ಕಥೆ – ಪ್ರಮೀಳಾ ಜಿ. ರಾವ್ (WRITER)
ವಸಂತಾಳ ಜೀವನದಲ್ಲಿ ಚಂದ್ರು ನಿಜಕ್ಕೂ ವಸಂತ ಋತುವಾಗಿಯೇ ಬಂದಿದ್ದ, ಆದರೆ ಶಿಶಿರ ಋತುವಿನ ಹಾಗೆ ಹಿಂದೆ ಸರಿದಿದ್ದ! ಅವನು ಅವಳ ಕಂಬನಿ ತುಂಬಿದ ಕಂಗಳನ್ನು ನೋಡಲಿಲ್ಲ, ಅವಳ ಮನದಾಳದ ಪ್ರೇಮಾನುರಾಗವನ್ನೂ ಗುರುತಿಸಲಿಲ್ಲ.
ಆದರೆ ವಸಂತಾ ಬಯಸಿದ್ದರೆ ಚಂದ್ರುವಿಗೆ ಖಂಡಿತಾ ಹೇಳಬಹುದಿತ್ತು, ವಿಚ್ಛೇದನ ಪಡೆಯುವುದು ಅಂದ್ರೆ, ಕಾನೂನಿನ ಕಾಗದಗಳ ಮೇಲೆ ಸುಲಭವಾಗಿ ಸರಸರ ಸಹಿ ಮಾಡಿದಷ್ಟೇ ಮಾನಸಿಕವಾಗಿ ಪರಸ್ಪರ ದೂರವಾಗುವುದು ಖಂಡಿತಾ ಸುಲಭವಾಗಿರಲಿಲ್ಲ, ಅದರಲ್ಲೂ ಮುಖ್ಯವಾಗಿ ಮಹಾ ಭಾವುಕಳಾದ ವಸಂತಾಳಿಗೆ.
ವಸಂತಾ ಬಯಸಿದ್ದರೆ ಅವನಿಂದ ಖಂಡಿತಾ ದೊಡ್ಡ ಮೊತ್ತದ ಜೀವನಾಂಶ ಪಡೆದು ಇಡೀ ಜೀವನ ಆರ್ಥಿಕ ಸಂಕಷ್ಟಗಳಿಲ್ಲದೆ ಕಳೆಯಬಹುದಿತ್ತು, ಆದರೆ ಅವಳೆಂದೂ ಅವನ ಎಂಜಲು ಕಾಸಿಗೆ ಕೈಯೊಡ್ಡಲಿಲ್ಲ, ಅವಳೊಳಗಿದ್ದ ಸ್ವಾಭಿಮಾನಿ ಹೆಣ್ಣು ಅದಕ್ಕೆಂದೂ ಆಸ್ಪದ ಕೊಡಲೇ ಇಲ್ಲ. ಏಕೆಂದರೆ ಯಾವ ಸಂಬಂಧ ಪ್ರೇಮದ ಪರಾಕಾಷ್ಠೆಯಿಂದ ಪವಿತ್ರ ಸಂಕೇತವಾಗಬೇಕಿತ್ತೋ, ಅದು ಒಡೆದ ಹೃದಯಗಳ ಪ್ರತೀಕವಾಗಿ ಆ ದಾಂಪತ್ಯಕ್ಕೆ ಒಂದು ದೊಡ್ಡ ತಿರುವು ನೀಡಿ, ಶಾಶ್ವತವಾಗಿ ಪರಸ್ಪರ ದೂರಾಗುವುದೊಂದೇ ಮಾರ್ಗವಾಗಿ ಉಳಿಯಿತು.
ಆದರೆ ವಸಂತಾಳ ಪ್ರೇಮಮಯ ಜೀವನದಲ್ಲಿ ಇಂಥ ಅಪಸ್ವರ ಮಿಡಿದಿದ್ದಾದರೂ ಏಕೆ? ಅವಳ ಪಾಲಿಗೆ ಚಂದ್ರು ಅಷ್ಟು ಕಟುವಾದನೇಕೆ? ಅವರಿಬ್ಬರೂ ಗಾಢವಾಗಿ ಪ್ರೇಮಿಸಿಯೇ ಮದುವೆಯಾದವರು, ಅವಳ ನೌಕರಿ ಎಂಥದ್ದು, ಅವಳ ಜವಾಬ್ದಾರಿಗಳೇನು ಎಂಬುದನ್ನು ಅರಿತೇ ಅವನು ಅವಳ ಕೈ ಹಿಡಿದಿದ್ದ. ಆದರೆ ಎಲ್ಲಾ ಮಾಮೂಲಿ ಗಂಡಂದಿರಂತೆ ಚಂದ್ರು ಅವಳ ಮೇಲೆ ಒತ್ತಡ ಹೇರುತ್ತಾ ತನ್ನ ಹಠ ಸಾಧಿಸಿದ್ದೇಕೆ?
ಅವಳು ಎಷ್ಟು ಕಷ್ಟಪಟ್ಟ ನಂತರ ಆ ನೌಕರಿ ವಸಂತಾಳಿಗೆ ಸಿಕ್ಕಿತ್ತೆಂದು ಅವನಿಗೇನು ಗೊತ್ತು? ಆದರೆ ಮದುವೆಯಾದ ನಂತರ ಏನೊಂದೂ ಯೋಚಿಸದೆ, ವಿಚಾರಿಸದೆ ಆ ಕೆಲಸ ಬಿಟ್ಟುಬಿಡು ಎಂದು ಒತ್ತಾಯಿಸತೊಡಗಿದ. ಅಷ್ಟು ಕಷ್ಟಪಟ್ಟು ಗಿಟ್ಟಿಸಿದ ಕೆಲಸವನ್ನು ಕಳೆದುಕೊಳ್ಳಲು ವಸಂತಾ ಸಿದ್ಧಳಿರಲಿಲ್ಲ. ಮದುವೆಯಾದ 2 ವರ್ಷಗಳ ನಂತರ ಹುಟ್ಟಿದವಳು ಪ್ರಿಯಾ. ಅದರಿಂದ ದಂಪತಿಗಳು ಬಹಳ ಸಂಭ್ರಮಪಟ್ಟಿದ್ದರು.
ಆದರೆ ಚಂದ್ರುವಿನ ಹಠ ಆ ಆನಂದವನ್ನು ಬಹಳ ದಿನ ಉಳಿಯಗೊಡಲಿಲ್ಲ. ಹೆಣ್ಣಿನ ಕರ್ತವ್ಯವೆಂದರೆ ಕೇವಲ ಮನೆ, ಗಂಡ, ಮಕ್ಕಳನ್ನು ನೋಡಿಕೊಳ್ಳುವುದಷ್ಟೇ ಎಂದು ಕೂಗಾಡುತ್ತಿದ್ದ. ಕ್ರಮೇಣ ಇಬ್ಬರ ನಡುವೆ ಮನಸ್ತಾಪ ಹೆಚ್ಚುತ್ತಾ ಹೋಯಿತು. ಎಲ್ಲದಕ್ಕೂ ಅವನು ಅವಳ ಮೇಲೆ ದಬ್ಬಾಳಿಕೆ ಮಾಡತೊಡಗಿದ. ತನ್ನ ಸಂಸಾರದ ಭವಿಷ್ಯವೇನು? ಎಂದು ಅವಳು ಸದಾ ಚಿಂತೆಯಲ್ಲಿ ಮುಳುಗಿರುತ್ತಿದ್ದಳು. ಅಂತೂ ಮದುವೆಯಾದ 5 ವರ್ಷಗಳ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಅದು ವಿಚ್ಛೇದನದ ಮಟ್ಟ ತಲುಪಿತು. ಅಲ್ಲಿಂದ ಮುಂದೆ 5 ವರ್ಷಗಳ ಕಾಲ ಅವರು ಕರೆದಾಗೆಲ್ಲ ಕೋರ್ಟಿನ ಕಟಕಟೆಯಲ್ಲಿ ಹಾಜರಾಗಬೇಕಿತ್ತು. ಅದರಿಂದ ಅವಳ ಮನಸ್ಸು ಸಂಪೂರ್ಣ ಶೂನ್ಯವಾಗತೊಡಗಿತು. ಯಾವಾಗ ಈ ವಿವಾಹ ಬಂಧನದಿಂದ ಶಾಶ್ವತ ಬಿಡುಗಡೆ ಸಿಗುತ್ತದೋ ಎಂದು ಇಬ್ಬರೂ ಕೊರಗಲಾರಂಭಿಸಿದರು. ಅಂತೂ ವಿಚ್ಛೇದನದ ದಿನ ಬಂದೇಬಿಟ್ಟಿತ್ತ. ಇಬ್ಬರು ವ್ಯಕ್ತಿಗಳು ಪರಸ್ಪರ ಹೊಂದಿಕೊಂಡು ಬಾಳಲು ಸಾಧ್ಯವೇ ಇಲ್ಲ ಎಂಬ ಹಂತ ತಲುಪಿದಾಗ, ಕಾನೂನು ಕೇವಲ ಕಟ್ಟಳೆಗಳನ್ನು ಹೇರುತ್ತಾ ಎಷ್ಟು ದಿನ ಅವರನ್ನು ಬಂಧಿಸಿಡಲು ಸಾಧ್ಯ?
