ಮಹಿಳೆಯರು ಗಂಡ ಮತ್ತು ಮಕ್ಕಳನ್ನು ಚೆನ್ನಾಗಿ ಗಮನಿಸಿಕೊಳ್ಳುತ್ತಾರೆ, ಆದರೆ ತಮ್ಮನ್ನು ತಾವು ಅಲಕ್ಷಿಸುತ್ತಾರೆ. ಯೌವನಾವಸ್ಥೆಯನ್ನು ಎಲ್ಲರೂ ಅನುಭವಿಸುತ್ತಾರೆ. ಆದರೆ 40ರ ಹೊಸ್ತಿಲು ತಲುಪಿದಾಗ ತಿಳಿವಳಿಕೆಯಿಂದ ವರ್ತಿಸಬೇಕು. ಈ ವಯಸ್ಸಿನಲ್ಲಿ ಫಿಟ್ ಆಗಿರಲು ನಿಮಗೆ 20 ಉಪಾಯಗಳನ್ನು ಹೇಳುತ್ತೇವೆ. ಇವುಗಳಲ್ಲಿ ಕೆಲವು ನಿಮಗೆ ತಿಳಿದಿರಬಹುದು. ಆದರೆ ಕೆಲವಂತೂ ನಿಮಗೆ ಖಂಡಿತಾ ಹೊಸದು. ನಿಧಾನವಾಗಿ ಇವನ್ನು ನಿಮ್ಮ ಲೈಫ್ ಸ್ಟೈಲ್‌ನ ಭಾಗವನ್ನಾಗಿ ಮಾಡಿಕೊಂಡರೆ ನೀವು ಬಹಳಷ್ಟು ಸಮಸ್ಯೆಗಳಿಂದ ಪಾರಾಗಬಹುದು.
ಕ್ಯಾಲ್ಶಿಯಂ ಮತ್ತು ಐರನ್‌ನ ಲಾಭ ಪಡೆಯಿರಿ : ಭಾರತೀಯ ಮಹಿಳೆಯರಲ್ಲಿ ಐರನ್ ಮತ್ತು ಕ್ಯಾಲ್ಶಿಯಂನ ಕೊರತೆ ಸಾಮಾನ್ಯವಾಗಿ ಕಂಡುಬರುತ್ತದೆ. ಇವರೆಡನ್ನೂ ಚೆಕ್ ಮಾಡಿಸಿ ಆಹಾರದಲ್ಲಿ ಇವೆರಡರ ಪ್ರಮಾಣ ಹೆಚ್ಚಾಗಿರುವಂತೆ ನೋಡಿಕೊಳ್ಳಿ. ಅವುಗಳ ಮಾತ್ರೆ ತೆಗೆದುಕೊಳ್ಳಲು ಮರೆಯದಿರಿ.
ಆರೋಗ್ಯದ ಬಟ್ಟಲು : ಕಾಫಿ ನಮ್ಮ ಗೆಳೆಯ. ಅದರಲ್ಲಿರುವ ಕೆಫೀನ್ ಫ್ಯಾಟ್‌ನ್ನು ಎನರ್ಜಿ ಆಗಿ ಬದಲಿಸುವಲ್ಲಿ ಉತ್ತೇಜಿಸುತ್ತದೆ. ಈ ಕಾರ್ಯವನ್ನು ಗ್ರೀನ್ ಟೀ ಕೂಡ ಚೆನ್ನಾಗಿ ಮಾಡುತ್ತದೆ. ಆದ್ದರಿಂದ ಇವೆರಡನ್ನೂ ನಿಮ್ಮ ಗೆಳೆಯರನ್ನಾಗಿ ಮಾಡಿಕೊಳ್ಳಿ.
ವೇಟ್ ಟ್ರೇನಿಂಗ್ ಮಾಡಿ : ನೀವು ಹಿಂದೆ ಎಂದಾದರೂ ಜಿಮ್ ಗೆ ಹೋಗಿದ್ದರೂ, ಹೋಗದಿದ್ದರೂ ಏನೂ ವ್ಯತ್ಯಾಸವಾಗುವುದಿಲ್ಲ. ಈಗ ಮಾಂಸಖಂಡಗಳು ಬಲಹೀನವಾಗುತ್ತವೆ. ವೇಟ್ ಟ್ರೇನಿಂಗ್ ಅನ್ನು ಸದೃಢಗೊಳಿಸುತ್ತದೆ. ಇದರಿಂದ ಹಲವು ಲಾಭಗಳಿವೆ.
ಜಿಮ್ ಗೆ ಹೋಗಲಾಗದಿದ್ದರೆ ಮನೆಯಲ್ಲೇ ಇದರ ವ್ಯವಸ್ಥೆ ಮಾಡಿಕೊಳ್ಳಿ.
