ಬ್ರೆಡ್‌ ಕುಲ್ಛಿ

ಸಾಮಗ್ರಿ : 5-6 ಸ್ಲೈಸ್‌ ಬ್ರೆಡ್‌, 1 ಲೀ. ಗಟ್ಟಿ ಹಾಲು, 5-6 ಚಮಚ ಸಕ್ಕರೆ, 1 ಸಣ್ಣ ಚಮಚ ವೆನಿಲಾ ಎಸೆನ್ಸ್, ಅರ್ಧ ಕಪ್‌ ಬೆಣ್ಣೆ, 1 ಕಪ್ ಕ್ರೀಂ, ಅಗತ್ಯವಿದ್ದಷ್ಟು ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು, ಜ್ಯಾಂ, ಜೇನುತುಪ್ಪ.

ವಿಧಾನ : ಹಾಲನ್ನು ಬಿಸಿ ಮಾಡಿಕೊಂಡು ಮಂದ ಉರಿಯಲ್ಲಿ ಕುದಿಸಬೇಕು. ಇದಕ್ಕೆ ಬೆಣ್ಣೆ ಬೆರೆಸಿ ಕೈಯಾಡಿಸಿ. ಆಮೇಲೆ ಚೆನ್ನಾಗಿ ಕಿವುಚಿದ ಬ್ರೆಡ್‌, ಸಕ್ಕರೆ, ಗೋಡಂಬಿ ದ್ರಾಕ್ಷಿ ಹಾಕಿ ಹಾಲು ಮುಕ್ಕಾಲು ಭಾಗ ಹಿಂಗುವವರೆಗೂ ಗೊಟಾಯಿಸಿ. ಕೆಳಗಿಳಿಸಿ, ಚೆನ್ನಾಗಿ ತಣ್ಣಗಾದ ಮೇಲೆ ವೆನಿಲಾ ಎಸೆನ್ಸ್, ಕ್ರೀಂ ಬೆರೆಸಿ ಚೆನ್ನಾಗಿ ಮಿಶ್ರಗೊಳ್ಳುವಂತೆ ಮಾಡಿ. ನಂತರ ಇವನ್ನು ಕುಲ್ಛಿ ಅಚ್ಚುಗಳಿಗೆ ತುಂಬಿಸಿ, ಫ್ರೀಝರ್‌ನಲ್ಲಿಟ್ಟು ಸೆಟ್‌ ಮಾಡಿ. ಹೊರತೆಗೆದ ಮೇಲೆ ಜ್ಯಾಂ, ಜೇನುತುಪ್ಪ ಹಾಕಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಕಾರ್ನ್‌ ಕ್ರಂಚ್‌ ಕುಲ್ಛಿ

 

ಸಾಮಗ್ರಿ : 2 ಮಾಗಿದ ಬಾಳೆಹಣ್ಣು, 1 ಕಪ್‌ ಕಾರ್ನ್‌ಫ್ಲೇಕ್ಸ್, 1 ಕಪ್‌ ಕ್ರೀಂ, 1 ಲೀ. ಕೆನೆಭರಿತ ಗಟ್ಟಿ ಹಾಲು, ಅರ್ಧ ಕಪ್‌ ಸಕ್ಕರೆ, ಅಗತ್ಯವಿದ್ದಷ್ಟು ಆರೆಂಜ್‌ ಜೂಸ್‌, ದ್ರಾಕ್ಷಿ ಗೋಡಂಬಿ ಚೂರು.

