ಕಥೆದೀಪಾ ಪ್ರಕಾಶ್‌ (WRITER)

ಸುಧೀರ್‌ ಏರ್‌ಫೋರ್ಸ್‌ನಲ್ಲಿ ಪೈಲಟ್‌ ಆಗಿದ್ದರು. ಅವರು ವಿಮಾನ ಅಪಘಾತದಲ್ಲಿ ತೀರಿಕೊಂಡಿದ್ದರು. ಅವರಿಗೆ ಹೆಂಡತಿ ಶಾಂತಾ ಮತ್ತು 4 ವರ್ಷದ ಮಗಳು ಸ್ವಾತಿ ಇದ್ದರು. ಸುಟ್ಟು ಕರಕಲಾಗಿದ್ದ ಸುಧೀರ್‌ ಶವವನ್ನು ಮನೆಗೆ ತಂದಾಗ ಸ್ವಾತಿಯನ್ನು ಪಕ್ಕದ ಮನೆಗೆ ಕರೆದುಕೊಂಡು ಹೋಗಿದ್ದರು. ಅವಳಿಗೆ ತಂದೆಯ ಶವವನ್ನು ನೋಡಲೂ ಬಿಟ್ಟಿರಲಿಲ್ಲ. ತನ್ನ ತಂದೆ ಸತ್ತು ಹೋಗಿದ್ದಾರೆ. ಅವರಿನ್ನು ವಾಪಸ್‌ ಬರುವುದಿಲ್ಲ ಎಂದು ಅವಳಿಗೆ ತಿಳಿಯಲಿಲ್ಲ. ಸುಧೀರ್‌ ಕೆಲಸಕ್ಕೆ ಹೊರಟರೆ ಮನೆಗೆ ಬರಲು ಬಹಳ ದಿನ ಹಿಡಿಯುತ್ತಿತ್ತು. ಅವರು ಮನೆಗೆ ಬರುವಾಗ ಮಗಳಿಗೆ ಬಹಳಷ್ಟು ಆಟದ ಸಾಮಾನುಗಳನ್ನು ತರುತ್ತಿದ್ದರು. ಬಹಳಷ್ಟು ಊರುಗಳಿಗೆ ಅವಳನ್ನು ಕರೆದುಕೊಂಡು ಹೋಗುತ್ತಿದ್ದರು ಮತ್ತು ಚಂಪಕ ಮಾಸಿಕದಿಂದ ಅನೇಕ ಕಥೆಗಳನ್ನು ಹೇಳುತ್ತಿದ್ದರು. ಆ ಕಥೆಗಳನ್ನು ಕೇಳಲು ಸ್ವಾತಿಗೆ ಬಹಳ ಇಷ್ಟವಾಗುತ್ತಿತ್ತು.

ಅಪ್ಪ ಬಹಳ ದಿನ ಮನೆಗೆ ಬರದಿದ್ದಾಗ ಸ್ವಾತಿ ಅಮ್ಮನನ್ನು ಕೇಳಿದಳು, “ಅಮ್ಮಾ, ಅಪ್ಪ ಯಾಕೆ ಮನೆಗೆ ಬರ್ತಿಲ್ಲ, ಯಾವಾಗ ಬರ್ತಾರೆ?”

ಆಗೆಲ್ಲಾ ಶಾಂತಾ, “ಬರ್ತಾರಮ್ಮಾ, ನಿಮ್ಮ ಅಪ್ಪನಿಗೆ ರಜೆ ಸಿಕ್ಕಿಲ್ಲ. ಅವರ ಹೊಸ ಆಫೀಸರ್‌ವಬಹಳ ಸ್ಟ್ರಿಕ್ಟ್ ಅಂತೆ. ಅದಕ್ಕೆ ಅಪ್ಪನಿಗೆ ರಜೆ ಕೊಡ್ತಿಲ್ಲ,” ಎನ್ನುತ್ತಿದ್ದಳು.

ಸ್ವಾತಿಗೆ ಬಾಸ್‌ ಮೇಲೆ ವಿಪರೀತ ಕೋಪ ಉಕ್ಕುತ್ತಿತ್ತು, “ಅಮ್ಮಾ, ಅಪ್ಪನ ಬಾಸ್‌ ಕೆಟ್ಟವರು. ಅವರು ಸಿಕ್ಕರೆ ಚೆನ್ನಾಗಿ ಹೊಡೀತೀನಿ,” ಎನ್ನುತ್ತಿದ್ದಳು.

Thenewyear

ಶಾಂತಾ ಮಿಲಿಟರಿ ಕ್ಯಾಂಪಸ್‌ನಲ್ಲಿದ್ದ ಏರ್‌ಫೋರ್ಸ್‌ ಸ್ಕೂಲ್‌ನಲ್ಲಿ ಟೀಚರ್‌ ಆಗಿದ್ದಳು. ಗಂಡ ಸತ್ತ ನಂತರ ತಮ್ಮ ಬಳಿಯೇ ಬಂದಿರಲು ಅವಳ ಅಪ್ಪಅಮ್ಮ ಎಷ್ಟೇ ಕೇಳಿಕೊಂಡಿದ್ದರೂ ಒಪ್ಪದೆ ಮಗಳೊಡನೆ ಕ್ಯಾಂಪಸ್‌ನಲ್ಲೇ ವಾಸಿಸುತ್ತಿದ್ದಳು. ಶಾಂತಾ ಮರು ಮದುವೆಯಾಗಲಿ ಎಂದು ಅಪ್ಪ ಅಮ್ಮ ಬಯಸಿದ್ದರು. ಅದರ ಬಗ್ಗೆ ಕೇಳಿದಾಗೆಲ್ಲಾ, “ಸ್ವಾತಿ ಚಿಕ್ಕ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡ ನತದೃಷ್ಟೆ. ಅವಳು ತನ್ನ ತಾಯಿಯನ್ನೂ ಕಳೆದುಕೊಳ್ಳಲು ನಾನು ಬಿಡುವುದಿಲ್ಲ. ತಾಯಂದಿರು ಮರು ಮದುವೆಯಾದಾಗ ಮಕ್ಕಳು ಹೇಗೆ ನಿರ್ಲಕ್ಷಿಸಲ್ಪಡುತ್ತಾರೆ ಎಂದು ನಾನು ನೋಡಿದ್ದೇನೆ,” ಎನ್ನುತ್ತಿದ್ದಳು.

