ಬೆಳಗ್ಗೆ 5 ಗಂಟೆಗೆ ಸರಿಯಾಗಿ ಅಲಾರಂ ಹೊಡೆಯಿತು. ಸುಧಾ ಕೈ ಚಾಚಿ ಅಲಾರಂ ನಿಲ್ಲಿಸಿದಳು. ಅವಳಿಗಿನ್ನೂ ಪೂರ್ತಿ ಎಚ್ಚರವಾಗಿರಲಿಲ್ಲ. ಆದರೂ ಏನೋ ನೆನಪಿಗೆ ಬಂದು ಅವಳ ತುಟಿಗಳ ಮೇಲೆ ಒಂದು ಮಧುರ ಮುಗುಳ್ನಗೆ ಮೂಡಿತು. ಅವಳು ಮೊಣಕೈ ಆಧಾರದಲ್ಲಿ ಕೊಂಚ ಎದ್ದು ಪಕ್ಕದಲ್ಲಿ ಮಲಗಿದ್ದ ಗಂಡ ವಿಶ್ವನ ಮುಖವನ್ನು ಪ್ರೀತಿಯಿಂದ ನೋಡ ತೊಡಗಿದಳು. ನಂತರ ಭಾವ ತೀವ್ರತೆಯಿಂದ ವಿಶ್ವನ ಹಣೆಗೆ ಮುತ್ತಿಟ್ಟು ಹಾಸಿಗೆ ಬಿಟ್ಟು ಏಳತೊಡಗಿದಳು.

ಅವಳು ಏಳುತ್ತಿದ್ದಂತೆ ಥಟ್ಟನೆ ವಿಶ್ವ ಅವಳನ್ನು ಎಳೆದು ತನ್ನ ಮೇಲೆ ಬೀಳಿಸಿಕೊಂಡ.

“ಅರೆ, ಏನು ಮಾಡ್ತಿದ್ದೀರಿ?” ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಸುಧಾ ಹೆಣಗತೊಡಗಿದಳು.

“ಏನಿಲ್ಲ. ನಿನ್ನನ್ನು ಕೊಂಚ ತೂಗುತ್ತಿದ್ದೇನೆ,” ವಿಶ್ವ ತುಂಟತನದಿಂದ ಹೇಳಿದ.

“ನಾನು ದಪ್ಪಗಿದ್ದೀನೀಂತ ಹಾಸ್ಯ ಮಾಡಬೇಡಿ. ಇವತ್ತಿನಿಂದ ವಾಕ್‌ಗೆ ಹೋಗುತ್ತಿದ್ದೇನೆ.”

“ಅದಕ್ಕೆ ಇವತ್ತು ನಿನ್ನ ಸೊಂಟದ ಅಳತೆ ತಗೋಬೇಕಾಗಿದೆ. ಏಕೆಂದರೆ ನೀನು ನಿಜವಾಗಿ ವಾಕ್‌ ಮಾಡ್ತಿಯೋ ಅಥವಾ ನಿನ್ನ ಗೆಳತಿಯರ ಜೊತೆ ಹರಟೆ ಹೊಡೀತಿರ್ತಿಯೋ ಗೊತ್ತಾಗಲ್ಲ.”

“ನನ್ನ ಮೇಲೆ ಕಣ್ಣಿಡೋಕೆ ನೀವು ಜೊತೇಲೇ ಬರಬಹುದಿತಲ್ಲಾ?”

“ಸರಿಯಾಗಿ 1 ವರ್ಷದ ಹಿಂದೆ ನೀನು ನವ ವಧುವಾಗಿ ಈ ಮನೆಗೆ ಬಂದಿದ್ದೆ. ಆಗ ನಾನು ಸಿಐಡಿ ಕೆಲಸ ಮಾಡಲಿಲ್ಲ. ಈಗ್ಯಾಕೆ ಮಾಡ್ಲಿ?”

“ಹ್ಯಾಪಿ ಮ್ಯಾರೇಜ್‌ ಆ್ಯನಿರ್ಸರಿ ಡಿಯರ್‌,” ಸುಧಾ ಪ್ರೀತಿಯಿಂದ ವಿಶ್ವನ ಕೆನ್ನೆಯನ್ನು ಚುಂಬಿಸಿದಳು.

“ಥ್ಯಾಂಕ್ಯು ಡಾರ್ಲಿಂಗ್‌. ನಮ್ಮ ವೈವಾಹಿಕ ಜೀವನದ ಸಂತಸಗಳನ್ನು ಉಳಿಸಿಕೊಳ್ಳುವ ನಮ್ಮ ನಿರ್ಧಾರವನ್ನು ಎಂದೂ ಬದಲಿಸಬಾರದು. ಒಳ್ಳೆಯ ಮನಸ್ಸಿನಿಂದ ಹೊಸದಾಗಿ ಆರಂಭಿಸಲು ದೃಢ ಸಂಕಲ್ಪ ಮಾಡೋಣ.”

“ಹೌದು,” ಉಕ್ಕಿ ಬಂದ ಕಣ್ಣೀರು ವಿಶ್ವನಿಗೆ ಕಾಣದಂತೆ ಸುಧಾ ಅವನನ್ನು ಅಪ್ಪಿಕೊಂಡಳು.

1 ಗಂಟೆಯ ನಂತರ ಅವಳು ಬೆವರಿನಿಂದ ತೊಯ್ದು ಮನೆಗೆ ಬಂದಾಗ ವಿಶ್ವ ಪ್ರೀತಿಯಿಂದ ನಿಂಬೆ ಜೂಸ್‌ ತಂದುಕೊಟ್ಟ.

ಅವನ ಈ ಪುಟ್ಟ ಸೇವೆಯಿಂದ ಸುಧಾಳ ಮುಖ ಗುಲಾಬಿಯಂತೆ ಅರಳಿತು. ನಗುತ್ತಾ ಗಂಡನಿಗೆ ಥ್ಯಾಂಕ್ಸ್ ಹೇಳಿ ಜೂಸ್‌ನ ಪ್ರತಿ ಗುಟುಕಿನ ಸ್ವಾದವನ್ನು ಅನುಭವಿಸತೊಡಗಿದಳು.

“ನೀನು ಒಂದು ದಿನದಲ್ಲೇ ಸಣ್ಣಗಾದ ಹಾಗೆ ಕಾಣ್ತೀಯ,” ವಿಶ್ವ ಅವಳಿಗೆ ಉತ್ಸಾಹ ತುಂಬಲು ಹೊಗಳಿದ.

“ನಿಮ್ಮ ಸುಳ್ಳು ಹೊಗಳಿಕೆಗೆ ಧನ್ಯವಾದಗಳು,” ಸುಧಾ ಖುಷಿಯಿಂದ ಹೇಳಿದಳು.

“ಹಾಗೇನಿಲ್ಲ.. ಆದ್ರೂ ಇದು ನೀನು ಬದಲಾಗ್ತಿರೋ ಸೂಚನೆ.”

“ಸರಿಯಾಗಿ ಹೇಳಿದ್ರಿ. ನಿಮ್ಮ ಸಂತೋಷಕ್ಕಾಗಿ ಹಾಗೂ ನನ್ನ ಆರೋಗ್ಯಕ್ಕಾಗಿ ಈ ನಿಮ್ಮ ದಾಸಿ ಸದಾ ಫಿಟ್‌ ಆಗಿರಬೇಕ್ವಾ?”

“ಹೌದು. ಈಗ ಸುತ್ತಾಡಲು ಹೋಗೋಕೆ ಎಷ್ಟು ಹೊತ್ತಿಗೆ ರೆಡಿಯಾಗ್ತೀಯಾ?”

“ಅಂದರೆ, ಇವತ್ತಿನ ವಿಶೇಷ ಪಯಣಕ್ಕೆ ಸಿದ್ಧಳಾಗಲು ನಾನು ಎಷ್ಟು ಹೊತ್ತು ತೆಗೆದುಕೊಳ್ತೀನಿ ಅಂತಾನಾ?”

“ಅದನ್ನೇ ತಿಳ್ಕೋಬೇಕೂಂತಿದ್ದೀನಿ.”

