“ಈ ಮಗುವಿಗಾಗಿ ನನ್ನ ಮನಸ್ಸು ಹಾತೊರೆಯುತ್ತಿಲ್ಲ,” ಎಂದಿದ್ದಳು ಅವಳು. ಆದರೆ ಈ ಮಾತು ಆರಂಭದ ದಿನಗಳದ್ದಾಗಿತ್ತು. ಅನಂತರ ಕ್ರಮೇಣ ಆ ಮೂಕವೇದನೆ, ವಿಪರೀತ ತಲ್ಲಣ ಮತ್ತು ಅನಿಯಂತ್ರಿತ ರಕ್ತದೊತ್ತಡದಂತಹ ಕಾಯಿಲೆಯ ಮಧ್ಯೆಯೂ ತನ್ನ ಒಡಲಲ್ಲಿ ಅರಳುತ್ತಿರುವ ಕಂದನನ್ನು ಪ್ರೀತಿಸಲು ಪ್ರಾರಂಭಿಸಿರಬಹುದು. ಈ ಮಗು ಹುಟ್ಟಿದ ಮೇಲಾದರೂ ನನ್ನ ಕಷ್ಟ ಕೋಟಿಗಳೆಲ್ಲ ದೂರಾಗಬಹುದು ಎಂಬ ನಿರೀಕ್ಷೆಯನ್ನಾದರೂ ಹೊಂದಿರಬಹುದು. ಪ್ರಸವದ ಕಾರಣದಿಂದ, ತನ್ನ 8 ವರ್ಷದ ಮಗಳಿಂದ ಸುಮಾರು 2-3 ತಿಂಗಳಾದರೂ ದೂರವಿರಬೇಕಲ್ಲ ಎಂಬ ಕೊರಗೂ ಅವಳನ್ನು ಕಿತ್ತು ತಿನ್ನುತ್ತಿರಬಹುದು.
ಆದರೆ ನಡೆಯಬಾರದ ಅನಾಹುತ ನಡೆದೇಬಿಟ್ಟಿತು. ದಿನ ತುಂಬುವ ಮೊದಲೇ ಪ್ರಸವವಾಗಿತ್ತು. ಮಗು ನಿರ್ಜೀವ. ಊದಿಕೊಂಡ ಶಿರ, ತಿರುಚಿಕೊಂಡ ಕೈಕಾಲುಗಳು, ಸಂಪೂರ್ಣವಾಗಿ ಬೆಳೆಯದ ಭ್ರೂಣ. ಏಳು ತಿಂಗಳಿಂದ ಗರ್ಭದಲ್ಲಿ ಜತನವಾಗಿರಿಸಿಕೊಂಡು ಬಂದ ಅಧ್ಯಾಯ ಮುಗಿದೇ ಹೋಗಿತ್ತು.
“ಇತ್ತೀಚೆಗೆ ನಾನೂ ಕೂಡ ತುಂಬಾ ದಿಟ್ಟಳಾಗಿದ್ದೇನೆ ಅಕ್ಕಾ. ಮೊನ್ನೆ ನಮ್ಮ ಅತ್ತೆ ತನುಜಾಗೆ ಹೇಳುತ್ತಿದ್ದರು `ನೋಡಮ್ಮ, ನಿಮ್ಮ ಮಮ್ಮಿ ಜೋಳದ ತೆನೆ ತಿನ್ನುತ್ತಾಳೆಯೇ? ವಿಚಾರಿಸ್ಕೊಂಡು ಬಾ,’ ಎಂದು ಹಸಿವಿನಿಂದ ಕಂಗೆಟ್ಟಿದ್ದ ನಾನು ತನುಜಾ ಬಂದು ಕೇಳಿದಾಗ, ‘ಹೂಂ ಬೇಕು,’ ಎಂದೆ. ಅವಳು ಹೋಗಿ ಹೇಳಿದಳು.
“ಸರಿ ಹಾಗಾದರೆ ಹೋಗಿ ತೆಗೆದುಕೊಂಡು ಬಾ ಅಂತಾ ಹೇಳು,” ಎಂದರು. ನಾನಿಲ್ಲೇ ಒಳಗೆ ಮಲಗಿದ್ದೆ. ಹೊರಗೆ ಅಜ್ಜಿ ಮೊಮ್ಮಗಳು ಮಾತನಾಡುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಲಿತ್ತು.
ಮರಳಿ ಒಳಗೆ ಬಂದ ತನುಜಾಳಿಗೆ ಹೇಳಿದೆ, “ನನ್ನ ಸೊಂಟದಲ್ಲಿ ತುಂಬಾ ನೋವಿದೆಯಮ್ಮ, ಎದ್ದೇಳೊದಕ್ಕೂ ಆಗುವುದಿಲ್ಲ,” ಎಂದೆ.
ಅತ್ತೆ, “ತರುವುದಕ್ಕೆ ಆಗೋದಿಲ್ಲ ಅಂದರೆ ತಿನ್ನೋಕಾದರೂ ಹೇಗೆ ಆಗುತ್ತೆ?” ಎಂದು ಕುಹಕವಾಡಿದ್ದರು.
“ತನುಜಾ ಮಾತ್ರ ನನಗೂ ಅತ್ತೆಗೂ ಮಧ್ಯೆ ಮೆಸೆಂಜರ್ ಕೆಲಸವನ್ನು ಜಾರಿಯಲ್ಲಿಟ್ಟಿದ್ದಳು. ನಂತರ ಅದ್ಹೇಗೊ ಏನೋ ಜೋಳದ ತೆನೆ ಬಂದಿತು. ನಾನೂ ನಿರ್ಲಜ್ಜಳಾಗಿ ತಿಂದೆ. ನಾನು ಇಷ್ಟೊಂದು ನಿರ್ಲಜ್ಜಳಾಗಬಹುದೆಂದು ನೀನು ಯಾವತ್ತಾದರೂ ಅಂದುಕೊಂಡಿದ್ದೆಯಾ ಅಕ್ಕಾ?”
ಸುಮಾರು ಒಂದು ವಾರದವರೆಗೂ ಅವಳ ಯಾತನಾಮಯ ಬದುಕು ಕಣ್ಮುಂದೆ ಸುಳಿದಾಡುತ್ತಲಿತ್ತು. ಫೋನ್‌ನಲ್ಲಿ ಮಾತನಾಡಿದಾಗೆಲ್ಲ ಅವಳು ತನ್ನ ಮನದಲ್ಲಿ ಹುದುಗಿದ ಮೂಕವೇದನೆಯನ್ನು ಹೊರಹಾಕುತ್ತಿದ್ದಳು. ಕೆಲವು ವಿಚಾರಗಳನ್ನು ಎದುರುಬದುರು ಕುಳಿತು ಮಾತನಾಡುವಂತೆಯೂ ಇರಲಿಲ್ಲ. ಅದೂ ಅಲ್ಲದೇ, ಅವಳು ವಯಸ್ಸಿನಲ್ಲಿ ನನಗಿಂತ ಚಿಕ್ಕವಳಾಗಿದ್ದರಿಂದ ಸಂಕೋಚಪಟ್ಟಿದ್ದಿರಬಹುದು. ಆದರೆ ಫೋನ್‌ನಲ್ಲಿ ಮಾತನಾಡುವಾಗ ನಿಸ್ಸಂಕೋಚವಾಗಿ ಮಾತನಾಡುತ್ತಿದ್ದಳು.
ಸರಿತಾ, ಲಲಿತಾಳ ಸ್ವಂತ ತಂಗಿಯಾದರೆ, ಲಲಿತಾ ನನ್ನ ಅಚ್ಚುಮೆಚ್ಚಿನ ಬಾಲ್ಯ ಸ್ನೇಹಿತೆ. ಅಕ್ಕ ತಂಗಿಯರಲ್ಲಿ ಸರಿತಾಳೇ ಎಲ್ಲರಿಗಿಂತಲೂ ಚಿಕ್ಕವಳಾದರೂ, ಅವಳ ನಂತರ ಒಬ್ಬ ಗಂಡು ಮಗು ಹುಟ್ಟಿದರೂ ಕೂಡ ಸರಿತಾಳನ್ನು ಕೊನೆಯ ಹೆಣ್ಣುಮಗಳೆಂದು ಅತ್ಯಂತ ಪ್ರೀತಿಯಿಂದ ಬೆಳೆಸಿದ್ದರು.
`ರೂಪೇಶು ಲಕ್ಷ್ಮಿ ಕ್ಷಮಯಾಧರಿತ್ರಿ….’ ಇತ್ಯಾದಿ ಕನ್ಯೆಯಲ್ಲಿನ ಆರು ಗುಣಧರ್ಮಗಳ ತುಲನೆ ಮಾಡಿದರೆ, ಸರಿತಾಳನ್ನು ಇದರಲ್ಲಿ ಅತ್ಯುತ್ತಮಳೆಂದು ಕರೆಯಬಹುದು. ಹುಡುಗರಲ್ಲಿ ಈ ರೀತಿ ಗುಣಗಳ ತುಲನೆ ಮಾಡುವುದಿಲ್ಲ ಬಿಡಿ, ಮಾಡಿದ್ದರೆ ವಿಜಯ್ ಅತ್ಯಂತ ಕನಿಷ್ಠನಾಗಿಬಿಡುತ್ತಿದ್ದ.
ಒಬ್ಬ ಸುಂದರ ಯುವತಿಗೆ, ಅತಿ ಸಾಮಾನ್ಯ ಪುರುಷನೊಬ್ಬ ಸಂಗಾತಿಯಾಗಿ ಬಂದಾಗಲೇ ಸಮಸ್ಯೆಗಳು ಉದ್ಭವಿಸುವುದು. ಬಹುಶಃ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ಪುರುಷನ ವೃತ್ತಿಯ ಮೇಲಿನ ಲಗಾಮು, ಮಹತ್ವಾಕಾಂಕ್ಷೆ, ಸ್ವಭಾವ, ಸಂಸ್ಕಾರ, ಶಿಕ್ಷಣ ಮುಂತಾದವುಗಳ ಬಗ್ಗೆ ಮಾತನಾಡುವುದೇ ತಪ್ಪಾದೀತು.
ಪುರುಷಸಿಂಹನ ಉಗ್ರ ಪ್ರತಾಪ ಒಂದು ಸಲ ತಂದೆತಾಯಿಯ ಮೇಲಾದರೆ, ಇನ್ನೊಂದು ಸಲ ಅಕ್ಕ ತಂಗಿ, ಅಣ್ಣತಮ್ಮಂದಿರೊಂದಿಗೆ, ಇಲ್ಲದಿದ್ದರೆ ಕೆಲಸದವರೊಂದಿಗೆ ಅಥವಾ ನೆರೆಹೊರೆಯವರೊಂದಿಗೆ. ಸರಿತಾಳ ಮದುವೆಯಾದ ಮೇಲೆ ಎಲ್ಲ ಪ್ರತಾಪಗಳೂ ಅವಳ ಮೇಲೆಯೇ ಮುರಿದುಬಿದ್ದಂತಾಗಿದೆ.
