್‌ ಹದಕ್ಕೆ ಬರುವವರೆಗೆ ಕೆದಕಿ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಗೆ ಇದನ್ನು ಹರಡಿ ಆರಲು ಬಿಡಿ. ನಕ್ಷತ್ರದಾಕಾರದಲ್ಲಿ ಕತ್ತರಿಸಿ, ಪ್ರತಿ ಸ್ಟಾರ್‌ ಮೇಲೆ 1-1 ಪಿಸ್ತಾ, ಬಾದಾಮಿ ಸಿಗಿಸಿ ಸವಿಯಲು ಕೊಡಿ.

ಟೇಸ್ಟಿ ರೋಲ್ಸ್

Cookry-9

ಸಾಮಗ್ರಿ : 250 ಗ್ರಾಂ ಖೋವಾ, 100 ಗ್ರಾಂ ಪುಡಿ ಸಕ್ಕರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಅಖರೋಟಿನ ಚೂರು (ಒಟ್ಟಾರೆ 2 ಕಪ್‌), ತುಸು ಕೊಬ್ಬರಿ ತುರಿ, ಏಲಕ್ಕಿ ಪುಡಿ, ಹಸಿ ಖರ್ಜೂರ.

ವಿಧಾನ : ಮೊದಲು ಹಸಿ ಖರ್ಜೂರವನ್ನು ಹಾಲು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಮಂದ ಉರಿಯಲ್ಲಿ ಮಸೆದ ಖೋವಾ ಹಾಕಿ ಕೆದಕಬೇಕು. ನಂತರ ಇದಕ್ಕೆ ಅಖರೋಟ್‌, ಖರ್ಜೂರದ ಪೇಸ್ಟ್ ಹಾಕಿ ಕೈಯಾಡಿಸಿ, ನಡುನಡುವೆ ತುಪ್ಪ ಬೆರೆಸುತ್ತಿರಿ. 2 ನಿಮಿಷ ಬಿಟ್ಟು ಕೆಳಗಿಳಿಸಿ, ತುಸು ಆರಿದ ನಂತರ ಸಕ್ಕರೆ ಬೆರೆಸಿರಿ. ಜೊತೆಗೆ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಇತ್ಯಾದಿ ಬೆರೆಸಿರಿ. ಇದರಿಂದ ಸಣ್ಣ ಉಂಡೆ ಮಾಡಿ ರೋಲ್ಸ್ ಆಗಿ ಸುರುಳಿ ಸುತ್ತಿಕೊಳ್ಳಿ. ಇದನ್ನು ಕೊಬ್ಬರಿ ತುರಿಯಲ್ಲಿ ಹೊರಳಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಅತಿಥಿಗಳಿಗೆ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