ಶೆಡ್ಯೂಲ್ ಬದಲಾಯಿಸಿ : ಒಂದು ವೇಳೆ ನೀವು ಯೋಗ ಮಾಡುತ್ತಿದ್ದರೆ ಅಥವಾ ಪ್ರವಾಸಕ್ಕೆ ಹೊರಟಿದ್ದರೆ ಈ ಶೆಡ್ಯೂಲ್‌ನಲ್ಲಿ ಕೊಂಚ ಬದಲಾವಣೆ ಮಾಡಿ. ಹೆಲ್ತ್ ಸ್ಪೆಶಲಿಸ್ಟ್ ರ ಸಲಹೆ ಪಡೆದು ಇನ್ನಷ್ಟು ವಿಷಯಗಳನ್ನು ಸೇರಿಸಿ. ಕೆಲವನ್ನು ಮಾಡುವುದನ್ನು ನಿಲ್ಲಿಸಿ. ಪ್ರವಾಸದ ಸಮಯವನ್ನೂ ಬದಲಿಸುವುದಿದ್ದರೆ ಬದಲಿಸಿ.
ಸಪ್ಲಿಮೆಂಟ್‌ಗಳ ಉಪಯೋಗ : ಈ ವಯಸ್ಸಿನಲ್ಲಿ ನಿಮಗೆ ನಿಮ್ಮ ಕೀಲುಗಳು ಹಾಗೂ ಮೂಳೆಗಳ ಬಗ್ಗೆ ಹೆಚ್ಚು ಚಿಂತೆಯಾಗುತ್ತದೆ. ಕ್ಯಾಲ್ಶಿಯಂ ಬಗ್ಗೆ ನಾವು ಹೇಳಿದ್ದೇವೆ. ನೀವು ವಿಟಮಿನ್ `ಡಿ’, `ಸಿ’, `ಇ’ ಬಗ್ಗೆ ಗಮನಕೊಡಿ. ವಿಟಮಿನ್ `ಸಿ’ ಮತ್ತು `ಇ’ ಯನ್ನು ಒಟ್ಟಿಗೆ ತೆಗೆದುಕೊಳ್ಳಿ. ಎಕ್ಸರ್‌ಸೈಜ್ ಮಾಡುವುದಿದ್ದರೆ ಅದಕ್ಕೆ 1 ಗಂಟೆ ಮುಂಚೆ ಡಾಕ್ಟರ್‌ರೊಂದಿಗೆ ಮಾತಾಡಿ ಸಪ್ಲಿಮೆಂಟ್‌ಆರಿಸಿಕೊಳ್ಳಿ.
ಪೋಶ್ಚರ್ ಗಮನಿಸಿ : ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹೆಗಲು, ಕುತ್ತಿಗೆ ಮತ್ತು ಸೊಂಟದ ನೋವು ಹೆಚ್ಚಾಗಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಕುಳಿತುಕೊಳ್ಳುವುದು ಹಾಗೂ ನಿದ್ರಿಸುವ ವಿಧಾನಗಳಲ್ಲಿ ಅಸಂಬದ್ಧತೆ. ಇದರ ಬಗ್ಗೆ ಗಮನ ಕೊಟ್ಟು ಹೇಗೆ ಕೂರುವುದು, ಹೇಗೆ ಮಲಗಿಕೊಳ್ಳುವುದು ಎಂಬ ಬಗ್ಗೆ ಫಿಸಿಯೋ ಥೆರಪಿಸ್ಟ್ ರೊಂದಿಗೆ ಮಾತನಾಡಿ.
ಬದಲಾವಣೆಗೆ ಸಿದ್ಧರಾಗಿ : ಬದಲಾವಣೆಗೆ ನಿಮ್ಮನ್ನು ಸಿದ್ಧಗೊಳಿಸಿ. ಲೇಖನ ಓದುವುದು ಹಾಗೂ ಬರೀ ಯೋಚಿಸಿದರೆ ಏನೂ ಆಗುವುದಿಲ್ಲ. ಆರೋಗ್ಯವಾಗಿರಬೇಕಿದ್ದರೆ ಸಂಕಲ್ಪ ಮಾಡಿ. ಆರಂಭದಲ್ಲಿ ಜನ ಅಡ್ಡ ಬಾಯಿ ಹಾಕುತ್ತಾರೆ. ಆದರೆ ನೀವು ತಲೆ ಕೆಡಿಸಿಕೊಳ್ಳಬೇಡಿ. `ನಾನು ಮಾಡುತ್ತೇನೆ,’ `ನಾನು ಮಾಡಲು ಬಯಸುತ್ತೇನೆ’ ಎನ್ನುವ ಬದಲು `ನಾನು ಮಾಡುತ್ತಿದ್ದೇನೆ’ `ನಾನು ಹೋಗುತ್ತಿದ್ದೇನೆ,’ ಎಂಬ ಶಬ್ದಗಳನ್ನು ಉಪಯೋಗಿಸಿ.
