ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ, ಮಾರುಕಟ್ಟೆ ಆಕರ್ಷಕ ಆಫರ್‌ಗಳಿಂದ ತುಂಬಿ ಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ಡಿಸ್ಕೌಂಟ್‌ಗಳು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಆದರೆ ಹೆಚ್ಚು ಉಳಿತಾಯ ಮಾಡುವ ಮೋಹ ನಿಮ್ಮ ಪರ್ಸ್‌ನ್ನು ಖಾಲಿ ಮಾಡಿಬಿಡಬಹುದು. ಏಕೆಂದರೆ ಬಂಪರ್ ಫೆಸ್ಟಿವ್ ಆಫರ್ಸ್‌ನ ಸುಳಿಗೆ ಸಿಲುಕಿ, ನಮಗೆ ಉಪಯುಕ್ತವಾಗದ ವಸ್ತುಗಳನ್ನು ಕೂಡ ಖರೀದಿಸಿ ಬಿಡುತ್ತೇವೆ. ಅದು ನಿಮಗೆ ಲಾಭದ ವಹಿವಾಟು ಎನಿಸದೆ ಹಾನಿಯ ವ್ಯವಹಾರ ಎನಿಸುತ್ತೆ. ಹೀಗಾಗಿ ಈ ದೀಪಾವಳಿ ಹಬ್ಬದಲ್ಲಿ ತಿಳಿವಳಿಕೆಯಿಂದ ಖರೀದಿ ಮಾಡಿ.ದೊಡ್ಡ ಡಿಸ್ಕೌಂಟ್‌ನಿಂದ ದೂರವಿರಿ.
ನೀವು ಸೇಲ್ ಸೀಸನ್‌ನಲ್ಲಿ ಏನನ್ನಾದರೂ ಖರೀದಿಸಲು ಹೊರಟರೆ, ನಿಮಗೆ ಕೊಡುವ ಸಲಹೆ ಏನೆಂದರೆ ಮೊದಲು ನೋಡಿ, ಯೋಚಿಸಿ ಬಳಿಕವೇ ಖರೀದಿಸಿ. ದೊಡ್ಡ ಡಿಸ್ಕೌಂಟ್‌ಗಳ ಆಫರ್‌ಗಳಿಗೆ ಮರುಳಾಗಿ ಮೋಸ ಹೋಗಬೇಡಿ. ಉದಾಹರಣೆಗಾಗಿ, ನೀವು ಒಂದು ನಾನ್‌ಸ್ಟಿಕ್ ಪ್ಯಾನ್ ಖರೀದಿಸಲೆಂದು ಮಾರುಕಟ್ಟೆಗೆ ಹೋಗುತ್ತೀರಿ.
ಆಗ ಅಂಗಡಿಯನು ಪ್ಯಾನ್ ಸೆಟ್ ಖರೀದಿಯ ಮೇಲೆ ಶೇ.30ರಷ್ಟು ರಿಯಾಯ್ತಿ ಕೊಡುವುದಾಗಿ ಹೇಳುತ್ತಾನೆ. ನೀವು ಉಳಿತಾಯಕ್ಕೆ ಮರುಳಾಗಿ ಸಿಂಗಲ್ ನಾನ್‌ಸ್ಟಿಕ್ ಪ್ಯಾನ್ ಖರೀದಿಸುವುದರ ಬದಲು ಪೂರ್ತಿ ನಾನ್‌ಸ್ಟಿಕ್ ಕುಕಿಂಗ್ ರೇಂಜ್ ತೆಗೆದುಕೊಂಡು ಬರುತ್ತೀರಿ. ಆ ಮೂಲಕ ನಿಮ್ಮನ್ನು ನೀವು ಸ್ಮಾರ್ಟ್ ಖರೀದಿದಾರ ಎಂದುಕೊಳ್ಳುತ್ತೀರಿ.
ಅಂಗಡಿಯವನು ಇಂತಹ ದೊಡ್ಡ ಡಿಸ್ಕೌಂಟ್ ಜಾಲ ಹೆಣೆದು, ಒಂದು ಪ್ಯಾನ್ ಬದಲಿಗೆ ಪೂರ್ತಿ ನಾನ್‌ಸ್ಟಿಕ್ ಕುಕ್ಕಿಂಗ್ ರೇಂಜ್ ನೀವು ಖರೀದಿಸುವಂತೆ ಮಾಡುತ್ತಾನೆ. ಹೀಗಾಗಿ ನೀವು ಹೆಚ್ಚು ಹಣ ತೆತ್ತು ಬರುತ್ತೀರಿ.
