ದಮ್ ಆಲೂ

ಸಾಮಗ್ರಿ : 50 ಗ್ರಾಂ ಬೆಣ್ಣೆ, ಅರ್ಧ ಕಪ್‌ ಕ್ರೀಂ, ಬೆಂದ 8 ಆಲೂಗಡ್ಡೆ, 1 ಚಿಟಕಿ ಕೆಂಪು ಬಣ್ಣ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್ ಮಸಾಲ, ಗರಂಮಸಾಲ, ಅಮ್ಚೂರ್‌ ಪುಡಿ, ನಿಂಬೆರಸ, ಟೊಮೇಟೊ ಪ್ಯೂರಿ, 2 ಕಪ್‌ ಗಟ್ಟಿ ಮೊಸರು, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಶುಂಠಿ, ತುರಿದ ಪನೀರ್‌, 10-15 ಗೋಡಂಬಿ ದ್ರಾಕ್ಷಿ, 3-4 ಚಮಚ ಗಸಗಸೆ ಗೋಡಂಬಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕಸೂರಿ ಮೇಥಿ, 1 ಕಪ್‌ ಈರುಳ್ಳಿ ಬಾಡಿಸಿ ಪೇಸ್ಟ್ ಮಾಡಿದ್ದು, ಒಗ್ಗರಣೆಗೆ ಎಣ್ಣೆ, ತುಪ್ಪ, ಇತರ ಸಾಮಗ್ರಿ.

ವಿಧಾನ : ಬೆಂದ ಆಲೂಗಡ್ಡೆಗಳ ಸಿಪ್ಪೆ ಸುಲಿದು, ಮಧ್ಯದಲ್ಲಿ ಟೊಳ್ಳಾಗಿಸಿ, ಸುತ್ತಲೂ ಪೋರ್ಕ್‌ನಿಂದ ಚುಚ್ಚಿ ರಂಧ್ರಗಳಾಗಿಸಿ. ತುರಿದ ಪನೀರ್‌ಗೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಉಪ್ಪು ಖಾರ, ಒಂದಿಷ್ಟು ಕಸೂರಿಮೇಥಿ, ಹೆಚ್ಚಿದ ಶುಂಠಿ, ನಿಂಬೆರಸ ಬೆರೆಸಿ. ಈ ಮಿಶ್ರಣವನ್ನು ಟೊಳ್ಳಾದ ಆಲೂಗೆ ತುಂಬಿಸಿ. ಒಂದು ದೊಡ್ಡ ಬಟ್ಟಲಿಗೆ ಮೊಸರು, ಉಪ್ಪು, ಖಾರ, ನಿಂಬೆರಸ, ಚಾಟ್ ಮಸಾಲ, ಅಮ್ಚೂರ್‌ಪುಡಿ, ಕೆಂಪು ಬಣ್ಣ, ಕಸೂರಿಮೇಥಿ, ಅರ್ಧದಷ್ಟು ಗಸಗಸೆ ಗೋಡಂಬಿ ಪೇಸ್ಟ್ ಬೆರೆಸಿ ಗೊಟಾಯಿಸಿ. ಆಮೇಲೆ ಈ ಮಿಶ್ರಣಕ್ಕೆ ಆಲೂ ಬಟ್ಟಲುಗಳನ್ನು ಜೋಪಾನವಾಗಿ ಇಳಿಬಿಡಿ. ಎಲ್ಲಾ ಆಲೂಗಳಿಗೂ ಈ ಮಸಾಲೆ ಚೆನ್ನಾಗಿ ಮೆತ್ತಿಕೊಳ್ಳಲಿ. 2-3 ತಾಸು ಹೀಗೇ ಬಿಡಿ. ನಂತರ ಇನ್ನು ಮೈಕ್ರೋವೇವ್‌ನಲ್ಲಿ ಹದನಾಗಿ ಗ್ರಿಲ್ ಮಾಡಿ ಗ್ರೇವಿ ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿಕೊಂಡು, ಜೀರಿಗೆ ಒಗ್ಗರಣೆ ಕೊಡಿ. ಇದಕ್ಕೆ ಈರುಳ್ಳಿ ಪೇಸ್ಟ್, ಆಮೇಲೆ ಟೊಮೇಟೊ ಪ್ಯೂರಿ ಹಾಕಿ ಹದನಾಗಿ ಬಾಡಿಸಿ. ನಂತರ ಇದಕ್ಕೆ ಉಳಿದ ಗೋಡಂಬಿ ಗಸಗಸೆ ಪೇಸ್ಟ್ ಹಾಕಿ ಕೈಯಾಡಿಸಿ. ಆಮೇಲೆ ಉಪ್ಪು, ಖಾರ, ಚಾಟ್‌ ಮಸಾಲ, ಗರಂಮಸಾಲ ಬೆರೆಸಿ ಕೆದಕಬೇಕು. ಕೊನೆಗೆ ಬೆಣ್ಣೆ ಬೆರೆಸಿ ಕೈಯಾಡಿಸಿ. ಮೊಸರು ಉಳಿದಿದ್ದರೆ ಅದನ್ನೂ ಬೆರೆಸಿಕೊಳ್ಳಿ. 2-3 ನಿಮಿಷ ಸತತ ಕೈಯಾಡಿಸುತ್ತಾ ಕುದಿಸಿ ಕೆಳಗಿಳಿಸಿ. ಒಂದು ಸರ್ವಿಂಗ್‌ ಡಿಶ್‌ಗೆ ಈ ಗ್ರೇವಿ ಬಗ್ಗಿಸಿ. ಆಲೂಗಳನ್ನು ಮಧ್ಯದಿಂದ ಕತ್ತರಿಸಿ, ಕ್ರೀಂ ಕಸೂರಿ ಮೇಥಿಯಿಂದ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಹಲಸಂದೆ ಕೋಫ್ತಾ

