ಕಳೆದ ತಿಂಗಳು `ಗೃಹಶೋಭಾ’  `ಮಹಿಳಾ ದಿನಾಚರಣೆ’ಯ ಪ್ರಾಯೋಜಕತ್ವ ವಹಿಸಿದ್ದಳು. ಬೆಂಗಳೂರಿನ ಬಸವನಗುಡಿಯ ಎಂ.ಎನ್‌. ಕೃಷ್ಣರಾವ್ ‌ಉದ್ಯಾನವನದಲ್ಲಿ, ಜೆಸಿಐ ಬೆಂಗಳೂರು ಸಿಲಿಕಾನ್‌ ಸಿಟಿ ಹಾಗೂ ಸರ್‌ ಎಂ.ಎನ್‌.ಕೆ. ಪಾರ್ಕ್ ಪಾದಚಾರಿಗಳ ಬಳಗ ಜಂಟಿಯಾಗಿ `ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಸಲುವಾಗಿ ಮಹಿಳೆಯರಿಗಾಗಿ, ಮಹಿಳೆಯರಿಂದ, ಮಹಿಳೆಯರಿಗೋಸ್ಕರ ಪ್ರತಿಭಾನ್ವೇಷಣೆಯ `ಧರಿತ್ರಿ’ ಕಾರ್ಯಕ್ರಮವನ್ನು ಇಡೀ ದಿನ ವೈವಿಧ್ಯಮಯವಾಗಿ ನಡೆಯುವಂತೆ ಏರ್ಪಡಿಸಲಾಗಿತ್ತು.

ಮಹಿಳೆಯರ ವೈವಿಧ್ಯಮಯ, ರಚನಾತ್ಮಕ ಪ್ರತಿಭೆಗಳಿಗೆ ಇಲ್ಲಿ ವಿಪುಲ ಅವಕಾಶ ಒದಗಿಸಲಾಗಿತ್ತು. ಈ ವಿಭಿನ್ನ ಹಾಗೂ ವಿಶಿಷ್ಟ ಕಾರ್ಯಕ್ರಮವನ್ನು ಬಸವನಗುಡಿಯ ಕಾರ್ಪೊರೇಟರ್‌ ನೀಲಾಂಬಿಕೆ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು. ಸರ್ ಎಂ.ಎನ್‌.ಕೆ. ಪಾದಚಾರಿಗಳ ಬಳಗದ ಅಧ್ಯಕ್ಷರಾದ ಚಂದ್ರಶೇಖರ್‌, ಜೆಸಿಐ ಬೆಂಗಳೂರು ಸಿಲಿಕಾನ್‌ ಸಿಟಿಯ ಅಧ್ಯಕ್ಷರಾದ  ರವಿಪ್ರಕಾಶ್‌, ಮಹಿಳಾ ಅಧ್ಯಕ್ಷೆ ದೀಪ್ತಿ ವಿನಯ್‌ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗಹಿಸಿದ್ದರು.

ಇದರ ಸಲುವಾಗಿ 18ಕ್ಕೆ ಮೇಲ್ಪಟ್ಟ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಥಳದಲ್ಲೇ ರಂಗೋಲಿ ಬಿಡಿಸುವ ಸ್ಪರ್ಧೆ, ತರಕಾರಿ ಕೆತ್ತನೆ, ಮೆಹಂದಿ, ನೇಲ್ ‌ಆರ್ಟ್‌, ಆಶುಭಾಷಣ ಸ್ಪರ್ಧೆ ಹಾಗೂ ಭಾವಗೀತೆ, ಜಾನಪದ, ಭಕ್ತಿಗೀತೆ, ಚಿತ್ರಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು.