“ಮಹಾಸ್ವಾಮಿ, ನಾನು ರೆಡಿಯಾಗಲು ಬಹಳ ಹೊತ್ತು ತೆಗೆದುಕೊಳ್ತೀನೀಂತ ಇನ್ನು ಮೇಲೆ ನೀವು ದೂರೋಕಾಗಲ್ಲ. ನಾವು ಸರಿಯಾಗಿ 8 ಗಂಟೆಗೆ ಮನೆ ಬಿಡೋಣ,” ಎಂದು ಚಿಟಿಕೆ ಹೊಡೆಯುತ್ತಾ ಸುಧಾ ಎದ್ದು ಸ್ವಲ್ಪ ಹೊತ್ತು ವಿಶ್ವನ ಕೂದಲಿನೊಂದಿಗೆ ಆಟವಾಡಿ ನಂತರ ಬಚ್ಚಲು ಮನೆಗೆ ಹೋದಳು. ಇಬ್ಬರೂ ಡ್ರೆಸ್‌ ಮಾಡಿಕೊಂಡು ಮಹಡಿಯಿಂದ ಕೆಳಗಿಳಿದು ಬಂದರು. ಕೆಳಗಿನ ಮನೆಯಲ್ಲಿ ಸುಧಾಳ ಅತ್ತೆ, ಮಾವ, ಹಿರಿಯ ವಾರಗಿತ್ತಿ, ಭಾವ ಮತ್ತು ಒಬ್ಬ ನಾದಿನಿ ಇದ್ದರು. ವಾರಗಿತ್ತಿ ಜ್ಯೋತಿ ಅವರಿಬ್ಬರಿಗೂ ಮೊದಲನೇ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ಕೋರಿದರು. ಸುಧಾ ತನ್ನ ಪರ್ಸ್‌ನಿಂದ ಚಾಕಲೇಟ್‌ ತೆಗೆದು ಅವರಿಗೆ ಕೊಟ್ಟಾಗ ಅವರು ಖುಷಿಯಾದರು.

ಸುಧಾಳ ನಾದಿನಿ ವಿದ್ಯಾಳೊಂದಿಗೆ ಹಲವು ವಾರಗಳಿಂದ ಮಾತುಕತೆ ನಿಂತುಹೋಗಿತ್ತು. ಅವಳ ರೂಮಿನತ್ತ ಸುಧಾ ಹೊರಟಾಗ ಅವಳನ್ನು ನೋಡಿದ ವಿದ್ಯಾ ಮತ್ತೆ ರೂಮಿಗೆ ಹಿಂತಿರುಗಲು ತಿರುಗಿದಳು. ಸುಧಾ ಥಟ್ಟನೆ ಮುಂದೆ ನುಗ್ಗಿ ಅವಳ ದಾರಿಗೆ ಅಡ್ಡ ನಿಂತಾಗ ಈ ಅನಿರೀಕ್ಷಿತ ಘಟನೆಯಿಂದ ವಿದ್ಯಾ ಪೆಚ್ಚಾದಳು.

“ಅಕ್ಕಾ, ನಮಗೆ ವಿಶ್‌ ಮಾಡಲ್ವಾ?” ಸುಧಾ ಸಹಜವಾಗಿ ನಕ್ಕಳು. ವಿದ್ಯಾ ಮುಖ ತಿರುಗಿಸಿ ಕೋಪ ವ್ಯಕ್ತಪಡಿಸಿದಳು.

“ಹಿಂದೆ ನಮ್ಮಿಬ್ಬರ ಮಧ್ಯೆ ನಡೆದ ಜಗಳಕ್ಕೆ ಪಶ್ಚಾತ್ತಾಪಪಡ್ತೀನಿ. ಅದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳ್ತೀನಿ,” ಇದ್ದಕ್ಕಿದ್ದಂತೆ ಕಂಠ ಬಿಗಿದು ಸುಧಾಳ ಬಾಯಿಂದ ಆ ಮಾತುಗಳು ಹೊರಬಂದವು.

ಸುಧಾ ಭಾವುಕಳಾಗಿ ಕ್ಷಮೆ ಕೋರಿದ್ದು ಅವರಿಬ್ಬರ ನಡುವಿನ ವಿರೋಧವನ್ನು ಕೊಚ್ಚಿಹಾಕಿತು. ವಿದ್ಯಾಗೆ ಏನೂ ಹೇಳಲಾಗಲಿಲ್ಲ. ಸುಧಾಳನ್ನು ಅಪ್ಪಿಕೊಂಡು ಅಳತೊಡಗಿದಳು.

ಇಬ್ಬರ ಮನದಲ್ಲಿ ತುಂಬಿಕೊಂಡಿದ್ದ ಕೊಳೆ ಕೆಲವೇ ಕ್ಷಣಗಳಲ್ಲಿ ಕಣ್ಣೀರಿನೊಂದಿಗೆ ಹರಿದುಹೋಯಿತು. ತಮ್ಮನಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ಕೋರಿದ ವಿದ್ಯಾ ಮುಖ ತೊಳೆಯಲು ಒಳಹೋದಳು.

ಆಗಲೇ ವಿಶ್ವನ ಅಪ್ಪ, ಅಮ್ಮ, ತಮ್ಮ  ರೂಮಿನಿಂದ ಹೊರಬಂದು ಡ್ರಾಯಿಂಗ್‌ ರೂಮಿಗೆ ಬಂದರು. ಸುಧಾಳ ಕಣ್ಣುಗಳು ಅತ್ತು ಕೆಂಪಗಾಗಿದ್ದು ಕಂಡು ಅತ್ತೆ ತಪ್ಪು ತಿಳಿದುಕೊಂಡು ಕೋಪದಿಂದ, “ಸುಧಾ, ಇವತ್ತೂ ನನ್ನ ಮಗನ ಜೊತೆ ಜಗಳ ಆಡ್ಬೇಕಾ? ಅವನ ಬದುಕನ್ನು ನರಕ ಮಾಡಿದ್ರೆ ನಿನಗೆ ಏನು ಸಿಗುತ್ತೆ?” ಎಂದರು. ಸುಧಾಳ ಕಣ್ಣುಗಳಲ್ಲಿ ಒಂದು ಕ್ಷಣ ಕೋಪದ ಕಿಡಿಗಳು ಕಾರಿದವು. ಆದರೆ ಗಂಡ ಮುಗುಳ್ನಗುತ್ತಿದ್ದುದನ್ನು ಕಂಡು ಬಿಗಿದ ತನ್ನ ಮುಷ್ಠಿಯನ್ನು ಸಡಿಲಿಸಿದಳು.

“ಅಮ್ಮಾ, ನಾವೇನು ಜಗಳ ಆಡಿಲ್ಲ,” ಎಂದ ವಿಶ್ವ ಬಗ್ಗಿ ಅಪ್ಪ ಅಮ್ಮನಿಗೆ ನಮಸ್ಕರಿಸಿದ. ಸುಧಾ ಕೂಡ ಅತ್ತೆ ಮಾವನಿಗೆ ನಮಸ್ಕರಿಸಿದಳು. ಮಾವನ ಬಾಯಿಂದ ಯಾವುದೇ ಆಶೀರ್ವಾದ ಹೊರ ಬರಲಿಲ್ಲ. ಅತ್ತೆ ಯಾಂತ್ರಿಕವಾಗಿ ಅವಳ ತಲೆಯ ಮೇಲೆ ಕೈಯಿಟ್ಟರು. ಮರುಕ್ಷಣವೇ ಅವಳನ್ನು ದೂರತೊಡಗಿದರು.

“ನೀವಿಬ್ಬರೂ ಇವತ್ತು ಇಷ್ಟು ಬೇಗನೆ ಯಾಕೆ ಹೊರಟಿದ್ದೀರಿ? ನಾನು ಮಾಡಿದ ಸ್ವೀಟ್ಸ್ ತಿನ್ನೋರು ಯಾರು?” ಅತ್ತೆಯ ಕೋಪದ ಗುರಿ ಸುಧಾಳೇ ಆಗಿದ್ದಳು.