ಸರಿತಾಳ ಮನೆಯವರು, ವಿಜಯ್‌ನಲ್ಲಿ ಅದೇನನ್ನು ಕಂಡು ಮದುವೆ ಮಾಡಿಕೊಟ್ಟರೊ? ಎಂಬ ಪ್ರಶ್ನೆ ನನ್ನನ್ನು ಇಂದಿನವರೆಗೂ ಕಾಡುತ್ತಲಿದೆ. ತುಂಬಿದ ಮನೆಯ ಏಕೈಕ ಪುತ್ರ, ಕಾರು, ಬಂಗಲೆ, ವ್ಯವಹಾರ ಎಲ್ಲ ಇದೆ ಎಂದುಬಿಟ್ಟರೆ ಭವಿಷ್ಯ ಸುರಕ್ಷಿತವಾದಂತೆಯೇ? ಆದರೆ ಸರಿತಾಳಂತಹ ಯುವತಿಗೆ ಇದ್ಯಾವುದರ ಕೊರತೆಯೂ ಇರಲಿಲ್ಲ.
ವಿಜಯ್‌ನ ಸ್ವಭಾವಗಳಿಂದ ಬೇಸತ್ತು ಹೋಗಿದ್ದ ಅವನ ತಂದೆ ತಾಯಿ ಕೂಡ ಮದುವೆ ಮಾಡಿದರೆ ಸರಿ ಹೋದಾನು ಎಂದುಕೊಂಡಿದ್ದರೇನೋ? ಆದರೆ ಮದುವೆಯ ನಂತರ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಬಹುದೆಂದು ಅವರು ಕನಸು ಮನಸ್ಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ವಿಜಯ್‌ನ ಅನಾದರ, ದಬ್ಬಾಳಿಕೆಗೆ ಬಲಿಯಾದಳು ಬೇರೆ ಮನೆಯ ಹುಡುಗಿ ಸರಿತಾ. ಮದುವೆಯಾಗಿ ಇಷ್ಟು ವರ್ಷಗಳೇ ಕಳೆದರೂ ಇವಳನ್ನು ಯಾರೂ ಸ್ವೀಕರಿಸಿರಲಿಲ್ಲ. ಈ 8-9 ವರ್ಷಗಳ ವೈವಾಹಿಕ ಬದುಕಿನಲ್ಲಿ ಅವಳು ಗಳಿಸಿದ್ದು ಎಂದರೆ, ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಧಿಕ ರಕ್ತದೊತ್ತಡದ ವ್ಯಾಧಿ ಮತ್ತು 8 ವರ್ಷದ ಮುದ್ದು ಮಗಳು ತನುಜಾ ಮಾತ್ರ.ಇಷ್ಟು ವರ್ಷಗಳ ನಂತರ ಮತ್ತೆ ಗರ್ಭವತಿಯಾಗಿರುವುದಕ್ಕೆ ಸರಿತಾ ಗಾಬರಿಯಾಗಿದ್ದಳು. ಆದರೂ ಹೇಗೋ ಏನೋ ನಿಭಾಯಿಸಿಕೊಂಡಳು. ಆ ಏಳು ತಿಂಗಳುಗಳನ್ನು ತುಂಬಾ ಯಾತನೆಯಿಂದ ಕಳೆದಿದ್ದಳು. ಕೊನೆಗೆ ವಿಧಿಯಾಟ…. ಆಗಿದ್ದಾದರೂ ಏನು? ಪ್ರಸವಕ್ಕೆಂದು ಬೆಂಗಳೂರಿನ ತನ್ನ ತವರುಮನೆಗೆ ಹೋಗಿದ್ದಳು.
ಡೆಲಿರಿಗೆಂದು ಆಸ್ಪತ್ರೆಗೆ ಸರಿತಾಳನ್ನು ಕರೆದುಕೊಂಡು ಹೋದಾಗ, ಇವಳನ್ನು ಪರೀಕ್ಷಿಸಿದ ವೈದ್ಯರು ಕೊನೆಯದಾಗಿ ಇವಳ ತಂದೆ ತಾಯಿಗೆ `ಈ ಬಾರಿ ಅದೇನೊ ಹುಡುಗಿ ಬದುಕಿ ಉಳಿದಿದ್ದಾಳೆ. ಇನ್ನು ಮುಂದೆ ಇವಳು ಆರೋಗ್ಯವಾಗಿರಬೇಕೆಂದರೆ, ದಯವಿಟ್ಟು ಅವಳ ಸಮಸ್ಯೆಗಳನ್ನು ಪರಿಹರಿಸಿ ನೆಮ್ಮದಿಯಾಗಿರುವಂತೆ ನೋಡಿಕೊಳ್ಳಿ. `ಇಲ್ಲವಾದರೆ ಅವಳು ಬದುಕಿ ಉಳಿಯುವುದೇ ಕಷ್ಟ. ಇಷ್ಟೊಂದು ಅಧಿಕ ರಕ್ತದೊತ್ತಡ, ಅವಳನ್ನು ಯಾವ ಕ್ಷಣದಲ್ಲಾದರೂ ಬಲಿ ತೆಗೆದುಕೊಳ್ಳಬಹುದು,’ ಎಂದು ಎಚ್ಚರಿಕೆ ನೀಡಿದಾಗ, ಅವಳ ತಂದೆ ತಾಯಿ ಭಯಗೊಂಡು ಕಂಪಿಸುತ್ತಿದ್ದರು.
ಸರಿತಾ ಗಂಡನ ಮನೆಯಿಂದ ಬೆಂಗಳೂರಿಗೆ ಬಂದಾಗ ತುಂಬಾ ಬಸವಳಿದಂತೆ ಕಾಣುತ್ತಿದ್ದಳು. ನಿಸ್ತೇಜ ಕಣ್ಣುಗಳು, ಇಳಿದುಹೋದ ದೇಹ, ಆಕರ್ಷಣೆಯನ್ನೇ ಕಳೆದುಕೊಂಡ ವ್ಯಕ್ತಿತ್ವ, ವಿಜಯ್‌ನ ಫೋನ್ ಕಾಲ್ ಬಂದರೆ ಸಾಕು ಥರಥರನೇ ಕಂಪಿಸುತ್ತಿದ್ದಳು. ಅದ್ಯಾವ ಮಟ್ಟದ ಭಯ ಹಾಕಿದ್ದನೋ ಆ ಪಾಪಿ!
ವೈದ್ಯರು ಹೇಳುವಂತೆ ಅವಳು ಕಡಿಮೆಯೆಂದರೂ ಆರು ತಿಂಗಳು ವಿಶ್ರಾಂತಿ ಪಡೆದುಕೊಳ್ಳಬೇಕು. ಅಂದರೆ ಗಂಡನ ಮನೆಯಲ್ಲಂತೂ ವಿಶ್ರಾಂತಿ ಸಿಗಲಾರದು. ಅದಕ್ಕೆ ತವರು ಮನೆಯಲ್ಲಿಯೇ ಇರಬೇಕಾಗುತ್ತದೆ. ಆದರೆ ವಿಜಯ್ ಬಿಡಬೇಕಲ್ಲ? ಅವನು ಮೊದಲೇ ಸಿಡುಕು ಸ್ವಭಾವದವನು. ಅಲ್ಲದೇ ಅವನು ಮಾನಸಿಕ ಸ್ಥಿಮಿತ ಕಳೆದುಕೊಂಡನು, ಅವನೊಬ್ಬ ಖಿನ್ನತೆಯ ರೋಗಿ.
ಆರು ತಿಂಗಳ ವಿಶ್ರಾಂತಿ ಎಂದರೆ, ವಿಜಯ್‌ನಿಂದ ದೂರವಿದ್ದಂತೆಯೇ ಸರಿ. ಇಷ್ಟೊಂದು ದೀರ್ಘಕಾಲ ತವರಿನಲ್ಲೇ ಉಳಿದರೆ ಸಮಾಜದ ಕುಹಕ ಮಾತುಗಳನ್ನು ಕೇಳಬೇಕಾಗಬಹುದು. ಮಗು ತನುಜಾ ಮತ್ತು ಸರಿತಾ ಶಾಶ್ವತವಾಗಿ ಒಬ್ಬಂಟಿಯಾದರೂ ಆಗಬಹುದು ಎಂಬೆಲ್ಲ ಆಲೋಚನೆಗಳು ಸರಿತಾಳ ತಂದೆಯನ್ನು ಇನ್ನಿಲ್ಲದಂತೆ ಒತ್ತಡಕ್ಕೆ ಒಳಗಾಗುವಂತೆ ಮಾಡತೊಡಗಿದವು.
ಸರಿತಾಳ ತಂದೆ ತಾಯಿ ಅವಳ ಸಂಕಷ್ಟಗಳನ್ನು ಕಂಡು ಮಮ್ಮಲ ಮರುಗತೊಡಗಿದ್ದರು. ಅವಳ ಎಲ್ಲ ಕಷ್ಟ ಕಾರ್ಪಣ್ಯಗಳಿಗೂ ತಾವೇ ಹೊಣೆಗಾರರು ಎಂದುಕೊಳ್ಳತೊಡಗಿದರು. ಆದರೆ ದಿಢೀರನೆ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ಈ ವಿಷಯದ ಬಗ್ಗೆ ಪದೇ ಪದೇ ನನಗೂ ಮತ್ತು ಸರಿತಾಗೂ ವಾಗ್ವಾದ ನಡೆಯುತ್ತಿತ್ತು.