ಆದರೆ ಡೈವೋರ್ಸ್ ಸಿಕ್ಕಿದ ದಿನ ಎಲ್ಲ ನುಚ್ಚು ನೂರಾಯಿತು ಎಂದು ಅವಳಿಗೆ ತುಂಬಾ ದುಃಖವಾಗಿತ್ತು. ಮುಂದೆ ಕಾನೂನು ಕ್ರಮ ಜರುಗಿಸಲು ಚಂದ್ರು ಪ್ರಿಯಾಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದಾಗ ಅವಳು ಹೆದರಿ ಹೋದಳು. ಆದರೆ ಅದೇನಾಯ್ತೋ ಏನೋ? ಆ ಕ್ರಮ ನಿಲ್ಲಿಸಿ ಅವನು ಒಂದು ದಿನ ಬಂದು ಹೇಳಿದ, “ವಸಂತಾ, ಪ್ರಿಯಾ ನಿನ್ನ ಬಳಿಯೇ ಇರಲಿ. ನಾನು ಅವಳ ತಂದೆ ಎಂಬುದನ್ನು ಮರೆಯಬೇಡ. ವಾರಕ್ಕೊಮ್ಮೆ ಬಂದು ನೋಡಿಕೊಂಡು ಹೋಗುತ್ತೇನೆ. ನನಗೆ ಅವಳ ಕಾಳಜಿ ಇದ್ದೇ ಇರುತ್ತದೆ?”
ವಸಂತಾ ಏನು ಹೇಳಿಯಾಳು? ಎಲ್ಲ ಹಾಳಾಗಿ ಹೋಗಿತ್ತು. ಮೊದಲು ಚಂದ್ರುವಿನೊಂದಿಗೆ ಸ್ನೇಹ, ಪ್ರೇಮ, ನಂತರ ಮದುವೆ, ಮಗು…. ಆ ಮೇಲೆ ವಿಚ್ಛೇದನದೊಂದಿಗೆ ಎಲ್ಲವೂ ಮುಗಿದಿತ್ತು. ಕೆಲಸ ಅಥವಾ ಗಂಡ….. ಎರಡರಲ್ಲಿ ಒಂದನ್ನು ಮಾತ್ರ ಆರಿಸಿಕೊಳ್ಳಬೇಕಾಗಿ ಬಂದಾಗ ಅವಳು ಕೆಲಸವನ್ನೇ ಉಳಿಸಿಕೊಂಡಿದ್ದಳು. ಅದು ಕೇಂದ್ರ ಸರ್ಕಾರಿ ನೌಕರಿ, ಅನೇಕ ಸವಲತ್ತುಗಳಿದ್ದನಿ. ನಿನೃತ್ತಿ ನಂತರ ಪೆನ್ಶನ್‌ಗೇನೂ ಕೊರತೆ ಇರಲಿಲ್ಲ. ಆದರೆ ಚಂದ್ರು…..? ಅನನು ಇನಳನ್ನು ನಡುನಯೇ ಬಿಟ್ಟು ಹೋಗಿಬಿಟ್ಟ.
ಆ ನೋನಿ ಬಹಳ ದಿನ ಕಾಡುತ್ತಿತ್ತು. ಹೃದಯಕ್ಕಾದ ಆ ಗಾಯ ಮಾಗಲು ನರ್ಷಗಳೇ ಹಿಡಿಯಿತು. ಇತರ ಗಾಯ ವಾಸಿ ಆಗುವಂತೆಯೇ ಅದೂ ಕ್ರಮೇಣ ಮರೆಯಾಯಿತು.
ಚಂದ್ರು ಪ್ರಿಯಾಳನ್ನು ತಿಂಗಳ ಕೊನೆಯ ಭಾನುವಾರದಂದು ಭೇಟಿಯಾಗಿ ಇಡೀ ದಿನ ಕಳೆಯುವುದು ಎಂಬುದು ನಿಶ್ಚಯವಾಗಿತ್ತು. ಆ ದಿನ ಬರಲಿ ಎಂದು ಪ್ರಿಯಾ ಸಹ ತಿಂಗಳಿಡೀ ಬಲು ಕೌತುಕದಿಂದ ಕಾಯುತ್ತಿದ್ದಳು. ಬೆಳಗ್ಗೆ 8 ಗಂಟೆಗೆ ಬರುತ್ತಿದ್ದ ಚಂದ್ರು, ಇಡೀ ದಿನ ಮಗಳೊಂದಿಗೆ ಕಳೆದು ರಾತ್ರಿ 8 ಗಂಟೆಗೆ ಕರೆತಂದು ಬಿಡುತ್ತಿದ್ದ. ಸಂಜೆ ಅವಳು ಹಿಂದಿರುಗುವಾಗ, ಪ್ರಿಯಾ ಬಳಿ ರಾಶಿ ಗಿಫ್ಟ್ಸ್ ಇರುತ್ತಿತ್ತು.
`ಅಮ್ಮಾ, ಪಪ್ಪಾ ತುಂಬಾ ಒಳ್ಳೆಯವರು!’ ಎಂದೇ ಪ್ರತಿ ಸಲ ಹೇಳುವಳು. ತನ್ನನ್ನು ಅವರು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಎಂದು ಪ್ರಿಯಾ ಹೇಳಿದಾಗೆಲ್ಲ, ವಸಂತಾಳಿಗೆ ಇನ್ನಿಲ್ಲದ ಸಂಕಟ ಆಗುತ್ತಿತ್ತು. ಅವಳ ಆ ಪ್ರಶ್ನೆಗೆ ತನ್ನ ಮಾತೃತ್ವದ ಆರೈಕೆಯಲ್ಲಿ ಕೊರತೆಯೇ ಎಂದು ಪ್ರಶ್ನಿಸಿಕೊಳ್ಳುವಳು.
ಒಟ್ಟಿಗಿದ್ದಾಗ ಚಂದ್ರು ಒಂದು ಫ್ಲಾಟ್ ಕೊಂಡಿದ್ದ. ಅದರಲ್ಲಿ 2-3 ವರ್ಷ ಕಳೆಯುವಷ್ಟರಲ್ಲಿ ವಿಚ್ಛೇದನ ಆಗಿತ್ತು. ಆದರೆ ಚಂದ್ರು ವಸಂತಾಳಿಂದ ಬಲವಂತವಾಗಿ ಆ ಮನೆಯನ್ನಾಗಲಿ, ಅವಳ ಮಗುನ್ನಾಗಲಿ ಸೆಳೆದುಕೊಳ್ಳಲಿಲ್ಲ. ವಸಂತಾ ಈಗಲೂ ಅಲ್ಲಿಯೇ ವಾಸಿಸುತ್ತಿದ್ದಳು. ಹಾಗಿರುವಾಗ ಮಗುವಿನ ಮುಂದೆ ಅವನನ್ನು ಹೇಗೆ ದೂಷಿಸುವುದು? ವಿಚ್ಛೇದನದ ಕೊನೆಯ ಹಂತದಲ್ಲಿ ಚಂದ್ರು ಹೇಳಿದ್ದ, “ವಸಂತಾ, ನೀನು ಮಗುವಿನ ಜೊತೆ ಇದೇ ಮನೆಯಲ್ಲಿದ್ದುಕೋ. ನಾನು ಮೆನ್ಸ್ ಹಾಸ್ಟೆಲ್‌ಗೆ ಶಿಫ್ಟ್ ಆಗುತ್ತೇನೆ,” ಅವನು ಅಲ್ಲಿಂದ ಹೊರಡಬೇಕು ಎನ್ನುವಾಗ ಪ್ರಿಯಾ ಅವನನ್ನು ಗಟ್ಟಿಯಾಗಿ ಅಪ್ಪಿಹಿಡಿದಳು. “ಪಪ್ಪಾ, ನನ್ನನ್ನೂ ಕರೆದುಕೊಂಡು ಹೋಗು,” ಎಂದು ಚೀರಾಡಿದಳು.
