ದಿವ್ಯಾಳಂಥ ಆಧುನಿಕ ಮನೋಭಾವ ಸ್ಟೈಲಿಶ್ ಫ್ಯಾಷನೆಬಲ್ ಹುಡುಗಿಗೆ ಆ ಸಾಧಾರಣ ರೂಪಿನ, ಆದರೆ ಅತಿ ಗಂಭೀರ ಸ್ವಭಾವದ ಹುಡುಗ ಶಶಾಂಕ್ ಅಷ್ಟೇನೂ ಹೊಂದುವಂತಿರಲಿಲ್ಲ. ಆಕಸ್ಮಿಕವಾಗಿ ಆದ ಭೇಟಿ ದೊಡ್ಡ ಪ್ರೇಮದ ಕಾರಂಜಿಯನ್ನೇನೂ ಚಿಮ್ಮಿಸಿರಲಿಲ್ಲ, ಆದರೆ ಆ ತರುಣನಲ್ಲಿ ಅರಿಯದ ಅದೇನೋ ಆಕರ್ಷಣೆ ಇದೆ ಎಂಬುದನ್ನಂತೂ ಅವಳು ಒಪ್ಪಿದ್ದಳು. ಜೀವನದಲ್ಲಿ ಇಂದು ನಾವು ಯಾವ ಯಾವುದನ್ನು ಒಲ್ಲೆ ಎನ್ನುತ್ತೇವೋ ಮುಂದೆ ಅದೇ ಮತ್ತೆ ಮತ್ತೆ ಬೇಕೆನಿಸುವಂತೆ ಆಗಲೂಬಹುದು.
ಆಗ ತಾನೇ ಎಂ.ಬಿ.ಎ ಮುಗಿಸಿ ದಿವ್ಯಾ ಕೆಲಸದ ಹುಡುಕಾಟದಲ್ಲಿದ್ದಳು. ಅವಳ ತಂದೆ ಹೋಮಿಯೋಪಥಿ ವೈದ್ಯರು. ಬೆಂಗಳೂರಿನಲ್ಲಿ ಅವರಿಗೆ ಅಪಾರವಾದ ಬೇಡಿಕೆ ಇತ್ತು. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು, ನಿವೃತ್ತರಾದ ನಂತರ ತಮ್ಮದೇ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದರು. ಅವರನ್ನು ಹುಡುಕಿಕೊಂಡು ಬೆಂಗಳೂರಿನ ಅಕ್ಕಪಕ್ಕದಿಂದಲೂ ರೋಗಿಗಳು ಬರುತ್ತಲೇ ಇದ್ದರು.
ಹೀಗಿರುವಾಗ ಒಂದು ದಿನ ರೋಗಿಗಳು ತುಸು ಕಡಿಮೆ ಇದ್ದ ದಿನ, ಒಬ್ಬ ಸಾಧಾರಣ ಮೈಕಟ್ಟಿನ, ಸುಮಾರಾದ ರಂಗುರೂಪಿನ ತುಸು ಎತ್ತರದ ತರುಣನೊಬ್ಬ ಅವರನ್ನು ಹುಡುಕಿಕೊಂಡು ಅಂದಿನ ಕೊನೆಯ ರೋಗಿಯಾಗಿ ಬಂದಿದ್ದ. 26 ವರ್ಷದವನಿರಬಹುದಾದ ಆ ತರುಣ ಸಹನೆಯಿಂದ ತನ್ನ ಸರದಿಗಾಗಿ ಕಾಯುತ್ತಿದ್ದ. ಕೆಳಗೆ ಕ್ಲಿನಿಕ್ ಹೊಂದಿದ್ದ ರಾಯರು ಮೇಲುಗಡೆ 2 ರೂಮುಗಳ ಸುಮಾರಾದ ಮನೆಯನ್ನು ಹೊಂದಿದ್ದರು.