ಇವಳ ತಂದೆ, ತಮ್ಮ ಮನೆತನ ಮತ್ತು ವ್ಯವಹಾರಗಳಲ್ಲಿ ತುಂಬಾ ಹೆಸರು ಮಾಡಿದರು. ಈಗ ಸರಿತಾಳನ್ನು ಮುಲಾಜಿಲ್ಲದೇ ಕರೆತಂದು ಎಷ್ಟು ದಿನ ಬೇಕಾದರೂ ತಮ್ಮ ಮನೆಯಲ್ಲಿಯೇ ಇಟ್ಟುಕೊಳ್ಳಬಹುದು. ಆದರೆ ಸಮಾಜದಲ್ಲಿ ಗಂಡನನ್ನು ಬಿಟ್ಟುಬಂದಳು ಎಂಬ ಹಣೆಪಟ್ಟಿ ಏನಾದರೂ ಅಂಟಿಕೊಂಡರೆ? ಎಂಬ ಆತಂಕವೊಂದಿತ್ತು. ಇನ್ನು ಇಂತಹ ಸುಸಂಸ್ಕೃತ, ಸಾಂಪ್ರದಾಯಿಕ ಮನೆತನದ ಹುಡುಗಿ ಗಂಡನನ್ನು ತೊರೆದು ಹೋಗಬಹುದೆ ಎಂಬ ಜಿಜ್ಞಾಸೆಯಲ್ಲಿಯೇ ಸರಿತಾ ಸಹಿಸಿಕೊಂಡು ಜೀವಿಸುತ್ತಿದ್ದಳು. ಪ್ರಾರಂಭದಲ್ಲಿ ಸರಿತಾ ವಿಜಯ್‌ನನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿ ವಿಫಲಳಾಗಿದ್ದಳು. ಇನ್ನು ಒಂದು ಮಗು ಆದ ಮೇಲಾದರೂ ಸರಿಹೋಗಬಹುದೆಂದು ಭಾವಿಸಿದ್ದಳು. ಅದೂ ಹುಸಿಯಾಯಿತು. ಮಗುವಿನ ಬಗ್ಗೆ ಅವನಲ್ಲಿ ಕಿಂಚಿತ್ತೂ ಭಾವನೆಗಳು ಮೂಡಿರಲಿಲ್ಲ.
ಈ ಹಿಂದೆ ಎಷ್ಟೋ ಸಲ ಬೆಂಗಳೂರಿಗೆ ಹೋದಾಗ, ಲಲಿತಾಳನ್ನು ಭೇಟಿ ಮಾಡಲು ಹಲವಾರು ಸಲ ಅವರ ಮನೆಗೆ ಹೋಗಿದ್ದೇನೆ. ಹೋದಾಗೆಲ್ಲ ಆಂಟಿ ಅಂಕಲ್ ಜೊತೆ ಔಪಚಾರಿಕವಾಗಿ ಮಾತನಾಡಿ, ಲಲಿತಾಳೊಂದಿಗೇ ಹೆಚ್ಚು ಕಾಲ ಕಳೆಯುತ್ತಿದ್ದೆ. ಇತ್ತೀಚೆಗೆ ಒಂದು ಬಾರಿ ಹೋಗಿದ್ದಾಗ ಸರಿತಾಳ ತಂದೆಯೇ ನನ್ನ ಜೊತೆ ಮಾತನಾಡಬೇಕೆಂದು ಫೋನ್ ಮಾಡಿ ಕರೆಸಿಕೊಂಡರು.
ಸರಿತಾಳ ಜೀವನವನ್ನು ತುಂಬಾ ಹತ್ತಿರದಿಂದ ನೋಡಿದ ನಾನು, ಅವಳ ತಂದೆ ತಾಯಿ, ತಮ್ಮ ಅಂತಸ್ತನ್ನು ಉಳಿಸಿಕೊಳ್ಳುವುದಕ್ಕೋಸ್ಕರ, ಸರಿತಾಳ ಜೀವನವನ್ನು ನೀರಿನಲ್ಲಿ ಹೋಮ ಮಾಡಿದರಲ್ಲ, ಎಂಬ ಜಿಗುಪ್ಸೆ ಉಂಟಾಗಿತ್ತು.
ಅವರ ಫೋನ್ ಬಂದ ನಂತರ ಲಲಿತಾಳನ್ನು ನೋಡಿದಂತಾಗುತ್ತದೆಯೆಂದು ಅವರ ಮನೆ ತಲುಪಿದೆ, “ಸುನೀತಾ, ನೀನು ಸರಿತಾಳ ಹತ್ತಿರದಲ್ಲೇ ಇರುವವಳು, ಅವಳು ನಿನ್ನೊಂದಿಗೆ ನಿಕಟ ಸಂಕರ್ಪ ಹೊಂದಿದ್ದಾಳೆ. ಈ ವಿಜಯ್ ಏಕೆ ಹೀಗಾಡುತ್ತಿದ್ದಾನೆ? ವಿಜಯ್ ಮತ್ತು ಸರಿತಾರ ಮಧ್ಯೆ ಏಕೆ ಹೊಂದಾಣಿಕೆಯಾಗುತ್ತಿಲ್ಲ? ನಿನಗೇನನಿಸುತ್ತೆ,” ಎಂದು ಕೇಳಿದರು.
“ಅಂಕಲ್, ಈ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟ. ಏಕೆಂದರೆ ವಿಜಯ್ ಏಕೆ ಹೀಗೆ ಆಡುತ್ತಿದ್ದಾನೆಂದು ಅವನಿಗೇ ಗೊತ್ತಿರಲಿಕ್ಕಿಲ್ಲ. ಅವನ ತಂದೆ ತಾಯಿಗಂತೂ ತಿಳಿದಿರೋಕೆ ಸಾಧ್ಯವೇ ಇಲ್ಲ. ಇವನ್ನು ಸರಿತಾಳಿಗೂ, ವಿಜಯ್‌ಗೂ ಹೊಂದಾಣಿಕೆ ವಿಷಯದಲ್ಲಿ ಕೆಲವು ಮಾನಸಿಕ ಕಾರಣಗಳಿವೆ. ಅದನ್ನೆಲ್ಲ ಹೇಳಲು ನನಗೇಕೋ ಸಂಕೋಚವೆನಿಸುತ್ತಿದೆ…..” ಎಂದೆ.
“ಪರಾಗಿಲ್ಲಮ್ಮ, ಅದೇನೂಂತ ಹೇಳಿಬಿಡು.”
“ಅಂಕಲ್, ಮದುವೆಯಾಗಿ ಮೊದಲ ಬಾರಿ ಮೈಸೂರಿಗೆ ಹೋಗಿ ನೆಲೆಸಿದ ಸರಿತಾ, ತನ್ನ ಮತ್ತು ವಿಜಯ್ ಮಧ್ಯೆ ಇರುವ ಸ್ವಭಾವಗಳ ವ್ಯತ್ಯಾಸ ಕಂಡು ಗಾಬರಿಯಾಗುವುದರಲ್ಲಿ ಆಶ್ಚರ್ಯವಿಲ್ಲ. ಇದೊಂಥರ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ.
“ಇದನ್ನು ಗಮನಿಸಿದ ನೆರೆಹೊರೆಯರು ವಿಜಯ್‌ಗೆ ಗೇಲಿ ಮಾಡಿರಬಹುದು ಅಥವಾ ಹೀನಾಯವಾಗಿ ಮಾತನಾಡಿರಬಹುದು. ಇದರಿಂದ ಬಚಾವಾಗಲು ಅವನು ಸರಿತಾಳ ಮೇಲೆ ದಬ್ಬಾಳಿಕೆ ಮಾಡಲು ಆರಂಭಿಸಿದ್ದಾನೆ.
“ಇದು ಹೀಗೆಯೇ ಮುಂದುವರಿದಾಗ, ಸರಿತಾ ಅವನ ಪ್ರತಿಯೊಂದು ಆರ್ಭಟಕ್ಕೂ ಥರಗುಟ್ಟತೊಡಗಿದ್ದಾಳೆ. ಅವನೋ ತನ್ನ `ಈಗೋ’ ತೃಪ್ತಗೊಳಿಸಲು ಗಂಡ ಹೆಂಡಿರ ಬಾಂಧವ್ಯವನ್ನೂ ಮರೆತಿದ್ದಾನೆ.
“ಎರಡು ನಿಮಿಷ ಅವನೊಂದಿಗೆ ಮಾತನಾಡಿದರೆ ಸಾಕು, ಅವನಿಗೆ ಮಾನಸಿಕ ಅಸ್ವಸ್ಥತೆ ಕಂಡುಬರುತ್ತದೆ. ನನಗೆ ಅದೇ ಗೊತ್ತಾಗುತ್ತಿಲ್ಲ. ನೀವು ಇಂಥವನ ಜೊತೆ… ಕ್ಷಮಿಸಿ ನಾನು ಹೀಗೆ ಮಾತನಾಡಬಾರದಿತ್ತು,” ಎಂದೆ.
“ಇಲ್ಲಮ್ಮಾ, ನೀನು ಹೇಳಿದ್ದೂ ಸರಿಯಾಗಿಯೇ ಇದೆ. ಆ ಸಮಯದಲ್ಲಿ ನಮಗೂ ಕೂಡ ಅವನ ಸ್ವಭಾವ ಮತ್ತು ವ್ಯಕ್ತಿತ್ವ, ಸರಿತಾಳೊಂದಿಗೆ ಸರಿಹೋದೀತೇ? ಎಂಬ ಪ್ರಶ್ನೆ ತುಂಬಾ ಕಾಡಿತ್ತು. ಆದರೆ ಅವನು ಈ ರೀತಿ ವರ್ತಿಸುತ್ತಾನೆ ಎಂಬುದನ್ನು ಅರಿಯದಾದೆ.”
“ಇಲ್ಲ ಅಂಕಲ್, ಕೆಲವರ ಮುಖ ನೋಡಿದರೇನೇ ಅವರು ಎಂತಹ ಮನುಷ್ಯ ಎಂಬುದು ಗೊತ್ತಾಗುತ್ತೆ. ವಿಜಯ್ ಕೂಡ ಅಂತಹವರಲ್ಲಿ ಒಬ್ಬ. ಅದು ನಿಮಗೆ ಹೇಗೆ ಗೊತ್ತಾಗಲಿಲ್ಲವೇ? ಆದರೆ ಖಂಡಿತ ಅವನೊಬ್ಬ ಮಾನಸಿಕ ರೋಗಿ.
“ಅವನಿಗೆ ಮನಶ್ಶಾಸ್ತ್ರಜ್ಞರ ಚಿಕಿತ್ಸೆ ತುಂಬಾ ಅವಶ್ಯವಾಗಿದೆ. ಇದರಿಂದೇನಾದರೂ ಅವನು ಸರಿಹೋದರೆ ಒಳ್ಳೆಯದು. ಹ್ಞಾಂ! ಇದಕ್ಕೂ ಮೊದಲು, ವಿಜಯ್ ಆಗಲಿ, ಅವನ ತಂದೆತಾಯಿಯಾಗಲಿ ತಮ್ಮ ಕುಟುಂಬದ ನೆಮ್ಮದಿ ಹಾಳು ಮಾಡುತ್ತಿರುವ ಸಮಸ್ಯೆಯ ಮೂಲ ಯಾವುದೆಂದು ತಿಳಿದುಕೊಳ್ಳಬೇಕು.”