ವಿಧಾನ : ಹಾಲು ಕಾಯಿಸಿ, ಮಂದ ಉರಿಯಲ್ಲಿ ಕುದಿಸಬೇಕು. ಮುಕ್ಕಾಲು ಭಾಗ ಹಿಂಗಿದ ನಂತರ ಇದಕ್ಕೆ ಅರ್ಧ ಭಾಗ ಕಾರ್ನ್ ಫ್ಲೇಕ್ಸ್, ಸಕ್ಕರೆ ಹಾಕಿ ಇನ್ನೂ 5 ನಿಮಿಷ ಕುದಿಸಿ ಕೆಳಗಿಳಿಸಿ. ಇದು ಚೆನ್ನಾಗಿ ಆರಿದ ನಂತರ ಇದಕ್ಕೆ ಕಿವುಚಿದ ಬಾಳೆಹಣ್ಣು, ಉಳಿದ ಕಾರ್ನ್‌ ಫ್ಲೇಕ್ಸ್, ಕ್ರೀಂ ಬೆರೆಸಿ ಗೊಟಾಯಿಸಿ. ಆಮೇಲೆ ಇದನ್ನು ಕುಲ್ಛಿ ಅಚ್ಚುಗಳಿಗೆ ತುಂಬಿಸಿ, ಫ್ರೀಝರ್‌ನಲ್ಲಿಟ್ಟು ಸೆಟ್‌ ಮಾಡಿ. ಇದನ್ನು ಚಿತ್ರದಲ್ಲಿರವಂತೆ ಬಟ್ಟಲುಗಳಿಗೆ ರವಾನಿಸಿ ದ್ರಾಕ್ಷಿ ಗೋಡಂಬಿ, ಕ್ರೀಂ, ಆರೆಂಜ್‌ ಜೂಸ್‌ ಸಹಿತ ಸವಿಯಲು ಕೊಡಿ.

ಶ್ಯಾವಿಗೆ ಕುಲ್ಛಿ

DSC_0675

ಸಾಮಗ್ರಿ : 1 ಲೀ. ಗಟ್ಟಿ ಹಾಲು, 1-1 ಕಪ್‌ ಶ್ಯಾವಿಗೆ ಕ್ರೀಂ, 1-1 ಚಮಚ ಬಾದಾಮಿ ಒಣದ್ರಾಕ್ಷಿಯ ಪೇಸ್ಟ್, ಅರ್ಧ ಕಪ್‌ ಕಂಡೆನ್ಸ್ಡ್ ಮಿಲ್ಕ್.

ವಿಧಾನ : ತುಪ್ಪದಲ್ಲಿ ಶ್ಯಾವಿಗೆ ಹುರಿಯಿರಿ. ಸ್ಟೀಲ್ ಪಾತ್ರೆಯಲ್ಲಿ ಹಾಲು ಕಾಯಿಸಿ ಮಂದ ಉರಿಯಲ್ಲಿ ಕುದಿಸಬೇಕು. ಇದರ ಅರ್ಧ ಭಾಗ ಹಿಂಗಿದಾಗ ಶ್ಯಾವಿಗೆ, ಬಾದಾಮಿ ಪೇಸ್ಟ್ ಬೆರೆಸಬೇಕು. ಇದು ಗಟ್ಟಿಯಾಗುವಂತೆ ಮಾಡಿ. ಆಮೇಲೆ ಒಣದ್ರಾಕ್ಷಿಯ ಪೇಸ್ಟ್, ಕಂಡೆನ್ಸ್ಡ್ ಮಿಲ್ಕ್ ಬೆರೆಸಬೇಕು. ಚೆನ್ನಾಗಿ ಬೆರೆತ ಮೇಲೆ ಕೂಲ್ ‌ಮಾಡಿ. ಆಮೇಲೆ ಕ್ರೀಂ ಬೆರೆಸಿ, ಕುಲ್ಛಿ ಅಚ್ಚುಗಳಿಗೆ ತುಂಬಿಸಿ. ಫ್ರೀಝರ್‌ನಲ್ಲಿಟ್ಟು ಸೆಟ್‌ ಮಾಡಿ, ಫ್ರೂಟ್‌ ಸಿರಪ್‌ ಮತ್ತು ಒಣ ದ್ರಾಕ್ಷಿಗಳಿಂದ ಅಲಂಕರಿಸಿ ಸವಿಯಲು ಕೊಡಿ.

