ಶಶಿಕಲಾ ಪವಿತ್ರಾಳಿಗೆ ಅವಳ ಮದುವೆ ಬಹಳ ಮುಂದೂಡುವುದು ಬೇಡ ಎಂದು ಮತ್ತೊಮ್ಮೆ ನೆನಪಿಸಿದಳು.“ಈ ವಯಸ್ಸಿನಲ್ಲಿ ಮದುವೆಯೇ? ಯಾಕೆ ಸುಮ್ಮನೆ ತಮಾಷೆ ಮಾಡ್ತೀಯಾ? ಜನ ಏನಂತಾರೆ ಅನ್ನೋದನ್ನೂ ಯೋಚಿಸು.”ಶಶಿ ಇದಕ್ಕೆ ಮುಂಚೆಯೇ ಗೆಳತಿ ಬಳಿ ಈ ವಿಷಯವನ್ನು ಹಲವು ಬಾರಿ ಚರ್ಚಿಸಿದ್ದಳು. ಇಂದು ಮತ್ತೆ ಹೇಳಿದಳು, “ನಿನ್ನ ಬಗ್ಗೆನೂ ಸ್ವಲ್ಪ ಯೋಚಿಸೇ ಹಸಿ ದಡ್ಡಿ! 45 ವರ್ಷ ಒಂಟಿಯಾಗಿ ಹೀಗೇ ಕಳೆದುಬಿಟ್ಟಿದ್ದಿ. ಈ ನಿನ್ನ ಒಂಟಿತನ, ಚಿಂತೆಗಳು, ಕಷ್ಟ ಕಾರ್ಪಣ್ಯಗಳು ನಿನ್ನನ್ನು ಕಾಡುತ್ತಿರುವಾಗ ಇಷ್ಟು ವರ್ಷ ಯಾರಿಗಾಗಿ ನೀನು ಜೀವ ತೇಯ್ದೆಯೋ ಅವರು ನಿನ್ನನ್ನು ವಿಚಾರಿಸಲು ಬರುತ್ತಾರೆಯೇ? ಜನ ಏನಂತಾರೋ ಅಂತ ತಾನೇ ಅಂತೀಯಾ….. ಯಾವ ಹಾಳು ಜನರೇ….. ನೀನು ಕಷ್ಟಪಡುವಾಗ ನೋಡಿ ಕಿಸಿಯುವ, ಆಡಿಕೊಳ್ಳುವ, ನೀನು ಮೇಲೇರಿದಾಗ ಹೊಟ್ಟೆ ಉರಿಯಿಂದ ಸಾಯುವ ಈ ಹಾಳು ಜನರ ಗೊಡವೆ ನಿನಗೇಕೆ ಬೇಕು? ಮದುವೆ ಆದರೂ ಆಗದೆ ಇದ್ದರೂ ಅವರ ಗಾಸಿಪ್ ಟಾಕ್‌ಗೆ ನೀನೊಂದು ವಸ್ತು, ಅಷ್ಟೆ!”
“ಯಾಕೆ ಅಷ್ಟೊಂದು ಆವೇಶ ಪಡ್ತಿ? ಅನ್ಯಾಯವಾಗಿ ನಿನ್ನ ಬಿ.ಪಿ. ಜಾಸ್ತಿ ಆಯ್ತು ನೋಡು. ಇಷ್ಟು ವರ್ಷಗಳೇ ಆಗಿಹೋಯಿತು, ಏನಾಗಬೇಕೋ ಆಗಲಿ ಬಿಡು.”
ಇವಳ ಮಾತು ಮುಗಿದಾಗ ಶಶಿ ಹೊರಟಾಗಿತ್ತು. ಇಬ್ಬರೂ ಪ್ರಾಣ ಸ್ನೇಹಿತೆಯರು, ಒಂದೇ ಕಾಲೋನಿಯಲ್ಲಿದ್ದರು. ವಿವಾಹಿತೆಯಾದ ಶಶಿಕಲಾ ಇಬ್ಬರು ಮಕ್ಕಳ ತಾಯಿ. 45ರ ಪವಿತ್ರಾ ಇನ್ನೂ ಕನ್ಯೆ. ಶಶಿ ಹೊರಟ ನಂತರ ಪವಿತ್ರಾ ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಂಡಳು. ಅವಳು ಹೇಳಿದಂತೆ ತನ್ನ ಅರ್ಧ ಆಯುಷ್ಯವೇ ಕಳೆದುಹೋಗಿದೆ ಎನಿಸಿತು. ತಾನು 20 ವರ್ಷದವಳಾಗಿದ್ದಾಗ ಮಾತ್ರ ಅವಳಿಗೆ ಕನ್ನಡಿ ನೋಡಿಕೊಳ್ಳುವ ಆಸಕ್ತಿ ಇತ್ತು. ಕ್ರಮೇಣ ಎಲ್ಲಾ ಹೋಯ್ತು.
ತಲೆ ಬಾಚುವಾಗಲೂ ಬಾಚಣಿಗೆ ಹಿಡಿದು 4-6 ಬಾರಿ ಬಾಚಿ, ಜಡೆ ಹೆಣೆದು, ಅಭ್ಯಾಸ ಬಲದಿಂದ ಕುಂಕುಮ ಹಚ್ಚಿಕೊಂಡೋ, ಬಿಂದಿ ಇರಿಸಿಕೊಂಡೋ ಮಾಡುವಳು. ಯಾವ ಸ್ನೋಪೌಡರ್‌ಗಳ ಗೊಡವೆಯೂ ಅವಳಿಗೆ ಇರಲಿಲ್ಲ. ಈ ರೀತಿ ಅವಳು ತನ್ನನ್ನು ತಾನು ಕನ್ನಡಿಯಲ್ಲಿ ಗಮನಿಸ ಬಯಸಿದಳು. ನೆರೆತ ಕೂದಲು, ಅಲ್ಲಲ್ಲಿ ಸುಕ್ಕಾದ ಚರ್ಮ, ತುಸು ಸಡಿಲವಾಗಿ ಜೋತುಬಿದ್ದ ಕೆನ್ನೆ, ಗಲ್ಲದ ಬಳಿ ನೆರಿಗೆ, ಕಂಗಳ ಕೆಳಗಿನ ಕಪ್ಪು ವೃತ್ತಗಳು…… ಒಟ್ಟಿನಲ್ಲಿ ನಿನ್ನ ಯೌವನ ಯಾವತ್ತೋ ಜಾರಿಹೋಯಿತು ಎಂದು ಸಾರುತ್ತಿದ್ದ. ತನ್ನನ್ನು ತಾನು ಸಿಂಗರಿಸಿಕೊಳ್ಳುವುದರತ್ತ ಎಂದೂ ಅವಳು ಗಮನ ಕೊಟ್ಟವಳಲ್ಲ. ಇಂದು ನಿಧಾನವಾಗಿ ತಲೆ ಬಾಚಿ, ನೀಟಾಗಿ ಜಡೆ ಹೆಣೆಯೋಣ ಎಂದು ಹಳೆಯ ವಿಚಾರಗಳನ್ನು ನೆನಪಿಸಿಕೊಳ್ಳತೊಡಗಿದಳು.