“ಸರಿತಾಳಿಗೆ ನಾವು ಯಾವಾಗಲೂ ಶಾಂತಿ, ಸಹನೆಯಿಂದ ಬದುಕುವುದನ್ನು ಕಲಿಸಿದ್ದೇವೆ ಹೊರತು ಪ್ರತಿಭಟಿಸಲು ಕಲಿಸಲಿಲ್ಲ. ಅದೇ ತಪ್ಪಾಯಿತು ಅನಿಸುತ್ತೆ,” ಎಂದರು ತಂದೆ.
“ಅಂಕಲ್, ಇದೇ ಈಗ ನಡೆಯುತ್ತಿರುವ ತಪ್ಪು. ನಮ್ಮ ಹಿರಿಯರು ಹೆಣ್ಣುಮಕ್ಕಳಿಗೆ ಬರೀ ಶಾಂತಿಸಹನೆಯನ್ನೇ ಬಲವಂತಾಗಿಯಾದರೂ ಕಲಿಸುತ್ತಾರೆ ಮತ್ತು ಹೀಗೆ ನಿಷ್ಪಾಪಿಗಳು ಕೊನೆಯವರೆಗೂ ಪಾಪಕೂಪದಲ್ಲಿ ಸಿಲುಕಿಕೊಂಡು ನರಳಾಡುವಂತಾಗುತ್ತದೆ.
“ಇದರ ಪರಿಣಾಮವೇ ಈಗ ವಿಜಯ್ ಅಟ್ಟಹಾಸದಿಂದ ಮೆರೆಯುತ್ತಿದ್ದರೆ, ಸರಿತಾ ನರಳಾಡುತ್ತಿದ್ದಾಳೆ. ನಾನೇನಾದರೂ ಅಧಿಕಪ್ರಸಂಗಿಯಂತೆ ಮಾತನಾಡಿದ್ದರೆ ದಯವಿಟ್ಟು ಕ್ಷಮಿಸಿ ಅಂಕಲ್. ಸರಿತಾ ನನಗೂ ತಂಗಿಯಂತೆ. ಆದ್ದರಿಂದ ನನಗೂ ಅವಳೆಡೆಗೆ ಮಮಕಾರ ಮೂಡಿ ಎರಡು ಮಾತನಾಡಿದೆ ಅಷ್ಟೆ.”
“ಇಲ್ಲ ಸುನೀತಾ, ಹಾಗೇನೂ ಯೋಚನೆ ಮಾಡಬೇಡ. ನಾನೇ ನಿನ್ನ ಬಳಿ ಸಲಹೆ ಕೇಳೋಣ ಎಂದು ಬರಹೇಳಿದ್ದೆ. ಈ ಸಮಸ್ಯೆಯನ್ನು ಬಗೆಹರಿಸಲು ಏನು ಮಾಡಬಹುದು? ಈ ಕುರಿತು ನಿನ್ನ ಅಭಿಪ್ರಾಯವೇನು ಎಲ್ಲವನ್ನೂ ಮುಕ್ತವಾಗಿ ಹೇಳಮ್ಮ. ನಮ್ಮಿಂದ ನಡೆದಿರೊ ಈ ತಪ್ಪನ್ನು ಆದಷ್ಟು ಬೇಗ ಸರಿಪಡಿಸಬೇಕೆಂಬುದೇ ನನ್ನ ಕಾತುರ,” ಎಂದರು ಅಂಕಲ್.
“ಅಂಕಲ್, ಸರಿತಾಳ ಸಮಸ್ಯೆ ತುಂಬಾ ಸೂಕ್ಷ್ಮವಾದದ್ದು. ಇದಕ್ಕೆ ಹಲವಾರು ಕಾರಣಗಳಿರಬಹುದು. ನನಗೆ ತಿಳಿದಿರುವ ಉಪಾಯ ಎರಡಿವೆ. ಒಂದು, ವಿಜಯ್‌ಗೆ ಚಿಕಿತ್ಸೆ ನೀಡಬೇಕು. ಇದಂತೂ ಸದ್ಯ ನೆರವೇರಾದದ್ದು ಅನ್ಕೋತೀನಿ. ಎರಡನೆಯದು, ಸರಿತಾಳ ಭವಿಷ್ಯಕ್ಕಾಗಿಯಾದರೂ ದಿಟ್ಟ ನಿರ್ಧಾರ ಕೈಗೊಳ್ಳಲೇಬೇಕು,” ಎಂದೆ.
“ಮೊದಲನೇ ವಿಚಾರವನ್ನು ವಿಜಯ್ ಮತ್ತವನ ತಂದೆ ತಾಯಂದಿರು ಮಾತ್ರ ಕೈಗೊಳ್ಳಬಹುದು. ಎರಡನೆಯದು ನಿಮ್ಮ ಕೈಯಲ್ಲೇ ಇದೆ. ತಮ್ಮ ಮಗ ಮತ್ತು ಸೊಸೆಯ ಬದುಕು ಚೆನ್ನಾಗಿರಲೆಂದು ಬಯಸಿದ್ದರೆ, ಸರಿತಾಳ ಅತ್ತೆ ಮಾವ ಈ ಕೆಲಸ ಇಷ್ಟೊತ್ತಿಗೆಲ್ಲ ಮಾಡಿರುತ್ತಿದ್ದರು.
“ಪರೋಕ್ಷವಾಗಿ ಅವರು ಈ ಸಮಸ್ಯೆಗೆ ಪರಿಹಾರ ನೀಡುವುದರ ಬದಲಾಗಿ, ಸಮಸ್ಯೆಯನ್ನು ಇನ್ನೂ ಕಗ್ಗಂಟಾಗಿ ಮಾಡುತ್ತಿದ್ದಾರೆ. ಇನ್ನು ಎರಡನೇ ವಿಚಾರ ಕೈಗೆತ್ತಿಕೊಳ್ಳಬೇಕೆಂದರೆ ತುಂಬಾ ದೃಢ ಸಂಕಲ್ಪ ಮತ್ತು ಧೈರ್ಯವಿರಬೇಕು,” ಎಂದೆ.
“ಸುನೀತಾ, ನೀನೂ ನಮ್ಮ ಮಗಳಿದ್ದಂತೆಯೇ, ಆದ್ದರಿಂದಲೇ ನಿನ್ನೊಂದಿಗೆ ಈ ವಿಷಯ ಪ್ರಸ್ತಾಪ ಮಾಡಿದ್ದು. ದಯವಿಟ್ಟು ಅನ್ಯಥಾ ಭಾವಿಸಬೇಡ. ಹಾಂ! ನಾಳೆ ನಾಡಿದ್ದು ಮುಂಬೈನಿಂದ ನಿನ್ನ ಗೆಳತಿ ಲಲಿತಾ ಬರಲಿದ್ದಾಳೆ. ಆಗ ಖಂಡಿತ ಮನೆಗೆ ಬಂದು ಹೋಗಮ್ಮ,” ಎಂದರು.
“ಸರಿ ಅಂಕಲ್, ಅವಳು ಬಂದ ಕೂಡಲೇ ನನಗೆ ಫೋನ್ ಮಾಡಿ. ತಕ್ಷಣ ಬಂದುಬಿಡುತ್ತೇನೆ,” ಎಂದು ಅಲ್ಲಿಂದ ಹೊರಟೆ.
ಲಲಿತಾ ಬೆಂಗಳೂರಿಗೆ ಬಂದ ಕೂಡಲೇ ನನ್ನನ್ನು ನೋಡಲು ಧಾವಿಸಿ ಬಂದಿದ್ದಳು. ಮುಂಬೈನಲ್ಲಿ ಫ್ಯಾಷನ್ ಡಿಸೈನ್ ಕೋರ್ಸ್ ಮುಗಿಸಿಕೊಂಡು ಬಂದಿದ್ದಳು. ಇಲ್ಲಿ ತನ್ನ ಸ್ವಂತದ ಬೊಟಿಕ್ ಆರಂಭಿಸಿದ್ದು, ಅದು ಯಶಸ್ವಿಯಾಗಿ ನಡೆದಿದ್ದು ಅವಳ ಕಣ್ಣುಗಳಲ್ಲೇ ಪ್ರತಿಫಲಿಸುತ್ತಿತ್ತು.
“ಹಾಯ್ ಸುನೀ, ಹೇಗಿದ್ದಿಯಾ? ಬೆಂಗಳೂರಲ್ಲೇ ಸಿಕ್ಕಿದ್ದು ಒಳ್ಳೆದಾಯ್ತು. ಇಲ್ಲಾಂದ್ರೆ ನಿನ್ನನ್ನು ನೋಡಲು ಮೈಸೂರಿಗೆ ಬರಬೇಕಾಗಿತ್ತು,” ಎಂದಳು ಲಲಿತಾ.
“ಓಹೋ, ಅದೇನ್ ಕೇಳ್ತಿಯಾ ಬಿಡು. ಪಾಪ ನೀನು ನನ್ನನ್ನು ನೋಡೋಕೆ ಅಂತಾನೆ ಮೈಸೂರಿಗೆ ಬಂದು, ಬಂದು ಸುಸ್ತಾಗಿದಿಯಾ. ನಿಜ ಹೇಳೇ, ಒಂದು ಸಾರಿನಾದ್ರೂ ಬಂದಿದಿಯಾ?”
“ಇಲ್ಲ ಕಣೇ, ಈ ಸಲ ಮುಂಬೈನಿಂದ ಬಂದ ತಕ್ಷಣ ಮೈಸೂರಿಗೆ ಬರುವವಳೇ ಇದ್ದೆ. ಹೋಗ್ಲಿ ಬಿಡೆ ಸಾರಿ. ನೆಕ್ಸ್ಟ್ ಟೈಂ ಖಂಡಿತಾ ಬರ್ತೀನಿ. ಇನ್ನೇನು…. ನಮ್ ಸರಿತಾ ಹೇಗಿದ್ದಾಳೆ? ಇದೆಲ್ಲ ನಡೆದ ಮೇಲೆ ವಿಜಯ್ ಸಾಹೇಬರು ಮೆತ್ತಗಾಗಿದ್ದಾರಾ ಅಥವಾ ಇಲ್ವಾ?”
