ಸ್ಟೀಮ್ಡ್ ಪರೋಟ
ಸಾಮಗ್ರಿ : 2 ಕಪ್ ಗೋದಿಹಿಟ್ಟು, 2 ಈರುಳ್ಳಿ, 1 ಕಪ್ ಕಡಲೆಬೇಳೆ, 2-3 ಹಸಿಮೆಣಸು, 2-2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು ಖಾರ ಛೋಲೆ ಮಸಾಲೆ 2 ಸೌಟು ರೀಫೈಂಡ್ ಎಣ್ಣೆ.
ವಿಧಾನ : ಗೋದಿಹಿಟ್ಟು, ಉಪ್ಪು, ನೀರು ಬೆರೆಸಿ ಮೃದುವಾದ ಹಿಟ್ಟು ಕಲಸಿಡಿ. ಇದಕ್ಕೆ ತುಸು ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ಹಿಂದಿನ ರಾತ್ರಿ ನೆನೆಹಾಕಿದ ಕಡಲೆಬೇಳೆಯನ್ನು ಮಾರನೇ ದಿನ ಕುಕ್ಕರ್‌ನಲ್ಲಿ ಬೇಯಿಸಿ ಆರಲು ಬಿಡಿ. ಇದನ್ನು ತೆಂಗಿನ ತುರಿ, ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸಮೇತ ರುಬ್ಬಿಕೊಳ್ಳಿ. ನೆನೆದ ಹಿಟ್ಟಿಗೆ ಇನ್ನಷ್ಟು ತುಪ್ಪ ಬೆರೆಸಿ ಮತ್ತೆ ನಾದಿಕೊಳ್ಳಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ ಲಟ್ಟಿಸಿ. ಇದರ ಮಧ್ಯೆ 3-4 ಚಮಚ ರುಬ್ಬಿದ ಮಿಶ್ರಣ ಇರಿಸಿ, ಅದನ್ನು ಪೂರ್ತಿ ಕವರ್ ಮಾಡಿ, ತುಪ್ಪ ಸವರಿ, ಹಿಟ್ಟು ಉದುರಿಸಿ, ಮತ್ತೆ ಲಟ್ಟಿಸಿ. ಈ ರೀತಿ ಎಲ್ಲ ಪರೋಟ ತಯಾರಿಸಿಕೊಂಡು, ಕುದಿವ ನೀರಿಗೆ ಹಾಕಿ ಬೇಯಿಸಿ. ನಂತರ ಜೋಪಾನವಾಗಿ ಅವನ್ನು ಹೊರತೆಗೆದು, ಬಟ್ಟೆಯ ಮೇಲೆ ಹರಡಿ ತೇವಾಂಶ ಹಿಂಗಿಸಿ. ನಂತರ ಒಂದೊಂದಾಗಿ ಇವನ್ನು ಹೆಂಚಿಗೆ ಹಾಕಿ, ರೀಫೈಂಡ್ ಎಣ್ಣೆ ಬಿಡುತ್ತಾ, ಎರಡೂ ಬದಿ ಬೇಯಿಸಿ. ಬಿಸಿ ಬಿಸಿ ಪರೋಟಾವನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಸೀಮೆಗೆಡ್ಡೆ ಸ್ಪೆಷಲ್
ಸಾಮಗ್ರಿ : 250 ಗ್ರಾಂ ಸೀಮೆಗೆಡ್ಡೆ, 2-3 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು ಖಾರ, ಗರಂಮಸಾಲ, ಪುಡಿಮೆಣಸು, ಧನಿಯಾಪುಡಿ ಒಣಶುಂಠಿ ಪುಡಿ, 2 ಚಿಟಕಿ ಅರಿಶಿನ, 1 ಕಪ್ ಟೊಮೇಟೊ ಪೇಸ್ಟ್, ಒಗ್ಗರಣೆಗೆ ಸಾಸುವೆ, ಜೀರಿಗೆ, ಲವಂಗ, ಏಲಕ್ಕಿ ಪಲಾವ್ ಎಲೆ, ಕರಿಯಲು ಎಣ್ಣೆ, ಹೆಚ್ಚಿದ 2 ಈರುಳ್ಳಿ ಬೆಳ್ಳುಳ್ಳಿ.