ಅವಳು ಡಿಗ್ರಿಯ 2ನೇ ವರ್ಷದಲ್ಲಿ ಕಲಿಯುತ್ತಿದ್ದಾಗ ಇನ್ನೂ 20 ವರ್ಷ. ಆಗ ರಸ್ತೆ ಅಪಘಾತದ ದುರಂತಕ್ಕೆ ಸಿಲುಕಿ ಅವರ ತಂದೆ ಆಕಸ್ಮಿಕವಾಗಿ ತೀರಿಕೊಂಡಿದ್ದರು. ಸ್ವಂತ ಮನೆ ಇರಲಿಲ್ಲ. ತಾಯಿಗೆ ನೌಕರಿಯೂ ಇಲ್ಲ. ತಂದೆ ಆಫೀಸಿನಿಂದ ತಾಯಿ ಹೆಸರಿಗೆ ಬರುತ್ತಿದ್ದ ಪೆನ್ಶನ್ ಹಣ ಆ ಸಂಸಾರ ನಡೆಸಲು ಏನೇನೂ ಸಾಲುತ್ತಿರಲಿಲ್ಲ.
ಇವಳೇ ಹಿರಿಯಳು, ಒಬ್ಬ ತಮ್ಮ, ತಂಗಿ. ಮನೆ ಬಾಡಿಗೆ, ಮಕ್ಕಳ ಪಾಲನೆ ಪೋಷಣೆ, ಶಾಲೆ ಫೀಸು, ಅವರ ಶಿಕ್ಷಣ….. ಬೆಂಗಳೂರಿನ ದುಬಾರಿ ಜೀವನ ಅತಿ ತುಟ್ಟಿಯೆನಿಸಿತು. ತಂಗಿ ಇನ್ನೂ 10ನೇ ತರಗತಿ, ತಮ್ಮ 2ನೇ ತರಗತಿ.
ಮನೆಯ ಗಂಭೀರ ಪರಿಸ್ಥಿತಿ ಅರಿತ ಪವಿತ್ರಾ, ತನ್ನ ಕಲಿಕೆಯ ಆಧಾರದಿಂದ ಕೆಲಸ ಹುಡುಕತೊಡಗಿದಳು. ಹೇಗಾದರೂ ತಾಯಿಗೆ ನೆರವಾಗಬೇಕು, ಕುಟುಂಬ ಮುನ್ನಡೆಸಬೇಕೆಂಬುದು ಒಂದೇ ಅವಳ ಗುರಿ. ಕೆಲವು ದಿನಗಳ ನಂತರ ಅಂತೂ ಖಾಸಗಿ ಶಾಲೆಯೊಂದರಲ್ಲಿ ಅವಳು ಪ್ರೈಮರಿ ಸ್ಕೂಲ್ ಟೀಚರ್ ಆದಳು.
ಈ ನೌಕರಿ ಸಿಕ್ಕಿದ್ದು ತನಗೆ ವರದಾನವೋ, ಶಾಪವೋ ಎಂಬುದೇ ಅವಳಿಗೆ ಗೊತ್ತಾಗಲಿಲ್ಲ. 5 ಸಾವಿರಕ್ಕೆ ಸಹಿ ಹಾಕಿ ಅವರು ಕೊಟ್ಟ 3 ಸಾವಿರ ತೆಪ್ಪಗೆ ತೆಗೆದುಕೊಳ್ಳುವುದೊಂದೇ ಮುಂದಿನ ದಾರಿ ಆಗಿತ್ತು. ಖಾಸಗಿ ಶಾಲೆಗಳ ದರ್ಬಾರೇ ಹಾಗೆ. ಬೇಡವೆಂದರೆ 2 ಸಾವಿರದ ಗುಮಾಸ್ತೆ ಕೆಲಸಕ್ಕೆ ಹೋಗಬೇಕಿತ್ತು. ತಮ್ಮ, ತಂಗಿಯರ ಜವಾಬ್ದಾರಿಯನ್ನು ಅವಳಿಗಂಟಿಸಿದ ಅಮ್ಮ,
ಹೊತ್ತು ಹೊತ್ತಿಗೆ ಅಡುಗೆ ಮಾಡಿ, ಮನೆ ನಡೆಸಲು ಮುಂದಾದರು.
2 ವರ್ಷ ಕಳೆಯುವಷ್ಟರಲ್ಲಿ ಇವಳ ಮದುವೆಗೆ ಅಲ್ಲೊಂದು ಇಲ್ಲೊಂದು ವರ ತಾನಾಗಿ ಒದಗಿ ಬರತೊಡಗಿತು. ಅಮ್ಮ ಬಿಲ್‌ಕುಲ್ ಬೇಡ ಎಂದರು.
“ಮೊದಲು ಎರಡನೆಯವಳ ಮದುವೆ ಆಗಿ, ಮಗ ಕೆಲಸ ಹುಡುಕಿ ಸೆಟಲ್ ಆಗಲಿ. ಆಮೇಲೆ ಪವಿತ್ರಾಳ ಮದುವೆ,” ಎಂದು ನೆಂಟರಿಗೆಲ್ಲ ಸಾರಿಕೊಂಡರು.