ಸ್ಪೋರ್ಟ್ ಶೂಸ್ ಖರೀದಿಸಿ : ನಿಮಗೆ ಅಭ್ಯಾಸವಿಲ್ಲದಿದ್ದರೂ ಸಹ ವಾಕಿಂಗ್‌ಗೆ ಸ್ಪೋರ್ಟ್ಸ್ ಶೂಸ್ ಚೆನ್ನಾಗಿರುತ್ತದೆ. ನಿಮಗೆ ಇಷ್ಟವಾದ ಶೂಸ್ ಖರೀದಿಸಿ ಅವನ್ನು ಧರಿಸಿ ಜಿಮ್ ಗೆ ಅಥವಾ ವಾಕಿಂಗ್‌ಗೆ ಹೋಗಿ.
ತಪ್ಪಾಗಿದ್ದರೆ ಹೆದರಬೇಡಿ : ಒಂದು ವೇಳೆ ನೀವು ನಿರೀಕ್ಷಿಸಿದ ಪರಿಣಾಮ ಉಂಟಾಗದಿದ್ದರೆ ಬೇಸರಗೊಳ್ಳುವ ಅಗತ್ಯವಿಲ್ಲ. ಇನ್ನೊಮ್ಮೆ ಹೊಸ ಟೆಕ್ನಿಕ್ ಬಳಸಿ ಆರಂಭಿಸಿ. ಎಕ್ಸ್ ಪರ್ಟ್ ಸಲಹೆ ಪಡೆಯುವುದು ತಪ್ಪಲ್ಲ.
ಎಲ್ಲರಿಗೂ ತಿಳಿಸಿ : ನೀವು ಏನು ಮಾಡುತ್ತಿದ್ದೀರಿ. ಏನು ಮಾಡಲು ಬಯಸುತ್ತಿದ್ದೀರಿ ಎಂದು ನಿಮ್ಮ ಆತ್ಮೀಯರಿಗೆ ಅಗತ್ಯವಾಗಿ ಹೇಳಿ. ಅವರು ನಿಮ್ಮ ಯಶಸ್ಸಿಗೆ ಅಭಿನಂದಿಸುತ್ತಾರೆ. ಒಂದು ವೇಳೆ ಜಿಮ್ ಗೆ ಹೋಗದಿದ್ದರ `ಇವತ್ತು ಜಿಮ್ ಗೆ ಹೋಗಲೇ ಇಲ್ಲ,’ ಎಂದು ನಿಮ್ಮನ್ನು ಎಚ್ಚರಿಸುತ್ತಾರೆ.
ಊಟ ನಿದ್ದೆ ಹೀಗಿರಬೇಕು : ಮಲಗುವ 2 ಗಂಟೆ ಮೊದಲು ರಾತ್ರಿಯ ಊಟ ಮಾಡಿ. ಊಟದ ನಂತರ ಕೊಂಚ ಹೊತ್ತು ಬಿಟ್ಟು ಕನಿಷ್ಠ 100 ಹೆಜ್ಜೆ ಓಡಾಡಿರಿ.
ಸ್ಪಾ ಮತ್ತು ಮಸಾಜ್ : ವಾರಕ್ಕೊಮ್ಮೆ ಮಸಾಜ್ ಮತ್ತು ಸ್ಪಾದ ಆನಂದ ಪಡೆದುಕೊಳ್ಳಿ. ಇಲ್ಲದಿದ್ದರೆ ಮನೆಯಲ್ಲಿ ಯಾರಿಗಾದರೂ ನಿಮಗೆ ಮಸಾಜ್ ಮಾಡಲು ಹೇಳಿ. ಪ್ರೀತಿಯಿಂದ ಎಲ್ಲ ಕೆಲಸ ಆಗುತ್ತದೆ.
ಬಾಥ್ ರೂಮ್ ಬಗ್ಗೆ ಗಮನಿಸಿ : ಮನೆಯ ಅತ್ಯಂತ ಅಪಾಯಕಾರಿ ಸ್ಥಳ ಬಾಥ್ ರೂಮ್. ಮನೆಯ ಹಿರಿಯರು ಅಲ್ಲೇ ಜಾರಿ ಪೆಟ್ಟು ತಿನ್ನುತ್ತಾರೆ. ಬಾಥ್ ರೂಮನ್ನು ಒದ್ದೆ ಬಿಡಬಾರದೆಂದು ಎಲ್ಲರಿಗೂ ಹೇಳಿ. ಉಪಯೋಗಿಸಿದ ನಂತರ ಕೂಡಲೇ ಒಣಗಿದ ಬಟ್ಟೆಯಿಂದ ನೀರನ್ನು ಒರೆಸಿ. ಬಾಥ್ ರೂಮಿಗೆ ಎಂದೂ ಅವಸರವಾಗಿ ನುಗ್ಗಬೇಡಿ.