ವಿಧಾನ : ಮೊದಲು ಸೀಮೆಗೆಡ್ಡೆಯನ್ನು ಕುಕ್ಕರ್‌ನಲ್ಲಿ ಬೇಯಿಸಿಕೊಂಡು, ಆರಿದ ಮೇಲೆ ಸಿಪ್ಪೆ ಸುಲಿದು, ಗುಂಡಗೆ ಹೆಚ್ಚಿಕೊಳ್ಳಿ. ಇದನ್ನು ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕರಿಯಬೇಕು. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಒಗ್ಗರಣೆ ಕೊಡಿ. ಆಮೇಲೆ ಇದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಟೊಮೇಟೊ ಪೇಸ್ಟ್ ಹಾಕಿ ಕೆದಕಬೇಕು. ಆಮೇಲೆ ಒಂದೊಂದಾಗಿ ಎಲ್ಲಾ ಮಸಾಲೆ, ಉಪ್ಪು ಸೇರಿಸುತ್ತಾ ಕೈಯಾಡಿಸಿ. ಗ್ರೇವಿ ತುಸು ಗಟ್ಟಿ ಎನಿಸಿದರೆ ಅರ್ಧ ಕಪ್ ನೀರು ಬೆರೆಸಿ ಕುದಿಸಬೇಕು. ಕೊನೆಯಲ್ಲಿ ಕರಿದ ಸೀಮೆಗೆಡ್ಡೆ ಬೆರೆಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಇದನ್ನು ಬಿಸಿ ಬಿಸಿಯಾಗಿ ಪರೋಟ ಜೊತೆ ಸವಿಯಲು ಕೊಡಿ.
ಪನೀರ್ ಬಟಾಣಿ ಟೋಸ್ಟ್
ಸಾಮಗ್ರಿ : 5-6 ಬ್ರೆಡ್ ಸ್ಲೈಸ್, ಅರ್ಧ ಕಪ್ ಬೆಂದ ಬಟಾಣಿ, 150 ಗ್ರಾಂ ಪನೀರ್, 2-3 ಹಸಿ ಮೆಣಸಿನಕಾಯಿ, 2 ಈರುಳ್ಳಿ, ಒಂದಿಷ್ಟು ಹಿಚ್ಚಿದ ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ಗರಂಮಸಾಲ ಚಾಟ್ ಮಸಾಲ, 2-3 ಚಮಚ ತುಪ್ಪ.
ವಿಧಾನ : ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಇದಕ್ಕೆ ಹೆಚ್ಚಿದ ಹಸಿ ಮೆಣಸಿನಕಾಯಿ, ಬೆಂದ ಬಟಾಣಿ ಸೇರಿಸಿ. ಪನೀರ್ ಮ್ಯಾಶ್‌ಗೊಳಿಸಿ ಇದಕ್ಕೆ ಹಾಕಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಮೆಣಸು, ಉಳಿದ ಮಸಾಲೆ ಹಾಕಿ ಕೆದಕಬೇಕು. ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ. ಎರಡೂ ಕಡೆ ಬೆಣ್ಣೆ ಸವರಿದ ಬ್ರೆಡ್ ಸ್ಲೈಸ್‌ಗಳಿಗೆ ಸಮನವಾಗಿ ಬಟಾಣಿ ಮಿಶ್ರಣ ಹರಡಿ, ಹೆಂಚಿನ ಮೇಲೆ ಹಾಕಿ ಟೋಸ್ಟ್ ಮಾಡಿ. ಬಿಸಿ ಬಿಸಿಯಾಗಿ ಇದನ್ನು ಕಾಫಿ ಚಹಾದೊಂದಿಗೆ ಸವಿಯಲು ಕೊಡಿ.