ಕೆಳ ಮಧ್ಯಮ ವರ್ಗದ ಆ ಕುಟಂಬ ಹೇಗೋ ಕುಂಟುತ್ತಾ ಸಾಗಿತ್ತು. ನಿಧಾನವಾಗಿ ತಮ್ಮ, ತಂಗಿ ಕಾಲೇಜು ಮೆಟ್ಟಿಲೇರ ತೊಡಗಿದರು. ಅವರ ಬೇಡಿಕೆ ದಿನೇ ದಿನೇ ಹೆಚ್ಚತೊಡಗಿತು. ಅಮ್ಮ ಒಂದಿಷ್ಟೂ ಕೈಹಿಡಿತ ಮಾಡದೆ ದಂದರಾಳಿ ಖರ್ಚು ಮಾಡಿಬಿಡುತ್ತಿದ್ದರು. ತನಗೇನೇ ವರಮಾನ ಬಂದರೂ ಅಮ್ಮನ ಕೈಗೆ ಹಾಕಿ ಬಿಡುವುದೊಂದೇ ಅವಳಿಗೆ ಗೊತ್ತಿದ್ದದ್ದು. ದಿನವಿಡೀ ಶಾಲೆಯಲ್ಲಿ ಕತ್ತೆ ಚಾಕರಿ ದುಡಿತ, ಸಂಜೆ 6 ಗಂಟೆಗೆ ಮನೆಪಾಠಕ್ಕೆ ಕುಳಿತರೆ 9 ಗಂಟೆಗೆ ಬಿಡುಗಡೆ. ಅದರಲ್ಲಿ ಬರುತ್ತಿದ್ದ 1-2 ಸಾವಿರ, ತಿಂಗಳ ಕೊನೆಗೆ ಆಧಾರ. 20 ವರ್ಷದವಳಾಗಿ ದುಡಿಯಲು ಆರಂಭಿಸಿದ ಅವಳ ಯೌವನ ಕೆಲವೇ ವರ್ಷಗಳಲ್ಲಿ ಮುರುಟಿಹೋಯಿತು. ಮೇಡಂ ಕೆಲಸಕ್ಕಾಗಿ ಮೂಗಿಗೆ ಒಂದು ಕನ್ನಡಕ ಏರಿಸಿ, ಕತ್ತೆ ದುಡಿತ ದುಡಿಯುವುದೊಂದೇ ಅವಳ ಪಾಲಿಗೆ ಉಳಿಯಿತು.
ಅಮ್ಮನ ಬೋಧನೆ ಅವಳಿಗೆ ಸದಾ ಇದ್ದದ್ದೇ, “ಏನು ಮಾಡಲಮ್ಮ…. ಗಂಡನಿಲ್ಲದ ಹೆಣ್ಣು ಹೆಂಗಸು ನಾನು. ಬೇರೆ ಸಂಪಾದನೆ ಗೊತ್ತಿಲ್ಲ. ಮೂರು ಹೊತ್ತೂ ಮನೆಯ ಚಾಕರಿ ಮಾಡಿ ದುಡಿಯುತ್ತೇನೆ. ನೀನು ಇನ್ನು ಮುಂದೆ ನಿನಗಾಗಿ ಅಲ್ಲ, ಈ ಕುಟುಂಬಕ್ಕಾಗಿ ಬದುಕಬೇಕಿದೆ ನೋಡಮ್ಮ,” ಎಂದು ಹೇಳಿ ಹೇಳಿ ಅವಳು ಬದುಕಿರುವುದೇ ಆ ಹೊರೆ ಹೊರಲು ಎಂಬಂತೆ ಅವಳ ಮನಸ್ಸಿಗೆ ಕುದುರೆ ಕಡಿವಾಣ ಹಾಕಿಟ್ಟರು. ಅಗತ್ಯಗಳು ವ್ಯಕ್ತಿಯನ್ನು ಸ್ವಾರ್ಥಿ ಆಗಿಸುತ್ತದೆ. ಅವಳು ಕೆಲಸಕ್ಕೆ ಹೊರಡುವಾಗ ತಡ ಆಯಿತೆಂದೋ, ಶಾಲೆಯಿಂದ ಬರುವಾಗ ಯಾರಿಂದಾದರೂ ಡ್ರಾಪ್ ಪಡೆದಿದ್ದರೆ, 1000 ಪ್ರಶ್ನೆ ಕೇಳಿ ಅವಳ ತಾಯಿ ಬಾಯಿ ಬಿಡಿಸುವರು. ಟ್ಯೂಷನ್‌ಗೆ ಬರುವ ಹುಡುಗರ ಫೀಸು ನೇರ ಅವರ ಕೈಗೇ ಹೋಗಬೇಕು. ಒಟ್ಟಿನಲ್ಲಿ ಯೌವನದ ಹುಡುಗಿ, ಪ್ರೇಮ ಪ್ರೀತಿ ಎಂದು ಮರುಳಾಗಬಾರದು ಎಂದು ಮೈಯೆಲ್ಲಾ ಕಣ್ಣಾಗಿ ಅವಳ ಬೆಂಗಾಲಿಗೆ ನಿಂತರು. ತಾನು ಸದಾ ಈ ಮನೆಗಾಗಿ ದುಡಿಯುತ್ತಿರಬೇಕು ಎಂಬುದೊಂದೇ ಅವಳ ಮನದಲ್ಲಿ ಉಳಿಯುವಂತೆ ಮಾಡಿಬಿಟ್ಟರು.
ನೂರಲ್ಲ ಸಾವಿರ ಸಲ ಅವಳಿಗೆ, “ನೋಡಮ್ಮ, ತುಂಬು ಪ್ರಾಯದ ಹುಡುಗಿ ನೀನು. ಯಾರೇ ಸಹೋದ್ಯೋಗಿ ಗಂಡಸರು ಮಾತನಾಡಿಸಿದರೂ ಕಣ್ಣೆತ್ತಿ ಅವರನ್ನು ಮಾತನಾಡಿಸಬೇಡ. ಈ ಗಂಡು ವರ್ಗವನ್ನು ಪ್ರೇಮ ಪ್ರೀತಿ ಅಂತ ಎಂದೂ ನಂಬಲು ಹೋಗಬಾರದಮ್ಮ. ಈ ಮನೆ ಮಕ್ಕಳನ್ನು ದಡ ಸೇರಿಸುವ ದೊಡ್ಡ ಜವಾಬ್ದಾರಿ ನಿನ್ನ ಹೆಗಲ ಮೇಲಿದೆ. ಸುಚಿತ್ರಾಳ ಮದುವೆ, ಸುದರ್ಶನನ ಬಿ.ಇ ಕಲಿಕೆ ಎಲ್ಲಾ ಆಗಿ ಅವನು ಎಂಜಿನಿಯರ್ ಆಗಿಬಿಡಬೇಕು. ಆಮೇಲೆ ದಿವಿನಾದ ವರನನ್ನು ಆರಿಸಿ ನಾನೇ ಮುಂದೆ ನಿಂತು ನಿನ್ನ ಮದುವೆ ಮಾಡಿಸ್ತೀನಮ್ಮ.