zDSC_1928

ಮೂಲ ಸಾಮಗ್ರಿ : 1 ಕಪ್‌ ಹಲಸಂದೆ ಕಾಳು, 2 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, 1 ಸಣ್ಣ ತುಂಡು ಶುಂಠಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು ಪುದೀನಾ ಹಸಿಮೆಣಸು, ಅರ್ಧ ಕಪ್‌ ಮೈದಾ, ರುಚಿಗೆ ತಕ್ಕಷ್ಟು ಉಪ್ಪು ಖಾರ ಬೆಲ್ಲ, 2 ಕಂತೆ ಹೆಚ್ಚಿದ ಪಾಲಕ್‌ ಸೊಪ್ಪು, 500 ಗ್ರಾಂ ಟೊಮೇಟೊ, ಒಗ್ಗರಣೆ ಸಾಮಗ್ರಿ, 1 ಗಿಟುಕು ತೆಂಗಿನ ತುರಿ, 2-3 ಒಣಮೆಣಸಿನಕಾಯಿ, ಅಗತ್ಯವಿದ್ದಷ್ಟು ಎಣ್ಣೆ.

ವಿಧಾನ : ಹಲಸಂದೆ ಕಾಳನ್ನು ಹಿಂದಿನ ರಾತ್ರಿ ಪೂರ್ತಿ ನೆನೆಸಿಟ್ಟು, ಮಾರನೇ ದಿನ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಇತ್ಯಾದಿಗಳೊಂದಿಗೆ (ಆದಷ್ಟೂ ನೀರು ಬಳಸದೆ) ರುಬ್ಬಿಕೊಳ್ಳಿ. ಇದಕ್ಕೆ ಕೊ.ಸೊಪ್ಪು ಪುದೀನಾ, ಮೈದಾ, ಉಪ್ಪು ಸೇರಿಸಿ ವಡೆ ಮಿಶ್ರಣದಂತೆ ಕಲಸಿ, ತುಸು ಹೊತ್ತು ನೆನೆಯಲು ಬಿಡಿ. ನಂತರ ಜಿಡ್ಡು ಸವರಿದ ಅಂಗೈ ಮೇಲೆ ಪುಟ್ಟ ವಡೆಗಳಾಗಿ ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ.

ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ಇದಕ್ಕೆ ಒಣಮೆಣಸಿನಕಾಯಿ ಹಾಕಿ ಚಟಪಟಾಯಿಸಿ. ಹೆಚ್ಚಿದ ಟೊಮೇಟೊ, ತೆಂಗಿನ ತುರಿ, ಬೆಲ್ಲ ಹಾಕಿ ಬಾಡಿಸಿ ಕೆಳಗಿಳಿಸಿ. ಆರಿದ ನಂತರ ನುಣ್ಣಗೆ ರುಬ್ಬಿಕೊಳ್ಳಿ. ಅಷ್ಟರಲ್ಲಿ ಹೆಚ್ಚಿದ ಪಾಲಕ್‌ ಸೊಪ್ಪನ್ನು ಮೈಕ್ರೋವೇವ್‌ನಲ್ಲಿ ಬೇಯಿಸಿ, ಆರಿದ ನಂತರ ರುಬ್ಬಿಕೊಳ್ಳಿ. ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಟೊಮೇಟೊ ಮಿಶ್ರಣ ಹಾಕಿ ಬಾಡಿಸಿ. ಆಮೇಲೆ ರುಬ್ಬಿದ ಪಾಲಕ್‌ ಸೇರಿಸಿ ಕೈಯಾಡಿಸಿ. ಇದು ಕುದಿ ಬಂದು ಸಾಕಷ್ಟು ಗಟ್ಟಿಯಾದಾಗ, ಇದರಲ್ಲಿ ಹಲಸಂದೆ ವಡೆಗಳನ್ನು ತೇಲಿಬಿಟ್ಟು ಮತ್ತಷ್ಟು ಕುದಿಸಿ, ಕೆಳಗಿಳಿಸಿ. ಇದನ್ನು ಸರ್ವಿಂಗ್‌ ಡಿಶ್‌ಗೆ ರವಾನಿಸಿ. ಕ್ರೀಂ ಬೆರೆಸಿ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಿರಿ.