ಒಂದು ಮಗುವನ್ನು ಒಬ್ಬರೇ ಬೆಳೆಸುವುದು ಅಷ್ಟು ಸುಲಭದ ಕೆಲಸವಲ್ಲ. ಅವರೇ ತಂದೆ ಹಾಗೂ ತಾಯಿಯ ಪಾತ್ರ ನಿಭಾಯಿಸಬೇಕು. ಶಾಂತಾಳ ಕಷ್ಟದ ಕೆಲಸವೆಂದರೆ ಸ್ವಾತಿ ಅಪ್ಪನ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದಾಗಿತ್ತು. ಅಪ್ಪ ಯಾವಾಗ ಮನೆಗೆ ಬರುತ್ತಾರೆಂದು ಸ್ವಾತಿ ದಿನ ಅಮ್ಮನನ್ನು ಕೇಳುತ್ತಿದ್ದಳು. ಶಾಂತಿ ದಿನ ಅದೇ ಸುಳ್ಳನ್ನು ಹೇಳುತ್ತಿದ್ದಳು. ಅಪ್ಪ ಸತ್ತುಹೋದರೆಂದು ಶಾಂತಾ ಇದುವರೆಗೂ ಮಗಳಿಗೆ ಹೇಳಿರಲಿಲ್ಲ. ಅಪ್ಪ ಇನ್ನೆಂದೂ ಮನೆಗೆ ಬರುದಿಲ್ಲವೆಂದು ಹೇಳುವುದಾದರೂ ಹೇಗೆ?

ಈ ಸುಳ್ಳು ತನ್ನ ಮಗಳ ಬದುಕಿನಲ್ಲಿ ತೀವ್ರ ಸಮಸ್ಯೆ ಉಂಟು ಮಾಡುವುದೆಂದು ಶಾಂತಾಗೆ ತಿಳಿಯಲಿಲ್ಲ. ಸ್ವಾತಿ ತನ್ನ ಅಪ್ಪ ಇಂದು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಕಾಯುತ್ತಾ ಅವರು ಬರದಿದ್ದಾಗ ಖಿನ್ನತೆಗೊಳಗಾದಳು. ಅವಳು ಗೆಳತಿಯರೊಂದಿಗೆ ಆಡಲು ಕೂಡ ಹೋಗುತ್ತಿರಲಿಲ್ಲ, ಊಟವನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ಅವಳ ಆರೋಗ್ಯ ಹದಗೆಟ್ಟಿತು. ಫ್ಯಾಮಿಲಿ ಡಾಕ್ಟರ್‌, ಸ್ವಾತಿಯ ತಂದೆ ವಾಪಸ್‌ ಬರದಿದ್ದರೆ ಸ್ವಾತಿಯ ಆರೋಗ್ಯ ಸುಧಾರಿಸುವುದಿಲ್ಲವೆಂದು ಹೇಳಿದರು. ಮಗಳ ಪರಿಸ್ಥಿತಿಗಾಗಿ ಶಾಂತಾ ತನ್ನನ್ನೇ ಹಳಿದುಕೊಳ್ಳತೊಡಗಿದಳು.

ಶಾಂತಾಗೆ ಒಂಟಿತನ ಕಾಡತೊಡಗಿದಾಗ ಸೋಲೋಮೇಟ್‌ ಅಂದರೆ ಸಿಂಗಲ್ ಪೇರೆಂಟ್ಸ್ ಗೆ ಮೀಸಲಾಗಿದ್ದ ಸೋಶಿಯಲ್ ನೆಟ್ ವರ್ಕಿಂಗ್‌ ಸೈಟ್‌ಗಳನ್ನು ನೋಡುತ್ತಿದ್ದಳು. ಅವಳು ಕೆಲವು ಸಿಂಗಲ್ ಪೇರೆಂಟ್‌ಗಳನ್ನು ಫ್ರೆಂಡ್‌ ಮಾಡಿಕೊಂಡಿದ್ದಳು. ಅದರಲ್ಲೊಬ್ಬ ಇಂಡಿಯನ್‌ ಫ್ರೆಂಡ್‌ ರಘುನಾಥ್‌.  ಅವನು ಯುಎಸ್‌ನ ಕ್ಯಾಲಿಫೋರ್ನಿಯಾದಲ್ಲಿ ತನ್ನ 10 ವರ್ಷದ ಮಗ ಶೇಖರ್‌ನೊಂದಿಗೆ ವಾಸವಾಗಿದ್ದ. 5 ವರ್ಷಗಳ ಹಿಂದೆ ಅವನ ಹೆಂಡತಿ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದಳು.

ಶಾಂತಾಳಿಗೆ ಒಂಟಿತನ ಕಾಡತೊಡಗಿ ರಘುನಾಥನೊಂದಿಗೆ ಆಗಾಗ ಆನ್‌ ಲೈನ್‌ನಲ್ಲಿ ಚ್ಯಾಟ್‌ ಮಾಡುತ್ತಿದ್ದಳು. ಸ್ವಾತಿ ಖಿನ್ನತೆಗೊಳಗಾಗಿದ್ದು ತನಗೆ ಬೇಸರ ತಂದಿದೆ. ಅವಳ ಅಪ್ಪ ವಾಪಸ್‌ ಬರುತ್ತಾರೆಂದು ನಿರಂತರಾಗಿ ಸುಳ್ಳು ಹೇಳುತ್ತಿರುವುದು ತನ್ನಲ್ಲಿ ಅಪರಾಧಿ ಮನೋಭಾವ ಉಂಟುಮಾಡುತ್ತಿದೆ ಎಂದು ರಘುನಾಥ್‌ಗೆ ತಿಳಿಸಿದಳು.

