ಕಥೆ - ದೀಪಾ ಪ್ರಕಾಶ್ (WRITER)
ಸುಧೀರ್ ಏರ್‌ಫೋರ್ಸ್‌ನಲ್ಲಿ ಪೈಲಟ್ ಆಗಿದ್ದರು. ಅವರು ವಿಮಾನ ಅಪಘಾತದಲ್ಲಿ ತೀರಿಕೊಂಡಿದ್ದರು. ಅವರಿಗೆ ಹೆಂಡತಿ ಶಾಂತಾ ಮತ್ತು 4 ವರ್ಷದ ಮಗಳು ಸ್ವಾತಿ ಇದ್ದರು. ಸುಟ್ಟು ಕರಕಲಾಗಿದ್ದ ಸುಧೀರ್ ಶವವನ್ನು ಮನೆಗೆ ತಂದಾಗ ಸ್ವಾತಿಯನ್ನು ಪಕ್ಕದ ಮನೆಗೆ ಕರೆದುಕೊಂಡು ಹೋಗಿದ್ದರು. ಅವಳಿಗೆ ತಂದೆಯ ಶವವನ್ನು ನೋಡಲೂ ಬಿಟ್ಟಿರಲಿಲ್ಲ. ತನ್ನ ತಂದೆ ಸತ್ತು ಹೋಗಿದ್ದಾರೆ. ಅವರಿನ್ನು ವಾಪಸ್ ಬರುವುದಿಲ್ಲ ಎಂದು ಅವಳಿಗೆ ತಿಳಿಯಲಿಲ್ಲ. ಸುಧೀರ್ ಕೆಲಸಕ್ಕೆ ಹೊರಟರೆ ಮನೆಗೆ ಬರಲು ಬಹಳ ದಿನ ಹಿಡಿಯುತ್ತಿತ್ತು. ಅವರು ಮನೆಗೆ ಬರುವಾಗ ಮಗಳಿಗೆ ಬಹಳಷ್ಟು ಆಟದ ಸಾಮಾನುಗಳನ್ನು ತರುತ್ತಿದ್ದರು. ಬಹಳಷ್ಟು ಊರುಗಳಿಗೆ ಅವಳನ್ನು ಕರೆದುಕೊಂಡು ಹೋಗುತ್ತಿದ್ದರು ಮತ್ತು ಚಂಪಕ ಮಾಸಿಕದಿಂದ ಅನೇಕ ಕಥೆಗಳನ್ನು ಹೇಳುತ್ತಿದ್ದರು. ಆ ಕಥೆಗಳನ್ನು ಕೇಳಲು ಸ್ವಾತಿಗೆ ಬಹಳ ಇಷ್ಟವಾಗುತ್ತಿತ್ತು.
ಅಪ್ಪ ಬಹಳ ದಿನ ಮನೆಗೆ ಬರದಿದ್ದಾಗ ಸ್ವಾತಿ ಅಮ್ಮನನ್ನು ಕೇಳಿದಳು, ``ಅಮ್ಮಾ, ಅಪ್ಪ ಯಾಕೆ ಮನೆಗೆ ಬರ್ತಿಲ್ಲ, ಯಾವಾಗ ಬರ್ತಾರೆ?''
ಆಗೆಲ್ಲಾ ಶಾಂತಾ, ``ಬರ್ತಾರಮ್ಮಾ, ನಿಮ್ಮ ಅಪ್ಪನಿಗೆ ರಜೆ ಸಿಕ್ಕಿಲ್ಲ. ಅವರ ಹೊಸ ಆಫೀಸರ್‌ವಬಹಳ ಸ್ಟ್ರಿಕ್ಟ್ ಅಂತೆ. ಅದಕ್ಕೆ ಅಪ್ಪನಿಗೆ ರಜೆ ಕೊಡ್ತಿಲ್ಲ,'' ಎನ್ನುತ್ತಿದ್ದಳು.
ಸ್ವಾತಿಗೆ ಬಾಸ್ ಮೇಲೆ ವಿಪರೀತ ಕೋಪ ಉಕ್ಕುತ್ತಿತ್ತು, ``ಅಮ್ಮಾ, ಅಪ್ಪನ ಬಾಸ್ ಕೆಟ್ಟವರು. ಅವರು ಸಿಕ್ಕರೆ ಚೆನ್ನಾಗಿ ಹೊಡೀತೀನಿ,'' ಎನ್ನುತ್ತಿದ್ದಳು.
