“ಹಲೋ ಮಾಲತಿ.”

“ಹಲೋ ಮಧು.”

“ಎಲ್ಲಾದ್ರೂ ಹೋಗೋಣ್ವಾ?”

“ಎಲ್ಲಿಗೆ?”

“ಯಾವುದಾದ್ರೂ ನಾಟಕಕ್ಕೆ ಹೋಗೋಣ. ಆಮೇಲೆ ಯಾವುದಾದ್ರೂ ಹೋಟೆಲ್‌ನಲ್ಲಿ ಊಟ ಮಾಡೋಣ.”

“ಓ.ಕೆ.” ನಾನು ಹೇಳಿದೆ.

ನಂತರ ನಾವಿಬ್ಬರೂ ಚಾಟಿಂಗ್‌ ನಿಲ್ಲಿಸಿದೆವು. ನಾನು ಫ್ರೆಶ್‌ ಆಗಲು ಬಾಥ್‌ರೂಮಿಗೆ ಹೋದೆ.

ಇತ್ತ ನೀರಿನ ತಂಪು ಹನಿಗಳು ಸುಡುತ್ತಿದ್ದ ನನ್ನ ಮನಕ್ಕೆ ಶೀತಲತೆ ಕೊಡುತ್ತಿದ್ದರೆ ಅತ್ತ ನಾನು ಮಧುವನ್ನು ಭೇಟಿಯಾಗಲು ಹೊತೊರೆಯುತ್ತಿದ್ದೆ.

ಒಂದು ಕಡೆ ರವಿ ಉಷ್ಣದ ತಾಪವಾಗಿದ್ದರೆ. ಇನ್ನೊಂದು ಕಡೆ ಮಧು ಜೀವನದ ಉತ್ಸಾಹದ ಅಲೆಯಾಗಿದ್ದ. ರವಿಯಂತೂ ಎಂದೂ ನನ್ನ ರೂಪ, ಸೌಂದರ್ಯವನ್ನು ಹೊಗಳಲಿಲ್ಲ. ಏಕೆಂದರೆ ಅವರ ತಟಸ್ಥ ಸ್ವಭಾವ ಅದಕ್ಕೆ ಕಾರಣವಾಗಿತ್ತು. ಆದರೆ ಮಧುವಿಗೆ ನನ್ನನ್ನು ಎಷ್ಟು ಹೊಗಳಿದರೂ ಸಾಲದು.

“ಒಂದು ವೇಳೆ ನೀನು ನನ್ನ ಹೆಂಡತಿಯಾಗಿದ್ದಿದ್ದರೆ…. ಎಷ್ಟು ಚೆನ್ನಾಗಿರುತ್ತಿತ್ತು ಮಾಲತಿ. ನೀನು ಮಾಡುವ ಅಡುಗೆ ಜೊತೆಗೆ ನಿನ್ನ ಸೌಂದರ್ಯದ ಮೋಡಿ. ನಾನಂತೂ ಗಾಳಿಪಟದೊಂದಿಗೆ ಸೂತ್ರ ಬರುವಂತೆ ನಿನ್ನತ್ತ ಸೆಳೆಯಲ್ಪಟ್ಟಿದ್ದೇನೆ,” ಮಧು ಹೇಳುತ್ತಿದ್ದ.

ನಾನು ಮಧು ಹೇಳಿದ್ದನ್ನು ಕೇಳಿ ಮುಗ್ಧಳಾಗಿ ಮೈಮರೆಯುತ್ತಿದ್ದೆ. ಒಂದು ವೇಳೆ ರವಿಯೂ ಮಧುವಿನಂತೆ ವಾಚಾಳಿಯೂ ನಗುಮುಖದವರೂ ಆಗಿದ್ದಿದ್ದರೆ? ರವಿ ನನ್ನನ್ನು ಇಷ್ಟಪಡುವುದಿಲ್ಲ ಎಂದಲ್ಲ. ಆದರೆ ಇದುವರೆಗೆ ಅವರ ಪ್ರೀತಿಯ ಆವಳನ್ನು ನಾನು ಅಳೆಯಲಾಗಿಲ್ಲ.

