ಅನುಶ್ರೀ ಕಿರುತೆರೆಯ ಸ್ಟಾರ್‌ ಆಗಿ ಮೆರೆದಂಥ ಪ್ರತಿಭೆ. ಈಗ ಸ್ಯಾಂಡಲ್ ವುಡ್‌ನಲ್ಲಿ ಸುದ್ದಿ ಮಾಡುತ್ತಿದ್ದಾಳೆ. ಬಿಗ್‌ ಬಾಸ್‌ರಿಯಾಲಿಟಿ ಶೋನಿಂದ ಪಟಪಟ ಮಾತನಾಡುವ ಮಾತಿನಮಲ್ಲಿ ಅನಿಸಿಕೊಂಡ ಅನುಶ್ರೀ, ಇತ್ತೀಚೆಗೆ  `ಬೆಂಕಿಪಟ್ಣ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

“ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಮೇಲೆ ಸಾಕಷ್ಟು ಅವಕಾಶಗಳು ಬಂದವು. ಬಂದದ್ದೆಲ್ಲವನ್ನು ತಗೊಳೊದಿಕ್ಕಾಗೋಲ್ಲ ಅಲ್ವಾ… `ಬೆಂಕಿಪಟ್ಣ’ ಕಥೆ ತುಂಬಾ ಇಷ್ಟವಾಯ್ತು. ಏನೋ ವಿಶೇಷತೆ ಇದೆ ಅಂತ ಮನಸ್ಸಿಗೆ ಹಿಡಿಸಿತು. ನನ್ನ ಚಿತ್ರದಲ್ಲಿ ಬರೊ ಎಮೋಷನ್ಸ್, ಪ್ರೀತಿ ಎಲ್ಲವೂ ಫುಲ್ ಎನರ್ಜಿಟಿಕ್‌, ಕಮರ್ಷಿಯಲ್ ಆಗಿ ಎಲ್ಲರ ಗಮನ ಸೆಳೆಯಲು ಕರೆಕ್ಟ್ ಆದ ಆಫರ್ ಅನಿಸಿತು,” ಎಂದು ಹೇಳುವ ಅನುಶ್ರೀ, ಪಾತ್ರ ಅವಳಂತೆ ಲವಲವಿಕೆಯಿಂದ ಕೂಡಿದೆ ಎನ್ನುತ್ತಾಳೆ. ಕಲ್ಪನಾ, ವಿದ್ಯಾಬಾಲನ್‌ಅವರನ್ನೇ ಪ್ರೇರಣೆಯಾಗಿಟ್ಟುಕೊಂಡಿರುವ ಅನುಶ್ರೀ, “ನನಗೆ ಇವರಿಬ್ಬರನ್ನು ಕಂಡರೆ ತುಂಬಾ ಇಷ್ಟ. ಮಾಡಿದ್ರೆ ಇಂಥ ಪಾತ್ರ ಮಾಡಬೇಕು. ಅವರು ಮಾಡಿರುವ ಎಲ್ಲ ಪಾತ್ರಗಳು ನನಗಿಷ್ಟ. ಕಲ್ಪನಾ ಅವರ ಎಲ್ಲ ಚಿತ್ರಗಳನ್ನು ನಾನು ಅದೆಷ್ಟು ಬಾರಿ ನೋಡಿದ್ದೇನೋ ಗೊತ್ತಿಲ್ಲ.

“ನಾನು `ಶರಪಂಜರ’ ಚಿತ್ರವನ್ನಂತೂ ಲೆಕ್ಕವಿಲ್ಲದಷ್ಟು ಸಲ ನೋಡಿದ್ದೇನೆ,” ಎಂದು ಹೇಳುವ ಅನುಶ್ರೀಗೆ ಜನಪ್ರಿಯತೆ ಬಿಗ್ ಬಾಸ್‌ನಿಂದ ದೊರಕಿತೇ ಎಂದು ಕೇಳಿದಾಗ, “ಹಾಗೇನಿಲ್ಲ, ಈ ಶೋಗೆ ಹೋಗುವುದಕ್ಕೆ ಮೊದಲೇ ನಾನು ಫೇಮಸ್‌ ಆಗಿದ್ದೆ. ನಿರೂಪಕಿಯಾಗಿ, ನಟಿಯಾಗಿ, ನೃತ್ಯಗಾರ್ತಿಯಾಗಿ ಜನಪ್ರಿಯತೆ ಗಳಿಸಿದ್ದೆ. ಆದರೆ ಬಿಗ್‌ ಬಾಸ್‌ ಕಾರ್ಯಕ್ರಮ ಅನುಶ್ರೀ ಏನು? ಅವಳ ಕ್ಯಾರೆಕ್ಟರ್‌ ಹೇಗೆ? ಕಷ್ಟದಿಂದ ಬಂದಂಥ ಹುಡುಗಿ ಅಂತ ತೋರಿಸಿಕೊಟ್ಟಿತು.

