ಕ್ರೀಮ್ಡ್ ಪಾಸ್ತಾ ವಿತ್ ಬ್ರೋಕ್ಲಿ
ಸಾಮಗ್ರಿ : ಪಾಸ್ತಾ, ಸಣ್ಣಗೆ ಹೆಚ್ಚಿದ ಬ್ರೋಕ್ಲಿ, ಸೋಯಾ ಹಾಲು (ತಲಾ 1-1 ಕಪ್), 2 ಚಮಚ ಬೆಣ್ಣೆ, 1 ಚಮಚ ಕಾರ್ನ್‌ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ಈರುಳ್ಳಿ ಪೇಸ್ಟ್, ಶುಂಠಿ/ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಟೊಮೇಟೊ, ಅಲಂಕರಿಸಲು ಫ್ರೆಶ್ ಕ್ರೀಂ.
ವಿಧಾನ : ಮೊದಲು ಬಿಸಿ ನೀರಿಗೆ ಪಾಸ್ತಾ ಹಾಕಿ ಬೇಯಿಸಿ, ನೀರು ಬಸಿದು ಬೇರೆ ಮಾಡಿ. ಅದೇ ನೀರಲ್ಲಿ ಬೇರೆಯಾಗಿ ಬ್ರೋಕ್ಲಿಯನ್ನು ಲಘುವಾಗಿ ಬೇಯಿಸಿ. ಹಿಂದಿನ ರಾತ್ರಿ ಸೋಯಾ ನೆನೆಹಾಕಿ ಬೆಳಗ್ಗೆ ಮಿಕ್ಸಿಗೆ ಹಾಕಿ, ರುಬ್ಬಿಕೊಂಡು ಅದರ ಹಾಲು ಸಿದ್ಧಪಡಿಸಿ. ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಒಂದಿಷ್ಟು ಈರುಳ್ಳಿ ಪೇಸ್ಟ್, ಬೆಳ್ಳುಳ್ಳಿ/ಶುಂಠಿ ಪೇಸ್ಟ್, ಟೊಮೇಟೊ, ಉಪ್ಪು, ಮೆಣಸು ಹಾಕಿ ಬಾಡಿಸಿ. ನಂತರ ಹಾಲಲ್ಲಿ ಕದಡಿದ ಕಾರ್ನ್‌ಫ್ಲೋರ್, ಸೋಯಾ ಹಾಲು ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ಚೆನ್ನಾಗಿ ಕುದಿ ಬಂದ ಮೇಲೆ ಅದಕ್ಕೆ ಪಾಸ್ತಾ ಬ್ರೋಕ್ಲಿ ಮಿಶ್ರಗೊಳಿಸಿ. ಕೆಳಗಿಳಿಸಿದ ಮೇಲೆ ಫ್ರೆಶ್ ಕ್ರೀಂ ಬೆರೆಸಿ ಬಿಸಿಯಾಗಿ ಸವಿಯಲು ಕೊಡಿ.
ಆರೆಂಜ್ ಪುಡ್ಡಿಂಗ್
ಸಾಮಗ್ರಿ : 8-10 ಕಿತ್ತಳೆ ಹಣ್ಣು, 1 ಬೆಂದ ಆಲೂಗಡ್ಡೆ, ಅರ್ಧ ಕಪ್ ಪುಡಿಸಕ್ಕರೆ, ಒಂದಿಷ್ಟು ಕಿತ್ತಳೆ ಕುಸುಮೆಗಳು, 2 ಚಿಟಕಿ ಆರೆಂಜ್ ಎಸೆನ್ಸ್.
ವಿಧಾನ : ಮೊದಲು ಜೂಸರ್ ನೆರವಿನಿಂದ ಕಿತ್ತಳೆ ರಸ ಸಿದ್ಧಪಡಿಸಿ. ಬೆಂದ ಆಲೂ ಸಿಪ್ಪೆ ಸುಲಿದು, ಒಂದಿಷ್ಟೂ ಗಂಟಾಗದಂತೆ ಅದನ್ನು ಮಸೆಯಿರಿ. ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿಕೊಂಡು, ಆಲೂ ಸಕ್ಕರೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಇದಕ್ಕೆ ಆರೆಂಜ್ ಜೂಸ್ ಬೆರೆಸಿ, ಸತತ ಕೈಯಾಡಿಸುತ್ತಾ ಕುದಿಸಬೇಕು. ನಂತರ ಕಿತ್ತಳೆಯ ಕುಸುಮೆಗಳನ್ನೂ ಸೇರಿಸಿ ಸಾಕಷ್ಟು ಗಟ್ಟಿಯಾಗುವವರೆಗೂ ಕೈಯಾಡಿಸಬೇಕು. ಆಮೇಲೆ ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. 2-3 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ. ಹಿಂದಿನ ರಾತ್ರಿ ತಯಾರಿಸಿ, ಇಡೀ ರಾತ್ರಿ ಫ್ರಿಜ್‌ನಲ್ಲಿರಿಸಿ ಮಾರನೇ ದಿನ ಸವಿದರೆ ಚೆಂದ!
