ಕಾರಂತರು ತಮ್ಮ ಜೀವಿತದ ಮಧ್ಯ ಕಾಲದಲ್ಲಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನೆಲೆಸಿ ಅಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಮಕ್ಕಳೊಂದಿಗೆ ಮಗುವಾಗಿ ಬೆರೆಯುತ್ತಿದ್ದ ಕಾರಂತರು ಮಕ್ಕಳ ಲೋಕದಲ್ಲಿ ಕಾರಂತಜ್ಜ ಎಂದೇ ಪ್ರಖ್ಯಾತಿ ಪಡೆದಿದ್ದರು.
ಆ ದಿನಗಳಲ್ಲಿ ಕಾರಂತರು ಊರೂರು ಸಂಚರಿಸಿ ಮಕ್ಕಳ ಕೂಟವನ್ನು ರಚಿಸಿ ನಂತರ ಪುತ್ತೂರಿನಲ್ಲಿ ಬಾಲವನ ನಿರ್ಮಿಸಿದ್ದರು. ಇಲ್ಲಿ ಸುಮಾರು 70 ವರ್ಷಗಳ ಹಿಂದೆಯೇ ಮಕ್ಕಳಿಗೆ ಪುಟಾಣಿ ರೈಲನ್ನು ಸಿದ್ಧಮಾಡಿ ಬಾಲವನದ ಸುತ್ತಲೂ ಓಡಾಡಿಸಿದ್ದು ಮಕ್ಕಳು ಅತಿ ಹೆಚ್ಚು ಸಂತೋಷಪಡುವುದಕ್ಕೆ ಕಾರಣವಾಯಿತು. ಕಾರಂತರ ಬಾಲವನಕ್ಕೆ ಹೋಗುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ ಇತ್ತು!
ಕಾರಂತರು ಕಾಲವಾದ ಬಳಿಕ ಕೆಲಕಾಲ ಬಾಲವನ ಕಳೆಗುಂದಿತ್ತು. ಮಕ್ಕಳ ಕನಸೆಲ್ಲಾ ನುಚ್ಚುನೂರಾಗಿತ್ತು, ಚಿಗುರು ಕಮರಿಹೋಗಿತ್ತು. ಕಾಲ ಬದಲಾದಂತೆ ಮತ್ತೆ ವಸಂತ ಬಂದಿದೆ. ಕಾರಂತರ ಬಾಲವನಕ್ಕೆ ಮತ್ತೆ ಜೀವ ಬಂದಿದೆ. ಈಗ ಮತ್ತೆ ಅದು ಮಕ್ಕಳ ಮೆಚ್ಚುಗೆಯ ನೆಲೆಯಾಗಿ ಚಿಗುರಿದೆ, ವನದಲ್ಲೆಲ್ಲಾ ಹೂ ಅರಳಿದೆ. ವನದಲ್ಲೆಲ್ಲಾ ಮಕ್ಕಳ ಚಿಲಿಪಿಲಿ ಸಂಭ್ರಮ, ಕೇಕೆ ಕೇಳಿಬರುತ್ತಿದೆ. ಕಾರಂತಜ್ಜ ಇಲ್ಲಿ ಮತ್ತೆ ಜೀವಂತರಾಗಿ ಮಕ್ಕಳಲ್ಲಿ, ಪರಿಸರದಲ್ಲಿ, ಸಾಹಿತ್ಯದಲ್ಲಿ ಬೆರೆತು ಹೋಗಿದ್ದಾರೆ.
ಇದೆಲ್ಲ ಸಾಧ್ಯವಾದದ್ದು ಹೇಗೆ?