ಮಿಕ್ಸ್ಡ್ ಮಸಾಲ ವೆಜ್
ಸಾಮಗ್ರಿ : 150 ಗ್ರಾಂ ಹೂಕೋಸು, 1 ಕಟ್ಟು ಪಾಲಕ್ ಸೊಪ್ಪು, 10-12 ಫ್ರೆಂಚ್ ಬೀನ್ಸ್, 2 ಕ್ಯಾರೆಟ್, 3-4 ಈರುಳ್ಳಿ, 1 ಕ್ಯಾಪ್ಸಿಕಂ, 5-6 ಎಸಳು ಬೆಳ್ಳುಳ್ಳಿ, 2-3 ಹಸಿ ಮೆಣಸಿನಕಾಯಿ, 2 ಆಲೂಗಡ್ಡೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ರುಚಿಗೆ ತಕ್ಕಷ್ಟು ಉಪ್ಪು ಖಾರ, ಅಮ್ಚೂರ್ ಪುಡಿ, ಧನಿಯಾಪುಡಿ, ಗರಂಮಸಾಲ, 2 ಚಿಟಕಿ ಅರಿಶಿನ, ಅರ್ಧ ಸೌಟು ಎಣ್ಣೆ.
ವಿಧಾನ : ಎಲ್ಲಾ ತರಕಾರಿಗಳನ್ನೂ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಆಮೇಲೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಸಿ ಮೆಣಸು ಹಾಕಿ ಬಾಡಿಸಿ. ಒಂದೊಂದಾಗಿ ಎಲ್ಲಾ ತರಕಾರಿ ಸೇರಿಸುತ್ತಾ ಬಾಡಿಸಬೇಕು. ನೀರು ಚಿಮುಕಿಸಿ, ಮುಚ್ಚಳ ಮುಚ್ಚಿರಿಸಿ ಬೇಯಲು ಬಿಡಿ. ಆಮೇಲೆ ಇದಕ್ಕೆ ಉಪ್ಪು, ಖಾರ, ಅರಿಶಿನ, ಮಸಾಲೆ ಹಾಕಿ ಕೈಯಾಡಿಸಿ ಕೆಳಗಿಳಿಸಿ. ಬಿಸಿ ಇರುವಾಗಲೇ ಚಪಾತಿಯೊಂದಿಗೆ ಸವಿಯಲು ಕೊಡಿ.
ಕಟ್‌ಲೆಟ್ ಸ್ಯಾಂಡ್‌ವಿಚ್
ಸಾಮಗ್ರಿ : 3-4 ಆಲೂಗಡ್ಡೆ, 4 ಚಮಚ ಆರಾರೂಟ್ ಪೌಡರ್, ಅರ್ಧ ಕಪ್ ಮೈದಾ, 1 ಕ್ಯಾರೆಟ್, 1 ಕಪ್ ಹೆಚ್ಚಿದ ಹೂಕೋಸು, ಅರ್ಧ ಕಪ್ ಹಸಿ ಬಟಾಣಿ, 8 ಬ್ರೆಡ್ ಸ್ಲೈಸ್, 4 ಚಮಚ ಪುದೀನಾ ಚಟ್ನಿ, 3 ಚಮಚ ಟೊಮೇಟೊ ಸಾಸ್, 2 ಚಮಚ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಪುಡಿ ಮೆಣಸು.
