ಅಣ್ಣನ ಮದುವೆಯಾದ ನಂತರ ಮೊಟ್ಟ ಮೊದಲ ಸಲ ಅವರ ಮನೆಗೆ ಹೊರಟಿದ್ದೆ. ಅಪ್ಪ ಅಮ್ಮ ಕೂಡ ಕಳೆದ ಎರಡು ತಿಂಗಳಿಂದ ಅಣ್ಣನ ಮನೆಯಲ್ಲೇ ಉಳಿದಿದ್ದಾರೆ. ಅಲ್ಲಿ ಅವರು ಹೇಗಿದ್ದಾರೊ ಏನೋ ಅಂತ ಮನಸ್ಸಿಗೆ ಕಳವಳವಾಗಿತ್ತು. ಸ್ವಂತ ಮನೆ ತೊರೆದು, ನೆರೆಹೊರೆ, ಬಂಧು ಬಾಂಧವರನ್ನೆಲ್ಲ ಬಿಟ್ಟು ಅಣ್ಣನ ಮನೆಯಲ್ಲಿ ಇರಲು ಅವರಿಗೆ ಸಾಧ್ಯವಾದೀತೋ ಇಲ್ಲವೋ? ಅಪ್ಪನಂತೂ ಅಚೀಚೆ ಓಡಾಡಿಕೊಂಡು ಹೊತ್ತು ಕಳೆಯಬಲ್ಲರು. ಆದರೆ ಅಮ್ಮ ಇಡೀ ದಿನ ಮನೆಯಲ್ಲೇ ಇರಬೇಕಲ್ಲ. ಈಗಷ್ಟೇ ಅಣ್ಣನಿಗೆ ಮದುವೆ ಆಗಿದೆ. ಅವರಿಬ್ಬರು ಹೊಸತನದ ರೋಮಾಂಚನದಲ್ಲಿ  ಸಂತೋಷವಾಗಿಯೇ ಇರುತ್ತಾರೆ. ಅಷ್ಟರಲ್ಲೇ ಅವಳ ತುಟಿಯಂಚಿನಲ್ಲಿ ಮಂದಹಾಸ ಮೂಡಿತು. ಆ ಹೊಸತನದ ದಿನಗಳು ಎಷ್ಟು ಅದ್ಭುತವಾಗಿರುತ್ತವೆ. ಮೈಮನಗಳಲ್ಲೆಲ್ಲ ಹೊಸ ಚೈತನ್ಯ, ತಡರಾತ್ರಿಯವರೆಗೂ ನಿದ್ದ ಬರದಿರುವುದು, ಮುಂಜಾನೆ ತಡವಾಗಿ ಏಳುವುದು, ತನ್ನ ಮದುವೆಯಾದ ಆರಂಭದ ದಿನಗಳೆಲ್ಲ ಅವಳ ಕಣ್ಮುಂದೆ ಸಿನಿಮಾದಂತೆ ಸುಳಿಯುತೊಡಗಿದವು. ಸತೀಶ್‌, ಬೆಳಗ್ಗೆ ತುಂಬಾ ಹೊತ್ತಿನವರೆಗೂ ಮಲಗಿಯೇ ಇರುತ್ತಿದ್ದ. ಅವನ ಪಕ್ಕದಲ್ಲೇ ಮೌನವಾಗಿ ಮಲಗಿರುತ್ತಿದ್ದ ಇವಳು ನವಿರಾಗಿ ಅವನ ಮೈದಡುವುತ್ತಿದ್ದಳು. ಸತೀಶ್‌ ಬಾತ್ ರೂಮಿನಿಂದ ಹೊರಬರುತ್ತಿದ್ದಂತೆ ಅವನೊಟ್ಟಿಗೆಯೇ ಡೈನಿಂಗ್‌ ಟೇಬಲ್‌ನತ್ತ ಹೊರಡುತ್ತಿದ್ದಳು. ತಿಂಡಿ ತಿಂದ ನಂತರ ಸತೀಶ್ ಆಫೀಸ್‌ಗೆ ತೆರಳಿದ ನಂತರ ಮತ್ತೆ ಬೆಡ್‌ ರೂಮ್ ಸೇರಿಕೊಳ್ಳುತ್ತಿದ್ದಳು. ದಿನಕ್ಕೆ ಕಡಿಮೆಯೆಂದರೂ 7-8 ಬಾರಿ ಸತೀಶ್‌ಗೆ ಫೋನ್ ಮಾಡುತ್ತಿದ್ದಳು. ಪ್ರತಿಕ್ಷಣ ಅವನ ಆಗುಹೋಗುಗಳನ್ನು ಗಮನಿಸುವಳು. ಊಟದ ಸಮಯಕ್ಕೆ ಸರಿಯಾಗಿ ಅವನ ಕಾಲ್ ‌ಬರುತ್ತಿದ್ದಂತೆ, ತಕ್ಷಣ ತಯಾರಾಗಿ ಹೋಗುವಳು. ಸತೀಶ್‌, ಊಟ ಮುಗಿಸಿ ಕೊಂಚ ವಿಶ್ರಾಂತಿ ಪಡೆದು ಮರಳಿ ಆಫೀಸಿಗೆ ಹೋಗುತ್ತಿದ್ದಂತೆ ಇವಳು ಪ್ರಪಂಚದ ಪರಿವೆಯೇ ಇಲ್ಲದಂತೆ ಬೆಡ್‌ ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡುಬಿಡುತ್ತಿದ್ದಳು.