“ನಾನೊಬ್ಬಳೇ ಸ್ವಾತಿಯನ್ನು ಪಾಲಿಸಿ ಪೋಷಿಸುವುದು ಎಷ್ಟು ಕಷ್ಟವೆಂದು ನಿಮಗೆ ತಿಳಿದಿದೆ. ಅವಳನ್ನು ಈ ಪರಿಸ್ಥಿತಿಯಲ್ಲಿ ಹೇಗೆ ನೋಡುವುದು? ಅವಳ ತಂದೆ ಬರದಿದ್ದರೆ ಸ್ವಾತಿಯ ಆರೋಗ್ಯ ಇನ್ನಷ್ಟು ಹದಗೆಡುತ್ತದೆಂದು ಡಾಕ್ಟರ್‌ ಹೇಳುತ್ತಾರೆ. ನನಗೆ ಭಯವಾಗ್ತಿದೆ, ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ,” ಎಂದಳು.

“ನಾನೂ ಸಿಂಗಲ್ ಪೇರೆಂಟ್‌. ನನಗೆ ನಿಮ್ಮ ಭಾವನೆಗಳು ಅರ್ಥವಾಗುತ್ತವೆ. ಬೇಜಾರು ಮಾಡ್ಕೊಬೇಡಿ. ಅವಳನ್ನು ಸಹಜ ಸ್ಥಿತಿಗೆ ತರಲು ಏನಾದರೂ ಮಾಡಬೇಕು. ನಾನು ನಿಮಗೆ ಸಹಾಯ ಮಾಡಬಹುದೇ?”

“ಹೇಗೆ?” ಶಾಂತಾ ಕೇಳಿದಳು.

“ಬರುವ ಕ್ರಿಸ್‌ಮಸ್‌ಗೆ ನಿನ್ನನ್ನು ನೋಡೋಕೆ ನಿಮ್ಮಪ್ಪ ಬರ್ತಿದ್ದಾರೇಂತ ಹೇಳಿ. ನಾನು ಬರುವ ತಿಂಗಳು ಇಂಡಿಯಾಗೆ ಬರ್ತಿದ್ದೀನಿ. ಅವಳ ಅಪ್ಪಾಂತ ಹೇಳಿ ಅವಳನ್ನು ಭೇಟಿಯಾಗ್ತೀನಿ.”

“ಇನ್ನೊಂದು ಸುಳ್ಳು ಹೇಳ್ಬೇಕಾ? ಒಂದು ಸುಳ್ಳು ಮುಚ್ಚೋಕೆ ಇನ್ನೆಷ್ಟು ಸುಳ್ಳುಗಳನ್ನು ಹೇಳ್ಬೇಕು?” ಶಾಂತಾ ಅಳತೊಡಗಿದಳು.

“ಈಗ ಅವಳು ಸರಿಹೋಗೋದು ಮುಖ್ಯ. ಬೇರೇನಾದರೂ ಐಡಿಯಾಗಳು ಇವೆಯೇ?” ರಘು ಕೇಳಿದರು.

“ಅವಳಪ್ಪ ಅವಳಿಗೆ ಚಂಪಕದ ಕಥೆಗಳನ್ನು ಹೇಳ್ತಿದ್ರು. ನೀವು ಅದನ್ನು ಹೇಳೋಕಾಗುತ್ತಾ?”

“ನಾನೂ ನನ್ನ ಮಗನಿಗೆ ಚಂಪಕದಿಂದ ಕಥೆಗಳನ್ನು ಹೇಳ್ತಿರ್ತೀನಿ. ಅವಳಿಗೂ ಹೇಳಿದ್ರಾಯ್ತು.”

ರಘು ಹಳೆಯ ಚಂಪಕ ಪುಸ್ತಕಗಳನ್ನು ಮತ್ತೆ ತಿರುವಿಹಾಕಲಾರಂಭಿಸಿದರು. ಒಂದು ದಿನ ರಘು ಶಾಂತಾಗೆ ಫೋನ್‌ ಮಾಡಿ, “ಹೇಗಿದ್ದಾಳೆ ಸ್ವಾತಿ?” ಎಂದು ವಿಚಾರಿಸಿದರು.

“ಅವಳ ಅಪ್ಪ ಮುಂದಿನ ತಿಂಗಳು ಬರುತ್ತಾರೆಂದು ತಿಳಿದ ಮೇಸೆ ಎಷ್ಟೋ ಸುಧಾರಿಸಿದ್ದಾಳೆ. ಈಗ ಊಟವನ್ನೂ ಮಾಡುತ್ತಿದ್ದಾಳೆ,” ಶಾಂತಾ ಹೇಳಿದಳು.

“ಟ್ರಿನ್‌…. ಟ್ರಿನ್‌….” ಡಿಸೆಂಬರ್‌ 24ರ ಸಂಜೆ ಶಾಂತಾ ಮನೆಯ ಡೋರ್‌ ಬೆಲ್ ‌ರಿಂಗ್‌ ಆಯಿತು. ಸ್ವಾತಿ ಬಾಗಿಲು ತೆರೆಯಲು ಓಡಿದಳು. ಅವಳ ಎದುರಿಗೆ ಎತ್ತರದ ನಿಲುವಿನ ಸಾಂತಾಕ್ಲೂಸ್‌ ನಿಂತಿದ್ದ. ಅವನು ಸ್ವಾತಿಯತ್ತ ಕೈಚಾಚಿ ಶೇಕ್‌ ಹ್ಯಾಂಡ್‌ಮಾಡಿದ.