5 ವರ್ಷದ ಮಗು ತನ್ನ ತಂದೆಯ ಪ್ರೀತಿಗಾಗಿ ಹಾಗೆ ಅಳುತ್ತಿದ್ದರೆ ಯಾವ ಹೆತ್ತ ಕರುಳಿಗೆ ತಾನೇ ಸಂಕಟವಾಗದು? ವಸಂತಾ ಅವಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾ ಕೆನ್ನೆಗೆ ಒಂದು ಬಾರಿಸಿದ್ದಳು. ಬಿಕ್ಕಳಿಸುತ್ತಾ ನಿರ್ಗಮಿಸುತ್ತಿದ್ದ ತಂದೆಯನ್ನೇ ನೋಡುತ್ತಾ ನಿಂತುಬಿಟ್ಟಿದ್ದಳು ಪ್ರಿಯಾ. ಆ ದಿನದಿಂದಲೇ ತಾಯಿ ಮಗಳ ಸಂಬಂಧದ ಮಧ್ಯೆ ಸಣ್ಣ ಬಿರುಕು ಕಾಣಿಸಿತು ಎನ್ನಬಹುದು. ಅದು ಕ್ರಮೇಣ ದೊಡ್ಡದಾಗುತ್ತಾ ಹೋದದ್ದು ಮಾತ್ರ ದುರಾದೃಷ್ಟವೇ ಸರಿ.
ಇದನ್ನೆಲ್ಲ ಯೋಚಿಸುತ್ತಾ ಕುಳಿತ ವಸಂತಾಳಿಗೆ ಇದರಲ್ಲಿ ತನ್ನ ಪಾಲಿನ ತಪ್ಪೆಷ್ಟು ಎನಿಸಿತು. ಗಂಡನ ಎಲ್ಲಾ ಅಹಂಕಾರವನ್ನೂ ಹಲ್ಲು ಕಚ್ಚಿಕೊಂಡು ಸಹಿಸಿಕೊಳ್ಳುತ್ತಾ ಮೌನವಾಗಿ ಇದ್ದುಬಿಡಬೇಕಿತ್ತೇ? ತನ್ನನ್ನು ಈ ಕೆಲಸದಿಂದ ಬಿಡಿಸಲೇಬೇಕು ಎಂದು ಅವನಿಗೇಕೆ ಅಷ್ಟು ಹಠ? ಒಂದಂತೂ ನಿಜ ಎನಿಸಿತ್ತು, ಇತರ ಹೆಚ್ಚಿಗೇನೂ ಓದಿರದ ಸಾಧಾರಣ ಗೃಹಿಣಿಯರಂತೆ ಸದಾ ಗಂಡನ ದಾರಿ ಎದುರು ನೋಡುತ್ತಾ, ಅವನು ಒದಗಿಸುವ ಆರ್ಥಿಕ ರಕ್ಷಣೆಯೇ ತನ್ನ ಸರ್ವಸ್ವವೆಂದು ಅವನು ಹಾಕಿದ ಗೀಟು ದಾಟದೆ ಕಾಯಾ ವಾಚಾ ಮನಸಾ ದಾಸಿಯಾಗಿ ನಡೆದುಕೊಂಡಿದ್ದರೆ ಅವನು ಹೆಚ್ಚು ಸಂತೋಷಪಡುತ್ತಿದ್ದ!
ಬಿಡುವಾಗಿ ಮನೆಯಲ್ಲೇ ಉಳಿಯುವ ಕಾರಣ ಮನೆಗೆಲಸ ಪೂರೈಸಿ ಇತರ ಹೆಂಗಸರೊಡನೆ ಹರಟೆ, ಕಿಟಿ ಪಾರ್ಟಿ, ಅಪಾರ್ಟ್‌ಮೆಂಟ್ ಸಮಾಚಾರ ಇತ್ಯಾದಿಗಳ ಕಡೆ ಗಮನಹರಿಸಬಹುದಿತ್ತು. ಗಂಡನ ಬಳಿ ಸದಾ ಹೊಸ ಸೀರೆ, ಒಡವೆ ಕೊಡಿಸೆಂದು ಪೀಡಿಸುತ್ತಾ, ಪ್ರವಾಸ ಕರೆದೊಯ್ಯಲು ದುಂಬಾಲು ಬೀಳುತ್ತಿದ್ದರೆ ಅವನಿಗೆ ಹೆಚ್ಚು ಇಷ್ಟವಾಗುತ್ತಿತ್ತೇನೋ….? ಆದರೆ ವಸಂತಾ ಇಂಥದ್ದನ್ನೆಲ್ಲ ಬಯಸುವವಳೇ ಅಲ್ಲ. ತನ್ನ ಸ್ವಾಭಿಮಾನ ಬದಿಗೊತ್ತಿ ಹಲ್ಲುಗಿಂಜುತ್ತಾ ಅವನ ಹಿಂದೆ ಮುಂದೆ ಸುತ್ತುವ ಸ್ವಭಾವ ಅವಳದಲ್ಲ.
ಇದೇ ವಿಚಾರಗಳು ಮತ್ತೆ ಮತ್ತೆ ಅವಳ ತಲೆಯಲ್ಲಿ ಚಕ್ರಾಕಾರವಾಗಿ ಸುತ್ತುತ್ತಾ ಈ ವಿಚ್ಛೇದನಕ್ಕೆ ತಾನೆಷ್ಟು ಕಾರಣಳು ಎಂದು ತರ್ಕಿಸುತ್ತಿತ್ತು. ಆದರೆ ಇದರಲ್ಲಿ ಹೆಚ್ಚಿನ ತಪ್ಪು ಯಾರದು? ಯಾರು ಇದನ್ನು ತಡೆಯಬೇಕಿತ್ತು?
ವಸಂತಾ ಮಧ್ಯಮ ವರ್ಗಕ್ಕೆ ಸೇರಿದ ಹೆಣ್ಣು. ತಂದೆ ನಿವೃತ್ತ ಪ್ರೈಮರಿ ಸ್ಕೂಲ್ ಟೀಚರ್, ತಾಯಿ ಅಪ್ಪಟ ಗೃಹಿಣಿ. ಅವರ ಬಳಿ ಸಿಂಗಲ್ ಬೆಡ್‌ರೂಮಿನ ಸಣ್ಣ ಮನೆ ಇತ್ತು. ಒಳಗಿನ ರೂಮಿನಲ್ಲಿ ಅಣ್ಣ, ಅತ್ತಿಗೆ, ಮಗು ಮಲಗಿದರೆ ಹೊರಗಿನ ಹಾಲ್‌ನಲ್ಲಿ ತಾಯಿ, ತಂದೆ ಜೊತೆ ಇವಳು ಬಂದಾಗ ಅಲ್ಲೇ ಉಳಿಯಬೇಕಿತ್ತು. ವಿಚ್ಛೇದನದ ವಿಷಯ ಖಾತ್ರಿಯಾದಂತೆ ಅತ್ತಿಗೆ ಇವಳೊಂದಿಗೆ ವರ್ತಿಸುತ್ತಿದ್ದ ರೀತಿಯೇ ಬದಲಾಯಿತು.
ಅವಳು ಒಂದು ದಿನ ನೇರವಾಗಿ ಕೇಳಿಯೇಬಿಟ್ಟಳು, “ಡೈವೋರ್ಸ್ ನಂತರ ಪ್ರಿಯಾ ಜೊತೆ ನೀನು ಎಲ್ಲಿರುತ್ತಿ ವಸಂತಾ?”
ಅಂದ್ರೆ ವಿಚ್ಛೇದಿತೆ ಎಂದೂ ತವರಿನ ಆಶ್ರಯ ಬಯಸಿ ಬರಬಾರದು ಎಂಬುದನ್ನು ದೃಢವಾಗಿಯೇ ಹೇಳಿದ್ದಳು. ಅಕಸ್ಮಾತ್ ಚಂದ್ರು ಈ ಫ್ಲಾಟ್‌ನ್ನು ತನಗೆ ಬಿಟ್ಟುಕೊಡದೆ ಹೋಗಿದ್ದರೆ ಆಗ ತಾವು ಎಲ್ಲಿರಬೇಕಿತ್ತು? ಇದನ್ನು ಯೋಚಿಸಿ 12 ವರ್ಷಗಳ ನಂತರ ಇಂದಿಗೂ ಭಯಪಡುತ್ತಾಳೆ ವಸಂತಾ.