ಖೋವಾ ಬಟಾಣಿ ಕೋಫ್ತಾ

zDSC_2014

ಸಾಮಗ್ರಿ : 1 ಕಪ್‌ ಬೆಂದ ಹಸಿಬಟಾಣಿ, 500 ಗ್ರಾಂ ಖೋವಾ, 2 ಕಪ್‌ ಬ್ರೋಕನ್‌ ವೀಟ್‌, 1-1 ಕಪ್‌ ಟೊಮೇಟೊ ಪೇಸ್ಟ್, ಈರುಳ್ಳಿ ಪೇಸ್ಟ್ ಚಕ್ಕೆ ಲವಂಗ ಏಲಕ್ಕಿ ಮೊಗ್ಗು (ಒಟ್ಟಾರೆ 2 ಚಮಚ), ಒಂದಿಷ್ಟು ಒಗ್ಗರಣೆ ಸಾಮಗ್ರಿ, ಗೋಡಂಬಿ ದ್ರಾಕ್ಷಿ ಪಿಸ್ತಾ ಬಾದಾಮಿ ಚೂರು (ಒಟ್ಟಾರೆ 1 ಕಪ್‌), ಅರ್ಧ ಸೌಟು ತುಪ್ಪು, ರುಚಿಗೆ ತಕ್ಕಷ್ಟು ಉಪ್ಪು ಖಾರ ಗರಂಮಸಾಲ.

ವಿಧಾನ : ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ಅದಕ್ಕೆ ಬ್ರೋಕನ್‌ ವೀಟ್‌ ಹಾಕಿ ಹುರಿದಿಡಿ. ಇದನ್ನು ಕೆಳಗಿಳಿಸಿ, ಮಸೆದ ಖೋವಾ ಹಾಕಿ ಕೆದಕಬೇಕು. ಇದನ್ನು ಕೆಳಗಿಳಿಸಿ ಆರಿದ ನಂತರ ಇದಕ್ಕೆ ಗೋಡಂಬಿ ದ್ರಾಕ್ಷಿ, ಬ್ರೋಕನ್‌ ವೀಟ್‌, ಬೆಂದ ಬಟಾಣಿ, ತುಸು ಉಪ್ಪು ಖಾರ ಸೇರಿಸಿ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಆವಿಯಲ್ಲಿ ಬೇಯಿಸಿ ಪಕ್ಕಕ್ಕಿಡಿ.

ಅದೇ ಬಾಣಲೆಯಲ್ಲಿ ಇನ್ನಷ್ಟು ತುಪ್ಪ ಬಿಸಿ ಮಾಡಿ, ಒಗ್ಗರಣೆ ಸಾಮಗ್ರಿ, ಚಕ್ಕೆ ಲವಂಗಗಳನ್ನು ಹಾಕಿ ಚಟಪಟಾಯಿಸಿ. ನಂತರ ಇದಕ್ಕೆ ಈರುಳ್ಳಿ ಪೇಸ್ಟ್, ಆಮೇಲೆ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, 4 ಚಮಚ ಬಾಡಿಸಿದ ಮಿಶ್ರಣ ಇತ್ಯಾದಿ ಬೆರೆಸಿಕೊಳ್ಳಿ. ತುಸು ನೀರು ಬೆರೆಸಿ, ಗ್ರೇವಿ ಗಟ್ಟಿ ಆಗುವವರೆಗೂ ಕುದಿಸಿರಿ. ಇದಕ್ಕೆ ರೆಡಿ ಉಂಡೆಗಳನ್ನು ಬೆರೆಸಿ, 2 ನಿಮಿಷ ಕುದಿಸಿ ಕೆಳಗಿಳಿಸಿ. ಬಿಸಿಯಾಗಿ ರೊಟ್ಟಿ, ಚಪಾತಿ ಜೊತೆ ಸವಿಯಿರಿ.

ಡ್ರೈಫ್ರೂಟ್ಸ್ ಗ್ರೇವಿ

zDSC_1999

ಸಾಮಗ್ರಿ : ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಅಖರೋಟ್‌, ಖರ್ಜೂರ, ಸಿಹಿಗುಂಬಳ ಕರ್ಬೂಜಾ ಬೀಜ (ಒಟ್ಟಾರೆ 2 ಕಪ್‌), 2-3 ಚಿಟಕಿ ಜಾಯಿಕಾಯಿ ಪೌಡರ್‌, 2-3 ಹನಿ ಕೇದಗೆ ಎಸೆನ್ಸ್, 3-4 ಹನಿ ಗುಲಾಬಿ ಜಲ, 1 ಕಪ್‌ ಖೋವಾ, 1 ಲೀ. ಫುಲ್ ಕ್ರೀಂ ಹಾಲು, 2 ಚಿಟಕಿ ಅರಿಶಿನ, ಹುರಿದು ಪುಡಿ ಮಾಡಿದ ಏಲಕ್ಕಿ ಲವಂಗ ಚಕ್ಕೆ ಮೊಗ್ಗು ಜೀರಿಗೆ (ಒಟ್ಟಾಗಿ 1 ಚಮಚ), ರುಚಿಗೆ ತಕ್ಕಷ್ಟು ಉಪ್ಪು ಖಾರ ಧನಿಯಾಪುಡಿ ಕಸೂರಿಮೇಥಿ.