“ಸ್ವಾತಿ ಡಾರ್ಲಿಂಗ್‌ ಚೆನ್ನಾಗಿದ್ದೀಯಾ? ಮೆರ್ರಿ ಕ್ರಿಸ್ಮಸ್‌. ನಾನು ಒಳಗೆ ಬರಬಹುದೇ? ನಿನಗೊಂದು ಸ್ಪೆಷಲ್ ಗಿಫ್ಟ್ ತಂದಿದ್ದೀನಿ,” ಎಂದ.

ನಂತರ ಒಳಗೆ ಬಂದ ಸಾಂತಾಕ್ಲೂಸ್‌, “ಸ್ವಲ್ಪ ಹೊತ್ತು ಕಣ್ಣು ಮುಚ್ಕೊತೀಯಾ? ನಿನಗೊಂದು ಗಿಫ್ಟ್ ಇದೆ,” ಎಂದ.

ಕೂಡಲೇ ಸ್ವಾತಿ ಕಣ್ಣು ಮುಚ್ಚಿಕೊಂಡಳು.

ರಘು ತನ್ನ ಸಾಂತಾಕ್ಲೂಸ್‌ಬಟ್ಟೆ ಬಿಚ್ಚಿದ. ಅವನು ಎತ್ತರವಾಗಿ, ಸುಂದರವಾಗಿ ಸ್ವಾತಿಯ ತಂದೆಯನ್ನೇ ಹೋಲುತ್ತಿದ್ದ.

“ಈಗ ಕಣ್ಣು ಬಿಡು. ನಿನ್ಮುಂದೆ ನಿನ್ನ ತಂದೆ ನಿಂತಿರೋದನ್ನು ನೋಡು,” ರಘು ಹೇಳಿದ.

ಸ್ವಾತಿ ಕಣ್ಣುಬಿಟ್ಟು ಎದುರಿಗಿದ್ದ ತಂದೆಯನ್ನು ನೋಡಿದಳು. ಅವಳು ಮೂರು ವರ್ಷದ ಹಿಂದೆ ತನ್ನ ತಂದೆಯನ್ನು ನೋಡಿದ್ದಳು. ಅವರ ಮುಖ ಸರಿಯಾಗಿ ನೆನಪಿರಲಿಲ್ಲ.

ರಘು ಸ್ವಾತಿಯನ್ನು ಎತ್ತಿಕೊಂಡು, “ಸ್ವಾತಿ, ನಿನಗೆ ನನ್ನ ಮೇಲೆ ಬಹಳ ಕೋಪ ಅಲ್ವಾ?” ಎಂದು ಕೇಳಿದ.

ಸ್ವಾತಿ, “ಹೌದು. ನೀವು ಯಾಕೆ ನನ್ನನ್ನು ನೋಡಲು ಮನೆಗೆ ಬರಲೇ ಇಲ್ಲ. ನನಗೆ ನಿಮ್ಮ ಮೇಲೆ ಬಹಳ ಕೋಪ ಇದೆ,” ಎಂದಳು.

“ಸಾರಿ ಕಣಮ್ಮಾ, ನನಗೆ ಆಫೀಸ್‌ನಲ್ಲಿ ಲೀವ್ ಸಿಗಲಿಲ್ಲ. ನನ್ನ ಬಾಸ್‌ ಬಹಳ ಕೆಟ್ಟೋರು. ಅವರು ಮನೆಗೆ ಬರೋಕೆ ಅವಕಾಶ ಕೊಡಲಿಲ್ಲ.”

ಸ್ವಾತಿ ರಘೂನ ಕತ್ತಿನ ಸುತ್ತ ತನ್ನ ಪುಟ್ಟ ಕೈಗಳನ್ನು ಬಳಸಿ, “ಪಪ್ಪಾ, ಐ ಲವ್ ಯು. ನಾನು ನಿಮ್ಮನ್ನು ಬಹಳ ಮಿಸ್‌ಮಾಡ್ಕೊಂಡಿದ್ದೆ,” ಎಂದಳು.

“ನಾನೂ ನಿನ್ನನ್ನು ಬಹಳ ಮಿಸ್‌ ಮಾಡ್ಕೊಂಡಿದ್ದೆ ಪುಟ್ಟಿ,” ಎಂದು ರಘು ಸ್ವಾತಿಗೆ ಬಾರ್ಬಿ ಸೆಟ್‌, ಮ್ಯಾಜಿಕ್‌ ಸೆಟ್‌, ಜ್ಯೂವೆಲರಿ ಸೆಟ್‌ ಮತ್ತು ಬಹಳಷ್ಟು ಚಾಕಲೇಟ್‌ಗಳನ್ನು ಕೊಟ್ಟ. ಸ್ವಾತಿಗೆ ಅವೆಲ್ಲವನ್ನೂ ಪಡೆದು ಬಹಳ ಖುಷಿಯಾಯಿತು.

“ಪಪ್ಪಾ, ಮತ್ತೆ ನೀವು ನನ್ನನ್ನು ಬಿಟ್ಟುಹೋಗಲ್ಲ ತಾನೆ?” ಸ್ವಾತಿ ಕೇಳಿದಳು.

“ಈ ಕ್ರಿಸ್‌ಮಸ್‌ ರಜೆ ಪೂರ್ತಿ ನಿನ್ನ ಜೊತೆನೇ ಇರ್ತೀನಿ ಪುಟ್ಟಿ. ಆಮೇಲೆ ನಾನು ಕೆಲಸಕ್ಕೆ ವಾಪಸ್‌ ಹೋಗಬೇಕು. ಇಲ್ಲದಿದ್ದರೆ ನಿನ್ನ ಆಟದ ಸಾಮಾನುಗಳಿಗೆ ದುಡ್ಡು ಎಲ್ಲಿರುತ್ತೆ?”

