ಇದು ನನ್ನ ಮದುವೆ ಫಿಕ್ಸ್ ಆಗಿದ್ದ ಕಾಲ. ಇವರೇ ನನ್ನನ್ನು ನೋಡಲು ಬಂದ ಮೊದಲ ವರ. ನಾವು 3 ಜನ ಹೆಣ್ಣುಮಕ್ಕಳಿದ್ದ ಕೆಳ ಮಧ್ಯಮ ವರ್ಗದ ಕುಟುಂಬ. ಅಜ್ಜಿ, ತಾತಾ, ಬಂದು ಹೋಗುವ ಅತ್ತೆಯರ ಬಸಿರು, ಬಾಣಂತನದ ಉಪಚಾರದಲ್ಲಿ ಅಪ್ಪನ ಗುಮಾಸ್ತಗಾರಿಕೆಯ ಅಲ್ಪ ಸಂಬಳದಲ್ಲೇ ಎಲ್ಲ ನಡೆಯಬೇಕಿತ್ತು. ಬಯಸಿದರೂ ಕೆಲಸಕ್ಕೆ ಹೋಗಲಾರದ ಸ್ಥಿತಿ ಅಮ್ಮನದು. ನಾನು ಹೈಸ್ಕೂಲಿಗೆ ಬರುವ ಹೊತ್ತಿಗೆ ತಂಗಿಯರೂ ಸ್ವಲ್ಪ ದೊಡ್ಡವರಾಗಿದ್ದರು. ಹೀಗಾಗಿ ಬಿಡುವಿದ್ದಾಗಲೆಲ್ಲ ಪೇಪರ್ ಕವರ್ ಮಾಡುವುದು, ಹೂ ಕಟ್ಟಿ ಮಾರುವುದು, ಅಮ್ಮ ಮಾಡುತ್ತಿದ್ದ ಚಟ್ನಿ ಪುಡಿ, ಖಾರದ ಪುಡಿಗಳನ್ನು ಕೇಳಿದವರಿಗೆ ಕೊಟ್ಟು ಬರುವುದು, ಸಂಜೆ ಹೊತ್ತು ಅಪ್ಪನ ಶೆಟ್ಟಿ ಅಂಗಡಿ ಗುಮಾಸ್ತೆಗಿರಿ ಹೀಗೆ ಅಂತೂ ಜೀವನ ಸಾಗುತ್ತಿತ್ತು. ನಾನು ಪಿಯುಸಿ ಸೇರಿದಾಗಿನಿಂದ 4 ಮಕ್ಕಳಿಗೆ ಪಾಠ ಹೇಳತೊಡಗಿದೆ. ನನ್ನ ತಂಗಿಯರು ಟೇಲರಿಂಗ್, ಕಸೂತಿಯಲ್ಲಿ ನುರಿತವರಾದರು.
ಹೀಗಿರುವಾಗ ಒಂದು ಕಡೆಯಿಂದ ಅನುಕೂಲಸ್ಥರ ಸಂಬಂಧ ಒದಗಿ ಬಂತು. ಅತ್ಯಂತ ಸರಳವಾಗಿ ವಧುಪರೀಕ್ಷೆ ನಡೆಯಿತು. ಬಜ್ಜಿ ರಹಿತ ಸಜ್ಜಿಗೆ, ನಿರಾಭರಣ ವಧು, ಬೆನ್ನಿಗೆ ನಿಂತ ತಂಗಿಯರು, ಶೀಟ್ ಮನೆ, ಇಬ್ಬರೇ ಗಂಡು ಮಕ್ಕಳಿದ್ದ ಅನುಕೂಲಸ್ಥರಾದ ವರನ ಕಡೆಯವರಿಗೆ ಹೆಚ್ಚಿಗೆ ಹೇಳುವ ಅಗತ್ಯವಿರಲಿಲ್ಲ. ಆದಷ್ಟು ಸರಳವಾಗಿ ಮದುವೆ ಮಾಡಿಕೊಡುವುದಾಗಿ ಅಮ್ಮ ಅಪ್ಪ ವಿನಂತಿಸಿಕೊಂಡರು. ವರನ ತಾಯಿ ತಂದೆಯರ ಮುಖದಲ್ಲಿ ಖಂಡಿತಾ ಸಂತೃಪ್ತಿ ಇರಲಿಲ್ಲ. ಈ ಸಂಬಂಧ ಆಗಿ ಬರುವುದಿಲ್ಲ ಎಂದೆನಿಸಿತು.