ಉಚಿತ ಉಡುಗೊರೆಯ ಮೋಹ
ಒಂದು ಖರೀದಿಸಿದಾಗ ಮತ್ತೊಂದು ಉಚಿತವಾಗಿ ದೊರೆಯುವುದು ಬಹಳಷ್ಟು ಜನರಿಗೆ ಇಷ್ಟವಾಗುತ್ತದೆ. ಆದರೆ ಸೇಲ್‌ನಲ್ಲಿ ಯಾವುದೇ ಒಂದು ವಸ್ತುವಿನ ಜೊತೆಗೆ ದೊರೆಯುವ ಮತ್ತೊಂದು ಉಚಿತ ಉಡುಗೊರೆ ಖರೀದಿ ಮಾಡುವ ವ್ಯಕ್ತಿಯನ್ನು ಆಕರ್ಷಿಸುವ ತಂತ್ರವಾಗಿರುತ್ತದೆ. ಒಂದು ಮೈಕ್ರೋವೇವ್ ಜೊತೆಗೆ ಒಂದು ಉಚಿತ ಕ್ಯಾಸರೋಲ್ ಪಡೆಯಿರಿ ಅಥವಾ ರೈಸ್ ಕುಕ್ಕರ್ ಜೊತೆಗೆ ಲಂಚ್ ಬಾಕ್ಸ್ ನ ಆಫರ್ ಗಮನಿಸಿ ಬಹಳಷ್ಟು ಜನರು ಈ ರೀತಿಯ ಉಚಿತ ಉಡುಗೊರೆಯ ದುರಾಸೆಗೆ ಬಲಿಯಾಗುತ್ತಾರೆ. ಗ್ರಾಹಕನಿಗೆ ಮಾರಾಟಗಾರನ ತಂತ್ರ ಗೊತ್ತಾಗುವುದಿಲ್ಲ. ಯಾವುದೇ ಮಾರಾಟಗಾರ ಉಚಿತವಾಗಿ ಏನನ್ನೂ ಕೊಡಲು ಸಾಧ್ಯವಿಲ್ಲ ಎಂಬುದು ಅವರ ಅರಿವಿಗೆ ಬರುವುದೇ ಇಲ್ಲ. ಕ್ಯಾಸರೋಲ್‌ನ ಮೊತ್ತವನ್ನು ಆತ ಮೈಕ್ರೋವೇವ್‌ನಲ್ಲಿ ಸೇರಿಸಿಕೊಂಡಿರುತ್ತಾನೆ. ಹೀಗಾಗಿ ದೀಪಾವಳಿಯ ಸಂದರ್ಭದಲ್ಲಿ ಈ ತೆರನಾದ ಆಫರ್‌ಗಳ ಬಗ್ಗೆ ಅವಶ್ಯವಾಗಿ ಗಮನಹರಿಸಿ. ಏನೇ ಖರೀದಿಸಿ, ಜಾಣತನದಿಂದ ಖರೀದಿಸಿ.