ವಿಧಾನ : ಆಲೂಗಡ್ಡೆ ಬೇಯಿಸಿ, ಸಿಪ್ಪೆ ಸುಲಿದು ಮಸೆದಿಡಿ. ಬಟಾಣಿ ಬೇಯಿಸಿ ಬೇರೆಯಾಗಿಡಿ. ಮೈದಾಗೆ ಆರಾರೂಟ್ ಪೌಡರ್, ಉಪ್ಪು, ಮೆಣಸು ಸೇರಿಸಿ. ತುರಿದ ಕ್ಯಾರೆಟ್ ಹೂಕೋಸು ಹಾಕಿ ಬಾಡಿಸಿ. ಇವೆಲ್ಲವನ್ನೂ ಒಟ್ಟಿಗೆ ಬೆರೆಸಿಕೊಂಡು ನೀರು ಚಿಮುಕಿಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿಡಿ. ಇದನ್ನು ಕಟ್‌ಲೆಟ್ ಆಕಾರದಲ್ಲಿ ಮಾಡಿಕೊಂಡು ಶ್ಯಾಲ ಫ್ರೈ ಮಾಡಿ. ನಂತರ ಬ್ರೆಡ್‌ಸ್ಲೈಸ್‌ಗೆ ಬೆಣ್ಣೆ ಸವರಿ, ಒಂದೊಂದು ಕಟ್‌ಲೆಟ್ ಇರಿಸಿ, ಅದರ ಮೇಲೆ ಸಾಸ್ ಸಿಂಪಡಿಸಿ, ಇನ್ನೊಂದು ಸ್ಲೈಸ್ ಇರಿಸಿ ಟೋಸ್ಟರ್‌ನಲ್ಲಿ ಸ್ಯಾಂಡ್‌ವಿಚ್ ತಯಾರಿಸಿ. ಇದನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಸೋಯಾ ಸ್ಪಿನಾಚ್ ಕೋಫ್ತಾ
ಸಾಮಗ್ರಿ : 1 ಕಟ್ಟು ಪಾಲಕ್ ಸೊಪ್ಪು, 2 ಬೆಂದ ಆಲೂಗಡ್ಡೆ, 1 ಕಪ್ ಸೋಯಾ ಗ್ರಾನ್ಯುಯೆಲ್ಸ್, 2-3 ಹಸಿಮೆಣಸು, 4 ಚಮಚ ಕಾರ್ನ್‌ಫ್ಲೋರ್, 2 ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, 1 ಸಣ್ಣ ತುಂಡು ಶುಂಠಿ, 2 ಟೊಮೇಟೊ, ಒಗ್ಗರಣೆಗೆ ಸಾಸುವೆ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪುಖಾರ, ಗರಂಮಸಾಲ, ಕರಿಯಲು ಎಣ್ಣೆ.
ವಿಧಾನ : ಮೊದಲು ಸೋಯಾ ಗ್ರಾನ್ಯುಯೆಲ್ಸ್ ನ್ನು ಬಿಸಿ ನೀರಿನಲ್ಲಿ ನೆನೆಹಾಕಿಡಿ. ಹಾಗೇ ಬಿಸಿ ನೀರಿನಲ್ಲಿ 4-5 ನಿಮಿಷ ಪಾಲಕ್ ಸೊಪ್ಪು ನೆನೆಹಾಕಿ, ನಂತರ ಹೆಚ್ಚಿಡಿ. ಆಲೂಗಡ್ಡೆ ಮಸೆದು, ಇವೆರಡನ್ನೂ ಬೆರೆಸಿಕೊಂಡು ಉಳಿದ ಸಾಮಗ್ರಿ ಹೆಚ್ಚಿ ಹಾಕಿಡಿ. ಇದಕ್ಕೆ ಕಾರ್ನ್‌ಫ್ಲೋರ್ ಬೆರೆಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿ, ಸಣ್ಣ ಉಂಡೆಗಳಾಗಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಆಮೇಲೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಟೊಮೇಟೊ ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ತುಸು ಎಣ್ಣೆ ಉಳಿಸಿಕೊಂಡು ಒಗ್ಗರಣೆ ಕೊಡಿ. ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ ಬಾಡಿಸಿ. ಉಪ್ಪು, ಖಾರ, ಗರಂಮಸಾಲೆ ಬೆರೆಸಿ ಕೆದಕಬೇಕು. ಗ್ರೇವಿ ಗಟ್ಟಿ ಎನಿಸಿದರೆ, ತುಸು ನೀರು ಬೆರೆಸಿ ಕುದಿಸಿರಿ. ಕೊನೆಯಲ್ಲಿ ಕರಿದ ಕೋಫ್ತಾ ತೇಲಿಬಿಟ್ಟು, 2 ನಿಮಿಷ ಕುದಿಸಿ ಕೆಳಗಿಳಿಸಿ. ಕೊ.ಸೊಪ್ಪು ಉದುರಿಸಿ, ರೊಟ್ಟಿ ದೋಸೆ ಜೊತೆ ಸವಿಯಲು ಕೊಡಿ.