ಆ ದಿನ ದಿವ್ಯಾಳಿಗೆ ಯಾವುದೋ ಒಂದು ಇಂಟರ್‌ವ್ಯೂ ಅಟೆಂಡ್ ಮಾಡಬೇಕಿತ್ತು. ಅವಳು ಮನೆಗೆ ಬೀಗ ಹಾಕಿ ಅಪ್ಪಾಜಿಗೆ ಕೀ ಕೊಟ್ಟು ಹೊರಡೋಣ ಎಂದು ಕೆಳಗಿನ ಕ್ಲಿನಿಕ್‌ಗೆ ಬಂದಳು. ಇವನು ತನ್ನ ಸರದಿಯಲ್ಲಿ ಕುಳಿತು ಕಾಯುತ್ತಿದ್ದುದನ್ನು ಓರೆಗಣ್ಣಿನಿಂದ ಗಮನಿಸಿದಳು. ಅವಳು ತನ್ನ ಕೆಲಸ ಪೂರೈಸಲು ನೇರ ತಂದೆಯ ಮೇಜಿನ ಬಳಿ ಬಂದಳು.
ಅಂತೂ ಎಲ್ಲರ ಸರದಿ ಮುಗಿದು ಈತನ ಸರದಿ ಬಂದಿತ್ತು. ಅವಳಿನ್ನೂ ತಂದೆ ಬಳಿ ಮಾತು ಮುಗಿಸಿರಲಿಲ್ಲ, ಇವನು ಒಳಗೆ ಬಂದಿದ್ದ. ಡಾಕ್ಟರ್‌ಗೆ ಪರಿಚಿತ ಎನಿಸುತ್ತದೆ, ಅವರು ಪರಿಚಿತ ನಗೆ ಬೀರಿ, ಆದರದಿಂದ ಬರಮಾಡಿಕೊಂಡು ಕೂರಿಸಿಕೊಂಡರು. ಹೊರಡಲಿದ್ದ ಮಗಳನ್ನು ತಡೆದು ಪರಿಚಯಿಸಿದರು, ``ಅಮ್ಮ ದಿವ್ಯಾ, ಇವರು ಶಶಾಂಕ್. ನಮ್ಮ ಬೆಂಗಳೂರಿನ ಹೊರವಲಯದ ಈ ದೂರ ಪ್ರದೇಶಕ್ಕೆ ಹೊಸದಾಗಿ ರೈಲ್ವೆ ಸ್ಟೇಷನ್ ಮಾಸ್ಟರ್ ಆಗಿ ಬಂದಿದ್ದಾರೆ. ಇದೇ ಇವರ ಮೊದಲ ಪೋಸ್ಟಿಂಗ್ ಅಂತೆ. ಇವರ ಮನೆ ದೂರದ ತುಮಕೂರಿನಲ್ಲಿದೆ, ಇಲ್ಲಿ ಒಬ್ಬರೇ ಬ್ಯಾಚುಲರ್ ಆಗಿದ್ದಾರೆ. ಇಲ್ಲಿಗೆ ಬಂದು ಹೋಗುತ್ತಿರುತ್ತಾರೆ. ಅವರಿಗೇನಾದರೂ ಅಗತ್ಯದ ಸಹಾಯ ಬೇಕಾದರೆ ನೋಡಮ್ಮ......''
``ಆಯ್ತು ಅಪ್ಪಾಜಿ.''
``ನೀನೂ ರೈಲಿನಲ್ಲಿ ಇಲ್ಲಿಂದ ಯಲಹಂಕ ಸ್ಟೇಷನ್‌ಗೆ ಹೋಗಿ, ಅಲ್ಲಿಂದ ಬದಲಾಯಿಸಿ ಕಾಲೇಜಿಗೆ ಹೊರಡುವವಳಲ್ಲವೇ? ಈಗ ಕಾಲೇಜು ಮುಗಿದರೂ ಸಿಟಿ ಓಡಾಟಕ್ಕೆ ರೈಲ್ವೆ ಪಾಸ್ ಬೇಕಲ್ಲವೇ? ಇವರು ಸ್ಟೇಷನ್ ಮಾಸ್ಟರ್ ಆದ್ದರಿಂದ ಬೇಗ ಫಾರ್ಮ್ ತುಂಬಿಸಿ, ಸ್ಟಾಂಪ್ ಸೈಜ್ ಫೋಟೋ, ಹಣ ನೇರ ಇವರ ಕೈಗೆ ಕೊಟ್ಟುಬಿಡು. ಮಾರನೇ ದಿನ ನಿನ್ನ ಪಾಸ್ ರೆಡಿ. ಏನಂತೀರಿ ಶಶಾಂಕ್?''