ಯಾವುದೇ ವ್ಯಂಜನ ತಯಾರಿಸ ಬೇಕಿದ್ದರೂ, ಅದನ್ನು ಒಲೆಯ ಮೇಲೆ ಎಂಥ ಉರಿಯಲ್ಲಿಟ್ಟು ತಯಾರಿಸಬೇಕೆಂಬುದು ತಿಳಿದಿರಬೇಕಾದುದು ಅತ್ಯಗತ್ಯ. ನಾವು ಯಾರಿಂದಾದರೂ ಅಡುಗೆ ತಯಾರಿಸುವುದನ್ನು ಕಲಿಯುವಾಗ, ತಕ್ಷಣ ಇದನ್ನು ಸಣ್ಣ ಅಥವಾ ದೊಡ್ಡ ಉರಿಯಲ್ಲಿ ತಯಾರಿಸಬೇಕೇ ಎಂದು ಪ್ರಶ್ನಿಸುತ್ತೇವೆ. ಏಕೆಂದರೆ ಯಾವುದೇ ವ್ಯಂಜನದ ತಯಾರಿಯಲ್ಲಿ ಒಲೆಯ ಉರಿಯು ಮಹತ್ವದ ಪಾತ್ರ ವಹಿಸುತ್ತದೆ. ಕೆಲವದರಲ್ಲಿ ಮಂದ ಉರಿ, ಕೆಲವಕ್ಕೆ ಮಧ್ಯಮ, ಇನ್ನೂ ಹಲವಕ್ಕೆ ದೊಡ್ಡ ಉರಿ ಬೇಕಾಗುತ್ತದೆ.

ಈ ತರಹ ಉರಿಯ ಮಹತ್ವ ಅರಿತುಕೊಂಡು ನಾವು ಅಡುಗೆ ಮಾಡಿದರೆ, ಅದು ಸ್ವಾದಿಷ್ಟ ಹಾಗೂ ಸ್ವಾಸ್ಥ್ಯಪೂರ್ಣ ಎನಿಸುತ್ತದೆ. ಮಂದ ಉರಿಯ ಪದಾರ್ಥವನ್ನು ದೊಡ್ಡ ಉರಿಯಲ್ಲಿ ಅಥವಾ ದೊಡ್ಡ ಉರಿಯ ಪದಾರ್ಥವನ್ನು ಮಂದ ಉರಿಯಲ್ಲಿ ತಯಾರಿಸಿದರೆ ಅವುಗಳ ಪೋಷಕಾಂಶಗಳು ಮತ್ತು ರುಚಿ ಎರಡೂ ಕೆಡುತ್ತವೆ. ಹೀಗಾಗಿ ಅಡುಗೆ ಮಾಡುವಾಗ ಒಲೆಯ ಉರಿ ಎಷ್ಟಿರಬೇಕು ಎನ್ನುವ ಕಡೆ ಸದಾ ಕಣ್ಣಿಟ್ಟಿರಬೇಕು.

ಇವಕ್ಕೆ ದೊಡ್ಡ ಉರಿ ಇರಲಿ

ಪೂರಿ ಕರಿಯುವಾಗ ಹಾಗೂ ಚಪಾತಿ ತಯಾರಿಸುವಾಗ ಒಲೆಯ ಉರಿ ಸದಾ ದೊಡ್ಡದಾಗಿರಲಿ. ಇವನ್ನು ಮಧ್ಯಮ ಅಥವಾ ಮಂದ ಉರಿಯಲ್ಲಿ ತಯಾರಿಸುವುದರಿಂದ, ಅವು ಗಟ್ಟಿಯಾಗುತ್ತವೆ ಅಥವಾ ಸೆಟೆದುಕೊಳ್ಳುತ್ತವೆ.

ದೋಸೆಯನ್ನು ದೊಡ್ಡ ಉರಿಯಲ್ಲೇ ತಯಾರಿಸಬೇಕು. ಆಗಲೇ ಅವು ಗರಿಗರಿಯಾಗಿ ಬರುವುದು.

ಗೋಬಿ ಮಂಚೂರಿ, ಚೈನೀಸ್‌ ನೂಡಲ್ಸ್ ಅಥವಾ ಫ್ರೈಡ್‌ ರೈಸ್‌ ಮಾಡುವಾಗಲೂ ಸಹ ಉರಿ ಹೆಚ್ಚಿರಬೇಕು.