ಶಾಪಿಂಗ್ ಯೋಜನೆ ರೂಪಿಸಿ
ಸೇಲ್ ಅಂದರೆ ಲಾಭದ ವ್ಯವಹಾರ. ಆ ಲಾಭದ ವ್ಯವಹಾರ ಯಾವಾಗ ಲಾಭಕರ ಅನಿಸುತ್ತೆ ಅಂದರೆ ಅದನ್ನು ನೀವು ಅವಧಿಗೆ ಮುನ್ನವೇ ಮುಗಿಸಿರಬೇಕು. ಕೆಲವು ಮಹಿಳೆಯರು ಹೇಗೆ ಯೋಚಿಸುತ್ತಾರೆಂದರೆ, ದೀಪಾವಳಿಯ ಎರಡು ಮೂರು ದಿನ ಮುಂಚೆ ಬೆಲೆ ಕಡಿಮೆ ಆಗಿರುತ್ತದೆಂದು. ಆದರೆ ಆಗುವುದು ಅದರ ತದ್ವಿರುದ್ಧ. ಕೊನೆಯ ಘಳಿಗೆಯಲ್ಲಿ ಮಾರಾಟಗಾರ ಬೆಲೆ ಕಡಿಮೆ ಮಾಡದೆ ಹೆಚ್ಚಿಸುತ್ತಾನೆ. ಏಕೆಂದರೆ ಆ ವ್ಯಕ್ತಿಗೆ ಚೆನ್ನಾಗಿ ಗೊತ್ತಿರುತ್ತದೆ, ಕೊನೆ ಘಳಿಗೆಯಲ್ಲಿ ಗ್ರಾಹಕರು ಬಂದೇ ಬರುತ್ತಾರೆ, ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿಯೇ ತೀರುತ್ತಾರೆ ಎಂದು. ಹೀಗಾಗಿ ಸ್ಮಾರ್ಟ್ ಆಗಿ ಮತ್ತು ಮುಂಚಿತವಾಗಿ ಖರೀದಿಸಿ.
ಸ್ಕೀಮ್ ಗಳಿಂದ ಎಚ್ಚರ!
ಹಬ್ಬದ ಮುಂಚೆ 2 ಕೊಂಡರೆ 1 ಉಚಿತವಾಗಿ ಪಡೆಯಿರಿ ಅಥವಾ 3 ಕೊಂಡರೆ 1 ಉಚಿತವಾಗಿ ಪಡೆಯಿರಿ ಎಂಬಂತಹ ಸ್ಕೀಮ್ಗಳು ನಿಮಗೆ ನೋಡಲು ಸಿಗುತ್ತವೆ. ಆದರೆ ಇದು ಗ್ರಾಹಕರನ್ನು ಆಕರ್ಷಿತಗೊಳಿಸಿ ಸೇಲ್ಸ್ ಹೆಚ್ಚಿಸಿಕೊಳ್ಳುವ ಏಕೈಕ ಉಪಾಯ ಎನ್ನುವುದು ಗೊತ್ತಿರಬೇಕು. ಅಂದಹಾಗೆ ಮಾರಾಟಗಾರ ಶೇ.40, 50, 60 ರಿಯಾಯ್ತಿ ಕೊಟ್ಟರೆ ಅದು ಆಕರ್ಷಕ ಎನಿಸಲಿಕ್ಕಿಲ್ಲ. ಒಂದು ಉಚಿತ ಕೊಟ್ಟರೆ ಅದು ಗ್ರಾಹಕರ ಗಮನ ಸೆಳೆದೇ ಸೆಳೆಯುತ್ತದೆ ಎಂದು ಚೆನ್ನಾಗಿ ಗೊತ್ತಿರುತ್ತದೆ. ಈ ರೀತಿ ಗ್ರಾಹಕರು ಅವನ ಕಪಟ ಜಾಲಕ್ಕೆ ಸಿಲುಕುತ್ತಾರೆ. ಹೆಚ್ಚು ಹಣ ವಸೂಲಿ ಮಾಡಿ ಕಡಿಮೆ ಬೆಲೆಯ ಉಡುಗೊರೆಯನ್ನು ಗ್ರಾಹಕನ ಮಡಿಲಿಗೆ ಹಾಕುತ್ತಾನೆ. ಈ ತೆರನಾದ ಆಫರ್‌ಗಳಿಂದ ದೂರ ಇರುವ ಒಳ್ಳೆಯ ಉಪಾಯವೆಂದರೆ, ನೀವು ಬೆಲೆ ಕಡಿಮೆ ಮಾಡುವುದನ್ನು ತಿಳಿದಿದ್ದರೆ, ಅದರ ಮೂಲಕವೇ ಉಳಿತಾಯ ಮಾಡಬೇಕೇ ಹೊರತು, ಎರಡು ತೆಗೆದುಕೊಂಡು ಒಂದನ್ನು ಉಚಿತವಾಗಿ ಪಡೆಯುವುದರ ಮೂಲಕ ಅಲ್ಲ.