ರವಿ ತಮಗೆ ಒಂದು ಸೀಮಾರೇಖೆ ಹಾಕಿಕೊಂಡಿದ್ದಾರೆ. ಫೈಲುಗಳು ಮತ್ತು ಲ್ಯಾಪ್‌ಟಾಪ್‌ ಅವರ ಬದುಕಾಗಿದೆ. ಅವರು ನನ್ನನ್ನೂ ಒಂದು ಫೈಲ್ ತರಹ ಕಾಣುತ್ತಾರೆ. ಅವರು ನನ್ನ ಬಳಿ ಇದ್ದಾಗ, ಒಂದು ಕಂಪನಿಯ ಸಿಇಓ ನನ್ನನ್ನು ತದೇಕಚಿತ್ತದಿಂದ ನೋಡುತ್ತಿರುವಂತೆ ಅನ್ನಿಸುತ್ತದೆ.

ಅವರ ಪ್ರೀತಿಯ ಕಾವು, ಅವರ ಹುಚ್ಚಾಟ, ಪರಸ್ಪರರಲ್ಲಿ ಕಳೆದುಹೋಗುವ ಇಚ್ಛೆ ಈಗ ಎಲ್ಲೋ ಮಾಯವಾದಂತಿದೆ.

ನಾನು ಅವರ ಬಳಿ ಹೋದಾಗಲೆಲ್ಲಾ ಅವರು ಕೈಯಲ್ಲಿದ್ದ ಫೈಲನ್ನು ಮುಚ್ಚಿ, “ಉಫ್‌, ಮಾಲತಿ ನಾಳೆ ಒಂದು ಅರ್ಜೆಂಟ್ ಮೀಟಿಂಗ್‌ ಇದೆ,” ಎನ್ನುತ್ತಾರೆ.

ನಾನು ರೇಗಿ ಏಳತೊಡಗಿದಾಗ ಇದ್ದಕ್ಕಿದ್ದಂತೆ ನನ್ನನ್ನು ಮುಟ್ಟಲೋ ಬೇಡವೋ ಎಂಬಂತೆ ತೋಳುಗಳಿಂದ ಬಳಸುತ್ತಿದ್ದರು. ಅವರು ನನ್ನನ್ನು ಚೆನ್ನಾಗಿ ಪ್ರೀತಿಸಲಿ, ನನ್ನ ಪ್ರೀತಿಯಲ್ಲಿ ಮುಳುಗಿರಲಿ ಎಂದು ಬಯಸುತ್ತಿದ್ದೆ. ಆದರೆ ಈ ಬಯಕೆ ನನ್ನ ಎದೆಯಲ್ಲಿ  ಒಂದು ನೋವಾಗಿ ಉಳಿದಿದೆ.

ಅವರ ಕೆಲಸದ ಒತ್ತಡ, ಜೊತೆಗೆ ಅವರ ಅಂತರ್ಮುಖಿ ಸ್ವಭಾವದಿಂದಾಗಿ ನನಗೆ ಉತ್ತುಂಗ ಸುಖ ಸಿಗುತ್ತಿರಲಿಲ್ಲ.

ನಾನು ಬೇಸರಪಡುತ್ತೇನೆಂದು ಅವರು ನನ್ನ ಹತ್ತಿರ ಬರುತ್ತಾರೆ. ದೈಹಿಕ ಸಂಬಂಧವನ್ನು ಯಾಂತ್ರಿಕವಾಗಿ ಮುಗಿಸಿ ಅತ್ತ ತಿರುಗಿ ಮಲಗಿಬಿಡುತ್ತಾರೆ. ಕೂಡಲೇ ಅವರಿಗೆ ಗಾಢ ನಿದ್ರೆ ಬಂದುಬಿಡುತ್ತದೆ. ಆದರೆ ನಾನು ವ್ಯಾಕುಲತೆಯಿಂದ ಮಗ್ಗುಲು ಬದಲಿಸುತ್ತಿರುತ್ತೇನೆ.