ಪಾಲಕ್ ರೋಲ್ಸ್
ಸಾಮಗ್ರಿ : 1 ಬಟ್ಟಲು ಬೆಂದ ಪಾಲಕ್ ಸೊಪ್ಪು, 1 ಕಪ್ ಮೈದಾ, 2-2 ಚಮಚ ತುರಿದ ಚೀಸ್ ಕರಗಿದ ಬೆಣ್ಣೆ, 2 ಈರುಳ್ಳಿ, 2 ಟೊಮೇಟೊ, 250 ಗ್ರಾಂ ತುರಿದ ಪನೀರ್, ಸಣ್ಣಗೆ ಹೆಚ್ಚಿದ 2 ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು.
ವಿಧಾನ : ಮೊದಲು ಬೆಂದ ಪಾಲಕ್ ಸೊಪ್ಪನ್ನು ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಒಂದು ಬೇಸನ್ನಿಗೆ ಈ ಮಿಶ್ರಣ, ಮೈದಾ, ಕರಗಿದ ತುಸು ಬೆಣ್ಣೆ, ತುರಿದ ಚೀಸ್, ಉಪ್ಪು, ಮೆಣಸು ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಒಂದು ಬೇಕಿಂಗ್ ಟಿನ್ನಿಗೆ ಜಿಡ್ಡು ಸವರಿ ಅದರ ಮೇಲೆ ಬಟರ್ ಪೇಪರ್ ಹರಡಿಕೊಳ್ಳಿ. ಇದರ ಮೇಲೆ ಸಮನಾಗಿ ಬರುವಂತೆ ಪಾಲಕ್ ಮಿಶ್ರಣ ಹರಡಿರಿ. ಇದನ್ನು 10 ನಿಮಿಷ 200 ಡಿಗ್ರಿ ಶಾಖದಲ್ಲಿ ಬೇಕ್ ಮಾಡಿ. ಹೊರತೆಗೆದ ನಂತರ ಇದನ್ನು ತಿರುವಿಹಾಕಿ, ತಕ್ಷಣ ಮೇಲ್ಭಾಗದ ಪೇಪರ್‌ನ್ನು ಎಚ್ಚರಿಕೆಯಿಂದ ತೆಗೆದುಬಿಡಿ. ಇದರ ಮೇಲೆ ಕ್ಯಾಪ್ಸಿಕಂ ಪಲ್ಯ ಹರಡಿಕೊಂಡು ನೀಟಾಗಿ ರೋಲ್ ಮಾಡಿ. ಚಿತ್ರದಲ್ಲಿರುವಂತೆ ಅದನ್ನು ಚಾಕುವಿನಿಂದ ಕತ್ತರಿಸಿ, ಸೌತೆ ಸುರುಳಿಗಳೊಂದಿಗೆ ಸವಿಯಲು ಕೊಡಿ.
ಸ್ಟಫಿಂಗ್ ಮಿಶ್ರಣ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಕ್ಯಾಪ್ಸಿಕಂ, ಪನೀರ್, ಟೊಮೇಟೊ ಹಾಕಿ ಬಾಡಿಸಿ. ರುಚಿಗೆ ತಕ್ಕಷ್ಟು ಉಪ್ಪು ಮೆಣಸು ಉದುರಿಸಿ ಕೆದಕಿ ಕೆಳಗಿಳಿಸಿ. ಇದನ್ನು ಬೇಕ್ಡ್ ಪಾಲಕ್ ಮೇಲೆ ಹರಡಿ ರೋಲ್ಸ್ ಸಿದ್ಧಪಡಿಸಿ.