ಅದೇ ದಿನಗಳಲ್ಲಿ ಅವಳು ಗರ್ಭ ಧರಿಸಿದ್ದಳು, ಇನ್ನೇನು, ಅವಳಿಗೆ ಆಕಾಶಕ್ಕೆ ಮೂರೇ ಗೇಣು ಎಂಬಂತೆ ಭಾಸವಾಗತೊಡಗಿತ್ತು. ಸತೀಶ್‌ ಸದಾ ತನ್ನ ಜೊತೆಯಲ್ಲೇ ಇರಲಿ ಎಂದು ಅವಳ ಮನಸ್ಸು ಹಾತೊರೆಯತೊಡಗಿತ್ತು. ಸಣ್ಣ ತಲೆನೋವು ಕಾಣಿಸಿದರೂ, ಅವನೇ ಬಂದು ನಿವಾರಿಸಲಿ ಎಂದುಕೊಳ್ಳುತ್ತಿದ್ದಳು. ತನ್ನ ತನುಮನುಗಳಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಸ್ವತಃ ಅನುಭವಿಸುತ್ತಿದ್ದಳು. ಆದರೆ ಈ ಗಂಡಸರು, ಹೆಂಗಸರ ಎಲ್ಲಾ ಸಮಸ್ಯೆಗಳಿಗೂ ತಮ್ಮ ತಾಯಂದಿರೆ ಮದ್ದು ಎಂದುಕೊಳ್ಳುತ್ತಾರೆ. ಹೀಗಾಗಿಯೇ ತಂತಮ್ಮ ಹೆಂಡತಿಯರ ಸಮಸ್ಯೆಗಳನ್ನು ತಾಯಿಯ ಸುಪರ್ದಿಗೆ ಒಪ್ಪಿಸಿಬಿಡುತ್ತಾರೆ.