Anushree7524

“ನಾನು ಎಲ್ಲರಿಗೂ ಅಚ್ಚುಮೆಚ್ಚಿನ ಹುಡುಗಿಯಾಗುತ್ತಾ ಹೋದೆ. ಅರುಣ್‌ ಸಾಗರ್‌ಗೆ ತಂಗಿಯಾದೆ. ಒಂದು ರೀತಿ ಎಲ್ಲ ಒಳ್ಳೆಯದೇ ಆಗುತ್ತಿದೆ. `ಮುರಳಿ ಮೀಟ್ಸ್ ಮೀರಾ’ ಚಿತ್ರದಲ್ಲಿನ ನಾಯಕಿ ಪಾತ್ರಕ್ಕೆ ಕಂಠದಾನ ಕಲಾವಿದೆ ಅಂತ ರಾಜ್ಯ ಪ್ರಶಸ್ತಿ ಸಿಕ್ಕಿತು. ನನ್ನ ಎಲ್ಲ ಪ್ರಯತ್ನಕ್ಕೂ ಪ್ರತಿಫಲ ಸಿಗುತ್ತಿದೆ.

“ಈಗ `ಬೆಂಕಿಪಟ್ಣ’ ಚಿತ್ರದಲ್ಲಿ ನನ್ನ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಕ್ಕಿದೆ. ನಾನು ಮೂಲತಃ ಮಂಗಳೂರಿನವಳು. ನಟಿಯಾಗಿ ಹೆಸರು ಮಾಡಬೇಕಿದೆ. ಪುನೀತ್‌ ರಾಜ್‌ಕುಮಾರ್‌ ನನ್ನ ಫೇವರಿಟ್‌ ಹೀರೊ,” ಎನ್ನುವ ಅನುಶ್ರೀ, “ನಾನು ಪುನೀತ್‌ ರಾಜ್‌ಕುಮಾರ್‌ರನ್ನು ತುಂಬಾ ಇಷ್ಟಪಡುತ್ತೇನೆ. ಅವರೊಂದಿಗೆ ನಟಿಸುವಾಸೆ, ನಾಯಕಿ ಪಾತ್ರ ಸಿಕ್ಕರೆ ಸಂತೋಷ, ತಂಗಿ ಪಾತ್ರ ಸಿಕ್ಕಿದರೂ ಚಿಂತೆಯಿಲ್ಲ. ಒಟ್ಟಿನಲ್ಲಿ ಅವರ ಪಕ್ಕದಲ್ಲಿ ನಿಂತುಕೊಳ್ಳಬೇಕು. ಯಾರಿಗೆ ಗೊತ್ತು ಅಪ್ಪು ಸಾರ್‌ ಅವರ ತಂಗಿಯಾಗಿ ನಟಿಸಿದ ನಂತರ ನಾಯಕಿ ಛಾನ್ಸ್ ಸಿಗಬಹುದೇನೋ….?” ಎಂದು ಆಸೆಪಡುತ್ತಾಳೆ.

“ನನಗೆ ಸಿನಿಮಾ ನೋಡುವುದು ಮೊದಲಿನಿಂದ ಬೆಳೆದು ಬಂದಂಥ ಒಂದು ಕ್ರೇಜ್‌. ಬಿಡುವು ಸಿಕ್ಕಾಗೆಲ್ಲ ನಾನು ಮಾಡೋ ಕೆಲಸ ಅಂದ್ರೆ ಹಳೆಯ ಚಿತ್ರಗಳನ್ನು ನೋಡೋದು. ನನ್ನ ಫ್ರೆಂಡ್ಸ್ ಯಾವಾಗಲೂ ರೇಗಿಸ್ತಿರ್ತಾರೆ. `ಏನೇ, ಯಾವಾಗ್ಲೂ ಹಳೇ ಪಿಕ್ಚರ್‌ ನೋಡ್ತಿರ್ತಿಯಾ….’ ಅಂತ.