ಕಳೆದ ವರ್ಷ ಪುತ್ತೂರಿಗೆ ಸಹಾಯಕ ಕಮೀಷನರ್ ಆಗಿ ಬಂದ ಎಚ್. ಪ್ರಸನ್ನ ಅವರು ಶಿವರಾಮ ಕಾರಂತರ ಬಾಲವನದ ಬಗ್ಗೆ ತಿಳಿದುಕೊಂಡು ಬಾಲವನ ಮತ್ತೆ ಸಾಂಸ್ಕೃತಿಕ ಕೇಂದ್ರವಾಗಬೇಕು ಹಾಗೂ ಅದಕ್ಕೆ ಜೀವ ತುಂಬಬೇಕೆಂಬ ನಿರ್ಧಾರಕ್ಕೆ ಬಂದರು. ಇದರ ಜವಾಬ್ದಾರಿಯನ್ನು ಯಾರಿಗೆ ಹೊರಿಸಬೇಕೆಂದುಕೊಂಡಾಗ ಕಣ್ಣಿಗೆ ಬಿದ್ದವರು ಹಿರಿಯ ಕಲಾವಿದರಾದ ಮೋಹನ್ ಸೋನ ಹಾಗೂ ಚಂದ್ರ ಸೌಗಂಧಿ.
ಮೋಹನ ಸೋನಾರ ಬಗ್ಗೆ ಒಂದೆರಡು ಮಾತುಗಳಲ್ಲಿ ಹೇಳಬೇಕೆಂದರೆ ಅವರು ಮಕ್ಕಳ ರಂಗಭೂಮಿ ನಿರ್ದೇಶಕರಾಗಿ ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸಿರುವುದು ಮಾತ್ರವಲ್ಲದೆ, ಮಕ್ಕಳ ಸೃಜನಶೀಲ ಚಟುವಟಿಕೆಗಳಲ್ಲಿ ಶ್ರಮಿಸಿದ ವ್ಯಕ್ತಿ. ಕಾರಂತರ ಬಾಲವನಕ್ಕೆ ಮತ್ತೆ ಜೀವತುಂಬು ಜವಾಬ್ದಾರಿ ನಿರ್ವಹಿಸಲು ಮೋಹನ್ ಸೋನ ಒಪ್ಪಿಗೆ ನೀಡಿ ನೂತನ ಯೋಜನೆಗಳನ್ನು ರೂಪಿಸಿದರು. ಜೊತೆಗೆ ಗೆಳೆಯ ಚಂದ್ರ ಜೊತೆಯಾಗಿ ನಿಂತರು. ಇವರೊಂದಿಗೆ ಮಕ್ಕಳ ಸಾಂಸ್ಕೃತಿಕ ಹಾಗೂ ಭೌತಿಕ ಅಭಿವೃದ್ಧಿಯ ಬಗ್ಗೆ ಆಸಕ್ತರಿದ್ದ ಗೆಳೆಯರೆಲ್ಲರೂ ಬೆಂಬಲ ನೀಡಿದ್ದರು. ಕೂಡಲೇ ಪುತ್ತೂರು ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಕಳುಹಿಸಿದರು.
ಕರೆಗೆ ಓಗೊಟ್ಟು ಸುಮಾರು 25 ಮಕ್ಕಳು ಬಂದರು. ನಂತರ ಅವರ ಸಂಖ್ಯೆ 75 ಮೀರಿತು. ಇವರ ಬೆಂಬಲಕ್ಕೆ ಹಿರಿಯರು, ಸಾಹಿತಿಗಳು, ಪರಿಸರ ಪ್ರೇಮಿಗಳು ಹಾಗೂ ಕಾರಂತಜ್ಜನ ಅಭಿಮಾನಿಗಳು ಮುಂದೆ ಬಂದರು. ಇಲ್ಲಿ ಶುಲ್ಕವಿಲ್ಲ. ಆದರೆ ಪ್ರೀತಿಯ ಸೆಳೆತವಿದೆ ಎಂದು ಹೋಗಿ ಬಂದರು ಹೇಳುತ್ತಾರೆ.