“ನೋಡಮ್ಮ, ಬಿದ್ದು ಹೋಗೋ ಮರ ನಾನು. ಬದುಕಿರುವವರೆಗೂ ನೆರಳು ನೀಡುವ ಮರವಾಗಿ ನಿಮ್ಮೆಲ್ಲರನ್ನೂ ನೋಡಿಕೊಳ್ತೀನಿ. ನನ್ನ ಮಾತನ್ನು ಹಾಗೂ ಮೀರಿ ನೀನು ಯಾರನ್ನಾದರೂ ಲವ್ ಗಿವ್ ಮಾಡಿ ಮದುವೆ ಆಗಿ ಹೊರಟು ಹೋದರೆ, ನಾನೂ ನನ್ನ ಮಕ್ಕಳೂ ತಕ್ಷಣ ನಿದ್ದೆ ಮಾತ್ರೆ ನುಂಗಿ ಈ ಲೋಕದಿಂದಲೇ ದೂರ ಹೋಗಿ ಬಿಡುತ್ತೇವೆ. ನಮ್ಮನ್ನು ಹಾಲಲ್ಲಿ ಹಾಕ್ತಿಯೋ ನೀರಿಗೇ ಹಾಕ್ತಿಯೋ ನಿನಗೆ ಬಿಟ್ಟದ್ದು ತಾಯಿ,” ಎಂದು ಭರತವಾಕ್ಯ ನುಡಿಯುವರು. ಪವಿತ್ರಾ ತುಟಿ ಪಿಟಕ್ ಎನ್ನದೇ, ಮೂಗಿಗೆ ಕವಡೆ ಕಟ್ಟಿಕೊಂಡು ದುಡಿದಳು.
ಹಿಂದಿನ ರಾತ್ರಿ ಉಳಿದ ಪದಾರ್ಥ, ಅವಸರದ ಅವಲಕ್ಕಿ ಅವಳ ಬೆಳಗಿನ ನಿತ್ಯ ಉಪಾಹಾರ. ಮಧ್ಯಾಹ್ನಕ್ಕೆ ಒಂದು ಚಿತ್ರಾನ್ನ ಅಥವ ಮೊಸರನ್ನದ ಡಬ್ಬಿ ತೆಗೆದುಕೊಂಡು ಹೋಗಿಬಿಟ್ಟರೆ, ಸಂಜೆ ಮನೆಗೆ ಬಂದ ಮೇಲೆ ಅಮ್ಮ ಕೊಡುವ ನೀರು ಕಾಫಿಯೇ ಅವಳಿಗೆ ಗತಿ. ರಾತ್ರಿ ಅನ್ನ, ಸಾರು ತಿಂದು ಮಲಗಿದರೆ ಮಾರನೇ ಬೆಳಗ್ಗೆ ಬೇಗ ಎದ್ದು ಮಕ್ಕಳ ಹೋಂವರ್ಕ್ ತಿದ್ದಬೇಕಿತ್ತು. ಸೀತಮ್ಮ ಮಗಳ ಕೈಲಿ ಮನೆಗೆಲಸ ಮಾಡಿಸುತ್ತಿರಲಿಲ್ಲ.
ಅವಳಿಗೆ ಶಾಲೆ ಕೆಲಸ, ಟ್ಯೂಷನ್ಸ್ ಸರಿಯಾಗಿರುತ್ತದೆ ಎಂದು ಸಂಪಾದಿಸುವವಳು ಎಂದು ಸದಾ ಬಾಯಿ ಮಾತಿನ ಉಪಚಾರದಲ್ಲೇ ಮೇಲಕ್ಕೇರಿಸುವರು.
ಕಾಯಾ ವಾಚಾ ಮನಸಾ ಆ ಮನೆಯ ಗಾಣದ ಎತ್ತಾದ ಅವಳು, ತಮ್ಮ, ತಂಗಿಯರನ್ನು ದಡ ಸೇರಿಸುವವರೆಗೂ ಎಂದೆಂದೂ ತಾನು ಮದುವೆ ಆಗುದಿಲ್ಲವೆಂದು ಅಮ್ಮನಿಗೆ ಮಾತು ಕೊಟ್ಟಳು. ಪವಿತ್ರಾ 30 ದಾಟುವ ಹೊತ್ತಿಗೆ ಅವಳ ತಂಗಿ ಸುಚಿತ್ರಾಳ ಮದುವೆ ಒಂದು ಸುಮಾರದ ವರನ ಜೊತೆ ನಡೆಯಿತು. ಅದಕ್ಕಾಗಿ ಅವಳು ಶಾಲೆಯಲ್ಲಿ ಸಾಲ ಪಡೆದು, ಸರಳ ಮದುವೆ ನಡೆಸಿ ಗೆದ್ದಳು.
“ನನ್ನ ಹಿರಿ ಮಗಳೇ ಮನೆಗೆ ಮೂಲಾಧಾರ. ಅವಳು ಒಬ್ಬಳು ಗಟ್ಟಿಯಾಗಿ ನಿಲ್ಲದಿದ್ದರೆ ನಾವೆಲ್ಲ ಗಂಗಮ್ಮನ ಪಾಲೇ ಗತಿ!” ಎಂದು ಬಂದವರ ಮುಂದೆ ಅವಳನ್ನು ಹಾಡಿ ಹೊಗಳಿ ಸೀತಮ್ಮ ಸಂಸಾರದ ರಥ ಮುನ್ನಡೆಸುವರು.