ಹಣ್ಣಿನೊಡನೆ ಆರಂಭಿಸಿ : ದಿನದ ಆರಂಭವನ್ನು ಯಾವುದಾದರೂ ಹಣ್ಣಿನೊಂದಿಗೆ ಆರಂಭಿಸಿ. ಸೇಬು ಒಳ್ಳೆಯದು. ಇಲ್ಲದಿದ್ದರೆ ಆಯಾ ಋತುಮಾನದ ಹಣ್ಣನ್ನು ತಿನ್ನಿ. ಸೀಬೆಹಣ್ಣು, ದಾಳಿಂಬೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
ನೆಲ್ಲಿಕಾಯಿ ಕ್ಯಾಂಡಿ, ಬಿಲ್ವಪತ್ರೆಯ ಮುರಬ್ಬಾ : ಹೊಟ್ಟೆಯ ಆರೋಗ್ಯಕ್ಕೆ ಬಿಲ್ವ ಬಹಳ ಉತ್ತಮ. ಇದರ ಮುರಬ್ಬಾ, ಪೌಡರ್ ಮತ್ತು ಸಿರಪ್ ಸಿಗುತ್ತದೆ. ನೆಲ್ಲಿಕಾಯಿ ಕ್ಯಾಂಡಿ ಸಿಗುತ್ತದೆ.
ದಿನಕ್ಕೆರಡು ಬಾರಿ : ಕಂಫರ್ಟೆಬಲ್ ಫೀಲ್ ಪಡೆಯಲು ದಿನಕ್ಕೆರಡು ಬಾರಿ ಹೊಟ್ಟೆ ಸ್ವಚ್ಛಗೊಳಿಸಿ, ಶರೀರದಲ್ಲಿ ಹಗುರತೆ ಇರುತ್ತದೆ.
ಕುಡಿಯಿರಿ, ಕುಡಿಯುತ್ತಿರಿ : ನಾವು ಹೇಳುತ್ತಿರುವುದು ನೀರಿನ ಬಗ್ಗೆ. ನೀರು ಯಾವುದೇ ಟಾನಿಕ್‌ಗೆ ಕಡಿಮೆಯಲ್ಲ. ಯಾವಾಗಲೂ ನಿಮ್ಮ ಜೊತೆಯಲ್ಲಿಟ್ಟುಕೊಳ್ಳಿ.
ಪ್ರೋಟೀನ್ ಬಳಸಿ : ಪ್ರೋಟೀನ್ ನಿಮ್ಮ ಬಲಹೀನ ಮಾಂಸಖಂಡಗಳಿಗೆ ಹೊಸ ಜೀವ ತುಂಬುತ್ತದೆ. ಅದರ ಪ್ರಮಾಣ ಹೆಚ್ಚಿಸಿ. ಅದು ಮೆಟಬಾಲಿಸಂನ ವೇಗ ವರ್ಧಿಸಿ ಫ್ಯಾಟ್ ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಚೆಕಪ್ ಮಾಡಿಸಿ : ಶುಗರ್, ಕೊಲೆಸ್ಟ್ರಾಲ್, ಥೈರಾಯಿಡ್ ಮತ್ತು ಎಚ್‌ಬಿಯನ್ನು ಆಗಾಗ್ಗೆ ಪರೀಕ್ಷಿಸಿ. ತೊಂದರೆಯಿದ್ದರೆ ಡಯೆಟ್ ಪ್ಲಾನ್ ಮಾಡಿಸಿಕೊಳ್ಳಿ.
ಕೋಪಿಸಿಕೊಳ್ಳಬೇಡಿ : ಇದು ಬಹಳ ಅಗತ್ಯ. ಯಾವುದು ಸುಟ್ಟುಹೋಯಿತು, ಯಾವುದು ಸೀದು ಹೋಯಿತು. ಇವೆಲ್ಲ ಗಮನಿಸುವುದು ನಿಮ್ಮ ಕೆಲಸ. ಆದರೆ ಪ್ಯಾನಿಕ್ ಆಗುವ ಅಗತ್ಯವಿಲ್ಲ. ಮಕ್ಕಳಿಗೆ ತಾವೇ ಕಲಿಯಲು ಬಿಡಿ. ಸಂತೋಷವಾಗಿರುವುದು 100 ಕಾಯಿಲೆಗಳಿಗೆ ಚಿಕಿತ್ಸೆಯಾಗಿದೆ.
– ವಿನುತಾ ರಾವ್