“ಲಲಿತಾ, ಮನುಷ್ಯ ಆಶಾವಾದಿಯಾಗಿರಬೇಕು ನಿಜ. ಆದರೆ ಯಾವುದಾದರೂ ಮ್ಯಾಜಿಕ್ ನಡೆಯುತ್ತಾ ಎಂದು ಎದುರು ನೋಡುವುದು ಮೂರ್ಖತನವಷ್ಟೆ. ನಾನು ಹಿಂದಿನ ಸಲ ಬಂದಾಗಲೇ ನಿಮಗೆ ಹೇಳಿದ್ದೆ, ಅಲ್ಲಿ ಬದಲಾವಣೆ ಅಲ್ಲ ಬದಲಾವಣೆಯ ಯಾವ ಕುರುಹೂ ಕಾಣಿಸುತ್ತಿಲ್ಲ. ನೀವಿನ್ನೂ ಅದ್ಯಾವ ಭ್ರಮಾಲೋಕದಲ್ಲಿರುವಿರೋ ಏನೋ?” ಎಂದೆ ಕಟುವಾಗಿ.
ಚಕಿತಳಾದ ಲಲಿತಾ ಹತಾಶಳಾದಳು. 3 ತಿಂಗಳ ಮುಂಚೆಯಷ್ಟೇ ಸರಿತಾ ನಿರ್ಜೀವ ಮಗುವೊಂದಕ್ಕೆ ಜನ್ಮ ನೀಡಿದ್ದಳು.
“ಲಲಿತಾ, ಎರಡು ದಿನಗಳ ಹಿಂದೆಯಷ್ಟೇ ನಾನು ಸರಿತಾಳೊಂದಿಗೆ ಮಾತನಾಡಿದ್ದೆ. ನಾನವಳಿಗೆ ಬೆಂಗಳೂರಿಗೆ ಬರುತ್ತಿರುವುದನ್ನು ತಿಳಿಸಿರಲಿಲ್ಲ. ತಿಳಿಸಿದ್ದರೆ ಬಹುಶಃ ಏನಾದರೂ ಹೇಳುತ್ತಿದ್ದಳೊ ಏನೋ? ಪಾಪ ಅವಳಾದರೂ ಎಲ್ಲಿ ತನ್ನ ವಿಚಾರಗಳನ್ನು ಇಲ್ಲಿಯವರೆಗೂ ಬರುವುದಕ್ಕೆ ಬಿಡುತ್ತಾಳೆ?”
“ನಿನ್ ಜೊತೆಗೆ ಏನು ಮಾತಾಡಿದಳು?” ಲಲಿತಾ ಕುತೂಹಲದಿಂದ ಕೇಳಿದರು.
“ಅಕ್ಕಾ, ಸ್ವಲ್ಪ ಪ್ರೀತಿಯಿಲ್ಲದವನ ಜೊತೆಗೆ ಜೀವನಪೂರ್ತಿ ಕಳೆಯುವುದೆಂದರೆ, ಅದೊಂದು ದೊಡ್ಡ ಶಿಕ್ಷೆಯಲ್ಲವೇ?” ಎಂದಳು.
“ನಾನೂ ಅವಳಿಗೆ ಅದನ್ನೇ ಕೇಳಿದೆ. ಮಗುವಿನ ಸಾವಿನಿಂದಾಗಿ ವಿಜಯ್ ಮನಸ್ಸಿನ ಮೇಲೆ ಏನಾದರೂ ಪರಿಣಾಮವಾಗಿದೆಯಾ? ಎಂದಾಗ, `ಏನೋ ಗೊತ್ತಿಲ್ಲ. ಅವರ ಸ್ವಭಾವ ಮತ್ತು ನಡವಳಿಕೆ ಮಾತ್ರ ಎಂದಿನಂತೆಯೇ ಇದೆ,’ ಎಂದು ಹೇಳಿದಳು.
`ಅವರು ಮನೆಯಲ್ಲಿ ಕಾಲಿಟ್ಟರೆ ಸಾಕು, ನನ್ನ ಕೈ ಕಾಲುಗಳೇ ಬಿದ್ದುಹೋದಂತಾಗುತ್ತದೆ.
“ಉಸಿರಾಟ ಏರುಪೇರಾಗಿ, ನಡುಕವುಂಟಾಗಿ ಕೈಯಲ್ಲಿ ಏನಾದರೂ ಇದ್ದರೆ ಬಿದ್ದುಹೋಗುತ್ತದೆ. ಏನು ಮಾಡಲಿ ಅಕ್ಕ, ಎಲ್ಲ ಹೆಂಗಸರು ಸಾಯಂಕಾಲವಾದರೆ ಸಾಕು, ಗಂಡ ಯಾವಾಗ ಮನೆಗೆ ಬರುತ್ತಾನೋ ಎಂದು ಕಾಯುತ್ತಿದ್ದರೆ, ನಾನು ಮಾತ್ರ ಯಾವಾಗ ಬೆಳಕು ಹರಿದು ಗಂಡ ಮನೆಯಿಂದ ಆಚೆ ಹೋಗುತ್ತಾನೋ ಎಂದು ಕಾಯಬೇಕಾಗಿದೆ. ಅವರು ಮನೆಯಲ್ಲಿ ಇರುವಷ್ಟು ಹೊತ್ತು ನಾನು ಆತಂಕದಲ್ಲೇ ಇರುತ್ತೇನೆ,’ ಎಂದು ಹೇಳಿದಳು.”
ಇದನ್ನೆಲ್ಲ ಕೇಳಿ ಲಲಿತಾಳ ಕಣ್ಣೀರು ಸುರಿಯತೊಡಗಿತು, “ತನುಜಾ ಹೇಗಿದ್ದಾಳೆ? ಈಗ ಅವಳ ಪರಿಸ್ಥಿತಿ ಹೇಗಿದೆ?” ಎಂದು ಧಾವಂತದಿಂದ ಕೇಳಿದಳು ಲಲಿತಾ.
“ಸರಿತಾಳೇ ಹೇಳಿದಂತೆ, ತನುಜಾಳಿಗೂ ಈಗ ಎಲ್ಲ ಅರ್ಥವಾಗತೊಡಗಿದೆ. ಅವಳು ಅಪ್ಪನನ್ನು ಕಂಡರೇನೇ ಕಂಪಿಸತೊಡಗುತ್ತಾಳಂತೆ. ಇತ್ತೀಚೆಗಂತೂ ತುಂಬಾ ಅಂತರ್ಮುಖಿ ಆಗುತ್ತಿದ್ದಾಳಂತೆ. ಮೊನ್ನೆ ಮೊನ್ನೆಯಷ್ಟೇ ಯಾವುದೋ ಕಾರಣಕ್ಕೆ ವಿಜಯ್ ಸರಿತಾಳ ಮೇಲೆ ಕೈ ಮಾಡಿದಾಗ, ತನುಜಾ ಅದನ್ನು ಪ್ರತಿಭಟಿಸಿದಳಂತೆ. ಅಲ್ಲದೆ, `ಅಮ್ಮಾ ಎಲ್ಲ ಗಂಡಂದಿರೂ ಹೀಗೆ ಇರುತ್ತಾರಾ?’ ಎಂದು ಕೇಳಿದಳಂತೆ. ಪಾಪ ಇಷ್ಟು ಚಿಕ್ಕ ವಯಸ್ಸಿನಲ್ಲೇ, ಆ ಮಗುವಿಗೆ ಎಂತಹ ನೋವಿನ ಆಲೋಚನೆ ಬಂದಿದೆ ನೋಡು.”
“ಸುನೀ, ಬಹಳ ವರ್ಷಗಳ ಹಿಂದೆಯೇ ನಮ್ಮ ಅಪ್ಪ ನಮ್ಮೆಲ್ಲರ ಜಾತಕಗಳನ್ನು ಪಂಡಿತರಿಗೆ ತೋರಿಸಿ ವಿಚಾರಿಸಿದ್ದರು. ಸರಿತಾಳ ಜಾತಕದ ಪ್ರಕಾರ, ಅವಳು ಯಾವುದೋ ಒಂದು ಮನೆಗೆ ಮಹಾರಾಣಿಯಾಗುತ್ತಾಳೆ ಎಂದು ಪಂಡಿತರು ಹೇಳಿದ್ದರು. ನಂತರ ವಿಜಯ್‌ನ ಜಾತಕದೊಂದಿಗೆ ತಾಳೆ ಹಾಕಿದಾಗ ಇಂತಹ ಅದ್ಭುತ ಸುಯೋಗ ಕೂಡಿ ಬರುವುದೇ ಅಪರೂಪ ಎಂದಿದ್ದರು. ಹೀಗಾಗಿಯೇ ಅಪ್ಪನಿಗೆ ವಿಜಯ್ ಸಂಪೂರ್ಣ ಇಷ್ಟವಾಗದಿದ್ದರೂ ಸರಿತಾಳನ್ನು ಅವನಿಗೆ ಕೊಟ್ಟು ಮದುವೆ ಮಾಡಿದರು.”
“ನಾನೂ ಅನ್ಕೊತೀನಿ. ಇಲ್ಲಿಯವರೆಗೂ ನನಗೂ ಈ ಸಂಬಂಧ ಬೆಳೆದಿದ್ದಾದರೂ ಹೇಗೆ? ಎನ್ನುವುದೇ ಒಂದು ಒಗಟಿನಂತೆ ಕಾಡುತ್ತಲಿತ್ತು. ಆದರೆ, ವಿಜಯ್ ಇವಳನ್ನು ಮಹಾರಾಣಿಯನ್ನಾಗಿಯೇ ಇಟ್ಟಿದ್ದಾನೆ. ಮನಃಪೂರ್ಕವಾಗಿ, ಪ್ರೀತಿಯಿಂದ ಮಾತನಾಡಿಸುವುದೇ ಇಲ್ಲ. ಅದೂ ಅಲ್ಲದೆ ಇವಳು ಮಾತನಾಡಬೇಕೆಂದರೂ ಅವನ ಅಪ್ಪಣೆ ಪಡೆದುಕೊಂಡೇ ಮಾತನಾಡಬೇಕಾಗಿದೆ.”
“ಆ ಪಂಡಿತನಿಗೆ ಹಸ್ತರೇಖೆ ಓದೋಕೂ ಬರ್ತಿರಲಿಲ್ಲ. ತಾಳೆ ಹಾಕೋಕು ಗೊತ್ತಿರಲಿಲ್ಲ, ಇನ್ನು ಜಾತಕಗಳ ಗ್ರಹಗತಿಗಳನ್ನು ನೋಡುವುದು ಹೇಗೆ ಗೊತ್ತಿರುತ್ತದೆ? ಆದರೆ ಮುಖ ಮಾತ್ರ ಚೆನ್ನಾಗಿ ಓದುತ್ತಿದ್ದ ಆ ಮನುಷ್ಯ.