ಅವಳ ಯೋಚನಾಲಹರಿ ಒಮ್ಮಿಂದೊಮ್ಮೆಲೆ ಹಿಂದಕ್ಕೆ ಸಾಗಿತ್ತು. ಆ ದಿನಗಳಲ್ಲಿ ಸತೀಶ್‌ನ ತಂದೆ ತಾಯಿ ಕೂಡ ಅವರೊಟ್ಟಿಗೇ ಇರುತ್ತಿದ್ದರು. ಅವರ ಒಂಟಿತನದ ಬಗ್ಗೆ ಇವಳಿಗೆ ಯಾವತ್ತೂ ಯೋಚನೆ ಬಂದಿರಲಿಲ್ಲ. ಆ ವೃದ್ಧ ಜೀವಗಳು ಪ್ರತಿದಿನ ಸಂಜೆ ಸತೀಶ್‌ ಮನೆಗೆ ಬರುವುದನ್ನೇ ಕಾಯುತ್ತಿದ್ದರು. ಅವನು ಬಂದ ತಕ್ಷಣ ಅವನೊಂದಿಗೆ ಮಾತನಾಡಲು ತವಕಿಸುತ್ತಿದ್ದರು. ನಿಜ ಹೇಳಬೇಕೆಂದರೆ ಪರಸ್ಪರ ಹೊಂದಾಣಿಕೆ ಇಲ್ಲದಿದ್ದರೆ, ನಾವು ಇನ್ನೊಬ್ಬರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲ್ಲ. ಅವಳು ಇಡೀ ದಿನ ಬಾಗಿಲು ಮುಚ್ಚಿಕೊಂಡು ಬೆಡ್‌ರೂಮಿನಲ್ಲಿಯೇ ಕೂತಿರುತ್ತಿದ್ದಳು. ತನ್ನ ಅಪ್ಪ, ಅಮ್ಮ ಗೆಳೆಯ ಗೆಳತಿಯರೊಂದಿಗೆ ಫೋನ್‌ನಲ್ಲಿ ಹರಟೆ ಹೊಡೆಯುವುದರಲ್ಲಿ ತಲ್ಲೀನಳಾಗಿ ಇರುತ್ತಿದ್ದಳು. ಆದರೆ ತನ್ನ ಅತ್ತೆ ಮಾವ ಹೇಗೆ ಸಮಯ ತಳ್ಳುತ್ತಿದ್ದಾರೆ ಎಂಬುದನ್ನು ಕೇಳಲು ಹೋಗುತ್ತಿರಲಿಲ್ಲ. ಅಮ್ಮ ಮಾತ್ರ ಪ್ರತಿದಿನ ಸಮಯಕ್ಕೆ ಸರಿಯಾಗಿ ಹೋಗಿ, ಬಾಗಿಲು ತಟ್ಟಿ, ಊಟ ತಿಂಡಿ ಕಾಫಿಗೋಸ್ಕರ ಕರೆದುಬರುತ್ತಿದ್ದರು.

ಇವಳು ಏನನ್ನಾದರೂ ಜ್ಞಾಪಿಸಿಕೊಂಡು ಕೆಲಸದವಳನ್ನು ಕೂಗಿ ಕರೆದಾಗೆಲ್ಲ ಸತೀಶನ ಅಮ್ಮನೇ ಧಾವಿಸಿ ಬರುತ್ತಿದ್ದರು. ಆದರೆ ಒಂದು ದಿನ ಇವಳು ಕೆಲಸದವಳನ್ನು ಕೂಗಿದಾಗ, ತಕ್ಷಣ ಕೆಲಸದವಳೇ ಪ್ರತ್ಯಕ್ಷಳಾಗಿದ್ದಳು. ಇವತ್ತೇಕೆ ಹೀಗಾಯಿತು ಎಂದು ಧಾವಂತದಿಂದ ಬಾಗಿಲಿನತ್ತ ಬಂದು ನೋಡಿದಳು. ಅಪ್ಪ, ಅಮ್ಮನ ಕೈ ಹಿಡಿದು ನಿಲ್ಲಿಸಿ, “ಯಾರೂ ನಿನ್ನನ್ನು ಹೀಗೆ `ಟೇಕನ್‌ಫಾರ್‌ ಗ್ರಾಂಟೆಡ್‌’ ತರಹ ನೋಡಬಾರದು,” ಎಂದು ಹೇಳಿ ಅಮ್ಮನನ್ನು ತಡೆಹಿಡಿದಿದ್ದರು. ಮನಸ್ಸು ಅಚಾನಕ್ಕಾಗಿ ಇನ್ನೂ ಒಂದು ಹೆಜ್ಜೆ ಹಿಂದೆ ಸರಿಯಿತು. ಒಂದು ದಿನ ಸತೀಶ್‌ ಅವಳ ಕೈ ಹಿಡಿದು ಮೃದುವಾಗಿ ತೀಡುತ್ತಾ, “ಮುಂಚಿನಿಂದಲೂ ನನ್ನ ತಂದೆ ತಾಯಂದಿರು ನನ್ನೊಟ್ಟಿಗೇ ಇರಬೇಕೆಂಬುದು ನನ್ನ ಹೆಬ್ಬಯಕೆ. ನಮ್ಮ ಮಕ್ಕಳ ಮುಂದಿನ ದಿನಗಳಲ್ಲಿ ಅಜ್ಜಿ, ತಾತ ಎಂದು ಮನೆ ತುಂಬ ಓಡಾಡುತ್ತಿದ್ದರೆ ಅದೆಷ್ಟು ಸುಂದರ,” ಎಂದಿದ್ದ.