ರೈಸ್ ಬೇಕ್
ಸಾಮಗ್ರಿ : 1 ಕಪ್ ಉದುರುದುರಾದ ಅನ್ನ, 1 ಕ್ಯಾಪ್ಸಿಕಂ, 1 ಈರುಳ್ಳಿ, 1 ಟೊಮೇಟೊ, 1-2 ಹಸಿಮೆಣಸು, ಒಂದಿಷ್ಟು ಹೆಚ್ಚಿದ ಶುಂಠಿ, ಪುದೀನಾ, ಕೊ.ಸೊಪ್ಪು ತುರಿದ ಚೀಸ್, 4 ಚಮಚ ಬೆಣ್ಣೆ, 2 ಮೊಟ್ಟೆ ರುಚಿಗೆ ತಕ್ಕಷ್ಟು ಉಪ್ಪು ಮೆಣಸು.
ವಿಧಾನ : ಬೇಕಿಂಗ್ ಡಿಶ್‌ಗೆ ಬೆಣ್ಣೆ ಸವರಿ ಜಿಡ್ಡು ಮಾಡಿಕೊಳ್ಳಿ. ಇದರ ಮೇಲೆ ಒಂದು ಪದರ ಅನ್ನ ಬರಲಿ. ಇದರ ಮೇಲೆ ಒಂದೊಂದಾಗಿ ಹೆಚ್ಚಿದ ತರಕಾರಿ ಉದುರಿಸಿ. ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಹಾಕಿ ಬೀಟ್ ಮಾಡಿ. ಇದಕ್ಕೆ ಬೆಣ್ಣೆ, ಹಾಲು, ಉಪ್ಪು, ಮೆಣಸು, ಚೀಸ್ ಬೆರೆಸಿ ಗೊಟಾಯಿಸಿ. ಮೊದಲೇ ಬಿಸಿ ಮಾಡಿದ ಓವನ್‌ನಲ್ಲಿ ಇದನ್ನಿರಿಸಿ 15-20 ನಿಮಿಷ ಬೇಕ್ ಮಾಡಿ.
ಬಿಸಿ ಬಿಸಿಯಾಗಿ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ವೆಜ್ ಫ್ರೂಟ್ ಸಲಾಡ್
ಸಾಮಗ್ರಿ : 1 ಕಿತ್ತಳೆ ಹಣ್ಣಿನ ರಸ, 1 ಸೇಬು, 1 ಸಪೋಟ, 1 ಸೀಬೆಹಣ್ಣು (ಎಳೆ ಬೀಜವಿರಲಿ), ಒಂದಿಷ್ಟು ಸೀಡ್ ಲೆಸ್ ದ್ರಾಕ್ಷಿ, 1 ಬಟ್ಟಲು ಮೊಳಕೆ ಕಟ್ಟಿದ ಕಾಳು, 1 ಬೆಂದ ಆಲಗಡ್ಡೆ, 1 ಈರುಳ್ಳಿ, 1 ಕ್ಯಾರೆಟ್, 1-2 ಟೊಮೇಟೊ, 2-3 ಹಸಿ ಮೆಣಸು, ಅರ್ಧ ಕಪ್ ಹೆಚ್ಚಿದ ಎಲೆಕೋಸು, 1 ಚಮಚ ಆಲಿವೆ ಎಣ್ಣೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಪಾರ್ಸ್ಲೆ ಬ್ರೋಕ್ಲಿ, ರುಚಿಗೆ ತಕ್ಕಷ್ಟು ಉಪ್ಪ, ಪುಡಿಮೆಣಸು, ನಿಂಬೆರಸ, ತೆಂಗಿನ ತುರಿ.
