ಚಳಿಗಾಲದಲ್ಲಿ ನೀವು ಯಥೇಚ್ಛವಾಗಿ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಅವಧಿಯಲ್ಲಿ ಪಚನ ವ್ಯವಸ್ಥೆ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಈ ಅವಧಿಯಲ್ಲಿ ಡ್ರೈಫ್ರೂಟ್ಸ್ ಹಾಗೂ ನಟ್ಸ್ ನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸಿಕೊಳ್ಳಬಹುದು. ಹೆಚ್ಚಿನ ಆಹಾರ ಸೇವನೆಯಿಂದ ಈ ದಿನಗಳಲ್ಲಿ ಸಾಕಷ್ಟು ವ್ಯಾಯಾಮ ಮಾಡುವ ಅವಶ್ಯಕತೆ ಉಂಟಾಗುತ್ತದೆ. ಆರೋಗ್ಯ ಪ್ರಜ್ಞೆಯಿಂದಿರುವ ಯುವ ಜನಾಂಗದವರಿಗೆ ಈ ಕಾಲ ಸವಾಲಿನಿಂದ ಕೂಡಿದುದಾಗಿರುತ್ತದೆ. ಚಳಿಗಾಲದಲ್ಲಿ ವ್ಯಾಯಾಮ ಮಾಡಿ ದೇಹವನ್ನು ಶಕ್ತಿಯುತಗೊಳಿಸುವುದು ಅತ್ಯವಶ್ಯಕ. ಜೊತೆಗೆ ನೀವು ಸೇವಿಸುವ ಆಹಾರ ಹೇಗಿರಬೇಕೆಂದರೆ, ಅದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೂ ದೇಹಕ್ಕೆ ಪರಿಪೂರ್ಣ ಕ್ಯಾಲೋರಿ ದೊರಕಬೇಕು.
ಚಳಿಗಾಲದ ಡಯೆಟ್ : ಈ ಹವಾಮಾನದಲ್ಲಿ ದೇಹದಲ್ಲಿನ ದಣಿವು ಹಾಗೂ ಆಲಸ್ಯ ದೂರಗೊಳಿಸಲು, ದಿನವಿಡೀ ಸ್ಛೂರ್ತಿ ಹಾಗೂ ಶಕ್ತಿ ಕಾಯ್ದುಕೊಂಡು ಹೋಗಲು ಯುವಜನರು ಡಯೆಟ್ ಚಾರ್ಟ್ ಮೇಲೆ ಗಮನಹರಿಸಬೇಕು. ದೇಹಕ್ಕೆ ಶಕ್ತಿ ದೊರಕುವಂತಹ ಹಾಗೂ ಚುರುಕಿನಿಂದ ಇರಲು ಸಾಧ್ಯವಾಗುವಂತಹ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು.
ಬ್ರೇಕ್ ಫಾಸ್ಟ್ : ಬೆಳಗಿನ ಉಪಾಹಾರ ಶಕ್ತಿಯುತ ಆಗಿರಬೇಕು. ಉಪಾಹಾರದಲ್ಲಿ ಮೊಟ್ಟೆಯೊಂದಿಗೆ, ಉಪ್ಪಿಟ್ಟು, ಸ್ಯಾಂಡ್ ವಿಚ್, ದೋಸೆ ಮುಂತಾದವುಗಳನ್ನು ಸೇವಿಸಿ. ಪ್ರತಿದಿನ ಉಪಾಹಾರದ ಬಳಿಕ ಕೆನೆರಹಿತ 1 ಗ್ಲಾಸ್ ಬಿಸಿ ಹಾಲು ಕುಡಿಯಲು ಮರೆಯಬೇಡಿ. ಇವೆಲ್ಲದರ ಜೊತೆಗೆ 1 ಪ್ಲೇಟ್ ಫ್ರೂಟ್ಸ್ ಅಥವಾ ವೆಜಿಟೆಬಲ್ ಸಲಾಡ್ ನಿಮ್ಮ ಉಪಾಹಾರವನ್ನು ಪರಿಪೂರ್ಣಗೊಳಿಸುತ್ತವೆ. ಉಪಾಹಾರ ಸ್ವಲ್ಪ ಭಾರ ಎನಿಸಿದರೂ ತಪ್ಪೇನಿಲ್ಲ.