“ಹೌದು, ಹೌದು…. ಮಕ್ಕಳನ್ನು ನೋಡಿಕೊಳ್ಳಲು ಯಾರಾದರೊಬ್ಬರು ಹಿರಿಯರು ಬೇಕೇಬೇಕಲ್ಲ.”

“ಮಕ್ಕಳನ್ನು ನೋಡಿಕೊಳ್ಳಲು ಬೇಕು ಅಂತ ಅಲ್ಲ. ಇದು ನನ್ನ ಆಸೆ…..” ಎಂದು ಒತ್ತಿ ಹೇಳಿದ್ದ ಸತೀಶ್‌.

ಅವಳಿಗಂತೂ ಏನೂ ಅರ್ಥವಾಗಿರಲಿಲ್ಲ. ಆದರೆ, ಇನ್ನು ಮುಂದೆ ಇವರ ತಂದೆ ತಾಯಿಯರೂ ತಮ್ಮೊಂದಿಗೇ ಇರುತ್ತಾರೆ ಎಂದು ಖಾತ್ರಿಯಾಗಿತ್ತು.

ಹಳೆಯ ದಿನದ ನೆನಪುಗಳು ಇನ್ನಿಲ್ಲದಂತೆ ಅವಳನ್ನು ಕಾಡತೊಡಗಿದ್ದವು. ಇಬ್ಬರೂ ದಂಪತಿಗಳು ಆಗಾಗ್ಗೆ ಪರಸ್ಪರ ತುತ್ತು ತಿನಿಸುತ್ತಾ ಊಟ ಮಾಡುತ್ತಿದ್ದರು. ಕೆಲವೊಮ್ಮೆ ಅಪ್ಪ ಅಮ್ಮ ಅಚಾನಕ್ಕಾಗಿ ಅದನ್ನು ನೋಡಿಬಿಟ್ಟರೆ ಸತೀಶನಂತೂ ತಡಬಡಿಸಿಬಿಡುತ್ತಿದ್ದ.

ಆದರೆ ಅವಳಿಗೆ ಇದು ಸರಿಬೀಳಲಿಲ್ಲ. ಏಕೆ, ನಾವು ಪತಿಪತ್ನಿಯರಲ್ಲವೇ? ಪರಸ್ಪರ ಸೊಂಟ ಹಿಡಿದುಕೊಂಡು, ಹೆಗಲ ಮೇಲೆ ಕೈ ಹಾಕಿಕೊಂಡು ಸುತ್ತಾಡಿದರೆ ತಪ್ಪೇನಿದೆ? ಎಂದುಕೊಳ್ಳುತ್ತಿದ್ದಳು.

ಆದರೆ ಇಂದು….. ಅಕಸ್ಮಾತ್‌ ಅಣ್ಣ ಅತ್ತಿಗೆ ಕೂಡ ಹೀಗೆ ನಡೆದುಕೊಂಡರೆ, ಅಪ್ಪ ಅಮ್ಮನಿಗೆ ಏನನ್ನಿಸಬೇಡ, ಎಂಬ ಆಲೋಚನೆ ಬರುತ್ತಿದ್ದಂತೆ ಅವಳಿಗೆ ತನ್ನ ಬಗ್ಗೆಯೇ ಅಸಹ್ಯವೆನ್ನಿಸಿತು. ಇದೇ ಯೋಚನೆಯಲ್ಲಿದ್ದ ಅವಳಿಗೆ ಅಣ್ಣನ ಮನೆ ತಲುಪಿದ್ದೇ ಅರಿವಾಗಲಿಲ್ಲ.