ವಿಧಾನ : ಮೊಳಕೆ ಕಟ್ಟಿದ ಕಾಳನ್ನು ಕುಕ್ಕರ್‌ನಲ್ಲಿ ಬೇಯಿಸಿ. ಆಲೂ ಸಿಪ್ಪೆ ಬಿಡಿಸಿ ಹೆಚ್ಚಿಕೊಳ್ಳಿ. ಉಳಿದೆಲ್ಲ ಪದಾರ್ಥಗಳನ್ನು ಹೆಚ್ಚಿಕೊಂಡು ಒಟ್ಟಾಗಿ ಎಲ್ಲವನ್ನೂ ಬೆರೆಸಿಕೊಳ್ಳಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಮೆಕ್ಕೆ ಜೋಳದ ರೊಟ್ಟಿ
ಸಾಮಗ್ರಿ : 2 ಕಪ್ ಮೆಕ್ಕೆ ಜೋಳದ ಹಿಟ್ಟು, 2 ಬೆಂದ ಆಲೂಗಡ್ಡೆ, 1-1 ಚಮಚ ಶುಂಠಿ-ಬೆಳ್ಳುಳ್ಳಿ, ಹಸಿ ಮೆಣಸಿನ ಪೇಸ್ಟ್, ಅರ್ಧ ಕಪ್ ಮೊಸರು, ಅಗತ್ಯವಿದ್ದಷ್ಟು ಉಪ್ಪು ತುಪ್ಪ.
ವಿಧಾನ : ಆಲೂ ಸಿಪ್ಪೆ ಸುಲಿದು ಮಸೆದಿಡಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ನೀರು ಬೆರೆಸಿ, ಗಟ್ಟಿಯಾಗಿ ಹಿಟ್ಟು ಕಲಸಿಡಿ. ತುಪ್ಪ ಬೆರೆಸಿ ನಾದಿಕೊಳ್ಳಿ. 1 ತಾಸು ನೆನೆಯಲು ಬಿಡಿ. ನಂತರ ಮತ್ತೆ ತುಪ್ಪದಿಂದ ನಾದಿಕೊಂಡು, ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ ಲಟ್ಟಿಸಿಕೊಳ್ಳಿ. ಇದನ್ನು ಕಾದ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಿ, ಬಿಸಿ ಇರುವಾಗಲೇ ತುಪ್ಪ ಹಾಕಿ, ಪಾಲಕ್ ಪನೀರ್ ಅಥವಾ ಪುದೀನಾ ಚಟ್ನಿಯೊಂದಿಗೆ ಸವಿಯಲು ಕೊಡಿ.
ಮಿಶ್ರ ಬೇಳೆ ತೊವ್ವೆ
ಸಾಮಗ್ರಿ : ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಚೆನ್ನಂಗಿಬೇಳೆ (ಮೈಸೂರು ಬೇಳೆ) ತಲಾ ಅರ್ಧರ್ಧ ಕಪ್, 7-8 ಎಸಳು ಬೆಳ್ಳುಳ್ಳಿ, 2 ಈರುಳ್ಳಿ, 1 ತುಂಡು ಶುಂಠಿ, 4-5 ಹಸಿ ಮೆಣಸಿನಕಾಯಿ, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಾಲ, ಹುಣಿಸೇ ಕಿವುಚಿದ ರಸ, ಒಂದಿಷ್ಟು ತೆಂಗಿನ ತುರಿ, ಹೆಚ್ಚಿದ ಕೊ.ಸೊಪ್ಪು, ಒಗ್ಗರಣೆಗೆ ತುಪ್ಪ, ಸಾಸುವೆ, ಜೀರಿಗೆ, ಕರಿಬೇವು.