ವಿಚ್ಛೇದನದ ನಂತರ ಜೀವನ ಹೊಸ ತಿರುವು ಪಡೆದಿತ್ತು. ಆಫೀಸ್‌ನಲ್ಲಿ ಹೊಸ ಬಾಸ್ ಬಂದಿದ್ದ. ಕೆಲಸದ ಸಲುವಾಗಿ ಎಷ್ಟೋ ಸಲ ಫೈಲ್ಸ್ ಹಿಡಿದು ತಾನು ಬಾಸ್ ಚೇಂಬರ್‌ಗೆ ಹೋಗಿ ಚರ್ಚೆ ಮಾಡಿ ಬರಬೇಕಿತ್ತು. ಅತಿ ಹಸನ್ಮುಖಿ ಸ್ವಭಾವದ ಶೇಖರ್, ನಿಧಾನವಾಗಿ ಇವಳೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳತೊಡಗಿದ. ಆ ಸ್ನೇಹ ಸಲುಗೆ ಕ್ರಮೇಣ ಅವನು ತನ್ನತ್ತ ಅನುರಾಗ ಬೆಳೆಸಿಕೊಳ್ಳುತ್ತಿರುವುದನ್ನು ಅವಳು ಗಮನಿಸಿದಳು.
ಒಂದು ದಿನ ಶೇಖರ್ ಹೇಳಿದ, “ನೀವು ನಿಮ್ಮ ಪತಿಯಿಂದ ವಿಚ್ಛೇದನ ಪಡೆದಿರಂತೆ…… ಸಾರಿ ಟು ನೋಟ್ ದಟ್…..”
“ಹೌದು….” ಸಂಕೋಚದಿಂದ ಹೇಳಿದಳು ವಸಂತಾ, “ಆದರೆ ಅದಕ್ಕೆ ನೀವೇಕೆ ಸಾರಿ ಹೇಳಬೇಕು? ದಟ್ಸ್ ಓ.ಕೆ.”
ಫೈಲ್ಸ್ ತೆಗೆದುಕೊಂಡು ಅವಳು ಹೊರಡಬೇಕೆಂದಿದ್ದಾಗ ಶೇಖರ್ ಮತ್ತೆ ತಡೆದು ಹೇಳಿದ, “ನನಗೆ ನಿಮ್ಮ ಕಷ್ಟ ಅರ್ಥ ಆಗುತ್ತೆ. ನಾನೂ ಸಹ ನಿಮ್ಮಂತೆಯೇ ವಿಚ್ಛೇದಿತ…..”
ಪ್ರಶ್ನಾರ್ಥಕವಾಗಿ ಅವನೆಡೆ ನೋಡುತ್ತಾ, ಅದಕ್ಕೇನೂ ಉತ್ತರಿಸದೆ ಅವಳು ತನ್ನ ಟೇಬಲ್ ಕಡೆ ಹೊರಟುಹೋದಳು.
ಅನೇಕ ವರ್ಷಗಳ ಕಾಲ ಗಂಡಿನ ಸಂಪರ್ಕವಿಲ್ಲದೆ ಇದ್ದ ಅವಳು ಇತರ ಗಂಡಸರನ್ನು ಕಂಡಾಗ ಶಿಲಾ ವಿಗ್ರಹವೇ ಆಗಿರುತ್ತಿದ್ದಳು. ಕ್ರಮೇಣ ಶೇಖರನೊಂದಿಗಿನ ಪ್ರೀತಿಪೂರ್ವಕ ಒಡನಾಟ, ಅವಳ ಹೃದಯದಲ್ಲಿದ್ದ ಕಲ್ಲನ್ನು ಕರಗಿಸತೊಡಗಿತು.
ಒಂದು ದಿನ ಕನ್ನಡಿ ಮುಂದೆ ನಿಂತು ಅವಳು ತನ್ನನ್ನೇ ಗಮನಿಸಿಕೊಂಡಳು. ತನ್ನ ಅಂದದ ಸೌಂದರ್ಯ ಇನ್ನೂ ಹಾಗೇ ಉಳಿದಿದೆ ಎನಿಸಿತು. ಹಿಂದೆ ಚಂದ್ರು ಪ್ರೇಮದಲ್ಲಿ ಅದೆಷ್ಟು ಸಲ ಹೇಳಿಲ್ಲ, “ನೀನು ಬಹಳ ಸುಂದರವಾಗಿದ್ದಿ ವಸಂತಾ!”
ತಾನು ಏಕೆ ಮನದ ದೃಢತೆ ಕಳೆದುಕೊಳ್ಳುತ್ತಿದ್ದೇನೆ ಎಂದು ಅವಳಿಗೆ ಅರಿವಾಗಲಿಲ್ಲ. ತನ್ನ ಮನಸ್ಸು ಮತ್ತೊಂದು ಮದುವೆಗೆ ಸಿದ್ಧವಾಗುತ್ತಿದೆಯೇ? ಎಂದು ಚಿಂತಿಸಿದಳು.
ಮಾರನೇ ದಿನ ಅಗತ್ಯಕ್ಕಿಂತ ತುಸು ಹೆಚ್ಚಾಗಿಯೇ ಅಲಂಕರಿಸಿಕೊಂಡು ಆಫೀಸಿಗೆ ಬಂದಾಗ, ಸ್ತ್ರೀ ಸಹೋದ್ಯೋಗಿಗಳು ಬಾಯಿ ಬಿಟ್ಟು ಕೇಳಿದರು, “ಏನಿತ್ತು ವಸಂತಾ…. ತುಂಬಾ ಮಿಂಚಿಂಗ್ ಮಿಂಚಿಂಗ್!” ಅದೇ ತರಹ ಪುರುಷ ಸಹೋದ್ಯೋಗಿಗಳೂ ಅವಳನ್ನು ಅಪಾರ ಮೆಚ್ಚುಗೆಯಿಂದ ದಿಟ್ಟಿಸತೊಡಗಿದರು.
ಆ ಸಂಜೆ ಅವಳು ಮನೆಗೆ ಹೊರಡಲು ಬಸ್ ಸ್ಟಾಪ್‌ನಲ್ಲಿ ಕಾಯುತ್ತಿದ್ದಾಗ ಆಕಸ್ಮಿಕವಾಗಿ ಶೇಖರ್ ತನ್ನ ಕಾರಿನೊಂದಿಗೆ ಆ ಬದಿ ಬಂದ.
“ಬನ್ನಿ ವಸಂತಾ, ನಾನು ಡ್ರಾಪ್ ಮಾಡ್ತೀನಿ,” ಎಂದ.
“ಪರವಾಗಿಲ್ಲ ಸಾರ್, ಇನ್ನೇನು ಬಸ್ಸು ಬರುವ ಹೊತ್ತಾಯ್ತು.”
“ನೀವು ಪ್ರತಿದಿನ ಬಸ್ಸಿನಲ್ಲಿ ಹೋಗುತ್ತೀರಿ ಅಂತ ಗೊತ್ತು…. ಆದರೆ ಇವತ್ತು ನೋಡಿ, ಮಳೆ ಬರುವ ಹಾಗಿದೆ. ಮತ್ತೆ ನಿಮ್ಮ ಮಗಳು ನಿಮಗಾಗಿ ಕಾಯುತ್ತಿರಬಹುದು ಅಲ್ಲವೇ?”
ಪ್ರಿಯಾಳ ನೆನಪಾಗುತ್ತಲೇ ಬೇಗ ಮನೆ ಸೇರೋಣ ಎಂದು ವಸಂತಾ ಕಾರೇರಿದಳು ಮನೆ ಸಮೀಪಿಸುವಷ್ಟರಲ್ಲಿ ಮಳೆ ಜೋರಾಗಿಯೇ ಬಂದುಬಿಟ್ಟಿತು. ಮನೆ ಮುಂದೆ ಕಾರು ನಿಲ್ಲಿಸಿದ ಶೇಖರನಿಗೆ ವಸಂತಾ ವಿನಮ್ರವಾಗಿ ಹೇಳಿದಳು, “ಮಳೆ ಜೋರಾಗಿದೆ, ನಮ್ಮ ಮನೆಯಲ್ಲಿ 2 ಘಳಿಗೆ ಕುಳಿತು ಟೀ ಕುಡಿದು ಸುಧಾರಿಸಿಕೊಳ್ಳಿ. ನಂತರ ಹೊರಡಬಹುದು.”
ಅವಳ ಮಾತಿಗೆ ಇಲ್ಲವೆನ್ನಲಾಗದೆ ಶೇಖರ್ ಒಳಬಂದ. ಅವನಿಗೂ ಬೇಗ ಮನೆಗೆ ಹೋಗಿ ಮಾಡುವುದೇನೂ ಇರಲಿಲ್ಲ. ಪ್ರಿಯಾ ಮೊಬೈಲ್‌ನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದಳು. ಅವಳು ಆಶ್ಚರ್ಯದಿಂದ ಶೇಖರನತ್ತ ನೋಡಿದಾಗ ವಸಂತಾ ಪರಿಚಯಿಸಿದಳು, “ಪ್ರಿಯಾ, ಇವರು ಶೇಖರ್ ಅಂಕಲ್, ನಮ್ಮ ಕಂಪನಿ ಬಾಸ್.”