ವಿಧಾನ : ಹಿಂದಿನ ರಾತ್ರಿ ಬಿಸಿ ಹಾಲಿನಲ್ಲಿ ನೆನೆಹಾಕಿ ಮಾರನೇ ದಿನ ಡ್ರೈಫ್ರೂಟ್ಸ್ ನ್ನು ನುಣ್ಣಗೆ ತಿರುವಿಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಜೀರಿಗೆ ಪುಡಿ ಮಿಶ್ರಣ ಹಾಕಿ ಕೆದಕಬೇಕು. ಆಮೇಲೆ ಇದಕ್ಕೆ ಖೋವಾ ಮಿಶ್ರಣ ಬೆರೆಸಿ ಕೈಯಾಡಿಸಿ. ನಂತರ ಉಪ್ಪು, ಖಾರ, ಉಳಿದ ಮಸಾಲೆ, ರುಬ್ಬಿದ ಮಿಶ್ರಣ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಬೇಕು. ಕಾದಾರಿದ ಗಟ್ಟಿ ಹಾಲು ಬೆರೆಸಿ, ಎಲ್ಲ ಬೆರೆತು ಕುದಿಯುವಂತೆ ಮಾಡಿ. ಕೊನೆಯಲ್ಲಿ ಕಸೂರಿಮೇಥಿ, ತುಪ್ಪದಲ್ಲಿ ಹುರಿದ ಇನ್ನಷ್ಟು ಗೋಡಂಬಿ ಬಾದಾಮಿ ಸೇರಿಸಿ ಕೆಳಗಿಳಿಸಿ. ಒಂದಿಷ್ಟು ಕೊ.ಸೊಪ್ಪು ಉದುರಿಸಿ, ಬಿಸಿ ಬಿಸಿಯಾಗಿ ಚಪಾತಿ ಜೊತೆ ಸವಿಯಲು ಕೊಡಿ.

3 ಟೈರ್‌ ಆಲೂ ಕೋಫ್ತಾ

zDSC_1942

 

 

ಮೂಲ ಸಾಮಗ್ರಿ : 2-3 ಉದ್ದನೆಯ ಆಲೂಗಡ್ಡೆ, 10-15 ಉದ್ದನೆ ಪಾಲಕ್‌ ಎಲೆಗಳು, 1 ಕಪ್‌ ಬೆಂದ ಹೆಸರುಕಾಳು, ಒಗ್ಗರಣೆ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪು ಖಾರ ಚಾಟ್‌ ಮಸಾಲ ಗರಂಮಸಾಲ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಕೊ.ಸೊಪ್ಪು, ಹಸಿಮೆಣಸು, ತುಸು ಎಣ್ಣೆ.

ಗ್ರೇವಿಯ ಸಾಮಗ್ರಿ : 1 ಕಪ್‌ ಟೊಮೇಟೊ ಪ್ಯೂರಿ, 1 ದೊಡ್ಡ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧರ್ಧ ಕಪ್‌ ಬಾಡಿಸಿ ಪೇಸ್ಟ್ ಮಾಡಿದ ಈರುಳ್ಳಿ ಫ್ರೆಶ್‌ ಕ್ರೀಂ, 2-2 ಚಿಟಕಿ ಜೀರಿಗೆ ಸೋಂಪು ದಾಲ್ಚಿನ್ನಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಖಾರ ಟೊಮೇಟೊ ಕೆಚಪ್‌, 5-6 ಚಮಚ ಎಣ್ಣೆ.

ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಹಸಿಮೆಣಸು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕಬೇಕು. ನಂತರ ಬೆಂದ ಹೆಸರುಕಾಳು ಬೆರೆಸಿ, ಚೆನ್ನಾಗಿ ಕೈಯಾಡಿಸಿ ಕೆಳಗಿಳಿಸಿ. ಆಲೂ ಉದ್ದಕ್ಕೆ ಬರುವಂತೆ ಹೆಚ್ಚಿಡಿ. ಇದನ್ನು ನೀರಲ್ಲಿ ಹಾಕಿಟ್ಟು, ಪಾಲಕ್‌ ಎಲೆಗಳನ್ನು ಬಿಸಿ ನೀರಲ್ಲಿ ನೆನೆಸಿಡಿ. ಆಮೇಲೆ ಇವೆರಡನ್ನೂ ಕಿಚನ್‌ ಟವೆಲ್ ‌ಮೇಲೆ ಹರಡಿಕೊಳ್ಳಿ. ಪ್ರತಿ ಆಲೂ ತುಂಡಿನ ಮೇಲೂ 1-1 ಚಮಚ ಬೆಂದ ಕಾಳಿನ ಮಿಶ್ರಣ ಬರುವಂತೆ ಹರಡಿ, ಮೇಲೆ ಮತ್ತು ಕೆಳಗಿನ ಭಾಗದಲ್ಲೂ ಸೇರಿಸಬೇಕು. ಇದನ್ನು ಪಾಲಕ್‌ ಎಲೆಗಳಿಂದ ನೀಟಾಗಿ ರೋಲ್ ಮಾಡಿ, ಬಿಟ್ಟುಕೊಳ್ಳದಂತೆ ಟೂತ್‌ ಪಿಕ್‌ ಸಿಗಿಸಿಡಿ. ಈ ರೀತಿ ಎಲ್ಲಾ 3 ಟೈರ್‌ ಪ್ಯಾಕೆಟ್ಸ್ ಸಿದ್ಧಪಡಿಸಿ, ಇಡ್ಲಿ ಕುಕ್ಕರ್‌ನಲ್ಲಿ ಹಬೆಯಲ್ಲಿ ಬೇಯಿಸಿ.