ವಿಧಾನ : ಹಿಂದಿನ ರಾತ್ರಿ ಬೇಳೆಗಳನ್ನು ನೆನೆಹಾಕಿ, ಮಾರನೇ ದಿನ ಅದನ್ನು 2 ಚಮಚ ತುಪ್ಪ, ಅರಿಶಿನ ಬೆರೆಸಿ ಕುಕ್ಕರ್‌ನಲ್ಲಿ ಹದನಾಗಿ ಬೇಯಿಸಿ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ತೆಂಗಿನ ತುರಿ ಬೆರೆಸಿ ನುಣ್ಣಗೆ ತಿರುವಿಕೊಳ್ಳಿ. ಒಂದು ಪ್ರೆಷರ್‌ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿ ಒಗ್ಗರಣೆ ಕೊಡಿ. ಅದಕ್ಕೆ ರುಬ್ಬಿದ ಮಿಶ್ರಣ ಬೆರೆಸಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಉಪ್ಪು, ಮಸಾಲೆ, ಹುಣಿಸೇ ರಸ ಎಲ್ಲಾ ಬೆರೆಸಿ 1-2 ಕುದಿ ಬರಿಸಿ. ಆಮೇಲೆ ಕಟ್ಟಿನ ಸಮೇತ ಬೆಂದ ಬೇಳೆ ಬೆರೆಸಿ ಕುದಿಸಬೇಕು. ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಅನ್ನರೊಟ್ಟಿ ಜೊತೆ ಸವಿಯಿರಿ.
ಸ್ಪೆಷಲ್ ಚೀಸ್ ಪರೋಟ
ಸಾಮಗ್ರಿ : 2 ಕಪ್ ಗೋದಿಹಿಟ್ಟು, 1 ಈರುಳ್ಳಿ, 1 ಕಪ್ ಗಟ್ಟಿ ಹುಳಿಮೊಸರು, 150 ಗ್ರಾಂ ತುರಿದ ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಆರಿಗೆನೋ ಹರ್ಬಲ್ ಪೌಡರ್ (ರೆಡಿಮೇಡ್ ಲಭ್ಯ), ಅಗತ್ಯವಿದ್ದಷ್ಟು ತುರಿದ ಚೀಸ್ ರೀಫೈಂಡ್ ಎಣ್ಣೆ, ತುಪ್ಪ.
ವಿಧಾನ : ಹೆಚ್ಚಿದ ಈರುಳ್ಳಿಗೆ ಉಪ್ಪು ಮೆಣಸು, ಮೊಸರು, ಆರಿಗೆನೋ ಹರ್ಬಲ್ ಪೌಡರ್ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ತುರಿದ ಪನೀರ್ ಹಾಗೂ ಗೋದಿಹಿಟ್ಟು ಸೇರಿಸಿ ಮೃದುವಾದ ಚಪಾತಿ ಹಿಟ್ಟು ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ನಾದಿಕೊಂಡು 2 ತಾಸು ನೆನೆಯಲು ಬಿಡಿ. ನಂತರ ಮತ್ತೆ ತುಪ್ಪದಿಂದ ನಾದಿ, ನಿಂಬೆ ಗಾತ್ರ ಉಂಡೆ ಕಟ್ಟಿ, ಲಟ್ಟಿಸಿ. ಇದರ ಮೇಲೆ ತುರಿದ ಚೀಸ್ ಉದುರಿಸಿ ಮಡಿಚಿ ಮತ್ತೆ ಲಟ್ಟಿಸಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು, ಕಾದ ಹೆಂಚಿಗೆ ಹಾಕಿ, ರೀಫೈಂಡ್ ಎಣ್ಣೆ ಬಳಸಿ, ಎರಡೂ ಬದಿ ಬೇಯಿಸಿ. ಈ ಬಿಸಿ ಪರೋಟ ಮೇಲೆ ಇನ್ನೊಂದಿಷ್ಟು ತುರಿದ ಪನೀರ್ ಉದುರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿಯಾಗಿ ಸವಿಯಲು ಕೊಡಿ.