ಆಹಾ, ನ್ಯೂ ಇಯರ್‌ಈವ್ ನಂದು ಬೆಂಗಳೂರಿನ ಅತ್ಯಾಧುನಿಕ ಹೋಟೆಲ್‌ಗಳ ವೈಭವ ಕೇಳಬೇಕೇ? ಬೆಳಗಾದರೆ ಮೂಡಲಿರುವ ಹೊಸ ವರ್ಷದ ಮೊದಲ ದಿನವನ್ನು ಸ್ವಾಗತಿಸಲು ಹೋಟೆಲ್ ಬ್ಲೂಮೂನ್ ಅತಿ ಭ್ಯಾಗಿ ಸಜ್ಜುಗೊಂಡಿತ್ತು. ಎಲ್ಲೆಲ್ಲೂ ಬಣ್ಣ ಬಣ್ಣದ ವಿದ್ಯುದ್ದೀಪಗಳ ಕಣ್ಣು ಕೋರೈಸುವ ಕಾಂತಿ ಹರಡಿ ಆ ಹೋಟೆಲ್ ಧರೆಗಿಳಿದ ನಂದನ ವನದಂತೆ ಶೋಭಿಸುತ್ತಿತ್ತು.
ಅಂದಿನ ವಿಶೇಷ ಮನರಂಜನೆಗಾಗಿ ಹಲವಾರು ಗ್ಲಾಮರಸ್ ಕಾರ್ಯಕ್ರಮಗಳು ಸಾಲುಸಾಲಾಗಿ ರೆಡಿಯಾಗಿದ್ದವು. ಗೌತಮ್ ಅಲ್ಲಿಗೆ ತಲುಪಿದಾಗ ಹೆಚ್ಚುಕಡಿಮೆ 10 ಗಂಟೆ ದಾಟಿತ್ತು. ಕೆಲವು ರಸಭರಿತ ಕಾರ್ಯಕ್ರಮಗಳು ಅದಾಗಲೇ ಶುರುವಾಗಿದ್ದವು. ಅತ್ಯಾಧುನಿಕ ಮಾದಕ ಪಾಶ್ಚಾತ್ಯ ನರ್ತನಕ್ಕೆ ಒಬ್ಬ ಗ್ಲಾಮರಸ್ ನರ್ತಕಿ ಹೆಜ್ಜೆ ಹಾಕುತ್ತಿದ್ದರೆ, ಗೌತಮನಿಗೆ ಅವಳಿಂದ ಕಣ್ಣು ಕೀಳಲಾಗಲಿಲ್ಲ.
ಗೆಳೆಯರ ಒತ್ತಾಯಕ್ಕೆ ಅವರೊಡಗೂಡಿ ಅಲ್ಲಿಗೆ ಬಂದಿದ್ದ ಗೌತಮ್, ಸ್ನೇಹಿತರ ಸಲುವಾಗಿ ಅನಿವಾರ್ಯವಾಗಿ 2 ಪೆಗ್ ಬಿಯರ್‌ಹೀರಬೇಕಾಯ್ತು. ವಿಸ್ಕಿ ತೆಗೆದುಕೊಳ್ಳುವಂತೆ ಗೆಳೆಯರು ಒತ್ತಾಯಿಸಿದಾಗ, ತಾನು ಕಾರಿನಲ್ಲಿ ಬಹು ದೂರ ಪ್ರಯಾಣ ಮುಂದುವರಿಸಬೇಕೆಂದು ಬೇಡವೆಂದು ತಳ್ಳಿದ್ದ. ಆ ನರ್ತಕಿಯ ಮಾದಕ ಮೈಮಾಟ, ಕಡೆದಿಟ್ಟ ಶಿಲ್ಪದಂತಿದ್ದ ಅವಳ ಅಂಗಾಂಗಗಳು ಎಲ್ಲರೂ ಅವಳತ್ತಲೇ ಮತ್ತೆ ಮತ್ತೆ ನೋಡುವಂತೆ ಮಾಡಿದ್ದವು. ನೆಪ ಮಾತ್ರಕ್ಕಿದ್ದ ಅವಳ ಪಾರದರ್ಶಕ ಉಡುಗೆ ಅವಳ ದೇಹಸಿರಿಯನ್ನು ಮುಚ್ಚಿಡಲು ಅಸಾಧ್ಯವಾಗಿತ್ತು. ಗೌತಮನಿಗೆ ಅವಳೊಂದಿಗೆ ಹೆಜ್ಜೆ ಹಾಕಿ ಕುಣಿಯುವ ಮನಸ್ಸಾದರೂ, ತನ್ನನ್ನು ತಾನು ನಿಗ್ರಹಿಸಿಕೊಳ್ಳುತ್ತಾ, ಗೆಳೆಯರೊಂದಿಗೆ ಹರಟುತ್ತಾ, ಅವಳ ಡ್ಯಾನ್ಸ್ ಎಂಜಾಯ್ ಮಾಡುತ್ತಿದ್ದ. ಅವನ ಹೆಂಡತಿ ಮೀರಾ ಮತ್ತು ಇಬ್ಬರು ಮಕ್ಕಳು ಹಿಂದಿನ ದಿನ ತಾನೇ ಮುಂಬೈನ ಅವಳ ತವರೂರಾದ ಬಾಂದ್ರಾಗೆ ಹೊರಟಿದ್ದರು. ಹೊಸ ವರ್ಷದ ಸಂಭ್ರಮಾಚರಣೆಯೊಂದಿಗೆ 