ಸುಚಿತ್ರಾಳಿಗೆ ಅತ್ತ ಕೆಲಸಕ್ಕೆ ಹೋಗು ಮನಸ್ಸೂ ಇಲ್ಲ, ಇತ್ತ ಡಿಗ್ರಿ ಪಾಸಾಗಲಿಲ್ಲ. ಅವಳು ಬಯಸಿದ ಯಾವ ರಾಜಕುಮಾರನೂ ಬಂದು ಕೈ ಹಿಡಿದು ಸಾರೋಟಿನಲ್ಲಿ ಕರೆದೊಯ್ಯುವಂತಿರಲಿಲ್ಲ. ಆರಕ್ಕೇರದ ಮೂರಕ್ಕಿಳಿಯದ ಮತ್ತೊಂದು ಮಧ್ಯಮ ವರ್ಗದ ಹಿರಿ ಸೊಸೆಯಾಗಿ ಅಂತೂ ಈ ಮನೆಯಿಂದ ಆ ಮನೆಗೆ ಹೊರಟಳು.
ಅಧಿಕ ಕನಸು ಕಾಣಬಾರದು, ಅಷ್ಟೆಲ್ಲ ಖರ್ಚು ಮಾಡಲು ತಮಗೆ ಶಕ್ತಿ ಇಲ್ಲ ಎಂದು ಅವಳು ತಂಗಿಗೆ ಸಾವಿರ ಸಲ ಹೇಳಬೇಕಾಯಿತು. ಸಾವಿರ ಅಸಮಾಧಾನಗಳೊಂದಿಗೆ ಸುಚಿತ್ರಾ ದಿನೇಶನನ್ನು ಮದುವೆಯಾಗಿ ಹೊರಟಳು. ಆ ಮನೆಗೆ ದೊಡ್ಡ ಮೊತ್ತದ ವರದಕ್ಷಿಣೆ ಕೊಡಲಾಗದಿದ್ದರೂ, ವರೋಪಚಾರ, ಮದುವೆಯ ಇನ್ನಿತರ ಖರ್ಚುಗಳಿಗೆ ಹೊಂದಿಸುವಷ್ಟರಲ್ಲಿ ಪವಿತ್ರಾ ಹೈರಾಣಾಗಿದ್ದಳು. ತನ್ನ ಪಿ.ಎಫ್, ಶಾಲಾ ಫಂಡ್‌ನಿಂದ ಸಾಲ ಪಡೆದು 4 ವರ್ಷ ಅದನ್ನು ತೀರಿಸಿದಳು.
ಅದಾದ ಮೇಲೂ ಪವಿತ್ರಾಳಿಗೆ ಅಲ್ಲೊದು ಇಲ್ಲೊಂದು ವರ ಒದಗಿ ಬರುತ್ತಿತ್ತು. ಮಗನ ಶಿಕ್ಷಣ ಮುಗಿಯುವವರೆಗೂ ಬೇರೇನೂ ಯೋಚನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ಸೀತಮ್ಮ ಬಂದವರನ್ನು ಸಾಗಹಾಕುತ್ತಿದ್ದರು. ಈ ಮಧ್ಯೆ ಸುಚಿತ್ರಾಳ ಸೀಮಂತ, ಬಾಣಂತನ, ಮಗುವಿನ ನಾಮಕರಣ ಎಲ್ಲ ಅಕ್ಕನ ಸಾಲಸೋಲಗಳಲ್ಲೇ ಜರುಗಿತು.
ಮಗ ಸಂಬಳ ತಂದ ಮೇಲೆಯೇ ಹಿರಿ ಮಗಳ ಮದುವೆ ನಡೆಯುವುದು ಎಂದು ಸೀತಮ್ಮ ಪಟ್ಟು ಹಿಡಿದರು. ಮೆರಿಟ್‌ನಲ್ಲಿ ಸೀಟು ಸಿಗದ ಮಹಾರಾಯ ತಮ್ಮನಿಗಾಗಿ 2 ಲಕ್ಷ ಖರ್ಚು ಮಾಡಿ, ಅಂತೂ ಅವನಿಗೆ ಸೀಟು ಗಿಟ್ಟಿಸಿಕೊಟ್ಟಳು. ಮತ್ತೆ ಶಾಲೆಯಲ್ಲಿ ಸಾಲ ಮಾಡಿ 10 ವರ್ಷ ತೀರಿಸಬೇಕಾಯಿತು. ಕಾಲೇಜು ಸೇರಿದ ಮಾತ್ರಕ್ಕೆ ಆಯಿತೇ ಅವನ ದುಬಾರಿ ಬುಕ್ಸ್, ಶೋಕಿಗೆ ತಕ್ಕಂತೆ ಬಟ್ಟೆಬರೆ, ಹೊರಗಿನ ಓಡಾಟಕ್ಕೆ ಖರ್ಚು…. ಅಂತೂ ಡಿಮ್ಯಾಂಡ್ಸ್ ಹನುಮಂತನ ಬಾಲವಾಗಿತ್ತು. ಫ್ರೆಂಡ್ಸ್ ಓಡಾಡುವಂತೆ ತನಗೊಂದು 2 ವೀಲರ್ ಇಲ್ಲ ಎಂದು ಸದಾ ಗೊಣಗುತ್ತಿದ್ದ. ಅಂತೂ ಮಹಾರಾಯನ ಶಿಕ್ಷಣ ಮುಗಿದು, ಮೈಸೂರು ಬಿಟ್ಟು ಅವನು ಬೆಂಗಳೂರಿನ ಭಾರಿ MNC ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದೂ ಆಗಿತ್ತು. ಮೊದ ಮೊದಲು ತಮ್ಮ ಫೋನ್ ಮಾಡುವಾಗ ನಿನ್ನ ಮದುವೆಗಾಗಿ ಎಲ್ಲಾ ಸಿದ್ಧ ಮಾಡಿಕೊಳ್ಳುತ್ತೇನೆ ಎಂದು ಅಕ್ಕನಿಗೆ ಹೇಳುತ್ತಿದ್ದ. 6 ತಿಂಗಳು ಕಳೆಯುವಷ್ಟರಲ್ಲಿ ಫೋನ್ ಬರುವುದೇ ನಿಂತುಹೋಯಿತು.