“ಸುಮ್ಮನೇ ಇರೆ, ಏನೇನೋ ಹೇಳಬೇಡ. ಆಮೇಲೆ ನಮ್ಮ ಸೊಸೆ ಕೋಪಿಸ್ಕೊಂಡು 3-4 ತಿಂಗಳು ತೌರುಮನೆಗೆ ಹೊರಟುಬಿಡ್ತಾಳಷ್ಟೇ, ಮಾವ ಚುಚ್ಚು ಮಾತುಗಳನ್ನಾಡಿದರು. ವಿಶ್ವ ಭುಜದ ಮೇಲೆ ಕೈ ಹಾಕಿ ಒತ್ತಿದಾಗ ಕೊಂಚ ಧೈರ್ಯ ತಾಳಿದ ಸುಧಾ ಮೆಲ್ಲಗಿನ ಸ್ವರದಲ್ಲಿ ಹೇಳಿದಳು, “ಅಪ್ಪಾ, ತೌರುಮನೆಗೆ ಹೋಗುವಂತಹ ತಪ್ಪು ಕೆಲಸವನ್ನು ಇನ್ನು ಮುಂದೆ ಮಾಡಲ್ಲ. ಇವತ್ತು ನಾನೂ ಒಂದು ನಿರ್ಧಾರ ಮಾಡಿದ್ದೀನಿ,” ವಿಶ್ವ ಹೇಳಿದ.

“ನೀನೇನು ನಿರ್ಧಾರ ಮಾಡಿದ್ದೀಯಪ್ಪಾ?” ಮಾವ ಹಣೆಯಲ್ಲಿ ನೆರಿಗೆಗಳನ್ನು ಮೂಡಿಸಿದರು.

“ಏನೆಂದರೆ ಮನೆ ಬಿಟ್ಟು ಹೋಗ್ತೀನೀಂತ ನೀವು ಹೆದರಿಸೋದನ್ನು ನಾನೂ ಸುಧಾ ಗಂಭೀರವಾಗಿ ತೆಗೆದುಕೊಂಡು ನಿಮ್ಮ ಮೂಡ್‌ ಹಾಳು ಮಾಡೋದನ್ನು ನಿಲ್ಲಿಸ್ತೇವೆ.”

“ಈ ಮನೇಲಿ ಇರಬೇಕೂಂದ್ರೆ ಕೆಲವು ಶಿಸ್ತು ಪಾಲಿಸಬೇಕಾಗುತ್ತೆ. ಇಲ್ದಿದ್ರೆ……”

“ಅಪ್ಪಾ, ಪ್ಲೀಸ್‌ ಇವತ್ತು ಲೆಕ್ಚರ್‌ ಬೇಡ. ಇವತ್ತು ನಾವು ಸುತ್ತಾಡೋ ಮೂಡ್‌ನಲ್ಲಿದ್ದೀವಿ. ಸಂಜೆ ರವಿ ಮನೇಲಿ ಪಾರ್ಟಿ ಇದೆ. ನನ್ನ ಫ್ರೆಂಡ್ಸ್ ನಮಗೆ ಔತಣ ಕೊಡ್ತಿದ್ದಾರೆ. ನಿಮ್ಮನ್ನು ಕರೆಯೋಕೆ ರವಿ ಬರ್ತಾನೆ. ಎಲ್ಲರೂ ಟೈಂಗೆ ಸರಿಯಾಗಿ ಬಂದ್ಬಿಡಿ,” ಅಪ್ಪನನ್ನು ಅಪ್ಪಿಕೊಳ್ಳುತ್ತಾ ಹೇಳಿದ. ನಂತರ ಸುಧಾಳ ಕೈಹಿಡಿದು ಬೈ ಹೇಳುತ್ತಾ ವಿಶ್ವ ಹೊರಟ.

“ಇವನೇನು ಬೆಳಗ್ಗೆಯೇ ಮೋಡಿ ಮಡ್ತಿಲ್ಲಾ ತಾನೆ?” ಅತ್ತೆ ಆಶ್ಚರ್ಯದಿಂದ ಹೇಳಿದರು.

15 ನಿಮಿಷಗಳ ನಂತರ ಬಹುಮಹಡಿ ಕಟ್ಟಡವೊಂದರ ಬಳಿ ವಿಶ್ವ ಬೈಕ್‌ ನಿಲ್ಲಿಸಿದ. ಅದರಲ್ಲಿ 3 ಕೋಣೆಗಳುಳ್ಳ ಫ್ಲ್ಯಾಟ್‌ಗಳಿದ್ದವು.

“15 ನಿಮಿಷಗಳ ನಂತರ ಭೇಟಿಯಾಗೋಣ,” ಸುಧಾಳ ಕೆನ್ನೆ ತಟ್ಟುತ್ತಾ ವಿಶ್ವ ಒಳಗೆ ಹೋದ. ಒಂದು ಫ್ಲ್ಯಾಟ್‌ ಮುಂದೆ ನಿಂತು ಬೆಲ್ ಒತ್ತಿದ. ಮಾಲತಿ ಬಾಗಿಲು ತೆರೆದಳು. ಅವಳು ವಿಶ್ವನ ಲವರ್‌. ಅವನ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದಳು. ವಿಶ್ವನಿಗಿಂತ 2 ವರ್ಷ ದೊಡ್ಡವಳಾದ, ಡೈವೋರ್ಸಿಯಾಗಿದ್ದ ಮಾಲತಿಯೊಂದಿಗೆ ವಿಶ್ವ ಸುಮಾರು 3 ವರ್ಷಗಳಿಂದ ಸ್ನೇಹ ಹೊಂದಿದ್ದ.

“ಹಾಯ್‌, ಇವತ್ತು ನಿನ್ನನ್ನು ಇಲ್ಲಿ ನೋಡಿ ಆಶ್ಚರ್ಯ ಆಗ್ತಿದೆ, ಖುಷಿಯೂ ಆಗ್ತಿದೆ,” ಎನ್ನುತ್ತಾ ಮಾಲತಿ ಅವನನ್ನು ಆಲಂಗಿಸಿದಳು.

“ಏನ್‌ ಮಾಡ್ತಾ ಇದ್ದೀಯಾ?” ವಿಶ್ವ ಅವಳ ಕೆನ್ನೆಗೆ ಮುತ್ತಿಡುತ್ತಾ ಕೇಳಿದ.

“ಮನೆ ಕ್ಲೀನಿಂಗ್‌. ಯಾಕೆ ಹೊರಗೆಲ್ಲಾದರೂ ಸುತ್ತಾಡೋಕೆ ಹೋಗಬೇಕಾ?”

“ಮೊದಲು ಕಾಫಿ ಮಾಡಿಕೊಡು. ಆಮೇಲೆ ನೋಡೋಣ,” ವಿಶ್ವ ಸೋಫಾದಲ್ಲಿ ಕೂರುತ್ತಾ ಹೇಳಿದ.

“ಸುಧಾ ಇನ್ನೂ ತೌರುಮನೆಯಲ್ಲೇ ಇದ್ದಾಳಾ?”

“ಇಲ್ಲ, ನಿನ್ನಿ ಬೆಳಗ್ಗೆ ಮನೆಗೆ ಬಂದಳು.”

“ಹೌದಾ, ಬರೋಕೆ ಹೇಗೆ ಒಪ್ಪಿಕೊಂಡಳು?”

“ಕಾಲ ಮನುಷ್ಯನನ್ನು ಬದಲಿಸುತ್ತೆ ಮಾಲತಿ.”

“ಇಲ್ಲ. ಅವಳು ಬದಾಗಲ್ಲ.  ನೀವಿಬ್ಬರೂ ಡೈವೋರ್ಸ್‌ ತಗೋಳೋದೇ ಬೆಸ್ಟ್. ನಿಮ್ಮಿಬ್ಬರ ಮನಸ್ಸು, ಸ್ವಭಾವ, ಅಭಿರುಚಿ ಯಾವುದೂ ಹೊಂದಲ್ಲ.”