ಗ್ರೇವಿ : ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಟೊಮೇಟೊ ಪ್ಯೂರಿ, ಕೆಚಪ್‌ ಬೆರೆಸಿ ಕೈಯಾಡಿಸಬೇಕು. ನಂತರ ಗ್ರೇವಿಯ ಉಳಿದೆಲ್ಲ ಸಾಮಗ್ರಿ ಬೆರೆಸಿ, ತುಸು ನೀರು ಸಹ ಸೇರಿಸಿ. ಇದು ಚೆನ್ನಾಗಿ ಕುದ್ದು ಗಟ್ಟಿಯಾದಾಗ ಕೆಳಗಿಳಿಸಿ. ಇದನ್ನು ಒಂದು ಅಗಲ ಟ್ರೇಗೆ ಹರಡಿಕೊಂಡು, ಹಬೆಯಲ್ಲಿ ಬೆಂದ 3 ಟೈರ್‌ ಆಲೂ ಪ್ಯಾಕೆಟ್ಸ್ ಇರಿಸಿ, ಚಿತ್ರದಲ್ಲಿರುವಂತೆ ಫ್ರೆಶ್‌ ಕ್ರೀಂ ಹರಡಿ, ಕಸೂರಿಮೇಥಿ ಉದುರಿಸಿ ಸವಿಯಲು ಕೊಡಿ.

ಫಿಗ್‌ ಮಶ್ರೂಮ್ ಸ್ಪೆಷಲ್

dam aalu

 

ಮೂಲ ಸಾಮಗ್ರಿ : ದೊಡ್ಡ ಗಾತ್ರದ 20 ಮಶ್ರೂಮ್, 10 ಅಂಜೂರ (ಫಿಗ್‌), 1 ಗಿಟುಕು ತೆಂಗಿನ ತುರಿ, ಗೋಡಂಬಿ ಪಿಸ್ತಾ ಬಾದಾಮಿ ಚೂರು (ಒಟ್ಟಾಗಿ 1 ಕಪ್‌), ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು ಖಾರ.

ಗ್ರೇವಿಯ ಸಾಮಗ್ರಿ : 1-1 ಕಪ್‌ ಈರುಳ್ಳಿ ಪೇಸ್ಟ್, ಟೊಮೇಟೊ ಪೇಸ್ಟ್, ಕ್ರೀಂ, 4 ಚಮಚ ಗೋಡಂಬಿ ಪೇಸ್ಟ್, 2 ಚಮಚ ಕಸೂರಿಮೇಥಿ, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಖಾರ ಗರಂಮಸಾಲ, ತುಸು ಎಣ್ಣೆ ಬೆಣ್ಣೆ.

ವಿಧಾನ : ಹಿಂದಿನ ದಿನವಿಡೀ ಅಂಜೂರವನ್ನು ನೆನೆಹಾಕಿಡಿ. ಮಾರನೇ ದಿನ ಸಣ್ಣಗೆ ಹೆಚ್ಚಿಡಿ. ತೆಂಗಿನ ತುರಿಗೆ ಉಳಿದೆಲ್ಲ ಸಾಮಗ್ರಿ ಸೇರಿಸಿ ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚಿದ ಅಂಜೂರ ಸೇರಿಸಿ ಮಿಕ್ಸ್ ಮಾಡಿ. ಮಶ್ರೂಮ್ ನ ಒಳಭಾಗ ಟೊಳ್ಳು ಮಾಡಿ, ಅದಕ್ಕೆ ಅಂಜೂರದ ಮಿಶ್ರಣ ತುಂಬಿಸಿ, ಒಂದನ್ನೊಂದು ಕೂಡಿಕೊಳ್ಳುವಂತೆ (ಚಿತ್ರ ನೋಡಿ) ಟೂತ್‌ಪಿಕ್‌ ಸಿಗಿಸಿಡಿ. ಈ ರೀತಿ ಎಲ್ಲಾ ಸಿದ್ಧಪಡಿಸಿ.

ಗ್ರೇವಿ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಮೊದಲು ಈರುಳ್ಳಿ, ನಂತರ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಗೋಡಂಬಿ ಪೇಸ್ಟ್, ಉಳಿದೆಲ್ಲ ಮಸಾಲೆ ಹಾಕಿ ಬೇಗ ಬೇಗ ಕೈಯಾಡಿಸಿ. ಅರ್ಧ ಭಾಗ ಕ್ರೀಂ, ಅಗತ್ಯವೆನಿಸಿದರೆ ಕಾದಾರಿದ ನೀರು ಹಾಲು ಬೆರೆಸಿ ಗ್ರೇವಿ ಕುದಿಸಬೇಕು. ಇದಕ್ಕೆ ರೆಡಿ ಇರುವ ಮಶ್ರೂಮ್ ಹಾಕಿ ಹದನಾಗಿ ಬೇಯಲು ಬಿಡಿ. ಕೆಳಗಿಳಿಸುವ ಮುನ್ನ ಉಳಿದ ಕ್ರೀಂ, ಬೆಣ್ಣೆ ಬೆರೆಸಿ ಕೆದಕಬೇಕು. ಬಿಸಿ ಬಿಸಿಯಾಗಿ ಇದನ್ನು ಅನ್ನ, ರೊಟ್ಟಿ ಜೊತೆ ಸವಿಯಲು ಕೊಡಿ.