women1 - Copy

ಸುಮಾರು 500ಕ್ಕೂ ಹೆಚ್ಚು ಜನ ಸೇರಿದ್ದ ಈ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಹಲವು ಸ್ಪರ್ಧೆಗಳು ನಡೆದವು. ಒಂದೆಡೆ ಲಲನಾಮಣಿಗಳು ಸಂಭ್ರಮದಿಂದ ಬಣ್ಣ ಬಣ್ಣದ ರಂಗೋಲಿ ಬಿಡಿಸುತ್ತಿದ್ದರೆ, ಇನ್ನೊಂದೆಡೆ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆಗಳ ಗಾಯನ ಸ್ಪರ್ಧೆ ಭರ್ಜರಿಯಾಗಿ ನಡೆದಿತ್ತು. ಅದು ಮುಗಿಯುತ್ತಿದ್ದಂತೆಯೇ ತರಕಾರಿಯಲ್ಲಿ ಸೃಜನಾತ್ಮಕ ಕೆತ್ತನೆ ಕಲೆ, ಆಶುಭಾಷಣ ಸ್ಪರ್ಧೆಗಳು ಶುರುವಾದವು. ತದನಂತರ ಮೆಹಂದಿ ಹಾಗೂ ನೇಲ್ ‌ಆರ್ಟ್‌ ಸ್ಪರ್ಧೆಗಳು ಪೈಪೋಟಿಯಿಂದ ನಡೆದವು. ಸಭಿಕರಾಗಿ ಬಂದಿದ್ದ ಎಷ್ಟೋ ಮಹಿಳೆಯರು ಅತಿ ಉತ್ಸಾಹದಿಂದ ಕೊನೆ ಘಳಿಗೆಯಲ್ಲಿ ತಮ್ಮ ನೆಚ್ಚಿನ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಿಕೊಂಡು ಸ್ಪರ್ಧೆ ಕಳೆಗಟ್ಟುವಂತೆ ಮಾಡಿದರು.

ಇದರ ನಡುವೆ ಒಂದು ನಿಮಿಷದ ಆಟೋಟಗಳು, ಗಂಟೆಗೊಮ್ಮೆ ಅದೃಷ್ಟ ಪರೀಕ್ಷೆ, ಲಕ್ಕಿ ಡಿಪ್‌ (ಆಯಾ ಚೀಟಿಯಲ್ಲಿ ನಮೂದಿಸಿದಂತೆ…. ಯಾರ ಹ್ಯಾಂಡ್‌ ಬ್ಯಾಂಗ್‌ನಲ್ಲಿ ಮೇಕಪ್‌ ಕಿಟ್‌ ಇದೆ, ಯಾರದು ಉದ್ದ ಜಡೆ, ಯಾರು ಬೇಗ ಜಡೆ ಹೆಣೆದುಕೊಳ್ಳಬಲ್ಲರು ಇತ್ಯಾದಿ) ಹಿರಿಯ ನಾಗರಿಕರಿಗಾಗಿ ಮೋಜಿನ ಆಟಗಳು…. ಹೀಗೆ ಸಭಿಕರ ಮನರಂಜಿಸಲೆಂದೇ ಜೆಸಿಐ ತಂಡದ ಸದಸ್ಯರು, ಅವರಿಗೆ ಬಹುಮಾನ ಗೆಲ್ಲಲು ಹಲವು ಅವಕಾಶಗಳನ್ನು ಕಲ್ಪಿಸಿದ್ದರು.

women3a

ಜೊತೆಗೆ ಇಡೀ ಉದ್ಯಾನವನದ ವಿಶಾಲ ಜಾಗದಲ್ಲಿ ಎಲ್ಲೆಡೆ ವಿವಿಧ ಸ್ಟಾಲ್ ಗಳಿಗೆ ಅವಕಾಶವಿತ್ತು. ಸಭಿಕರು ಮನದಣಿಯೆ ಶಾಪಿಂಗ್‌ ನಡೆಸಿ ಪಾನಿಪೂರಿ, ಭೇಲ್ ‌ಪೂರಿಗಳ ಸ್ನ್ಯಾಕ್ಸ್ ಸವಿದರು. ಮನ ಮೆಚ್ಚಿದ ವಸ್ತುಗಳು, ಪತ್ರಿಕೆಗಳು, ಸಿ.ಡಿ, ಶೃಂಗಾರ ಸಾಧನಗಳು, ಕರಕುಶಲ ಸಾಮಗ್ರಿ, ಕುರುಕಲು ತಿಂಡಿ…..  ಇತ್ಯಾದಿಗಳನ್ನು ಖರೀದಿಸಿ ಸಂಭ್ರಮಿಸಿದರು.