ಆದರೆ ನಮ್ಮವರಿಗೆ ನಾನು ಬಹಳ ಹಿಡಿಸಿದ್ದೆ. ಅವರು 1 ವಾರ ಬಿಟ್ಟು ನಮ್ಮ ಶಾಲೆ ಬಳಿ ಬಂದು ವಿಷಯ ತಿಳಿಸಿದರು. ಈ ಅತಿ ಸಾಧಾರಣ ಸಂಬಂಧ ಬೇಡ ಎಂದೇ ಹಿರಿಯರು ತಿರಸ್ಕರಿಸಿದ್ದರು. ಆದರೆ ಮೊದಲಿನಿಂದಲೂ ಅತಿ ಆದರ್ಶವಾದಿ, ಕ್ರಾಂತಿಕಾರಿ ಮನೋಭಾವ ಹೊಂದಿದ್ದ ಇವರು, ಹಿರಿಯರ ಅನುಮತಿ ಇಲ್ಲದಿದ್ದರೆ ಬೇಡ, ನಾವು ರಿಜಿಸ್ಟರ್ಡ್ ಮದುವೆ ಆಗೋಣ ಮುಂದೆ ಎಲ್ಲಾ ಸರಿಹೋಗುತ್ತದೆ ಎಂದರು. ಮನೆಯಲ್ಲಿ ವಿಚಾರಿಸುವುದಾಗಿ ಅವರಿಗೆ ಹೇಳಿ ಕಳುಹಿಸಿದೆ.
ನಾನು ಅವರಿಗೆ ಬರೆದ ಪತ್ರ, `ನಿಮ್ಮ ಆದರ್ಶಕ್ಕೆ ನಾವೆಲ್ಲರೂ ಚಿರಋಣಿ. ಆದರೆ ಹಿರಿಯರನ್ನು ವಿರೋಧಿಸಿ ಆ ಮನೆಗೆ ಹಿರಿ ಸೊಸೆ ಆಗಿರಲು ಖಂಡಿತಾ ನನಗೆ ಇಷ್ಟವಿಲ್ಲ, ನಮ್ಮ ಹಿರಿಯರೂ ಅದನ್ನೇ ಹೇಳುತ್ತಾರೆ. ಇವರು ಕೆಲಸ ಮುಂದುವರಿಸಿ, ನನ್ನ ಸಂಬಳ ಅವರಿಗೆ ಮುಂದೂ ಕೊಡಬೇಕು. ನಿಮ್ಮ ಮನೆ ಬೆಳಕಾಗಿ, ಆದರ್ಶ ಸೊಸೆ ಆಗಿರಲು ಬಯಸುವೆ. ಹಿರಿಯರಿಗೆ ಈ ಪತ್ರ ತೋರಿಸಿ ಅವರ ಒಪ್ಪಿಗೆ ಪಡೆದ ನಂತರ, ಎಲ್ಲರೂ ನಮ್ಮ ಮನೆಗೆ ಬನ್ನಿ. ಉಳಿದದ್ದು ಋಣಾನುಬಂಧ,' ಎಂದು ಬರೆದಿದ್ದೆ. ನನ್ನ ಪ್ರೇಮಕ್ಕೆ ಮನಸೋತ್ತಿದ್ದ ಅವರು ಹಿರಿಯರಿಗೆ ಅದನ್ನು ತೋರಿಸಿದಾಗ, ನನ್ನ ಮೈದುನ ಸಹ ನಮ್ಮಿಬ್ಬರ ಪ್ರೀತಿಗೆ ಒತ್ತಾಸೆಯಾಗಿ ನಿಂತ. ತುಂಬು ಮನಸ್ಸಿನಿಂದ ಹಿರಿಯರ ಆಶೀರ್ವಾದ ದೊರೆತು, ನಮ್ಮ ಮದುವೆ ಆಯಿತು. ನನಗೀಗ 10 ವರ್ಷದ ಮಗಳು, ನಮ್ಮದು ಸುಖೀ ಸಂಸಾರ. ಮೈದುನ ನನ್ನ ಹಿರೀ ತಂಗಿಯನ್ನೇ ಮದುವೆ ಆಗಿದ್ದಾನೆ. ಅವರಿಗೊಂದು ಗಂಡು ಮಗು. ಅತ್ತೆ ಮಾವ ನಮ್ಮ ಪ್ರೇಮ ಪೋಷಿಸಿದರು, ನಮ್ಮವರು ನನ್ನ ಪ್ರೇಮಪತ್ರವನ್ನು ಸದಾ ತಮ್ಮ ಬೀರುವಿನಲ್ಲಿರಿಸಿ ಆಗಾಗ ಓದುತ್ತಿರುತ್ತಾರೆ.