ಸ್ಪೆಷಲ್ ಬೆಂಡೆ ಫ್ರೈ
ಸಾಮಗ್ರಿ : ಅರ್ಧ ಕಿಲೋ ಬೆಂಡೆಕಾಯಿ, ಅರ್ಧ ಸೌಟು ಎಣ್ಣೆ, ಒಗ್ಗರಣೆಗೆ ಸಾಸುವೆ ಜೀರಿಗೆ ಕ/ಉ ಬೇಳೆ, ಕರಿಬೇವು, 4-5 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, 5-6 ಉದ್ದನೇ ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ನಿಂಬೆರಸ, ಸೋಯಾಸಾಸ್.
ವಿಧಾನ : ಮೊದಲು ಬೆಂಡೆಕಾಯಿ ಶುಚಿಗೊಳಿಸಿ ಸಣ್ಣದಾಗಿ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಆಮೇಲೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿ. ನಂತರ ಇದಕ್ಕೆ ಬೆಂಡೆಕಾಯಿ ಸೇರಿಸಿ ಹದನಾಗಿ ಬಾಡಿಸಬೇಕು. ಆಮೇಲೆ ಉಪ್ಪು, ಮೆಣಸು, ಸೋಯಾಸಾಸ್ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಇದಕ್ಕೆ ನಿಂಬೆರಸ ಹಿಂಡಿಕೊಂಡು ಬಿಸಿ ಬಿಸಿಯಾಗಿ ರೊಟ್ಟಿ, ಅನ್ನ ತಿಳಿಸಾರಿನ ಜೊತೆ ಸವಿಯಲು ಕೊಡಿ.
ಮಿಶ್ರ ತರಕಾರಿ ಪಲ್ಯ
ಸಾಮಗ್ರಿ : 2-3 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, ಅರ್ಧ ಇಂಚು ಹೋಳಾಗಿ ತುಂಡರಿಸಿದ 2 ಕಪ್ ಝುಕೀನಿ, ಅದೇ ಪ್ರಮಾಣದ ಸಿಹಿ ಕುಂಬಳಕಾಯಿ ಹೋಳು, 2-3 ಹೆಚ್ಚಿದ ಟೊಮೇಟೊ, 1-2 ಹಸಿ ಮೆಣಸಿನಕಾಯಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಒಗ್ಗರಣೆಗೆ ರೀಫೈಂಡ್ ಎಣ್ಣೆ ಸಾಸುವೆ ಜೀರಿಗೆ,
ವಿಧಾನ : ಮೊದಲು ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಕೊಡಿ. ಆಮೇಲೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ಇದಾದ ನಂತರ ಉದ್ದಕ್ಕೆ ಹೆಚ್ಚಿದ ಹಸಿ ಮೆಣಸಿನಕಾಯಿ, ಕುಂಬಳ ಹೋಳು ಹಾಕಿ ಬಾಡಿಸಿ. ಆಮೇಲೆ ಝುಕೀನಿ ಸೇರಿಸಿ ಬಾಡಿಸಬೇಕು. ಸ್ವಲ್ಪ ನೀರು ಚಿಮುಕಿಸಿ ಎಲ್ಲ ಬೆರೆತುಕೊಳ್ಳುವಂತೆ ಕೆದಕಿ, ಮುಚ್ಚಳ ಮುಚ್ಚಿರಿಸಿ ಬೇಯಿಸಿ. ಆಮೇಲೆ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ. ಕೊನೆಯಲ್ಲಿ ತೆಂಗಿನ ತುರಿ, ಉಪ್ಪು, ಮೆಣಸು ಸೇರಿಸಿ. ಕೆಳಗಿಳಿಸಿದ ಮೇಲೆ ಕೊ.ಸೊಪ್ಪು ಉದುರಿಸಿ, ಬಿಸಿಯಾಗಿ ಚಪಾತಿ ಜೊತೆ ಸವಿಯಲು ಕೊಡಿ.
ಬದನೆ ಚೀಸ್ ಡಿಲೈಟ್
ಸಾಮಗ್ರಿ : 4-5 ಗುಂಡು ಬದನೆ, ಅರ್ಧ ಸೌಟು ಎಣ್ಣೆ, 2-3 ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, 3-4 ಚಮಚ ಪ್ಯಾರಮೀಸನ್ ಚೀಸ್‌ರವೆಕೋಟ ಚೀಸ್ (ರೆಡಿಮೆಡ್ ಲಭ್ಯ), 2-3 ಟೊಮೇಟೊ, ಅರ್ಧ ಕಪ್ ತುರಿದ ವೋಜೆರೆಲಾ ಚೀಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ವಾರ್ಸೆಸ್ಟರ್ ಶೈರ್ ಸಾಸ್.