ರಾತ್ರಿ ಊಟವಾದ ನಂತರ ಅಪ್ಪ, ಅಮ್ಮ, ಇವಳು ಮಲಗುವ ತಯಾರಿ ನಡೆಸಿದ್ದರು. ಅಣ್ಣ ಅತ್ತಿಗೆಯ ಬೆಡ್‌ ರೂಮಿನಿಂದ ತಡರಾತ್ರಿಯವರೆಗೂ ಕಿಲಕಿಲ ನಗುವಿನ ಸದ್ದು ಕೇಳಿಬರುತ್ತಲೇ ಇತ್ತು. ಅವರೂ ತಮ್ಮ ಬದುಕಿನ ಮಧುರ ಕ್ಷಣಗಳನ್ನು ಆನಂದಿಸುತ್ತಿದ್ದಾರೆ ಎಂದುಕೊಂಡವಳಿಗೆ ನಿದ್ರೆ ಬಂದಿತ್ತು. ಬೆಳಗ್ಗೆ ಅತ್ತಿಗೆಯೇ ಎಚ್ಚರಿಸಿದಳು, “ಏಳು ಅಕ್ಕಾ, ಎದ್ದೇಳು ತಿಂಡಿ ತಯಾರಾಗಿದೆ.”

ಡೈನಿಂಗ್‌ ಟೇಬಲ್ ತಲುಪಿದಾಗ ಅಪ್ಪ, ಅಮ್ಮ, ಅಣ್ಣ ಎಲ್ಲರೂ ಅವಳಿಗಾಗಿಯೇ ಕಾಯುತ್ತಿದ್ದರು. ಎಲ್ಲರನ್ನೂ ಒಟ್ಟಿಗೆ ಕಂಡು ತುಂಬಾ ಖುಷಿ ಎನಿಸಿತು. ತಿಂಡಿಯಾದ ನಂತರ, ಅಮ್ಮ ಅತ್ತಿಗೆಗೆ ವಿಶ್ರಾಂತಿ ತೆಗೆದುಕೊ ಎಂದು ಹೇಳಿ ಬೆಡ್‌ ರೂಮಿಗೆ ಕಳುಹಿಸಿದರು. ನಂತರ ತಾಯಿ ಮಗಳಿಬ್ಬರೂ ಮಾತಿನ ಮಂಟಪದಲ್ಲಿ ಮುಳುಗಿದರು. 2 ಗಂಟೆಯ ಹೊತ್ತಿಗೆ ಅತ್ತಿಗೆ ಬಂದು, “ಅಮ್ಮ ಊಟ ತಯಾರಾಗಿದೆ,” ಎಂದಳು.

“ಮೋಹನ್‌ ಯಾವಾಗ ಬರುತ್ತಾನಮ್ಮ?” ಎಂದು ಅಮ್ಮ ಕೇಳಿದರು.

“ಈಗಷ್ಟೇ ಫೋನ್‌ ಮಾಡಿದ್ರು. ಇವತ್ತು ಬರಲು ಲೇಟಾಗುತ್ತಂತೆ. ನೀವೆಲ್ಲ ಊಟ ಮಾಡಿ, ಟೈಮ್ ಆಯ್ತು,” ಎಂದು ಬಲವಂತ ಮಾಡಿದಳು.

ಇವಳು ತನ್ನ ಆಲೋಚನೆಯಲ್ಲೇ ಮುಳುಗಿದ್ದಳು. ಮೌನದಿಂದ ಅತ್ತಿಗೆಯ ದಿನಚರ್ಯೆಗಳನ್ನೇ ಗಮನಿಸತೊಡಗಿದ್ದಳು. ಅತ್ತಿಗೆ, ಮನೆಯ ಆಗುಹೋಗುಗಳನ್ನು ನೋಡಿಕೊಳ್ಳುವ ರೀತಿ, ಬಟ್ಟೆಗಳನ್ನು ಎತ್ತಿಡುವುದು, ಲ್ಯಾಂಡ್ರಿಯ ಲೆಕ್ಕ ನಿರ್ವಹಿಸುವುದು, ರೇಷನ್‌, ತರಕಾರಿ ಇತ್ಯಾದಿಗಳನ್ನು ತರಿಸುವುದು. ಅತ್ತಿಗೆ, ರಾತ್ರಿ ಮಲಗುವ ಮುನ್ನ, ಕೆಲಸದವರು ಎಲ್ಲರ ಹಾಸಿಗೆಗಳನ್ನು ಚೆನ್ನಾಗಿ ಕೊಡವಿ ಹಾಕಿದ್ದಾರೊ ಇಲ್ಲವೋ, ಎಲ್ಲಾ ರೂಮ್ ಗಳಲ್ಲೂ ಕುಡಿಯುವ ನೀರು ಇಟ್ಟಿದ್ದಾರೊ ಇಲ್ಲವೋ ಎಂಬಂತಹ ಸಣ್ಣ ಪುಟ್ಟ ವಿಷಯಗಳನ್ನೂ ಕೂಲಂಕಷವಾಗಿ ಪರಿಶೀಲಿಸುತ್ತಿದ್ದಳು. ಅದೆಷ್ಟು ಬೇಗ ಎಲ್ಲವನ್ನೂ ಕಲಿತುಬಿಟ್ಟಿದ್ದಾಳೆ…. ಇವಳು ಯೋಚಿಸುತ್ತಲೇ ಇದ್ದಳು.