ಒಮ್ಮೊಮ್ಮೆ ಗಂಡನಿಗೆ `ಅಲ್ರೀ, ಯಾಂತ್ರಿಕವಾದ ದೈಹಿಕ ಸಂಬಂಧದಿಂದ ಮಹಿಳೆಗೆ ಸಂತೃಪ್ತಿ ಸಿಗಲ್ಲಾಂತ ನಿಮಗೆ ಗೊತ್ತಾಗಲ್ವಾ?’ ಎಂದು ಕೇಳಿಯೇಬಿಡೋಣ ಎನಿಸುತ್ತಿತ್ತು, ಯಾವುದೇ ಸಂಬಂಧ, ಸಂಪೂರ್ಣ ತನುಮನದಿಂದ ಏರ್ಪಟ್ಟಾಗಲೇ ಅದು ಯಶಸ್ವಿಯಾಗುತ್ತದೆ. ಆದರೆ ಅವರು ನನ್ನ ಭಾವನೆಗಳಿಗೆ ಎಲ್ಲಿ ಬೆಲೆ ಕೊಡುತ್ತಾರೆ? ಪ್ರೀತಿ ಎಂತಹ ಅನುಭೂತಿಯೆಂದರೆ ತಪ್ಪು ಸರಿಗಳ ನಡುವೆ ಅಂತರ ತಿಳಿಯುವುದಿಲ್ಲ. ಬದಲಾಗಿ ಪ್ರೀತಿ ಸಂಪೂರ್ಣ ಸಮರ್ಪಣೆ ಬಯಸುತ್ತದೆ.

ನಾನು ಇಂತಹುದೇ ಪ್ರೀತಿಯ ಅನುಭೂತಿಯಿಂದ ತೊಯ್ದುಹೋಗಿ ದಿನ ಮಧುವನ್ನು ಭೇಟಿ ಮಾಡತೊಡಗಿದೆ. ಅಂದಹಾಗೆ ಮಧು ನನ್ನ ಕಾಲೇಜಿನ ಗೆಳೆಯ. ನನ್ನ ಒಂದು ಸನ್ನೆಯ ಮೇರೆಗೆ ತನ್ನೆಲ್ಲಾ ಕೆಲಸ ಬಿಟ್ಟು ಓಡಿಬರುತ್ತಿದ್ದ. ಈಗಂತೂ ಅವನು ನನಗೆ ಮೋಡಿ ಮಾಡಿಬಿಟ್ಟಿದ್ದ. ಅವನು ನನ್ನ ರಸಹೀನ ರಾತ್ರಿಗಳ ಸುಂದರ ಸ್ವಪ್ನವಾಗಿಬಿಟ್ಟಿದ್ದ.

“ನನಗೆ ಮುಂಬೈನಲ್ಲಿ 2 ದಿನ ಮೀಟಿಂಗ್‌ ಇದೆ. ನೀನು ಬರ್ತೀಯಾ?” ಮಧು ನನ್ನೊಡನೆ ಚಾಟ್‌ ಮಾಡುತ್ತಾ ಕೇಳಿದ.

“ಒಳ್ಳೇ ಐಡಿಯಾ,” ನಾನು ಉತ್ಸಾಹದಿಂದ ಹೇಳಿದೆ.

“ಹಾಗಾದ್ರೆ ಪ್ಯಾಕಿಂಗ್‌ ಮಾಡ್ಕೋ.”

“ರವೀನ ಒಂದು ಮಾತು ಕೇಳ್ಬೇಕು,” ನಾನು ಯೋಚಿಸುತ್ತಾ ಹೇಳಿದೆ.

“ಅರೆ, ಏನಾದರೂ ನೆಪ ಹೇಳಿ ಬಂದುಬಿಡು. ನನ್ನ ಹೆಂಡತೀನ ಒಪ್ಪಿಸ್ತೀನಲ್ಲಾ ಹಾಗೇ ನೀನೂ ಮಾಡು.”

ನಂತರ ಅವನು ಚಾಟಿಂಗ್‌ ನಿಲ್ಲಿಸಿದ. ನಾನು ಪ್ಯಾಕಿಂಗ್‌ ಮಾಡಿಕೊಳ್ಳತೊಡಗಿದೆ. ರವಿಗೆ ಏನು ಹೇಳಬೇಕು ಎಂದು ನಾನು ಗೊಂದಲದಲ್ಲಿದ್ದೆ. ಅಷ್ಟರಲ್ಲಿ ರವಿಯ ಫೋನ್‌ ಬಂತು. ಅವರು ಹೇಳಿದರು, “ಮಾಲತಿ, ನಾನು 4-5 ದಿನ ಅಮೆರಿಕಾಗೆ ಹೋಗಬೇಕು. ನನಗಿಲ್ಲಿ ಅರ್ಜೆಂಟಾಗಿ ಪೇಪರ್‌ ವರ್ಕ್‌ ಮಾಡ್ಕೋಬೇಕು. ನಾನು ಮನೆಗೆ ಬರೋಕಾಗಲ್ಲ. ನೀನು ನನ್ನ ಬಟ್ಟೆಗಳನ್ನು ಪ್ಯಾಕ್‌ ಮಾಡಿ ಡ್ರೈವರ್‌ ಕೈಯಲ್ಲಿ ಆಫೀಸಿಗೆ ಕಳಿಸಿಕೊಡು.” ನಂತರ ಅವರ ಫೋನ್‌ ಕಟ್‌ ಆಯ್ತು.