“ನನಗೆ ಆಟದ ಸಾಮಾನುಗಳು ಬೇಡ. ನೀವು ಬೇಕು,” ಸ್ವಾತಿ ಹೇಳಿದಳು.

“ನನ್ನ ಬಳಿ ಇನ್ನೂ ಒಂದು ಮಗು ಇದೆ.”

“ಯಾರದು?” ಸ್ವಾತಿ ಕೇಳಿದಳು.

“ನಿನ್ನ ಅಣ್ಣ ಶೇಖರ್‌.”

“ಅವನೂ ಇಲ್ಲಿ ಬಂದು ನಮ್ಮ ಜೊತೆ ಇರಲಿ,” ಸ್ವಾತಿ ಹೇಳಿದಳು.

ರಘು ಸ್ವಾತಿಯನ್ನು ಹತ್ತಿರದಲ್ಲೇ ಇದ್ದ ಕೆಲವು ಜಾಗಗಳಿಗೆ ಕರೆದುಕೊಂಡು ಹೋದ. ದಾರಿಯಲ್ಲಿ ಚಂಪಕದ ಕಥೆಗಳನ್ನು ಹೇಳುತ್ತಿದ್ದ.

ಮರುದಿನ ರಘು ಶೇಖರ್‌ನನ್ನು ಸ್ವಾತಿಯ ಮನೆಗೆ ಕರೆತಂದ. ಶೇಖರ್‌ ಹಾಗೂ ಸ್ವಾತಿ ಬಹಳ ಬೇಗ ಹೊಂದಿಕೊಂಡರು. ಇಬ್ಬರಿಗೂ ಮನೆಯಲ್ಲಿ ಏಕಾಂಗಿಯಾಗಿದ್ದು ಬೇಸರ ಬಂದಿತ್ತು. ಇಬ್ಬರೂ ಇನ್ನೊಬ್ಬ ಪೇರೆಂಟ್‌ನ ಪ್ರೀತಿಯಿಂದ ವಂಚಿತರಾಗಿದ್ದರು. ಮನೆಯಲ್ಲಿ ಬೇರಾವುದೇ ಮಕ್ಕಳಿರಲಿಲ್ಲ. ಶೇಖರ್‌ ಹೆಚ್ಚಿನ ಸಮಯನ್ನು ಡೇ ಕೇರ್‌ ಸೆಂಟರ್‌ನಲ್ಲಿ ಅಥವಾ ಶಾಲೆಯಲ್ಲಿ ಕಳೆಯುತ್ತಿದ್ದ. ಅವನು ಗೆಳೆಯರೊಂದಿಗೂ ಆಡುತ್ತಿರಲಿಲ್ಲ. ಸದಾ ಅಂತರ್ಮುಖಿಯಾಗಿದ್ದ. ಕಂಪ್ಯೂಟರ್‌ ಗೇಮ್ಸ್ ಆಡುತ್ತಾ, ಟಿವಿ ನೋಡುತ್ತಾ ಸಮಯ ಕಳೆಯುತ್ತಿದ್ದ.

ಈಗ ಶೇಖರ್‌ ಸ್ವಾತಿಯೊಂದಿಗೆ ಆಟವಾಡುತ್ತ ಖುಷಿಯಾಗಿರುವುದನ್ನು ಕಂಡು ರಘುವಿಗೆ ಆಶ್ಚರ್ಯವಾಗಿತ್ತು.

ತನ್ನ ಮಗಳು ಬಹಳ ಕಾಲದ ನಂತರ ಸಂತೋಷವಾಗಿರುವುದನ್ನು ಕಂಡು ಶಾಂತಾಗೂ ಬಹಳ ಖುಷಿಯಾಗಿತ್ತು. ಶಾಂತಾ ಶೇಖರ್‌ನ ತಲೆ ಸವರುತ್ತಾ, “ಶೇಖರ್‌, ನಿನಗೆ ಇಂಡಿಯಾ ಇಷ್ಟಾನಾ?” ಎಂದು ಕೇಳಿದಳು.

ಬಹಳ ದಿನಗಳ ನಂತರ ಶೇಖರ್‌ಗೆ ತಾಯಿಯ ಸ್ಪರ್ಶ ಸಿಕ್ಕಂತಿತ್ತು.

“ಅಮೆರಿಕಾದಲ್ಲಿರೋ ನಮ್ಮ ಮನೆ ನನಗೆ ಇಷ್ಟ ಇಲ್ಲ. ಅಲ್ಲಿ ಒಬ್ಬನೇ ಇದ್ದು ಬೋರ್‌ ಆಗುತ್ತೆ,” ಅವನು ಹೇಳಿದ.

“ನೀನು ಬೇಕಾದರೆ ದಿನ ಇಲ್ಲಿಗೆ ಬಂದು ಸ್ವಾತಿ ಜೊತೆ ಆಟ ಆಡಬಹುದು,” ಶಾಂತಾ ಹೇಳಿದಳು.

ಶಾಂತಾ ಶೇಖರ್‌ಗೆ ಇಷ್ಟವಾದ ಪೂರಿ, ಹಲ್ವ, ಪಾಯಸ ತಯಾರಿಸಿದಳು.

ಅದೆಲ್ಲಾ ಕಂಡು ಶೇಖರ್‌ ಆಶ್ಚರ್ಯದಿಂದ, “ಆಂಟಿ, ಇವೆಲ್ಲಾ ನನಗೆ ಇಷ್ಟಾಂತ ನಿಮಗೆ ಹೇಗೆ ಗೊತ್ತಾಯ್ತು?” ಎಂದ.

“ನಾನು ನಿಮ್ಮ ತಾಯಿ ತರಹ. ಮಗನಿಗೆ ಏನು ಇಷ್ಟಾಂತ ಎಲ್ಲ ತಾಯಂದಿರಿಗೂ ಗೊತ್ತು,” ಎಂದು ಶಾಂತಾ ಹೇಳಿದಳು.