“ಡೈವೋರ್ಸ್‌ ನಂತರ ನನ್ನ ಒಂಟಿತನ ಹೇಗೆ ದೂರಾಗುತ್ತೆ?”

“ನಾನಿದ್ದೀನಲ್ಲಾ,” ಮಾಲತಿ ಅವನ ಪಕ್ಕದಲ್ಲಿ ಕೂತು ತೋಳುಗಳಿಂದ ಅವನ ಕೊರಳನ್ನು ಬಳಸಿದಳು.

“ಆದರೆ ನಿನಗೆ ಮತ್ತೆ ಮದುವೆಯಾಗೋಕೆ ಇಷ್ಟವಿಲ್ಲ.”

“ನನ್ನ ಮೊದಲ ಮದುವೆಯ ಕಹಿ ಅನುಭವದಿಂದಾಗಿ ನಾನು ಹಾಗೆ ನಿರ್ಧಾರ ಮಾಡಿದೆ. ಅಂದಹಾಗೆ ನಾನು ಪ್ರೇಯಸಿಯ ಪಾತ್ರ ಚೆನ್ನಾಗಿ ನಿಭಾಯಿಸ್ತಿದ್ದೀನಿ. ಹೌದು ತಾನೆ?”

“ಕಾಫಿ ಕುಡಿದ ಮೇಲೆ ಅದಕ್ಕೆ ಉತ್ತರಿಸ್ತೀನಿ,” ವಿಶ್ವ ನಗುತ್ತಾ ಹೇಳಿದಾಗ ಮಾಲತಿ ಅವನನ್ನು ಅಣಕಿಸುತ್ತಾ ಅಡುಗೆಮನೆಗೆ ಹೋದಳು. ಸರಿಯಾಗಿ 15 ನಿಮಿಷಗಳ ಬಳಿಕ ಸುಧಾ ಆ ಫ್ಲ್ಯಾಟ್‌ಗೆ ಬಂದಳು. ಅವಳನ್ನು ಕಂಡು ಮಾಲತಿಗೆ ತಲೆ ಬಿಸಿಯಾಯಿತು.

“ವಿಶ್ವ, ಇವಳಿಗೆ ಹೇಳ್ಬಿಡು. ಹೋದ ಸಾರಿ ಹಾಗೆ ಇಲ್ಲಿ ಜಗಳ ಆಡಬೇಡಾಂತ. ಆವತ್ತು ಇವಳು ಇಲ್ಲಿ ಬಂದು ಕೂಗಾಡಿದ ನಂತರ ನಮ್ಮ ಅಕ್ಕಪಕ್ಕದವರ ಎದುರಿಗೆ ನಾನು ತಲೆ ಎತ್ತಿಕೊಂಡು ನಡೋಕಾಗ್ತಿಲ್ಲ,” ಮಾಲತಿ ಕೋಪದಿಂದ ಹೇಳಿದಳು.

“ನಾನು ಜಗಳ ಆಡೋಕೆ ಬಂದಿಲ್ಲ. ಆದರೆ ನಾನು ಆವತ್ತು ಕೇಳಿದ ಪ್ರಶ್ನೇನ ಇವತ್ತೂ ಕೇಳ್ತೀನಿ. ನೀನು ನನ್ನ ಗಂಡನನ್ನು ನಿನ್ನ ಹಿಡಿತದಿಂದ ಯಾಕೆ ಸ್ವತಂತ್ರಗೊಳಿಸ್ತಿಲ್ಲ?” ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳದೆ ಸುಧಾ ಗಂಭೀರವಾಗಿ ಕೇಳಿದಳು.

“ಅದಕ್ಕೆ ಆವತ್ತೇ ವಿಶ್ವ ನಿನಗೆ ಉತ್ತರ ಕೊಟ್ಟಿದ್ದ. ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್. ನಿಮ್ಮಿಬ್ಬರ ಸಂಬಂಧ ಹಾಳಾಗೋಕೆ ನಾನಲ್ಲ, ನೀನೇ ಜವಾಬ್ದಾರಳು.”

ವಿಶ್ವ ಮಧ್ಯೆ ಪ್ರವೇಶಿಸಿ, “ಮಾಲತಿ, ಸುಧಾಳಿಂದ ಸತ್ಯಾನ ಮುಚ್ಚಿಡಬೇಡ. ಕಳೆದ 3 ವರ್ಷಗಳಿಂದ ನಮ್ಮಿಬ್ಬರ ಮಧ್ಯೆ ಪ್ರೀತಿಯ ಸಂಬಂಧ ಇದೇಂತ ಒಪ್ಕೋ,” ಎಂದ. ಮಾಲತಿ ಬೆಚ್ಚಿ ವಿಶ್ವನನ್ನು ನೋಡಿದಳು. ಅವಳ ಕಣ್ಣುಗಳಲ್ಲಿ ಕೋಪ ಇತ್ತು.

“ಮದುವೆಯಾದ ಗಂಡಿನ ಜೊತೆ ಅಕ್ರಮ ಸಂಬಂಧ ಇಟ್ಕೊಳ್ಳೋದು ಸರಿಯಲ್ಲ ಮಾಲತಿ. ಇದು ಸಾಮಾಜಿಕ ನೀತಿ, ನಿಯಮಗಳಿಗೆ ವಿರುದ್ಧವಾಗಿದೆ. ಜೊತೆಗೆ ನಮ್ಮ ವೈವಾಹಿಕ ಜೀವನದ ಸಂತೋಷ ಹಾಗೂ ಸುಖ ಶಾಂತಿಯನ್ನು ಹಾಳು ಮಾಡುತ್ತದೆ. ನೀನು ನನ್ನ ಗಂಡನಿಂದ ದೂರ ಹೋಗು ಪ್ಲೀಸ್‌,” ಹೀಗೆ ಹೇಳುವಾಗಲೂ ಸುಧಾಳ ಧ್ವನಿಯಲ್ಲಿ ಕಂಪನವಿರಲಿಲ್ಲ, ಹಿಂಜರಿಕೆಯೂ ಇರಲಿಲ್ಲ.

“ವಿಶ್ವನಿಗೆ ನನ್ನ ಅಗತ್ಯ ಇದೆ. ಅದಕ್ಕೇ ನಾವು ಒಟ್ಟಿಗಿದ್ದೇವೆ. ನಿನ್ನ ವೈವಾಹಿಕ ಜೀವನ ಯಶಸ್ವಿಯಾಗದ್ದಕ್ಕೆ ನನ್ನ ಮೇಲೆ ದೋಷ ಹೊರಿಸ್ಬೇಡ,” ಮಾಲತಿ ಕಠೋರ ಸ್ವರದಲ್ಲಿ ಹೇಳಿದಳು.

“ನಮ್ಮಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡೋದೂಂತ ಅವರೇ ನಿರ್ಧಾರ ಮಾಡ್ಲಿ. ಅವರೇನಾದ್ರೂ ನಿನ್ನನ್ನು ಆಯ್ಕೆ ಮಾಡಿದರೆ ನಾನು ಶಾಶ್ವತವಾಗಿ ಅವರಿಂದ ಬೇರೆಯಾಗ್ತೀನಿ,” ಸುಧಾ ಹೇಳಿದಳು.

“ಅವನು ತನ್ನ ನಿರ್ಧಾರ ಹಿಂದೇನೇ ಹೇಳಿಬಿಟ್ಟಿದ್ದಾನೆ. ನೀನು ಜಗಳ ಆಡಿಕೊಂಡು ಒಬ್ಬಳೇ ಇಲ್ಲಿಂದ ವಾಪಸ್‌ ಹೋಗಿದ್ದೆ. ಇವತ್ತೂ ಅವನು ಇಲ್ಲಿಗೆ ಬಂದಿರೋದಕ್ಕೆ ಕಾರಣ ಏನೆಂದರೆ ಅವನಿಗೆ ನನ್ನನ್ನು ಬಿಟ್ಟು ಇರೋಕಾಗ್ತಿಲ್ಲ.”

“ಈಗ ಅವರೇ ಅದನ್ನು ಬಾಯಿಬಿಟ್ಟು ಹೇಳಲಿ.”

