“ಕೋಳಿ ಕಳ್ಳ ನಂಬರ್‌ 4…..” ಎಂದು ನಗುತ್ತಾ ಪೂರ್ಣಿಮಾ ಕೂಗಿದಾಗ ಉಳಿದೆಲ್ಲ ಮಹಿಳಾ ಮಣಿಯರೂ ಕಿಲಕಿಲನೆ ನಗತೊಡಗಿದರು.

ಕೊಂಚ ಮುನಿಸಿಕೊಂಡ ರೇಣುಕಾ, “ಪೂರ್ಣಿಮಾ, ಪ್ಲೀಸ್‌ ಹಾಗೆಲ್ಲ ಮಾಡಬೇಡ ಕಣೇ ನಂಬರ್‌ ಮಿಸ್‌ ಆಗುತ್ತದೆ. ಚೆನ್ನಾಗಿ ಕಲಕಿ ಹಾಕು,” ಎಂದು ಹೇಳಿದಳು.

ಸ್ನೇಹಾ ಮತ್ತು ಮಿಸೆಸ್‌ ಪಾಟೀಲ್‌, ಪರಸ್ಪರ ಫೆವಿಕಾಲ್ ‌ಅಂಟಿಸಿಕೊಂಡ ರೀತಿಯಲ್ಲಿ ಒಂದು ಮೂಲೆಯ ಸೋಫಾದ ಮೇಲೆ ಕುಳಿತಿದ್ದರು. ಪಾರ್ಟಿಗೆ ಬಂದಾಗಿನಿಂದಲೇ ಅವರ ಮಧ್ಯೆ ಗುಸುಗುಸು ಪಿಸುಪಿಸು ಆರಂಭವಾಗಿತ್ತು.

“ಡುಮ್ಮು ಸೇಠ್‌ ನಂಬರ್‌ 8,” ಎಂದು ಕೂಗಿದಳು ಪೂರ್ಣಿಮಾ.

ಸ್ನೇಹಾ ತನ್ನ ಹಾಸ್ಯಭರಿತ ಧ್ವನಿಯಲ್ಲಿ ಬಿನ್ನಾಣದ ನಗೆ ಬೀರುತ್ತ, “ಪೂರ್ಣಿಮಾ, ನೀನೀಗ?`ಒನ್‌ ಫ್ಯಾಟ್‌ ಮೇಜರ್‌ ನಂಬರ್‌ 8′ ಅಂತಾ ಕರೆಯೋದನ್ನು ನಿಲ್ಲಿಸಿಬಿಟ್ಟೆಯಾ?” ಎಂದು ನಗೆ ಚಟಾಕಿ ಹಾರಿಸಿದಳು.

ಭಯಭೀತಳಾದ ಪೂರ್ಣಿಮಾ? “ಏನು ಮಾಡ್ಲಿ ಸ್ನೇಹಾ? ಹಿಂದೆ ಒಂದ್ಸಲ ರೇಣುಕಾಳ ಕಿಟಿ ಪಾರ್ಟಿಯಲ್ಲಿ ಮಿಸೆಸ್‌ ಪಾಟೀಲ್ ‌ಬೇಸರ ಮಾಡಿಕೊಂಡಿದ್ದಳಲ್ಲ!” ಎಂದು ಮಾತು ತೇಲಿಸಿದಳು.

ಮಿಸೆಸ್‌ ಪಾಟೀಲ್ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ, “ಹೆ….ಹ್ಹೆ…..ಹ್ಹೆ….. ಹಾಗೇನಿಲ್ಲಪ್ಪ! ಮಿಸ್ಟರ್‌ಪಾಟೀಲ್ ‌ಈಗ ಕರ್ನಲ್ ಆಗಿದ್ದಾರೆ. ಅವರ ವೆಯ್ಟ್ ಕೂಡ ಭಾರಿ ಕಡಿಮೆಯಾಗಿದೆ. ಇದೆಲ್ಲ ಒಂಥರಾ ಗೇಮ್ ಅಲ್ವಾ? ಸ್ಪೋರ್ಟಿವ್ ಆಗಿ ತಗೋಬೇಕು,” ಎಂದಳು.

ನಡುವೆ ಬಾಯಿ ಹಾಕಿದ ಸ್ವೀಟಿ, “ಇದೇನಿದು ಮಿಸೆಸ್‌ ಪಾಟೀಲ್‌? ಅಷ್ಟೊಂದು ಆತ್ಮವಿಶ್ವಾಸದಿಂದ ಹೇಳುತ್ತಿರುವಿರಲ್ಲ. ಪ್ರತಿದಿನ ಕರ್ನಲ್ ರನ್ನು ತೂಕಕ್ಕೆ ಹಾಕುತ್ತೀರೇನು?” ಎನ್ನುತ್ತಾ ಮತ್ತೊಂದು ಬಾಂಬ್‌ ಸಿಡಿಸಿದಳು.ಇದನ್ನು ಕೇಳಿದ ಎಲ್ಲಾ ಸದಸ್ಯರೂ ಕಿಲಕಿಲ ನಗತೊಡಗಿದರು. ಮಿಸೆಸ್‌ ಪಾಟೀಲ್ ‌ಕೂಡ ಬಲವಂತದ ನಗೆವೊಂದನ್ನು ನಕ್ಕು ಮೌನವಾದಳು.