ವರ್ಷ ಕಳೆಯುವಷ್ಟರಲ್ಲಿ ಅವನಿಗೆ ಬೇರೊಂದು ಕಂಪನಿಯಲ್ಲಿ ಉನ್ನತ ಹುದ್ದೆ ದೊರಕಿತು. ಅಲ್ಲೇ ತನ್ನ ಸಹೋದ್ಯೋಗಿಯನ್ನು ಪ್ರೇಮಿಸಿ ರಿಜಿಸ್ಟರ್ಡ್ ಮದುವೆ ಆಗಿ ಅಕ್ಕ, ಅಮ್ಮನಿಗೆ ಮದುವೆಯ ಆರತಕ್ಷತೆಯ ಫೋಟೋ ವಾಟ್ಸ್ಆ್ಯಪ್‌ನಲ್ಲಿ ಕಳುಹಿಸಿದ. ವಿಷಯ ತಿಳಿದು ಮುಳುಮುಳು ಅತ್ತ ಸೀತಮ್ಮನಿಗೆ ಪವಿತ್ರಾಳೇ ಸಮಾಧಾನ ಹೇಳಬೇಕಾಯಿತು. 2 ತಿಂಗಳು ಕಳೆಯುವಷ್ಟರಲ್ಲಿ ಮಗ ಸೊಸೆಯನ್ನು ನೋಡಲೇಬೇಕು ಎಂಬ ಆಸೆ ಅವರಿಗೆ ಹೆಚ್ಚಾಯಿತು. ಪವಿತ್ರಾ ತಾನೇ ಕಾರು ಅರೇಂಜ್ ಮಾಡಿ ಅಮ್ಮನನ್ನು ತಮ್ಮನ ಮನೆಗೆ ಬೆಂಗಳೂರಿಗೆ ಕಳುಹಿಸಿಕೊಟ್ಟಳು. ಮಗಳ ಚಿಂತೆ ಮರೆತು ತಿಂಗಳಾದರೂ ಮಗನ ಮನೆಯಲ್ಲಿ ವೈಭವವಾಗಿ ಇದ್ದು ಬರುವೆ ಎಂದು ಹೊರಟರು. ಮಹಾತಾಯಿ ಸೊಸೆ ಅನಿಸಿದವಳು ವಾರ ಇರಿಸಿಕೊಳ್ಳದೆ ಓಡಿಸಿದಳು. ಹಿರಿ ಮಗಳ ಚಿಂತೆ ಹೇಗಾದರೂ ಇರಲಿ, ಮಗ ತಮ್ಮನ್ನು ಕೈಬಿಟ್ಟನಲ್ಲ ಎಂಬ ಚಿಂತೆಯಲ್ಲಿ ಸೀತಮ್ಮ ಹಾಸಿಗೆ ಹಿಡಿದರು.
ಈಗ ಪವಿತ್ರಾ ತಾಯಿಯ ಆರೈಕೆ, ಶಾಲೆ, ಪಾಠ ಎಂದು ಚಕ್ರಾಕಾರವಾಗಿ ದುಡಿಯಲಾರಂಭಿಸಿದಳು. ಮುಂದೆ ಇದೇ ನೆಪವಾಗಿ ಹಾಸಿಗೆ ಹಿಡಿದ ಅವರನ್ನು ಆಸ್ಪತ್ರೆಗೆ ಸೇರಿಸಿ 15 ದಿನ ಮತ್ತೆ ಅಲೆದಾಡಿದಳು. ಆಫೀಸ್ ಕೆಲಸವಾಗಿ ಅಮೆರಿಕಕ್ಕೆ ಹೊರಟಿದ್ದ ಮಗರಾಯ ಬಂದು ನೋಡಲು ಆಗಲೇ ಇಲ್ಲ. ಅಷ್ಟರಲ್ಲಿ ತಾಯಿ ಇಹಲೋಕ ತ್ಯಜಿಸಿದ್ದರು.
ಭಾವನನ್ನು ಮುಂದಿರಿಸಿಕೊಂಡು ತಾಯಿಯ ಕರ್ಮಾಂತರ ಮಾಡಿ ಮುಗಿಸಿದ ಪವಿತ್ರಾ, ಇದೀಗ ಅಕ್ಷರಶಃ ಒಂಟಿಯಾದಳು. ಹೆಂಡತಿಯನ್ನು ತವರಿಗೆ ಹೆರಿಗೆಗೆ ಕಳುಹಿಸಿದ್ದ ತಮ್ಮ, ಅಂತೂ ಬೆಳಗ್ಗೆ ಬಂದು ಅಕ್ಕನನ್ನು ನೋಡಿಕೊಂಡು ಮಧ್ಯಾಹ್ನ ಊಟ ಮುಗಿಸಿ, ಕೈ ತೊಳೆದುಕೊಂಡು ಮತ್ತೆ ಬೆಂಗಳೂರಿಗೆ ಹೊರಟೇ ಹೋದ. ತಂಗಿ ಅವಳ ಸಂಸಾರದಲ್ಲಿ ತಲ್ಲೀನಳು, ತಮ್ಮ ತನ್ನ ಸಂಸಾರ ಬೆಂಗಳೂರಿನಲ್ಲಿ ಎಂದು ಬಿಝಿ. ಈ ವಯಸ್ಸಾದ ಅಕ್ಕಾ ಈಗ ಯಾರಿಗೆ ಬೇಕು? ಇದೀಗ 40+ ಆಗಿದ್ದ ಪವಿತ್ರಾ ತಾನಾಯಿತು, ತನ್ನ ಯಾಂತ್ರಿಕ ಜೀವನವಾಯಿತು ಎಂದು ಹಾಗೇ ಇದ್ದುಬಿಟ್ಟಳು. ಅವಳ ಮರುಳುಗಾಡಿನ ಜೀವನದಲ್ಲಿ ಸ್ನೇಹದ ಆಸರೆ ನೀಡುತ್ತಾ ತಂಪೆರೆಯುವವಳು ಎಂದರೆ ಗೆಳತಿ ಶಶಿಕಲಾ ಒಬ್ಬಳೇ! ಅವಳ ಎಲ್ಲಾ ಕಷ್ಟಗಳಿಗೂ ಓಗೊಡುತ್ತಾ, ನಿನಗಾಗಿ ನಾನಿರುವೆ ಎಂದು ಜೊತೆಗೂಡಿದ್ದಳು.