ಶಾಂತಾ ಮಿಲಿಟರಿ ಕ್ಯಾಂಪಸ್‌ನಲ್ಲಿದ್ದ ಏರ್‌ಫೋರ್ಸ್ ಸ್ಕೂಲ್‌ನಲ್ಲಿ ಟೀಚರ್ ಆಗಿದ್ದಳು. ಗಂಡ ಸತ್ತ ನಂತರ ತಮ್ಮ ಬಳಿಯೇ ಬಂದಿರಲು ಅವಳ ಅಪ್ಪಅಮ್ಮ ಎಷ್ಟೇ ಕೇಳಿಕೊಂಡಿದ್ದರೂ ಒಪ್ಪದೆ ಮಗಳೊಡನೆ ಕ್ಯಾಂಪಸ್‌ನಲ್ಲೇ ವಾಸಿಸುತ್ತಿದ್ದಳು. ಶಾಂತಾ ಮರು ಮದುವೆಯಾಗಲಿ ಎಂದು ಅಪ್ಪ ಅಮ್ಮ ಬಯಸಿದ್ದರು. ಅದರ ಬಗ್ಗೆ ಕೇಳಿದಾಗೆಲ್ಲಾ, ``ಸ್ವಾತಿ ಚಿಕ್ಕ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡ ನತದೃಷ್ಟೆ. ಅವಳು ತನ್ನ ತಾಯಿಯನ್ನೂ ಕಳೆದುಕೊಳ್ಳಲು ನಾನು ಬಿಡುವುದಿಲ್ಲ. ತಾಯಂದಿರು ಮರು ಮದುವೆಯಾದಾಗ ಮಕ್ಕಳು ಹೇಗೆ ನಿರ್ಲಕ್ಷಿಸಲ್ಪಡುತ್ತಾರೆ ಎಂದು ನಾನು ನೋಡಿದ್ದೇನೆ,'' ಎನ್ನುತ್ತಿದ್ದಳು.
ಒಂದು ಮಗುವನ್ನು ಒಬ್ಬರೇ ಬೆಳೆಸುವುದು ಅಷ್ಟು ಸುಲಭದ ಕೆಲಸವಲ್ಲ. ಅವರೇ ತಂದೆ ಹಾಗೂ ತಾಯಿಯ ಪಾತ್ರ ನಿಭಾಯಿಸಬೇಕು. ಶಾಂತಾಳ ಕಷ್ಟದ ಕೆಲಸವೆಂದರೆ ಸ್ವಾತಿ ಅಪ್ಪನ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದಾಗಿತ್ತು. ಅಪ್ಪ ಯಾವಾಗ ಮನೆಗೆ ಬರುತ್ತಾರೆಂದು ಸ್ವಾತಿ ದಿನ ಅಮ್ಮನನ್ನು ಕೇಳುತ್ತಿದ್ದಳು. ಶಾಂತಿ ದಿನ ಅದೇ ಸುಳ್ಳನ್ನು ಹೇಳುತ್ತಿದ್ದಳು. ಅಪ್ಪ ಸತ್ತುಹೋದರೆಂದು ಶಾಂತಾ ಇದುವರೆಗೂ ಮಗಳಿಗೆ ಹೇಳಿರಲಿಲ್ಲ. ಅಪ್ಪ ಇನ್ನೆಂದೂ ಮನೆಗೆ ಬರುದಿಲ್ಲವೆಂದು ಹೇಳುವುದಾದರೂ ಹೇಗೆ?
ಈ ಸುಳ್ಳು ತನ್ನ ಮಗಳ ಬದುಕಿನಲ್ಲಿ ತೀವ್ರ ಸಮಸ್ಯೆ ಉಂಟು ಮಾಡುವುದೆಂದು ಶಾಂತಾಗೆ ತಿಳಿಯಲಿಲ್ಲ. ಸ್ವಾತಿ ತನ್ನ ಅಪ್ಪ ಇಂದು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಕಾಯುತ್ತಾ ಅವರು ಬರದಿದ್ದಾಗ ಖಿನ್ನತೆಗೊಳಗಾದಳು. ಅವಳು ಗೆಳತಿಯರೊಂದಿಗೆ ಆಡಲು ಕೂಡ ಹೋಗುತ್ತಿರಲಿಲ್ಲ, ಊಟವನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ಅವಳ ಆರೋಗ್ಯ ಹದಗೆಟ್ಟಿತು. ಫ್ಯಾಮಿಲಿ ಡಾಕ್ಟರ್, ಸ್ವಾತಿಯ ತಂದೆ ವಾಪಸ್ ಬರದಿದ್ದರೆ ಸ್ವಾತಿಯ ಆರೋಗ್ಯ ಸುಧಾರಿಸುವುದಿಲ್ಲವೆಂದು ಹೇಳಿದರು. ಮಗಳ ಪರಿಸ್ಥಿತಿಗಾಗಿ ಶಾಂತಾ ತನ್ನನ್ನೇ ಹಳಿದುಕೊಳ್ಳತೊಡಗಿದಳು.