“ಪೂರ್ಣಿಮಾ, ಬೇಗ ಶುರು ಮಾಡಮ್ಮ ನಿನ್ನ ತಂಬೋ……ಲಾ. ಇವತ್ತು ನನ್ನ ನಾದಿನಿ ಕೂಡ ಬಂದಿದ್ದಾಳೆ,” ಎಂದು ಸ್ನೇಹಾ ಕೊಂಚ ಗಟ್ಟಿಯಾಗಿಯೇ ಕೂಗಿದಳು.

ಆಗ ಎಚ್ಚೆತ್ತುಕೊಂಡ ರೇಣುಕಾ, “ಅಯ್ಯೋ ಹೌದು, ಮಧ್ಯಾಹ್ನ ಅನ್ನುವಷ್ಟರಲ್ಲಿ ನನ್ನ ಮಗು ಕೂಡ ಸ್ಕೂಲಿಂದ ಬಂದುಬಿಡುತ್ತೆ…..” ಎಂದು ದನಿಗೂಡಿಸಿದಳು.

ದೊಡ್ಡ ಸ್ಟೇನ್‌ಲೆಸ್‌ ಸ್ಟೀಲ್ ಡಬ್ಬವೊಂದರಲ್ಲಿ ಹಾಕಿಡಲಾಗಿದ್ದ, ಚಿಕ್ಕ ಚಿಕ್ಕ ನೀಲಿ ಬಣ್ಣದ ಪ್ಲಾಸ್ಟಿಕ್‌ ನಂಬರ್‌ ಕಾಯಿನ್‌ಗಳನ್ನು ಚೆನ್ನಾಗಿ ಕುಲುಕಿದಳು ಪೂರ್ಣಿಮಾ. ನಂತರ ಠಣ್‌ ಠಣಾ ಠಣ್‌ ಎಂದು ಸದ್ದು ಮಾಡುತ್ತಿದ್ದ ಸ್ಟೀಲ್ ಡಬ್ಬಿಯಿಂದ ಒಂದು ಕಾಯಿನ್ ಮೇಲೆತ್ತಿದಳು,

“ಟೆಂಡರ್‌ ಏಜ್‌,” ಎಂದು ಕೂಗಿದಳು.

ಆಗ ಸ್ವೀಟಿ, “ಸೆಕೆಂಡ್‌ ಲೈನ್‌ ಪ್ಲೀಸ್‌….” ಎನ್ನುತ್ತ ಮೇಲೆದ್ದಳು. ಸ್ವೀಟಿಯ ಸೆಕೆಂಡ್‌ ಲೈನ್‌ ಕಂಪ್ಲೆಟ್‌ ಆಯಿತು.

“ಬನ್ನಿ, ಚೆಕ್‌ ಮಾಡಿಸಿಕೊಳ್ಳಿ…..” ಎಂದಳು ರೇಣುಕಾ.

“ರೇಣುಕಾ ಇವಳನ್ನೇ ಬೋಗಿಯನ್ನಾಗಿ ಮಾಡು. ಸಕತ್ತಾಗಿರುತ್ತೆ!” ಎಂದು ಸ್ನೇಹಾ ಟಾಂಟ್‌ ಹೊಡೆದಳು.

ಆದರೆ ಟೀಮ್ ನಲ್ಲಿ ಸ್ವೀಟಿಯದು ಅಂಥದ್ದೇನು ಇಂಪ್ರೆಶನ್‌ ಇರಲಿಲ್ಲ. ಅವಳು ಆಟದಲ್ಲಿ ಸುಮಾರು ಸಲ ಮೋಸ ಮಾಡುವಾಗೆಲ್ಲ ಸಿಕ್ಕಿಬಿದ್ದಿದ್ದಳು. ತುಂಬ ಜಗಳಗಂಟಿ ಕೂಡ. ಜಟ್ಟಿ ಸೋತರೂ ಮೀಸೆ ಮಣ್ಣಾಗಲಿಲ್ಲವಂತೆ, ಹೀಗೆ ಇವಳು. ಕೊನೆಗೂ ಈ ಸಲ ಒಳ್ಳೆಯ ನಂಬರ್‌ ಬಂದಿತ್ತು.

“ತೆಗಿ ಐವತ್ತು ರೂಪಾಯಿ….” ಎಂದು ಗೆದ್ದ ಉತ್ಸಾಹದಲ್ಲಿ ಸ್ವೀಟಿ ಕೇಳಿದಳು.

ಪೂರ್ಣಿಮಾ ಹಣ ಕೊಟ್ಟ ನಂತರ, “ಲವ್ಲಿ ಲೆಗ್ಸ್ ನಂಬರ್‌,” ಎಂದು ಕೂಗಿದಳು.

ಮಿಸೆಸ್‌ ಪಾಟೀಲ್‌ರ ಗುಸುಗುಸು ಪಿಸುಪಿಸು ಎಂದಿನಂತೆ ಜಾರಿಯಲ್ಲಿತ್ತು. ಅವರು ಹಗಲಿನಲ್ಲೇ ನಕ್ಷತ್ರ ಎಣಿಸುವ ಗುಂಗಿನಲ್ಲಿ ಮುಳುಗಿಹೋಗಿದ್ದರು. ಮನೆ ತುಂಬ ಕಿಲಕಿಲ ನಗುವಿನ ವಾತಾವರಣ ಹರಡಿಕೊಂಡಿತ್ತು. ತಂಬೋಲಾದಲ್ಲಿ ಭಾಗವಹಿಸಬೇಕಾಗಿದ್ದ ಮೂರ್ನಾಲ್ಕು ಜನ ಮಹಿಳೆಯರು ಕೂಡ ಮಿಸೆಸ್‌ ಪಾಟೀಲ್ ಹೇಳುವ ಬಣ್ಣದ ಮಾತುಗಳಿಗೆ ಮರುಳಾಗಿ ಲೆಕ್ಚರ್‌ ಕೇಳುವುದರಲ್ಲಿ ತಲ್ಲೀನರಾಗಿದ್ದರು.