“ನೀವು ತುಂಬಾ ಚೆನ್ನಾಗಿ ಮನೆ ನೋಡಿಕೊಳ್ತೀರಾ……” ಎಂದು ಇವಳು ಅತ್ತಿಗೆಯನ್ನು ಪ್ರಶಂಸಿಸಿದಳು.

“ಅಯ್ಯೋ ನನಗೇನು ಗೊತ್ತಿತ್ತು. ಎಲ್ಲಾ ಅತ್ತೆಯನ್ನು ನೋಡಿ ಕಲಿತುಕೊಂಡೆ,” ಎಂದು ಸಂಕೋಚದಿಂದ ಉತ್ತರಿಸಿದಳು ಅತ್ತಿಗೆ.

“ಡೆಲಿವರಿಗೆಂದು ತವರುಮನೆಗೆ ಹೋಗುವಿರಾ…..?” ಎಂದು ಇವಳು ಮಾತು ಮುಂದುವರಿಸಿದಳು.

“ಇಲ್ಲ….. ಇವರು ಅಲ್ಲಿ ಕಂಫರ್ಟೆಬಲ್ ಆಗಲಿಕ್ಕಿಲ್ಲ ಎನ್ನುತ್ತಿದ್ದಾರೆ. ಅತ್ತೆ ಕೂಡ ಹಾಗೇ ಹೇಳುತ್ತಿದ್ದಾರೆ. ಅತ್ತೆಯಂತೂ ಈಗಿನಿಂದಲೇ ಬಾಣಂತನಕ್ಕೆ ತಯಾರಿ ಶುರು ಮಾಡಿಬಿಟ್ಟಿದ್ದಾರೆ,” ಎಂದು ನಾಚಿಕೆಯಿಂದ ಹೇಳಿದಳು.

janaki-2

ಇವಳು ಯೋಚಿಸತೊಡಗಿದಳು, `ಇವರು ಕಂಫರ್ಟೇಬಲ್ ಆಗಲಿಕ್ಕಿಲ್ಲ,’ `ಅತ್ತೆ ಕೂಡ ಹಾಗೇ ಹೇಳುತ್ತಿದ್ದಾರೆ,’ ಏನಿದೆಲ್ಲ? ಎಲ್ಲ ಇನ್ನೊಬ್ಬರ ಅಭಿಪ್ರಾಯದಂತೆಯೇ ಆಗಬೇಕೆ? ಇವಳಿಗೆ ಸ್ವಂತಿಕೆ ಎನ್ನುವುದೇ ಇಲ್ಲವೇ? ಆದರೂ ಮನದ ಮೂಲೆಯಲ್ಲಿ ಯಾವುದೊ ಒಂದು ಕೊರತೆ ಕೊರೆಯತೊಡಗಿತು.

ಮರಳಿ ತನ್ನ ಗಂಡನ ಮನೆಗೆ ತೆರಳುವ ದಿನ ಬೆಳ್ಳಂ ಬೆಳಗ್ಗೆಯೇ ಅಣ್ಣ ಎದುರಾಗಿದ್ದನ್ನು ಕಂಡು, “ಏನಣ್ಣ, ನೀನು ಇಷ್ಟು ಬೆಳಗ್ಗೆಯೇ ಎದ್ದುಬಿಟ್ಟಿರುವೆಯಾ?” ಎಂದು ಅಚ್ಚರಿ ವ್ಯಕ್ತಪಡಿಸಿದಳು.