ಈಗ ಅಕ್ಕಾ ಯಾವುದೇ ಜವಾಬ್ದಾರಿ ಇಲ್ಲದೆ ಬಹಳಷ್ಟು ಸಂಪಾದಿಸಿ ನೆಮ್ಮದಿಯಾಗಿದ್ದಾಳೆ ಎಂದು ತಮ್ಮ, ತಂಗಿ ಬೇಕಾದಾಗ 50, 60 ಸಾವಿರ ಎಂದು ಸಾಲ ಪಡೆದು ಹಿಂದಿರುಗಿಸಲು ಮಾತ್ರ ಖಂಡಿತ ಮರೆಯುವರು. ಇರುವವಳು ಒಬ್ಬಳೇ ತಾನೇ, ಯಾರಿಗೆ ಮಾಡಬೇಕು? ತಮ್ಮ ಮಕ್ಕಳಿಗೆ ಮಾಡಲಿ ಬಿಡು ಎಂಬುದೇ ಅವರ ಧೋರಣೆ. ಅವರ ಫೋನ್ ಬಂತೆಂದರೆ ಇವಳಿಗೆ ಏನೋ ಡಿಮ್ಯಾಂಡ್ ಮಾಡಲಿಕ್ಕೇ ಎಂಬಂತೆ ಆಗಿಹೋಗಿತ್ತು.
ಶಶಿ ಆಗಾಗ ನೆನಪಿಸಿಕೊಂಡು ಹೇಳುವಳು, “ಸರಿ, ನಿನ್ನೆಲ್ಲಾ ಜವಾಬ್ದಾರಿ ಕಳೆಯಿತು. ಇನ್ನಾದರೂ ಮದುವೆ ಆಗಿಬಿಡು,” ಪವಿತ್ರಾಳ ನಗುವೇ ಉತ್ತರ, “ಈ ವಯಸ್ಸಿನಲ್ಲಿ ಇನ್ನೆಂಥ ಮದುವೆ? 45ರ ನನ್ನನ್ನು ಕಟ್ಟಿಕೊಳ್ಳಲು ಯಾರು ಮುಂದೆ ಬರಬೇಕು? ಜನ ಏನಂತಾರೋ ಏನೋ? ತಮ್ಮ, ತಂಗಿ ಮಕ್ಕಳ ಸಮೇತ ನಗುವುದಿಲ್ಲವೇ?” ಎನ್ನುವಳು.
“ಸಾಕು ನಿನ್ನ ಭಾಷಣ…. ಇನ್ನಾದರೂ ಬದುಕುವ ದಾರಿ ನೋಡು! ನಿನ್ನ ಬಗ್ಗೆ ಯಾರಿಗಿದೆ ಅಕ್ಕರೆ? ಅಕ್ಕ ಅಂದ್ರೆ ಒಂದು ATM ಯಂತ್ರ. ಕೇಳಿದಾಗೆಲ್ಲ ತೆಪ್ಪಗೆ ಹಣ ಕೊಡುತ್ತಿರಬೇಕು ಅಷ್ಟೆ. ಈಗಲಾದರೂ ಅವರಿಬ್ಬರಿಗೆ ಈ ಅಕ್ಕನ ಮದುವೆ ಮಾಡಿಸೋಣ ಅನ್ನೋ ಜವಾಬ್ದಾರಿ ಇಲ್ಲವೇ? ಅಥವಾ ಅವರ ಮಕ್ಕಳ ಜವಾಬ್ದಾರಿ ನಿನ್ನ ತಲೆಗೇ ಕಟ್ಟಿದ್ದಾರೋ?” ಶಶಿಗಂತೂ ಕೆಂಡಾಮಂಡಲ ಸಿಟ್ಟು. ಏನೇ ಆಗಲಿ ಪವಿತ್ರಾ ಹೊಸ ಜೀವನ ಶುರು ಮಾಡಬೇಕೆಂದೇ ಶಶಿ ಒತ್ತಾಯಿಸುವಳು. ಪವಿತ್ರಾ ಹ್ಞೂಂ…, ಉಹ್ಞೂಂ ಏನೂ ಹೇಳದೆ ಸುಮ್ಮನಾಗುವಳು.
ಇದನ್ನೆಲ್ಲಾ ಯೋಚಿಸುತ್ತಾ ಪವಿತ್ರಾ ಕನ್ನಡಿಯಲ್ಲಿ ಮತ್ತೆ ಮತ್ತೆ ಮುಖ ನೋಡಿಕೊಂಡಳು. ಜವಾಬ್ದಾರಿ ಹೆಸರಿನಲ್ಲಿ ತನಗೆ ತಾಯಿ, ತಮ್ಮ, ತಂಗಿ ಮೋಸ ಅಲ್ಲದೆ ಮತ್ತೇನು ಮಾಡಿದರು? ಆದರೆ ಈ ಕುರಿತು ಅವಳು ಯಾರಿಗೆ ತಾನೇ ದೂರಿಯಾಳು? ತನಗೆ ಅಂತ ಒಂದು ಸಂಪಾದನೆ ಇದ್ದುದರಿಂದ ಅಂದಿನಿಂದ ಇಂದಿನವರೆಗೂ ಅದೇ ಶೀಟ್ ಮನೆಯ ವಠಾರದಲ್ಲಿ ಹೇಗೋ ಕಾಲ ಕಳೆದಳು. ಬಹಳ ಬೇಸರ ಎನಿಸಿ ಅಂದು ಸಂಜೆ ದೇವಾಲಯಕ್ಕೆ ಹೊರಟಳು.
ಹೇಳಿದಂತೆ ಶಶಿ ಒಂದು ವೈವಾಹಿಕ ಕೇಂದ್ರದಿಂದ ಶೇಖರ್‌ನ ವಿವರ ಪಡೆದು ಬಂದಳು. ಆತನ ಫೋಟೋ ಪವಿತ್ರಾಳಿಗೆ ತೋರಿಸಿದಳು. 50ರ ವಿಧುರ, ಇಬ್ಬರು ಅವಳಿ ಮಕ್ಕಳ ತಂದೆ. ಶಶಿ ಮೊದಲು ತಾನೇ ಪತಿಯ ಜೊತೆ ಆತನ ಮನೆಗೆ ಹೋಗಿ ಎಲ್ಲಾ ವಿಚಾರಿಸಿಕೊಂಡು ಬಂದಳು. ವಯಸ್ಸಾದ ತಾಯಿ ಜೊತೆ ಮಕ್ಕಳ ಜವಾಬ್ದಾರಿ ಆತನಿಗಿತ್ತು. ತಾಯಿಯ ಒತ್ತಾಸೆ, ಮಕ್ಕಳ ಸಲುವಾಗಿ ಅಂತೂ ಮಡದಿ ಮಡಿದ 10 ವರ್ಷಗಳ ನಂತರ ಶೇಖರ್ ಮದುವೆಗೆ ಒಪ್ಪಿದ್ದ. 8 ವರ್ಷಗಳ ಆ ಅವಳಿ ಮಕ್ಕಳು ಬಲು ಮುದ್ದಾಗಿದ್ದವು.