ಶೇಖರ್‌ ದುಃಖಿತನಾಗಿ, “ನಿಮ್ಮಂಥ ತಾಯಿಯನ್ನು ಪಡೆದಿರೋದು ಸ್ವಾತಿಯ ಸೌಭಾಗ್ಯ. ನೀವು ದಿನ ಅವಳಿಗೆ ಇಷ್ಟವಾದ ತಿಂಡಿಗಳನ್ನು ಮಾಡಿಕೊಡ್ತೀರಿ. ಆದರೆ ನನಗೆ ತಾಯಿ ಇಲ್ಲ,” ಎಂದ.

“ನಾನಿದ್ದೀನಲ್ಲ ಮಗು. ನಿನಗೇನಿಷ್ಟವೋ ಅದನ್ನು ಮಾಡಿಕೊಡ್ತೀನಿ,” ಶಾಂತಾ ಹೇಳಿದಳು.

ಶೇಖರ್‌ ಸ್ವಾತಿಯೊಂದಿಗೆ ಇಡೀ ದಿನ ಕಳೆದು ಸಂಜೆ ಹೊರಟ.

ಶಾಂತಾ ರಘೂಗೆ ಫೋನ್‌ ಮಾಡಿ, “ಈ ಬಾರಿಯ ಕ್ರಿಸ್ಮಸ್‌ ನನ್ನ ಮಗಳಿಗೆ ಅತ್ಯುತ್ತಮವಾದ ಕ್ರಿಸ್ಮಸ್‌ ಆಗಿತ್ತು. ಸ್ವಾತಿಗೆ ತನ್ನ ಅಪ್ಪನನ್ನು ಪಡೆದು ಬಹಳ ಖುಷಿಯಾಗಿದೆ. ನಾನು ನಿಮಗೆ ತುಂಬಾ ಋಣಿಯಾಗಿದ್ದೇನೆ. ನಿಮಗೆ ಹೇಗೆ ಧನ್ಯವಾದ ಅರ್ಪಿಸಬೇಕೋ ತಿಳೀತಿಲ್ಲ,” ಎಂದಳು.

“ಶಾಂತಾ, ನಮ್ಮ ಮಕ್ಕಳು ಕಳೆದುಹೋದ ಒಬ್ಬ ಪೇರೆಂಟ್‌ನ್ನು ಪಡೆದು ಎಷ್ಟು ಖುಷಿಯಾಗಿದ್ರೂಂತ ನೋಡಿದ್ರ್ಲಾ. ನಮ್ಮ ಮಕ್ಕಳಿಗೆ ಅಪ್ಪ ಅಮ್ಮ ಇಬ್ಬರೂ ಬೇಕು. ಸಿಂಗಲ್ ಪೇರೆಂಟ್‌ನಿಂದ ಅವರು ಮಾನಸಿಕವಾಗಿ ಬೆಳವಣಿಗೆ ಆಗೋಲ್ಲ.”

“ಸ್ವಾತಿಯಂತಹ ಮಗಳು ಇರಬೇಕೂಂತ ನಾನೂ ಕನಸು ಕಾಣ್ತಿದ್ದೆ. ನಾನು ಇಂದು ಅವಳ ಅಪ್ಪನಂತೆಯೇ ನಟಿಸಿದೆ. ಆಗ ನನಗೂ ಬಹಳ ಖುಷಿಯಾಗಿತ್ತು,” ರಘು ಹೇಳಿದ.

“ಶೇಖರ್‌ನ ಹಾಗೇ ನನಗೂ ಒಬ್ಬ ಮಗ ಇರಬೇಕೂಂತ  ಅನ್ನಿಸಿತ್ತು,” ಶಾಂತಾ ಹೇಳಿದಳು.

“ನಾವು ಶೇಖರ್‌ ಹಾಗೂ ಸ್ವಾತಿಯ ನಿಜವಾದ ಅಪ್ಪ ಅಮ್ಮ ಏಕಾಗಬಾರದು? ಅವರ ಉಳಿದ ಜೀವನಕ್ಕಂತೂ ಅಪ್ಪ ಅಮ್ಮ  ಸಿಕ್ಕಿದ ಹಾಗಿರುತ್ತೆ.”

“ಎರಡನೇ ಮದುವೆ ಬಗ್ಗೆ ನನಗೆ ಗೊಂದಲಗಳಿದ್ದವು. ಆದರೆ ಈಗ ಸ್ವಾತಿಗೆ ಅಪ್ಪ ಬೇಕಾಗಿದೇಂತ ಗೊತ್ತಾಯ್ತು,” ಶಾಂತಾ ಹೇಳಿದಳು.

ಹೊಸ ವರ್ಷ ಹೊಸ ಭರವಸೆಗಳೊಂದಿಗೆ, ಹೊಸ ಸಂತೋಷ ಮತ್ತು ಹೊಸ ಪ್ರೀತಿಗಳು ಶಾಂತಾ ಹಾಗೂ ರಘೂರ ಬದುಕಿನಲ್ಲಿ ತುಂಬಿಸಿತು. ಅವರು ಕೋರ್ಟ್‌ನಲ್ಲಿ ಮದುವೆಯಾಗಿ ಶೇಖರ್‌ ಹಾಗೂ ಸ್ವಾತಿಯ ನಿಜವಾದ ತಂದೆ ತಾಯಿಗಳಾದರು. ಹೊಸ ವರ್ಷದಲ್ಲಿ ಸ್ವಾತಿ ಮತ್ತು ಶೇಖರ್‌ರನ್ನು ಸಮಾನವಾಗಿ ನೋಡುತ್ತೇವೆ ಮತ್ತು ಯಾರಿಗೂ ತೊಂದರೆ ಉಂಟು ಮಾಡುವುದಿಲ್ಲ ಎಂದು ಶಾಂತಾ ಹಾಗೂ ರಘು ಸಂಕಲ್ಪ ಮಾಡಿದರು.