ಮಿಸೆಸ್‌ ಪಾಟೀಲ್ ಹೇಳುತ್ತಿದ್ದಳು, “ಅರೆ ಆಡಿಸುವುದೆಂದರೇನು? ನನ್ನ ಫ್ರೆಂಡ್‌ ವೀಣಾ ತಂಬೋಲಾ ಆಡಿಸುವುದನ್ನು ನೋಡಿದರೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಬೇಕು ಹಾಗೆ ಆಡಿಸುತ್ತಾಳೆ.”

ಆಗ ಪೂರ್ಣಿಮಾ ಮತ್ತೆ ಕೂಗಿದಳು, “ಆಲ್ವೇಸ್‌ ಫಸ್ಟ್ ನಂಬರ್‌”ಪುಷ್ಪಾ ಮೂಗು ಮುರಿಯುತ್ತಾ, “ಇನ್ನೊಂದೇ ನಂಬರ್‌ ಆದರೆ ಸಾಕು ಪೂರ್ಣಿಮಾ. ಬೇಗ ಬೇಗ ಕೂಗು,” ಎಂದಳು.

ಸ್ವೀಟಿ ಚೀಟಿಯಲ್ಲಿದ್ದ ನಂಬರನ್ನು ಬೋರ್ಡ್‌ ಮೇಲಿದ್ದ ನಂಬರ್‌ಗಳೊಂದಿಗೆ ತಾಳೆ ಹಾಕುತ್ತಿದ್ದಳು.

ಆಗ ಸ್ನೇಹಾ, “ಮಿಸೆಸ್‌ ಶಾಸ್ತ್ರೀಯಿಂದ ಬರಬೇಕಾದ ಹಣದ ಕುರಿತಾಗಿ ಏನು ಮಾಡುವುದು?” ಎಂದಳು.

ಪೂರ್ಣಿಮಾಳ ಚಿಕ್ಕ ಮಗ ಡಬ್ಬದಲ್ಲಿದ್ದ ನಂಬರ್‌ ಕಾಯಿನ್‌ಗಳ ಜೊತೆ ಆಟವಾಡತೊಡಗಿದ್ದ. ಬಹುತೇಕ ಮಹಿಳೆಯರ ಗಮನ ಆ ಮಗುವಿನತ್ತಲೇ ಇತ್ತು. ಅವರೆಲ್ಲರಿಗೂ ತಮಗೆ ಬರಬೇಕಾದ ನಂಬರನ್ನು ಅವನು ಏನಾದ್ರೂ ಹೆಚ್ಚು ಕಡಿಮೆ ಮಾಡಿಯಾನು ಎಂಬ ಭಯ ಇತ್ತು.

ಇದನ್ನು ಕಂಡು ಕಳವಳಗೊಂಡ ಪೂರ್ಣಿಮಾ, “ರಾಜು…. ಪ್ಲೀಸ್‌ ಹೊರಗಡೆ ಹೋಗಿ ಆಟವಾಡು. ಅಲ್ಲಿ ನಿನ್ನ ಎಷ್ಟೊಂದು ಜನ ಸ್ನೇಹಿತರಿದ್ದಾರೆ  ಹೋಗು ಅವರೊಂದಿಗೆ ಆಟವಾಡು,” ಎಂದು ಪುಸಲಾಯಿಸಿದಳು.

ರೇಣುಕಾ ಎಲ್ಲರನ್ನೂ ಕಮಾಂಡ್‌ ಮಾಡು ಧ್ವನಿಯಲ್ಲಿ ಒಂದು ಸೂಚನೆ ನೀಡಿದಳು, “ಅಯ್ಯೋ, ಈ ಕಿಟಿ ಪಾರ್ಟಿಯನ್ನು ಭಾನುವಾರವೇ ಇಟ್ಟುಕೊಳ್ಳಬೇಕಪ್ಪ. ಏಕೆಂದರೆ ಯಜಮಾನರು ಮನೆಯಲ್ಲೇ ಇರುತ್ತಾರಲ್ಲ, ಅಟ್‌ ಲೀಸ್ಟ್ ಮಕ್ಕಳನ್ನಾದರೂ ನೋಡಿಕೊಳ್ಳುತ್ತಾರೆ.”