ನಾನು ಖುಷಿಖುಷಿಯಾಗಿ ಅವರ ಬಟ್ಟೆಗಳನ್ನು ಪ್ಯಾಕ್‌ ಮಾಡತೊಡಗಿದೆ. ಆಗ ಇದ್ದಕ್ಕಿದ್ದಂತೆ ನನ್ನ ಕಾಲಿಗೆ ಮಂಚದ ಕೆಳಗಿದ್ದ ವೀಣೆ ತಾಕಿತು. ಧೂಳು ತುಂಬಿದ್ದ ಆ ವೀಣೆಯನ್ನು ಕಂಡು ನನ್ನ ಬಾಲ್ಯದ ನೆನಪುಗಳು ಉಕ್ಕಿಬಂದವು.

ಆಗ ನಾನು ಗಂಟೆಗಟ್ಟಲೇ ವೀಣೆಯ ಅಭ್ಯಾಸ ಮಾಡುತ್ತಿದ್ದೆ. ಆಗ ಅಪ್ಪ ಹೆಮ್ಮೆಯಿಂದ, “ಭೇಷ್‌ ಮಗಳೆ, ಮುಂದೆ ನೀನು ಒಳ್ಳೆ ಹೆಸರು ತಗೋಳ್ತೀಯ,” ಎನ್ನುತ್ತಿದ್ದರು.

ಮುಂದೆ ಸಮಯ ಕಳೆದಂತೆ ವೀಣೆ ಹಿಂದುಳಿಯಿತು. ನಾನು ಸಂಸಾರದ ಜಂಜಾಟಗಳಲ್ಲಿ ಮುಳುಗಿಹೋಗಿದ್ದೆ. ಇದ್ದಕ್ಕಿದ್ದಂತೆ ನಾನು ಬೆವರಿನಲ್ಲಿ ತೊಯ್ದು ಹೋದೆ. ರವಿ ಹಾಗೂ ಮಧು ಇಬ್ಬರನ್ನೂ ಹೋಲಿಸತೊಡಗಿದೆ.

ರವಿ ನನಗಾಗಿ ಎಷ್ಟೇ ಸಮಯ ಮೀಸಲಿಡಲಿ ಅದು ನನಗಾಗಿ ಮಾತ್ರ. ಆಗ ಅವರ ಮೇಲೆ ನನಗೆ ಮಾತ್ರ ಅಧಿಕಾರ ಇರುತ್ತದೆ. ಆದರೆ ಮಧು ಮದುವೆ ಆಗಿದ್ದಾನೆ. ಹೆಂಡತಿಯೊಂದಿಗೆ ನನ್ನ ಜೊತೆಯೂ ಸಂಬಂಧ ಇಟ್ಟುಕೊಳ್ಳಲು ಬಯಸುತ್ತಾನೆ. ಇಲ್ಲದಿದ್ದರೆ ನನ್ನನ್ನು ಹೀಗೆ ಮುಂಬೈಗೆ ಬರಲು ಕರೆಯುತ್ತಿರಲಿಲ್ಲ. ನಾನೆಷ್ಟು ಹುಚ್ಚಿ ಇರಬೇಕು. ಏನೂ ಯೋಚಿಸದೆ ಅವನ ಜೊತೆ ಹೋಗೋಕೆ ರೆಡಿಯಾಗ್ಬಿಟ್ಟಿದ್ದೆ…..

ಆಗಲೇ ನನ್ನ ಮೊಬೈಲ್ ‌ರಿಂಗಾಯಿತು, “ಯಾಕೆ ಇನ್ನೂ ಬಂದಿಲ್ಲ?” ಮಧು ಕೋಪದಿಂದ ಹೇಳಿದ.

“ಹೀಗೆ…. ಸ್ವಲ್ಪ ಕೆಲಸ ಇತ್ತು.”

