ನಾನು ಎವೆಯಿಕ್ಕದೆ ನೋಡುತ್ತಿದ್ದ ಆ ಅದ್ಭುತ ಸುಂದರ ಮಹಿಳೆ ಅಚಾನಕ್ಕಾಗಿ ತನ್ನ ಕುರ್ಚಿಯಿಂದ ಎದ್ದು ನನ್ನತ್ತಲೇ ವೈಯ್ಯಾರದಿಂದ ಬಂದು ಮಾದಕವಾಗಿ ನಕ್ಕಾಗ, ಅಂತಹ ಏರ್ ಕಂಡೀಷನ್ಡ್ ಬ್ಯಾಂಕ್ವೆಟ್ ಹಾಲ್‌ನಲ್ಲೂ ನನ್ನ ಮೈ ಬೆವರೊಡೆದಿತ್ತು.
ನನ್ನ ಗೆಳೆಯ ವಿವೇಕ್‌ನ ತಮ್ಮನ ಮದುವೆಯ ರಿಸೆಪ್ಷನ್ ಇತ್ತು. ಆ ಪಾರ್ಟಿಗೆ ಇನ್ನೂ ಸಾಕಷ್ಟು ಜನ ಬಂದಿರಲಿಲ್ಲ. ಆ ಮಹಿಳೆ ಅಚಾನಕ್ಕಾಗಿ ಎದ್ದು ನನ್ನ ಬಳಿ ಬಂದದ್ದು ಅಲ್ಲಿರುವ ಎಲ್ಲಾ ಜನರ ಗಮನಕ್ಕೆ ಬಂದಿರುವುದಂತೂ ಗ್ಯಾರಂಟಿ.
``ಹಾಯ್ ಮಿಸ್ಟರ್ ರವಿ, ನಾನು ಸೀಮಾ,'' ಅತ್ಯಂತ ಸಮೀಪ ಬಂದು ನಸುನಗುತ್ತಲೇ ತನ್ನ ಪರಿಚಯ ಮಾಡಿಕೊಂಡಳು. ನಾನು ಅವಳನ್ನು ಗೌರವಿಸಲೆಂದೇ, ಕುರ್ಚಿಯಿಂದ ಎದ್ದು ನಿಂತೆ. ನಂತರ ತಡರಿಸುತ್ತ, ``ನಿಮಗೆ ನನ್ನ ಪರಿಚಯವಿದೆಯೇ?'' ಎಂದು ಅಚ್ಚರಿಯಿಂದ ಕೇಳಿದೆ.
``ಹೌದು, ನನ್ನ ಗೆಳತಿಯೊಬ್ಬಳ ಪತಿ ನಿಮ್ಮ ಕಂಪನಿಯಲ್ಲೇ ಕೆಲಸ ಮಾಡುತ್ತಾನಂತೆ. ಅವರೇ ಒಂದು ಸಲ ಕ್ಲಬ್‌ನಲ್ಲಿ ನಿಮ್ಮ ಬಗ್ಗೆ ಹೇಳಿದ್ದರು.''
``ಓಕೆ....ಓಕೆ.....ಹಾಂ.... ಅವರೇ ನಿಂತುಕೊಂಡೇ ಇದ್ದೀರಲ್ಲ! ಕುಳಿತುಕೊಳ್ಳಿ ಪ್ಲೀಸ್.''
``ಥ್ಯಾಂಕ್ಸ್, ನೀವು ಹೇಳಿದ ಮೇಲೆ ಕುಳಿತುಕೊಳ್ಳದೆ ಇರೋಕಾಗುತ್ಯೆ?'' ಎಂದು ಮಾದಕವಾಗಿ ನುಲಿಯುತ್ತ ಹೇಳಿದ ಅವಳು ನನ್ನ ಕಣ್ಣುಗಳನ್ನೇ ದಿಟ್ಟಿಸುತ್ತಿದ್ದಳು.
``ಓಹ್, ದೊಡ್ಡ ಮಾತು.... ಆದ್ರೆ ಸೀಮಾ ಇಫ್ ಯು ಡೋಂಟ್ ಮೈಂಡ್.... ನಿಮ್ಮನ್ನು ನೋಡ್ತಾ ಇದ್ದರೆ ನೋಡುತ್ತಲೇ ಇರಬೇಕು ಅನಿಸುತ್ತೆ. ಬಹುಶಃ ಇವತ್ತಿನ ಈ ಪಾರ್ಟಿಗೆ ನಿಮ್ಮಂತಹ ಸೌಂದರ್ಯವತಿ ಬೇರೆ ಯಾರೂ ಬರಲಾರರು ಅನಿಸುತ್ತಿದೆ,'' ಅವಳ ನಗುವಿನಲ್ಲಿನ ಮಾದಕತೆಯೇ ಹಾಗಿತ್ತು. ಅವಳ ಕಿರುನಗೆ, ಮೋಹಕ ನೋಟ, ಮಾದಕ ಕಣ್ಣುಗಳು ನನ್ನನ್ನು ಇನ್ನಿಲ್ಲದಂತೆ ಕುಣಿಸತೊಡಗಿದ.