ಅಗತ್ಯ ಇರುವುದನ್ನೇ ಖರೀದಿಸಿ
ನಾವು ಸೇಲ್‌ಗಳಿಗೆ ಹೋದಾಗ ಅಲ್ಲಿನ ಚಿತ್ರವಿಚಿತ್ರ ರಿಯಾಯ್ತಿ ನೋಡಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಗುವುದಿಲ್ಲ. ಹೀಗಾಗಿ ಮನೆಯಿಂದ ಹೊರಡುವ ಮುಂಚೆಯೇ ಒಂದು ಪಟ್ಟಿ ಸಿದ್ಧಪಡಿಸಿಕೊಳ್ಳಿ. ಅದರ ಪ್ರಕಾರವೇ ಖರೀದಿಸಿ. ಬಜೆಟ್ ಏರುಪೇರಾಗದಂತೆ ನೋಡಿಕೊಳ್ಳಿ.
ಇಎಂಐ ಹೊರೆಯಾಗದಿರಲಿ
ಇತ್ತೀಚೆಗೆ ಬಹಳಷ್ಟು ಬ್ಯಾಂಕ್‌ಗಳು ಖರೀದಿಯ ಮೇಲೆ ನೋ ಕಾಸ್ಟ್ ಇಎಂಐ ಸೌಲಭ್ಯ ಕೊಡುತ್ತಿವೆ. ಈ ಸೌಲಭ್ಯವೇನೊ ಚೆನ್ನಾಗಿದೆ. ಆದರೆ ನಾವು ಇದನ್ನು ಹಿಂದೆ ಮುಂದೆ ಯೋಚಿಸದೆ ಬಳಸಿದರೆ ಅದು ನಮಗೆ ಕಷ್ಟಕರವಾಗಿ ಪರಿಣಮಿಸಬಹುದು. ಹಬ್ಬದ ಸೀಝನ್‌ಗಳಲ್ಲಿ ಹಲವು ಬ್ಯಾಂಕ್‌ಗಳು ಈ ನಿಟ್ಟಿನಲ್ಲಿ ಕಡಿಮೆ ಡೌನ್ ಪೇಮೆಂಟ್‌ನ ಆಫರ್ ಕೂಡ ಕೊಡುತ್ತವೆ. ಇದು ನಾವು ಎಚ್ಚರದಿಂದಿರಬೇಕಾದ ಸಮಯ. ಕಡಿಮೆ ಡೌನ್ ಪೇಮೆಂಟ್‌ನ ಜೊತೆಗೆ ಪ್ರತಿ ತಿಂಗಳು ಬರುವ ಕಂತಿನ ಲೆಕ್ಕವನ್ನು ಮಾಡಿ ದುರಾಸೆಗೆ ಬಿದ್ದು ಅದನ್ನು ತಗೋಳಿ ಇದನ್ನು ತಗೋಳಿ ಎಂದು ಮನಬಂದಂತೆ ಖರೀದಿಸಿ ಆ ಮೇಲೆ ಕಂತು ಕಟ್ಟುವಾಗ ಫಜೀತಿ ಅನುಭವಿಸಬೇಡಿ.