“ಆಯ್ತು.”

“ಒಂದು ವೇಳೆ ಅವನು ನನ್ನನ್ನು ಆಯ್ಕೆ ಮಾಡಿದ್ರೆ ನೀನು ಶಾಶ್ವತವಾಗಿ ಅವರಿಂದ ದೂರ ಆಗ್ತೀಯಾ?”

“ಅವನು ಹಾಗೆ ಮಾಡಲ್ಲ,” ಮಾಲತಿ ಆತ್ಮವಿಶ್ವಾಸದಿಂದ ಹೇಳಿದಳು.

“ಒಂದು ವೇಳೆ ಹಾಗೆ ಮಾಡಿದ್ರೆ?” ಸುಧಾ ಸವಾಲು ಹಾಕುವಂತೆ ದಿಟ್ಟಿಸಿದಳು.

“ಒಂದು ವೇಳೆ ಅವನು ನನ್ನನ್ನು ಬೆಂಬಲಿಸದಿದ್ದರೆ ನಾನು ನನ್ನ ಜೀವಮಾನದಲ್ಲಿ ಮತ್ತೆ ಅವನ ಮುಖ ನೋಡಲ್ಲ.” ಅವರಿಬ್ಬರೂ ವಿಶ್ವನತ್ತ ತಿರುಗಿದರು. ಅವನು ಸ್ವಲ್ಪ ಹೊತ್ತು ಅವರನ್ನೇ ನೋಡುತ್ತಾ ಮುಗುಳ್ನಗುತ್ತಿದ್ದ. ಸ್ವಲ್ಪ ಹೊತ್ತು ಮೌನವಾಗಿದ್ದ ವಿಶ್ವ ಕುತೂಹಲ ಹೆಚ್ಚಿಸಿದ. ನಂತರ ಮೆಲ್ಲಗೆ ಎದ್ದು ಮಾಲತಿಯ ಬಳಿ ಹೋಗಿ ನಿಂತ. ಮಾಲತಿ ವಿಜಯೀ ಭಾವದಿಂದ ಅವನ ಕೈ ತಟ್ಟಿದಳು. ಅವಳು ಸುಧಾಳತ್ತ ತಿರಸ್ಕಾರದ ನೋಟ ಬೀರಿದಳು.

“ಕಳೆದ ಬಾರಿ ನಾನು ನಿಮ್ಮಿಬ್ಬರ ಮಧ್ಯೆ ನಡೆದ ಜಗಳದಲ್ಲಿ ನಿನಗೆ ಸಪೋರ್ಟ್‌ ಮಾಡಿದ್ದೆ ಮಾಲತಿ. ಆದರೆ ಇಂದು ಹಾಗೆ ಮಾಡಕ್ಕಾಗಲ್ಲ. ಆ ತಪ್ಪನ್ನು ಮತ್ತೆ ಮಾಡಿದ್ರೆ ಸುಧಾಳನ್ನು ಕಳೆದುಕೊಳ್ತೀನಿ. ಈ ಕ್ಷಣದವರೆಗೆ ನಾವು ಒಟ್ಟಿಗೆ ಇದ್ವಿ. ಸುಧಾ ಜೊತೆಗೆ ಹೊಸ ಜೀವನ ಪ್ರಾರಂಭ ಮಾಡೋಕೆ ನಾನು ನಿನ್ನಿಂದ ಶಾಶ್ವತವಾಗಿ ದೂರ ಆಗ್ತಿದ್ದೀನಿ,” ಮಾಲತಿಯ ಕೈಯಿಂದ ತನ್ನ ಕೈ ಬಿಡಿಸಿಕೊಂಡು ವಿಶ್ವ ಸುಧಾಳತ್ತ ನಡೆದ.

“ವಿಶ್ವ ನಿನ್ನ ಬದುಕಿನಿಂದ ದೂರವಾಗೋದು ನಿನಗೂ ಒಳ್ಳೆಯದು ಮಾಲತಿ. ಹಳೆಯದನ್ನು ಬಿಡದೇ ಇದ್ರೆ ಹೊಸದು ಸಂಭವಿಸೋಕೆ ಸಾಧ್ಯವೇ ಇಲ್ಲ,” ಮಾಲತಿಗೆ ಈ ಸಲಹೆ ನೀಡಿದ ಸುಧಾ, ವಿಶ್ವನ ಕೈ ಹಿಡಿದಳು. ಇಬ್ಬರೂ ಬಾಗಿಲಿನ ಬಳಿ ಹೊರಟರು.

ಮಾಲತಿ ಅಳುವ ಧ್ವನಿಯಲ್ಲಿ ವಿಶ್ವನಿಗೆ ಬೆದರಿಸುತ್ತಲೂ ಇದ್ದಳು ಹಾಗೂ ದೂರ ಹೋಗಬೇಡ ಎಂದು ಪ್ರಾರ್ಥಿಸುತ್ತಲೂ ಇದ್ದಳು. ಆದರೆ ಅವರಿಬ್ಬರೂ ತಿರುಗಿ ನೋಡದೆ ಶಾಶ್ವತವಾಗಿ ಅವಳ ಬದುಕಿನಿಂದ ದೂರವಾದರು.

ವಿಶ್ವ ಸುಧಾಳಿಗೆ ಇಷ್ಟವಾದ ಬರ್ಗರ್‌ ಹಾಗೂ ಐಸ್‌ಕ್ರೀಂ ತಿನ್ನಿಸಿದ. ಬಳಿಕ ಅವಳ ತಾಯಿಯ ಮನೆಗೆ ಹೋದರು. ಒಳಗೆ ಕಾಲಿಡುವ ಮುನ್ನ ಸುಧಾ ಭಾವುಕ ಸ್ವರದಲ್ಲಿ, “ನಿನ್ನೆಯವರೆಗೆ ನಾನು ಈ ಮನೆಯಲ್ಲಿ ಒತ್ತಡಗ್ರಸ್ತಳಾಗಿ, ಅಸುರಕ್ಷಿತ ಭಾವನೆಯಿಂದ ಕೂಡಿದ್ದೆ. ಆದರೆ ಇಂದು ನನಗೆ ಬಹಳ ಖುಷಿಯಾಗಿದೆ. ಮನಸ್ಸು ಹಗುರವಾಗಿದೆ. ಈ ಸಂತಸವನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ,” ಎಂದಳು.

“ನಾವಿಬ್ಬರೂ ಹೊಸ ಸಂಕಲ್ಪದೊಂದಿಗೆ ಹೊಸ ಜೀವನ ಆರಂಭಿಸುತ್ತಿದ್ದೇವೆ. ನಮ್ಮ ಸಂತಸ ಇಮ್ಮಡಿಯಾಗುವಂತೆ ನೋಡಿಕೊಳ್ಳೋಣ,” ಸಂಗಾತಿಯ ಭುಜವನ್ನು ಪ್ರೀತಿಯಿಂದ ತಟ್ಟಿದ ವಿಶ್ವ ಒಳನಡೆದ. ಸುಧಾಳ ತಾಯಿ, ತಂದೆ, ಅಣ್ಣ, ಅತ್ತಿಗೆ ಇವರಿಬ್ಬರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಲು ಮುಜುಗರಪಡುತ್ತಿದ್ದರು. ಸುಧಾ ಹಾಗೂ ವಿಶ್ವರ ನಡುವೆ ಬಹಳ ದಿನಗಳಿಂದ ಇದ್ದ ಮನಸ್ತಾಪ ಕೇವಲ 2 ದಿನಗಳಲ್ಲಿ ದೂರವಾಗುತ್ತದೆಂದು ಯಾರಿಗೂ ನಂಬಿಕೆ ಇರಲಿಲ್ಲ. ಸುಮಾರು 15 ನಿಮಿಷಗಳ ಕಾಲ ಎಲ್ಲರೂ ಚಿಕ್ಕದಾದ ಡ್ರಾಯಿಂಗ್‌ ರೂಮಿನಲ್ಲಿ ಕುಳಿತರು. ನಂತರ ಸುಧಾ ತನ್ನ ತಾಯಿಯೊಂದಿಗೆ ಒಳಗಿನ ಕೋಣೆಗೆ ಹೋದಳು. ಸ್ವಲ್ಪ ಹೊತ್ತಿನ ನಂತರ ಸುಧಾ ಹಾಗೂ ಅವಳ ತಾಯಿ ಡ್ರಾಯಿಂಗ್‌ ರೂಮಿಗೆ ಬಂದರು. ತಾಯಿ ಅಡುಗೆಮನೆಯಲ್ಲಿ ಸೊಸೆ ಮೀನಾಕ್ಷಿಗೆ ಸಹಾಯ ಮಾಡಲು ಹೊರಟಾಗ ಸುಧಾ ಅವರ ಕೈಹಿಡಿದು ಪಕ್ಕದಲ್ಲೇ ಕೂಡಿಸಿ ಕೊಂಡಳು.