ವಿಧಾನ : ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಹೆಚ್ಚಿದ ಬದನೆ ಹೋಳನ್ನು ಹಾಕಿ ಬಾಡಿಸಬೇಕು. ನಂತರ ಟೊಮೇಟೊ ಸೇರಿಸಿ ಬಾಡಿಸಿ. ಆಮೇಲೆ ಇದಕ್ಕೆ ಉಪ್ಪು, ಮೆಣಸು, ವಾರ್ಸೆಸ್ಟರ್ ಶೈರ್ ಸಾಸ್‌ಬೆರೆಸಿ ಕೆದಕಿ ಕೆಳಗಿಳಿಸಿ. ಜಿಡ್ಡು ಸವರಿದ ಒಂದು ಓವನ್ ಪ್ರೂಫ್ ಡಿಶ್ಶಿಗೆ ಮೊದಲು ಅರ್ಧ ಭಾಗ ಪ್ಯಾರಮೀಸನ್ ಚೀಸ್ ಹರಡಿ, ಅದರ ಮೇಲೆ ಒಂದು ಪದರ ಬದನೆ ಪಲ್ಯ ಹರಡಬೇಕು. ಇದರ ಮೇಲೆ ಒಂದು ಪದರ ರವೆಕೋಟ ಚೀಸ್, ಅದರ ಮೇಲೆ ಮತ್ತೆ ಪಲ್ಯ, ಕೊನೆಯಲ್ಲಿ ಮತ್ತೆ ಪ್ಯಾರಮೀಸನ್ ಚೀಸ್ ಬರುವಂತೆ ಹರಡಿ, 220 ಡಿಗ್ರಿ ಶಾಖದ ಪ್ರೀಹೀಟೆಡ್ ಓವನ್‌ನಲ್ಲಿ 20-25 ನಿಮಿಷ, ಚೀಸ್ ಕರಗುವವರೆಗೂ ಬೇಕ್ ಮಾಡಿ ಓವನ್‌ನಿಂದ ಹೊರತೆಗೆದ ಮೇಲೆ ಚಿತ್ರದಲ್ಲಿರುವಂತೆ ಅಲಂಕರಿಸಿ, ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ವಾಲ್ಟನ್ಸ್ ಇನ್ ಸೂಪ್
ಮೂಲ ಸಾಮಗ್ರಿ : 2 ಕಪ್ (ಯಾವುದೇ ಬಗೆಯ) ಬಿಸಿ ಸೂಪ್, ಅರ್ಧ ಕಪ್ ಗೋದಿಹಿಟ್ಟು, 10-12 ಪಾಲಕ್ ಎಲೆಗಳು, 1-2 ಹಸಿ ಮೆಣಸಿನಕಾಯಿ, ತುಸು ಉಪ್ಪು ಮೆಣಸು, 2-3 ಚಮಚ ಎಣ್ಣೆ.
ಹೂರಣದ ಸಾಮಗ್ರಿ : ಅರ್ಧ ಕಪ್ ಬೆಂದ ನೂಡಲ್ಸ್, 1 ತುರಿದ ಕ್ಯಾರೆಟ್, ಅರ್ಧ ಕಪ್ ಹೆಚ್ಚಿದ ಎಲೆಕೋಸು, ಒಂದಿಷ್ಟು ಹೆಚ್ಚಿದ ಸೆಲೆರಿ ಬ್ರೋಕ್ಲಿ ಪನೀರ್, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, 2-3 ಚಮಚ ಎಣ್ಣೆ.
ವಿಧಾನ : ಪಾಲಕ್ ಸೊಪ್ಪನ್ನು ಹಸಿ ಮೆಣಸಿನೊಂದಿಗೆ ನೀರು ಬೆರೆಸದೆ ಪೇಸ್ಟ್ ಮಾಡಿಡಿ. ಇದಕ್ಕೆ ಗೋದಿಹಿಟ್ಟು, ಉಪ್ಪು, ತುಸು ಎಣ್ಣೆ ಬೆರೆಸಿ ಮೃದು ಹಿಟ್ಟು ಕಲಸಿ ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಪದಾರ್ಥಗಳನ್ನು ಹಾಕಿ ಬಾಡಿಸಿ. ಕೊನೆಯಲ್ಲಿ ಪನೀರ್ ಹಾಗೂ ನೂಡಲ್ಸ್ ಸೇರಿಸಿ. ಉಪ್ಪು ಮೆಣಸು ಹಾಕಿ ಕೆದಕಿ ಕೆಳಗಿಳಿಸಿ.