ಶೇಖರನಿಗೆ ನಮಸ್ತೆ ಹೇಳಿದ ಪ್ರಿಯಾ, ತನ್ನ ಕೋಣೆಗೆ ಹೊರಟುಹೋದಳು. ಶೇಖರನ ಆಗಮನ ಪ್ರಿಯಾಳಿಗೆ ಖಂಡಿತಾ ಸರಿಹೋಗಲಿಲ್ಲ ಎಂಬುದು ಅರ್ಥವಾಯಿತು.
ಬೇಗ ಬೇಗ ಡ್ರೆಸ್ ಬದಲಾಯಿಸಿ, ಕಾಟನ್ ಸೀರೆ ಉಟ್ಟು ಬಂದ ವಸಂತಾ, ಟೀ ತಯಾರಿಸಿ ಹುರಿಗಾಳಿನ ಜೊತೆ ಕೊಟ್ಟು ತಾನೂ ತೆಗೆದುಕೊಂಡಳು. ಹೀಗೆ ಅದೂ ಇದೂ ಕೌಟುಂಬಿಕ ವಿಷಯ ಮಾತನಾಡುತ್ತಾ ಸ್ವಲ್ಪ ಹೊತ್ತಿನ ನಂತರ ಶೇಖರ್ ಹೊರಟು ಹೋದ. ಅಷ್ಟು ಹೊತ್ತಿಗೆ ಮಳೆ ನಿಂತಿತ್ತು.
ಶೇಖರ್ ಹೊರಟ ನಂತರ ಪ್ರಿಯಾ ಬಂದು ಹೇಳಿದಳು, “ಅಮ್ಮಾ, ನೀನು ಹೀಗೆ ಬೇರೆಯವರೊಂದಿಗೆ ಬೆರೆತು ಮಾತನಾಡುವುದು ನನಗೆ ಖಂಡಿತಾ ಇಷ್ಟವಿಲ್ಲ!”
ವಸಂತಾಳ ಬಾಯಿಯಿಂದ ಆಕಸ್ಮಿಕವಾಗಿ ಉತ್ತರ ಬಂತು, “ಆದರೆ ನನ್ನವರು ಅಂತ ಒಬ್ಬರೂ ಇಲ್ಲವೇ…..”
ಪ್ರಿಯಾ ಇವಳತ್ತ ಕಿಡಿಕಾರುವ ನೋಟ ಬೀರುತ್ತಾ ಅಲ್ಲಿಂದ ದಾಪುಗಾಲು ಹಾಕಿಕೊಂಡು ಹೊರಗೆ ಹೊರಟುಹೋದಳು. ಆದರೆ ಆ ದಿನದ ನಂತರ ಶೇಖರ್ ತನ್ನಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಿರುವುದನ್ನು ವಸಂತಾ ಸ್ಪಷ್ಟ ಗುರುತಿಸಿದಳು. ಒಂದು ದಿನ ಅವನು ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಪತ್ನಿಯಿಂದ ವಿಚ್ಛೇದನ ಪಡೆಯಬೇಕಾಯಿತು ಎಂದೂ ತಿಳಿಸಿದ.
ಹೀಗೆ ಆರಂಭವಾದ ನಿಕಟತೆ ಮುಂದೆ ಕಾರಿನಲ್ಲಿ ಲಾಂಗ್ ಡ್ರೈವ್‌ಗೆ ಹೋಗಿ, ಊಟ ಮುಗಿಸಿ ಬರುವಂತಾಯಿತು. ಕ್ರಮೇಣ ಅವಳಿಗೆ ಶೇಖರನ ಸಾಮೀಪ್ಯ ಬಹಳ ಪ್ರಿಯವಾಗತೊಡಗಿತು, ಸಹಜವಾಗಿಯೇ ನಿಕಟವಾದರು. ತನ್ನ ಮನದ ಖಾಲಿತನ ಈಗ ತುಂಬುತ್ತಿರುವಂತೆ ಅವಳಿಗೆ ಭಾಸವಾಯಿತು. ಒಮ್ಮೊಮ್ಮೆ ಶೇಖರನನ್ನು ಅವಳು ಮನೆಗೂ ಊಟಕ್ಕೆ ಕರೆಯುತ್ತಿದ್ದಳು. ಆಗೆಲ್ಲ ಪ್ರಿಯಾ ಬೇಕೆಂದೇ ಗೆಳತಿ ಮನೆಗೆ ಹೋಗಿಬಿಡುವಳು. ತಾನು ಈ ಸಂಬಂಧ ಮುಂದುವರಿಸಲು ಒಂದು ಹೆಜ್ಜೆ ಮುಂದೆ ಇರಿಸಿದರೂ ಪ್ರಿಯಾ ಒಪ್ಪುವಳಲ್ಲ ಎಂಬುದು ವಸಂತಾಳಿಗೆ ಚೆನ್ನಾಗಿಯೇ ತಿಳಿಯಿತು.
ಶೇಖರ್ ಈ ಸಂಬಂಧಕ್ಕೆ ಸುಂದರ ಹೆಸರು ನೀಡಲು ಬಯಸಿದ. ತನ್ನನ್ನು ಮದುವೆ ಆಗುವಂತೆ ನೇರವಾಗಿಯೇ ವಸಂತಾಳನ್ನು ಕೇಳಿದ. ಆದರೆ ಪ್ರಿಯಾ? ಅವಳಂತೂ ಇದನ್ನು ಒಪ್ಪುವಳಲ್ಲವಲ್ಲ…..? ಅವಳು ಮಹಾ ಸೂಕ್ಷ್ಮ ಸ್ವಭಾವದವಳು, ಭಾವುಕಳು. ಮೊದಲಿನಿಂದಲೂ ಶೇಖರನನ್ನು ಕಂಡರಾಗದ ಪ್ರಿಯಾ, ಅವನನ್ನು ತಂದೆಯಾಗಿ ಸ್ವೀಕರಿಸುವಳೇ? ಆವರೆ ಮದುವೆ ಅಂತ ಆದಮೇಲೆ ಒಟ್ಟಿಗೆ ಇರುವುದರಿಂದ ಪ್ರಿಯಾ ತನ್ನ ಮಲತಂದೆಯನ್ನು ನಿಧಾನವಾಗಿ ಒಪ್ಪಿಕೊಳ್ಳುತ್ತಾಳೆ ಎಂದು ಶೇಖರ್‌ಹೇಳುತ್ತಿದ್ದ.
ಆದರೆ ಪ್ರಿಯಾಳಂಥ ಹಠಮಾರಿ ಹಾಗೆಲ್ಲ ಮಣಿಯುವವಳಲ್ಲವೆಂದು ಅವಳ ಹೆತ್ತಮ್ಮ ವಸಂತಾಳಿಗೆ ಗೊತ್ತಿಲ್ಲವೇ?
ಹಿಂದೆ ವಿಚ್ಛೇದನದ ಸಂದರ್ಭದಲ್ಲಿ ಎದುರಾದ ಅದೇ ಧರ್ಮಸಂಕಟ ಮತ್ತೆ ವಸಂತಾಳೆದುರು ಧುತ್ತೆಂದು ಸುಳಿಯಿತು. ಆಗ ಗಂಡ ನೌಕರಿ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕಿತ್ತು, ಈಗ ಪ್ರಿಯಾ ಶೇಖರ್ ಇಬ್ಬರಲ್ಲಿ ಒಬ್ಬರನ್ನು ಆರಿಸಬೇಕಿತ್ತು!
ಒಂದು ದಿನ ಪ್ರಿಯಾ ಚಂದ್ರುವಿನ ಜೊತೆ ಭೇಟಿಯಾಗಿ ಬಂದಾಗ ಬಹಳ ಕೋಪಗೊಂಡಿದ್ದಳು. ಮನೆಗೆ ಬಂದವಳೇ ಧಡಾರೆಂದು ತನ್ನ ಕೋಣೆಯ ಕದವಿಕ್ಕಿಕೊಂಡು ಮಲಗಿಬಿಟ್ಟಿದ್ದಳು.