ಸ್ನೇಹಾಳಿಗೆ, ಮಿಸೆಸ್‌ ಶಾಸ್ತ್ರೀಯ ಹಣಕಾಸಿನ ವಿಷಯ ಬಗೆಹರಿಸಬೇಕಾಗಿತ್ತು. ಈಗಾಗಲೇ ಆ ಕುರಿತು ಪ್ರಸ್ತಾಪ ಮಾಡಿದ್ದಳಾದ್ರೂ ಯಾರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಬಹುಶಃ ಮಹಿಳೆಯರೆಲ್ಲ, ಮಿಸೆಸ್‌ ಶಾಸ್ತ್ರೀ ಹಣ ಕೊಡುವುದೇ ಇಲ್ಲ ಎಂದು ನಿರ್ಧರಿಸಿದಂತಿತ್ತು. ಅವಳ ಗಂಡನ ಬಿಸ್‌ನೆಸ್‌ ಲಾಸ್‌ ಆಯಿತಂತೆ. ಅವನ ಪಾರ್ಟ್‌ನರ್‌ ಮೋಸ ಮಾಡಿದ್ದ ಎಂದು ಕೇಳಿ ಬಂತು. ತೀರಿಸಬೇಕಾದ ಸಾಲ ತೀರಿಸಲಾಗದೇ ಊರೇ ಬಿಟ್ಟು ಹೋದರಂತೆ. ಆದರೆ ಸ್ನೇಹಾ ಇದಕ್ಕೆಲ್ಲ ಜಗ್ಗುತ್ತಾಳೆಯೇ?

ಇದೀಗ ನೇರವಾಗಿ ಪೂರ್ಣಿಮಾಳನ್ನೇ ಕೇಳಿದಳು, “ಪೂರ್ಣಿಮಾ, ನಿನ್ನ ಫ್ರೆಂಡ್‌…. ಚೀಟಿ ಎತ್ಕೊಂಡು ಪರಾರಿಯಾಗಿಬಿಟ್ಟಳಾ?” ಎಂದು ಗುರಾಯಿಸಿದಳು.

ಒಂದಿಬ್ಬರು ಮಹಿಳೆಯರು ಮುಸಿಮುಸಿ ನಗತೊಡಗಿದರು. ಕೋಪದ ಭರಾಟೆಯಲ್ಲಿ, ಇಂತಹ ಹೈ ಪ್ರೊಫೈಲ್ ‌ಸೊಸೈಟಿಯಲ್ಲಿ ಚೀಟಿ ಎನ್ನಬಾರದು ಕಿಟಿ ಎನ್ನಬೇಕು ಎಂಬುದನ್ನು ಸ್ನೇಹಾ ಮರೆತುಬಿಟ್ಟಿದ್ದಳು.

ಪೂರ್ಣಿಮಾ ಸಮಜಾಯಿಷಿ ನೀಡಿದಳು, “ಏನ್ಮಾಡ್ತಾಳೆ ಪಾಪ….. ಅವರ ಬಿಸ್‌ನೆಸ್‌ ಲಾಸ್‌ ಆಗಿಹೋಯ್ತಲ್ಲ.”

ಇದೀಗ ಮಿಸೆಸ್‌ ಪಾಟೀಲ್ ‌ಮುತ್ತು ಉದುರಿಸಿದಳು, “ಅದಕ್ಕೇ ನಮ್ಮನ್ನೂ ಲಾಸ್‌ ಮಾಡಿ ಹೋದಳೇನೋ?”

ನಂತರ ಪೂರ್ತಿ ಪುರಾಣವೇ ಶುರುವಾಯ್ತು.

“ಎರಡು ತಿಂಗಳಿಂದ ಮನೆ ಬಾಡಿಗೆ ಕೂಡ ಕೊಟ್ಟಿಲ್ವಂತೆ.”

“ಅವರದು ತುಂಬಾ ಒಳ್ಳೆಯ ಫ್ಲ್ಯಾಟ್‌. ನಾವೇ ಬಾಡಿಗೆ ತೆಗೆದುಕೊಳ್ಳೋಣ ಅನ್ಕೊಂಡಿದ್ವಿ.”

“ನಮ್ಮನ್ನೆಲ್ಲ ಮುಳುಗಿಸಿಬಿಟ್ಟಳು. ಯಾವ ಮುಖ ಇಟ್ಕೊಂಡು ಅವಳ ಮನೆಗೆ ಹುಡುಕಲು ಹೋಗುವುದು?”

“ನಮ್ಮ ಯಜಮಾನ್ರು ಹೇಳ್ತಿದ್ರು. ಅವರದೆಲ್ಲ ದೊಡ್ಡ ಡ್ರಾಮಾ ಅಂತೆ. ಶಾಸ್ತ್ರೀ ಮೊದಲೇ ಪಾರ್ಟನರ್‌ ಶಿಪ್‌ ಬಿಡು ಪ್ಲ್ಯಾನ್ ಮಾಡಿದ್ದರಂತೆ. ಅದಕ್ಕೇ ಕೊನೆಗಾಲದಲ್ಲಿ ಎಲ್ರಿಗೂ ನಾಮ ಹಾಕಿದ್ದು.”

“ಅವರ ಮನೆಯ ಪಕ್ಕದ ಡಿಪಾರ್ಟ್‌ಮೆಂಟ್‌ ಸ್ಟೋರ್‌ನವನು ಕೂಡ ಗೋಳಾಡುತ್ತಿದ್ದಾನೆ.”

“ಅದೆ ಲಿಲ್ಲಿ ಚೀಟಿ ಎತ್ತಿದ್ದಾಳೋ ಏನೋ?”

“ಜನ ಬಿಡಬೇಕಲ್ಲ….”

“ಮದ್ರಾಸ್‌ನಲ್ಲಿ ಯಾವುದೊ ಕಂಪನಿಯಲ್ಲಿ ಕೆಲಸ ಸಿಕ್ಕಿದೆಯಂತೆ ಅವಳ ಗಂಡನಿಗೆ.”