“ಸರಿತಾಳ ಸೌಂದರ್ಯ ಮತ್ತು ಅಪ್ಪಾಜಿಯ ಶ್ರೀಮಂತಿಕೆ ಕಂಡು ರಾಣಿಯಾಗುತ್ತಾಳೆ, ಮಹಾರಾಣಿಯಾಗಿರುತ್ತಾಳೆ ಅಂತೆಲ್ಲ ಬೂಸಾ ಹೊಡೆದು ಒಳ್ಳೆಯ ದಕ್ಷಿಣೆ ಹೊಡೆದುಕೊಂಡು ಹೋದ,” ಎಂದಳು ಲಲಿತಾ.
“ವಿಜಯ್‌ನ ರೂಪ, ಗುಣ, ಸ್ವಭಾವ, ವ್ಯವಹಾರಗಳ ಬಗ್ಗೆ ಮೊದಲೇ ತಿಳಿದುಕೊಂಡಿದ್ದರೆ, ಇವತ್ತು ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೆ ಆ ಪಂಡಿತ ಅವನ ಎಲ್ಲ ವಿರೂಪಗಳನ್ನು ಜಾತಕವನ್ನು ತಾಳೆ ಹಾಕಿ ತನ್ನ ಲಾಭಕ್ಕೋಸ್ಕರ ಮರೆಮಾಚಿಬಿಟ್ಟ,” ಎಂದು ಇಬ್ಬರೂ ವ್ಯಥೆಪಟ್ಟರು.
ಬೆಂಗಳೂರಿನಲ್ಲಿ ಲಲಿತಾಳನ್ನು ಭೇಟಿಯಾಗಿ ಸುಮಾರು ವರ್ಷಗಳೇ ಕಳೆದುಹೋಗಿದ್ದವು. ತಿರುಗಿ ಅವಳನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಏಕೆಂದರೆ ನಾನು ಅಂದು ಮೈಸೂರಿಗೆ ವಾಪಸಾದಾಗಲೇ ಮಹೇಶ್ ಕಂಪನಿಯವರು ಲಂಡನ್‌ಗೆ ಕಳುಹಿಸುವ ಏರ್ಪಾಡು ಮಾಡಿದ್ದರು. ಹೀಗಾಗಿ ನಾವು ಅರ್ಜೆಂಟ್‌ನಲ್ಲಿ ಲಂಡನ್‌ಗೆ ಹೊರಟುಹೋದೆ. ಹೊರಡುವ ಮುಂಚೆ ಒಂದು ಸಾರಿ ಸರಿತಾಳೊಂದಿಗೆ ಪೋನ್‌ನಲ್ಲೇ ಮಾತನಾಡಿ ವಿಷಯ ತಿಳಿಸಿದ್ದೆ. ಆದರೆ ಅವಳು ತುಂಬಾ ಹತಾಶಳಾದಳು. ಈ ಊರಿನಲ್ಲಿ ಅವಳಿಗೆ ಆತ್ಮೀಯಳೆಂದರೆ ನಾನೊಬ್ಬಳೇ. ಆಗಾಗ ಅವಳು ತನ್ನ ಮನಸ್ಸಿನ ಮಾತುಗಳನ್ನು ನನ್ನಲ್ಲಿ ಹಂಚಿಕೊಂಡು ಮನಸ್ಸನ್ನು ಹಗುರಗೊಳಿಸಿಕೊಳ್ಳುತ್ತಿದ್ದಳು. ಆದರೀಗ ಅವಳು ಒಂಟಿತನ ಅನುಭವಿಸುವಂತಾಗಿತ್ತು.
ನಾವು ಲಂಡನ್‌ನಿಂದ ನೇರವಾಗಿ ಬೆಂಗಳೂರಿಗೇ ಬಂದಿದ್ದೆವು. ತಕ್ಷಣವೇ ಲಲಿತಾಳಿಗೆ ಫೋನ್ ಮಾಡಿದೆ. ಲಲಿತಾ ಮತ್ತು ಸರಿತಾ ಇಬ್ಬರೂ ಬೆಂಗಳೂರಲ್ಲೇ ಇರುವುದು ಆಗ ತಿಳಿಯಿತು. ತಮ್ಮನ ಮದುವೆಗೆಂದು ಸರಿತಾ ಬಂದಿದ್ದಳು. ಅಂದರೆ ಅವರ ತಮ್ಮ ವಿನಯ್ ಬೆಳೆದುಬಿಟ್ಟಿದ್ದಾನೆ. ಅವನ ಮದುವೆ ಕೂಡ ನಡೀತಾ ಇದೆ. ನನಗೆ ತುಂಬಾ ಆಶ್ಚರ್ಯವಾಯಿತು.
ಮಧ್ಯಾಹ್ನದ ಹೊತ್ತಿಗೆ ಲಲಿತಾ ಮತ್ತು ಸರಿತಾ ಇಬ್ಬರೂ ನನ್ನನ್ನು ಕರೆದೊಯ್ಯಲು ಹಾಜರಾಗಿಬಿಟ್ಟರು. ಆಗ ಸರಿತಾಳನ್ನು ನೋಡಿ ನಾನು ಅವಾಕ್ಕಾಗಿಬಿಟ್ಟೆ! ತುಂಬಾ ಬದಲಾಗಿದ್ದಳು. ಅವಳ ಧ್ವನಿಯಲ್ಲಿನ ಆತ್ಮವಿಶ್ವಾಸ ಅವಳ ಸಹಜ ಸೌಂದರ್ಯವನ್ನು ಇಮ್ಮಡಿಗೊಳಿಸಿದಂತಿತ್ತು. ಆದರೂ ಕೂಡ ಅವಳ ಕಣ್ಣಂಚಿನಲ್ಲಿದ್ದ ಶೂನ್ಯ ಭಾವವನ್ನು ನಾನು ಗುರುತಿಸಿಬಿಟ್ಟೆ. ಅದನ್ನು ಬಿಟ್ಟರೆ ಸಂಪೂರ್ಣವಾಗಿ ಅವಳ ವ್ಯಕ್ತಿತ್ವವೇ ಬದಲಾಗಿಬಿಟ್ಟಿತ್ತು. ಏನೂ ಮಾತನಾಡಲಾಗದೇ ತದೇಕಚಿತ್ತದಿಂದ ನಾನು ಅವಳನ್ನೇ ನೋಡುತ್ತಿದ್ದರೆ, ಅವಳೇ ಮುಂದಾಗಿ ಬಂದು ನನ್ನ ಕೈ ಹಿಡಿದುಕೊಂಡಳು.
“ಅಕ್ಕಾ, ಸರಿತಾಳ ಈ ಹೊಸ ರೂಪ ನೋಡಿ ಅಚ್ಚರಿಯಾಗುತ್ತಿದೆಯಾ? ನಾನು ಬರೀ ನನ್ನ ಸಂಕಷ್ಟಗಳನ್ನು ನಿಮ್ಮೆದುರು ಹೇಳಿಕೊಂಡು ಅಳುತ್ತಿದ್ದೆ. ಆದರೆ ಮುಂದೆ ಏನಾಯಿತು ಎಂದು ಕೇಳುವಿರಾ?” ಎಂದಳು.
“ಓಹ್ ಖಂಡಿತಾ ಕೇಳುತ್ತೇನೆ. ಆದರೆ ಒಂದು ಮಾತ್ರ ಸತ್ಯ. ಏನೆಂದರೆ, ನಿನ್ನನ್ನು ಹೀಗೆ ನೋಡಲು ಆಶ್ಚರ್ಯವಾಗುತ್ತಿದೆಯಾದರೂ. ನೀನು ಸಂತೋಷವಾಗಿರುವುದನ್ನು ಕಂಡು ನನಗಾಗುತ್ತಿರುವ ಸಂತೋಷ ಈ ಪ್ರಪಂಚದಲ್ಲಿ ಇನ್ನಾರಿಗೂ ಆಗಿರಲಿಕ್ಕಿಲ್ಲ. ಅಷ್ಟೊಂದು ಸಂತೋಷವಾಗುತ್ತಿದೆ ನನಗೆ,” ಎಂದೆ.
“ನಿಜ ಅಕ್ಕ. ನನಗೆ ಅರ್ಥವಾಗುತ್ತೆ. ಅಂದಿನ ಆ ದುರ್ಭರ ದಿನಗಳಲ್ಲಿ ನೀವು ನನಗೆ ಅದೆಷ್ಟು ಮಾನಸಿಕ ಸ್ಥೈರ್ಯ ಕೊಟ್ಟಿರಿ. ನಿಮ್ಮ ಸಹಕಾರವನ್ನು ನಾನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ,” ಎಂದಳು ಸರಿತಾ.
ಅಷ್ಟರಲ್ಲಿ ಮಧ್ಯೆ ಬಂದ ಲಲಿತಾ, “ನಡಿಯೇ ಸುನೀ, ಇವತ್ತು ಕುಳಿತು ಬಾಯಿ ತುಂಬಾ ಮಾತನಾಡೋಣ. ನಾಳೆಯಿಂದ ಮದುವೆ ಗಲಾಟೆ ಶುರವಾಗಿಬಿಟ್ಟರೆ, ನೆಂಟರೆಲ್ಲ ಬರುತ್ತಾರೆ. ಆಮೇಲೆ ನಮಗೆ ಅಕಾಶವೇ ಸಿಗಲಿಕ್ಕಿಲ್ಲ,” ಎಂದಳು ಖುಷಿಯಿಂದ.
ಸರಿತಾ ಹೇಳತೊಡಗಿದಳು, “ಅಕ್ಕಾ, ಒಂದು ದಿನ ವಿನಯ್ ತನ್ನ ಯಾವುದೋ ಕೆಲಸದ ಮೇಲೆ ಮೈಸೂರಿಗೆ ಬಂದಿದ್ದ. ಫೋನ್‌ಕೆಟ್ಟು ಹೋಗಿದ್ದರಿಂದ ಅವನು ಬರುವ ಮುನ್ಸೂಚನೆ ಸಿಕ್ಕಿರಲಿಲ್ಲ.
“ಆಕಸ್ಮಿಕವಾಗಿ ಮನೆಗೆ ಬಂದಿದ್ದ. ಮನೆಯ ಬಾಗಿಲೂ ಕೂಡ ತೆರೆದೇ ಇತ್ತು. ಅವನು ಒಳಗೆ ಕಾಲಿಟ್ಟ ತಕ್ಷಣವೇ ಅವನ ಮುಖದ ಮೇಲೆ ತನುಜಾಳ ಫ್ರಾಕ್ ಬಿತ್ತು. ಜೊತೆಗೆ ವಿಜಯ್‌ನ ವಿಕೃತ ಕೂಗಾಟ ಕೂಡ ಅವನಿಗೆ ಕೇಳಿಸಿತು.