ರೈಸ್‌ ಬಾದಾಮಿ ಕುಲ್ಛಿ

DSC_0694

ಸಾಮಗ್ರಿ : ಅರ್ಧ ಕಪ್‌ ಹೊಸ ಅಕ್ಕಿ, 1 ಲೀ. ಕೆನೆಭರಿತ ಗಟ್ಟಿ ಹಾಲು, ಅರ್ಧ ಕಪ್‌ ಸಕ್ಕರೆ, 3-4 ಎಸಳು ಕೇಸರಿ, 1 ದೊಡ್ಡ ಚಮಚ ಬಾದಾಮಿ ಪೇಸ್ಟ್, 1 ಸಣ್ಣ ಚಮಚ ಬಾದಾಮಿ ಎಸೆನ್ಸ್, 2 ಚಿಟಕಿ ಏಲಕ್ಕಿ ಪುಡಿ, ಅರ್ಧ ಕಪ್‌ ಕ್ರೀಂ.

ವಿಧಾನ : ತುಸು ಬಿಸಿ ಹಾಲಿನಲ್ಲಿ ಕೇಸರಿ ನೆನೆಹಾಕಿ. ಹಾಲನ್ನು ಬಿಸಿ ಮಾಡಿ, ಕಾಲು ಭಾಗ ಹಿಂಗುವವರೆಗೂ ಕುದಿಸಿರಿ. ನಂತರ ಅಕ್ಕಿ ತೊಳೆದು ಹಾಕಿ ಬೇಯಿಸಿ. ಆಮೇಲೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಕದಡಿಕೊಂಡು ಕೆಳಗಿಳಿಸಿ ಆರಲು ಬಿಡಿ. ನಂತರ ಇದಕ್ಕೆ ಎಸೆನ್ಸ್, ಫ್ರೆಶ್‌ ಕ್ರೀಂ ಬೆರೆಸಿ ಕದಡಿಕೊಳ್ಳಿ. ಆಮೇಲೆ ಕುಲ್ಛಿ ಅಚ್ಚುಗಳಿಗೆ ತುಂಬಿಸಿ, ಫ್ರೀಝರ್‌ನಲ್ಲಿಟ್ಟು ಸೆಟ್‌ ಮಾಡಿ. ಸರ್ವ್ ಮಾಡುವಾಗ ಚಿತ್ರದಲ್ಲಿರುವಂತೆ ಬಾದಾಮಿ ಚೂರು, ಜೇನುತುಪ್ಪ ಬೆರೆಸಿಕೊಡಿ.

ಕೇಕ್‌ ಕಾಫಿ ಕುಲ್ಛಿ

DSC_1299A

ಸಾಮಗ್ರಿ : ಸಣ್ಣ ರಿಕಂಡೆನ್ಸ್ಡ್ ಮಿಲ್ಕ್ ಕ್ರೀಂ ಒಣದ್ರಾಕ್ಷಿ (ತಲಾ ಅರ್ಧರ್ಧ ಕಪ್‌), ಅರ್ಧ ಲೀ. ಗಟ್ಟಿ ಹಾಲು, 1 ಚಮಚ ಬಾದಾಮಿ ಪೇಸ್ಟ್, 2 ಚಿಟಕಿ ಏಲಕ್ಕಿ ಪುಡಿ.

ವಿಧಾನ : ತುಸು ತುಪ್ಪದಲ್ಲಿ ರವೆ ಹುರಿಯಿರಿ. ಮಂದ ಉರಿ ಮಾಡಿಕೊಂಡು ಇದಕ್ಕೆ ಕುದಿ ಹಾಲು ಬೆರೆಸಿ ಗೊಟಾಯಿಸಬೇಕು. ನಂತರ ಏಲಕ್ಕಿಪುಡಿ, ಬಾದಾಮಿ ಪೇಸ್ಟ್, ಹಾಲಲ್ಲಿ ನೆನೆದ ದ್ರಾಕ್ಷಿ ಸೇರಿಸಿ. ಇದು ಚೆನ್ನಾಗಿ ಗಟ್ಟಿ ಆಗುವವರೆಗೂ ಗೊಟಾಯಿಸಬೇಕು. ಆಮೇಲೆ ಕಂಡೆನ್ಸ್ಡ್ ಮಿಲ್ಕ್ ಬೆರೆಸಿ, ಕೆದಕಿ  ಕೆಳಗಿಳಿಸಿ. ನಂತರ ಕ್ರೀಂ ಬೆರೆಸಿ ಇನ್ನಷ್ಟು ಗಟ್ಟಿಗೊಳಿಸಿ. ಇದನ್ನು ಅಚ್ಚುಗಳಿಗೆ ಸುರಿದು ಕುಲ್ಛಿ ರೆಡಿಯಾಗಲು ಫ್ರೀಝರಿನಲ್ಲಿಟ್ಟು ಸೆಟ್‌ ಮಾಡಿ. ಚಿತ್ರದಲ್ಲಿರುವಂತೆ ತುಪ್ಪದಲ್ಲಿ ಹುರಿದ ಗೋಡಂಬಿ, ಬಿಸಿ ಜಿಲೇಬಿಗಳೊಂದಿಗೆ ಅಲಂಕರಿಸಿ ಸವಿಯಲು ಕೊಡಿ.