ಹುಳಿಸಿಹಿ ಪನೀರ್‌ ಮಸಾಲ

zDSC_1978

 

ಮೂಲ ಸಾಮಗ್ರಿ : 500 ಗ್ರಾಂ ಪನೀರ್‌, 1 ಕಪ್‌ ಅನಾನಸ್‌ ತುರಿ, 2 ಚಮಚ  ಕರ್ಬೂಜಾ ಬೀಜ, 4-4 ಚಮಚ ಟೊಮೇಟೊ ಸಾಸ್‌ ಹುಳಿ ಸಿಹಿ ಪುದೀನಾ ಚಟ್ನಿ, ಅರ್ಧ ಕಪ್‌ ಕಾರ್ನ್‌ ಫ್ಲೋರ್‌, ಅಗತ್ಯವಿದ್ದಷ್ಟು ಎಣ್ಣೆ ಬೆಣ್ಣೆ.

ಗ್ರೇವಿ ಸಾಮಗ್ರಿ : 1 ಕಪ್‌ ಅನಾನಸ್‌ ಜೂಸ್‌, 1 ಕಪ್‌ ಟೊಮೇಟೊ ಪೇಸ್ಟ್, 4 ಚಮಚ ಟೊಮೇಟೊ ಕೆಚಪ್‌, ರುಚಿಗೆ ತಕ್ಕಷ್ಟು ಉಪ್ಪು ಕಾಳು ಮೆಣಸು ಗರಂಮಸಾಲ, 1 ಚಿಟಕಿ ಜಾಯಿಕಾಯಿ ಪುಡಿ.

ವಿಧಾನ : ಮೊದಲು ಪನೀರ್‌ನ್ನು 5-6 ದಪ್ಪ ತುಂಡುಗಳಾಗಿಸಿ. ಪ್ರತಿ ತುಂಡನ್ನೂ 4 ಸಮಾನ ಗಾತ್ರದ ಸ್ಲೈಸ್‌ ಮಾಡಿ. ಒಂದು ಸ್ಲೈಸ್‌ ಮೇಲೆ ಪುದೀನಾ ಚಟ್ನಿ ಸರಬೇಕು. ಇನ್ನೊಂದು ಸ್ಲೈಸ್‌ ಮೇಲೆ ಟೊಮೇಟೊ ಸಾಸ್‌ ಹರಡಿ. 3ನೇ ಸ್ಲೈಸ್‌ ಮೇಲೆ ಅನಾನಸ್‌ತುರಿ ಬರಲಿ. ಇದರ ಮೇಲೆ 4ನೇ ಸ್ಲೈಸ್‌ ಬರಲಿ. ಹೀಗೆ ಎಲ್ಲವನ್ನೂ ಒಂದರ ಮೇಲೊಂದು ಪೇರಿಸಿ. ಕಾರ್ನ್‌ ಫ್ಲೋರ್‌ಗೆ ತುಸು ನೀರು ಬೆರೆಸಿ ಬೋಂಡ ಹಿಟ್ಟಿನಂತೆ ಮಾಡಿಕೊಳ್ಳಿ. ಅದರಲ್ಲಿ ಈ ಪನೀರ್‌ ಸ್ಲೈಸ್‌ ಅದ್ದಿ ಕರ್ಬೂಜಾ ಬೀಜದಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ.

ಗ್ರೇವಿ ಮೊದಲು ಬಾಣಲೆಯಲ್ಲಿ ತುಸು ಎಣ್ಣೆ, ಅದರ ಮೇಲೆ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಕೆಚಪ್‌, ಅನಾನಸ್‌ ಜೂಸ್‌ ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ಆಮೇಲೆ ಇದಕ್ಕೆ ಹುರಿದು ಪುಡಿ ಮಾಡಿದ ಕಾಳು ಮೆಣಸು, ಉಪ್ಪು, ಉಳಿದ ಮಸಾಲೆ ಕಾರ್ನ್‌ಫ್ಲೋರ್‌ ಮಿಶ್ರಣ ಎಲ್ಲವನ್ನೂ ಬೆರೆಸಿಕೊಂಡು ಗ್ರೇವಿ ಗಟ್ಟಿಯಾಗುವವರೆಗೂ ಕುದಿಸಬೇಕು. ಇದಕ್ಕೆ ಪನೀರ್‌ ಫ್ರೈ ಬೆರೆಸಿ 2 ನಿಮಿಷ ಕುದಿಸಿ ಕೆಳಗಿಳಿಸಿ. ಬಿಸಿಯಾಗಿ ಇದನ್ನು ಚಪಾತಿ ಜೊತೆ ಸವಿಯಲು ಕೊಡಿ.

ಬಾರ್ಬೆಕ್ಯೂ ವೆಜೀಸ್

zDSC_2028

ಮೂಲ ಸಾಮಗ್ರಿ : 1 ಸಣ್ಣ ಹೂಕೋಸು, 2 ಕ್ಯಾರೆಟ್‌, 1-1 ಕೆಂಪು ಹಳದಿ ಹಸಿರು ಕ್ಯಾಪ್ಸಿಕಂ, 8-10 ಅಣಬೆ.