“ಆದ್ರೆ ನಾನು ಹೇಳೋದು, ನಾವು ಹಳೆಯ ಚಿತ್ರಗಳನ್ನು ನೋಡಿ ಸಾಕಷ್ಟು ಕಲಿತುಕೊಳ್ಳಬಹುದು. ಅವರ ಅಭಿನಯ ನೋಡಿಕೊಂಡೇ ನಾವು ಇಷ್ಟು ಮುಂದೆ ಬಂದಿರೋದು ಅಂತ. ಹಾಗಾಗಿ ನನಗೆ ಅವರುಗಳೇ ಗುರುಗಳು,” ಎನ್ನುತ್ತಾಳೆ ಅನುಶ್ರೀ.

ಅನುಶ್ರೀ ಮೊದಲೇ ಮಾತಿನ ಮಲ್ಲಿಯಾಗಿರೋದ್ರಿಂದ ಏನೇ ಪ್ರಶ್ನೆ ಕೇಳಿದ್ರು ಪಟಪಟ ಅಂತ ಉತ್ತರ ಕೊಡುತ್ತಾಳೆ. ಇಲ್ಲಿದೆ ನೋಡಿ ಕೆಲವು ಸ್ಯಾಂಪಲ್ಸ್.

ಡಯೆಟ್‌ ಮಾಡೋ ಹುಚ್ಚು ಇದ್ಯಾ?

Anushree7434copy-1

ಡಯೆಟ್‌ ಅಂದ್ರೆ ಏನು ಅಂತಾನೇ ಗೊತ್ತಿಲ್ಲ. ನಾನು ನಾನ್‌ ವೆಜ್‌ ಪ್ರಿಯೆ. ನನಗೆ ರಾಗಿ ಮುದ್ದೆ, ನಾಟಿ ಕೋಳಿ ಸಾರು ಅಂದ್ರೆ ಪಂಚಪ್ರಾಣ. ಎಂ.ಜಿ. ರೋಡಿಗೆ ಹೋಗಿ ಫಿಶ್‌ ತಿನ್ತೀನಿ. ಅಲ್ಲಿರುವ ಹೊಟೇಲೊಂದರಲ್ಲಿ ಚೆನ್ನಾಗಿರೋ ಫಿಶ್‌ ಸಿಗುತ್ತೆ. ಡಯೆಟ್ ಮಾಡೊಂಥ ಕರ್ಮಗಳು ನನಗಿಲ್ಲ, ಚೆನ್ನಾಗಿ ತಿನ್ತೀನಿ, ತೆಳ್ಳಗಿದ್ದೀನಿ ಅಂತಲ್ಲ. ಏನೇ ತಿಂದರೂ ಇಷ್ಟಪಟ್ಟು ತಿನ್ನಬೇಕು. ಇದು ತಿಂದ್ರೆ ದಪ್ಪ ಅದು ತಿಂದ್ರೆ ಸಣ್ಣ ಅಂತ ಚಿಂತೆ ಮಾಡುತ್ತಾ ತಿಂದರೆ ಖಂಡಿತಾ ದಪ್ಪ ಆಗ್ತಾರೆ. ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಹೊಟ್ಟೆ ತುಂಬಾ ಊಟ ಕಣ್‌ ತುಂಬಾ ನಿದ್ದೆ ಅಂತ ಜುಮ್ ಅಂತ ಲೈಫ್‌ನಲ್ಲಿ ಇದ್ದುಬಿಡಬೇಕು.

ನಿನ್ನ ಆಸೆಗಳು…..?

ಕನ್ಯಾಕುಮಾರಿಯಿಂದ ಸ್ಟಾರ್ಟ್‌ ಮಾಡಿ ಕಾಶ್ಮೀರದವರೆಗೂ ಇಡೀ ಭಾರತ ಸುತ್ತಬೇಕು. ಆನಂತರ ಇಡೀ ಪ್ರಪಂಚಕ್ಕೆ ಒಂದು ರೌಂಡ್‌ ಹಾಕಿಬರಬೇಕು. ನಾನು ತುಂಬಾನೆ ಸಿಂಪಲ್, ಹೊರಗಡೆ ಓಡಾಡುವಾಗ ನಾನು ಒಬ್ಬ ನಟಿ ಅಂತ ಯಾರೂ ಗುರುತಿಸುವುದಿಲ್ಲ ಹಾಗಿರ್ತೀನಿ. ತಲೆ ತುಂಬಾ ಎಣ್ಣೆ ಹಚ್ಕೊಂಡು ಸಾಧಾರಣ ಚೂಡಿದಾರ್‌ ಹಾಕ್ಕೊಂಡು ರಸ್ತೆ ಬದಿ ನಿಂತು ಪಾನಿಪುರಿ ತಿನ್ನುತ್ತಿದ್ರೂ ಯಾರೂ ಗುರ್ತಿಸುವುದಿಲ್ಲ.