“ನಮ್ಮ  ಎರಡನೇ ಹನಿಮೂನ್‌ಗೆ ಎಲ್ಲಿ ಹೋಗೋಣ?”

“ಹಾಂಕಾಂಗ್‌ಗೆ ಹೋಗೋಣ,” ಶಾಂತಾ ಹೇಳಿದಳು.

“ಹಾಂಕಾಂಗ್‌ಗೆ ಯಾಕೆ?” ರಘು ಕೇಳಿದ.

“ನಮ್ಮ ಮಕ್ಕಳು ಇಬ್ಬರೂ ನಮ್ಮ ಎರಡನೇ ಹನಿಮೂನ್‌ನಲ್ಲಿ ನಮ್ಮ ಜೊತೆಗೇ ಇರಲಿ.”

“ಆಯ್ತು,” ರಘು ಹೇಳಿದ.

ಅವರು ಹಾಂಕಾಂಗ್‌ನಲ್ಲಿ ಕಿಂಗ್‌ ಸೈಜ್‌ ಡಬಲ್ ಬೆಡ್‌ ಇದ್ದ ಒಂದು ರೂಮ್ ಬುಕ್‌ ಮಾಡಿದರು. ಸ್ವಾತಿ ಮತ್ತು ಶೇಖರ್‌ ಡಿಸ್ನಿಲ್ಯಾಂಡ್‌ಗೆ ಹೋಗುವ ಸುದ್ದಿ ಕೇಳಿ ಥ್ರಿಲ್ ‌ಆದರು. ಸ್ವಾತಿ ಡಿಸ್ನಿಲ್ಯಾಂಡ್‌ಗೆ ಹೋಗಿರಲಿಲ್ಲ. ಶೇಖರ್‌ ಲಾಸ್‌ ಏಂಜಲೀಸ್‌ನ ಡಿಸ್ನಿಲ್ಯಾಂಡ್‌ಗೆ ಹೋಗಿದ್ದರೂ ಹಾಂಕಾಂಗ್‌ಗೆ ಹೋಗಲು ಕಾತರದಿಂದಿದ್ದ.

ಇಬ್ಬರು ಮಕ್ಕಳೂ ಡಿಸ್ನಿಲ್ಯಾಂಡ್‌ನ ಎಲ್ಲಾ ರೈಡ್‌ಗಳನ್ನೂ ಎಂಜಾಯ್‌ ಮಾಡಿದರು. ರಘು ಸ್ವಾತಿಯ ಬಗ್ಗೆ ವಿಶೇಷ ಗಮನ ಕೊಟ್ಟು ಅವಳ ಕೈ ಹಿಡಿದುಕೊಂಡಿದ್ದ. ಶಾಂತಾ ಹೆಚ್ಚಿನ ಸಮಯವನ್ನು ಶೇಖರ್‌ನೊಂದಿಗೆ ಕಳೆದಳು. ಅವರೆಲ್ಲಾ ಡಿಸ್ನಿಲ್ಯಾಂಡ್‌ನಲ್ಲಿ ಮಿಕ್ಕಿಯ ಪರೇಡ್‌ ನೋಡಿ ಆನಂದಿಸಿದರು. ಡಿಸ್ನಿ ಪಾತ್ರಗಳಾದ ಗೂಫಿ, ಮಿಕ್ಕಿ ಮತ್ತು ಮಿನ್ನಿಗಳೊಂದಿಗೆ ಫೋಟೋ ತೆಗೆಸಿಕೊಂಡರು. ಅಡ್ವೆಂಚರ್‌ ಲ್ಯಾಂಡ್‌, ಏನ್ಶಿಯೆಂಟ್‌ ಲ್ಯಾಂಡ್‌, ಫ್ಯೂಚರ್‌ ಲ್ಯಾಂಡ್‌ ಮತ್ತು ಫ್ಯಾಂಟಸಿ ಲ್ಯಾಂಡ್‌ಗಳಲ್ಲಿನ ವಿಶೇಷ ಪ್ರದರ್ಶನಗಳನ್ನು ನೋಡಿ ಉಲ್ಲಸಿತರಾದರು.

ಡಿಸ್ನಿಲ್ಯಾಂಡ್‌ ಟ್ರಿಪ್‌ ನಂತರ ಎಲ್ಲರಿಗೂ ಆಯಾಸವಾಗಿತ್ತು ಬೇಗ ಮಲಗಿಕೊಂಡರು. ಮಕ್ಕಳಿಬ್ಬರೂ ಅಮ್ಮನ ಬಳಿಯೇ ಮಲಗುತ್ತೇವೆಂದರು. ಸ್ವಾತಿ ಮೊದಲಿನಿಂದಲೂ ಅಮ್ಮನ ಜೊತೆಯಲ್ಲೇ ಮಲಗುತ್ತಿದ್ದಳು. ಈಗ ಶೇಖರ್‌ ತಾನೂ ಅಮ್ಮನ ಜೊತೆ ಮಲಗುತ್ತೇನೆಂದು ಹಠ ಮಾಡಿದ. ಕೊನೆಗೆ ಶಾಂತಾ ಶೇಖರ್‌ ಹಾಗೂ ಸ್ವಾತಿಯ ಮಧ್ಯೆ ಮಲಗಿದಳು. ತಮ್ಮ ಎರಡನೆಯ ಹನಿಮೂನ್‌ನಲ್ಲಿ ಶಾಂತಾಳಿಂದ ದೂರವಿರಬೇಕಾಯಿತೆಂದು ರಘೂಗೆ ಬೇಸರವಾದರೂ ತನ್ನ ಮಗನಿಗೆ ತಾಯಿ ಸಿಕ್ಕಳೆಂದು ಸುಮ್ಮನಾದ. ಮಕ್ಕಳ ಸಂತೋಷಕ್ಕಾಗಿ ವೈಯಕ್ತಿಕ ಸಂತೋಷವನ್ನು ತ್ಯಾಗ ಮಾಡುವುದು ಹೆಚ್ಚೇನಲ್ಲ ಎಂದುಕೊಂಡ.