ಮಧ್ಯಾಹ್ನಕ್ಕೆ : ಊಟದಲ್ಲಿ ಹಸಿರು ತರಕಾರಿಗಳು, ಚಪಾತಿ, ತಾಜಾ ಮೊಸರು ಇಲ್ಲವೇ ಮಜ್ಜಿಗೆ, ಸಿಪ್ಪೆ ಸಹಿತ ಧಾನ್ಯಗಳು, ಅನ್ನ, ಸೂಪ್ ಹಿತಕರವಾಗಿರುತ್ತದೆ. ಊಟದಲ್ಲಿ ಹಸಿರು ಚಟ್ನಿ ಆಹಾರದಲ್ಲಿನ ಮಲ್ಟಿ ವಿಟಮಿನ್‌ನ ಕೊರತೆಯನ್ನು ನೀಗಿಸುತ್ತದೆ.
ಡೆಲೀಶಿಯಸ್ ಡಿನ್ನರ್ : ಚಳಿಗಾಲದ ರಾತ್ರಿಯಲ್ಲಿ ಬೇಗ ಆಹಾರ ಸೇವನೆ ಮಾಡಿ. ಮಧ್ಯಾಹ್ನಕ್ಕಿಂತ ರಾತ್ರಿಯ ಊಟ ಭಾರ ಎನಿಸದಂತೆ ನೋಡಿಕೊಳ್ಳಿ. ಅನ್ನ ಬೇಳೆ ಸೇವಿಸಬಹುದು. ಮಲಗುವ ಮುಂಚೆ 2-3 ಗಂಟೆ ಪೂರ್ವ ಊಟ ಮುಗಿಸಿ. ಮಲಗುವ ಮುಂಚೆ ಅರಿಶಿನ ಅಥವಾ ಶುಂಠಿ ಬೆರೆಸಿದ 1 ಗ್ಲಾಸ್ ಬಿಸಿ ಹಾಲು ಕುಡಿಯಿರಿ.
ನಿರೋಗಿಯಾಗಿರುವ ಟಿಪ್ಸ್
ಕೆಲವು ಸುಲಭ ಹಾಗೂ ಮನೆ ಉಪಾಯಗಳನ್ನು ಅನುಸರಿಸುವುದರ ಮೂಲಕ ನಾವು ಆರೋಗ್ಯದಿಂದಿರಬಹುದು. ಚಳಿಗಾಲ ಶುರುವಾಗುತ್ತಿದ್ದಂತೆ ಕೆಮ್ಮು, ಶೀತ ಹಾಗೂ ನೆಗಡಿ ಬರಬಹುದು. ಸಾಮಾನ್ಯವಾಗಿ ಜನರು ರೋಗ ಬಂದ ಬಳಿಕ ತಮ್ಮ ಆಹಾರ ಹಾಗೂ ಇತರೆ ಚಟುವಟಿಕೆಗಳಲ್ಲಿ ಬದಲಾವಣೆ ತಂದುಕೊಳ್ಳಲು ನೋಡುತ್ತಾರೆ. ರೋಗ ಬರುವ ಮುನ್ನವೇ ಹವಾಮಾನಕ್ಕನುಸಾರ ಆಹಾರ ಸೇವನೆ ಮಾಡಬೇಕು. ಏಕೆಂದರೆ ಚಳಿಗಾಲದಲ್ಲಿ ದೇಹ ಆರೋಗ್ಯದಿಂದ ಇರಬೇಕು ಹಾಗೂ ನಿರೋಗಿ ಆಗಿರಬೇಕು.
ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸು ವಿಧಾನಗಳು ಬಹು ಸುಲಭವಾಗಿವೆ. ಸಾಕಷ್ಟು ನಿದ್ರೆ ಮಾಡಿರಿ ಹಾಗೂ ಆಹಾರ ವಿಧಾನವನ್ನು ಸರಿಯಾಗಿಟ್ಟುಕೊಳ್ಳಿ. ಚಳಿಗಾಲದಲ್ಲಿ ಬೇರೆ ಬೇರೆ ಪ್ರಕಾರದ ಪೋಷಕಾಂಶಗಳು ಹಾಗೂ ಗಿಡಮೂಲಿಕೆಗಳ ಸೇವನೆಯಿಂದ ನಿಮ್ಮನ್ನು ನೀವು ಆರೋಗ್ಯಕರ ಹಾಗೂ ಹಲವು ಬಗೆಯ ವೈರಾಣು ರೋಗಗಳಿಂದ ರಕ್ಷಿಸಿಕೊಳ್ಳಬಹುದು. ಈ ಹವಾಮಾನದಲ್ಲಿ ದೇಹವನ್ನು ಬೆಚ್ಚಗಿಡುವಂತಹ ಆಹಾರಗಳ ಅವಶ್ಯಕತೆ ಇರುತ್ತದೆ. ಒಂದು ವೇಳೆ ನಿಮಗೆ ಆಸ್ತಮಾ, ಮಧುಮೇಹ, ಅತಿರಕ್ತದೊತ್ತಡದಂತಹ ಸಮಸ್ಯೆಗಳಿದ್ದರೆ, ಚಳಿಗಾಲದಲ್ಲಿ ನಿಮ್ಮ ಆಹಾರದ ಬಗ್ಗೆ ವಿಶೇಷ ಗಮನಕೊಡಿ. ಚಳಿಗಾಲದಲ್ಲಿ ಆರೋಗ್ಯದಿಂದಿರಲು ನಿಮ್ಮ ಆಹಾರದಲ್ಲಿ ವಿಶೇಷ ಪ್ರಕಾರದ ಹಣ್ಣುಗಳು ಹಾಗೂ ತರಕಾರಿಗಳನ್ನು ಬಳಸಿ ರೋಗಗಳಿಂದ ದೂರ ಇರಬಹುದಾಗಿದೆ.
ಚಳಿಗಾಲದಲ್ಲಿ ಆರೋಗ್ಯದಿಂದಿರಲು ನೆರವಾಗುವ ಕೆಲವು ಪದಾರ್ಥಗಳ ಬಗ್ಗೆ ತಿಳಿದುಕೊಳ್ಳಿ :
ತರಕಾರಿಗಳನ್ನು ಸೇವಿಸಿ : ಚಳಿಗಾಲದಲ್ಲಿ ಹಸಿರು ತರಕಾರಿಗಳನ್ನು ಆಹಾರದಲ್ಲಿ ಅವಶ್ಯವಾಗಿ ಸೇರಿಸಿಕೊಳ್ಳಿ. ಏಕೆಂದರೆ ಅವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ಸ್ ಇರುತ್ತವೆ. ಅವು ದೇಹವನ್ನು ಬಿಸಿಯಾಗಿಡಲು ಹಾಗೂ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತವೆ. ಪಾಲಕ್ ಸೊಪ್ಪು, ಬೀಟ್ ರೂಟ್, ಎಲೆಕೋಸು, ಕ್ಯಾರೆಟ್ ಮುಂತಾದವುಗಳನ್ನು ಸೇವಿಸಿ.
ಶೇಂಗಾಕಾಳು ತಿನ್ನಿ ಫಿಟ್ ಆಗಿರಿ : ಚಳಿಗಾಲದಲ್ಲಿ ಶೇಂಗಾಕಾಳುಗಳನ್ನು ಅವಶ್ಯ ಸೇವಿಸಿ. ಏಕೆಂದರೆ ಅದರಲ್ಲಿ ಪ್ರೋಟೀನ್, ವಿಟಮಿನ್, ನಾರಿನಂಶ, ಮಿನರಲ್ಸ್, ಕಬ್ಬಿಣಾಂಶ ಹೇರಳ ಪ್ರಮಾಣದಲ್ಲಿರುತ್ತವೆ. ಹೀಗಾಗಿಯೇ ಇದನ್ನು `ಬಡವರ ಬಾದಾಮಿ’ ಎಂದು ಹೇಳಲಾಗುತ್ತದೆ. ಚಳಿಯ ದಿನಗಳಲ್ಲಿ ದೇಹವನ್ನು ಬಿಸಿಯಾಗಿಡಲು ಹಾಗೂ ರಕ್ತದ ಪ್ರಮಾಣ ಹೆಚ್ಚಿಸಲು ಶೇಂಗಾಕಾಳು ಹಾಗೂ ದೇಶಿ ಬೆಲ್ಲ ಸೇವಿಸಿ.
