``ಈ ಮಗುವಿಗಾಗಿ ನನ್ನ ಮನಸ್ಸು ಹಾತೊರೆಯುತ್ತಿಲ್ಲ,'' ಎಂದಿದ್ದಳು ಅವಳು. ಆದರೆ ಈ ಮಾತು ಆರಂಭದ ದಿನಗಳದ್ದಾಗಿತ್ತು. ಅನಂತರ ಕ್ರಮೇಣ ಆ ಮೂಕವೇದನೆ, ವಿಪರೀತ ತಲ್ಲಣ ಮತ್ತು ಅನಿಯಂತ್ರಿತ ರಕ್ತದೊತ್ತಡದಂತಹ ಕಾಯಿಲೆಯ ಮಧ್ಯೆಯೂ ತನ್ನ ಒಡಲಲ್ಲಿ ಅರಳುತ್ತಿರುವ ಕಂದನನ್ನು ಪ್ರೀತಿಸಲು ಪ್ರಾರಂಭಿಸಿರಬಹುದು. ಈ ಮಗು ಹುಟ್ಟಿದ ಮೇಲಾದರೂ ನನ್ನ ಕಷ್ಟ ಕೋಟಿಗಳೆಲ್ಲ ದೂರಾಗಬಹುದು ಎಂಬ ನಿರೀಕ್ಷೆಯನ್ನಾದರೂ ಹೊಂದಿರಬಹುದು. ಪ್ರಸವದ ಕಾರಣದಿಂದ, ತನ್ನ 8 ವರ್ಷದ ಮಗಳಿಂದ ಸುಮಾರು 2-3 ತಿಂಗಳಾದರೂ ದೂರವಿರಬೇಕಲ್ಲ ಎಂಬ ಕೊರಗೂ ಅವಳನ್ನು ಕಿತ್ತು ತಿನ್ನುತ್ತಿರಬಹುದು.
ಆದರೆ ನಡೆಯಬಾರದ ಅನಾಹುತ ನಡೆದೇಬಿಟ್ಟಿತು. ದಿನ ತುಂಬುವ ಮೊದಲೇ ಪ್ರಸವವಾಗಿತ್ತು. ಮಗು ನಿರ್ಜೀವ. ಊದಿಕೊಂಡ ಶಿರ, ತಿರುಚಿಕೊಂಡ ಕೈಕಾಲುಗಳು, ಸಂಪೂರ್ಣವಾಗಿ ಬೆಳೆಯದ ಭ್ರೂಣ. ಏಳು ತಿಂಗಳಿಂದ ಗರ್ಭದಲ್ಲಿ ಜತನವಾಗಿರಿಸಿಕೊಂಡು ಬಂದ ಅಧ್ಯಾಯ ಮುಗಿದೇ ಹೋಗಿತ್ತು.
``ಇತ್ತೀಚೆಗೆ ನಾನೂ ಕೂಡ ತುಂಬಾ ದಿಟ್ಟಳಾಗಿದ್ದೇನೆ ಅಕ್ಕಾ. ಮೊನ್ನೆ ನಮ್ಮ ಅತ್ತೆ ತನುಜಾಗೆ ಹೇಳುತ್ತಿದ್ದರು `ನೋಡಮ್ಮ, ನಿಮ್ಮ ಮಮ್ಮಿ ಜೋಳದ ತೆನೆ ತಿನ್ನುತ್ತಾಳೆಯೇ? ವಿಚಾರಿಸ್ಕೊಂಡು ಬಾ,' ಎಂದು ಹಸಿವಿನಿಂದ ಕಂಗೆಟ್ಟಿದ್ದ ನಾನು ತನುಜಾ ಬಂದು ಕೇಳಿದಾಗ, 'ಹೂಂ ಬೇಕು,' ಎಂದೆ. ಅವಳು ಹೋಗಿ ಹೇಳಿದಳು.
``ಸರಿ ಹಾಗಾದರೆ ಹೋಗಿ ತೆಗೆದುಕೊಂಡು ಬಾ ಅಂತಾ ಹೇಳು,'' ಎಂದರು. ನಾನಿಲ್ಲೇ ಒಳಗೆ ಮಲಗಿದ್ದೆ. ಹೊರಗೆ ಅಜ್ಜಿ ಮೊಮ್ಮಗಳು ಮಾತನಾಡುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಲಿತ್ತು.
ಮರಳಿ ಒಳಗೆ ಬಂದ ತನುಜಾಳಿಗೆ ಹೇಳಿದೆ, ``ನನ್ನ ಸೊಂಟದಲ್ಲಿ ತುಂಬಾ ನೋವಿದೆಯಮ್ಮ, ಎದ್ದೇಳೊದಕ್ಕೂ ಆಗುವುದಿಲ್ಲ,'' ಎಂದೆ.
ಅತ್ತೆ, ``ತರುವುದಕ್ಕೆ ಆಗೋದಿಲ್ಲ ಅಂದರೆ ತಿನ್ನೋಕಾದರೂ ಹೇಗೆ ಆಗುತ್ತೆ?'' ಎಂದು ಕುಹಕವಾಡಿದ್ದರು.