“ವಿಶ್ವಾ, ಇಲ್ಲಿ ಕೇಳಿ. ನಮ್ಮ ಅಮ್ಮನ ಮನಸ್ಸಿನಲ್ಲಿ ನನ್ನ ಭವಿಷ್ಯದ ಬದುಕಿನ ಬಗ್ಗೆ ಕೆಲವು ಚಿಂತೆಗಳು ಮೂಡಿವೆ. ನೀವೇ ಅವರ ಚಿಂತೇನ ದೂರ ಮಾಡಿ,” ಸುಧಾಳ ಬಾಯಿಂದ ಈ ಮಾತುಗಳು ಹೊರಬಂದಾಗ ತಾಯಿಗೆ ಗಾಬರಿಯಾಯಿತು. ಮಾವ ಹಾಗೂ ಭಾಮೈದ ಆಶ್ಚರ್ಯಚಕಿತರಾದರು.

“ಅಮ್ಮಾ, ನಿಮ್ಮ ಚಿಂತೆ ಏನು?” ವಿಶ್ವ ಅತ್ತೆಯ ಮುಖವನ್ನೇ ದಿಟ್ಟಿಸುತ್ತಾ ಕೇಳಿದ.

“ಏನೂ ಇಲ್ಲ ಅಳಿಯಂದ್ರೆ. ಇವಳೇನೋ ಬಾಯಿಗೆ ಬಂದಂಗೆ ಮಾತಾಡ್ತಾಳೆ,” ಅತ್ತೆಯ ಧ್ವನಿಯಲ್ಲಿ ಮಗಳ ಬಗ್ಗೆ ಕೋಪ ಹಾಗೂ ಕೊಂಚ ಗಾಬರಿಯೂ ಇತ್ತು.

“ಅಮ್ಮಾ, ನನ್ನನ್ನು ರೂಮಿನೊಳಗೆ ಕರೆದುಕೊಂಡು ಹೋಗಿ ಹೇಳ್ತೀಯಲ್ಲಾ, ಆ ಮಾತುಗಳನ್ನು ಇನ್ನು ಮುಂದೆ ಇವರ ಎದುರಿಗೇ ಹೇಳು.”

“ನೀನು ಸುಮ್ಮಿರೆ,” ಅತ್ತೆ ಮಗಳನ್ನು ಗದರಿದರು. ಅದಕ್ಕೆ ಸುಧಾ ಮುಗುಳ್ನಕ್ಕು ಗಂಡನಿಗೆ ಹೇಳಿದಳು, “ಅಮ್ಮನ ಸಮಸ್ಯೆ ಏನು ಗೊತ್ತಾ? ನಾನು ಸಾಧ್ಯವಾದಷ್ಟು ಬೇಗ ಅತ್ತೆಮನೆಯಿಂದ ಹೊರಬಂದು ಬೇರೆ ಇರಬೇಕಂತೆ. ಅತ್ತೆ ಹಾಗೂ ನಾದಿನಿಯರ ಜೊತೆ ಹುಷಾರಾಗಿರಬೇಕಂತೆ. ಅವರಿಗೆ ತಗ್ಗಿ ಬಗ್ಗಿ ನಡೀಬಾರ್ದಂತೆ. ಒಟ್ಟು ಕುಟುಂಬದಲ್ಲಿ ಇದ್ದರೆ ನನ್ನ ಸಂಸಾರ ಸರಿಯಾಗಿ ನೋಡಿಕೊಳ್ಳೋಕೆ ಆಗಲ್ಲಾಂತ ನಮ್ಮಮ್ಮ ಹೇಳ್ತಾರೆ. ಹೌದೇನ್ರಿ?”

ಎಲ್ಲರ ಎದುರಿಗೆ ಮಗಳ ಬಾಯಿಂದ ಬಂದ ಈ ಅನಿರೀಕ್ಷಿತ ಮಾತುಗಳನ್ನು ಕೇಳಿ ಅತ್ತೆಯ ಮುಖ ಪೆಚ್ಚಾಯಿತು. ತನ್ನನ್ನು ಬಹಳ ಜಾಣೆ ಹಾಗೂ ಗಟ್ಟಿಗಿತ್ತಿ ಎಂದು ಬೀಗುತ್ತಿದ್ದ ಮಹಿಳೆಗೆ ಇಂದು ಅವಮಾನ ಹಾಗೂ ನಾಚಿಕೆಯಿಂದ ಕಾಲ ಕೆಳಗಿನ ನೆಲ ಕುಸಿಯುತ್ತಿರುವಂತೆ ಅನ್ನಿಸಿತು. ನಿಧಾನವಾಗಿ ಆಕೆಯ ಕೋಪ ಹೆಚ್ಚತೊಡಗಿತು. ಸುಧಾಳನ್ನು ದುರುಗುಟ್ಟಿ ನೋಡಿದ ಬಳಿಕ ಅವರು ವಿಶ್ವನ ಮುಖ ನೋಡಿ ಬಹಳ ಪ್ರಯಾಸದಿಂದ ನಗುತ್ತಾ, “ಈ ಪೆದ್ದೀಗೆ ನಾನು ಹೇಳಿದ್ದು ಸರಿಯಾಗಿ ಅರ್ಥ ಆಗಿಲ್ಲ ಅಳಿಯಂದ್ರೆ. ನೀವಿಬ್ಬರೂ ಸಂತೋಷವಾಗಿ ಇರಬೇಕೆನ್ನೋದೇ ನನ್ನ ಆಸೆ. ಜಾಯಿಂಟ್‌ ಫ್ಯಾಮಿಲೀಲಿ ಇದ್ದಾಗ ನಿಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಅದು ಎಲ್ಲರಿಗೂ ಗೊತ್ತಿತ್ತು,” ಎಂದರು. ಆಗ ವಿಶ್ವ ಗಂಭೀರವಾಗಿ?

“ಅಮ್ಮಾ, ಇಂದು ನಮ್ಮ ವೈವಾಹಿಕ ಜೀವನದ ಎರಡನೇ ವರ್ಷ ಶುರುವಾಗಿದೆ. ನಾವು ನಮ್ಮೆಲ್ಲ ತಪ್ಪು ತಿಳಿವಳಿಕೆಗಳನ್ನು ಮರೆತು ಹೊಸದಾಗಿ ಜೀವನ ಆರಂಭಿಸಲು ಪರಸ್ಪರ ಮಾತುಕೊಟ್ಟಿದ್ದೇವೆ. ನಿಮ್ಮೆಲ್ಲರಲ್ಲಿ ನಮ್ಮಿಬ್ಬರದೂ ಒಂದೇ ಒಂದು ಪ್ರಾರ್ಥನೆ ಇದೆ,” ಎಂದ.

“ಆ ಪ್ರಾರ್ಥನೆ ಏನೂಂತ ನಾನು ಹೇಳ್ತೀನಿ,” ಎನ್ನುತ್ತಾ ಸುಧಾ ಎದ್ದು ವಿಶ್ವನ ಬಳಿ ಹೋಗಿ ಕುಳಿತುಕೊಳ್ಳುತ್ತಾ, “ನೀವೆಲ್ಲರೂ ಏಕಾಂತದಲ್ಲಿ ನನಗೆ ಏನೂ ಹೇಳಬೇಡಿ. ಏನಾದ್ರೂ ಸಲಹೆ, ಸೂಚನೆ ನೀಡೋದಿದ್ರೆ ನಮ್ಮಿಬ್ಬರನ್ನೂ ಒಟ್ಟಿಗೆ ಕೂಡಿಸಿ ಹೇಳಿ,” ಎಂದಳು.