ಚಿಪ್ಸ್, ಹಪ್ಪಳ ಸಂಡಿಗೆ, ಉಪ್ಪೇರಿಗಳ್ನು ದೊಡ್ಡ ಉರಿಯಲ್ಲೇ ಕರಿಯಬೇಕು.

ಹಲಸು, ಮರಗೆಣಸು, ಕಾಲಿಫ್ಲವರ್‌ ಇತ್ಯಾದಿಗಳನ್ನು ತುಂಡರಿಸಿ ಕರಿಯುವಾಗಲೂ ಹೆಚ್ಚಿನ ಉರಿ ಇರಬೇಕು.

ಬೇಳೆ, ಅಕ್ಕಿ ಸಮೇತ ದೊಡ್ಡ ಕುಕ್ಕರ್‌ ಇಡುವಾಗ, ದೊಡ್ಡ ಇಡ್ಲಿ ಪಾತ್ರೆ ಇಡಬೇಕಾದಾಗ, ಮುಂತಾದ ಸಂದರ್ಭಗಳಲ್ಲಿ ದೊಡ್ಡ ಉರಿ ಅನಿವಾರ್ಯ.

ಆಂಬೊಡೆ, ಪಕೋಡ, ಮಸಾಲವಡೆ……. ಇತ್ಯಾದಿ ಹೆವಿ ಡೀಪ್‌ ಫ್ರೈ ಐಟಮ್ಸ್ ಗೆ ಸಹ ಹೆಚ್ಚಿನ ಉರಿ ಬೇಕು.

ಪಲ್ಯ ಇತ್ಯಾದಿ ಮಾಡುವಾಗ ಯಾವುದೇ ತರಕಾರಿಯ ತೇವಾಂಶ ಹಿಂಗುವಂತೆ ಮಾಡಲು ದೊಡ್ಡ ಉರಿ ಇರಲಿ.

ಬಿಸಿಬೇಳೆ ಭಾತ್‌ ಮುಂತಾದುವನ್ನು ಮಾಡುವಾಗ ಮೊದಲು, ನೀರಲ್ಲಿ 3-4 ತಾಸು ನೆನೆಹಾಕಿದ ಬೇಳೆಯನ್ನು ದೊಡ್ಡ ಉರಿಯಲ್ಲಿ ಬೇಯಲು ಹಾಕಿ, ಆಗಾಗ ಕೈಯಾಡಿಸುತ್ತಾ, ಇತರ ಸಾಮಗ್ರಿ ಸೇರಿಸಿ ಅಡುಗೆ ಪೂರೈಸಿ.

ಇವಕ್ಕೆ ಮಧ್ಯಮ ಉರಿ ಇರಲಿ

ಆಲೂಗಡ್ಡೆ, ಕಾಲಿಫ್ಲವರ್‌, ಮೂಲಂಗಿ ಅಥವಾ ಬೇರಾವುದೇ ಪರೋಟ, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ತುರಿದ ಮಿಶ್ರ ತರಕಾರಿ ರೊಟ್ಟಿ ಇತ್ಯಾದಿಗಳೆಲ್ಲವನ್ನೂ ಮಧ್ಯಮ ಉರಿಯಲ್ಲೇ ತಯಾರಿಸಬೇಕು.

ಈರುಳ್ಳಿ, ಬದನೆ, ಸೀಮೆಬದನೆ, ಆಲೂ ಇತ್ಯಾದಿ ಯಾವುದೇ ಬೋಂಡ ಬಜ್ಜಿ ತಯಾರಿಸುವಾಗಲೂ ಮಧ್ಯಮ ಉರಿ ಇರಲಿ.

ಯಾವುದೇ ವಿಧದ ಕೋಫ್ತಾ ತಯಾರಿಸುವಾಗಲೂ ಮಧ್ಯಮ ಉರಿ ಬಳಸಿಕೊಳ್ಳಿ.

ಸಮೋಸಾ, ಕಚೋಡಿ, ಕೋಡುಬಳೆ, ನಿಪ್ಪಟ್ಟು ಇತ್ಯಾದಿಗಳನ್ನು ಮಧ್ಯಮ ಉರಿಯಲ್ಲೇ ಕರಿಯಬೇಕು.