“ಇಂತಹ ಸ್ಲೀವ್ ಲೆಸ್ ಫ್ರಾಕ್ ತಗೊಂಡು ಬಂದಿದಿಯಲ್ಲಾ? ಜ್ಞಾನ ಇದೆಯಾ ನಿನಗೆ? ತೋಳಿಲ್ಲಾ, ಅಳತೆಯೂ ಇಲ್ಲ, ಬೆನ್ನಂತೂ ತೆರೆದುಕೊಂಡೇ ಇರುವ ಫ್ರಾಕ್ ಇದು. ಇದರದ್ದೇನು ಅವಶ್ಯವಿತ್ತು? ನಿನ್ನನ್ನು ನೀನು ಏನಂದುಕೊಂಡಿದ್ದೀಯಾ? ಹಾಂ! ಮನೆಯಲ್ಲಿ ಅವಳಿಗೆ ಬಟ್ಟೆಯ ರಾಶಿಯೇ ಬಿದ್ದಿದೆ. ಮತ್ತೆ ಇಂಥದ್ದೇ ತರಬೇಕಾ?’ ಎಂದು ಪದೇ ಪದೇ ಕೂಗಿದ್ದನ್ನೇ ಕೂಗುತ್ತಿದ್ದ ವಿಜಯ್.
“ವಿಜಯ್ ಕೆಂಡಾಮಂಡಲನಾಗಿ ಕೂಗಾಡುತ್ತಿದ್ದರೆ, ಧೃತರಾಷ್ಟ್ರ ಮತ್ತು ಗಾಂಧಾರಿ ಕಂಡೂ ಕಾಣದಂತೆ ಕುರುಕ್ಷೇತ್ರ ವೀಕ್ಷಿಸಿದಂತೆ, ಅತ್ತೆ, ಮಾವ ತಮ್ಮ ರೂಮಿನಲ್ಲಿ ತೆಪ್ಪಗೆ ಕುಳಿತುಕೊಂಡಿದ್ದರು.
“ಈ ಪ್ರತಿದಿನದ ರಂಪಾಟ ಅವರಿಗೂ ಒಗ್ಗಿಹೋಗಿತ್ತು. ಆಗ ಮುಂದೆ ಬಂದ ವಿನಯ್, `ಏನಾಯಿತು ಭಾವ?’ ಎಂದು ಕೇಳಿದ್ದಷ್ಟೇ, ಇನ್ನಿಲ್ಲದ ಆವೇಶದಿಂದ, `ಹೋಗು, ಬುದ್ಧಿಯಿಲ್ಲದ ನಿನ್ನ ಅಕ್ಕನನ್ನೇ ಕೇಳು,’ ಎಂದು ಇನ್ನೂ ಜೋರಾಗಿ ಕೂಗಿದ.
“ಹೇಳೋದಾಕ್ಕಾದರೂ ಏನಿತ್ತು ವಿಜಯ್‌ಗೆ? ಪದೇ ಪದೇ ಅದನ್ನೇ ಮಾತನಾಡಿ ರೇಜಿಗೆ ಹುಟ್ಟಿಸಿದ್ದ. ಕಡ್ಡಿಯನ್ನು ಗುಡ್ಡ ಮಾಡು ಈ ಮನುಷ್ಯನಿಗೆ, ನಾನು ನನ್ನ ಮಗಳಿಗೆ ಒಂದು ಫ್ರಾಕ್ ಕೊಂಡುಕೊಳ್ಳುವುದೂ ಸಹ್ಯವಾಗುವುದಿಲ್ಲ ಎಂದರೆ, ಇನ್ನೇನು ಹೇಳುವುದು ಇಂಥವರಿಗೆ.
“ಅಲ್ಲ, 8 ವರ್ಷದ ಮಗಳಿಗೆ ಸ್ಲೀವ್ ಲೆಸ್ ಬಟ್ಟೆ ತೊಡಿಸುವುದರಲ್ಲಿ ಅದೇನು ಅಸಭ್ಯತೆ ಇದೆ? ಇದೆಲ್ಲ ಆ ಕ್ರೂರ ಮನುಷ್ಯನಿಗೆ ಹೇಗೆ ಅರ್ಥವಾದೀತು! ತನುಜಾಳ ಕೈಯಿಂದ ಫ್ರಾಕ್ ಕಿತ್ತುಕೊಂಡು ಬಾಗಿಲಿನತ್ತ ಎಸೆದಾಗಲೇ ವಿನಯ್ ಬಂದಿದ್ದು, ಅದು ಅವನ ಮುಖದ ಮೇಲೆ ಬಿದ್ದು ಅವನನ್ನು ಅನಾಗರಿಕವಾಗಿ ಸ್ವಾಗತಿಸಿದಂತಾಗಿತ್ತು.
“ಬಿಸಿ ರಕ್ತದ ಯುವಕ ವಿನಯ್‌ಗೆ ಮೈಯೆಲ್ಲ ಉರಿದಂತಾಗಿರಬೇಕು. ತನ್ನ ಅಕ್ಕನನ್ನು ಇಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಭಾವನ ಬಗ್ಗೆ ಅಸಹ್ಯ, ಕೋಪ ಬಂದಿದ್ದು ಸಹಜ. ಆದರೆ ಆ ಸಮಯದಲ್ಲಿ ಅವನು ಹೆಚ್ಚಿಗೇನೂ ಮಾತನಾಡಲಿಲ್ಲ. ಶಾಂತವಾಗಿ ಕೆಳಗೆ ಹೋಗಿ ಅಪ್ಪನಿಗೆ ಫೋನ್ ಮಾಡಿದ.
“ಅಪ್ಪಾ, ನಾನು ಸರಿತಕ್ಕನನ್ನು ನನ್ನ ಜೊತೆಯಲ್ಲೇ ಕರೆದುಕೊಂಡು ಬರುತ್ತಿದ್ದೇನೆ.”
“ಏನಾಯಿತಪ್ಪ, ಸರಿತಾ ಹುಷಾರಾಗಿದ್ದಾಳೆ ತಾನೆ?”
“ಅದನ್ನೆಲ್ಲ ಅಲ್ಲಿ ಬಂದ ನಂತರವೇ ಮಾತನಾಡೋಣ.”
“ಅರೆ, ಏನಾಯ್ತು ವಿನಯ್, ಆಗಿದ್ದಾದರೂ ಏನು ಹೇಳೋ?”
“ಭಾವನ ಆಟಾಟೋಪಗಳನ್ನು ಏನೂಂತ ಹೇಳಲಪ್ಪ?”
“ವಿನಯ್ ನೀನು ಅಲ್ಲಿಯೇ ಇರು. ನಾನು ಈಗಲೇ ಹೊರಟುಬರುತ್ತೇನೆ. ಅಲ್ಲಿಯವರೆಗೂ ನೀನು ಯಾರಿಗೂ ಈ ವಿಷಯ ತಿಳಿಸಬೇಡ. ಅಲ್ಲಿ ತಲುಪಿದ ನಂತರ ಮಾತನಾಡೋಣ.”
“ನನ್ನ ಹತ್ತಿರ ಬಂದಾಗ ವಿಜಯ್ ಆಚೆಗೆ ಹೊರಟುಹೋಗಿದ್ದ. ಅಷ್ಟರಲ್ಲಿ ಮಾವ ರೂಮಿನಿಂದ ಹೊರಬಂದು ವಿನಯ್ ಜೊತೆ ಕುಳಿತುಕೊಂಡು ವಾತಾವರಣ ಹದಗೊಳಿಸುವ ಪ್ರಯತ್ನ ಮಾಡತೊಡಗಿದರು. ತಮ್ಮ ಮಗನ ಬಣ್ಣ ಬೀಗರ ಮುಂದೆ ಬಟಾಬಯಲಾಗಿದ್ದು ತುಂಬಾ ಅವಮಾನವಾಗಿತ್ತು.
“ಇಷ್ಟೆಲ್ಲ ಆದರೂ ಕೂಡ ಸರಿತಾ ತನ್ನ ತಮ್ಮನಿಗೆ ಇಷ್ಟವಾಗುವ ಅಡುಗೆ ಮಾಡಿ ಊಟ ಮಾಡಿಸಿದಳು. ವಿನಯ್‌ಗೆ `ಇವಳೇನಾ ತನ್ನಕ್ಕ? ಒಂದು ಕಾಲದಲ್ಲಿ ಯಾರಾದರೂ ಸ್ವಲ್ಪ ಜೋರಾಗಿ ಮಾತನಾಡಿದರೂ ಸಿಡಿದೇಳುತ್ತಿದ್ದಳು ಇವಳೇನಾ?’ ಎಂದು ಯೋಚನೆ ಮಾಡತೊಡಗಿದ.
“ಅಪ್ಪಾ ಸಾಯಂಕಾಲದ ಹೊತ್ತಿಗೆ ಬಂದು ಯಾವುದೋ ಹೋಟೆಲ್‌ನಲ್ಲಿ ಉಳಿದುಕೊಂಡು ವಿನಯ್‌ಗೆ ಫೋನ್ ಮಾಡಿ ಕರೆಸಿಕೊಂಡರು.
“ಅಪ್ಪನನ್ನು ಭೇಟಿ ಮಾಡಿದ ವಿನಯ್ ಎಲ್ಲವನ್ನೂ ವಿವರವಾಗಿ ಹೇಳಿದ, `ಅಪ್ಪಾ, ನೋಡುವುದಕ್ಕೆ ಇದು ತುಂಬಾ ಸಾಮಾನ್ಯ ವಿಷಯವಾದರೆ, ಆ ಸಮಯದಲ್ಲಿ ಭಾವನ ನಡವಳಿಕೆ ನೋಡಿದ್ರೆ, ಇಷ್ಟು ವರ್ಷಗಳವರೆಗೆ ಅಕ್ಕ ಅದ್ಹೇಗೆ ಅಂತಹ ಮನುಷ್ಯನನ್ನು ಸಹಿಸಿಕೊಂಡಿದ್ದಾಳೋ? ಎಂದು ಭಯವಾಯಿತು,’ ಎಂದ ವಿನಯ್. ಇದನ್ನೆಲ್ಲ ಶಾಂತಚಿತ್ತರಾಗಿ ಕೇಳಿಸಿಕೊಂಡ ಅವರ ತಂದೆ ಹಲ್ಲು ಕಚ್ಚಿ ಸಹಿಸಿಕೊಂಡರಾದರೂ ತುಂಬಾ ಗಂಭೀರವಾದರು.