“ಮದುವೆಯ ಎರಡನೇ ವಾರ್ಷಿಕೋತ್ಸವ ಬರುವವರೆಗೆ ನನ್ನನ್ನು ಬಿಟ್ಟು ತಾನೊಬ್ಬಳೇ ಒಂದು ರಾತ್ರಿಯಾದರೂ ಈ ಮನೆಯಲ್ಲಿ ಕಳೋದಿಲ್ಲಾಂತ ಸುಧಾ ನಿರ್ಧರಿಸಿದ್ದಾಳೆ,” ಎಂದು ವಿಶ್ವ ಹೇಳಿದ.

“ನಮ್ಮ ಇನ್ನೊಂದು ನಿರ್ಣಯವನ್ನೂ ಕೇಳಿಬಿಡಿ. ಅದೆಂದರೆ ನಾವು ಎಲ್ಲರ ಮಾತನ್ನೂ ಕೇಳುತ್ತೇವೆ. ಆದರೆ ನಮ್ಮಿಬ್ಬರ ಸಹಮತವಿಲ್ಲದೆ ಯಾವ ಕೆಲಸವನ್ನೂ ಮಾಡುವುದಿಲ್ಲ. ನಮ್ಮಲ್ಲಾದ ಈ ಬದಲಾವಣೆಯ ಬಗ್ಗೆ ಯಾರೂ ತಪ್ಪು ತಿಳಿದುಕೊಳ್ಳಬೇಡಿ,” ಎಂದರು.

“ನಾನ್ಯಾಕೆ ತಪ್ಪು ತಿಳ್ಕೋಬೇಕು,” ಸುಧಾಳ ತಾಯಿ ಥಟ್ಟನೆ ಎದ್ದು ನಿಲ್ಲುತ್ತಾ, “ನಾನು ಯಾವಾಗಲೂ ನಿನ್ನ ಒಳ್ಳೇದಕ್ಕೇ ಹೇಳೋದು. ನಿನಗೆ ಕೇಳೋಕೆ ಇಷ್ಟವಿಲ್ಲದಿದ್ದರೆ ಕೇಳಬೇಡ. ನಾನು ಇನ್ನು ಮೇಲೆ ಬಾಯಿ ಮುಚ್ಚಿಕೊಂಡು ಇರುತ್ತೇನೆ,” ಎಂದರು.

“ಅಮ್ಮಾ, ಈಗ ನನ್ನ ಬಗ್ಗೆ ಅಲ್ಲ, ನಮ್ಮಿಬ್ಬರ ಒಳ್ಳೇದಕ್ಕೆ ಯೋಚಿಸು.”

ಕೋಪದಿಂದ ಅಡುಗೆಮನೆಯ ಕಡೆ ತಿರುಗಿದ ಸುಧಾಳ ತಾಯಿ ಕೇಳಿಯೂ ಕೇಳಿಸದವರಂತೆ ಒಳಗೆ ಹೋದರು. ಸ್ವಲ್ಪ ಹೊತ್ತು ಅಲ್ಲಿ ಯಾರೂ ಮಾತಾಡಲಿಲ್ಲ. ನಿಧಾನವಾಗಿ ಎದ್ದ ಸುಧಾಳ ತಂದೆ ವಿಶ್ವನನ್ನು ಆಲಂಗಿಸಿದರು. ನಂತರ ಸುಧಾಳ ತಲೆಯ ಮೇಲೆ ಕೈಯಿಟ್ಟು ಆಶೀರ್ದಿಸುವಾಗ ಅವರ ಕಣ್ಣುಗಳು ಹನಿಗೂಡಿದವು.

“ವಿಶ್ವಾ, ನನ್ನ ತಲೆಯ ಮೇಲಿದ್ದ ದೊಡ್ಡ ಭಾರವನ್ನು ಇವತ್ತು ನೀವಿಬ್ರೂ ಕೆಳಗಿಳಿಸಿದ್ದೀರಿ. ದೇವರು ನಿಮ್ಮಿಬ್ಬರಿಗೂ ಒಳ್ಳೇದು ಮಾಡಲಿ,” ಹೃದಯ ತುಂಬಿ ಆಶೀರ್ವಾದ ಮಾಡುವಾಗ ಮಾವನವರ ಕಂಠ ಗದ್ಗದವಾಯಿತು. ಶಂಕರ್‌ ವಿಶ್ವನನ್ನು ಮೇಲೆತ್ತಿಕೊಂಡು ತಿರುಗಿಸಿ ತನ್ನ ಖುಷಿ ವ್ಯಕ್ತಪಡಿಸಿದ.

“ಭಾವಾ ಅಕ್ಕನಿಗೆ ಕುಡಿಸಿ ಅವಳನ್ನು ವಶಪಡಿಸಿಕೊಂಡ್ರ್ಲಾ ಆ ಔಷಧಿನಾ ನನಗೂ ಸ್ವಲ್ಪ ಕೊಡಿ. ಇತ್ತೀಚೆಗೆ ಸವಿತಾ ನನ್ನ ಜೊತೆ ಮಾತು ಮಾತಿಗೂ ಜಗಳ ಆಡ್ತಿರ್ತಾಳೆ,” ಶಂಕರ್‌ ತಮಾಷೆ ಮಾಡಿದಾಗ ವಿಶ್ವ ಜೋರಾಗಿ ನಕ್ಕ. ಸುಧಾ ಹುಸಿಮುನಿಸು ತೋರಿದಳು. ಮಧ್ಯಾಹ್ನದ ಊಟವನ್ನು ಅವರಿಬ್ಬರೂ ಎಲ್ಲರೊಂದಿಗೆ ಮಾಡಿದರು. ಹೊರಡುವವರೆಗೆ ಸುಧಾ ವಿಶ್ವನ ಬಳಿಯಿಂದ ದೂರ ಸರಿಯಲೇ ಇಲ್ಲ. ಹೀಗಾಗಿ ಅವಳ ತಾಯಿಗೆ ಮಗಳ ಬಳಿ ಏನಾದರೂ ದೂರು ಹೇಳುವುದು, ಉಪದೇಶ ಮಾಡುವುದು ಇತ್ಯಾದಿಗಳಿಗೆ ಅವಕಾಶ ಸಿಗಲೇ ಇಲ್ಲ. ತಮ್ಮ ಮಗಳು ಅಳಿಯ ಖುಷಿಯಿಂದ ನಗುತ್ತಾ ಮಾತನಾಡುತ್ತಿದ್ದುದನ್ನು ಕಂಡು ಸ್ವಲ್ಪ ಸಮಾಧಾನಗೊಂಡಿದ್ದರು. ರವಿಯ ಮನೆಯಲ್ಲಿ ಸಂಜೆಯ ಪಾರ್ಟಿಯನ್ನು ವಿಶ್ವನ 4 ಆತ್ಮೀಯ ಮಿತ್ರರು ಆಯೋಜಿಸಿದ್ದರು.  ರವಿಯ ಹೆಂಡತಿ ಗಾಯತ್ರಿ ಸುಧಾಳನ್ನು ಅಪ್ಸರೆಯಂತೆ ಸಿಂಗರಿಸಿದ್ದಳು.