“ನಿನ್ನ ಈ ಅತ್ತಿಗೆ ನನ್ನನ್ನು ಮಲಗಲು ಬಿಡಬೇಕಲ್ಲ. ಅಕ್ಕಾ ಹೊರಟಿದ್ದಾರೆ, ಎದ್ದೇಳು, ಎದ್ದೇಳು ಎಂದು ಬಲವಂತ ಮಾಡಿ ಎಬ್ಬಿಸಿದಳು,” ಎನ್ನುತ್ತಾ ಅಣ್ಣ ಪ್ರೀತಿಯಿಂದ ಅತ್ತಿಗೆಯತ್ತ ಕುಡಿನೋಟ ಬೀರಿದ.

“ಮತ್ತೇ ಎಬ್ಬಿಸದೇ ಇದ್ದರೆ, ಆಮೇಲೆ ನೀವೇ ಏಕೆ ಎಬ್ಬಿಸಲಿಲ್ಲ ಅಂತ ನನ್ನ ಮೇಲೇನೇ ದೋಷಾರೋಪ ಮಾಡ್ತಿರಲ್ಲ,” ಎಂದ,

ಅತ್ತಿಗೆಯ ಮಾತು ಇವಳ ಅಂತರಾತ್ಮವನ್ನೇ ಕುಟುಕಿತ್ತು. ಆಗಲೇ ಅವಳಿಗೆ ಹಿಂದಿನ ಒಂದು ಘಟನೆ ನೆನಪಾಯಿತು. ಒಂದು ಸಲ ನಾದಿನಿ ಊರಿಗೆ ಹೊರಟಿದ್ದಳು. ಸತೀಶ್‌ ಇನ್ನೂ ಗಾಢ ನಿದ್ದೆಯಲ್ಲಿದ್ದ. ಕದ ತಟ್ಟುವ ಸದ್ದು ಕೇಳಿದರೂ ಇವಳಿನ್ನೂ ತೆಪ್ಪಗೆ ಮಲಗಿದ್ದಳು. ಎಚ್ಚರವಾದಾಗ ಸತೀಶ್‌ ಕೂಡ ಹೀಗೇ ಏನೋ ಒಂದು ಹೇಳಿದ್ದ. ಇಡೀ ದಿನ ಅವನ ಮೂಡ್‌ ಹಾಳಾಗಿತ್ತು. ಈಗ ತಾನೂ ಹಾಗೇ ಹೊರಟುಹೋಗಿದ್ದರೆ? ಇಲ್ಲಿ ಅಣ್ಣ ಕೂಡ ಅತ್ತಿಗೆ ಮೇಲೆ ರೇಗಿ ಇಡೀ ದಿನ ಮೂಡ್‌ ಹಾಳು ಮಾಡಿಕೊಳ್ಳುತ್ತಿದ್ದ. ಈ ಹುಡುಗಿ ನೋಡಲು ತುಂಬಾ ಮುಗ್ಧೆ. ಆದರೆ ಸಂಸಾರದಲ್ಲಿ ತುಂಬಾ ಜಾಣೆ, ಎಂದು ಆಲೋಚಿಸುತ್ತಲೇ ಇದ್ದಳು.

“ಶೀಘ್ರದಲ್ಲೇ ನನ್ನ ಸೊಸೆ ಗುಡ್‌ ನ್ಯೂಸ್‌ ಕೊಡಲಿದ್ದಾಳೆ, ಆ ಸಮಯಕ್ಕೆ ನೀನೂ ಒಂದಿಷ್ಟು ದಿನ ಇಲ್ಲಿಗೆ ಬಂದುಬಿಡು. ನನಗೂ ಒಂಚೂರು ಸಹಾಯವಾಗುತ್ತೆ. ನನಗಂತೂ ಈಗಲೇ ಗಾಬರಿಯಾಗುತ್ತಿದೆ,” ಎಂದು ಅಮ್ಮ ಇವಳಿಗೆ ಅಡ್ವಾನ್ಸ್ ಆಹ್ವಾನ ನೀಡಿದರು. ಅಮ್ಮನ ಮುಖದಲ್ಲಿ ಉತ್ಸಾಹ ಎದ್ದು ಕುಣಿಯುತ್ತಿತ್ತು.