ಮ್ಯಾಂಗೋ ಕುಲ್ಛಿ

DSC_1286A

ಸಾಮಗ್ರಿ : 2-3 ಮಾವಿನ ಹಣ್ಣು, 2 ಕಪ್‌ ಸಿಹಿಯಾದ ಕೆನೆ ಮೊಸರು, 1 ಕಪ್‌ ಕ್ರೀಂ, ಅರ್ಧ ಕಪ್‌ ಕಂಡೆನ್ಸ್ಡ್ ಮಿಲ್ಕ್, ತುಸು ನಿಂಬೆ ರಸ.

ವಿಧಾನ : ಮಾವಿನ ಹಣ್ಣಿನ ಸಿಪ್ಪೆ ಹೆರೆದು, ಹೋಳಾಗಿಸಿ ಮಿಕ್ಸಿಗೆ ಹಾಕಿಡಿ. ಇದಕ್ಕೆ ಮೊಸರು, ಕಂಡೆನ್ಸ್ಡ್ ಮಿಲ್ಕ್ ಬೆರೆಸಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಆಮೇಲೆ ನಿಂಬೆರಸ, ಕ್ರೀಂ ಬೆರೆಸಿ ಮತ್ತೆ ಮಿಕ್ಸಿ ಚಲಾಯಿಸಿ. ನಂತರ ಇದನ್ನು ಕುಲ್ಛಿ ಅಚ್ಚುಗಳಿಗೆ ತುಂಬಿಸಿ, ಫ್ರೀಝರಿನಲ್ಲಿಟ್ಟು ಸೆಟ್‌ ಮಾಡಿ. ಸರ್ವ್‌ ಮಾಡುವಾಗ ಜೊತೆಗೆ ತಾಜಾ ಮಾವಿನ ಹೋಳುಗಳಿರಲಿ.

ಹುಳಿಸಿಹಿ ಕುಲ್ಛಿ

DSC_1313

ಸಾಮಗ್ರಿ : 2 ಮಾಗಿದ ಬಾಳೆಹಣ್ಣು, 8-10 ಲೀಚಿ ಹಣ್ಣು, 10-12 ದ್ರಾಕ್ಷಿ, 1 ಹೋಳು ನಿಂಬೆಹಣ್ಣು, ಅರ್ಧ ಕಪ್‌ ಕಂಡೆನ್ಸ್ಡ್ ಮಿಲ್ಕ್.

ವಿಧಾನ : ಲೀಚಿ ಬಾಳೆಹಣ್ಣುಗಳನ್ನು ಚೆನ್ನಾಗಿ ಕಿವುಚಿಡಿ. ದ್ರಾಕ್ಷಿ ಉದ್ದಕ್ಕೆ ಹೆಚ್ಚಿಕೊಳ್ಳಿ. ಎಲ್ಲಾ ಹಣ್ಣುಗಳೊಂದಿಗೆ ಕಾದಾರಿದ ಹಾಲು ಬೆರೆಸಿ ಮಿಕ್ಸಿ ಚಲಾಯಿಸಿ. ಇದಕ್ಕೆ ನಿಂಬೆರಸ, ಕ್ರೀಂ ಬೆರೆಸಿ ಗೊಟಾಯಿಸಿ. ನಂತರ ಇದನ್ನು ಕುಲ್ಛಿ ಅಚ್ಚುಗಳಿಗೆ ತುಂಬಿಸಿ ಫ್ರೀಝರಿನಲ್ಲಿಟ್ಟು ಸೆಟ್‌ ಮಾಡಿ. ಹೊರತೆಗೆದ ಮೇಲೆ ಇದನ್ನು ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಪರಂಗಿ ಹಣ್ಣಿನ ಕುಲ್ಛಿ