ಅವಳನ್ನು ಊಟಕ್ಕೆ ಎಬ್ಬಿಸಲೆಂದು ವಸಂತಾ ಮತ್ತೆ ಮತ್ತೆ ಬಂದು ಕದ ತಟ್ಟಿದಳು. ಆದರೆ ಪ್ರಿಯಾ ಬಾಗಿಲು ತೆರೆದರೆ ತಾನೇ? ಪ್ರಿಯಾ ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡುಬಿಟ್ಟರೆ….. ಇಂದಿನ ಟೀನೇಜರ್ಸ್‌ನ್ನು ನಂಬುವಂತಿಲ್ಲ ಎಂದು ವಸಂತಾ ಹೆದರಿದಳು.
ಒಂದು ಗಂಟೆ ಕಾಲ ಬಿಟ್ಟು ಬಾಗಿಲು ತೆರೆದು ಹೊರಬಂದ ಪ್ರಿಯಾ ಬಹಳ ಬೇಸರಗೊಂಡಿದ್ದಳು, ಅತ್ತು, ಅತ್ತೂ ಮುಖ ಊದಿಕೊಂಡಿತ್ತು. ಅವಳನ್ನು ಎಳೆತಂದು ತನ್ನ ಕೋಣೆಯ ಮಂಚದಲ್ಲಿ ಕೂರುತ್ತಾ ಮಗಳನ್ನು ಮಡಿಲಿಗೆ ಅಪ್ಪಿಕೊಂಡು ವಸಂತಾ ಸಂತೈಸಿದಳು, “ಏನಾಯ್ತ ಪ್ರಿಯಾ?”
ಪ್ರಿಯಾ ಬಿಕ್ಕಳಿಸಿ ಅಳುತ್ತಾ ಹೇಳಿದಳು, “ಅಮ್ಮಾ….. ಪಪ್ಪಾ ಬೇರೆ ಮದುವೆ ಮಾಡಿಕೊಂಡಿದ್ದಾರೆ…..” ಅವಳ ಬಿಕ್ಕಳಿಕೆ ನಿಲ್ಲಲೇ ಇಲ್ಲ.
ತಾನೊಬ್ಬ ಆದರ್ಶ ತಂದೆ ಎಂದು ಅಚ್ಚೊತ್ತಿದ್ದ ಚಂದ್ರುವಿನ ಬಿಂಬ ಪ್ರಿಯಾಳ ಮನದಲ್ಲಿಂದು ಮುರಿದು ಬಿದ್ದಿತ್ತು. ವಸಂತಾಳ ಮನದಲ್ಲೂ ಈಗ ಅಳುಕು ಶುರುವಾಗಿತ್ತು. ಚಂದ್ರು ಅಂತೂ ಅವಳಿಂದ ಬಹಳ ಬಹಳ ದೂರ ಹೋಗಿಬಿಟ್ಟಿದ್ದ. ತನಗೂ ಅವನಿಗೂ ನಡುವೆ ಈಗ ಯಾವ ಬಾಂಧವ್ಯವೂ ಇಲ್ಲ ಎಂದು ಚೆನ್ನಾಗಿ ಗೊತ್ತಿದ್ದರೂ, ಅವನು ಮರುಮದುವೆಯಾದ ಎಂಬುದು ಇವಳನ್ನು ಬಲವಾಗಿ ಇರಿಯಿತು.
ವಸಂತಾ ಮಗಳ ಬೆನ್ನು ಸವರುತ್ತಾ ಅವಳು ದುಃಖಿಸಬಾರದೆಂಬಂತೆ ಸಮಾಧಾನಪಡಿಸತೊಡಗಿದಳು. ನಂತರ ಇಬ್ಬರಿಗೂ ಬಿಸಿ ಬಿಸಿ ಟೀ ಮಾಡಿ ತಂದಳು. ಇಬ್ಬರಿಗೂ ತಲೆ ನೋವು ಬಂದಿದ್ದಂತೂ ನಿಜ. ವಸಂತಾಳಲ್ಲಿ ಈಗ ಮತ್ತೊಂದು ಭಯ ಶುರುವಾಗಿತ್ತು. `ಶೇಖರ್ ಇಷ್ಟರಲ್ಲೇ ಮದುವೆ ದಿನಾಂಕದೊಡನೆ ಬಂದರೆ ಅವನನ್ನು ಹೇಗೆ ಎದುರಿಸುವುದು? ಅಪ್ಪ ಮಾಡಿದಂತೆ ನೀನೂ ಬೇರೆಯವರನ್ನು ಮದುವೆಯಾಗಿ ನನ್ನನ್ನು ಅನಾಥಳನ್ನಾಗಿಸುವೆಯಾ?’ ಎಂದು ಕೇಳಿದರೆ ಏನೆಂದು ಉತ್ತರಿಸಿಯಾಳು?
ಅವಳು ಅಲ್ಲಿಂದ ಎದ್ದು ಹೋಗಿ ಕನ್ನಡಿ ಎದುರು ನಿಂತು ಪ್ರಿಯಾ ಕೇಳಬಹುದಾದ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕತೊಡಗಿದಳು. ಉತ್ತರ ದೃಢವಾದ ನಂತರ ಅಲ್ಲೇ ಮಲಗಿ ಕಣ್ಣು ಮುಚ್ಚಿದ್ದ ಮಗಳ ತಲೆ ಸವರುತ್ತಾ, ಅವಳಿಗೆ ಹಿತಕರ ಭಾವನೆ ಉಂಟಾಗುವಂತೆ ಮಾಡಿದಳು. ತಾಯಿಯ ಕೈಯನ್ನು ಎಳೆದು ತನ್ನ ಕೆನ್ನೆಗೆ ಆನಿಸಿಕೊಂಡು ಸೂರು ನೋಡುತ್ತಾ ಪ್ರಿಯಾ ಬಹಳ ಹೊತ್ತು ಹಾಗೇ ಮಲಗಿದ್ದಳು.
ಕೊನೆಗೆ ತಾನೇ ಬಾಯಿಬಿಟ್ಟ ವಸಂತಾ, “ಮಗು, ನಿನ್ನ ತಂದೆ ಬೇರೆ ಮದುವೆ ಆದರೇನಂತೆ….. ನಿನ್ನ ತಾಯಿ ಅನಿಸಿಕೊಂಡ ನಾನು ಸದಾ ನಿನ್ನ ಜೊತೆಗಿರುತ್ತೇನೆ….. ಎಂದೆಂದೂ ಅಂಜದಿರು….” ಎಂದಳು.
ಇದನ್ನು ಕೇಳಿ ಪ್ರಿಯಾ ತಾಯಿಯ ಎದೆಗಪ್ಪಿ ಮತ್ತಷ್ಟು ಬಿಕ್ಕಳಿಸಿ, ತಾನೇ ಸಮಾಧಾನಗೊಂಡಳು.
ಮಾರನೇ ದಿನ ಶೇಖರನನ್ನು ಭೇಟಿಯಾದ ವಸಂತಾ, ತಾವಿಬ್ಬರೂ ಎಂದೆಂದಿಗೂ ಹೀಗೆ ಫ್ರೆಂಡ್ಸ್ ಆಗಿ ಇದ್ದುಬಿಡೋಣ, ಮದುವೆ ಸಾಧ್ಯವಿಲ್ಲ ಎಂದು ಮಗಳನ್ನು ಬಿಟ್ಟುಕೊಡಲಾರದೆ ತನ್ನ ಅಸಹಾಯಕತೆ ತೋಡಿಕೊಂಡಳು. ಸಾಕಷ್ಟು ಅನುಭವಸ್ಥ, ಲೋಕ ಕಂಡಿದ್ದ ಶೇಖರ್ ಇವಳ ಮಗುವಿನ ಸಲುವಾಗಿ ಅದನ್ನು ಸಹಜವಾಗಿಯೇ ಸ್ವೀಕರಿಸಿ ಪೇವಲ ನಗೆ ನಕ್ಕ.
ಇದೆಲ್ಲ ಆಗಿ ಆ ತಿಂಗಳ ಕೊನೆ ಭಾನುವಾರದಂದು ಎಂದಿನಂತೆ ಚಂದ್ರು ಮನೆ ಮುಂದೆ ಬಂದು ಕಾರಿನ ಹಾರ್ನ್ ಬಜಾಯಿಸುತ್ತಾ ಪ್ರಿಯಾಳಿಗಾಗಿ ಕಾದ. ಆಗ ಪ್ರಿಯಾ ಸಿಡುಕುತ್ತಾ ಹೇಳಿದಳು, “ಅಮ್ಮ… ನಾನಂತೂ ಖಂಡಿತಾ ಹೋಗೋದಿಲ್ಲ”
ಅಷ್ಟು ಹೊತ್ತಿಗೆ ಚಂದ್ರು ತಾನೇ ಮಗಳನ್ನು ಹುಡುಕುತ್ತಾ ಬಾಗಿಲವರೆಗೂ ಬಂದು ನಿಂತ.