ನೇರವಾಗಿ ಪಾತ್ರೆಯಲ್ಲೇ ಅನ್ನ, ಪಲಾವ್ ‌ಮಾಡಬೇಕಾದ ಸಂದರ್ಭದಲ್ಲಿ ಮಧ್ಯಮ ಉರಿ ಬಳಸಿಕೊಳ್ಳಿ.

ಇವಕ್ಕೆ ಮಂದ ಉರಿ ಇರಲಿ

ಮೈಸೂರುಪಾಕು ಮುಂತಾದುವನ್ನು ತಯಾರಿಸುವಾಗ ಅದರ ಕಡಲೆಹಿಟ್ಟನ್ನು ಮಂದ ಉರಿಯಲ್ಲೇ ಹುರಿಯಬೇಕು.

ಯಾವುದೇ ಪಲ್ಯ, ಗ್ರೇವಿ ಇತ್ಯಾದಿಗಳನ್ನು ಡ್ರೈ ಅಥವಾ ಗಾಢಗೊಳಿಸಲು, ಕೊನೆಯ ಹಂತದಲ್ಲಿ ಪೂರ್ತಿ ಮಂದ ಉರಿಯಲ್ಲೇ ಬಿಡಿ.

ರವೆ ಮುಂತಾದುವನ್ನು ಹುರಿಯುವಾಗ ಅದು ಸೀಯದಂತೆ ಮಂದ ಉರಿಯಲ್ಲೇ ಕೆಲಸ ಮಾಡಿ.

ತುಂಬು ಬದನೆ, ಕ್ಯಾಪ್ಸಿಕಂ ಫಿಲ್ಲಿಂಗ್ಸ್, ಹಾಗಲ ಮಸಾಲೆ ಇತ್ಯಾದಿಗಳನ್ನು ಅವು ಬೇಯುವವರೆಗೂ ಮಧ್ಯಮ ಉರಿ ಇರಿಸಿ, ನಂತರ ಮಂದ ಉರಿಯಲ್ಲಿ ಮಸಾಲೆ ಜೊತೆ ಕುದಿಯುವಂತೆ ಮಾಡಿ.

ಪಾಯಸ, ಖೀರು ಮುಂತಾದುವನ್ನು ತಯಾರಿಸುವಾಗಲೂ ತಳಹಿಡಿಯದಂತೆ ಮಾಡಲು ಮಂದ ಉರಿ ಇರಲಿ.

ಇವನ್ನು ಹೀಗೆ ಮಾಡಿ

ಇಡ್ಲಿ, ಡೋಕ್ಲಾ ಮುಂತಾದ ಹಬೆಯ ವ್ಯಂಜನಗಳಿಗೆ ಮೊದಲು ದೊಡ್ಡ ಉರಿ ಇರಲಿ, ನಂತರ ಮಧ್ಯಮ ಉರಿಗೆ ಬಂದರೆ ಲೇಸು.

ಕ್ಯಾರೆಟ್‌, ಸೋರೆಕಾಯಿ, ಬೀಟ್‌ರೂಟ್‌ ಮುಂತಾದವುಗಳ ಹಲ್ವಾ ತಯಾರಿಸುವಾಗ ಮೊದಲು ದೊಡ್ಡ ಉರಿಯಲ್ಲಿ ಅವನ್ನು ಬಾಡಿಸಿಕೊಂಡ ನಂತರ, ಮಂದ ಉರಿ ಮಾಡಿ.

ಪಲಾವ್‌, ಬಿಸಿಬೇಳೆ ಭಾತ್‌ ಮುಂತಾದವಕ್ಕೆ ಮೊದಲು ದೊಡ್ಡ ಉರಿಯಲ್ಲಿ ಮುಕ್ಕಾಲು ಭಾಗ ಕೆಲಸ ಮುಗಿಸಿ ನಂತರ, ಮಂದ ಉರಿಯಲ್ಲಿ ಕೆಲಸ ಮುಂದುವರಿಸಿ. ಉಸುಲಿಗಾಗಿ ಕಡಲೆಕಾಳು, ಅವರೆಕಾಯಿ ಬೇಯಿಸುವಾಗಲೂ ಹೀಗೆ ಮಾಡಿ.

–  ಸಿ. ಶೃತಿ. 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