DSC_1315A

ಸಾಮಗ್ರಿ : 1 ಸಣ್ಣ ಪರಂಗಿಹಣ್ಣು (ಗಟ್ಟಿ ದೋರಹಣ್ಣಾಗಿರಬೇಕು, ಮಾಗಿರಬಾರದು), 1 ಲೀ. ಹಾಲು, ಅರ್ಧ ಕಪ್‌ ಒಣ ದ್ರಾಕ್ಷಿ (ಹಾಲಲ್ಲಿ ನೆನೆಸಿಡಿ), 2-3 ಎಸಳು ಕೇಸರಿ, 4 ಚಮಚ ಸಕ್ಕರೆ, ಅರ್ಧ ಕಪ್‌ ಕ್ರೀಂ, ತುಸು ರೋಸ್‌ ಎಸೆನ್ಸ್.

ವಿಧಾನ : ಪರಂಗಿಹಣ್ಣಿನ ಸಿಪ್ಪೆ ಹೆರೆದು, ನೀಟಾಗಿ ತುರಿದಿಡಿ. ಹಾಲು ಬಿಸಿ ಮಾಡಿಕೊಂಡು, ಇದಕ್ಕೆ ತುರಿ ಬೆರೆಸಿ ಮಂದ ಉರಿಯಲ್ಲಿ ಹದನಾಗಿ ಬೇಯಿಸಿ. ನಂತರ ಸಕ್ಕರೆ, ನೆನೆದ ದ್ರಾಕ್ಷಿ ಕೇಸರಿ ಸೇರಿಸಿ. ಚೆನ್ನಾಗಿ ಕೆದಕುತ್ತಾ 5 ನಿಮಿಷ ಬಿಟ್ಟು ಕೆಳಗಿಳಿಸಿ. ಚೆನ್ನಾಗಿ ಕೂಲ್ ಆದ ನಂತರ ಕ್ರೀಂ ಬೆರೆಸಿಕೊಳ್ಳಿ. ಇದನ್ನು ಕುಲ್ಛಿ ಅಚ್ಚಿಗೆ ತುಂಬಿಸಿ, ಫ್ರೀಝರ್‌ನಲ್ಲಿ ಸೆಟ್‌ ಮಾಡಿ. ಹೊರತೆಗೆದು ತುಂಡರಿಸಿದ ನಂತರ, ಚಿತ್ರದಲ್ಲಿರುವಂತೆ ರೋಸ್‌ ಎಸೆನ್ಸ್ ಚಿಮುಕಿಸಿ, ದ್ರಾಕ್ಷಿ ಉದುರಿಸಿ ಸವಿಯಲು ಕೊಡಿ.

ಮೆಲನ್‌ ಕುಲ್ಛಿ

DSC_1262A

ಸಾಮಗ್ರಿ : 2-3 ಕಪ್‌ ಕಲ್ಲಂಗಡಿ ಹಣ್ಣಿನ ಹೋಳು, 2-3 ಕಪ್‌ ಕರ್ಬೂಜಾ ಹಣ್ಣಿನ ಹೋಳು, ಅರ್ಧ ಕಪ್‌ ಸೌತೇಕಾಯಿಯ ಹೋಳು, ರುಚಿಗೆ ತಕ್ಕಷ್ಟು ಉಪ್ಪು ಬ್ಲ್ಯಾಕ್‌ ಸಾಲ್ಟ್ ಚಾಟ್‌ ಮಸಾಲ ನಿಂಬೆರಸ ಪುದೀನಾ ಪೇಸ್ಟ್, 1 ಕಪ್‌ ಕ್ರೀಂ.