“ಅವರ ಅಡ್ರೆಸ್‌ ಕೊಡುವ ನಾನೇ ಹೋಗಿ ಹುಡುಕಿ ಎಳೆದುಕೊಂಡು ಬರುತ್ತೇನೆ ಎನ್ನುತ್ತಿದ್ದಾರೆ ನಮ್ಮ ಕರ್ನಲ್.”

“ಪಾಪ…… ಏನೂಂತ ಅವಳೊಂದಿಗೆ ಕಿತ್ತಾಡುವುದು. ಏನೋ ಕೆಟ್ಟಕಾಲ ಬಂದಿದೆ ಅವಳಿಗೆ ಅಷ್ಟೆ.”

“ಪಾ….ಪ…. ಅಂತೆ ಪಾ…..ಪ! ಅವಳೇ ಅಲ್ವಾ ಬೇಕಾಬಿಟ್ಟಿ ಕಿಟಿ ಹಣ ಖರ್ಚು ಮಾಡಿದ್ದು.”

“ಹೇಗಾದರೂ ಸರಿ, ಪ್ರತಿ ತಿಂಗಳು ಕಿಟಿ ತುಂಬುವೆ ಅಂತಾನೇ ಹೇಳಿಹೋಗಿದ್ದಳು…..”

“ಎರಡ್ಮೂರು ತಿಂಗಳು ಕಟ್ಟಿದಳು ಕೂಡ. ಆದರೆ ಆಮೇಲೆ ಕಿಟಿ ಪಾರ್ಟಿಗೂ ಬರಲಿಲ್ಲ, ಕಿಟಿನೂ ಕಟ್ಟಲಿಲ್ಲ.”

“ಮಿಸೆಸ್‌ ಪಾಟೀಲ್‌, ಈಗ ಅವಳಿಂದಾಗಿ ಉಂಟಾದ ನಷ್ಟ ಭರಿಸಲು ನಾವೆಲ್ಲ ಎಷ್ಟೆಷ್ಟು ಹೆಚ್ಚುವರಿ ಹಣ ಹಾಕಬೇಕಾಗುತ್ತೆ?”

“ಒಂದ್ನಿಮಿಷ….. ಡೈರಿಯಲ್ಲಿ ಎಲ್ಲಾ ಲೆಕ್ಕ ಬರೆದಿದ್ದೇನೆ.”

“ಅಯ್ಯೋ ಬೇಗ ಮುಗಿಸಿರಮ್ಮ! ನನ್ನ ಮಗುವಿನ ವ್ಯಾನ್‌ ಬಂದಿರಬಹುದು….” ಎನ್ನುತ್ತಾ ರೇಣುಕಾ ಚಡಪಡಿಸಿದಳು.

ಪೂರ್ಣಿಮಾ ಕೈಗೆ ಬಂದಿದ್ದ ನಂಬರ್‌ನ್ನು ಕೂಗಿಬಿಟ್ಟಳು, “ಬದ್ಮಾಷ್‌ ನಂಬರ್‌.” ಆಗ ಸ್ನೇಹಾ ಕೂಗಿದಳು, “ಪೇರ್‌ ಕಾರ್ನರ್ಸ್ ಪ್ಲೀಸ್‌….”

ಎಲ್ಲರ ಮುಖದಲ್ಲೂ ದುಗುಡ ತುಂಬಿತ್ತು.“ಸ್ವಲ್ಪ ಚೆನ್ನಾಗಿ ಮಿಕ್ಸ್ ಮಾಡಮ್ಮ…..”

“ಇನ್ನೊಂದೇ ನಂಬರ್‌ ಸಾಕಪ್ಪ….”

“ಆಗಲಿ ಸ್ನೇಹಾ, ಆದ್ರೆ ಇನ್ನೂ ಮಿಡ್ಲ್ ಲೈನ್‌ ಫಿಲಪ್‌ ಆಗ್ಬೇಕ್ಲಾ?”

“ಹೌದು ಹೌದು, ವಾಟ್ಸ್ ಹೌಸ್‌ ಕೂಡ.”ಇದೀಗ ಹೌಸ್‌ ಒಂದೇ ಬಾಕಿ ಉಳಿದಿತ್ತು. ಮಿಡ್ಲ್ ಲೈನ್‌ ಕೂಡ ಫಿಲಪ್‌ ಆಗಿಹೋಯ್ತು. ಎಲ್ಲರ ಉಸಿರು ಊದುಗೊಳಿ ತರಹ ಹೊಡೆದುಕೊಳ್ಳತೊಡಗಿತ್ತು. ಮುಖ ಮುದುರಿಕೊಂಡಿದ್ದ. ಯಾರಿಗೆ ಬಹುಮಾನ ಬರುತ್ತೋ ಅಂತ ಕಾತರದಿಂದ ಕುದಿಯತೊಡಗಿದರು.

ಪೂರ್ಣಿಮಾ, “ಸೆಲೆನ್‌….” ಎನ್ನುತ್ತಿದ್ದಂತೆಯೇ ರೇಣುಕಾ ಮತ್ತು ಪುಷ್ಪಾ ಒಟ್ಟಿಗೆ ಪುಟಿದೆದ್ದರು.

`ಎಸ್‌…ಎಸ್‌….” ಇಬ್ಬರಿಗೂ ಹೌಸ್‌ ಡಿಲೈಡ್‌ ಮಾಡಬೇಕಾಯ್ತು. ಚಿಲ್ಲರೆ ಕಾಸಿಗಾಗಿ ತಡವರಿಸುವಂತಾಯಿತು. ಎಲ್ಲರೂ ತಂತಮ್ಮ ಪರ್ಸ್‌ ಚೆಕ್‌ ಮಾಡಿದರೂ ಯಾರಲ್ಲೂ ಛೇಂಜ್‌ ಇರಲಿಲ್ಲ. ಹೇಗೊ ಮ್ಯಾನೇಜ್‌ ಮಾಡಿದ್ದಾಯಿತು.