ಗ್ರೇವಿಯ ಸಾಮಗ್ರಿ : ಈರುಳ್ಳಿ ಟೊಮೇಟೊ (ತಲಾ 500 ಗ್ರಾಂ ಪೇಸ್ಟ್), 2-2 ಚಮಚ ಬೆಳ್ಳುಳ್ಳಿ ಹಸಿಮೆಣಸು ಶುಂಠಿ ಗಸಗಸೆ ಪೇಸ್ಟ್ ಫ್ರೆಶ್‌ ಕ್ರೀಂ. 15-20 ದುಂಡನೆಯ ಹಸಿ ಶೇಂಗಾ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಅಗತ್ಯವಿದ್ದಷ್ಟು ಉಪ್ಪು ಖಾರ ಗರಂಮಸಾಲ, ಚಾಟ್‌ ಮಸಾಲ ಅರಿಶಿನ ಎಣ್ಣೆ ತುಪ್ಪ ಅಕ್ಕಿಹಿಟ್ಟು.

ವಿಧಾನ : ಎಲ್ಲಾ ತರಕಾರಿ ಹೆಚ್ಚಿಕೊಂಡು ಮೊದಲು ಮೈಕ್ರೋವೇವ್‌ನಲ್ಲಿ ಲಘುವಾಗಿ ಬೇಯಿಸಿ. ನಂತರ ಸ್ಟೀಲ್ ‌ಕಡ್ಡಿಗೆ ಸಿಗಿಸಿ ಎಲೆಕ್ಟ್ರಿಕ್ ತಂದೂರ್‌ ನಲ್ಲಿ ಬಾರ್ಬೆಕ್ಯೂ ಮಾಡಿ ಅಥವಾ ಓವನ್‌ನಲ್ಲಿ ಗ್ರಿಲ್ ‌ಮಾಡಿ. ನಡುನಡುವೆ ಬೆಣ್ಣೆ ಸವರಬೇಕು.

ಗ್ರೇವಿ : ಹಸಿ ಶೇಂಗಾವನ್ನು ಮೈಕ್ರೋವೇವ್‌ನಲ್ಲಿ ಬೇಯಿಸಿ (ಬಣ್ಣ ಕೆಡುವುದಿಲ್ಲ) ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಒಂದೊಂದಾಗಿ ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ ಇತ್ಯಾದಿ ಎಲ್ಲಾ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಅರಿಶಿನ, ಉಳಿದೆಲ್ಲ ಮಸಾಲೆ ಹಾಕಿ, ಶೇಂಗಾ ಬೆರೆಸಿ ಕೆದಕಬೇಕು. ಆಮೇಲೆ ತುಸು ಅಕ್ಕಿಹಿಟ್ಟು ಕದಡಿದ ನೀರು ಬೆರೆಸಿ ಗ್ರೇವಿ ಗಟ್ಟಿಯಾಗುವಂತೆ ಕುದಿಸಿ. ಇದಕ್ಕೆ ಫ್ರೆಶ್‌ ಕ್ರೀಂ ಬೆರೆಸಿ ಕೆಳಗಿಳಿಸಿ, ಬಾರ್ಬೆಕ್ಯೂ ಅಥವಾ ಗ್ರಿಲ್ ‌ಮಾಡಲಾದ ತರಕಾರಿ ಸೇರಿಸಿ ತಕ್ಷಣ ಬಿಸಿಯಾಗಿ ಚಪಾತಿ ಪೂರಿ ಜೊತೆ ಸವಿಯಲು ಕೊಡಿ.

ಮಲಾಯಿ ಪನೀರ್

zDSC_1971

ಸಾಮಗ್ರಿ : 250 ಗ್ರಾಂ ಪನೀರ್‌, 1 ಕಪ್‌ ಫ್ರೆಶ್‌ ಕ್ರೀಂ ಅಥವಾ ಹಾಲಿನ ಕೆನೆ, 5-6 ಎಸಳು ಕೇಸರಿ (ಹಾಲಲ್ಲಿ ನೆನೆದದ್ದು), 2-3 ಏಲಕ್ಕಿ, 1-2 ಈರುಳ್ಳಿ, ಅಗತ್ಯವಿದ್ದಷ್ಟು ಹಾಲು, ತುಪ್ಪ, ಉಪ್ಪು, ಮೆಣಸು, ಹೆಚ್ಚಿದ ಈರುಳ್ಳಿ ತೆನೆ.

ವಿಧಾನ : ಚೆನ್ನಾಗಿ ಮಸೆದ ಪನೀರ್‌ಗೆ ಅರ್ಧದಷ್ಟು ಕ್ರೀಂ, ಕೇಸರಿ, ಏಲಕ್ಕಿಪುಡಿ, ಉಪ್ಪು ಮೆಣಸು ಬೆರೆಸಿ, ಮಸೆದುಕೊಂಡು, 1 ತಾಸು ಫ್ರಿಜ್‌ನಲ್ಲಿಡಿ. ಹೊರತೆಗೆದು ಸಣ್ಣ ಸಣ್ಣ ಉಂಡೆಗಳಾಗಿಸಿ ಮತ್ತೆ ಫ್ರಿಜ್‌ನಲ್ಲಿಡಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ ಅದರ ತೆನೆ ಹಾಕಿ ಬಾಡಿಸಿ. ಆಮೇಲೆ ಉಳಿದ ಕ್ರೀಂ ಹಾಕಿ 5 ನಿಮಿಷ ಚೆನ್ನಾಗಿ ಬಾಡಿಸಿ. ನಂತರ ಹಾಲು ಬೆರೆಸಿ ಗ್ರೇವಿ ಗಟ್ಟಿಯಾಗುವಂತೆ ಕುದಿಸಿ. ಇದಕ್ಕೆ ಉಪ್ಪು, ಮೆಣಸು ಹಾಕಿ ಇನ್ನಷ್ಟು ಕೈಯಾಡಿಸಿ. ಕೊನೆಯಲ್ಲಿ ಫ್ರಿಜ್‌ನಿಂದ ಹೊರತೆಗೆದು ಪನೀರ್‌ ಬಾಲ್ಸ್ ಬೆರೆಸಿ, 2 ನಿಮಿಷ ಕೆದಕಿ ಬಿಸಿ ಬಿಸಿಯಾಗಿ ರೊಟ್ಟಿ ಪೂರಿ ಜೊತೆ ಸವಿಯಿರಿ.