ಹಾಗೆ ನೋಡಿದರೆ ವಿಶ್ವ ಹಾಗೂ ಸುಧಾರೇ ಪಾರ್ಟಿ ಕೊಡಬೇಕಾಗಿತ್ತು. ಆದರೆ ಪಾರ್ಟಿ ಕೊಟ್ಟಿದ್ದು ಅವರ ಮಿತ್ರ ಮಂಡಲಿಯೇ. ಮುರಿದುಬೀಳುವ ಹಂತ ತಲುಪಿದ್ದ ಅವರ ದಾಂಪತ್ಯ ಮತ್ತೆ ಸದೃಢ ಆಧಾರದ ಮೇಲೆ ಬಂದು ನಿಂತಿದ್ದಕ್ಕೆ ಅವರಿಗೆ ಖುಷಿಯಾಗಿತ್ತು. ತಮ್ಮ ಅತ್ಯಂತ ಸಮೀಪದ ಕುಟುಂಬದವರು ಮತ್ತು ಮಿತ್ರರೊಡನೆ ಅವರಿಬ್ಬರೂ ಪಾರ್ಟಿಯ ಸಂಪೂರ್ಣ ಆನಂದ ಪಡೆದರು. ಚೆನ್ನಾಗಿ ತಿಂದು ಮನಸಾರೆ ನರ್ತಿಸಿದರು. ವಿಶ್ವ ಒಂದು ಸುಂದರ ನೆಕ್ಲೇಸ್‌ನ್ನು ಎಲ್ಲರೆದುರಿಗೆ ಸುಧಾಗೆ ತೊಡಿಸಿದ ಮತ್ತು ತಮಾಷೆಯ ಸ್ವರದಲ್ಲಿ, “ಸುಧಾಳ ಪ್ರೇಮದ ಬಗ್ಗೆ ಹಸಿದಿರುವ ಅಸಹಾಯಕ ನಾನು. ಸುಧಾಳೊಂದಿಗೆ ಇಡೀ ಜೀವನ ಕಳೆಯಲು ಉತ್ಸುಕನಾಗಿದ್ದೇನೆ. ಅವಳು ತನ್ನ ಕೃಪಾದೃಷ್ಟಿ ನನ್ನ ಮೇಲೆ ಹರಿಸಲಿ ಎಂದು ನೆನಪಿಸಲು ಈ ಗಿಫ್ಟ್ ಕೊಡುತ್ತಿದ್ದೇನೆ,” ಎಂದ. ಸುಧಾ ಒಂದು ಲೆದರ್‌ ಪರ್ಸ್‌ ಹಾಗೂ ಒಂದು ಬೆಲ್ಟ್ ನ್ನು ವಿಶ್ವನಿಗೆ ಉಡುಗೊರೆಯಾಗಿ ಕೊಟ್ಟು, “ನಾನು ಈ ಉಡುಗೊರೆ ಕೊಟ್ಟಿದ್ದೇಕೆಂದರೆ ನಾನು ಚೆನ್ನಾಗಿ ಶಾಪಿಂಗ್‌ ಮಾಡಲು ಇವರು ಈ ಪರ್ಸ್‌ನಲ್ಲಿ ನೋಟುಗಳನ್ನು ತುಂಬಿರಬೇಕು ಹಾಗೂ ಅದಕ್ಕಾಗಿ ಇವರು ಈ ಬೆಲ್ಟ್ ನಿಂದ ಸೊಂಟ ಬಿಗಿಸಿಕೊಂಡು ದುಡಿಯಬೇಕು,” ಎಂದಳು.

ವಿಶ್ವನ ಗೆಳೆಯರೆಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸೀಟಿ ಹೊಡೆದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು. ಅವರೆಲ್ಲಾ ಎಷ್ಟು ಸಂತಸದಿಂದ ಇದ್ದರೆಂದರೆ ರಾತ್ರಿ 12 ಗಂಟೆಯಾಗಿದ್ದೇ ಗೊತ್ತಾಗಲಿಲ್ಲ. ತಮ್ಮ ಬೆಡ್‌ರೂಮಿನಲ್ಲಿ ಸುಧಾ ಹಾಗೂ ವಿಶ್ವ ಸುಮಾರು 1 ಗಂಟೆಗೆ ಪ್ರವೇಶಿಸಿದರು. ವಿಶ್ವ ಬಾಗಿಲನ್ನು ಮುಚ್ಚಿದ ಕೂಡಲೇ ಸುಧಾ ಅವನ ಬಾಹುಗಳಲ್ಲಿ ಸೇರಿಕೊಂಡಳು. ಪರಸ್ಪರರ ಸ್ಪರ್ಶ, ಸುವಾಸನೆಗಳನ್ನು ಅನುಭವಿಸುತ್ತಾ ಅವರ ಕಣ್ಣುಗಳು ಒಂದು ರೀತಿಯ ನಶೆಯಿಂದಾಗಿ ಭಾರಾಗತೊಡಗಿದವು.

“ಮದುವೆಯ ಮೊದಲ ವಾರ್ಷಿಕೋತ್ಸವ ಹೇಗಿತ್ತು ಸುಧಾ?” ವಿಶ್ವ ಸುಧಾಳ ಕಿವಿಯಲ್ಲಿ ಉಸುರಿದ.

“ಬ್ಯೂಟಿಫುಲ್, ಬೊಂಬಾಟ್‌,” ಸುಧಾ ಅವನ ಕಣ್ಣುಗಳನ್ನೇ ನೋಡುತ್ತಾ ಮುಗುಳ್ನಕ್ಕಳು.

“ಎಲ್ಲ ಮನಸ್ತಾಪಗಳನ್ನೂ ಮರೆತು ಒಂದು ಹೊಸ ಜೀವನ ಆರಂಭಿಸುವ ನಮ್ಮ ಸಂಕಲ್ಪವನ್ನು….”

“ನಾವೆಂದೂ ಮರೆಯೋದಿಲ್ಲ,” ಸುಧಾ ಅವನ ಮಾತನ್ನು ಪೂರ್ಣಗೊಳಿಸಿದಳು.

“ಯಾವುದೋ ಕಾರಣದಿಂದ ನಮ್ಮಿಬ್ಬರಲ್ಲಿ ಜಗಳ ಇತ್ಯಾದಿ….”

“ಇನ್ನೆಂದೂ ಇಲ್ಲ.”

“ಅತ್ತುಕೊಂಡು ತೌರುಮನೆಗೆ ಓಡುವುದು….”

“ಇನ್ನೆಂದಿಗೂ ಇಲ್ಲ. ಪ್ರೇಯಸಿಯನ್ನು ಓಲೈಸುವುದು?”

“ಬಿಡ್ತು ಅನ್ನು. ಇನ್ನೆಂದಿಗೂ ಇಲ್ಲ.”

“ನನ್ನ ಮೇಲೆ ಕೈಮಾಡೋದು….”

“ಛೀ….ಛೀ….. ಇನ್ನೆಂದಿಗೂ ಇಲ್ಲ.”

“ಐ ಲವ್ ಯೂ.”

“ಐ ಲವ್ ಯೂ ಟೂ.”

ವಿಶ್ವ ಕೈ ಚಾಚಿ ಟೇಪ್‌ರೆಕಾರ್ಡರ್‌ ಸ್ವಿಚ್‌ ಒತ್ತಿದ ಮತ್ತು ಟ್ಯೂಬ್‌ ಲೈಟ್‌ ಆರಿಸಿ ನೈಟ್‌ ಬಲ್ಬ್ ಹಾಕಿದ. ಮಧುರ ಸಂಗೀತದ ಸ್ವರದಲ್ಲಿ ಅವರಿಬ್ಬರೂ ಪರಸ್ಪರ ಅಂಟಿಕೊಂಡು ನರ್ತಿಸತೊಡಗಿದರು. ತಪ್ಪುದಾರಿಯಲ್ಲಿ ನಡೆದ ಬಳಿಕ ಸರಿಯಾದ ದಾರಿಯಲ್ಲಿ ನಡೆಯುವ ಖುಷಿಯೇ ವಿನೂತನವಾಗಿರುತ್ತದೆ. ಅವರಿಬ್ಬರ ಹೃದಯಗಳ ಬಡಿತ ಹೆಚ್ಚಾಗಿತ್ತು. ಅಂದಿನ ರಾತ್ರಿ ಪ್ರಥಮ ರಾತ್ರಿಗಿಂತಲೂ ಅಧಿಕ ಆನಂದ ಹಾಗೂ ಮೋಜಿನಿಂದ ಕೂಡಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