ಅಂದು ಸಂಜೆ ಇಂದಿರಾ ಪ್ರಿಯದರ್ಶಿನಿ ಮತ್ತು ರವಿ ಪುರಸ್ಕಾರ ಪುರಸ್ಕೃತ ಅಂತಾರಾಷ್ಟ್ರೀಯ ತರಬೇತುದಾರ ಜೆ.ಸಿ. ಚೇತನ್ ರಾವ್‌ರಿಂದ `ಸಂಸಾರದಲ್ಲಿ ಸಮರಸ’ ಕುರಿತು ಹಾಸ್ಯ ಗೋಷ್ಠಿ, ನಗೆಚಟಾಕಿಗಳ ಸ್ವಾರಸ್ಯಕರ ಕಾರ್ಯಕ್ರಮವಿತ್ತು. ಹಲವು ಹಿರಿಯ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರನ್ನು ಸನ್ಮಾನಿಸಲಾಯಿತು.

ಕೊನೆಯದಾಗಿ `ಗೃಹಶೋಭಾ’ ವನಿತೆಯರಿಗೆಂದೇ ವಿಶೇಷಾಗಿ ಪ್ರಾಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ರಂಗೋಲಿ, ಗಾಯನ, ತರಕಾರಿ ಕೆತ್ತನೆ, ಮೆಹಂದಿ, ನೇಲ್ ಆರ್ಟ್‌ ಹಾಗೂ ಆಶುಭಾಷಣ ಸ್ಪರ್ಧೆಗಳಲ್ಲಿ ಪ್ರತಿಯೊಂದರಲ್ಲೂ ಪ್ರಥಮ, ದ್ವಿತೀಯ, ತೃತೀಯ ಎಂದು 3-3 ಬಹುಮಾನ ನೀಡಲಾಯಿತು. ಪ್ರತಿಯೊಬ್ಬ ವಿಜೇತರಿಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌ ಹಾಗೂ ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್‌ ಬಹುಮಾನದ ಜೊತೆ ಡೆಲ್ಲಿ ಪ್ರೆಸ್‌ಪ್ರಕಟಣಾ ಸಂಸ್ಥೆಯ ವತಿಯಿಂದ ವಿಶೇಷ ನೆನಪಿನ ಕಾಣಿಕೆಗಳಾಗಿ ಗೃಹಶೋಭಾ, ನಿಮ್ಮೆಲ್ಲರ ಮಾನಸ, ಬುತ್ತಿ ಪತ್ರಿಕೆಗಳನ್ನು ಹಂಚಿದರು. ಹೀಗೆ ಇಡೀ ದಿನ ಬೆಂಗಳೂರಿನ ಮಹಿಳೆಯರು ವಿವಿಧ ಸ್ಪರ್ಧೆ, ವಿನೋದಾವಳಿಗಳಲ್ಲಿ ಪಾಲ್ಗೊಂಡು `ಮಹಿಳಾ ದಿನಚಾರಣೆ’ಯನ್ನು ಸಂಭ್ರಮಿಸಿದರು. 50ಕ್ಕೂ ಹೆಚ್ಚಿನ ಜೆಸಿಐ ಬೆಂಗಳೂರು ಸಿಲಿಕಾನ್‌ ಸಿಟಿಯ ಸದಸ್ಯರು ಎಲ್ಲಾ ಕಾರ್ಯಕ್ರಮಗಳನ್ನೂ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