ಅದು ನನ್ನ ಗೆಳತಿ ಪೂಜಾಳ ಮದುವೆ ಸಂದರ್ಭ. ನಮ್ಮ ಸಹಪಾಠಿಗಳಲ್ಲಿ ಅವಳು ಮಹಾಕುಳ್ಳಿ, ಅವಳದು ಕೇವಲ 5 ಅಡಿ, ವರ ಮಹಾಶಯ 6 ಆಡಿ! ಲಗ್ನಪತ್ರಿಕೆ ದಿನ ನಾವೆಲ್ಲರೂ ಈ ಜೋಡಿ ಅಮಿತಾಭ್‌ ಜಯಾ ತರಹ ಅಂತ ಚೆನ್ನಾಗಿ ರೇಗಿಸಿದೆ!

ಅಂತೂ ಮದುವೆ ದಿನ ಬಂದೇಬಿಟ್ಟಿತು. ವಧೂವರರು ಹೂವಿನ ಹಾರ ಬದಲಾಯಿಸುವ ಸಂದರ್ಭ. ವರನ ಗೆಳೆಯರು ಬೇಕೆಂದೇ ರೇಗಿಸಲು, ವಧು ಹಾರ ಹಾಕಲು ಪ್ರಯತ್ನಿಸುವಾಗ ತಲೆ ಬಾಗಿಸಬಾರದು ಎಂದು ವರನಿಗೆ ತಾಕೀತು ಮಾಡಿದರು. ಆ ಫಜೀತಿಯ ಸಂದರ್ಭ ನೋಡಬೇಕಿತ್ತು. ಆ ಕಡೆಯವರಿಗೆ ನಗು, ಹುಡುಗಿ ಕಡೆಯವರಿಗೆ ಧರ್ಮಸಂಕಟ.

ಆಗ ಪೂಜಾಳ ಅತ್ತಿಗೆ ಅವಳ ಕಿವಿಯಲ್ಲಿ ಏನೋ ಗುಸುಗುಸು ಹೇಳಿದರು. ಗೆಳೆಯರ ಗಲಾಟೆಯಲ್ಲಿ ಮುಳುಗಿದ್ದ ವರನಿಗೆ ಅದೇನೂ ಗಮನಕ್ಕೆ ಬರಲಿಲ್ಲ. ಮರುಕ್ಷಣದಲ್ಲಿ ವಧು ಪೂಜಾ ತಲೆ ಸುತ್ತಿ ಬಿದ್ದಳು. ಅಯ್ಯೋ…. ಎನ್ನುತ್ತಾ ವರ ಬಾಗಿ ಅವಳನ್ನು ಹಿಡಿದುಕೊಳ್ಳಲು ಯತ್ನಿಸಿದ. ಇದೇ ಸದವಕಾಶ ಎಂದು ಕುಳ್ಳಿ ಪೂಜಾ ತಕ್ಷಣ ಅವನ ಕೊರಳಿಗೆ ಮಾಲೆ ಹಾಕಿಯೇಬಿಟ್ಟಳು!

ಇದೀಗ ದೃಶ್ಯ ಬದಲಾಗಿತ್ತು. ಹುಡುಗಿ ಕಡೆಯರೆಲ್ಲ ಜೋರು ಜೋರಾಗಿ ಚಪ್ಪಾಳೆ ತಟ್ಟಿ ನಗತೊಡಗಿದರು. `ಹ್ಞೂಂ…..ಹ್ಞೂಂ….. ಈಗಿನಿಂದಲೇ  ಹೆಂಡತಿ ಎದುರು ತಲೆ ತಗ್ಗಿಸು!’ ಎಂದು ಯಾರೋ ವರನ ಕಡೆಯ ಅಜ್ಜಿ ಹೇಳಿದಾಗ ಹೋ ಎಂದು ನಗುವಿನ ಅಲೆ ಎದ್ದಿತು. ಅವರಿಬ್ಬರ ಆದರ್ಶ ದಾಂಪತ್ಯ ಇತರರಿಗೆ ಇಂದಿಗೂ ಮಾದರಿಯಾಗಿದೆ. ಎಲ್ಲ ಅಜ್ಜಿಯ ಆಶೀರ್ವಾದ!

ವಿ. ಸ್ಮೃತಿ, ಸಾಗರ.