ಪವಿತ್ರಾಳ ನೆಂಟಳಂತೆ ಶಶಿ ತಾನೇ ಅವರೊಂದಿಗೆ ಮದುವೆಯ ಎಲ್ಲಾ ಮಾತುಕಥೆ ಆಡಿದಳು. ಪವಿತ್ರಾಳ ಫೋಟೋ ನೋಡಿ, ವಿವರ ತಿಳಿದು, ಅವಳು ಒಪ್ಪಿದರೆ ತಾನು ಮದುವೆಗೆ ಸಿದ್ಧನೆಂದ ಶೇಖರ್. ಉತ್ತಮ ನೌಕರಿ, ಮೈಸೂರಿನಲ್ಲಿ ಸ್ವಂತ ಮನೆ, ಓಡಾಡಲು ಕಾರು ಎಲ್ಲವೂ ಇತ್ತು. ಆ ಮನೆಗೊಬ್ಬ ಹಣತೆ ಹಚ್ಚಿ, ಮಕ್ಕಳನ್ನು ಪ್ರೀತಿಸುವ ಸೊಸೆ ಬೇಕಿತ್ತು ಅಷ್ಟೆ. ಶಶಿ ಬಂದು ವಿವರ ತಿಳಿಸಿದಾಗ ಪವಿತ್ರಾ ಮೊದಲು ಬೇಡವೆಂದೇ ಹೇಳಿದಳು. ಮಾರನೇ ದಿನ ಶಶಿ, ಅವಳ ಪತಿ ಬಹಳ ಒತ್ತಾಯಿಸಿ, ಪವಿತ್ರಾಳಿಗೂ ಒಂದು ಬಾಳು ಬೇಕು ಎಂದು ತಿಳಿಹೇಳಿದರು. ತನ್ನ ಜೀವನವನ್ನು ಮತ್ತೆ ಮತ್ತೆ ವಿಶ್ಲೇಷಿಸಿಕೊಂಡ ಪವಿತ್ರಾ, ಶೇಖರನೊಡನೆ ಏಕಾಂತದಲ್ಲಿ ಮಾತನಾಡುವುದಾಗಿ ಹೇಳಿದಳು.
ಶಶಿ ತಾನೇ ಶೇಖರನನ್ನು ಆಹ್ವಾನಿಸಿ, ಪವಿತ್ರಾಳನ್ನು ಪರಿಚಯಿಸಿ, ಇಬ್ಬರಿಗೂ ಸಜ್ಜಿ ಬಜ್ಜಿ, ಕಾಫಿ ತಂದಿರಿಸಿ ಏಕಾಂತದಲ್ಲಿ ಮಾತನಾಡಲು ಅನುವು ಮಾಡಿಕೊಟ್ಟು ಹೊರಟಳು. ಪವಿತ್ರಾಳ ಸಾತ್ವಿಕ ಅಲಂಕಾರ, ಅವಳ ಬದುಕಿನ ಹೋರಾಟ ಅರಿತಿದ್ದ ಶೇಖರ್, ತನ್ನ ಕಥೆ ಮತ್ತೆ ಹೇಳಿಕೊಂಡ. ತನ್ನ ಮಕ್ಕಳ ಸಲುವಾಗೇ ಮದುವೆ ಆಗುತ್ತಿದ್ದೇನೆಂದು ಒತ್ತಿ ಹೇಳಿದ.
ತನಗೆ ಈಗಾಗಲೇ ಮೆನೋಪಾಸ್ ಆಗಿರುವುದರಿಂದ ತಾನು ಲೈಂಗಿಕ ಜೀವನಕ್ಕೆ ಒತ್ತು ಕೊಡಲಾರೆ ಎಂದು ನೇರವಾಗಿಯೇ ಪವಿತ್ರಾ ಹೇಳಿದಳು. ತನಗೆ ಮಾನಸಿಕ ಬೆಂಬಲ ನೀಡುವ ಸಂಗಾತಿ ಮಾತ್ರವೇ ಬೇಕೆಂದು ನುಡಿದ ಶೇಖರ್, ಅವಳನ್ನು ಸರಳವಾಗಿ ಮದುವೆಯಾಗಲು ಒಪ್ಪಿದ. ಮುಂದೆ ಮಕ್ಕಳನ್ನು ಪರಿಚಯಿಸಿ, ಅಮ್ಮನಿಗೂ ತೋರಿಸಿದ. ಪವಿತ್ರಾ ಅವನ ತಾಯಿಯ ಅಸಹಾಯಕತೆ ಅರಿತು, ಅವರ ಮನೆಗೆ ಬೆಳಕಾಗಲು ಒಪ್ಪಿಗೆ ನೀಡಿದಳು.
ಅಕ್ಕನ ಮದುವೆ ಸುದ್ದಿ ತಿಳಿದ ತಮ್ಮ, ತಂಗಿ ಹೌಹಾರಿದರು. ಈ ವಯಸ್ಸಿನಲ್ಲಿ ಎಂಥ ಮದುವೆ? ಆಸರೆ ಬೇಕಿದ್ದರೆ ತಮ್ಮ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕೆಂದು ದಬಾಯಿಸಿದರು. ತನಗೆ ಈಗ ಬೇಕಿರುವುದು ಆಸರೆಯಲ್ಲ, ಜೀವನ ಮುನ್ನಡೆಸಲು ಸಂಗಾತಿ ಎಂದು ಅವಳು ಒತ್ತಿ ನುಡಿದಳು. ಬದುಕಿನ ಹೋರಾಟದಲ್ಲಿ ಸೋತು ಸೊಪ್ಪಾಗಿದ್ದ ಪವಿತ್ರಾ ಮುಂದೆ ಬಾಳಿ ಬದುಕಲು ನಿರ್ಧರಿಸಿದ್ದಳು. `ನಾನೂ ಬಾಳಬೇಕು!’ ಎಂಬ ಅವಳ ಆಸೆ ಮುಂದೆ ಅವರು ತಲೆ ಬಾಗಿದರು.