ಶೀತದಿಂದ ರಕ್ಷಿಸುವ ಬೆಳ್ಳುಳ್ಳಿ : ಚಳಿಗಾಲದಲ್ಲಿ ನಿಯಮಿತವಾಗಿ ಬೆಳ್ಳುಳ್ಳಿ ಸೇವನೆ ಶೀತ, ನೆಗಡಿ ಹಾಗೂ ಕೊಬ್ಬಿನಿಂದ ರಕ್ಷಿಸುತ್ತದೆ.
ಎಳ್ಳನ್ನು ತಿನ್ನಿ : ಚಳಿಯ ದಿನಗಳಲ್ಲಿ ಎಳ್ಳಿನ ಸೇವನೆಯಿಂದ ದೇಹಕ್ಕೆ ಶಕ್ತಿ ದೊರಕುತ್ತದೆ. ಎಳ್ಳೆಣ್ಣೆಯಿಂದ ದೇಹಕ್ಕೆ ಮಸಾಜ್‌ಮಾಡುವುದರಿಂದ ತ್ವಚೆ ಮೃದುವಾಗಿರುತ್ತದೆ ಹಾಗೂ ಚಳಿಯಿಂದ ರಕ್ಷಣೆಯೂ ದೊರಕುತ್ತದೆ. ಎಳ್ಳು ಹಾಗೂ ಬೆಲ್ಲವನ್ನು ಜೊತೆ ಜೊತೆಗೆ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರಕುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಕೆಮ್ಮು ಕಫದಿಂದಲೂ ಮುಕ್ತಿ ದೊರಕುತ್ತದೆ.
ಕ್ಯಾರೆಟ್ ಸೇವನೆ ಉಪಯುಕ್ತ : ಕ್ಯಾರೆಟ್‌ನಲ್ಲಿ ವಿಟಮಿನ್ ಪ್ರಮಾಣ ಹೇರಳವಾಗಿರುತ್ತದೆ. ಹೀಗಾಗಿ ರೋಗನಿರೋಧಕ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಕಣ್ಣುಗಳು ಕೂಡ ಆರೋಗ್ಯದಿಂದ ಇರುತ್ತವೆ. ಚಳಿಯ ದಿನಗಳಲ್ಲಿ ಕ್ಯಾರೆಟ್‌ನ ಸೇವನೆಯಿಂದ ದೇಹದಲ್ಲಿ ಬಿಸಿ ಹಾಗೆಯೇ ಉಳಿಯುತ್ತದೆ.
ಸಜ್ಜೆಯ ಸೇವನೆ ಉಪಯುಕ್ತ : ಚಳಿಗಾಲದಲ್ಲಿ ಸಜ್ಜೆಯ ರೊಟ್ಟಿಗಳನ್ನು ತಿನ್ನಲಾಗುತ್ತದೆ. ಅದು ಉಷ್ಣ ಪ್ರವೃತ್ತಿಯ ಧಾನ್ಯ. ಅದರಲ್ಲಿ ಮೆಗ್ನಿಶಿಯಂ, ಕ್ಯಾಲ್ಶಿಯಂ, ನಾರಿನಂಶ, ವಿಟಮಿನ್ಸ್ ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್ ಹೇರಳ ಪ್ರಮಾಣದಲ್ಲಿರುತ್ತವೆ.