``ತನುಜಾ ಮಾತ್ರ ನನಗೂ ಅತ್ತೆಗೂ ಮಧ್ಯೆ ಮೆಸೆಂಜರ್ ಕೆಲಸವನ್ನು ಜಾರಿಯಲ್ಲಿಟ್ಟಿದ್ದಳು. ನಂತರ ಅದ್ಹೇಗೊ ಏನೋ ಜೋಳದ ತೆನೆ ಬಂದಿತು. ನಾನೂ ನಿರ್ಲಜ್ಜಳಾಗಿ ತಿಂದೆ. ನಾನು ಇಷ್ಟೊಂದು ನಿರ್ಲಜ್ಜಳಾಗಬಹುದೆಂದು ನೀನು ಯಾವತ್ತಾದರೂ ಅಂದುಕೊಂಡಿದ್ದೆಯಾ ಅಕ್ಕಾ?''
ಸುಮಾರು ಒಂದು ವಾರದವರೆಗೂ ಅವಳ ಯಾತನಾಮಯ ಬದುಕು ಕಣ್ಮುಂದೆ ಸುಳಿದಾಡುತ್ತಲಿತ್ತು. ಫೋನ್‌ನಲ್ಲಿ ಮಾತನಾಡಿದಾಗೆಲ್ಲ ಅವಳು ತನ್ನ ಮನದಲ್ಲಿ ಹುದುಗಿದ ಮೂಕವೇದನೆಯನ್ನು ಹೊರಹಾಕುತ್ತಿದ್ದಳು. ಕೆಲವು ವಿಚಾರಗಳನ್ನು ಎದುರುಬದುರು ಕುಳಿತು ಮಾತನಾಡುವಂತೆಯೂ ಇರಲಿಲ್ಲ. ಅದೂ ಅಲ್ಲದೇ, ಅವಳು ವಯಸ್ಸಿನಲ್ಲಿ ನನಗಿಂತ ಚಿಕ್ಕವಳಾಗಿದ್ದರಿಂದ ಸಂಕೋಚಪಟ್ಟಿದ್ದಿರಬಹುದು. ಆದರೆ ಫೋನ್‌ನಲ್ಲಿ ಮಾತನಾಡುವಾಗ ನಿಸ್ಸಂಕೋಚವಾಗಿ ಮಾತನಾಡುತ್ತಿದ್ದಳು.
ಸರಿತಾ, ಲಲಿತಾಳ ಸ್ವಂತ ತಂಗಿಯಾದರೆ, ಲಲಿತಾ ನನ್ನ ಅಚ್ಚುಮೆಚ್ಚಿನ ಬಾಲ್ಯ ಸ್ನೇಹಿತೆ. ಅಕ್ಕ ತಂಗಿಯರಲ್ಲಿ ಸರಿತಾಳೇ ಎಲ್ಲರಿಗಿಂತಲೂ ಚಿಕ್ಕವಳಾದರೂ, ಅವಳ ನಂತರ ಒಬ್ಬ ಗಂಡು ಮಗು ಹುಟ್ಟಿದರೂ ಕೂಡ ಸರಿತಾಳನ್ನು ಕೊನೆಯ ಹೆಣ್ಣುಮಗಳೆಂದು ಅತ್ಯಂತ ಪ್ರೀತಿಯಿಂದ ಬೆಳೆಸಿದ್ದರು.
`ರೂಪೇಶು ಲಕ್ಷ್ಮಿ ಕ್ಷಮಯಾಧರಿತ್ರಿ....' ಇತ್ಯಾದಿ ಕನ್ಯೆಯಲ್ಲಿನ ಆರು ಗುಣಧರ್ಮಗಳ ತುಲನೆ ಮಾಡಿದರೆ, ಸರಿತಾಳನ್ನು ಇದರಲ್ಲಿ ಅತ್ಯುತ್ತಮಳೆಂದು ಕರೆಯಬಹುದು. ಹುಡುಗರಲ್ಲಿ ಈ ರೀತಿ ಗುಣಗಳ ತುಲನೆ ಮಾಡುವುದಿಲ್ಲ ಬಿಡಿ, ಮಾಡಿದ್ದರೆ ವಿಜಯ್ ಅತ್ಯಂತ ಕನಿಷ್ಠನಾಗಿಬಿಡುತ್ತಿದ್ದ.
ಒಬ್ಬ ಸುಂದರ ಯುವತಿಗೆ, ಅತಿ ಸಾಮಾನ್ಯ ಪುರುಷನೊಬ್ಬ ಸಂಗಾತಿಯಾಗಿ ಬಂದಾಗಲೇ ಸಮಸ್ಯೆಗಳು ಉದ್ಭವಿಸುವುದು. ಬಹುಶಃ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ಪುರುಷನ ವೃತ್ತಿಯ ಮೇಲಿನ ಲಗಾಮು, ಮಹತ್ವಾಕಾಂಕ್ಷೆ, ಸ್ವಭಾವ, ಸಂಸ್ಕಾರ, ಶಿಕ್ಷಣ ಮುಂತಾದವುಗಳ ಬಗ್ಗೆ ಮಾತನಾಡುವುದೇ ತಪ್ಪಾದೀತು.