ನೆನೆದ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ತೆಳು ಚಪಾತಿ ಲಟ್ಟಿಸಿ. ಇದನ್ನು ಸಮೋಸಾ ಆಕಾರದಲ್ಲಿ ಮಡಿಚಿ, ಒಳಗೆ 2-3 ಚಮಚ ಹೂರಣ ತುಂಬಿಸಿ, ಅಂಚು ಬಿಟ್ಟುಕೊಳ್ಳದಂತೆ ಒದ್ದೆ ಕೈಯಿಂದ ಅಂಟಿಸಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಆವಿಯಲ್ಲಿ ಬೇಯಿಸಿ. ಇದನ್ನು ಚಿತ್ರದಲ್ಲಿರುವಂತೆ ಸೂಪ್‌ನಲ್ಲಿ ತೇಲಿಬಿಟ್ಟು ಸವಿಯಲು ಕೊಡಿ.
ಆಲೂ ಝುಕೀನಿ ಟಾರ್ಟ್
ಸಾಮಗ್ರಿ : 1 ಕಪ್ ಗೋದಿಹಿಟ್ಟು, 4 ಚಮಚ ರೀಫೈಂಡ್ ಎಣ್ಣೆ, ಅರ್ಧ ಕಪ್‌ಕ್ರೀಂ ಚೀಸ್, 4-5 ಎಸಳು ಬೆಳ್ಳುಳ್ಳಿ, 1 ದೊಡ್ಡ ಝುಕೀನಿ (ಬಿಲ್ಲೆಗಳಾಗಿಸಿ), 1 ದೊಡ್ಡ ಆಲೂಗಡ್ಡೆ (ಸಿಪ್ಪೆ ಹೆರೆದು ತೆಳು ಹೋಳಾಗಿಸಿ), ಒಂದಿಷ್ಟು ಹೆಚ್ಚಿದ ಪಾರ್ಸ್ಲೆ, ಅರ್ಧ ಕಪ್ ತುರಿದ ಚೀಸ್, 1 ಕಪ್ ಹೆಚ್ಚಿದ ಪಾಲಕ್ ಸೊಪ್ಪು, ರುಚಿಗೆ ತ್ಕಕಷ್ಟು ಉಪ್ಪು ಮೆಣಸು.
ವಿಧಾನ : ಜರಡಿಯಾಡಿದ ಗೋದಿಹಿಟ್ಟಿಗೆ ತುಸು ಉಪ್ಪು, ನೀರು ಬೆರೆಸಿ ಮೃದುಹಿಟ್ಟು ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ನಂತರ ದಪ್ಪ ಪದರದ ಚೌಕಾಕಾರದ ಚಪಾತಿಯಾಗಿ ಲಟ್ಟಿಸಿ, 10-15 ನಿಮಿಷ ಬೇಕ್ ಮಾಡಿ. ಒಂದು ಪಾತ್ರೆಯಲ್ಲಿ ತುಸು ನೀರು ಕುದಿಸಿ, ಆಲೂ ಬೇಯಿಸಿ, ಬಸಿದಿಡಿ. ಈ ತೆಳು ಹೋಳುಗಳ ಮೇಲೆ ಉಪ್ಪು ಮೆಣಸು ಉದುರಿಸಿ. ಸಿದ್ಧಗೊಂಡ ಪೇಸ್ಟ್ರಿ ಮೇಲೆ ಕ್ರೀಂ ಚೀಸ್‌ನ್ನು ಸಮನಾಗಿ ಹರಡಿ, ಅದರ ಮೇಲೆ ಆಲೂ ಹೋಳು ಹರಡಿರಿ. ಇದರ ಮೇಲೆ ಝುಕೀನಿ ಬಿಲ್ಲೆಗಳು ಬರಲಿ. ಇದರ ಮೇಲೆ ಹೆಚ್ಚಿದ ಪಾರ್ಸ್ಲೆ, ಪಾಲಕ್ ಸೊಪ್ಪು, ತುರಿದ ಚೀಸ್ ಉದುರಿಸಿ. ಇದನ್ನು ಮತ್ತೆ ಬೇಕ್ ಮಾಡಿ, ಸಣ್ಣ ತುಂಡುಗಳಾಗಿಸಿ ಸವಿಯಲು ಕೊಡಿ.