ಕಡಲೆ ಕ್ಯೂಬ್ಸ್ ಇನ್‌ ಸ್ಪೆಷಲ್ ಕರೀ

zDSC_1992

ಮೂಲ ಸಾಮಗ್ರಿ : 250 ಗ್ರಾಂ ಕಡಲೆ ಹಿಟ್ಟು, 1 ಕಪ್‌ ಹುಳಿ ಮೊಸರು, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಹಸಿಮೆಣಸು, 8-10 ಹಸಿ ಖರ್ಜೂರ, 2 ಚಿಟಕಿ ಧನಿಯಾಪುಡಿ, ಕರಿಯಲು ಎಣ್ಣೆ, ರುಚಿಗೆ ಉಪ್ಪು.

ಗ್ರೇವಿಯ ಸಾಮಗ್ರಿ : ಅರ್ಧ ಸೌಟು ಬೆಣ್ಣೆ, 4 ಚಮಚ ತುಪ್ಪ, ಅರ್ಧ ಕಪ್‌ ಗಟ್ಟಿ ಮೊಸರು, 2 ಈರುಳ್ಳಿ, 4-5 ಟೊಮೇಟೊ, ಒಂದಿಷ್ಟು ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಕೊ.ಸೊಪ್ಪು, 1 ಕಪ್‌ ತೆಂಗಿನಹಾಲು, ರುಚಿಗೆ ತಕ್ಕಷ್ಟು ಉಪ್ಪು ಖಾರ, ಗರಂಮಸಾಲ, ಒಗ್ಗರಣೆ ಸಾಮಗ್ರಿ, ಕರಿಬೇವು, 2 ಚಿಟಕಿ ಅರಿಶಿನ.

ವಿಧಾನ : ಬೀಜರಹಿತ ಹಸಿ ಖರ್ಜೂರವನ್ನು 2-3 ಭಾಗ ಮಾಡಿ, ಬಿಸಿ ಹಾಲಲ್ಲಿ ನೆನೆಹಾಕಿಡಿ. ಇದನ್ನು ಬಿಟ್ಟು ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ಚಪಾತಿ ಹಿಟ್ಟಿನಂತೆ ಗಟ್ಟಿಯಾಗಿ ಕಲಸಿಕೊಳ್ಳಿ. ಇದನ್ನು ಕೋಡುಬಳೆಗೆ ಹೊಸೆಯುವಂತೆ ಜಿಡ್ಡು ಸವರಿದ ಮಣೆ ಮೇಲೆ ಉದ್ದಕ್ಕೆ ಹೊಸೆದು, ತುಸು ದಪ್ಪಗಿನ ಕ್ಯೂಬ್ಸ್ ಆಗಿ ಕತ್ತರಿಸಿ. ಪ್ರತಿಯೊಂದರಲ್ಲೂ 1-1 ತುಂಡು ಖರ್ಜೂರ ಇರಿಸಿ. ಇದನ್ನು ಇಡ್ಲಿ ತರಹ ಆವಿಯಲ್ಲಿ ಬೇಯಿಸಿ. ಚೆನ್ನಾಗಿ ಆರಿದ ನಂತರ ಕಾದ ಎಣ್ಣೆಯಲ್ಲಿ ಕರಿಯಿರಿ.

ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಬೆಣ್ಣೆ ಸಹ ಬೆರೆಸಿ ಬಿಸಿ ಮಾಡಿ. ಕರಿಬೇವಿನ ಸಹಿತ ಒಗ್ಗರಣೆ ಕೊಡಿ. ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಈರುಳ್ಳಿಗಳನ್ನು ಒಂದೊಂದಾಗಿ ಬಾಡಿಸಿ. ಆಮೇಲೆ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಬೇಕು. ಆಮೇಲೆ ಉಪ್ಪು, ಖಾರ, ಮಸಾಲೆ ಸೇರಿಸಿ ಕೆದಕಬೇಕು. ನಂತರ ತೆಂಗಿನ ಹಾಲು, ಮೊಸರು ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ಕೊನೆಯಲ್ಲಿ ಕರಿದ ಕ್ಯೂಬ್ಸ್ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಇನ್ನೊಂದಿಷ್ಟು ನೆನೆದ ಖರ್ಜೂರದ ತುಂಡುಗಳು, ಕೊ.ಸೊಪ್ಪು ಉದುರಿಸಿ 2 ನಿಮಿಷ ಕೆದಕಿ ಕೆಳಗಿಳಿಸಿ. ಬಿಸಿ ಬಿಸಿಯಾಗಿ ಅನ್ನ, ಚಪಾತಿ ಜೊತೆ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