ತಂದೆಯನ್ನು ಕಂಡು ಕುಪಿತಳಾದ ಪ್ರಿಯಾ, “ಯಾರು ನೀವು….. ಇಲ್ಲೇಕೆ ನಿಂತಿದ್ದೀರಿ…..?” ಎಂದು ಕೇಳಿದಳು.
ಇದರಿಂದ ಅವಾಕ್ಕಾದ ಚಂದ್ರು ಮಗಳನ್ನೇ ದಿಟ್ಟಿಸತೊಡಗಿದ. ಅವಳ ಕೋಪದ ಅರಿವಾಗಿ, ತನ್ನ ಮಾತಿಗಿನ್ನು ಮಗಳು ಮಣಿಯಲಾರಳು ಎಂದು ಮಾತನಾಡದೆ ಮೌನವಾಗಿ ಹೊರಟುಹೋದ.
ವಸಂತಾ ಆಶ್ಚರ್ಯದಿಂದ ಮಗಳ ಕಡೆ ನೋಡಿದಾಗ, “ಯಾರೋ ಅಪರಿಚಿತರು ಬಂದು ಹೋದರು….ಬಿಡಮ್ಮ,” ಎಂದಳು. ಪ್ರಿಯಾಳ ಮಾತು ಕೇಳಿ ಶುಷ್ಕ ನಗೆ ನಕ್ಕು ವಸಂತಾ ಅಲ್ಲಿಂದ ಅಡುಗೆಮನೆಗೆ ಹೊರಟಳು.
ಮೇಲ್ನೋಟಕ್ಕೆ ಎಲ್ಲ ಸರಿಹೋದಂತೆ ಕಂಡರೂ ಅಸಲಿಗೆ ಹಾಗೇನೂ ಇರಲಿಲ್ಲ. ವಸಂತಾ…. ಪ್ರಿಯಾ ಇಬ್ಬರೂ ಎಂದಿನಂತೆ ಮಾನಸಿಕವಾಗಿ ನಕ್ಕು ನಲಿಯಲು ಆಗಲೇ ಇಲ್ಲ. ಇಬ್ಬರಿಗೂ ಮುಸುಕಿನೊಳಗಿನ ಗುದ್ದು ಹಿಂಸೆ ಎನಿಸುತ್ತಿತ್ತು.
ಮಗಳನ್ನು ಹೆಚ್ಚು ಸುಖವಾಗಿ ಕಾಣಲು ಬಯಸಿದ ವಂಸತಾ, ಆದಷ್ಟೂ ಶೇಖರನಿಂದ ದೂರ ಇರತೊಡಗಿದಳು.
ಆಫೀಸಿನಲ್ಲಿ ಬಾಸ್ ಬಳಿ ಔಪಚಾರಿಕತೆಯ ಮಾತುಕಥೆ ಎಷ್ಟೋ ಅಷ್ಟಕ್ಕೆ ಮೊಟಕುಗೊಳಿಸಿ, ಅವನು ಬಸ್ ಸ್ಟಾಪ್‌ನಲ್ಲಿ ತನ್ನನ್ನು ಭೇಟಿ ಆಗದಂತೆ ಆಟೋ ಹಿಡಿದು ಮನೆಗೆ ಹೊರಟುಬಿಡುತ್ತಿದ್ದಳು. ಯಾವುದೋ ಅಪರಾಧಿಪ್ರಜ್ಞೆ ಪ್ರಿಯಾಳನ್ನು ಒಳಗೊಳಗೇ ಕೊರೆಯುತ್ತಿದೆ ಎಂಬುದು ವಸಂತಾ ಗಮನಕ್ಕೆ ಬಂದಿತ್ತು.
ಒಮ್ಮೆ ಕಾಲೇಜಿನಿಂದ ಬೇಗ ಮನೆಗೆ ಬಂದ ಪ್ರಿಯಾ ನೋಡುತ್ತಾಳೆ, ತಾಯಿ ಮನೆಯಲ್ಲೇ ಇದ್ದಾಳೆ!
“ಅಮ್ಮಾ…. ನೀನಿವತ್ತು ಆಫೀಸಿಗೆ ಹೋಗಲಿಲ್ಲವೇ?” ಎಂದು ಪ್ರಿಯಾ ವಿಚಾರಿಸಿದಳು.
“ಇಲ್ಲಮ್ಮ…. ಯಾಕೋ ತುಂಬಾ ಬೇಜಾರಾಗಿತ್ತು. ಲೈಟಾಗಿ ತಲೆ ನೋವು ಹಾಗೇ ಹಾಯಾಗಿ ಮನೆಯಲ್ಲಿರೋಣ ಸರಿ ಹೋಗುತ್ತೆ ಅಂತ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದೆ…. ನೀನು ಬಂದೆ, ಇರು ಮೊದಲು ಒಟ್ಟಿಗೆ ಊಟ ಮಾಡೋಣ,” ಎಂದು ಡೈನಿಂಗ್ ಟೇಬಲ್ ಬಳಿ ತಟ್ಟೆ ಜೋಡಿಸತೊಡಗಿದಳು ವಸಂತಾ.
“ಅಮ್ಮಾ, ನೀನೆಷ್ಟು ಒಳ್ಳೆಯಳಮ್ಮ….. ಸದಾ ನನ್ನ ಬಗ್ಗೆ ಚಿಂತೆ ಮಾಡ್ತಾನೇ ಇರ್ತೀಯಾ. ನಾನೀಗ ಮನೆಗೆ ಬಂದಾಗ ನೀನಿಲ್ಲದಿದ್ದರೆ ಒಂದಿಷ್ಟು ಬ್ರೆಡ್ ತೊಗೊಳ್ಳೋಣ ಅಂತಿದ್ದೆ….. ನೀನು ಎಲ್ಲಾ ರೆಡಿ ಮಾಡಿದ್ದಿ…. ನಿನ್ನ ಮುಂದೆ ನಾನು ತುಂಬಾ ಕೆಟ್ಟ ಮಗಳಮ್ಮ…. ಐ ಆ್ಯಮ್ ವೆರಿ ಸಾರಿ…. ಕ್ಷಮಿಸಿಬಿಡು….”
“ಛೇ….ಛೇ! ಬಿಡ್ತು ಅನ್ನಮ್ಮ….. ನನಗೆ ಅಂತ ಇರೋಳು ನೀನೊಬ್ಬಳೇ…. ನನ್ನ ಮುದ್ದು ಮಗಳು…. ನಮ್ಮಿಬ್ಬರ ಮಧ್ಯೆ ಎಂಥ ಫಾರ್ಮಾಲಿಟೀಸ್…… ನೀನೇಕೆ ಈಗ ಸಾರಿ ಕೇಳಬೇಕು?” ವಸಂತಾ ವಾತ್ಸಲ್ಯದಿಂದ ಮಗಳಿಗೆ ಬಡಿಸುತ್ತಾ ಹೇಳಿದಳು.
“ಅಮ್ಮಾ, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿಷಯಗಳಿಂದ ನಿನಗೆ ನಾನು ಬಹಳ ಕಷ್ಟ ಕೊಟ್ಟಿದ್ದೇನೆ ಎಂದು ಮತ್ತೆ ಮತ್ತೆ ನನ್ನ ಮನಸ್ಸಿಗೆ ಅನಿಸುತ್ತಿದೆ,” ತಟ್ಟೆಯಲ್ಲಿ ಅನ್ನ ಕಲಸುತ್ತಾ ಎಲ್ಲೋ ನೋಡುತ್ತಿದ್ದ ಮಗಳನ್ನೇ ವಸಂತಾ ದಿಟ್ಟಿಸಿದಳು.
ವಸಂತಾ ಮಗಳನ್ನೇ ಗಮನಿಸುತ್ತಿದ್ದಾಗ, ಪ್ರಿಯಾ ಹಿಂದಿನ ಪ್ರೈಮರಿ ಶಾಲೆಯ ಚಿಕ್ಕ ಹುಡುಗಿಯಲ್ಲ, ಕಾಲೇಜ್ ಮೆಟ್ಟಿಲೇರಿ ಬಹಳ ಗಂಭೀರವಾಗಿ ಚಿಂತಿಸುವಷ್ಟು ಬೆಳೆದಿದ್ದಾಳೆ ಎಂದುಕೊಂಡಳು.
“ಅಮ್ಮಾ, ಹಿಂದೆಲ್ಲ ನಾನು ನಿನ್ನ ಹತ್ತಿರ ಕಟುವಾಗಿ ವರ್ತಿಸಿದ್ದನ್ನು ದಯವಿಟ್ಟು ಮರೆತುಬಿಡು. ಆಗ ನಾನು ಚಿಕ್ಕವಳು, ನೀನು ಸದಾ ನನಗೆ ಸ್ವಂತ ಎಂಬ ಸ್ವಾರ್ಥ ಮಾತ್ರ ಇತ್ತು…..”