“ಅರೆ, ಇನ್ನೊಂದು ಗೇಮ್ ಕೂಡ ಆಗಿಯೇ ಬಿಡಲಿ. ಪಾಪ…. ಪೂರ್ಣಿಮಾ ಗೇಮ್ ಆಡಲೇ ಇಲ್ಲ,” ಎಂದರು ಮಿಸೆಸ್‌ ಪಾಟೀಲ್.

“ಅಯ್ಯೋ ಬೇಡ ಬೇಡ ಮಿಸೆಸ್‌ ಪಾಟೀಲ್. ನಮ್ಮತ್ತೆ ಈಗಾಗ್ಲೆ ಬಂದುಬಿಟ್ಟಿರುತ್ತಾರೆ,” ಎಂದು ಮಿಸೆಸ್‌ ಜೈನ್‌ ವಿರೋಧ ವ್ಯಕ್ತಪಡಿಸಿದಳು.

“ಈಗಿನ ಕಾಲದಲ್ಲೂ ಅತ್ತೆಗಂಜಿ ಬದುಕುವುದಾ?” ಎಂದಳು ಸ್ನೇಹಾ.

“ಅತ್ತೆಗೆ ಅಂಜುವುದೇ? ನಮಗೇ…..” ಎಂದು ರೇಣುಕಾ ತನ್ನ ಮಾತೂ ಸೇರಿಸಿದಾಗ ಎಲ್ಲರೂ ಗೊಳ್ಳೆಂದು ನಕ್ಕರು.

“ಅಯ್ಯೋ ನನ್ನ ಮಗನ ವ್ಯಾನ್‌….. ” ರೇಣುಕಾ ಸರಕ್ಕನೆ ಹೊರಟು ನಿಂತಳು.

“ಏಯ್‌ ರೇಣುಕಾ…. ಅದು ಅನ್ಯಾಯ. ಅಲ್ಲಾ ಬಿಸಿ ಬಿಸಿ ಪಕೋಡ, ಬಜ್ಜಿ ರೆಡಿಯಾಗುತ್ತಿವೆ. ತಿಂದು ಕಾಫಿ ಕುಡಿದುಕೊಂಡೇ ಹೋಗಬೇಕು ನೀನು,” ಎಂದಳು ಪೂರ್ಣಿಮಾ.

“ಸಾಕಮ್ಮ ಸಾಕು. ಹೊಟ್ಟೆಯಲ್ಲಿ ಜಾಗಲೇ ಇಲ್ಲದಂತಾಗಿದೆ. ನಿನ್ನ ಇಡ್ಲಿ ಸಾಂಬಾರ್‌ ಸೂಪರ್ರಾಗಿತ್ತು….” ಎನ್ನುತ್ತ ರೇಣುಕಾ ವ್ಯಾನಿಟಿ ಬ್ಯಾಗ್‌ ಹೆಗಲಿಗೇರಿಸಿದಳು.

“ಯಾಕೋ ತುಂಬಾ ಬೆಣ್ಣೆ ಸವರುತ್ತಿರುವೆ….” ಎಂದಳು ಪೂರ್ಣಿಮಾ ಸಂಕೋಚದಿಂದ.ಮಿಸೆಸ್‌ ಪಾಟೀಲ್‌ಳ ಗುಸುಗುಸು ನಿರಾತಂಕವಾಗಿಯೇ ಸಾಗಿತ್ತು,

“ಈ ಇಡ್ಲಿ ಸಾಂಬಾರ್‌ ನನಗಂತೂ ಸಾಕಾಗಿದೆಯಪ್ಪ…. ಎಲ್ಲಿ ಹೋದರೂ ಇಡ್ಲಿ ಸಾಂಬಾರೇ ಇರುತ್ತೆ. ನನ್ನ ಫ್ರೆಂಡ್‌ ವೀಣಾಳ ಮನೆಯಲ್ಲಿ ಕಿಟಿ ಜಬರ್‌ದಸ್ತಾಗಿರುತ್ತೆ. ಏನು ಅವಳು ಮಾಡುವ ಪ್ಯಾಟೀಸ್‌ಗಳು, ಕಟ್ಲೆಟ್‌ಗಳು, ಆಹಾಹಾ…. ರುಚಿ ರುಚಿ ಜಾಮೂನು…..”

ರೇಣುಕಾ ಅವಳ ಮಾತು ಮಧ್ಯದಲ್ಲೇ ತುಂಡವರಿಸುತ್ತಾ, “ಮಿಸೆಸ್‌ ಪಾಟೀಲ್‌, ಮಿಸೆಸ್‌ ಶಾಸ್ತ್ರೀಯವರ ಪಾಲಿನ ಹಣ ಎಷ್ಟು ಕಟ್ಟಬೇಕು ಹೇಳಿ,” ಎಂದಳು.

“ಒಂದು ಅಂದಾಜು ಹೇಳಿ…..” ಎಂದು ಪುಷ್ಪಾ ದನಿಗೂಡಿಸಿದಳು.