“ನಾನಿಲ್ಲಿ ಕಾಯ್ತಿದ್ದೀನಿ.”

“ಸಾರಿ. ನಾನು ಬರೋಕಾಗಲ್ಲ. ನಮ್ಮತ್ತೆ ಇವತ್ತು ಊರಿಂದ ಬರ್ತಿದ್ದಾರೆ,” ನಾನು ಮಧೂಗೆ ಸುಳ್ಳು ಹೇಳಿ ಫೋನ್‌ ಇಟ್ಟೆ.

ನಾನು ಎದ್ದು ರೆಡಿಯಾಗಿ ರವಿಗೆ ಇಷ್ಟವಾಗಿದ್ದ ಗುಲಾಬಿ ಬಣ್ಣದ ಸೀರೆ ಉಟ್ಟುಕೊಂಡೆ. ರವಿಯ ಬಟ್ಟೆಗಳ ಬ್ಯಾಗ್‌ ಹಿಡಿದು ಅವರ ಆಫೀಸಿಗೆ ಹೋದಾಗ ನನ್ನನ್ನು ಅಲ್ಲಿ ದಿಢೀರನೆ ಕಂಡು ಅವರಿಗೆ ಆಶ್ಚರ್ಯವಾಯಿತು.

ಆಮೇಲೆ ಕಾಫಿ ಕುಡಿಯುವಾಗ ನಾನು ಇದ್ದಕ್ಕಿದ್ದಂತೆ ಅವರ ಕೈ ಹಿಡಿದುಕೊಂಡಾಗ, ಅವರು ತೋಳಿನಲ್ಲಿ ನನ್ನನ್ನು ಬಳಸಿದರು.

“ಸಾರಿ, ನಾನು ನಿನಗೆ ಸಮಯ ಕೊಡಲಾಗುತ್ತಿಲ್ಲ,” ರವಿಯ ಮಾತಿನಲ್ಲಿ ವೇದನೆಯಿತ್ತು.

“ಪರವಾಗಿಲ್ಲ. ನೀವು ಇಷ್ಟು ಕಷ್ಟಪಡೋದೂ ನನಗಾಗಿ ತಾನೆ,” ನನ್ನ ಕಣ್ಣುಗಳು ತುಂಬಿಬಂದವು.

“ಇನ್ನು ಮೇಲೆ ಯಾವುದೇ ದೂರಿಗೂ ಅವಕಾಶ ಕೊಡುವುದಿಲ್ಲ,” ಅವರು ನನ್ನ ಕೆನ್ನೆಗೆ ಪ್ರೀತಿಯಿಂದ ಮುತ್ತುಕೊಟ್ಟರು.

“ಅಮೆರಿಕಾದಿಂದ ಬಂದ ಮೇಲೆ ಯಾವುದಾದರೂ ಹಿಲ್ ‌ಸ್ಟೇಶನ್‌ಗೆ ಹೋಗೋಣ,” ಇಷ್ಟು ಹೇಳಿ ರವಿ ಹೊರಟುಹೋದರು.

ಸವಾರಿ ಮಾಡಲು ಇಚ್ಛಿಸುತ್ತಿದ್ದ. ನಂತರ ನಾನು ಮನೆಗೆ ಹಿಂತಿರುಗಿ ಬಹಳ ಹೊತ್ತು ವೀಣೆ ನುಡಿಸುತ್ತಿದ್ದೆ. ಈಗ ನನ್ನ ಮನಸ್ಸು ಶಾಂತವಾಗಿತ್ತು. ನನ್ನ ಕಣ್ಣುಗಳಲ್ಲಿ ಅನೇಕ ಕನಸುಗಳು ಕಾಣುತ್ತಿದ್ದವು. ಅರ್ಧಕ್ಕೆ ಬಿಟ್ಟಿದ್ದ ವೀಣೆಯ ಅಭ್ಯಾಸ ಮುಗಿಸಿ ಒಂದು ಸಂಗೀತ ಶಾಲೆ ತೆರೆಯುವುದು ಹಾಗೂ ಬಡ ಹುಡುಗಿಯರಿಗೆ ಶುಲ್ಕವಿಲ್ಲದೆ ವೀಣೆಯ ಪಾಠ ಹೇಳಿಕೊಡುವುದು ಇತ್ಯಾದಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