ವಿಧಾನ : ಕ್ರೀಂ ಬಿಟ್ಟು ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಮಿಕ್ಸಿಗೆ ಬೆರೆಸಿ ನುಣ್ಣಗೆ ತಿರುವಿಕೊಳ್ಳಿ. ಇದನ್ನು ಕುಲ್ಛಿ ಅಚ್ಚುಗಳಿಗೆ ತುಂಬ್ದಿಸಿ, ಫ್ರೀಝರಿನಲ್ಲಿಟ್ಟು ಸೆಟ್‌ ಮಾಡಿ. ಹೊರತೆಗೆದ ನಂತರ ಚಿತ್ರದಲ್ಲಿರುವಂತೆ ಕ್ರೀಮ್ ನಿಂದ ಅಲಂಕರಿಸಿ, ಸೌತೇ ಹೋಳಿನೊಂದಿಗೆ ಸವಿಯಲು ಕೊಡಿ.

ಖರ್ಜೂರದ ಕುಲ್ಛಿ

DSC_1252

ಸಾಮಗ್ರಿ : 10-12 ಹಸಿ ಖರ್ಜೂರ, 3-4 ಒಣ ಅಂಜೂರ, ಅರ್ಧ ಲೀ. ಗಟ್ಟಿ ಹಾಲು, 1 ಕಪ್‌ ಕ್ರೀಂ, 4 ಚಮಚ ಸಕ್ಕರೆ, ತುಸು ಚಾಕಲೇಟ್‌, ಅಖ್ರೋಟ್‌, ಚಾಕಲೇಟ್‌ಸಾಸ್‌, ಗೋಡಂಬಿ ಚೂರು.

ವಿಧಾನ : ಹಸಿ ಖರ್ಜೂರ ಹಾಗೂ ಅಂಜೂರವನ್ನು ಬಿಸಿ ಹಾಲಿನಲ್ಲಿ ಬೇರೆ ಬೇರೆಯಾಗಿ ರಾತ್ರಿಯೇ ನೆನೆಸಿಡಿ. ಮಾರನೇ ಬೆಳಗ್ಗೆ ಮಿಕ್ಸಿಯಲ್ಲಿ ಇವನ್ನು ಅರೆದಿಡಿ. ಹಾಲು ಕಾಯಿಸಿ, ಕುದ್ದು ಅರ್ಧದಷ್ಟು ಹಿಂಗಿದಾಗ, ಈ ಮಿಶ್ರಣ ಬೆರೆಸಿಡಿ. ಚೆನ್ನಾಗಿ ಗಟ್ಟಿಯಾಗುವಂತೆ ಮಂದ ಉರಿಯಲ್ಲಿ ಕೈಯಾಡಿಸಿ. ಆಮೇಲೆ ಇದಕ್ಕೆ ಸಕ್ಕರೆ, ತುರಿದ ಚಾಕಲೇಟ್‌ ಹಾಕಿ ಮತ್ತಷ್ಟು ಕುದಿಸಿ ಕೆಳಗಿಳಿಸಿ. ಚೆನ್ನಾಗಿ ಕೂಲ್ ಆದಾಗ ಅಖ್ರೋಟ್‌ ಚೂರು, ಕ್ರೀಂ ಬೆರೆಸಿ. ಎಲ್ಲ ಬೆರೆತುಕೊಂಡಾಗ, ಅಚ್ಚಿಗೆ ತುಂಬಿಸಿ ಫ್ರಿಜ್‌ನಲ್ಲಿ ಸೆಟ್‌ ಮಾಡಿ. ಚಿತ್ರದಲ್ಲಿರುವಂತೆ ಚಾಕಲೇಟ್‌ ಸಾಸ್‌ನಿಂದ ಅಲಂಕರಿಸಿ ಸವಿಯಲು ಕೊಡಿ.