“ಇರಿ ಒಂದ್ನಿಮಿಷ ಡೈರಿ ನೋಡಿ ಹೇಳ್ತೀನಿ,” ಎನ್ನುತ್ತಾ ಮಿಸೆಸ್‌ ಪಾಟೀಲ್ ಪರ್ಸ್‌ನಿಂದ ಮಿರುಗುಟ್ಟುವ ಗೋಲ್ಡನ್‌ ಫ್ರೇಮ್ ಕನ್ನಡಕ ತೆಗೆದು ಧರಿಸಿ ಡೈರಿಯ ಪುಟ ತಿರುವುತೊಡಗಿದಳು.

“ಏನ್‌ ಸೂಪರ್ರಾಗಿದೆ ಕನ್ನಡಕ. ಅದ್ಸರಿ, ಅದ್ಯಾವಾಗಿಂದ ನಿನ್ನ ಐಸೈಟ್‌ ವೀಕ್‌ ಆಗಿದ್ದು?” ಎಂದಳು ಸ್ನೇಹಾ.

“ಹೆಹ್ಹೆಹ್ಹೇ…. ಇಲ್ಲಪ್ಪ…. ಇದು ಝೀರೋ ನಂಬರ್‌ನದ್ದು. ಅವತ್ತು ನನ್ನ ಫ್ರೆಂಡ್‌ ವೀಣಾ ಹಾಕಿಕೊಂಡಿದ್ದು ನೋಡಿ ನನಗೂ ತಗೋಬೇಕೆನಿಸಿತು. ಅದಕ್ಕೆ ತಗೊಂಡೆ,” ಎಂದು ಮಿಸೆಸ್‌ ಪಾಟೀಲ್ ‌ಜಂಭದಿಂದ ಹೇಳಿಕೊಂಡಳು.

“ಥೇಟ್‌ ಮಹಾರಾಣಿ ಕಾಲೇಜ್‌ ಪ್ರಿನ್ಸಿ ಥರಾ ಕಾಣ್ತೀರಾ,” ಎಂದು ರೇಣುಕಾ ಕಾಗೆ ಹಾರಿಸಿದಳು.

“ಯಾರಿಗೇನು ಕಮ್ಮಿ ನಾನು? ನೌಕರಿ ಮಾಡುವುದಿಲ್ಲ ಎಂದರೆ ಏನಾಯ್ತು,” ಎಂದ ಪಾಟೀಲ್ ‌ಬಲೂನ್‌ನಂತೆ ಉಬ್ಬಿ ಹೋದಳು.

ಬಿಸಿಬಿಸಿ ಬಜ್ಜಿ, ಪಕೋಡ ಬರುತ್ತಿದ್ದಂತೆ ಎಲ್ಲರೂ ಮಿಸೆಸ್‌ ಶಾಸ್ತ್ರೀಯ ಹಣದ ವಿಷಯ ಮರೆತುಬಿಟ್ಟರು.ಇನ್ನೇನು? ಮಹಿಳೆಯರ ದಂಡು ತಂತಮ್ಮ ಮನೆಗಳಿಗೆ ತೆರಳಲು ಗೇಟ್‌ನತ್ತ ತಂಡೋಪತಂಡವಾಗಿ ಹೊರಬಂದರು. ಮಿಸೆಸ್‌ ಪಾಟೀಲ್ ‌ಉಪನ್ಯಾಸ ಇನ್ನೂ ಮುಂದುವರಿದಿತ್ತು. ಮಿಸೆಸ್‌ ಶಾಸ್ತ್ರೀ ಕಿಟಿ ಭರಿಸಲು ಎಲ್ಲರಿಗೂ ಮಗ್ಗಲು ಮುಳ್ಳಾಗಿ ಪರಿಣಮಿಸಿದ್ದಳು. ಮಿಸೆಸ್‌ ಶಾಸ್ತ್ರೀ ಆಗಾಗ್ಗೆ ಪೂರ್ಣಿಮಾಳ ಮನೆಗೆ ಬಂದು ಹೋಗುತ್ತಿರುತ್ತಾಳೆ ಎಂಬ ಆರೋಪ ಕೇಳಿಬಂದಿತು.

ಇನ್ನೊಂದು ತಂಡ ಹೊಸ ನಮೂನೆಯ ಸೂಟ್‌ಗಳ ಕುರಿತಾಗಿ ಚರ್ಚಿಸುಲ್ಲಿ ತಲ್ಲೀನವಾಗಿತ್ತು. ಇವರಲ್ಲಿ ಸುಮಾರು ಜನ ಪ್ರೌಢ ಮಹಿಳೆಯರಾಗಿದ್ದರೂ ತಾವಿನ್ನೂ ಯುವತಿಯರಂತೆ ಗೋಚರಿಸುವ ಕುರಿತಾದ ಪ್ರಯೋಗಗಳನ್ನು ಜಾರಿಗೊಳಿಸುವಲ್ಲಿ ನಿರತರಾಗಿದ್ದರು. ಮತ್ತೊಂದು ತಂಡ ಗುಂಪಾಗಿ ನಿಂತಿತ್ತು. ಅವರು ಏನೇ ಬಂದರೂ ಎದುರಿಸಲು ಸಿದ್ಧರಿದ್ದರು.

“ನೀನಾದ್ರೂ ಕುಳಿತುಕೊ ಪೂರ್ಣಿಮಾ,” ಎಂದು ಸ್ನೇಹಾ ಆಗ್ರಹಿಸಿದಳು.