 

ನನ್ನ ತಾಯಿಯ ಇಬ್ಬರು ಸೋದರ ಮಾವಂದಿರು ಒಟ್ಟಾಗಿ ವಾಸಿಸುತ್ತಿದ್ದರು. ಹೀಗಾಗಿ ಇಬ್ಬರದೂ ಜಾಯಿಂಟ್‌ ಫ್ಯಾಮಿಲಿ. ಹಿರಿ ಮಾಮನ ಮಗ, ಮಗಳು ಹಾಗೂ ಕಿರಿ ಮಾಮನ ಮಗ… ಹೀಗೆ ಮೂವರ ಮದುವೆ ಒಟ್ಟಿಗೆ ಒಂದೇ ಛತ್ರದಲ್ಲಿ ಎಂದು ನಿಷ್ಕರ್ಷೆ ಆಯಿತು. ಆ ಇಡೀ ಕುಟುಂಬದ ಸಡಗರ, ಸಂಭ್ರಮ ಹೇಳತೀರದು.

ಒಂದು ಮದುವೆಯ ತಯಾರಿಯೇ ಅಷ್ಟು ಜೋರಾಗಿರುವಾಗ, ಇನ್ನು 3 ಮದುವೆಗಳ ತಯಾರಿ….. ಕೇಳಬೇಕೇ? ಸೋಜಿಗವೆಂದರೆ ಈ ವಮೂರೂ ಬೇರೆ ಊರಿನ ಒಂದೇ ಕುಟುಂಬದ ಕಸಿನ್ಸ್ ರನ್ನು ಮದುವೆ ಆಗುತ್ತಿದ್ದರು. ಒಟ್ಟಾರೆ ಈ ಊರಿನ ಕುಟುಂಬ, ಆ ಊರಿನ ಕುಟುಂಬ ಒಂದೇ ಕಡೆ ಮದುವೆ ಮಂಟಪದಲ್ಲಿ ಸಂಧಿಸುವಂತಾಯಿತು. ಎಲ್ಲರೂ ಮಂಟಪಕ್ಕೆ ಬಂದಾಗ, ಹಿರಿ ಸೋದರಮಾವನ ಹಿರಿಯ ಮಗ ಬಾಲಾಜಿ ಒಬ್ಬ ಹುಡುಗಿ ಜೊತೆ ಕೈ ಹಿಡಿದು ನಿಂತಿದ್ದು, ವಧು ಕಡೆಯವರಿಗೆ ಮಾತ್ರವಲ್ಲದೆ, ಎಲ್ಲರಿಗೂ ಗಾಬರಿ ತರಿಸಿತು. ಅವರಿಬ್ಬರದೂ ಲವ್ ಮ್ಯಾರೇಜ್‌ ಆಗಿಹೋಗಿತ್ತಂತೆ! ಅದನ್ನು ತಿಳಿದ ಎರಡೂ ಕಡೆಯ ಹಿರಿಯರು ಹೌಹಾರಿದರು.

ಆಗ ಬಾಲಾಜಿಯ ವಧು ಧೈರ್ಯವಾಗಿ ಮುಂದೆ ಬಂದು, ಸ್ವಲ್ಪ ಎದೆಗುಂದದೆ, ತಾನೂ ತನ್ನ ಸಹಪಾಠಿಯನ್ನು ಪ್ರೇಮಿಸುತ್ತಿರುವುದಾಗಿ ಅವನನ್ನೇ ಮದುವೆಯಗಲು ಒಪ್ಪಿಗೆ ಬೇಕೆಂದು ಕೋರಿಕೊಂಡಾಗ, ಎರಡೂ ಕಡೆ ಹಿರಿಯರು ಒಪ್ಪಿದರು. ಈ ರೀತಿ ಆ ಮದುವೆ ಮನೆಯಲ್ಲಿ ಶಾಸ್ತ್ರೋಕ್ತವಾಗಿ 3 ಜೋಡಿಗಳಿಗೆ ಬದಲಾಗಿ 4 ಜೋಡಿಗಳು ಹಸೆಮಣೆ ಏರಿದರು.

ಏನೇ ರಿಜಿಸ್ಟರ್ಡ್‌ ಮದುವೆ ಆಗಿದ್ದರೂ, ಸಂದರ್ಭ ಸಿಕ್ಕಿರುವಾಗ ಹಿರಿಯರೆಲ್ಲ ಸಾಂಪ್ರದಾಯಿಕವಾಗಿ, ಬಾಲಾಜಿ ಮದುವೆ ನಡೆಸಿದರು. ಆ ವಧು ಸುಜಾತಾ ಸಹ ತನ್ನಿಷ್ಟದ ಸಂಗಾತಿಯನ್ನೇ ವರಿಸುವಂತಾಯಿತು. ಇದು ಮರೆಯಲಾಗದ ಮದುವೆ!

ಭವ್ಯಾ, ತುಮಕೂರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