ನಿಂಬೆ ಚೀಸ್‌ ಕುಲ್ಛಿ

DSC_1332A

ಸಾಮಗ್ರಿ : 1 ಕಪ್‌ ಮಸೆದ ಚೀಸ್‌, ಅರ್ಧ ಕಪ್‌ ಕಂಡೆನ್ಸ್ಡ್ ಮಿಲ್ಕ್, 1 ಕಪ್‌ ಕ್ರೀಂ, 1 ಚಮಚ ನಿಂಬೆರಸ, ಅರ್ಧ ಕಪ್‌ ಬೆಂದ ಓಟ್ಸ್, ತುಸು ಅಖ್ರೋಟ್‌ ಚೂರು, ಗೋಡಂಬಿ ಚೂರು.

ವಿಧಾನ : ಒಂದು ಮಿಕ್ಸಿಗೆ ಚೀಸ್‌, ಕಂಡೆನ್ಸ್ಡ್ ಮಿಲ್ಕ್, ನಿಂಬೆರಸ, ಓಟ್ಸ್ ಬೆರೆಸಿ ಬ್ಲೆಂಡ್‌ ಮಾಡಿ. ನಂತರ ಕ್ರೀಂ ಬೆರೆಸಿ. ಆಮೇಲೆ ಅಖ್ರೋಟ್‌ ಗೋಡಂಬಿ ಮಿಶ್ರ ಮಾಡಿ. ಈ ಮಿಶ್ರಣವನ್ನು ಕುಲ್ಛಿ ಅಚ್ಚಿಗೆ ತುಂಬಿಸಿ, ಫ್ರೀಝರಿನಲ್ಲಿಟ್ಟು ಸೆಟ್‌ ಮಾಡಿ. ಕೊನೆಯಲ್ಲಿ ಸರ್ವ್ ‌ಮಾಡುವಾಗ ನಿಂಬೆಹೋಳು, ಕ್ರೀಂ ಇರಲಿ.

ಬಾದಾಮಿ ಕ್ಯಾರೆಟ್‌ ಕುಲ್ಛಿ

DSC_0709

ಸಾಮಗ್ರಿ : 2 ಕಪ್‌ ತುರಿದ ಕ್ಯಾರೆಟ್‌, ಅರ್ಧರ್ಧ ಕಪ್‌ ಸಕ್ಕರೆ ಬಾದಾಮಿ ಪೇಸ್ಟ್, 2 ಚಮಚ ಬಾದಾಮಿ ಚೂರು, 2 ಚಿಟಕಿ ಏಲಕ್ಕಿಪುಡಿ, 1 ಕಪ್‌ ಫುಲ್ ಕ್ರೀಂ ಹಾಲು, ರುಚಿಗೆ ತಕ್ಕಷ್ಟು ಮೇಪಲ್ ಸಿರಪ್‌ ಕಾರ್ನ್‌ ಫ್ಲೇಕ್ಸ್.

ವಿಧಾನ : ದಪ್ಪ ತಳದ ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ, ಮಂದ ಉರಿಯಲ್ಲಿ ಕುದಿಸಬೇಕು. ಇದಕ್ಕೆ ಕ್ಯಾರೆಟ್‌, ಬಾದಾಮಿ ಪೇಸ್ಟ್, ಬಾದಾಮಿ ಚೂರು ಸೇರಿಸಿ ಚೆನ್ನಾಗಿ ಬೇಯಿಸಿ. ಆಮೇಲೆ ಸಕ್ಕರೆ, ಏಲಕ್ಕಿ ಪುಡಿ ಬೆರೆಸಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಇದು ಚೆನ್ನಾಗಿ ಕೂಲ್ ‌ಆದನಂತರ, ಕುಲ್ಛಿ ಅಚ್ಚುಗಳಿಗೆ ತುಂಬಿಸಿ ಫ್ರೀಝರ್‌ನಲ್ಲಿ ಸೆಟ್‌ ಮಾಡಿ. ಫ್ರಿಜ್‌ನಿಂದ ಹೊರತೆಗೆದ ನಂತರ, ತಟ್ಟೆಯಲ್ಲಿರಿಸಿ ಮೇಪಲ್ ಸಿರಪ್‌, ಕಾರ್ನ್‌ ಫ್ಲೇಕ್ಸ್ ನೊಂದಿಗೆ ಅಲಂಕರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