ರೋಗನಿರೋಧಕ ಶಕ್ತಿಗೆ ಅರಿಶಿನ : ಚಳಿಗಾಲದಲ್ಲಿ ಅರಿಶಿನಯುಕ್ತ ಹಾಲು ಸೇವನೆಯಿಂದ ವ್ಯಕ್ತಿ ಆರೋಗ್ಯದಿಂದಿರುತ್ತಾನೆ. ಅದರಲ್ಲಿ ಆ್ಯಂಟಿಬಯಾಟಿಕ್ ಗುಣಗಳ ಜೊತೆಗೆ ಆ್ಯಂಟಿ ಅಲರ್ಜಿಕ್ ಮತ್ತು ಆ್ಯಂಟಿ ಇನ್‌ಫ್ಲೆಮೇಟರಿ ವಿಶೇಷ ಗುಣಗಳು ಇರುತ್ತವೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಉಪಯುಕ್ತ ಆಯುರ್ವೇದಿಕ್ ಔಷಧಿಯಾಗಿದೆ.
ಮೆಂತ್ಯದ ಸೇವನೆ : ಮೆಂತ್ಯದಲ್ಲಿ ವಿಟಮಿನ್‌ಗಳ ಜೊತೆಗೆ ಕಬ್ಬಿಣಾಂಶ ಹಾಗೂ ಫಾಲಿಕ್ ಆ್ಯಸಿಡ್‌ಗಳಿರುತ್ತವೆ. ದೇಹವನ್ನು ಬಿಸಿಯಾಗಿಡಲು ನೆರವಾಗುವುದರ ಜೊತೆಗೆ ದೇಹದಲ್ಲಿ ರಕ್ತ ಹೆಚ್ಚಿಸಲು ಕೂಡ ಇದು ಉಪಯುಕ್ತವಾಗಿದೆ.
ಬಾದಾಮಿಯ ಉಪಯುಕ್ತ ಗುಣ : ಬಾದಾಮಿಯಲ್ಲಿ ಪ್ರೋಟೀನ್, ನಾರಿನಂಶ ಹಾಗೂ ಮಿನರಲ್ಸ್ ಹೇರಳ ಪ್ರಮಾಣದಲ್ಲಿ ಇರುವುದರಿಂದ ಇದು ಚಳಿಗಾಲದ ರೋಗಗಳಿಂದ ರಕ್ಷಣೆ ದೊರಕಿಸಿ ಕೊಡುತ್ತದೆ. ಅದನ್ನು ನಿಯಮಿತವಾಗಿ ಸೇವಿಸುವುದರಿಂದ ಮೆದುಳು ಚುರುಕಾಗುತ್ತದೆ. ಜೊತೆಗೆ ಮಲಬದ್ಧತೆಯ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
ಹಣ್ಣುಗಳಿಂದ ಪೋಷಣೆ ಶಕ್ತಿ : ಕಿತ್ತಳೆ, ಸೇಬು, ದಾಳಿಂಬೆ, ನೆಲ್ಲಿಕಾಯಿ ಮುಂತಾದವುಗಳನ್ನು ಚಳಿಗಾಲದಲ್ಲಿ ಸೇವಿಸುವುದು ಹಿತಕರ. ಇವು ದೇಹಕ್ಕೆ ಪೋಷಣೆ ಶಕ್ತಿ ಹಾಗೂ ಬಿಸಿ ಉತ್ಪನ್ನ ಮಾಡುತ್ತವೆ. ಹಣ್ಣಿನ ರಸ ಸೇವಿಸುವುದಕ್ಕಿಂತ ನೇರವಾಗಿ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಅದರಿಂದ ಪಚನಶಕ್ತಿ ಸರಿಯಾಗಿರುತ್ತದೆ. ಜೊತೆಗೆ ನಾರಿನಂಶ ಹೇರಳವಾಗಿ ದೊರಕುತ್ತದೆ.
ಚ್ಯವನ್ ಪ್ರಾಶ್ ಸೇವಿಸಿ : ಚಳಿಗಾಲದಲ್ಲಿ ಚ್ಯವನ್ ಪ್ರಾಶ್ ಸೇವನೆ ಒಳ್ಳೆಯದು. ಬೆಳಗ್ಗೆ ಸಂಜೆ 1-1 ಚಮಚ ಬಿಸಿ ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
– ಸುಚಿತ್ರಾ ಸುರೇಶ್