ಚಿಣ್ಣರ ಬಣ್ಣದ ಶಾಲೆಯಲ್ಲಿ ಕಲಿತಿದ್ದರೂ ಭಾನುವಾರ ಮಾತ್ರ ತಪ್ಪದೆ ಮಕ್ಕಳು ಇಲ್ಲಿ ಹಾಜರಾಗುತ್ತಾರೆಂದರೆ ಇಲ್ಲಿ ಬಹುದೊಡ್ಡ ಆಕರ್ಷಣೆ ಇದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ಆಟಪಾಠ, ಸಂಗೀತನೃತ್ಯ, ಕರಕುಶಲಾಭ್ಯಾಸ ಮುಂತಾದ ಚಟುವಟಿಕೆಗಳ ಜೊತೆಗೆ ಕಥೆ ಕೇಳುವುದು ಹಾಗೂ ಆ ಕಥೆಗಳನ್ನು ಚಿತ್ರ ಬರೆಯುವ ಮೂಲಕ ಅದಕ್ಕೆ ಜೀವತುಂಬುವ ಪ್ರಯತ್ನ ಮಕ್ಕಳಿಗೆ ಅತ್ಯಂತ ಆಕರ್ಷಕವಾಗಿದೆ.
ಬಣ್ಣದ ವಿಚಾರದಲ್ಲೂ ಇಲ್ಲೊಂದು ವಿಶೇಷತೆ ಇದೆ. ಚಿತ್ರಕಲೆಗೆ ಬಳಸುವ ಬಣ್ಣಗಳನ್ನು ಪ್ರಕೃತಿಯಲ್ಲಿ ಸಿಗುವ ಹೂ, ಹಣ್ಣು, ಕಾಯಿ, ಬೀಜ, ಎಲೆ, ತೊಗಟೆ ಮುಂತಾದವುಗಳನ್ನು ಸಂಗ್ರಹಿಸಿ ಮಕ್ಕಳು ತಾವೇ ಖುದ್ದಾಗಿ ಬಣ್ಣ ತಯಾರಿಸಿಕೊಳ್ಳುತ್ತಾರೆ. ಇಲ್ಲಿನ ಊರು ಹಾಗೂ ಸುತ್ತಲಿನ ಕಾಡಿನಿಂದ ಸಂಗ್ರಹಿಸಿದ ವಸ್ತುಗಳಿಂದ ಸುಮಾರು ಐವತ್ತಕ್ಕೂ ಹೆಚ್ಚು ಬಣ್ಣಗಳನ್ನು ತಯಾರಿಸಿಕೊಂಡಿದ್ದಾರೆ ಎನ್ನುವುದೇ ವಿಶೇಷ.
ಶಿವರಾಮ ಕಾರಂತರ ನೆನಪಿನಲ್ಲಿ ಅರಳಿರುವ ಮಕ್ಕಳ ಬಾಲವನ ಕಲಾ ಸಮುಚ್ಚಯವಾಗಿ ರೂಪುಗೊಂಡಿದೆ ಕಾರಂತರ ಸಾಹಿತ್ಯ ಕೃತಿಗಳಿಗೆ ಹೆಸರಾಂತ ಹಿರಿಯ ವರ್ಣಚಿತ್ರ ಕಲಾವಿದರು ಇಲ್ಲಿಗೇ ಬಂದು ತೈಲವರ್ಣ ಕಲಾಕೃತಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಕೆ.ಕೆ. ಹೆಬ್ಬಾರ್ ಆರ್ಟ್ ಫೌಂಡೇಶನ್ ಕೊಡುಗೆಯಾಗಿ ಅವರ ಪುತ್ರಿ ರೇಖಾರಾವ್ ಕಾರಂತರ ರೇಖಾ ಚಿತ್ರವೊಂದನ್ನು ರಚಿಸಿಕೊಟ್ಟಿದ್ದಾರೆ. ಬಾಲವನದಲ್ಲಿ ಮಕ್ಕಳ ಸಾಹಿತ್ಯ ಗ್ರಂಥಾಲಯ, ದೃಶ್ಯಶ್ರಾವ್ಯ ಸಭಾಭನನ, ಸಂಚಾರಿ ಕಲಾವಿದರಿಗಾಗಿ ಪ್ರದರ್ಶನಾಲಯಗಳು ರೂಪುಗೊಂಡಿವೆ. ಕಾರಂತರ ಮಕ್ಕಳು, ಅಭಿಮಾನಿಗಳು ಹಾಗೂ ಸಾಹಿತ್ಯ ಪ್ರೇಮಿಗಳೂ ಕೂಡ ಈ ಬಾಲವನದ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.
– ಸಾಲೋಮನ್