ಏನೋ ವಿಷಯ ಹೇಳುವುದಕ್ಕೆ ಪೀಠಿಕೆ ಹಾಕುತ್ತಿದ್ದಾಳೆ ಎಂದುಕೊಂಡಳು ವಸಂತಾ.
ಪ್ರಿಯಾ ಹೇಳತೊಡಗಿದಳು, “ಅಪ್ಪನ ವಿಷಯ ಕೂಡ ಯೋಚಿಸಿದೆ, ವ್ಯಕ್ತಿ ಬಹಳ ದಿನ ಒಂಟಿಯಾಗಿರಲಾರ. ಆ ಕಾರಣಕ್ಕೆ ಅವರು ಮರುಮದುವೆ ಆಗಿರಬೇಕು, ಆದರೆ ನನ್ನ ಮೇಲಿನ ವಾತ್ಸಲ್ಯ ಅವರನ್ನು ಬಿಟ್ಟುಹೋಗಿಲ್ಲ. ಹಾಗಾಗಿಯೇ ಮದುವೆ ನಂತರ ಅವರು ನನ್ನನ್ನು ಹುಡುಕಿಕೊಂಡು ಬಂದಿದ್ದಾರೆ ಎಂಬುದನ್ನು ಅರಿತುಕೊಂಡೆ.
“ಅವರು ಮನೆ ಬಾಗಲಿಗೆ ಬಂದಾಗಲೂ ತಮ್ಮ ಸ್ವಾರ್ಥಕ್ಕಾಗಿ ಬೇರೆಯವರನ್ನು ಮದುವೆ ಆಗಿದ್ದಾರೆ, ಇನ್ನು ಅವರು ನನ್ನ ತಂದೆಯಲ್ಲ ಎಂದೆಲ್ಲ ಕೂಗಾಡಿದೆ. ಆದರೆ ಈ ಮನೆ ಅವರದೇ ಆಗಿದ್ದರೂ ನಮ್ಮನ್ನು ಬಿಟ್ಟು ಹೋಗಿ ಎಂದು ಆಗಲೂ ಹೇಳಲಿಲ್ಲ. ಹಾಗಾಗಿ ಅವರ ಅಂತಃಕರಣ ಅರ್ಥ ಮಾಡಿಕೊಂಡೆ.
“ನಾನಿಷ್ಟೆಲ್ಲ ಯಾಕೆ ಹೇಳುತ್ತಿದ್ದೀನಿ ಗೊತ್ತೇನಮ್ಮ….? ನೀನು ಶೇಖರ್ ಅಂಕಲ್‌ನ್ನು ಇಷ್ಟಪಡುತ್ತಿದ್ದುದು ನಿಜ ತಾನೇ?” ಸಡನ್ನಾಗಿ ಅವಳು ಮೌನ ಲಹರಿ ತಿರುಗಿಸಿ ಅಮ್ಮನನ್ನು ಕೇಳಿದಳು.
ಮಗಳ ಮುಂದೆ ನೇರವಾಗಿ ಉತ್ತರಿಸಲಾರದೆ ವಸಂತಾ ಹ್ಞೂಂ ಎಂಬಂತೆ ತಲೆ ಆಡಿಸಿದಳು.
“ಅದಕ್ಕೆ ನಾನು ಹೇಳಿದ್ದು….. ನೀನೇಕೆ ಅವರನ್ನು ಮದುವೆ ಆಗಬಾರದಮ್ಮ…..?”
“ಅದು…. ಅದೂ…. ಮುಗಿದು ಹೋದ ವಿಷಯ ಪ್ರಿಯಾ. ಈಗ ಆ ಮಾತು ಬೇಡ. ನೀನು ಊಟ ಮಾಡಿ ಏಳಮ್ಮ. ಅವರು ನಿನಗೆ ಇಷ್ಟವಾಗೋಲ್ಲ ಅನ್ನುವ ಕಾರಣಕ್ಕೆ ಎಂದೋ ಅವರ ಆ ಪ್ರಪೋಸ್‌ಗೆ ಬೇಡ ಎಂದುಬಿಟ್ಟಿದ್ದೇನೆ…..” ವಸಂತಾಳ ದನಿಯಲ್ಲಿ ಅರಿಯದೆ ನೋವು ಸೇರಿತ್ತು.
“ಇಲ್ಲಮ್ಮ…. ಇಲ್ಲೂ ನನ್ನ ಸ್ವಾರ್ಥದಿಂದಲೇ ನಿನಗೆ ನೋವಾಗಿದ್ದು. ನನ್ನಮ್ಮ ನನಗೇ ಸ್ವಂತ, ಅವಳು ಬೇರೆಯವರಿಂದ ಪ್ರೀತಿ ಪಡೆಯಬಾರದು ಅಂತ ಹಾಗೆ ಮಾಡಿದ್ದೆ. ಇನ್ನು ಕೆಲವು ವರ್ಷಗಳಲ್ಲಿ ನಾನು ಮದುವೆ ಆಗಿ ಹೊರಟುಹೋದರೆ, ಇನ್ನೂ 40+ ವಯಸ್ಸಿನ ನೀನು ಜೀವನಪರ್ಯಂತ ಹಾಗೇ ಒಂಟಿಯಾಗಿರಬೇಕು ಎಂದು ಶಿಕ್ಷೆ ಹೇರಲು ನನಗಾವ ಹಕ್ಕಿದೆ? ಮಗಳ ಮೇಲಿನ ವಾತ್ಸಲ್ಯ, ಅಂತಃಕರಣಕ್ಕೆ ನೀನು ಅವರನ್ನು ದೂರ ಮಾಡಿದೆ.
“ಕೇಳಮ್ಮ, ಇವತ್ತು ಬೆಳಗ್ಗೆ ನಾನು ಶೇಖರ್ ಅಂಕಲ್‌ನ್ನು ಅವರ ಆಫೀಸ್‌ನಲ್ಲೇ ಮಾತನಾಡಿಸಿಕೊಂಡು ಬಂದೆ…..”
“ಅಯ್ಯೋ….. ನೀನೇಕೆ ಅಲ್ಲಿಗೆ ಹೋದೆ? ಮೊದಲೇ ನಾನು ಮುಖದ ಮೇಲೆ ಹೊಡೆದಂತೆ ಅವರಿಗೆ ಬೇಡ ಎಂದಿದ್ದೆ….. ಈಗ ಅವರೇನು ಅಂದುಕೊಂಡರೋ ಏನೋ…..”
“ಖಂಡಿತಾ ಈಗಲೂ ಅವರಿಗೆ ನಿನ್ನನ್ನು ಮದುವೆ ಆಗುವ ಮನಸ್ಸಿದೆ. ಇದರಿಂದ ನೀವಿಬ್ಬರೂ ಒಂದಾದರೆ ಇದೇ ಮನೆಯಲ್ಲಿ ನನ್ನನ್ನು ಅರ್ಥ ಮಾಡಿಕೊಳ್ಳುವ ಅಪ್ಪ, ನಿನ್ನನ್ನು ಪ್ರೀತಿಸುವ ಸಂಗಾತಿ ಸಿಗುತ್ತಾರೆ. ದಯವಿಟ್ಟು ಒಪ್ಪಿಕೊಳ್ಳಮ್ಮ….” ಎನ್ನುತ್ತಾ ಪ್ರಿಯಾ ಎಡಗೈಯಿಂದಲೇ ಅಮ್ಮನನ್ನು ಬಳಸಿ ಹಿಡಿದಳು.
ಅಷ್ಟರಲ್ಲಿ ಕರೆಗಂಟೆ ಸದ್ದಾಯಿತು. ವಸಂತಾ ಹೋಗಿ ಬಾಗಿಲು ತೆರೆದಾಗ ಎದುರಿಗೆ ಶೇಖರ್! “ಏನಂತಾಳೆ ನಮ್ಮ ಮಗಳು?” ಎನ್ನುತ್ತಾ ಶೇಖರ್ ನೇರವಾಗಿ ಬಂದು ಪ್ರಿಯಾಳ ತಲೆ ಸವರಿದ.
ಆಗ ಎಲ್ಲರ ಮುಖದಲ್ಲೂ ನಗು ಹರಡಿತು. ಪ್ರೀತಿ ವಾತ್ಸಲ್ಯದ ಅಂತಃಕರಣ ಎಲ್ಲರನ್ನೂ ಒಂದಾಗಿಸಿತ್ತು.