“ಮರುದಿನವೇ ವಿನಯ್ ತನ್ನ ಅಕ್ಕ ಸರಿತಾಳನ್ನು ಆಚೆ ಸುತ್ತಾಡಲು ಕರೆದೊಯ್ಯುವೆನೆಂದು ನೆಪ ಹೇಳಿ, ಅವಳನ್ನು ತಂದೆಯ ಬಳಿ ಕರೆತಂದ. ಅಪ್ಪನನ್ನು ನೋಡಿ ಸರಿತಾ ಅಚ್ಚರಿಗೊಂಡಳು.
“ಅವರ ಬಾಡಿದ ಮುಖ ನೋಡಿ ದುಃಖಿತಳಾದಳು. ಓಹ್ ಅಂದು ಬಾಗಿಲು ಮುಚಿದ್ದಿದ್ದರೆ ಇಷ್ಟೆಲ್ಲಾ ನಡೆಯುತ್ತಲೇ ಇರಲಿಲ್ಲ. ಅಲ್ಲದೇ ಯಾರಿಗೂ ಗೊತ್ತಾಗುತ್ತಿರಲಿಲ್ಲ ಎಂದುಕೊಂಡಳು.
“ವಿನಯ್ ಒತ್ತಾಯದ ಮೇಲೆ ಅವರು ಬೀಗರು ಮತ್ತು ಅಳಿಯನನ್ನು ಕಂಡು ಮಾತನಾಡಿಸಲು ಹೊರಟರು. ನೇರವಾಗಿ ಅಪ್ಪ, ತಮ್ಮ ಇಬ್ಬರೂ ಬೀಗರ ಆಫೀಸಿಗೆ ಯಾವುದೇ ಮುನ್ಸೂಚನೆ ಇಲ್ಲದೆ ಬಂದದ್ದು ನೋಡಿ ವಿಜಯ್ ಮತ್ತವರ ತಂದೆ ಕಕ್ಕಾಬಿಕ್ಕಿಯಾದರು.
“ಅವರೊಂದಿಗೆ ಮಾತಿಗೆ ಮುಂದಾದ ಅಪ್ಪ, ಗಂಭೀರತೆಯಿಂದ ಅಷ್ಟೇ ದೃಢವಾದ ಧ್ವನಿಯಲ್ಲಿ, `ಸರಿತಾಳನ್ನು ಇಲ್ಲಿಯೇ ಯಾವುದಾದರೊಂದು ಕೆಲಸಕ್ಕೆ ಸೇರಿಸೋಣ, ಇಲ್ಲವಾದರೆ ನನ್ನ ಜೊತೆಗೆ ಬೆಂಗಳೂರಿಗೆ ಕರೆದೊಯ್ದು ಅಲ್ಲಿ ಯಾವುದಾದರೂ ಆಫೀಸಿನ ಜವಾಬ್ದಾರಿ ನೀಡುತ್ತೇನೆ. ಇಲ್ಲಿ ಅವಳು ಇನ್ನಿಲ್ಲದ ಒತ್ತಡಗಳಲ್ಲಿ ಬಿದ್ದು ಇನ್ನಷ್ಟು ಕಾಯಿಲೆಗಳು ಅವಳನ್ನು ಕಾಡುವುದು ಬೇಡ,’ ಎಂದರು.
“ವಿಜಯ್ ಬಗ್ಗೆಯಾಗಲಿ, ಬೀಗರ ಬಗ್ಗೆಯಾಗಲಿ ಏನೂ ದೋಷಾರೋಪಣೆ ಮಾಡಲಿಲ್ಲ. ಅವರು ಆಡಿದ ಮಾತುಗಳೇ ಅಷ್ಟು ನಿಖರವಾಗಿದ್ದವು. ಹೀಗಾಗಿ ತಂದೆ ಮಗ ಇಬ್ಬರಿಗೂ ಈಗ ಯಾವುದಾದರೊಂದು ಮಾರ್ಗ ಆಯ್ದುಕೊಳ್ಳದೆ ವಿಧಿ ಇರಲಿಲ್ಲ.
“ಆಗ ಸರಿತಾ ತನ್ನ ಡಿಗ್ರಿ ನಂತರ ಮಾಡಿದ್ದ ಮಾಂಟೆಸ್ಸರಿ ಟ್ರೇನಿಂಗ್ ಕೋರ್ಸ್ ಪ್ರಯೋಜನವಾಯಿತು. ಅಪ್ಪ ವಿನಯ್ ಇಬ್ಬರೇ ಓಡಾಡಿ ಜಾಗ ತೆಗೆದುಕೊಳ್ಳುವುದರಿಂದ ವ್ಯವಸ್ಥಿತವಾಗಿ ನೊಂದಣಿ ಪ್ರಕ್ರಿಯೆಗಳನ್ನು ಪೂರೈಸಿ ಫರ್ನೀಚರ್ ಕೆಲಸ, ಉಳಿದ ಎಲ್ಲ ಸಣ್ಣ ಪುಟ್ಟ ಕೆಲಸಗಳನ್ನೂ ಮುಗಿಸಿ ಸರಿತಾಳಿಗೆ ಒಂದು ಪುಟ್ಟ ಶಾಲೆಯನ್ನು ಸಿದ್ಧಪಡಿಸಿದರು.
“ಬಹುಶಃ ಈ ಎಲ್ಲ ಕೆಲಸ ಕಾರ್ಯಗಳನ್ನು ಪೂರ್ತಿಗೊಳಿಸದೆ ಬೆಂಗಳೂರಿಗೆ ಮರಳಬಾರದೆಂದು ತೀರ್ಮಾನಿಸಿದ್ದಂತೆ ಎಲ್ಲವನ್ನೂ ಮಾಡಿ ಮುಗಿಸಿದರು.
“ಅಕ್ಕಾ, ಇನ್ನೊಂದು ವಿಷಯ ಅಂದರೆ ಶಾಲೆ ನಿರ್ಮಾಣದ ಖರ್ಚನ್ನೆಲ್ಲ ಮಾವನವರೇ ನೋಡಿಕೊಂಡರು. ಈಗ ನನ್ನ ಶಾಲೆಯಲ್ಲಿ 150 ಮಕ್ಕಳಿದ್ದಾರೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ನಾನು ಶಾಲೆಯಲ್ಲೇ ಇರುತ್ತೇನೆ.
“ಮನೆಯ ಎಲ್ಲ ಜವಾಬ್ದಾರಿಗಳ ಜೊತೆಗೇ ಶಾಲೆಯನ್ನೂ ಸುಲಭವಾಗಿ ನಡೆಸುತ್ತಿದ್ದೇನೆ. ಶಾಲೆಯಲ್ಲಿ ಮುದ್ದಾದ ಮಕ್ಕಳೊಂದಿಗೆ ಪಾಠ ಮಾಡುತ್ತಾ, ಅವರ ತೊದಲು ನುಡಿಗಳನ್ನು ಎಂಜಾಯ್ ಮಾಡುತ್ತಾ ನೆಮ್ಮದಿಯಾಗಿದ್ದೇನೆ.
“ವಿಜಯ್ ಕೂಡ ಮೊದಲಿನಂತೆ ಕೂಗಾಡುವುದಿಲ್ಲ. ನನ್ನ ಯಾವ ಕೆಲಸ ಕಾರ್ಯಗಳಲ್ಲೂ ಮೂಗು ತೂರಿಸುವುದಿಲ್ಲ. ನಮ್ಮಗಳ ಮಧ್ಯೆ ಅದ್ಯಾವುದೋ ಅಲಿಖಿತ ಒಪ್ಪಂದವಾದಂತಾಗಿದೆ. ಒಟ್ಟಾರೆ ನನಗೊಂದು ನೆಲೆ ಸಿಕ್ಕಿದೆ,” ಎಂದಳು.
ಪರಸ್ಪರರಲ್ಲಿ ಇನ್ನೂ ಗಾಢ ಪ್ರೇಮ ಬೆಳೆದಿರಲಿಲ್ಲವಾದರೂ, ಸರಿತಾ ಮತ್ತು ವಿಜಯ್ ತಂತಮ್ಮ ಕೆಲಸಗಳಲ್ಲಿ ಬಿಡುವಿಲ್ಲದಂತೆ ತೊಡಗಿಕೊಂಡಿದ್ದರಿಂದ ಸರಿತಾ ತುಂಬಾ ಸಂತೃಪ್ತಳಾಗಿದ್ದಳು. ಮೊದಲೇ ಏನಾದರೂ ಅವಸರಪಟ್ಟು ವಿಚ್ಛೇದನದ ಕ್ರಮಕ್ಕೆ ಕೈಹಾಕಿದ್ದರೆ ಅದು ಇದಕ್ಕಿಂತಲೂ ಕೆಟ್ಟದಾಗಿ ಪರಿಣಾಮ ಬೀರಬಹುದಿತ್ತು. ಒಟ್ಟಾರೆ ನಡೆದದ್ದು ಎಲ್ಲ ಒಳ್ಳೆಯದಕ್ಕಾಗಿಯೇ ನಡೆಯಿತು. ಯಾರ ಸಂಸಾರದಲ್ಲಿ ತಾಪತ್ರಯ ಇರುವುದಿಲ್ಲ, ಇದೆಲ್ಲ ಇದ್ದದ್ದೆ. ಆದರೆ ಅದನ್ನು ಜಾಣತನದಿಂದ ನಿಭಾಯಿಸುವುದು ಮುಖ್ಯ. ಮನಸ್ಸಿನ ಮೇಲಾದ ಗಾಯಗಳನ್ನು ಪದೇ ಪದೇ ಕೆದಕುವುದರಿಂದ ನೋವು ನಿರಂತರವಾಗುತ್ತದೆಯೇ ಹೊರತು ಗುಣವಾಗುವುದು ಅಸಾಧ್ಯ. ಆದ್ದರಿಂದ ಜೀವನದಲ್ಲಿ ಗತಿಸಿದ ಕಹಿ ಘಟನೆಗಳನ್ನು ಮೆಲುಕು ಹಾಕುವ ಬದಲು, ಭವಿಷ್ಯದ ಬಗ್ಗೆ ಯೋಚಿಸಿ ಮುನ್ನಡೆಯುವುದೇ ಉತ್ತಮ ಎಂದು ಅರಿತುಕೊಂಡ ಸರಿತಾ, ಗಾಳಿಗೊಡ್ಡಿದ ದೀಪದಂತಾಗಿದ್ದ ತನ್ನ ಬದುಕಿನ ಸುತ್ತ ತನ್ನೆರಡೂ ಕೈಗಳನ್ನು ಒಡ್ಡಿ ದೀಪ ಆರದಂತೆ ನೋಡಿಕೊಂಡಳು.