ಮತ್ತೆ ಬಾಯ್‌ಫ್ರೆಂಡ್ಸ್….?

ಅಯ್ಯೋ ನಾನಷ್ಟು ಪುಣ್ಯ ಮಾಡಿಲ್ಲ! ಇನ್ನು ಬಂದಿಲ್ಲ. ಸದ್ಯಕ್ಕೆ ಬರುವುದೂ ಬೇಡ… ಸುಮ್ನೆ ತೊಂದ್ರೆ, ಸ್ವತಂತ್ರ ಕಳ್ಕೋತೀನಿ. ನಾನು ಮೊದಲು ಲೈಫಲ್ಲಿ ಸೆಟ್ಲ್ ಆಗಬೇಕು. ನಟಿಯಾಗಿ ಪ್ರೂವ್ ‌ಮಾಡಬೇಕು. ಹುಡುಗನ ಬಗ್ಗೆ ಈಗಲೇ ಯೋಚಿಸುತ್ತ ಕುಳಿತರೆ ವೃತ್ತಿಯಲ್ಲಿ ಸಾಧಿಸುವುದಕ್ಕಾಗೋದಿಲ್ಲ. ಎಂಥ ಹುಡುಗ ಇಷ್ಟ ಅಂತ ಕೇಳುವುದಾದರೆ ಒಳ್ಳೆ ಗುಣ ಇರೊಂಥ ಹುಡುಗ ಇದ್ರೆ ಹಣ ತಾನಾಗೆ ಹಿಂದೆ ಬರುತ್ತೆ. ತಾನು ಬದುಕಿ ನನ್ನನ್ನು ಬದುಕಲು ಬಿಡುವಂಥ ಹುಡುಗ ಇಷ್ಟವಾಗುತ್ತೆ.

ನಿನಗೆ ಇಷ್ಟವಾಗುವ ವ್ಯಕ್ತಿ….!

ನನ್ನ ಬದುಕಿನಲ್ಲಿ ಎಲ್ಲವನ್ನು ಕಲಿಸಿಕೊಟ್ಟಂಥ ನನ್ನ ಅಮ್ಮ. ನನ್ನನ್ನು ಬಹಳ ಕಷ್ಟಪಟ್ಚು ಬೆಳೆಸಿದ್ದಾರೆ. ಅಮ್ಮನಿಗೊಂದು ಮನೆ ಕೊಡಿಸೋದು ನನ್ನ ಬಹಳ ದಿನದ ಆಸೆಯಾಗಿತ್ತು. ನಾನು ಶ್ರಮ ವಹಿಸಿ ಅಷ್ಟು ಇಷ್ಟು ಹಣ ಹೊಂದಿಸಿ ಮನೆ ಖರೀದಿಸಲು ತಯಾರಾದ ನಂತರವೇ ಒಂದು ರೀತಿ ಸಮಾಧಾನವಾಯ್ತು. ಈಗ ಕನಸು ನನಸಾಗಿದೆ. ಅಮ್ಮನಿಗಾಗಿ ಒಂದು ಮನೆ ಖರೀದಿಸುತ್ತಿದ್ದೇನೆ. ಅಮ್ಮನನ್ನು ಖುಷಿಯಾಗಿಡೋದೆ ನನ್ನ ಮಹದಾಸೆ!

ಹೀಗೆ ಹೇಳುವ ಅನುಶ್ರೀ ಪ್ರತಿಭಾವಂತ ಕಲಾವಿದೆಯಾಗಿರೋದ್ರಿಂದ ಸಿನಿಮಾದಲ್ಲಿ ಒಳ್ಳೆ ಪಾತ್ರಗಳು ಆಕೆಗೆ ಸಿಗಲಿ, ಒಳ್ಳೆ ಕಲಾವಿದೆಯಾಗಿ ಬೆಳೆಯಲಿ ಎಂದು ವಿಶ್‌ ಮಾಡೋಣ.

– ಜಾಗೀರ್‌ದಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