ಇವಳಿಗೆ ಹೊರಡುವ ಸಮಯಕ್ಕೆ ಸರಿಯಾಗಿ ಮನಸ್ಸು ವಿಹ್ವಲಗೊಂಡಿತ್ತು. ಅದೇಕೊ ಗೊತ್ತಿಲ್ಲ? ಅವಳು ಖುಷಿ ಖುಷಿಯಾಗೇ ಇರಬೇಕಾಗಿತ್ತು. ತನ್ನೆಲ್ಲ ಶಂಕೆಗಳು ಗಾಳಿ ಗೋಪುರವಾಗಿದ್ದವು. ಇಲ್ಲಿ ಎಸ್ಸಾ ಚೆನ್ನಾಗಿಯೇ ಇದೆ. ಅಪ್ಪ, ಅಮ್ಮ, ಅಣ್ಣ, ಅತ್ತಿಗೆ ಎಲ್ಲರೂ ಸಂತಸದಿಂದಲೇ ಇದ್ದಾರೆ. ಆದರೂ ನನ್ನಲ್ಲೇಕೆ ಈ ಆಂದೋಲನ? ಬಹುಶಃ ಅಮ್ಮನ ಎಲ್ಲಾ ಮಾತುಗಳಿಗೂ ಅತ್ತಿಗೆ ಪ್ರಾಮುಖ್ಯತೆ ನೀಡುತ್ತಿರುವುದು ಅಥವಾ ಅವಳಿಗೀಗ ತನ್ನ ತವರುಮನೆಯ ನೆನಪೇ ಆಗುತ್ತಿಲ್ಲವೇನೋ, ಇಲ್ಲಾ ಅಣ್ಣ ಅತ್ತಿಗೆಯರ ಮಧ್ಯದ ಪ್ರೀತಿ…. ಆದರೆ ಸತೀಶ್‌ ಕೂಡ ಅವಳ ಮೇಲೆ ಪ್ರೀತಿಯ ಸುರಿಮಳೆ ಸುರಿಸುತ್ತಿದ್ದ. ಹಾಗಾದ್ರೆ ಮತ್ತಿನ್ನೇನು ಇವಳನ್ನು ಕುಟುಕುತ್ತಿರುವುದು. ತನ್ನ ಬದುಕನ್ನು ಕೇವಲ ಸತೀಶನಿಗೆ ಮಾತ್ರ ಸೀಮಿತಗೊಳಿಸಿ ಕೊಂಡಿರುವುದು ಅವಳಿಗೀಗ ಅರ್ಥವಾಯಿತು. ಇದಕ್ಕಿಂತಲೂ ಹೆಚ್ಚು ಅವಳು ಯೋಚಿಸಲು ಸಾಧ್ಯವೇ ಇರಲಿಲ್ಲ. ತನ್ನ ಅಪ್ಪ ಊರಿಗೆ ಬಂದಾಗ ಒಂದು ಸಲ ಸ್ಪಷ್ಟವಾಗಿ ಹೇಳಿಯೇಬಿಟ್ಟಿದ್ದಳು, “ಅಮ್ಮ, ನೀನು ಬೆಳಗ್ಗೆ 6 ಗಂಟೆಗೇ ಹೊರಡುವೆನೆಂದು ಎದ್ದುಬಿಡಬೇಡ. ನಾಳೆ ಸತೀಶ್‌ಗೆ ರಜೆ ಇದೆ. ಸ್ವಲ್ಪ ತಡವಾಗಿ ಎದ್ದೇಳುತ್ತೇವೆ,” ಎಂದಿದ್ದಳು.

ಇದನ್ನು ಕೇಳಿ ಸತೀಶ್‌ ಹಾಗೂ ಅವರ ಅಪ್ಪ, ಅಮ್ಮ ಮುಖ ಮುಖ ನೋಡಿಕೊಳ್ಳುವಂತಾಗಿತ್ತು. ವಿವಾಹ ಎನ್ನುವುದು ಕೇವಲ ಎರಡು ದೇಹ ಮತ್ತು ಆತ್ಮಗಳ ಸಮಾಗಮವಲ್ಲ, ಅದು ಎರಡು ಕುಟುಂಬಗಳ ಸಮ್ಮಿಲನ ಹೌದು ಮತ್ತು ಇದನ್ನು ಅತ್ತಿಗೆ ಸಾಬೀತುಪಡಿಸಿದ್ದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