``ಪರಿಚಯವಾದ ಕೆಲವೇ ಕ್ಷಣಗಳಲ್ಲಿಯೇ ಎಂತಹ ಸುಳ್ಳು ಹೊಗಳಿಕೆ.... ನೀವು ತುಂಬಾ ಪಳಗಿದ ಬೇಟೆಗಾರನಂತೆ ಗೋಚರಿಸುತ್ತಿರುವಿರಿ ರವಿ,'' ಎಂದು ಹೇಳುತ್ತ ಮೊಣಕಾಲ ಮೇಲೆ ಕಾಲು ಹಾಕಿ ಕುರ್ಚಿಯ ಮೇಲೆ ಕುಳಿತ ಅವಳ ಭಂಗಿ ನನ್ನ ಹೃದಯಾಂತರಾಳದಲ್ಲಿ ಸುನಾಮಿಯ ಅಲೆಯನ್ನೇ ಎಬ್ಬಿಸಿತ್ತು.
``ಅಯ್ಯೋ ಇಲ್ಲಪ್ಪ. ನಾನು ಇವತ್ತಿನವರೆಗೂ ಒಂದು ಸೊಳ್ಳೆಯನ್ನು ಕೂಡ ಸಾಯಿಸಿಲ್ಲ.''
ಅವಳು ಮತ್ತದೇ ಮಾದಕ ನಗೆ ಬೀರುತ್ತ, ``ಆದರೆ ನೀವು ಅಷ್ಟೊಂದು ಸಂಪನ್ನರಂತೆ ಕಾಣಿಸುತ್ತಿಲ್ಲವಲ್ಲ! ಸರಿ.... ನಿಮಗೆ ಮದುವೆ ಆಗಿದೆಯಾ?''
``ಹೌದು, ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದೆ. ನೀವು ಇನ್ನೇನಾದರೂ ಕೇಳುವುದಕ್ಕೆ ಮುಂಚೆಯೇ ಎಲ್ಲಾನೂ ಹೇಳಿಬಿಡುತ್ತೇನೆ ಕೇಳಿ. ನನ್ನ ಮದುವೆಯೂ ಆಗಿದೆ, ಆ ಮದುವೆಯಿಂದ ನಾನು ಎಲ್ಲ ರೀತಿಯಿಂದಲೂ ಸಂತುಷ್ಟನಾಗಿದ್ದೇನೆ.''
``ರಿಯಲಿ.....''
``ಎಸ್, ರಿಯಲಿ.....''
``ಹಾಗಾದ್ರೆ, ಗಡದ್ದಾಗಿ ಮನೆ ಊಟ ತಿನ್ನುವವರಿಗೆ, ಹೊರಗಿನ ತಿಂಡಿಯ ಆಸೆ ಏಕೋ?'' ಎಂದು ನನ್ನ ಕಣ್ಣುಗಳನ್ನೇ ತೀಕ್ಷ್ಣವಾಗಿ ನೋಡುತ್ತ ಕೇಳಿದಳು.
``ಕೆಲವೊಮ್ಮೆ ಇನ್ನೊಬ್ಬರ ತಟ್ಟೆಯಲ್ಲಿರುವ ಸ್ವಾದಿಷ್ಟಕರ ತಿಂಡಿ ತಿನಿಸು ಕಂಡು, ಬಾಯಲ್ಲಿ ನೀರೂರುವುದು ಸಹಜ,'' ಎಂದು ನಾನು ನಿಸ್ಸಂಕೋಚದಿಂದಲೇ ಹೇಳಿದೆ.
``ಮನುಷ್ಯರಾದವರು ಇನ್ನೊಬ್ಬರ ತಟ್ಟೆಗೆ ಕೈ ಹಾಕುವ ಚಪಲ ಬೆಳೆಸಿಕೊಳ್ಳಬಾರದು. ಅವರ ಮನೆಯ ಊಟ ಅವರಿಗೇ ರುಚಿಸದಿದ್ದರೆ ಇನ್ನಿಲ್ಲದ ತಾಪತ್ರಯಗಳು ಎದುರಾಗುತ್ತವೆ ರವಿ ಸಾಹೇಬರೆ.''