4-5 ದಿನ ಅಲ್ಲೇ ಕಳೆಯಬೇಕೆಂದು ಮೀರಾ ಆಶಿಸಿದ್ದಳು. ತನ್ನ ಆಫೀಸ್‌ನಲ್ಲಿ ಅತಿ ಮುಖ್ಯವಾದ ಕ್ಲೈಂಟ್ಸ್ ಮೀಟಿಂಗ್ ಇದ್ದುದರಿಂದ, ಗೌತಮ್ ಅವಳೊಂದಿಗೆ ಮುಂಬೈಗೆ ಹೋಗಲಾಗಲಿಲ್ಲ. ಅದೆಲ್ಲ ಮೀಟಿಂಗ್ಸ್ ಮುಗಿದ ಮೇಲೆ, ಅವನು ತನ್ನ ಬಹುದಿನಗಳ ಕನಸನ್ನು ನನಸಾಗಿಸಿಕೊಳ್ಳಲು ಧಾವಿಸಿದ. ಮುಂಬೈಗೆ ಹೋಗದಿರಲು ಮೀಟಿಂಗ್‌ಒಂದು ನೆಪವಾಗಿತ್ತಷ್ಟೆ. ಅವನು ತನ್ನ ಖಾಸಾ ಗೆಳತಿ ಸುನೀತಾಳ ಜೊತೆ ಕಾಲ ಕಳೆಯಲು ಬಯಸಿದ್ದ.
ಹೋಟೆಲ್‌ನಲ್ಲಿ ಪಾರ್ಟಿಯ ನಶೆ ರಂಗೇರಿತ್ತು. ನಿಧಾನಕ್ಕೆ ಸಮಯ ಸರಿದು ಗಂಟೆ ಹನ್ನೆರಡಾಯಿತು. ಅಲ್ಲಿದ್ದವರೆಲ್ಲರೂ ಪರಸ್ಪರ ಕೈ ಕುಲುಕಿ, ಅಪ್ಪಿಕೊಂಡು ಶುಭಾಶಾಯ ಕೋರಿದರು. ಗೌತಮ್ ಬಹಳಷ್ಟು ಜನ ಗೆಳೆಯರನ್ನು ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡ. ಅದೆಲ್ಲ ಮುಗಿಸಿಕೊಂಡು ಅವನು ಹೋಟೆಲ್‌ನಿಂದ ಹೊರಟುಬಿಟ್ಟ. ಅವನಿನ್ನೂ ಆ ಡ್ಯಾನ್ಸ್ ಗುಂಗಿನಲ್ಲೇ ಮೈಮರೆತಿದ್ದ, ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾ ಕಾರನ್ನು ಮುನ್ನಡೆಸಿದ. ಕಾರು ನಿಧಾನವಾಗಿ ಮುಂದುವರಿದು ಅಂತೂ ಸುನೀತಾಳ ಮನೆ ತಲುಪಿತು.
ಸುನೀತಾಳ ಅಪಾರ್ಟ್‌ಮೆಂಟ್ ಬಳಿ ಬಂದು, ಕಾರು ಪಾರ್ಕ್ ಮಾಡಿ, 8ನೇ ಮಹಡಿಗೆ ಹೋಗಿ ಅವಳ ಮನೆಯ ಕಾಲಿಂಗ್ ಬೆಲ್ ಒತ್ತಿದ. ಬಾಗಿಲು ತೆರೆದ ಸುನೀತಾ, ಮುಗುಳ್ನಗುತ್ತಾ ಅವನನ್ನು ಸ್ವಾಗತಿಸಿದಳು. ಅತ್ಯಾಕರ್ಷಕ ಗ್ಲಾಮರಸ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದ ಸುನೀತಾ, ಒಳಬಂದ ಗೌತಮನ ಎದೆಗೊರಗಿ ಅವನ ಬಾಹುಗಳಲ್ಲಿ ಬಂದಿಯಾದಳು. ಅವಳನ್ನು ಗಾಢವಾಗಿ ಅಪ್ಪಿಕೊಂಡ ಗೌತಮ್, ಅವಳ ತುಟಿಗೆ ಸಿಹಿಯಾಗಿ ಮುತ್ತಿಟ್ಟ. ಕನಸಿನ ಲೋಕದಲ್ಲಿ ಎಂಬಂತೆ ಅವರು ಒಳಗೆ ಹೆಜ್ಜೆಹಾಕುತ್ತಾ ಬಂದು ಸೋಫಾದಲ್ಲಿ ಒರಗಿದರು. ಗೌತಮ್ ಧಾವಿಸಿ ಅವಳನ್ನು ಮತ್ತೆ ಮುದ್ದಿಸಲೆತ್ನಿಸಿದ.