ಮರುದಿನ ಅವರು ಓಪನ್‌ ಪಾರ್ಕ್‌ಗೆ ಹೋಗಿ ರೋಲರ್‌ ಕೋಸ್ಟರ್‌ ರೈಡ್‌, ಬಲೂನ್‌ ರೈಡ್‌ ಇತ್ಯಾದಿಗಳನ್ನು ಎಂಜಾಯ್ ಮಾಡಿದರು. ಆ ಪಾರ್ಕ್‌ ಬಹಳ ಥ್ರಿಲ್ಲಿಂಗ್‌ ಹಾಗೂ ಅಡ್ವೆಂಚರಸ್‌ ಆಗಿದ್ದು ಮಕ್ಕಳು ಬಹಳ ಆನಂದಿಸಿದರು. ನಂತರ ಅವರು ವಿಕ್ಟೋರಿಯಾ ಪೀಕ್‌, ಲಾಫಿಂಗ್‌ ಬುದ್ಧ ಮತ್ತು ಬೀಚ್‌ಗಳನ್ನು ನೋಡಿ ಭಾರತಕ್ಕೆ ಹಿಂತಿರುಗಿದರು.

6 ತಿಂಗಳ ನಂತರ…… ಶಾಂತಾ ಮತ್ತು ಸ್ವಾತಿ ಕ್ಯಾಲಿಫೋರ್ನಿಯಾಗೆ ಹೊರಟರು. ಸ್ವಾತಿಯನ್ನು ಅಲ್ಲೇ ಒಂದು ಶಾಲೆಗೆ ಸೇರಿಸಲಾಯಿತು. ಶಾಂತಾ ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲೇ ಉಳಿದಳು. ಏಕೆಂದರೆ ಶೇಖರ್‌ ಹಾಗೂ ಸ್ವಾತಿಗೆ ಈ ಹಿಂದೆ ಸರಿಯಾದ ಆರೈಕೆ ಸಿಕ್ಕಿರಲಿಲ್ಲ. ಜೊತೆಗೆ ಇತರ ಮಕ್ಕಳಿಗೆ ಪಾಠ ಬೋಧಿಸುವ ಬದಲು ತನ್ನ ಮಕ್ಕಳಿಗೇ ಪಾಠ ಹೇಳಿಕೊಡುವ ಜವಾಬ್ದಾರಿ ಹೊತ್ತುಕೊಂಡಳು. ಒಂದು ದಿನ ಮಕ್ಕಳ ನೋಟ್‌ ಬುಕ್‌ ನೋಡುತ್ತಿರುವಾಗ ಶೇಖರ್‌ ಬರೆದಿದ್ದ ಒಂದು ಪ್ರಬಂಧ, `ಯುವರ್‌ ಮೋಸ್ಟ್ ಮೆಮೊರಬಲ್ ಡೇ’ ಕಣ್ಣಿಗೆ ಬಿತ್ತು.

ಅದರಲ್ಲಿ ಅವನು ಹೀಗೆ ಬರೆದಿದ್ದ, “ನನ್ನ ಅತ್ಯಂತ ಸ್ಮರಣೀಯ ದಿನವೆಂದರೆ ನನ್ನ ಅಮ್ಮನನ್ನು ಮರಳಿ ಪಡೆದದ್ದು. ಅವರು ಈ ವಿಶ್ವದಲ್ಲೇ ಅತ್ಯಂತ ಪ್ರೀತಿ ಹಾಗೂ ಕಾಳಜಿ ತೋರಿಸುವ ಅಮ್ಮ. ನಾನು ಅವರನ್ನು ಬಹಳ ಪ್ರೀತಿಸುತ್ತೇನೆ. ಅವರು ನನಗೆ ಬಹಳ ಸ್ಛೂರ್ತಿ ತುಂಬಿದ್ದಾರೆ. ಅಂತಹ ಅಮ್ಮ ಎಲ್ಲರಿಗೂ ಸಿಗಲಿ ಎಂದು ಹಾರೈಸುತ್ತೇನೆ,” ಇದನ್ನು ಓದುವಾಗ ಶಾಂತಾಳ ಕಣ್ಣಿನಿಂದ ನೀರು ಸುರಿಯುತ್ತಿತ್ತು.

ಇಂಗ್ಲಿಷ್‌ ಕ್ರಿಯೇಟಿವ್ ‌ರೈಟಿಂಗ್‌ನಲ್ಲಿ ಸ್ವಾತಿ `ಮೈ ಬೆಸ್ಟ್ ಫ್ರೆಂಡ್‌’ ಬಗ್ಗೆ 5 ವಾಕ್ಯ ಬರೆದಿದ್ದಳು, “ನನ್ನ ಬೆಸ್ಟ್ ಫ್ರೆಂಡ್‌ ನನ್ನ ತಂದೆ. ಅವರು ಯಾವಾಗಲೂ ನನ್ನ ಜೊತೆ ಆಡುತ್ತಾರೆ, ಒಳ್ಳೆಯ ಕಥೆಗಳನ್ನು ಹೇಳುತ್ತಾರೆ. ಬಹಳಷ್ಟು ಕಡೆ ನನ್ನನ್ನು ಕರೆದುಕೊಂಡು ಹೋಗುತ್ತಾರೆ. ನಾನು ಅವರನ್ನು ಬಹಳ ಪ್ರೀತಿಸುತ್ತೇನೆ.”

ಶಾಂತಾಳ ಮನಸ್ಸು ಒಳ್ಳೆಯ ಕುಟುಂಬ ಪಡೆದಿದ್ದಕ್ಕೆ ಖುಷಿಯಿಂದ ಕುಣಿಯುತ್ತಿತ್ತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