ಇನ್ನೊಂದಿಷ್ಟು ಶಾಪಿಂಗ್……
ಮಲ್ಟಿ ಬ್ರಾಂಡ್ ಸ್ಟೋರ್‌ಗಳು ಆಫರ್ಸ್‌ಗಳ ಸುರಿಮಳೆ ಸುರಿಸುವಲ್ಲಿ ಮುಂಚೂಣಿಯಲ್ಲಿವೆ. ನೀವು ನಿಮ್ಮ ಆಯ್ಕೆಯ ಹಲವು ವಸ್ತುಗಳನ್ನು ಖರೀದಿಸಿದಿರಿ ಮತ್ತು ಬಿಲ್ಲಿಂಗ್ ಕೌಂಟರ್ ತಲುಪುವಿರಿ. ಬಿಲ್ ಮಾಡುವ ವ್ಯಕ್ತಿ ನಿಮಗೆ ಪಾಯಿಂಟ್ಸ್ ನಿಂದ ಹಿಡಿದು ಉಳಿತಾಯದ ಹಲವು ಉಪಾಯಗಳನ್ನು ತಿಳಿಸುತ್ತಾನೆ. ನಿಮ್ಮ ಒಟ್ಟು ಬಿಲ್ ರೂ. ಆಗಿದೆ. ಆಗ ಬಿಲ್ ಮಾಡುವ ವ್ಯಕ್ತಿ ನೀವು ಇನ್ನು 500 ರೂ.ಗಳ ಶಾಪಿಂಗ್ ಮಾಡಿದರೆ ಒಂದು ಆಕರ್ಷಕ ಉಡುಗೊರೆ ಸಿಗುತ್ತದೆ ಎಂದು ಹೇಳುತ್ತಾನೆ. ನೀವು ಆತನ ಮಾತಿಗೆ ಮರುಳಾಗಿ ಬಜೆಟ್‌ಗಿಂತಲೂ ಮಿಗಿಲಾಗಿ ಶಾಪಿಂಗ್ ಮಾಡಿದರೆ ನಿಮ್ಮ ಕೈಗೊಂದು ಉಡುಗೊರೆ ಕೊಡುತ್ತಾನೆ. ಅದನ್ನು ತೆರೆದು ನೋಡಿದರೆ ಅತ್ಯಂತ ಅಗ್ಗದ, ಅನಗತ್ಯ ವಸ್ತು ನಿಮ್ಮ ಪಾಲಿಗೆ ಬಂದಿರುತ್ತದೆ. ಅದನ್ನು ನೋಡಿ ಹಣೆ ಚಚ್ಚಿಕೊಳ್ಳುವುದೊಂದೇ ಬಾಕಿ.
– ಪೂಜಾ
ಡಿಸ್ಕೌಂಟ್ ಟ್ರ್ಯಾಪ್‌ನಿಂದ ಹೀಗೆ ಕಾಪಾಡಿಕೊಳ್ಳಿ…..
ಶಾಪಿಂಗ್ ಮಾಡಲು ದೊಡ್ಡ ಶಾಪ್‌ಗಳಿಗಿಂತ ಚಿಕ್ಕ ಹಾಗೂ ಸ್ಥಳೀಯ ಅಂಗಡಿಗಳಿಂದಲೇ ಖರೀದಿಸಿ. ಅಲ್ಲಿ ಉತ್ತಮ ಪರ್ಯಾಯ ಅವಕಾಶಗಳು ಲಭಿಸುವುದರ ಜೊತೆಗೆ ಡಿಸ್ಕೌಂಟ್ ಕೂಡ ದೊರೆಯುತ್ತದೆ.
ಮಾಸಿಕ ಬಜೆಟ್ ರೂಪಿಸಿ ಮತ್ತು ಅದಕ್ಕೆ ಬದ್ಧರಾಗಿ. ಅದರಿಂದ ನೀವು ಹೆಚ್ಚು ಖರ್ಚು ಮಾಡುವುದರಿಂದ ದೂರವಿರುವಿರಿ.
ಯಾವುದೇ ವಸ್ತು ಖರೀದಿ ಮಾಡುವ ಮುನ್ನ ಮಾಹಿತಿ ಕ್ರೋಢೀಕರಿಸಿ. ಪತ್ರಿಕೆಗಳನ್ನು ನೋಡಿ, ಇಂಟರ್‌ನೆಟ್‌ನಲ್ಲಿ ಹುಡುಕಿ.
ಸ್ಟೋರ್‌ನಲ್ಲಿ 40-50%ಗಿಂತ ಹೆಚ್ಚು ಡಿಸ್ಕೌಂಟ್ ದೊರೆಯಲಾರದು. ಅದಕ್ಕೂ ಹೆಚ್ಚಿನ ಡಿಸ್ಕೌಂಟ್‌ಗೆ ನಿರೀಕ್ಷೆ ಮಾಡಬೇಡಿ.
ಸೇಲ್‌ನ ಆರಂಭದ ದಿನಗಳಲ್ಲೇ ಖರೀದಿ ಮಾಡುವುದು ಸೂಕ್ತ.
ಜನದಟ್ಟಣೆಯಿಂದ ಪಾರಾಗಲು ಹಗಲು ಹೊತ್ತು ಅಥವಾ ವೀಕ್ ಡೇಸ್‌ನಲ್ಲಿಯೇ ಖರೀದಿಸಿ.