“ಅಯ್ಯೋ ಬೇಡ ಕಣಮ್ಮ. ಇವತ್ತು ನಮ್ಮವರು ಬೇಗ ಮನೆಗೆ ಬರುವವರಿದ್ದಾರೆ,” ಎಂದಳು ಪೂರ್ಣಿಮಾ ಸಂಕೋಚದಿಂದ.

“ತುಂಬಾ ಚೆನ್ನಾಗಿತ್ತಮ್ಮ ನಿನ್ನ ಕಿಟಿ ಪಾರ್ಟಿ,” ಎನ್ನುತ್ತ ಮಿಸೆಸ್‌ ಪಾಟೀಲ್ ವ್ಯಂಗ್ಯವಾಗಿ ಹೇಳಿದಳು.

“ಸರಿ… ಬೈ…..” ಎಂದು ಕೆಲವು ಕಂಠಗಳು ಒಕ್ಕೊರಲಿನಿಂದ ಉಲಿದವು.

ಔಪಚಾರಿಕ ನಗೆ ಬೀರುತ್ತ, ಪರಸ್ಪರ ನಮಸ್ಕಾರ ಹೇಳುತ್ತಾ ಬೈಬೈ ಹೇಳಿದರು. ಸಾಲುಸಾಲಾಗಿ ತಂತಮ್ಮ ಮನೆ ಕಡೆಗೆ ಹೋಗುವ ಕಾರುಗಳಲ್ಲಿ ಮೂಟೆ ತುರುಕಿದಂತೆ ಕುಳಿತುಕೊಂಡರು. ಮಿಸೆಸ್‌ ಪಾಟೀಲ್ ‌ಕಾರಿನಲ್ಲಿ ಸ್ವತಃ ಅವಳಿಗೇ ಕುಳಿತುಕೊಳ್ಳಲು ಜಾಗವಿಲ್ಲದಂತಾಯಿತು. ಆದರೂ ಮುದ್ದೆಯಾಗಿ ಕುಳಿತುಕೊಳ್ಳಬೇಕಾಯಿತು.

ಎಲ್ಲರೂ ತೆರಳಿದ್ದನ್ನು ಖಾತರಿಪಡಿಸಿಕೊಂಡ ಮೇಲೆ ಗೇಟನ್ನು ಭದ್ರವಾಗಿ ಮುಚ್ಚಿದ ಪೂರ್ಣಿಮಾ ಲಗುಬಗೆಯಿಂದ ಮೆಟ್ಟಿಲು ಏರತೊಡಗಿದಳು. ಆತುರಾತುರದಿಂದ ಬೀಗ ಹಾಕಿದ್ದ ಬೆಡ್‌ ರೂಮಿನ ಬಾಗಿಲು ತೆರೆದಳು. ಮಿಸೆಸ್‌ ಶಾಸ್ತ್ರೀ ಕಿಟಕಿಯ ಮೂಲಕ ಹೊರಗಿನ ದೃಶ್ಯಾವಳಿ ನೋಡುತ್ತ ನಿಂತಿದ್ದಳು. ಅವಳ ಕೈಯಲ್ಲಿ ಯಾವುದೋ ಒಂದು ಸಿನಿಮಾ ಪತ್ರಿಕೆ ಇತ್ತು. ಮುಖ ಬಾಡಿ ಹೋಗಿತ್ತು, ತಲೆಗೂದಲು ಅಸ್ತವ್ಯಸ್ತಗೊಂಡಿತ್ತು.

ಮಿಸೆಸ್‌ ಶಾಸ್ತ್ರೀ ದೇಶಾವರಿ ನಗೆ ಬೀರುತ್ತ, “ಪೂರ್ಣಿಮಾ, ನಿನ್ನ ಹಣವನ್ನು ಖಂಡಿತ ಕೊಡುತ್ತೇನೆ. ನನ್ನ ಬಗ್ಗೆ ತುಂಬಾ ಗಲಾಟೆಯೇನೂ ಆಗ್ಲಿಲ್ಲ ತಾನೆ?”

ಪೂರ್ಣಿಮಾ ಮಂಚದ ಮೇಲೆ ಕುಸಿದು, “ಇಲ್ಲ ಮಿಸೆಸ್‌ ಶಾಸ್ತ್ರೀ. ಎಲ್ಲಾ ಚೆನ್ನಾಗಿಯೇ ನಡೆಯಿತು. ಮುಂದಿನ ಕಿಟಿ ಪಾರ್ಟಿ ಮಿಸೆಸ್‌ ಪಾಟೀಲ್ ‌ಮನೆಯಲ್ಲಿದೆ. ಮುಂದಿನ ತಿಂಗಳ ಸೆಕೆಂಡ್‌ ಫ್ರೈಡೇ ಫಿಕ್ಸ್ ಆಗಿದೆ.”

ಮಿಸೆಸ್‌ ಶಾಸ್ತ್ರೀ ಕಣ್ಣಲ್ಲಿ ನೀರು ತುಂಬಿತ್ತು. ಕಣ್ಣೀರಂತೂ ಡೂಪ್ಲಿಕೇಟ್‌ ಆಗಿರಲು ಸಾಧ್ಯವಿಲ್ಲ ಬಿಡಿ. ಆದ್ರೆ ಒಂದು ಸಣ್ಣ ಡೌಟ್‌! ಅದು ಮನುಷ್ಯ ಕಣ್ಣೀರೋ ಅಥವಾ ಮೊಸಳೆ ಕಣ್ಣೀರೊ?!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